ಶನಿವಾರ, ಸೆಪ್ಟೆಂಬರ್ 18, 2021
28 °C

ಈ ಬಾರಿ ರಕ್ಷಾ ಬಂಧನಕ್ಕೆ ‘ಪರಿಸರ ಸ್ನೇಹಿ ರಾಖಿ’

ಸುಮನಾ ಕೆ. Updated:

ಅಕ್ಷರ ಗಾತ್ರ : | |

Prajavani

ಸಹೋದರ– ಸಹೋದರಿಯ ನಡುವಿನ ಪ್ರೀತಿ, ಬಾಂಧವ್ಯದ ಸಂಕೇತವಾಗಿರುವ ರಾಖಿ ಹಬ್ಬಕ್ಕೆ (ಆಗಸ್ಟ್‌ 3)ಈ ಬಾರಿಯ ಕಣ್ಮನ ಸೆಳೆಯುವ ಪರಿಸರ ಸ್ನೇಹಿ ‘ರಾಖಿ’ಗಳು ರಂಗು ತರಲಿವೆ.

ರಕ್ಷಾಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಲು ಬೆಂಗಳೂರಿನ ಸೀಡ್‌ ಪೇಪರ್‌ ಇಂಡಿಯಾ ಕಂಪನಿಯು ಪರಿಸರ ಸ್ನೇಹಿ ರಾಖಿಗಳನ್ನು ಪರಿಚಯಿಸಿದೆ. ಇವು ಸುಲಭವಾಗಿ ಮಣ್ಣಿನಲ್ಲಿ ಕರಗುವ ವಿಶೇಷ ಗುಣ ಹೊಂದಿವೆ. ರಾಖಿ ತಯಾರಿಸಲು ಬಳಸಿರುವ ಎಲ್ಲಾ ವಸ್ತುಗಳು ಪರಿಸರ ಸ್ನೇಹಿ ಹಾಗೂ ಸಾವಯವ ಎನ್ನುವುದು ವಿಶೇಷ.

ರಾಖಿಯ ಮಧ್ಯಭಾಗದ ಹೂವಿನ ವಿನ್ಯಾಸಕ್ಕೆ ಮಣ್ಣಿನಲ್ಲಿ ಸುಲಭವಾಗಿ ಕರಗುವ, ಹಾನಿಕರವಲ್ಲದ ದಪ್ಪನೆಯ ಪೇಪರ್‌ ಬಳಸಲಾಗಿದೆ. ಪೇಪರನ್ನು ಹೂವಿನ ಎಸಳಿನ ಆಕಾರದಲ್ಲಿ ಕತ್ತರಿಸಿ ರಾಖಿ ಮಾಡಲಾಗಿದೆ.

ರಾಖಿಯ ಮಧ್ಯಭಾಗದಲ್ಲಿರುವ ಪೇಪರ್‌ ಬಾಕ್ಸ್ ಒಳಗಡೆ‌ ತುಳಸಿ, ಸೂರ್ಯಕಾಂತಿ, ಟೊಮೆಟೊ ಸೇರಿದಂತೆ ಬೇರೆ ಬೇರೆ ರೀತಿಯ ಹೂವು, ತರಕಾರಿ ಬೀಜಗಳನ್ನು ಇಡಲಾಗಿದೆ. ರಾಖಿಯ ದಾರವನ್ನು ಗೋಣಿಯಿಂದ ಮಾಡಲಾಗಿದೆ.

ಬಿಚ್ಚಿದ ನಂತರ ಮಣ್ಣಿನಲ್ಲಿ ಹಾಕಿ 

‘ರಾಖಿ ಬಿಚ್ಚಿದ ನಂತರ ಬಿಸಾಡದೇ ಕುಂಡದಲ್ಲಿ ಮಣ್ಣು ಹಾಕಿ ಮುಚ್ಚಿ, ನೀರು ಹಾಕಿದರೆ ಸಾಕು. ತರಕಾರಿ ಬೀಜಗಳು ಮೊಳಕೆಯೊಡೆಯುತ್ತವೆ’ ಎನ್ನುತ್ತಾರೆ ಸೀಡ್‌ ಪೇಪರ್‌ ಇಂಡಿಯಾದ ಮುಖ್ಯಸ್ಥ ರೋಶನ್‌ ರೇ. 

ಸೀಡ್‌ ಪೇಪರ್ ಕಳೆದ ವರ್ಷ ದೀಪಾವಳಿಗೆ ಪರಿಸರಸ್ನೇಹಿ ಪಟಾಕಿ, ರಾಜ್ಯೋತ್ಸವಕ್ಕೆ ಮಣ್ಣಿನಲ್ಲಿ ಕರಗುವ ಬಾವುಟ ತಯಾರಿಸಿ, ಮಾರುಕಟ್ಟೆಗೆ ತಂದಿತ್ತು. ಜನರಿಂದ ದೊರೆತ ಉತ್ತಮ ಬೇಡಿಕೆ ಹಾಗೂ ಪ್ರತಿಕ್ರಿಯೆ ಈಗ ಪರಿಸರಸ್ನೇಹಿ ರಾಖಿ ತಯಾರಿಕೆಗೆ ಪ್ರೇರಣೆ ಎನ್ನುತ್ತಾರೆ ರೋಶನ್. 

ಸೀಡ್‌ ಪೇಪರ್‌ ಇಂಡಿಯಾ ರಕ್ಷಾ ಬಂಧನಕ್ಕೆ ರಾಖಿ ಗಿಫ್ಟ್‌ ಬಾಕ್ಸ್‌ ಪರಿಚಯಿಸಿದೆ. ಈ ಪ್ಯಾಕ್‌ನೊಳಗೆ ಪರಿಸರಸ್ನೇಹಿ ರಾಖಿ ಜೊತೆಗೆ ಪೂಜೆಗೆ ಅಗತ್ಯವಾದ ಕುಂಕುಮ (ಒಣಗಿಸಿದ ಗುಲಾಬಿ ದಳಗಳಿಂದ ತಯಾರಿಸಿದ ಕುಂಕುಮ) ಮತ್ತು ಅಕ್ಕಿ ಕಾಳುಗಳಿವೆ.

ಸಾವಯವ ಕುಂಡ  

ಪೂಜೆಯಾದ ನಂತರ ರಾಖಿಯನ್ನು ಮಣ್ಣಿನಲ್ಲಿ ಹಾಕಲು ಅದೇ ಬಾಕ್ಸ್‌ನಲ್ಲಿ ಒಂದು ಸಣ್ಣ ಚೀಲ ಮತ್ತು ಸಾವಯವ ಗೊಬ್ಬರ ಹಾಗೂ ತೆಂಗಿನ ನಾರಿನಿಂದ ತಯಾರಿಸಿದ ಕುಂಡವೂ ಇದೆ. ರಾಖಿಯನ್ನು ಕುಂಡದಲ್ಲಿ ಹಾಕುವ ಮೊದಲು ಕೆಲಹೊತ್ತು ನೀರಿನಲ್ಲಿ ನೆನಸಿಡಬೇಕು. ನಂತರ ಮಣ್ಣಿನಲ್ಲಿ ಹಾಕಬೇಕು. ಪ್ರತಿದಿನ ನೀರು ಹಾಕಬೇಕು. ನಂತರ ಕಾಗದ ಮಣ್ಣಿನಲ್ಲಿ ಕರಗಿ, ಅದರಲ್ಲಿನ ಬೀಜ 2–3 ವಾರಗಳಲ್ಲಿ ಮೊಳಕೆಯೊಡೆಯುತ್ತವೆ.

ಈ ರಾಖಿ ತಯಾರಿಸಲು ಸ್ವಾಭಾವಿಕ ಬಣ್ಣಗಳನ್ನು ಬಳಸಲಾಗಿದೆ. ಟೊಮೆಟೊ, ಅರಿಶಿನ, ಬೀಟ್‌ರೂಟ್‌, ಬ್ಲೂ ಬೆರ್ರಿ ಹಾಗೂ ಇನ್ನು ಕೆಲ ಹಣ್ಣುಗಳನ್ನು ಬಳಸಿ ಬಣ್ಣ ತಯಾರಿಸಿದ್ದೇವೆ ಎಂದು ರೋಶನ್‌ ರೇ ತಿಳಿಸಿದರು. ಒಂದು ರಾಖಿ ಬೆಲೆ– ₹100. ರಾಖಿ ಗಿಫ್ಟ್‌ ಬಾಕ್ಸ್‌ ಬೆಲೆ ₹250

ಸಂಪರ್ಕ: 63646 99837

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು