ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ | ಹಣಕಾಸು, ಆದಾಯ ತೆರಿಗೆ ಕುರಿತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Published 22 ಮೇ 2024, 1:41 IST
Last Updated 22 ಮೇ 2024, 1:41 IST
ಅಕ್ಷರ ಗಾತ್ರ

ನಾನು ಖಾಸಗಿ ಕಂಪನಿಯ ಉದ್ಯೋಗಿ. ನನ್ನ ಪತ್ನಿಯೂ ಉದ್ಯೋಗಿಯಾಗಿದ್ದಾಳೆ. ನಾವಿಬ್ಬರೂ ನಮ್ಮೂರಿನ ಒಂದು ಆಸ್ತಿಯನ್ನು ಮಾರಾಟ ಮಾಡಿ ಬೆಂಗಳೂರಿನಲ್ಲೊಂದು ಫ್ಲ್ಯಾಟ್ ಕೊಂಡುಕೊಳ್ಳಲು ಕರಾರು ಮಾಡಿದ್ದೇವೆ. ನಾವು ನಮ್ಮೂರ ಮನೆ ಮಾರಾಟ ಮಾಡಿದಾಗ ಬಂದ ಸಂಪೂರ್ಣ ಹಣವಲ್ಲದೆ ಹೆಚ್ಚುವರಿ ಮೊತ್ತವನ್ನು ಹೊಸ ಮನೆಗಾಗಿ ಪಾವತಿಸುತ್ತಿದ್ದೇವೆ. ಅಲ್ಲದೆ, ಒಂದಿಷ್ಟು ಬ್ಯಾಂಕ್ ಸಾಲವನ್ನೂ ಪಡೆದಿದ್ದೇವೆ.

ಪ್ರ

ನಮ್ಮ ಪ್ರಶ್ನೆ ಏನೆಂದರೆ, ನಮ್ಮ ಹಳೆಯ ಮನೆ ಮಾರಾಟ ಮಾಡಿ ಬಂದ ಲಾಭಕ್ಕೆ ತೆರಿಗೆ ವಿನಾಯಿತಿ ಪಡೆಯಲು ನಾವು ಈಗ ಬೆಂಗಳೂರಿನ ಮನೆಗೆ ಹಣ ವಿನಿಯೋಗಿಸಿದ್ದೇವೆ. ಆದರೆ, ಹೊಸ ಮನೆಯ ನಿರ್ಮಾಣ ಮೂರು ವರ್ಷದ ಅವಧಿಯಲ್ಲಿ ಪೂರ್ಣಗೊಂಡಿರಬೇಕೆನ್ನುವ ನಿಯಮ ಇದೆ. ಅದು ಈ ಅವಧಿಯೊಳಗೆ ಮುಗಿದು ನಮ್ಮ ಕೈ ಸೇರುವುದು ಅಸಾಧ್ಯ. ಇನ್ನೂ ಕೆಲವು ತಿಂಗಳು ತಡವಾಗುವ ಸಾಧ್ಯತೆ ಇದೆ ಎಂಬುದನ್ನು ಮನೆ ಕಟ್ಟಿಸುವ ಸಂಸ್ಥೆಯಿಂದ ತಿಳಿದು ಬಂದಿದೆ. ಇದಕ್ಕೆ ಕೆಲವು ತಾಂತ್ರಿಕ ಅಡಚಣೆ ಹಾಗೂ ಸರ್ಕಾರದ ಪರವಾನಗಿ ಬಾಕಿ ಇದೆ ಎನ್ನುವ ಮೌಖಿಕ ಕಾರಣ ನೀಡಿದ್ದಾರೆ. ಇದರಿಂದ ನಮಗೆ ಸಿಗುವ ತೆರಿಗೆ ಲಾಭಕ್ಕೆ ತೊಂದರೆ ಇದೆಯೇ. ನಾವು ಅದಕ್ಕೆ ಸಂಬಂಧಿಸಿದಂತೆ ಏನಾದರೂ ಮುಂಜಾಗ್ರತೆ ವಹಿಸಬೇಕಿದೆಯೇ?  

ಆದಾಯ ತೆರಿಗೆಯ ಸಹಜ ನಿಯಮಗಳಡಿ ಯಾವುದೇ ತೆರಿಗೆ ಲಾಭ ಪಡೆಯಲು ಕೆಲವು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಸೆಕ್ಷನ್ 54ರ ಪ್ರಕಾರ ಈಗಾಗಲೇ ನೀವು ಒಂದು ಮನೆಯನ್ನು ಮಾರಾಟ ಮಾಡಿ ಅದರ ಮೇಲೆ ಬರುವ ಲಾಭಕ್ಕೆ ಆದಾಯ ತೆರಿಗೆ ವಿನಾಯಿತಿ ಪಡೆಯಲು ಇನ್ನೊಂದು ಮನೆಯನ್ನು ಕಟ್ಟಿಸುವುದಿದ್ದರೆ, ಅದರ ನಿರ್ಮಾಣ ಮೂರು ವರ್ಷದೊಳಗೆ ಪೂರ್ಣಗೊಂಡಿರಬೇಕು. ಆದರೆ, ಕೆಲವು ವಿಶೇಷ ಸಂದರ್ಭಗಳಲ್ಲಿ ಸಂಪೂರ್ಣ ನಿರ್ಮಾಣ ಸಾಧ್ಯವಾಗದೆ ಇರಬಹುದು. ಅನೇಕ ತೆರಿಗೆ ವ್ಯಾಜ್ಯಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ವಿನಾಯಿತಿ ಅಮಾನ್ಯ ಮಾಡದೆ ಪ್ರತಿ ಸನ್ನಿವೇಶದ ಆಧಾರದ ಮೇಲೆ ರಿಯಾಯಿತಿ ನೀಡಿದ ಸಂದರ್ಭಗಳಿವೆ. ಇಂತಹ ಸನ್ನಿವೇಶಗಳಲ್ಲಿ ಮನೆ ನಿರ್ಮಾಣಕ್ಕೆ ತೆಗೆದುಕೊಂಡ ಅವಧಿಗಿಂತ ಬಂದ ಹಣದ ಸರಿಯಾದ ಉಪಯೋಗ ಮಾಡಲಾಗಿದೆಯೇ ಹಾಗೂ ತೆರಿಗೆದಾರನ ಕಡೆಯಿಂದ ಯಾವುದೇ ವ್ಯತ್ಯಯ ಆಗಿಲ್ಲವೆಂಬುದನ್ನು ವಿಶೇಷವಾಗಿ ಪರಿಗಣಿಸಲಾಗಿದೆ. ನಿಮ್ಮ ವಿಚಾರದಲ್ಲೂ ಬಹುಶಃ ಅದೇ ರೀತಿಯ ಸನ್ನಿವೇಶ ಎದುರಾದಂತಿದೆ. ಇಲ್ಲಿ ನಿಮ್ಮ ಸಂಪೂರ್ಣ ಹಣ ನೀವು ವಿನಿಯೋಗಿಸಿದ್ದೀರಿ ಹಾಗೂ ನಿಮ್ಮ ಮನೆ ನಿರ್ಮಾಣ ಸಂಸ್ಥೆಯೇ ಹೇಳುವಂತೆ ಪರವಾನಗಿ ಹಾಗೂ ಕೆಲವು ತಾಂತ್ರಿಕ ತೊಂದರೆಗಳಿರುವ ಕಾರಣ ನೀಡುವ ಉತ್ತರ ಮುಂದೆ ಸಮಸ್ಯೆಗೆ ಕಾರಣ ಆಗಲಾರದು. ಇದಕ್ಕಾಗಿ ನಿರ್ಮಾಣ ಸಂಸ್ಥೆಯಿಂದ ಲಿಖಿತ ಕಾರಣಗಳನ್ನು ದಾಖಲಿಸಿಟ್ಟುಕೊಳ್ಳಿ. ಅಗತ್ಯ ಬಿದ್ದರೆ ಇಂತಹ ದಾಖಲೆಗಳು ಮುಂದೆ ಯಾವುದೇ ಸವಾಲುಗಳು ಬಂದಾಗ ನೆರವಿಗೆ ಬರುತ್ತವೆ.

ಪ್ರ

ನನ್ನ ತಂದೆಗೆ ಸುಮಾರು 89 ವರ್ಷ. ಅವರು 29 ವರ್ಷದ ಹಿಂದೆ ಸಾರ್ವಜನಿಕ ವಲಯದ ಸಂಸ್ಥೆಯಿಂದ ನಿವೃತ್ತರಾಗಿದ್ದಾರೆ. ಆದಾಯ ತೆರಿಗೆ ಮಿತಿಗಿಂತ ಅವರ ಆದಾಯ ಕಡಿಮೆ ಇರುವ ಕಾರಣ ಅವರು ನಿವೃತ್ತಿ ನಂತರ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿಲ್ಲ. ಇತ್ತೀಚೆಗೆ ಒಂದು ನಿವೇಶನ ಮಾರಾಟ ಮಾಡಿ ಸುಮಾರು ₹60 ಲಕ್ಷ ಬಂದಿದೆ. ಖರೀದಿದಾರರು ಸುಮಾರು ₹90,000 ಮೊತ್ತದ ತೆರಿಗೆಯನ್ನು ಕಡಿತಗೊಳಿಸಿದ್ದಾರೆ. ರಾಜಿ ಸಂಧಾನದ ಅಡಿಯಲ್ಲಿ ಮಾರಾಟವಾದ ಕಾರಣ ಅವರು ಯಾವುದೇ ಬಂಡವಾಳ ಲಾಭವನ್ನು ಗಳಿಸಿಲ್ಲ.

ಪ್ರ

ಈಗ, ನನ್ನ ತಂದೆ ಟಿಡಿಎಸ್ ಅನ್ನು ಹಿಂಪಡೆಯಲು ರಿಟರ್ನ್ಸ್ ಸಲ್ಲಿಸಲು ಬಯಸುತ್ತಾರೆ. ಅವರು ಯಾವ ಫಾರ್ಮ್/ ರಿಟರ್ನ್ಸ್ ಅನ್ನು ಬಳಸಬೇಕೆಂದು ದಯವಿಟ್ಟು ತಿಳಿಸಿ. ಅವರ ಪ್ರಸ್ತುತ ಆದಾಯವು ಐ.ಟಿ ಕನಿಷ್ಠ ಸ್ಲ್ಯಾಬ್‌ಗಿಂತ ಕಡಿಮೆಯಾಗಿದೆ. ಟಿಡಿಎಸ್ ಅನ್ನು ಕ್ಲೈಮ್ ಮಾಡಲು ಮಾತ್ರ ಅವರು ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ. ಐಟಿಆರ್ 1 ಅಥವಾ ಐಟಿಆರ್ 2 ಇತ್ಯಾದಿ ಬಗ್ಗೆ ದಯವಿಟ್ಟು ತಿಳಿಸಿ.

ಆದಾಯ ತೆರಿಗೆಯ ಸೆಕ್ಷನ್ 194ಐಎ ಇದರಡಿ, ₹50 ಲಕ್ಷಕ್ಕೂ ಅಧಿಕ ಮೌಲ್ಯದ ಯಾವುದೇ ಸ್ಥಿರಾಸ್ತಿಯನ್ನು ವರ್ಗಾಯಿಸುವಾಗ ಖರೀದಿದಾರರು ಶೇ 1ರ ದರದಲ್ಲಿ ಆ ಮೌಲ್ಯದ ಮೇಲೆ ತೆರಿಗೆ ಕಡಿತಗೊಳಿಸಿ ಮಾರಾಟಗಾರರ ಪ್ಯಾನ್ ಸಂಖ್ಯೆಯಡಿ ತೆರಿಗೆ ಭರಿಸಬೇಕು. ಇದಕ್ಕೆ ಪ್ರತ್ಯೇಕ ವರದಿಯನ್ನು ಕೂಡ ಖರೀದಿದಾರರು ಸಲ್ಲಿಸಬೇಕು. ಈ ಹಂತ ಖರೀದಿದಾರರ ಪರಿಧಿಯಲ್ಲಿದ್ದರೆ, ಮುಂದಿನ ಹಂತವು ಮಾರಾಟ ಮಾಡಿದ ವ್ಯಕ್ತಿಯ ಹಂತದಲ್ಲಿರುತ್ತದೆ. ನಿಮ್ಮ ರಿಟರ್ನ್ಸ್ ಸಲ್ಲಿಸಬೇಕೇ, ಬೇಡವೇ ಎನ್ನುವ ನಿರ್ಧಾರ ಒಟ್ಟಾರೆ ತೆರಿಗೆಗೊಳಪಡುವ ಆದಾಯದ ಮೇಲೆ ನಿರ್ಧಾರವಾಗುತ್ತದೆ. ನೀವು ಆಸ್ತಿಯನ್ನು ರಾಜಿ ಸೂತ್ರದ ಅಡಿ ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದೀರಿ. ಆದರೆ, ತೆರಿಗೆ ವಿಚಾರಕ್ಕೆ ಸಂಬಂಧಿ ಮಾರಾಟವಾದ ಆಸ್ತಿ ಅವರ ಹೆಸರಿನಲ್ಲಿತ್ತೇ ಹಾಗೂ ಆ ವ್ಯವಹಾರಕ್ಕೆ ಸಂಬಂಧಿಸಿ ಬಂದ ಹಣ ಎಷ್ಟು, ಅದು ವರ್ಗಾವಣೆ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂಬಿತ್ಯಾದಿ ವಿಚಾರಗಳ ಆಧಾರದಲ್ಲಿ ತೆರಿಗೆ ನಿರ್ಣಯವಾಗುತ್ತದೆ.     

ನೀವು ಈಗಾಗಲೇ ತಂದೆಯವರು ಪಿಂಚಣಿ ಆದಾಯಕ್ಕೆ ತೆರಿಗೆ ತೆರುವ ಅಗತ್ಯ ಇಲ್ಲ ಎಂಬುದಾಗಿ ವಿವರದಲ್ಲಿ ತಿಳಿಸಿದ್ದೀರಿ. ಆದರೆ, ಆದಾಯ ತೆರಿಗೆ ಪಾವತಿ, ಎಲ್ಲಾ ಮೂಲಗಳ ಹಾಗೂ ವರ್ಷದ ಒಟ್ಟಾರೆ ಆದಾಯದ ಆಧಾರದ ಮೇಲೆ ನಿರ್ಣಯವಾಗುತ್ತದೆ. ಅಲ್ಲದೆ, ಯಾವುದೇ ರಿಫಂಡ್ ಸಿಗಬೇಕಾದರೂ ಆದಾಯ ತೆರಿಗೆ ರಿಟರ್ನ್ಸ್ ಕಡ್ಡಾಯವಾಗಿ ಸಲ್ಲಿಸಬೇಕು. ಇದಕ್ಕೆ ಐಟಿಆರ್ 2 ಅನ್ನು ಬಳಸಿಕೊಳ್ಳಿ. ನಿಮ್ಮ ಆಸ್ತಿ ಮಾರಾಟದಿಂದ ಬಂಡವಾಳ ಲಾಭ ಆದಾಯ ಇಲ್ಲ ಎಂಬ ಊಹೆ ನಿಮ್ಮದು. ಆದರೂ, ಒಂದು ಬಾರಿ ಸಂಪೂರ್ಣ ಮಾಹಿತಿಯೊಂದಿಗೆ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ ಪರಾಮರ್ಶೆ ನಡೆಸಿ.

ಕೇವಲ ರಿಫಂಡ್ ಪಡೆಯುವ ಕಾರಣಕ್ಕಲ್ಲದೆ, ಇತರೆ ಸನ್ನಿವೇಶಗಳಲ್ಲೂ ತೆರಿಗೆ ರಿಟರ್ನ್ಸ್‌ನಲ್ಲಿ ಇಂತಹ ಮಾಹಿತಿ ಒಳಗೊಳ್ಳಬೇಕು. ಇಷ್ಟೊಂದು ದೊಡ್ಡ ಮೊತ್ತದ ಆಸ್ತಿ ವರ್ಗಾವಣೆಯಾದ ಸಂದರ್ಭದಲ್ಲಿ, ಹಣದ ಮೂಲದ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ವಿವರಣೆ ನೀಡಲು ಕೋರಿಕೆ ಬಂದಾಗ ರಿಟರ್ನ್ಸ್‌ನಲ್ಲಿ ಅಂತಹ ವ್ಯವಹಾರವಾದ ಮಾಹಿತಿ ಇಲ್ಲದಿದ್ದರೆ, ತೆರಿಗೆದಾರರಿಗೆ ಅದು ಮುಂದೆ ಸಮಸ್ಯೆಗೆ ಕಾರಣವಾದೀತು. ಹೀಗಾಗಿ ಹೆಚ್ಚಿನ ಮುಂಜಾಗ್ರತೆ ಅಗತ್ಯ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌:businessdesk@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT