ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ: ಅಗತ್ಯಕ್ಕಿಂತ ಹೆಚ್ಚಿನ ತೆರಿಗೆ ಪಾವತಿ ತಪ್ಪಿಸಲು ಏನು ಮಾಡಬೇಕು?

ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ
Published 25 ಜೂನ್ 2024, 20:21 IST
Last Updated 25 ಜೂನ್ 2024, 20:21 IST
ಅಕ್ಷರ ಗಾತ್ರ

–ಗುಣಶೇಖರ್, ಚಿತ್ರದುರ್ಗ.

ಪ್ರಶ್ನೆ: 2020ರ ಸೆಪ್ಟೆಂಬರ್ 19ರಂದು ಎಸ್‌ಬಿಐನಲ್ಲಿ ಶೇ 5.40ರ ಬಡ್ಡಿ ದರದಲ್ಲಿ ತಿಂಗಳಿಗೆ ₹5,000ರಂತೆ ಐದು ವರ್ಷಗಳ ಆರ್‌ಡಿ ಖಾತೆ ಪ್ರಾರಂಭಿಸಿದೆ. ಹಾಲಿ ನನ್ನ ಉಳಿತಾಯವು ₹2.30 ಲಕ್ಷ ಆಗಿದೆ. ಬ್ಯಾಂಕ್‌ ಮಾಹಿತಿ ಪ್ರಕಾರ ಮೆಚ್ಯೂರಿಟಿ ಸಂದರ್ಭದಲ್ಲಿ ನನ್ನ ಬಳಿ ₹3,44,850 ಇರುತ್ತದೆ. ನನ್ನ ಖಾತೆಯ ಐದು ವರ್ಷಗಳ ಅವಧಿ ಪೂರ್ಣಗೊಂಡಾಗ ನಾನು ತೆರಿಗೆ ಪಾವತಿಸಬೇಕೇ? ಹಾಗಿದ್ದರೆ, ವಿಧಿಸಲ್ಪಡುವ ತೆರಿಗೆಯ ಹೆಸರೇನು ಮತ್ತು ಅದು ಎಷ್ಟು? ಅಗತ್ಯಕ್ಕಿಂತ ಹೆಚ್ಚಿನ ತೆರಿಗೆ ಪಾವತಿ ತಪ್ಪಿಸಲು ಇದೀಗ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು?

ಉತ್ತರ: ನೀವು ನೀಡಿರುವ ಮಾಹಿತಿಯಂತೆ ನಿಮ್ಮ ಒಟ್ಟಾರೆ ಐದು ವರ್ಷಗಳ ಮಾಸಿಕ ಹೂಡಿಕೆಯ ಅಸಲು ಮೊತ್ತ ಸುಮಾರು ₹3 ಲಕ್ಷ. ಈ ಅವಧಿಯಲ್ಲಿ ನೀವು ಗಳಿಸುವ ಒಟ್ಟು ಬಡ್ಡಿ ಮೊತ್ತ ₹ 44,850 ಆಗಿರುತ್ತದೆ. ಯಾವುದೇ ತೆರಿಗೆ ಕಡಿತ ಅನ್ವಯ ಮಾಡುವಾಗ ಆದಾಯ ತೆರಿಗೆಯ ಸೆಕ್ಷನ್ 194ಎ ಇದರ ನಿಯಮಾವಳಿಗಳನ್ನು ಪರಿಗಣಿಸಲಾಗುತ್ತದೆ.

ಇದರಂತೆ ಪ್ರತಿ ಆರ್ಥಿಕ ವರ್ಷದಲ್ಲಿ ಒಂದೇ ಬ್ಯಾಂಕ್‌ನಿಂದ ₹40 ಸಾವಿರಕ್ಕೂ ಹೆಚ್ಚು ಬಡ್ಡಿ ಪಾವತಿಯಾಗುವುದಿದ್ದರೆ ಶೇ 10ರ ದರದಲ್ಲಿ ತೆರಿಗೆ ಕಡಿತಗೊಳಿಸಲಾಗುತ್ತದೆ. ನೀವು 60 ವರ್ಷ ಮೀರಿದ ಹಿರಿಯ ನಾಗರಿಕರಾಗಿದ್ದರೆ ಈ ಮಿತಿಯು ₹50 ಸಾವಿರ ಆಗಿರುತ್ತದೆ.

ನೀವು ಗಳಿಸುತ್ತಿರುವ ಬಡ್ಡಿಗೆ ಅನ್ವಯವಾಗುವ ತೆರಿಗೆ ಐದು ವರ್ಷದ ಕೊನೆಗೆ ಪಾವತಿಯಾಗುವುದಿದ್ದರೂ ಅದನ್ನು ಆಯಾ ವರ್ಷದ ಬಡ್ಡಿ ಆದಾಯವೆಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ನಿಮ್ಮ ವಿಚಾರದಲ್ಲಿ ಯಾವುದೇ ಒಂದು ವರ್ಷದ ಬಡ್ಡಿ ಮೇಲೆ ಉಲ್ಲೇಖಿಸಿರುವ ಮಿತಿ ಮೀರುವ ಸಾಧ್ಯತೆ ಇರುವುದಿಲ್ಲ. ನೀವು ಬೇರೆ ಉದ್ಯೋಗದಲ್ಲಿದ್ದು, ಈಗಾಗಲೇ ತೆರಿಗೆ ಪಾವತಿಸುತ್ತಿದ್ದರೆ ಅಂತಹ ಆದಾಯದೊಡನೆ ಆರ್‌ಡಿಗೆ ಸಿಗುವ ವಾರ್ಷಿಕ ಬಡ್ಡಿ ಸೇರಿಸಿ ತೆರಿಗೆ ಲೆಕ್ಕ ಹಾಕಬೇಕೆನ್ನುವುದು ಗಮನದಲ್ಲಿ ಇರಲಿ.

ಈ ಬಡ್ಡಿಗೆ ಬ್ಯಾಂಕ್‌ನವರು ಮೇಲಿನ ಮಾಹಿತಿ ಪ್ರಕಾರ ತೆರಿಗೆ ಕಡಿತ ಮಾಡುವ ಅನಿವಾರ್ಯತೆ ಇಲ್ಲವೆಂದಾದರೂ, ನಿಮ್ಮ ಒಟ್ಟಾರೆ ಆದಾಯಕ್ಕೆ ತೆರಿಗೆ ಅನ್ವಯವಾಗುವುದಿದ್ದರೆ, ನಿಮಗೆ ಅನ್ವಯವಾಗುವ ತೆರಿಗೆ ದರದಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ. ನೀವು ಈ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಪರ್ಯಾಯವಾಗಿ ನಿಮಗೆ ಮೂಲ ವಿನಾಯಿತಿ ಮಿತಿಗಿಂತ ಆದಾಯ ಕಡಿಮೆ ಇದ್ದಲ್ಲಿ ಹಾಗೂ ತೆರಿಗೆ ಕಡಿತವಾಗುವ ಸಂದೇಹವಿದ್ದಲ್ಲಿ ಫಾರಂ 15ಜಿ ಅಥವಾ ಎಚ್ ಕೂಡ ಬ್ಯಾಂಕ್‌ಗೆ ಸಲ್ಲಿಸಬಹುದು.  

ಸಂಧ್ಯಾ, ಬೆಂಗಳೂರು.

ಪ್ರಶ್ನೆ: ಪ್ರಸ್ತುತ ನಾನು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ನಾವು ಸಾಕಷ್ಟು ವಿಚಾರಿಸಿ ಮನೆಯೊಂದನ್ನು ಖರೀದಿಸುತ್ತಿದ್ದೇವೆ. ಮನೆಯ ಒಟ್ಟಾರೆ ಮೌಲ್ಯ ಸುಮಾರು ₹75 ಲಕ್ಷ. ಇದರ ಮಾಲೀಕರು ವಿದೇಶದಲ್ಲಿದ್ದು, ಅವರು ಎನ್‌ಆರ್‌ಐ ಎಂಬುದಾಗಿ ತಿಳಿದು ಬಂತು. ನಾವು ಬಲ್ಲ ಮಾಹಿತಿಯಂತೆ ₹50 ಲಕ್ಷಕ್ಕೂ ಮೀರಿದ ಆಸ್ತಿ-ಭೂಮಿ ಇತ್ಯಾದಿ ಸ್ಥಿರ ಆಸ್ತಿಗಳಲ್ಲಿ ವ್ಯವಹರಿಸುವಾಗ ಖರೀದಿಸುವವರು ಮಾರಾಟ ಮಾಡುವವರ ಪ್ಯಾನ್ ಖಾತೆಯಲ್ಲಿ ಟಿಡಿಎಸ್ ಕಡಿತಗೊಳಿಸಬೇಕೆನ್ನುವ ಕಾನೂನು ಇದೆ.

ನಾವು ಈ ಆಸ್ತಿಯನ್ನು ಖರೀದಿಸುವುದಾದರೆ ತೆರಿಗೆ ವಿಚಾರದಲ್ಲಿ ಯಾವ ರೀತಿ ಮುಂದುವರಿಯಬೇಕು. ಅಲ್ಲದೆ ಮಾರಾಟ ಮಾಡುವವರು, ನಾವು ಮಾಡಬೇಕಾಗುವ ತೆರಿಗೆ ಕಡಿತದಿಂದ ವಿನಾಯಿತಿ ಪಡೆಯಬಹುದೇ? ಈ ಬಗ್ಗೆ ಮಾಹಿತಿ ನೀಡಿ.

ಉತ್ತರ: ಅನಿವಾಸಿ ಭಾರತೀಯರಿಂದ (ಎನ್‌ಆರ್‌ಐ) ಆಸ್ತಿ ಖರೀದಿಸುವಾಗ ಹಲವಾರು ತೆರಿಗೆ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೊದಲ ಹಂತದಲ್ಲಿ ತೆರಿಗೆ (ಟಿಡಿಎಸ್) ಕಡಿತಕ್ಕಾಗಿ ಖರೀದಿದಾರರು ಟ್ಯಾನ್ ಸಂಖ್ಯೆ ಹೊಂದಿರಬೇಕು. ಇದಕ್ಕಾಗಿ ಖರೀದಿದಾರರಾದ ನೀವು ಟ್ಯಾನ್ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆಯಿಂದ ಪಡೆಯಬೇಕು. ತದನಂತರ ಅನ್ವಯವಾಗುವ ತೆರಿಗೆ ದರದಂತೆ (ಶೇ 22.88ರಷ್ಟು) ತೆರಿಗೆ ಕಡಿತಗೊಳಿಸಬೇಕು.

ಟಿಡಿಎಸ್ ಜಮಾ ಮಾಡಿದ ನಂತರ ಖರೀದಿದಾರರು ಟಿಡಿಎಸ್ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ. ಈ ಟಿಡಿಎಸ್ ರಿಟರ್ನ್ಸ್‌ ಅನ್ನು ಟಿಡಿಎಸ್ ಕಡಿತಗೊಳಿಸಿದ ತ್ರೈಮಾಸಿಕದ ಅಂತ್ಯದಿಂದ 31 ದಿನಗಳಲ್ಲಿ ಸಲ್ಲಿಸಬೇಕಾಗುತ್ತದೆ. ಈ ರಿಟರ್ನ್ಸ್ ಫಾರ್ಮ್ 27ಕ್ಯು ನಲ್ಲಿ ಸಲ್ಲಿಸಬೇಕು. ಕೊನೆಯ ಹಂತವಾಗಿ ಖರೀದಿದಾರರಾದ ನೀವು ಆಸ್ತಿ ಮಾರಾಟ ಮಾಡಿದವರಿಗೆ ‘ಫಾರ್ಮ್ 16ಎ’ ಅನ್ನು ಒದಗಿಸಬೇಕಾಗುತ್ತದೆ.

ಈ ವ್ಯವಹಾರಕ್ಕೆ ಸಂಬಂಧಿಸಿ ನೀವೇ ಸ್ವತಃ ಟ್ಯಾನ್ ಸಂಖ್ಯೆ ಪಡೆಯುವುದು ತುಸು ಕಷ್ಟವಾಗಬಹುದು. ಹೀಗಾಗಿ ನಿಮ್ಮ ಸಮೀಪದ ತೆರಿಗೆ ಸಲಹೆಗಾರರ ನೆರವು ಪಡೆದು ಕಡಿತಗೊಳಿಸಿದ ತೆರಿಗೆ ರಿಟರ್ನ್ಸ್ ಸಲ್ಲಿಸಿ. ನಿಮ್ಮ ಖರೀದಿ ಪೂರ್ಣಗೊಂಡ ನಂತರ ಟ್ಯಾನ್ ಸಂಖ್ಯೆಯನ್ನು ರದ್ದು ಮಾಡಲು ಅರ್ಜಿ ಸಲ್ಲಿಸಬಹುದು. ಇನ್ನು ಅನಿವಾಸಿ ಭಾರತೀಯರು ಆಸ್ತಿ ಮಾರಾಟದ ಮೇಲೆ ಟಿಡಿಎಸ್ ಅನ್ನು ತಗ್ಗಿಸಲು ಅಥವಾ ಶೂನ್ಯ ದರದ ಟಿಡಿಎಸ್‌ ಪ್ರಮಾಣ ಪತ್ರ ಪಡೆಯಲು ಆದಾಯ ತೆರಿಗೆ ಇಲಾಖೆಗೆ ‘ಫಾರ್ಮ್ 13’ ಸಲ್ಲಿಸಬೇಕು. ಇದಕ್ಕಾಗಿ ಸ್ಥಳೀಯ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಬಹುದು.

ಪ್ರಮೋದ ಶ್ರೀಕಾಂತ ದೈತೋಟ

ಪ್ರಮೋದ ಶ್ರೀಕಾಂತ ದೈತೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT