ಹಣಕಾಸು ಹೂಡಿಕೆ, ತೆರಿಗೆ ಮುಂತಾದ ಪ್ರಶ್ನೆಗಳಿಗೆ ತೆರಿಗೆ ಮತ್ತು ವೈಯಕ್ತಿಕ ಹಣಕಾಸು ತಜ್ಞ ಪ್ರಮೋದ ಶ್ರೀಕಾಂತ ದೈತೋಟ ಉತ್ತರ ನೀಡಿದ್ದಾರೆ.
ಪ್ರಶ್ನೆ ಕೇಳಿದವರು: ವಿಶ್ವನಾಥ್, ಬೆಂಗಳೂರು.
ಪ್ರಸ್ತುತ ನಾನು ಸಾರ್ವಜನಿಕ ವಲಯದ ಕಂಪನಿಯೊಂದರಲ್ಲಿ ಮಹಾಪ್ರಬಂಧಕನಾಗಿದ್ದೇನೆ. ಮುಂದಿನ ವರ್ಷದ ಮಾರ್ಚ್‌ನಲ್ಲಿ (35 ವರ್ಷ ಸೇವೆ) ನಿವೃತ್ತಿ ಹೊಂದುತ್ತೇನೆ. ಈ ನಿಮಿತ್ತ ನಿವೃತ್ತಿಗೆ ಸಂಬಂಧಿಸಿದ ಅನೇಕ ಆರ್ಥಿಕ ಗಳಿಕೆಯನ್ನು ಪಡೆಯುವವನಿದ್ದೇನೆ. ಇದರಲ್ಲಿ ಪಿ.ಎಫ್ ಮೊತ್ತ ಸುಮಾರು ₹75 ಲಕ್ಷ, ರಜಾ ಸಂಬಂಧಿತ ಗಳಿಕೆ ₹4 ಲಕ್ಷ, ಗ್ರಾಚ್ಯುಟಿ ಮೊತ್ತ ಸುಮಾರು ₹10 ಲಕ್ಷ, ಗ್ರೂಪ್ ಇನ್ಶೂರೆನ್ಸ್ ಮೊತ್ತ ₹3 ಲಕ್ಷ ಹೀಗೆ ಒಟ್ಟಾರೆ ಮೊತ್ತ ₹92 ಲಕ್ಷದಿಂದ ₹1 ಕೋಟಿ ತನಕ ಸಿಗಬಹುದು.
ಮುಂದಿನ ವರ್ಷಕ್ಕೆ ಅಂದಾಜು ಸುಮಾರು ₹9 ರಿಂದ ₹10 ಲಕ್ಷ ಪಿಂಚಣಿ ಬರಬಹುದು ಎಂದು ಊಹಿಸಿದ್ದೇನೆ. ಈ ಮೊತ್ತವನ್ನು ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ ಆದಾಯ ನೀಡುವ ಕಡೆ ಹೂಡಿಕೆ ಮಾಡುವ ಯೋಚನೆಯಿದೆ. ದೀರ್ಘಾವಧಿಯಲ್ಲಿ ಯಾವುದಾದರೂ ಭೂಮಿ ಅಥವಾ ಮನೆ ಕೊಳ್ಳುವ ಬಗ್ಗೆಯೂ ಯೋಜನೆ ಇದೆ. ಈ ಬಗ್ಗೆ ಮಾಹಿತಿ ಕೊಡಿ. ತೆರಿಗೆ ಉಳಿಸುವ ಅವಕಾಶ ಇದ್ದರೆ ಅದನ್ನು ತಿಳಿಸಿ.
ಈಗಾಗಲೇ ಪ್ರಶ್ನೆಯಲ್ಲಿ ತಿಳಿಸಿರುವಂತೆ ನೀವು ಸಾರ್ವಜನಿಕ ವಲಯ ಕಂಪನಿಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದೀರಿ. ನಿಮಗೆ ಸಿಗಲಿರುವ ಬಹುತೇಕ ಎಲ್ಲ ಮೊತ್ತಗಳು ತೆರಿಗೆ ಮುಕ್ತ ಆಗಿರುವವೇ ಆಗಿವೆ. ನಿಮ್ಮ ಈ ಮೊತ್ತವನ್ನು ನಿಗದಿತ ಯೋಜನೆಗಳಲ್ಲಿ ಹೂಡಿಕೆ ಮಾಡಿ ಆದಾಯ ತೆರಿಗೆ ಉಳಿತಾಯಕ್ಕೆ ಅವಕಾಶ ಇದೆ.
ನಿಮ್ಮ ಸೇವೆ ಸಾರ್ವಜನಿಕ ವಲಯದ ಕಂಪನಿಯಲ್ಲಾದ ಕಾರಣ ನಿಮಗೆ ಸಿಗುವ ಮೊತ್ತವನ್ನು ಪ್ರತ್ಯೇಕವಾದ ಯೋಜನೆಯಲ್ಲಿ ಹೂಡಿಕೆ ಮಾಡುವ ಅವಕಾಶ ಇದೆ. ನಿವೃತ್ತಿಗೆ ಸಂಬಂಧಿಸಿ ಸಿಗುವ ಮೊತ್ತವನ್ನು ಮೂರು ತಿಂಗಳ ಒಳಗೆ ಸ್ಟೇಟ್ ಬ್ಯಾ೦ಕ್ ಆಫ್ ಇಂಡಿಯಾ ಅಥವಾ ಇತರೆ ರಾಷ್ಟ್ರೀಕೃತ ಬ್ಯಾ೦ಕ್‌ನಲ್ಲಿ ಸಾರ್ವಜನಿಕ ವಲಯದ ಕಂಪನಿಯ ಉದ್ಯೋಗಿಗಳ ನಿವೃತ್ತಿಯ ಠೇವಣಿ ಯೋಜನೆಯಲ್ಲಿ ತೊಡಗಿಸಿ.
ಈ ಯೋಜನೆಯ ಠೇವಣಿಗೆ ಸಿಗುವ ಬಡ್ಡಿಗೆ ಸೆಕ್ಷನ್ 10(15)(iv) ಅಡಿ ಸಂಪೂರ್ಣ ತೆರಿಗೆ ವಿನಾಯಿತಿ ಸಿಗುತ್ತದೆ. ಆ ಠೇವಣಿಯನ್ನು ಮೂರು ವರ್ಷ ಕಾಲ ಹಿಂಪಡೆಯುವಂತಿಲ್ಲ. ಅಲ್ಲಿಯ ತನಕ ಬಡ್ಡಿಗೆ ತೆರಿಗೆ ಇರುವುದಿಲ್ಲ. ಇದಕ್ಕೆ ಅಗತ್ಯವಾಗಿ ನಿಮ್ಮ ಕಂಪನಿ ಸಾರ್ವಜನಿಕ ವಲಯದ ಕಂಪನಿ ಎಂಬುದಾಗಿ ಹಾಗೂ ನಿಮಗೆ ಸಿಕ್ಕಿದ ಮೊತ್ತ ನಿವೃತ್ತಿಗೆ ಸಂಬಂಧಿಸಿದ್ದಾಗಿದೆ ಎಂದು ದೃಢೀಕರಿಸಿರುವ ಕಂಪನಿಯ ಪ್ರಮಾಣ ಪತ್ರ ಪಡೆದುಕೊಳ್ಳಿ. ರಿಟರ್ನ್ಸ್ ಸಲ್ಲಿಸುವಾಗ ವಿನಾಯಿತಿ ಆದಾಯದಲ್ಲಿ ಈ ಬಡ್ಡಿ ಮೊತ್ತ ಘೋಷಿಸಬೇಕು. ಇತರೆ ಕಡೆ ಎಲ್ಲೇ ಹೂಡಿಕೆ ಮಾಡಿದರೂ ಸಿಗುವ ಬಡ್ಡಿಗೆ ತೆರಿಗೆ ಇದೆ ಎಂಬುದನ್ನು ಗಮನಿಸಿ.
ಪ್ರಶ್ನೆ ಕೇಳಿದವರು: ಸೌಮ್ಯ ಎಸ್., ತುಮಕೂರು.
ನನಗೆ 30 ವರ್ಷ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ವಾರ್ಷಿಕ ಆದಾಯ ₹10 ಲಕ್ಷ ಇದೆ. ಇದಕ್ಕೆ ಸಂಸ್ಥೆಯವರು ತೆರಿಗೆ ಕಡಿತ ಮಾಡುತ್ತಿದ್ದಾರೆ. ಈ ಆದಾಯಕ್ಕೆ ನಾನು ಪ್ರತಿವರ್ಷ ಹೊಸ ತೆರಿಗೆ ಪದ್ಧತಿಯಂತೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಾ ಬಂದಿದ್ದೇನೆ.
ಸುಮಾರು ಐದು ವರ್ಷದ ಹಿಂದೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಗ್ರಾಮದ ಬಳಿ 9 ಎಕರೆ ಕೃಷಿ ಜಮೀನು ಖರೀದಿಸಿದ್ದೇನೆ. ಪಹಣಿ ಮತ್ತು ಇತರೆ ದಾಖಲೆಗಳು ನನ್ನ ಹೆಸರಲ್ಲಿವೆ. ಇಲ್ಲಿ ಸುಮಾರು 1,000 ಅಡಿಕೆ ಮರ ಹಾಗೂ 450 ತೆಂಗಿನ ಸಸಿಗಳನ್ನು ಬೆಳೆಸುತ್ತಿದ್ದೇನೆ. ಕಾರ್ಮಿಕರನ್ನು ಇದನ್ನು ನೋಡಿಕೊಳ್ಳುತ್ತಾರೆ.
ಈ ವರ್ಷ ಅಡಿಕೆ ಮರಗಳು ಫಸಲಿಗೆ ಬಂದಿದ್ದು, ₹4 ಲಕ್ಷ ವಾರ್ಷಿಕ ಮೌಲ್ಯಕ್ಕೆ ಗೇಣಿ ಕೊಟ್ಟಿದ್ದೇನೆ. ಇದರ ಜೊತೆಗೆ ಆಗಾಗ ತರಕಾರಿ ಬೆಳೆದು ಕಾರ್ಮಿಕರ ಮೂಲಕ ಸಗಟು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದೇನೆ. ಹೀಗೆ ಈ ವರ್ಷ ಕಂತುಗಳಲ್ಲಿ ಸುಮಾರು ₹5 ಲಕ್ಷ ಕೃಷಿ ಆದಾಯ ಗಳಿಸಿದ್ದೇನೆ. ಈ ಎಲ್ಲವೂ ನಗದು ಮೂಲಕವೇ ವ್ಯವಹಾರ ನಡೆಯುತ್ತಿದೆ. ಈ ಆದಾಯವು ಬರುವ ವರ್ಷಗಳಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ.
ನಮ್ಮಿಂದ ಖರೀದಿಸುವ ಅಡಿಕೆ ಮಧ್ಯವರ್ತಿಗಳು ಅಥವಾ ತರಕಾರಿ ಮಧ್ಯವರ್ತಿಗಳು ಅಧಿಕೃತವಾಗಿ ಯಾವುದೇ ರಸೀದಿ ನೀಡುವುದಿಲ್ಲ. ನಾನು ಕೊಡುವ ದಿನಗೂಲಿ ಹಾಗೂ ಇತರೆ ಖರ್ಚನ್ನು ಕೂಡ ನಗದು ಮೂಲಕವೇ ಕೊಡುತ್ತಿದ್ದೇನೆ. ಹೀಗಿರುವಾಗ ಇವೆಲ್ಲವನ್ನು ಮುಂದಿನ ವರ್ಷದ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಯಾವ ರೀತಿ ವಿವರ ಸಲ್ಲಿಸಬೇಕು ಎಂಬುದನ್ನು ತಿಳಿಸಬೇಕೆಂದು ಕೋರುತ್ತೇನೆ. ನಾನು ಯಾವ ರೀತಿ ಹಣಕಾಸು ದಾಖಲೆಗಳನ್ನು ನಿರ್ವಹಿಸಬೇಕು? ಇದನ್ನು ಆಡಿಟ್ ಮಾಡಿಸಬೇಕೇ? ಆದಾಯ ತೆರಿಗೆ ಇಲಾಖೆಯಿಂದ ಏನಾದರು ತೊಂದರೆ ಬರಬಹುದೇ?
ನೀವು ಪ್ರಶ್ನೆಯಲ್ಲಿ ತಿಳಿಸಿರುವಂತೆ ಈಗಾಗಲೇ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ವೇತನ ಆದಾಯವಲ್ಲದೆ ಕೃಷಿ ಭೂಮಿಯಿಂದ ವಿವಿಧ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಆದಾಯವೂ ಇದೆ ಎಂಬುದನ್ನು ಉಲ್ಲೇಖಿಸಿದ್ದೀರಿ.
ನೀವು ಹೊಸ ತೆರಿಗೆ ಪದ್ಧತಿ ಅನುಸರಿಸುತ್ತಿದ್ದು, ನಿಮ್ಮ ವೇತನ ಆದಾಯ ಗರಿಷ್ಠ ಆದಾಯ ವಿನಾಯಿತಿ ಮಿತಿಯಾದ ₹3 ಲಕ್ಷಕ್ಕಿಂತ ಅಧಿಕ ಇದೆ. ಕೃಷಿ ಆದಾಯವೂ ₹5 ಲಕ್ಷಕ್ಕಿಂತ ಮೇಲ್ಪಟ್ಟಿರುವುದರಿಂದ ನಿಮ್ಮ ವಾರ್ಷಿಕ ರಿಟರ್ನ್ಸ್ ಸಲ್ಲಿಸುವಾಗ ಕೃಷಿ ಆದಾಯ ಮೊತ್ತವನ್ನೂ ಅದರಲ್ಲಿ ಪರಿಗಣಿಸಬೇಕಾಗುತ್ತದೆ. ಮುಂದೆ ಅನೇಕ ವರ್ಷದ ಕೃಷಿ ಆದಾಯ ಒಟ್ಟಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಜಮಾ ಆದಾಗ ಹಾಗೂ ಅವೆಲ್ಲಾ ನಗದು ರೂಪದಲ್ಲೇ ಇರುವ ಕಾರಣ ಅದರ ಮೂಲದ ಬಗ್ಗೆ ಪ್ರಶ್ನೆ ಬರದಂತೆ ಇಂತಹ ಆದಾಯ ಘೋಷಣೆಯು ಕಾನೂನು ಪರಿಧಿಯಲ್ಲಿ ಅನಿವಾರ್ಯ. ರಿಟರ್ನ್ಸ್ ಸಲ್ಲಿಕೆಗೆ ನಿಮ್ಮ ಸ್ಥಳೀಯ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.
ಕೃಷಿಗೆ ಸಂಬಂಧಿಸಿದ ಆದಾಯ ಯಾವುದು ಎಂಬುದನ್ನು ಆದಾಯ ತೆರಿಗೆ ಸೆಕ್ಷನ್ 2(1ಎ) ಯಲ್ಲಿ ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದ ವಿನಾಯಿತಿಗಳನ್ನು ಸೆಕ್ಷನ್ 10(1) ರಲ್ಲಿ ಹೇಳಲಾಗಿದೆ. ನಿಮ್ಮ ಎಲ್ಲ ಆದಾಯಗಳೂ ವಿನಾಯಿತಿ ಪರಿಧಿಯಲ್ಲೇ ಇವೆ. ಇನ್ನು ನಿಮ್ಮ ಕೃಷಿಗೆ ಸಂಬಂಧಪಟ್ಟ ಲೆಕ್ಕಪತ್ರದ ನಿರ್ವಹಣೆ ಬಗ್ಗೆ ಹೇಳುವುದಾದರೆ, ಇದು ವಾಣಿಜ್ಯ ವ್ಯವಹಾರದ ಪರಿಮಿತಿಯಲ್ಲಿ ಇಲ್ಲ. ಹಾಗಾಗಿ, ಯಾವುದೇ ಲೆಕ್ಕಪತ್ರ ತಪಾಸಣೆಯ ಅಗತ್ಯ ಇಲ್ಲ. ಆದರೆ, ನೀವು ಘೋಷಿಸುವ ಕೃಷಿ ಆದಾಯ ಸಂದೇಹಾಸ್ಪದವಾಗದ ರೀತಿ ಇರಲಿ. ಇದಕ್ಕಾಗಿ ಬೇಕಾದ ಮಾಹಿತಿ ಹಾಗೂ ದಿನವಹಿ ಲೆಕ್ಕ ಇಟ್ಟುಕೊಳ್ಳಿ.
ದೊಡ್ಡ ಮೊತ್ತದ ವ್ಯವಹಾರವನ್ನು ಯಾವತ್ತೂ ಬ್ಯಾಂಕ್ ಮೂಲಕವೇ ನಡೆಸಿ. ಯಾವುದೇ ಸಂದರ್ಭದಲ್ಲಿ ಒಂದೇ ಮಾರಾಟಕ್ಕೆ ಸಂಬಂಧಿಸಿ ₹2 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ಪಡೆಯದಿರಿ. ಕೃಷಿ ವ್ಯವಹಾರಕ್ಕಾಗಿ ಪ್ರತ್ಯೇಕವಾದ ಬ್ಯಾಂಕ್ ಖಾತೆ ನಿರ್ವಹಿಸಿ ಮಾಹಿತಿ ಇರಿಸುವುದು ಪಾರದರ್ಶಕತೆ ದೃಷ್ಟಿಯಲ್ಲಿ ಉತ್ತಮ ನಡೆ ಆಗಿದೆ.
ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್: businessdesk@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.