ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ | ಷೇರುಗಳ ಎಸ್‌ಐಪಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಇದೆಯೇ?

Published 19 ಮಾರ್ಚ್ 2024, 22:59 IST
Last Updated 19 ಮಾರ್ಚ್ 2024, 22:59 IST
ಅಕ್ಷರ ಗಾತ್ರ

ಪ್ರಶ್ನೆ: ನಾನು ಡಿಮ್ಯಾಟ್ ಖಾತೆ ಹೊಂದಿದ್ದು, ಷೇರು ವ್ಯವಹಾರ ಮಾಡುತ್ತಿದ್ದೇನೆ. ನಾನು ಮ್ಯೂಚುವಲ್ ಫಂಡ್ ಹೂಡಿಕೆಯ ಎಸ್‌ಐಪಿ ವಿಭಾಗದಲ್ಲಿ ತಿಂಗಳಿಗೆ ₹20 ಸಾವಿರ ಹೂಡಿಕೆ ಮಾಡುತ್ತಿದ್ದೇನೆ. ನನ್ನ ಖಾತೆಯಲ್ಲಿ ವ್ಯವಹಾರ ಮಾಡುವಾಗ ಅನೇಕ ಷೇರುಗಳ ಎಸ್‌ಐಪಿಯಲ್ಲಿ ಹೂಡಿಕೆ ಮಾಡುವ ಬಗ್ಗೆ ಕೋರಿಕೆಗಳು ನನ್ನ ಕಂಪ್ಯೂಟರ್ ಮುಂದೆ ಪಾಪ್ ಅಪ್ ಆಗುತ್ತವೆ. ಆದರೆ, ಸಾಮಾನ್ಯವಾಗಿ ನಾನು ಸ್ವತಃ ಅಂದಿನ ದರ ನೋಡಿ, ಷೇರು ಕಂಪನಿಗಳ ಮಾಹಿತಿ, ಮಾರುಕಟ್ಟೆ ಮಾಹಿತಿ ಇತ್ಯಾದಿ ವಾರ್ತೆಗಳನ್ನು ನೋಡಿ ಹೂಡಿಕೆ ಮಾಡುತ್ತಿದ್ದೇನೆ. ಈ ಮಾಹಿತಿ ನೋಡಿಯೂ ಅಂತಹ ಉತ್ತಮ ಮಟ್ಟದ ಲಾಭ ಆಗಲಿಲ್ಲ. ಇದಕ್ಕೆ ಬದಲಾಗಿ ನಾನು ಷೇರುಗಳ ಎಸ್‌ಐಪಿಯಲ್ಲಿ ಹೂಡಿಕೆ ಮಾಡಿದರೆ ಏನಾದರೂ ಹೆಚ್ಚಿನ ಲಾಭ ಇದೆಯೇ? ಇದನ್ನು ಮುಂದೆ ಹೇಗೆ ನಿಭಾಯಿಸಬಹುದು – ಅಶೋಕ್ ಕುಮಾರ್, ದಾವಣಗೆರೆ

ಉತ್ತರ: ನೀವು ಈಗಾಗಲೇ ಮ್ಯೂಚುವಲ್ ಫಂಡಿನ ಎಸ್‌ಐಪಿ ವಿಭಾಗದಲ್ಲಿ ಹೂಡಿಕೆ ಮಾಡುತ್ತಿದ್ದೀರಿ. ಆ ಅನುಭವ ನಿಮಗೆ ಇದ್ದೇ ಇದೆ. ಅದೇ ರೀತಿ ಷೇರುಗಳಲ್ಲೂ ಹೂಡಿಕೆ ಸಾಧ್ಯವೇ ಎನ್ನುವ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿ ಕೇಳಿದ್ದೀರಿ. ಮ್ಯೂಚುವಲ್ ಫಂಡ್‌ಗಳಂತೆ ಷೇರುಗಳಲ್ಲೂ ನೀವು ಎಸ್‌ಐಪಿ ಮಾಡುವ ಮೂಲಕ ಹೂಡಿಕೆ ಮಾಡಬಹುದು. ಈ ಬಗ್ಗೆ ನೀವು ಯಾವ ಸಮಯದ ಪರಿಧಿ ಹೊಂದಿ ಹೂಡಿಕೆ ಮಾಡುತ್ತೀರಿ ಹಾಗೂ ಯಾವ ವಿಭಾಗದ ಷೇರುಗಳಲ್ಲಿ ಹೂಡಿಕೆ ಮಾಡುತ್ತೀರಿ ಎಂಬ ಮಾಹಿತಿಯನ್ನು ಮೊದಲೇ ಗೊತ್ತು ಮಾಡಿಕೊಳ್ಳಿ.  

ಷೇರುಗಳ ಖರೀದಿ ನಿಶ್ಚಿತ ಆವರ್ತಕ್ಕೆ ಸರಿಯಾಗಿ ಮರುಕಳಿಸುವ ಕಾರಣ ಮಾರುಕಟ್ಟೆಯ ಏರಿಳಿತಕ್ಕೆ ಸಂಬಂಧಿಸಿ ಷೇರುಗಳ ಪ್ರತಿ ಖರೀದಿಯ ಮೊತ್ತವೂ ಬದಲಾಗುತ್ತಿರುತ್ತದೆ. ಹೀಗಾಗಿ, ಒಮ್ಮೆಗೆ ಮಾರುಕಟ್ಟೆ ಮೇಲಕ್ಕೇರಿದಾಗ ಅಥವಾ ಇಳಿದಾಗ ಯಾವುದೇ ರೀತಿಯ ಮಹತ್ತರ ಪರಿಣಾಮ ಬೀರುವುದಿಲ್ಲ. ಕಾರಣ ನಿಮ್ಮ ಖರೀದಿಯ ಬೆಲೆ ಸರಾಸರಿ ಆಧಾರದಲ್ಲಿ ಗಣನೆಗೆ ಬರುತ್ತದೆ. ಇಷ್ಟೇ ಅಲ್ಲದೆ ಮಾರುಕಟ್ಟೆಯ ಗತಿಯನ್ನು ಪ್ರತಿ ಆವರ್ತಕ್ಕೊಮ್ಮೆ ಅವಲೋಕಿಸಿ ಉತ್ತಮ ಷೇರುಗಳಲ್ಲಿ ಹೆಚ್ಚುವರಿ ಹೂಡಿಕೆ ಮಾಡುವ ಅವಕಾಶವೂ ಇದೆ.

ಇನ್ನೂ ಒಂದು ವಿವರ ತಿಳಿದಿರಲಿ. ನಿಮ್ಮ ಲಾಭ-ನಷ್ಟ ಸಹಜವಾಗಿ ನೀವು ಖರೀದಿಸುವ ಷೇರುಗಳ ಕಂಪನಿಯ ಗುಣಮಟ್ಟ ಹಾಗೂ ಆಯಾ ಸಮಯದ ಮಾರುಕಟ್ಟೆ ಪರಿಸ್ಥಿತಿಯನ್ನು ಹೊಂದಿಕೊಂಡಿರುತ್ತದೆ. ಆದರೆ, ನಿಮ್ಮ ಬ್ಯಾಂಕ್ ಠೇವಣಿಗಿಂತ ಉತ್ತಮ ಲಾಭವನ್ನು ಒಟ್ಟಾರೆ ಹೂಡಿಕೆಯ ಅವಧಿಯಲ್ಲಿ ಸರಾಸರಿಯಾಗಿ ಗಳಿಸುತ್ತಿದ್ದೀರಾ ಎಂಬ ಬಗ್ಗೆ ಸದಾ ಗಮನವಿರಲಿ. ಈ ಮಾನದಂಡವನ್ನು ಕೆಲವು ತಿಂಗಳು ಪರಿಣಾಮಕಾರಿಯಾಗಿ ನಿಮ್ಮ ಹೂಡಿಕೆ ನಿರ್ಧಾರದಲ್ಲಿ ಅಳವಡಿಸಿಕೊಂಡು ಪರಿಣಾಮವನ್ನು ನೋಡಿ.  

ಪ್ರಶ್ನೆ: ನಾನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದು ಕಳೆದ ವರ್ಷ ಈಕ್ವಿಟಿ ವಿಭಾಗದಲ್ಲಿ ಹೂಡಿಕೆ ಮಾಡಿದ್ದೆ. ಮನೆ ಕಟ್ಟುವ ನಿಮಿತ್ತ ಹಣದ ಅಗತ್ಯವಿದ್ದ ಕಾರಣ ನಷ್ಟದಲ್ಲೇ ಕೆಲವು ಫಂಡ್ ಮಾರಾಟ ಮಾಡಿದೆ. ಈ ಮೊತ್ತ ಸುಮಾರು ₹50 ಸಾವಿರದ ಅಂದಾಜು ಆಗಿರುತ್ತದೆ. ಆದರೆ, ಇದನ್ನು ನಾನು ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ನಷ್ಟ ಎಂದು ಘೋಷಿಸಿರಲಿಲ್ಲ. ಈ ವರ್ಷ ನಾನು ಇದೇ ಮಾರ್ಚ್ ತಿಂಗಳೊಳಗೆ ಸುಮಾರು ₹25 ಲಕ್ಷ ಹಿಂಪಡೆಯುವವ ನಿದ್ದೇನೆ. ಇದರಲ್ಲಿ ಸುಮಾರು ₹3 ಲಕ್ಷದಷ್ಟು ಲಾಭ ಪ್ರಸ್ತುತ ಮಾರುಕಟ್ಟೆ ದರದಂತೆ ಕಂಡು ಬರುತ್ತಿದೆ

ನನ್ನ ಪ್ರಶ್ನೆ ಏನೆಂದರೆ, ಕಳೆದ ವರ್ಷ ಮಾಡಿರುವ ನಷ್ಟವನ್ನು ಈ ಬಾರಿಯ ಲಾಭದೊಡನೆ ಸರಿದೂಗಿಸಿ ಉಳಿದ ಮೊತ್ತದ ಮೇಲೆ ತೆರಿಗೆ ಕಟ್ಟುವ ಅವಕಾಶ ಇದೆಯೇ? ಉಳಿದ ಲಾಭಕ್ಕೆ ತೆರಿಗೆ ಯಾವ ದರದಲ್ಲಿ ಅನ್ವಯವಾಗುತ್ತದೆ. ನನ್ನಲ್ಲಿ ಈಕ್ವಿಟಿ ಹೂಡಿಕೆಯಲ್ಲದೆ, ಡೆಬ್ಟ್ ಫಂಡ್ ಹಾಗೂ ಅಗ್ರೆಸ್ಸಿವ್ ಹೈಬ್ರೀಡ್ ಫಂಡ್‌ಗಳಲ್ಲಿಯೂ ಹೂಡಿಕೆ ಇದೆ. ಇದಕ್ಕೆ ಪ್ರತ್ಯೇಕ ತೆರಿಗೆ ದರ ಎಂಬುದಾಗಿ ಕೇಳಿದ್ದೇನೆ. ಈ ಬಗ್ಗೆ ಕೂಡ ಮಾಹಿತಿ ತಿಳಿಸಿವೀರೇಂದ್ರ ಕಾಮತ್, ಬೆಂಗಳೂರು

ಉತ್ತರ: ನೀವು ಪ್ರಶ್ನೆಯಲ್ಲಿ ತಿಳಿಸಿರುವಂತೆ ಕಳೆದ ವರ್ಷದ ತೆರಿಗೆ ವಿವರವನ್ನು ಈಗಾಗಲೇ ಸಲ್ಲಿಸಿದ್ದೀರಿ. ಈ ಅವಧಿಯಲ್ಲಿ ನೀವು ಹಿಂದಿನ ವರ್ಷ ಹೊಂದಿದ್ದ ₹50 ಸಾವಿರ ನಷ್ಟದ ಮೊತ್ತವನ್ನು ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಯಾವುದೇ ವಿವರ ನೀಡಿಲ್ಲ. ಈಗ ಹಳೆಯ ರಿಟರ್ನ್ಸ್ ನವೀಕರಿಸುವ ಕಾಲಾವಕಾಶವೂ ಕಳೆದ ಡಿಸೆಂಬರ್ ತಿಂಗಳ ಕೊನೆಗೆ ಮುಗಿದಿರುತ್ತದೆ. ಹೀಗಾಗಿ ಈಗ ಆ ನಷ್ಟವನ್ನು ಏನೂ ಮಾಡಲಾಗದು.

ಪ್ರಸ್ತುತ ವರ್ಷ ನೀವು ಮಾರಾಟ ಮಾಡುವ ಮ್ಯೂಚುವಲ್ ಫಂಡ್ ಲಾಭದಲ್ಲಿದ್ದು ಈ ಸಂದರ್ಭದಲ್ಲಿ ತೆರಿಗೆ ಅನ್ವಯಿಸುತ್ತದೆ. ಒಂದು ವರ್ಷದೊಳಗೆ ಮಾರಾಟ ಮಾಡಿದ ಈಕ್ವಿಟಿ ಫಂಡ್‌ಗಳಿಗೆ ಲಾಭದ ಮೇಲೆ ಶೇ 15ರಷ್ಟು ತೆರಿಗೆ ದರ ಇದೆ. ಅದೇ ರೀತಿ ದೀರ್ಘಾವಧಿ ಹೂಡಿಕೆಗೆ ₹1 ಲಕ್ಷಕ್ಕೂ ಮೇಲ್ಪಟ್ಟ ಲಾಭದ ಮೇಲೆ ಶೇ 10ರ ದರದಲ್ಲಿ ತೆರಿಗೆ ಇದೆ. ಪ್ರಸ್ತುತ ವರ್ಷದಿಂದ (2023-24) ಡೆಟ್‌ ಫಂಡ್ ಖರೀದಿ- ಮಾರಾಟದಿಂದ ಬರುವ ಲಾಭಕ್ಕೆ ತೆರಿಗೆದಾರರಿಗೆ ಇರುವ ವೈಯಕ್ತಿಕ ತೆರಿಗೆ ದರವೇ ಅನ್ವಯವಾಗುತ್ತದೆ.

2023ರ ಮಾರ್ಚ್ 31ಕ್ಕಿಂತ ಹಿಂದೆ ಖರೀದಿಸಿದ ಮ್ಯೂಚುವಲ್ ಫಂಡ್‌ಗಳನ್ನು ದೀರ್ಘಾವಧಿ (36 ತಿಂಗಳು ಮೇಲ್ಪಟ್ಟು) ಲಾಭದೊಂದಿಗೆ ಮುಂದೆ ಮಾರಾಟ ಮಾಡಿದಾಗ ಶೇ 20ರಷ್ಟು ತೆರಿಗೆ ದರ ಈಗಲೂ ಅನ್ವಯಿಸುತ್ತದೆ. ನಿಮ್ಮ ವಿಚಾರದಲ್ಲಿ ಡೆಟ್‌ ಫಂಡ್‌ಗಳು ಅಲ್ಪಾವಧಿ (36 ತಿಂಗಳೊಳಗೆ) ಹೂಡಿಕೆಯಾಗಿದ್ದರೆ, ವೈಯಕ್ತಿಕ ತೆರಿಗೆ ದರವೇ ಅನ್ವಯವಾಗುತ್ತದೆ. ಇನ್ನು ಅಗ್ರೆಸ್ಸಿವ್ ಹೈಬ್ರಿಡ್ ಫಂಡ್‌ಗಳಿಗೂ ಕೂಡ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಗೆ ಅನ್ವಯಿಸುವ ತೆರಿಗೆ ನಿಯಮ ಅನ್ವಯವಾಗುತ್ತದೆ.

ನೀವು ಹಿಂದಿನ ವರ್ಷದ ನಷ್ಟವನ್ನು ಪ್ರಸ್ತುತ ವರ್ಷದ ಲಾಭದೊಡನೆ ಸರಿದೂಗಿಸಬಹುದೇ ಎಂಬ ಪ್ರಶ್ನೆ ಕೇಳಿದ್ದೀರಿ. ನಿಮ್ಮ ಹಳೆಯ ರಿಟರ್ನ್ಸ್‌ನಲ್ಲಿ ಈ ವಿವರ ಇಲ್ಲದ ಕಾರಣ ಪ್ರಸ್ತುತ ವರ್ಷ ಈ ಮೊತ್ತವನ್ನು ಲಾಭದೊಡನೆ ಸರಿದೂಗಿಸುವುದು ಅಸಾಧ್ಯ. ಹೀಗಾಗಿ ಮೇಲೆ ತಿಳಿಸಿದ ₹1 ಲಕ್ಷದ ರಿಯಾಯಿತಿಯಲ್ಲದೆ ಬೇರೆ ಯಾವುದೇ ತೆರಿಗೆ ರಿಯಾಯಿತಿ ಇರುವುದಿಲ್ಲ.  

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌:businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT