ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ| ಷೇರುಗಳ ಮಾರಾಟದ ಮೇಲಿನ ತೆರಿಗೆ ಪರಿಣಾಮಗಳು

Published 27 ಜೂನ್ 2023, 23:34 IST
Last Updated 27 ಜೂನ್ 2023, 23:34 IST
ಅಕ್ಷರ ಗಾತ್ರ

ರಾಘವೇಂದ್ರ ಚಿಪ್ಳೂನ್ಕರ್, ಕಾರ್ಕಳ

ಪ್ರಶ್ನೆ: ನಾನು ಷೇರುಪೇಟೆಯಲ್ಲಿ ಹಾಗೂ ಕೆಲವು ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸಿದ್ದೇನೆ. ನನ್ನಲ್ಲಿ ಕೆಲವು ಬ್ಲೂಚಿಪ್ ಕಂಪನಿಗಳ ಷೇರುಗಳು ಇವೆ. ಕಳೆದ ನಾಲ್ಕೈದು ವರ್ಷಗಳಿಂದ ಹಣ ತೊಡಗಿಸಿರುವ ಕಾರಣ ನನಗೆ ಬೋನಸ್ ಷೇರುಗಳೂ ಬಂದಿವೆ. ನನ್ನ ತಂದೆಯ ಹೆಸರಲ್ಲಿದ್ದ ಕೆಲವು ಷೇರುಗಳನ್ನು ನಾನು ಅವರ ನಿಧನದ ಬಳಿಕ ಪಡೆದಿರುವೆ. ನನ್ನ ವೈಯಕ್ತಿಕ ಹಣಕಾಸು ಅಗತ್ಯಕ್ಕಾಗಿ ಕೆಲವು ಷೇರುಗಳನ್ನು ಮಾರಬೇಕಾಗಿದೆ. ಹೀಗಾಗಿ ಇದರ ತೆರಿಗೆ ಪರಿಣಾಮ ತಿಳಿಸಬೇಕಾಗಿ ಕೋರಿಕೆ.

ಉತ್ತರ: ನಿಮ್ಮಲ್ಲಿರುವ ಷೇರುಗಳ ಮಾರಾಟದಿಂದ ಬಂದ ಲಾಭವನ್ನು ದೀರ್ಘಾವಧಿ ಅಥವಾ ಅಲ್ಪಾವಧಿ ಹೂಡಿಕೆಯ ಮೇಲಣ ಲಾಭವೇ ಎನ್ನುವುದನ್ನು ಮೊದಲು ತೀರ್ಮಾನಿಸಬೇಕು. ಷೇರುಗಳಲ್ಲಿನ ಹೂಡಿಕೆ ಹನ್ನೆರಡು ತಿಂಗಳ ಒಳಗಿನ ಅವಧಿಯದಾಗಿದ್ದರೆ, ಅದು ಅಲ್ಪಾವಧಿ ಹೂಡಿಕೆ ಎಂದೂ ಅದರ ಮೇಲ್ಪಟ್ಟ ಅವಧಿಯ ಹೂಡಿಕೆಯಾಗಿದ್ದರೆ ದೀರ್ಘಾವಧಿ ಹೂಡಿಕೆ ಎಂದೂ ಪರಿಗಣಿಸಬೇಕು. ಅಲ್ಪಾವಧಿ ಹೂಡಿಕೆ ಲಾಭಕ್ಕೆ ನಿಮಗೆ ಶೇ 15ರಷ್ಟು ತೆರಿಗೆ ಅನ್ವಯವಾಗುತ್ತದೆ. ದೀರ್ಘಾವಧಿ ಹೂಡಿಕೆ ಲಾಭಕ್ಕೆ ಶೇ 10ರಷ್ಟು ದರ ಅನ್ವಯ ಆಗುತ್ತದೆ. ಇದಕ್ಕೆ ಹಣದುಬ್ಬರ ಸೂಚ್ಯಂಕದ (ಇಂಡೆಕ್ಸೇಷನ್) ಲಾಭ ಸಿಗುವುದಿಲ್ಲ. ಆದರೆ, ದೀರ್ಘಾವಧಿ ಹೂಡಿಕೆಯಲ್ಲಿ ಷೇರುಗಳ ಮಾರಾಟದಿಂದ ಗಳಿಸುವ ₹1 ಲಕ್ಷದವರೆಗಿನ ಲಾಭಕ್ಕೆ ತೆರಿಗೆ ವಿನಾಯಿತಿ ಇದೆ. ಅದಕ್ಕಿಂತ ಹೆಚ್ಚಿನ ಮೊತ್ತದ ಲಾಭಕ್ಕೆ ಮಾತ್ರ ತೆರಿಗೆ ಅನ್ವಯಿಸುತ್ತದೆ.

ಬೋನಸ್ ಷೇರುಗಳ ಮೌಲ್ಯದ ಬಗ್ಗೆ ತಿಳಿದುಕೊಳ್ಳುವುದಾದರೆ: ಇವುಗಳ ಖರೀದಿ ಮೌಲ್ಯ ಶೂನ್ಯವಾಗಿರುತ್ತದೆ. ಹೀಗಾಗಿ ಮಾರಾಟ ವೆಚ್ಚ ಹೊರತುಪಡಿಸಿ ಉಳಿದ ಪೂರ್ಣ ಮೌಲ್ಯ ತೆರಿಗೆಗೊಳಪಡುತ್ತದೆ. ಅದರ ಅವಧಿಯನ್ನು ಬೋನಸ್ ಷೇರುಗಳನ್ನು ಬಿಡುಗಡೆ ಮಾಡಿದ ದಿನಾಂಕದಿಂದ ಲೆಕ್ಕ ಹಾಕಬೇಕು. ಮಾತ್ರವಲ್ಲ, ನೀವು ನಿಮ್ಮಲ್ಲಿನ ಒಂದಿಷ್ಟು ಷೇರುಗಳನ್ನು ಮಾತ್ರ ಮಾರಾಟ ಮಾಡಿದಾಗ, ಷೇರುಗಳನ್ನು ಕೊಂಡ ದಿನಾಂಕದ ಕ್ರಮಾಂಕದಲ್ಲಿಯೇ ಮಾರಾಟ ಮಾಡಲಾಗಿದೆ ಎಂದು ಭಾವಿಸಿ ತೆರಿಗೆ ಲೆಕ್ಕ ಹಾಕಬೇಕು.  

ಯಾವುದೇ ಷೇರುಗಳನ್ನು ಉಡುಗೊರೆಯ ರೂಪದಲ್ಲಿ ಪಡೆದರೆ ಅಥವಾ ಮರಣಾನಂತರ ಮಕ್ಕಳ ಹೆಸರಿಗೆ ವರ್ಗಾವಣೆಯಾದಾಗ, ಹಿಂದಿನ ಖರೀದಿದಾರ ಯಾವ ಮೌಲ್ಯ ಪಾವತಿಸಿದ್ದನೋ ಆ ಮೌಲ್ಯವೇ ಮಾರಾಟ ಮಾಡಿದ ವ್ಯಕ್ತಿಗೆ ಅಸಲು ಮೌಲ್ಯವಾಗಿ ಪರಿಗಣಿತವಾಗುತ್ತದೆ. ಹೀಗಾಗಿ ಅವರು ಖರೀದಿಸಿದ ಮಾಹಿತಿಯನ್ನು ಡಿಮ್ಯಾಟ್ ಮಾಹಿತಿಯ ಆಧಾರದ ಮೇಲೆ ಅರಿತು ಅಂದಿನ ದಿನಾಂಕದ ಮೌಲ್ಯ ತಿಳಿದುಕೊಳ್ಳಿ.

ರವಿರಾಜ್, ಮಂಗಳೂರು

ಪ್ರಶ್ನೆ: ನಾನು 67 ವರ್ಷ ವಯಸ್ಸಿನ ಹಿರಿಯ ನಾಗರಿಕ. ಆರ್ಥಿಕ ವರ್ಷ 2022-23ರಲ್ಲಿ ನನಗೆ ಬಾಡಿಗೆಯಿಂದ ₹1.71 ಲಕ್ಷ (ಶೇ 30ರಷ್ಟು ಕಡಿತ ಮಾಡಿ) ಮತ್ತು ಅಂಗಡಿ ವ್ಯವಹಾರದಿಂದ ₹1.60 ಲಕ್ಷ, ಬ್ಯಾಂಕ್ ಬಡ್ಡಿ ₹11.10 ಲಕ್ಷ ಬಂದಿದೆ. ವಾರ್ಷಿಕವಾಗಿ ಎಲ್ಐಸಿ, ಪಿಪಿಎಫ್‌ನಲ್ಲಿ ₹1.50 ಲಕ್ಷ ತೊಡಗಿಸಿದ್ದೇನೆ. ಕೆಲಸದವರಿಗೆ ಸಂಬಳ ಕೊಟ್ಟು ಅಂಗಡಿ ನಡೆಸುವುದರಿಂದ ಲಾಭವಿಲ್ಲ. ಸರ್ಕಾರದ ಪ್ರಕಾರ ನಾನು ಮಾರಾಟ ತೆರಿಗೆ ಕೊಡಬೇಕು. ಮುಂದೆ ವಯಸ್ಸಿನ ಕಾರಣ ವ್ಯವಹಾರ ನಡೆಸಲು ಸಾಧ್ಯವಿಲ್ಲ. ನಾನು ಈ ಆದಾಯ ಹಾಗೂ ಹೂಡಿಕೆಗೆ ಯಾವ ತೆರಿಗೆ ಪದ್ದತಿ ಅನುಸರಿಸಬೇಕು? ಎರಡೂ ಪದ್ದತಿಗಳಲ್ಲಿ ತೆರಿಗೆ ಎಷ್ಟು ಬರುತ್ತದೆ?

ಉತ್ತರ: ನೀವು ಹಿರಿಯ ನಾಗರಿಕ, ಮೂರು ಪ್ರತ್ಯೇಕ ಮೂಲಗಳಿಂದ ಆದಾಯ ಗಳಿಸುತ್ತಿದ್ದೀರಿ. ಅನೇಕ ಹೂಡಿಕೆಗಳಲ್ಲಿ ಹಣ ತೊಡಗಿಸಿದ್ದೀರಿ. ಪ್ರಶ್ನೆಯಲ್ಲಿ ನೀಡಿರುವ ಮಾಹಿತಿಯಂತೆ ನಿಮ್ಮ ಬಾಡಿಗೆ ಆದಾಯಕ್ಕೆ ತೆರಿಗೆ ಇದೆ. ಸೆಕ್ಷನ್ 24ಎ ಪ್ರಕಾರ, ಬಾಡಿಗೆ ಆದಾಯದ ಮೇಲೆ ಶೇ 30ರ ಕಟ್ಟಡ ನಿರ್ವಹಣಾ ವೆಚ್ಚ ಮಾತ್ರವಲ್ಲದೆ ಪಾವತಿ ಮಾಡಿದ ಆಸ್ತಿ ತೆರಿಗೆಯನ್ನು ಕಳೆದು ಉಳಿದ ಮೊತ್ತಕ್ಕೆ ಮಾತ್ರ ತೆರಿಗೆ ಇರುತ್ತದೆ. ಹೀಗಾಗಿ ಬಾಡಿಗೆಗೆ ಕೊಟ್ಟ ಮನೆಗೆ ಸಂಬಂಧಿಸಿದ ಆಸ್ತಿ ತೆರಿಗೆ ಪಾವತಿಸಿದ ಮಾಹಿತಿ ನಿಮ್ಮಲ್ಲಿರಲಿ.

ನಿಮ್ಮ ಅಂಗಡಿ ವ್ಯವಹಾರದಿಂದಲೂ ಒಂದಷ್ಟು ಆದಾಯ ಬರುತ್ತಿದೆ. ಇಲ್ಲಿ ನೀವು ತಿಳಿಸಿರುವುದು ಒಟ್ಟು ವ್ಯವಹಾರದ ಮೊತ್ತವನ್ನೋ ಅಥವಾ ಲಾಭವನ್ನೋ ಎಂಬುದು ಸ್ಪಷ್ಟವಾಗಿಲ್ಲ. ಯಾರೆಲ್ಲ ವ್ಯವಹಾರದಲ್ಲಿ ತೊಡಗಿ, ಲೆಕ್ಕ ಪರಿಶೋಧನೆಗೆ ಒಳಪಡಬೇಕಾಗಿಲ್ಲವೋ, ಅವರಿಗೆ ಡಿಜಿಟಲ್ ವಹಿವಾಟಿನ ಮೇಲೆ ಶೇ 6ರಷ್ಟು ಹಾಗೂ ಇತರ ಮೂಲಗಳ ಮುಖಾಂತರ ನಡೆಯುವ ವ್ಯವಹಾರಕ್ಕೆ ಶೇ 8ರಷ್ಟು ಮೊತ್ತವನ್ನು ತೆರಿಗೆಗೆ ಒಳಪಡುವ ಆದಾಯವೆಂದು ಪರಿಗಣಿಸಿ, ಆ ಮೊತ್ತಕ್ಕೆ ವೈಯಕ್ತಿಕ ದರದಂತೆ ತೆರಿಗೆ ಕಟ್ಟುವುದಕ್ಕೆ ಅವಕಾಶವಿದೆ.

ನಿಮ್ಮ ಬಡ್ಡಿ ಆದಾಯಕ್ಕೂ ತೆರಿಗೆ ಇದೆ. ಇದರ ಮೇಲೆ ₹50,000 ವರೆಗೆ ವಿನಾಯಿತಿ ಇದೆ. ಇದಲ್ಲದೆ, ನೀವು ವಾರ್ಷಿಕವಾಗಿ ಎಲ್ಐಸಿ, ಪಿಪಿಎಫ್‌ನಲ್ಲಿ ₹1.50 ಲಕ್ಷ ತೊಡಗಿಸಿರುವುದಾಗಿ ತಿಳಿಸಿದ್ದೀರಿ. ಆದರೆ ಈ ವಿನಾಯಿತಿಗಳು ಹಳೆಯ ತೆರಿಗೆ ಪದ್ದತಿ ಆಯ್ಕೆ ಮಾಡುವುದಾದರೆ ಮಾತ್ರ ಸಿಗುತ್ತವೆ. ಪ್ರಸ್ತುತ ನಿಮ್ಮ ಸನ್ನಿವೇಶದಲ್ಲಿ ಈ ಎರಡೂ ವಿನಾಯಿತಿ ಪಡೆದು ತೆರಿಗೆ ಲೆಕ್ಕ ಹಾಕಿದರೂ ಹಳೆ ಪದ್ದತಿಯಡಿ ₹1.74 ಲಕ್ಷ ತೆರಿಗೆ ಬರುತ್ತದೆ. ನೀವು ಹೊಸ ತೆರಿಗೆ ಪದ್ದತಿ ಆರಿಸಿ ಯಾವುದೇ ವಿನಾಯಿತಿಗಳನ್ನು ಪಡೆಯದಿದ್ದರೂ ಬರುವ ತೆರಿಗೆ ₹1.33 ಲಕ್ಷ. ಹೀಗಾಗಿ ಸುಮಾರು ₹40 ಸಾವಿರದ ಲಾಭ ಹೊಸ ತೆರಿಗೆ ಪದ್ದತಿಯಿಂದ ಇದೆ. ನೀವು ತಿಳಿಸಿರುವ ಅಂಗಡಿ ವ್ಯವಹಾರದ ಆದಾಯ ₹1.60 ಲಕ್ಷವನ್ನು ತೆರಿಗೆಗೊಳಪಡುವ ಮೊತ್ತವೆಂದು ಊಹಿಸಲಾಗಿದೆ.  

ನಿಮ್ಮ ಹೂಡಿಕೆಗಳು ತೆರಿಗೆ ಪ್ರಯೋಜನಕ್ಕೆ ಬರದಿದ್ದರೂ, ಮುಂದೆ ಒಂದು ದೊಡ್ಡ ಮೊತ್ತವಾಗಿ ನಿಮಗೆ ಸಿಗಬಹುದು. ಹೀಗಾಗಿ ಇರುವ ಹೂಡಿಕೆ ಮುಂದುವರಿಸಿ. ವ್ಯಾಪಾರ-ವ್ಯವಹಾರ ನಿಲ್ಲಿಸಿ ನಿವೃತ್ತ ಬದುಕನ್ನು ಮತ್ತಷ್ಟು ಚೆನ್ನಾಗಿ ಸಾಗಿಸುವ ಬಗ್ಗೆ ಹೇಳಿದ್ದೀರಿ. ಇದಕ್ಕೂ ಮುನ್ನ, ಹಳೆಯ ತೆರಿಗೆ ಬಾಕಿ ಇತ್ಯಾದಿಗಳನ್ನು ಸಂಪೂರ್ಣ ಪಾವತಿಸಿ ಅಗತ್ಯ ನಿಯಮದಂತೆ ವ್ಯವಹಾರ ಸ್ಥಗಿತಗೊಳಿಸುವ ಬಗ್ಗೆ ಗಮನಹರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT