ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ತೆರಿಗೆ ಮತ್ತು ವೈಯಕ್ತಿಕ ಹಣಕಾಸು

Published 30 ಮೇ 2023, 21:25 IST
Last Updated 30 ಮೇ 2023, 21:25 IST
ಅಕ್ಷರ ಗಾತ್ರ

ಪ್ರಶ್ನೆ: ನಾನು ಹಿರಿಯ ನಾಗರಿಕ. ವಯಸ್ಸು 64 ವರ್ಷ. ನಾನು ಪ್ರತಿ ದಿನ ₹1,500ವರೆಗೆ ವ್ಯಾಪಾರ ಮಾಡುತ್ತೇನೆ. ಗ್ರಾಹಕರು ಆನ್ಲೈನ್ ಮೂಲಕ ಪಾವತಿ ಮಾಡುತ್ತೇವೆ ಎಂದು ಹೇಳುತ್ತಾರೆ. ನಮ್ಮ ಬಳಿ ಇರುವ ಉಳಿತಾಯ ಖಾತೆಗೆ ಹಣ ಪಾವತಿ ಮಾಡಿಸಿಕೊಳ್ಳಲೇ ಅಥವಾ ಹೊಸದಾಗಿ ಚಾಲ್ತಿ ಖಾತೆ ತೆರೆದು ಪಾವತಿ ಮಾಡಿಸಿಕೊಳ್ಳಲೇ? ಚಾಲ್ತಿ ಖಾತೆಯಲ್ಲಿ ಬರುವ ಹಣಕ್ಕೆ ತೆರಿಗೆ ಬರುತ್ತದೆಯೇ?

ಉತ್ತರ: ನಿಮ್ಮ ವೃತ್ತಿ ವ್ಯಾಪಾರ. ಗರಿಷ್ಠ ವಾರ್ಷಿಕ ವಹಿವಾಟು ₹5ರಿಂದ ₹6 ಲಕ್ಷ. ಆದರೆ ಇದು ತೆರಿಗೆಗೆ ಒಳಪಡುವ ಆದಾಯವಲ್ಲ. ಹೀಗಾಗಿ, ನಿಮ್ಮ ಲಾಭವು ತೆರಿಗೆಗೆ ಒಳಪಡುವ ಆದಾಯಕ್ಕಿಂತ ಕಡಿಮೆ ಇರಬಹುದೆಂದು ಮೇಲ್ನೋಟಕ್ಕೆ ಊಹಿಸಬಹುದು. ಯಾರು ವ್ಯವಹಾರದಲ್ಲಿ ತೊಡಗಿ, ಲೆಕ್ಕ ಪರಿಶೋಧನೆಗೆ ಒಳಪಡಬೇಕಾಗಿಲ್ಲವೋ ಅವರಿಗೆ ಡಿಜಿಟಲ್ ವಹಿವಾಟಿನಲ್ಲಿ ಸಿಗುವ ಮೊತ್ತದ ಶೇ 6ರಷ್ಟನ್ನು ತೆರಿಗೆಗೆ ಒಳಪಡುವ ಆದಾಯವೆಂದು ಪರಿಗಣಿಸಿ, ಆ ಮೊತ್ತಕ್ಕೆ ಅನ್ವಯಿಸುವ ತೆರಿಗೆ ಕಟ್ಟುವುದಕ್ಕೆ ಅವಕಾಶವಿದೆ. ನಿಮ್ಮ ಆದಾಯ ₹30 ಸಾವಿರದಿಂದ ₹40 ಸಾವಿರದವರೆಗೆ ಬರಬಹುದು. ಉಳಿದಂತೆ ಎಲ್ಲ ಮೊತ್ತ ನಿಮ್ಮ ಖರ್ಚು-ವೆಚ್ಚ ಎಂದು ಪರಿಗಣಿತ ಆಗುತ್ತದೆ. ಇದಕ್ಕೆ ವಿಶೇಷ ಲೆಕ್ಕ ಇಡುವ ಅಗತ್ಯವಿಲ್ಲ. ನಿಮ್ಮ ವ್ಯವಹಾರ ಅಸಲಿ ಎಂಬುದಕ್ಕೆ ಸರಿಯಾಗಿ ಬ್ಯಾಂಕ್ ಖಾತೆಯ ಜಮಾ ಮಾಹಿತಿ ಇದ್ದರೆ ಸಾಕು.

ಈಗ ಹೊಸ ತೆರಿಗೆ ಪದ್ಧತಿ ಅನುಸರಿಸುವವರಿಗೆ ‘ತೆರಿಗೆಗೆ ಒಳಪಡುವ ಆದಾಯ’ ₹7 ಲಕ್ಷದೊಳಗಿದ್ದರೆ ವಿನಾಯಿತಿ ಸಿಗುವ ಕಾರಣ, ಅಷ್ಟೂ ಮೊತ್ತಕ್ಕೆ ತೆರಿಗೆ ಬರುವುದಿಲ್ಲ. ಒಂದು ವೇಳೆ ನೂತನ ತೆರಿಗೆ ಪದ್ಧತಿಯನ್ನು ನೀವು ಆಯ್ಕೆ ಮಾಡಿಕೊಂಡರೆ, ಮುಂದಿನ ವರ್ಷಗಳಲ್ಲೂ ಅದೇ ಪದ್ಧತಿ ಅನುಸರಿಸಬೇಕಾಗುತ್ತದೆ. ನಿಮಗೆ ಹಳೆಯ ಪದ್ದತಿಯಲ್ಲೂ ಇದೊಂದೇ ಆದಾಯವಿದ್ದರೆ ತೆರಿಗೆ ಬರುವುದಿಲ್ಲ.

ನೀವು ವ್ಯವಹಾರದಲ್ಲಿರುವ ಕಾರಣ, ನಿಮ್ಮ ಪ್ರತಿದಿನದ ಪೂರ್ಣ ಸ್ವೀಕೃತಿ ಮೊತ್ತ ತೆರಿಗೆಗೆ ಒಳಪಡುತ್ತದೆ ಎನ್ನುವ ಊಹೆ ಸರಿಯಲ್ಲ. ತೆರಿಗೆಗೆ ಒಳಪಡುವ ಆದಾಯ ಲೆಕ್ಕ ಹಾಕಲು ಸಂಪೂರ್ಣ ಮಾಹಿತಿಯೊಂದಿಗೆ ಸಮೀಪದ ತೆರಿಗೆ ಸಲಹೆಗಾರರೊಂದಿಗೆ ಸಮಾಲೋಚಿಸಬಹುದು. ಯಾವುದೇ ವಿಧಾನ ಅನುಸರಿಸಿದರೂ, ನಿಮ್ಮ ಖರ್ಚು ವೆಚ್ಚ ಕಳೆದು ಉಳಿಕೆಯಾದ ಮೊತ್ತ ಮಾತ್ರ ತೆರಿಗೆಗೆ ಒಳಪಡುತ್ತದೆ. ಅದರಲ್ಲೂ, ತೆರಿಗೆ ವ್ಯಾಪ್ತಿಗೆ ಬರುವಷ್ಟು ಆದಾಯ ಇದ್ದಾಗ ಮಾತ್ರವೇ ತೆರಿಗೆ ಅನ್ವಯವಾಗುತ್ತದೆ. ಅದಕ್ಕೆ ಖಾತೆ ಯಾವುದೆಂಬುದು ಮುಖ್ಯವಲ್ಲ. ಆದರೆ ನೀವು ಇನ್ನೂ ಕೆಲವು ಅಂಶಗಳನ್ನು ಗಮನಿಸಬೇಕು. ಉಳಿತಾಯ ಖಾತೆಗೆ ಕೆಲವು ಮಿತಿಗಳಿರುತ್ತವೆ. ಬೆಳೆಯುತ್ತಿರುವ ವ್ಯವಹಾರವಾದರೆ ಚಾಲ್ತಿ ಖಾತೆಯೇ ಹೆಚ್ಚು ಸೂಕ್ತ.

***********

ಪ್ರಶ್ನೆ: ಇತ್ತೀಚಿನ ದಿನಗಳಲ್ಲಿ ಇಟಿಎಫ್‌ಗಳ ಬಗ್ಗೆ ಹೆಚ್ಚು ಕೇಳುತ್ತಿದ್ದೇನೆ. ಮ್ಯೂಚುವಲ್‌ ಫಂಡ್‌ಗಳಿಗಿಂತ ಇಲ್ಲಿ ಹೆಚ್ಚು ಲಾಭ ಸಿಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಇದು ನಿಜವೇ? ಇಟಿಎಫ್ ಹಾಗೂ ಮ್ಯೂಚುವಲ್ ಫಂಡ್ ನಡುವೆ ಯಾವುದು ಸೂಕ್ತ?

–ಪ್ರಶಾಂತ, ಶಿರಸಿ

ಉತ್ತರ: ಇಟಿಎಫ್ (ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್) ಮಿಶ್ರ ಸ್ವಭಾವದ ಹೂಡಿಕೆ ಉತ್ಪನ್ನ. ಇಲ್ಲಿ ಮ್ಯೂಚುವಲ್ ಫಂಡ್ ಹಾಗೂ ಷೇರು ಮಾರುಕಟ್ಟೆ ಸ್ವಭಾವಗಳನ್ನು ಕಾಣಬಹುದು. ಇಟಿಎಫ್‌ಗಳು ತಾವು ಅನುಸರಿಸುವ ನಿಶ್ಚಿತ ಸೂಚ್ಯಂಕದ ಆಧಾರದಲ್ಲಿ ಮೌಲ್ಯ ಪಡೆಯುತ್ತವೆ. ಉದಾಹರಣೆಗೆ, ನಿಫ್ಟಿ ಅಥವಾ ಬಿಎಸ್‌ಇ ಸೆನ್ಸೆಕ್ಸ್‌ನಂತಹ ಸೂಚ್ಯಂಕಗಳನ್ನು ಅನುಸರಿಸುವ ಇಟಿಎಫ್‌ಗಳು, ಈ ನಿರ್ದಿಷ್ಟ ಸೂಚ್ಯಂಕಗಳದಲ್ಲಾಗುವ ಏರಿಳಿತಗಳ ಆಧಾರದಲ್ಲಿ ತಮ್ಮ ಬೆಲೆಯಲ್ಲೂ ಬದಲಾವಣೆ ಕಾಣುತ್ತವೆ. ಆದರೆ ಮ್ಯೂಚುವಲ್ ಫಂಡ್‌ಗಳು ಅವು ಹೂಡಿಕೆ ಮಾಡಿರುವ ಷೇರು ಅಥವಾ ಆಸ್ತಿಗಳ ಮೌಲ್ಯದಲ್ಲಾಗುವ ಬದಲಾವಣೆಯನ್ನು ಮಾತ್ರ ಆಧರಿಸಿ, ದಿನಕ್ಕೊಂದು ಬಾರಿ ಮಾತ್ರ ಬೆಲೆಯಲ್ಲಿ ಬದಲಾಣೆ ಕಾಣುತ್ತವೆ.

ವ್ಯಕ್ತಿಯೊಬ್ಬ ತಾನು ನಿಭಾಯಿಸಬಹುದಾದ ನಷ್ಟದ ಪ್ರಮಾಣ, ಹೂಡಿಕೆಯ ಅವಧಿ ಇತ್ಯಾದಿ ಪರಿಗಣಿಸಿ ಹಣ ತೊಡಗಿಸಬೇಕೇ ಎಂಬುದನ್ನು ನಿರ್ಣಯಿಸಬಹುದು. ಇಟಿಎಫ್ ನಿರ್ದಿಷ್ಟ ಸೂಚ್ಯಂಕ ಆಧಾರಿತ ಬೆಲೆ ಪಡೆಯುವ ಕಾರಣ, ಯಾವುದೇ ಒಂದು ನಿರ್ದಿಷ್ಟ ಕಂಪನಿಯ ಷೇರಿಗಿರುವಷ್ಟು ರಿಸ್ಟ್‌, ಇಟಿಎಫ್‌ ಹೂಡಿಕೆಯಲ್ಲಿ ಇರುವುದಿಲ್ಲ. ಆದರೆ ಮಾರುಕಟ್ಟೆಯ ಏರುಪೇರುಗಳನ್ನು ಗ್ರಹಿಸುವ ಅರಿವು ನಮಗೇ ಇರಬೇಕು. ಮ್ಯೂಚುವಲ್ ಫಂಡ್‌ಗಳಲ್ಲಾದರೆ ಈ ಕೆಲಸವನ್ನು ನುರಿತ ವ್ಯಕ್ತಿಗಳು ನಿರ್ವಹಿಸುತ್ತಾರೆ. ಹೀಗಾಗಿಯೇ ಅವುಗಳನ್ನು ನಿಭಾಯಿಸುವ ವೆಚ್ಚವೂ ತುಲನಾತ್ಮಕವಾಗಿ ಹೆಚ್ಚು. ನಿರ್ದಿಷ್ಟ ಅವಧಿಗೆ ಮುನ್ನ ಯೂನಿಟ್‌ಗಳನ್ನು ಮಾರಾಟ ಮಾಡಿದರೆ, ಆಸ್ತಿ ನಿರ್ವಹಣಾ ಕಂಪನಿಗಳು ಅಂದಾಜು ಶೇ 1ರತನಕ ದಂಡ ವಿಧಿಸುತ್ತವೆ. ಆದರೆ ಇಟಿಎಫ್‌ಗಳಿಗೆ ಬ್ರೋಕರೇಜ್ ಹಾಗೂ ಇತರ ವಹಿವಾಟು ಶುಲ್ಕಗಳಷ್ಟೇ ಅನ್ವಯವಾಗುತ್ತದೆ.

ಸುಲಭವಾಗಿ ನಗದಾಗಿ ಪರಿವರ್ತಿಸಿಕೊಳ್ಳಬಹುದಾದ (ಲಿಕ್ವಿಡಿಟಿ) ಇಟಿಎಫ್‌ ಖರೀದಿಸುವುದು ಉತ್ತಮ ಹೂಡಿಕೆ ವಿಧಾನ. ಹೂಡಿಕೆದಾರರು ನಿರ್ದಿಷ್ಟ ಸರಕುಗಳ ಬೆಲೆಯಲ್ಲಿ ಏರುಗತಿ ನಿರೀಕ್ಷಿಸುತ್ತಿದ್ದರೆ, ಅಂತಹ ಸರಕು (ಕಮಾಡಿಟಿ) ಇಟಿಎಫ್‌ಗಳನ್ನೂ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಅದಕ್ಕೂ ಸ್ವಂತ ಅರಿವು ಬೇಕು. ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವೆಂದರೆ, ಇಟಿಎಫ್‌ಗಳು ತಾವು ಅನುಕರಣೆ ಮಾಡುವ ನಿರ್ದಿಷ್ಟ ಸೂಚ್ಯಂಕವನ್ನು ಮೀರಿದ ಲಾಭ ತಂದುಕೊಡುವ ಸ್ವಭಾವ ಹೊಂದಿಲ್ಲ.

ವೈಯಕ್ತಿಕ ಹೂಡಿಕೆದಾರರು ಡಿಮ್ಯಾಟ್ ಖಾತೆ ಹೊಂದಿ ತಮ್ಮ ಹೆಚ್ಚುವರಿ ಮೊತ್ತವನ್ನು ನಿಯೋಜಿಸಲು ಇಟಿಎಫ್‌ಗಳನ್ನು ಬಳಸಬಹುದು. ಚಿನ್ನ, ಕಚ್ಚಾ ತೈಲ, ನೈಸರ್ಗಿಕ ಅನಿಲ ಇತ್ಯಾದಿಗಳ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಇದ್ದರೆ, ಆಯಾ ವರ್ಗದ ಇಟಿಎಫ್‌ ಖರೀದಿಸಬಹುದು. ವಿದೇಶಿ ಮಾರುಕಟ್ಟೆ ಸೂಚ್ಯಂಕಗಳ ಆಧರಿಸಿರುವ ಇಟಿಎಫ್‌ ಕೂಡ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT