ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆ ನೀಡಲು ಬಂದಿದೆ ‘ಎಂಫೈನ್‌’ ಸ್ಟಾರ್ಟ್‌ಅಪ್‌

Last Updated 31 ಜುಲೈ 2018, 19:30 IST
ಅಕ್ಷರ ಗಾತ್ರ

ನಿದರ್ಶನ 1: ಮನೆಯಲ್ಲಿ ಗೃಹಿಣಿ ಒಬ್ಬರೇ ಇದ್ದಾಗ ಪುಟ್ಟ ಮಗುವಿಗೆ ಜ್ವರ ಬಂದಿರುತ್ತದೆ. ಪ್ಯಾರಾಸಿಟ್ಮಲ್‌ ಕೊಟ್ಟರೂ ಜ್ವರ ನಿಯಂತ್ರಣಕ್ಕೆ ಬಂದಿರುವುದಿಲ್ಲ. ಹೊಸ ನಗರ, ಅಪರಿಚಿತ ಸ್ಥಳ, ನೆರೆಹೊರೆಯಲ್ಲಿ ಇನ್ನೂ ಯಾರೊಬ್ಬರ ಪರಿಚಯವಾಗಿಲ್ಲ. ಸಮೀಪದಲ್ಲಿ ಆಸ್ಪತ್ರೆ ಅಥವಾ ವೈದ್ಯರು ಎಲ್ಲಿದ್ದಾರೆ ಎನ್ನುವ ಮಾಹಿತಿಯೂ ಇಲ್ಲ. ಇಂತಹ ಆತಂಕದ ಸಂದರ್ಭದಲ್ಲಿ ಗೃಹಿಣಿಯು ಮೊಬೈಲ್‌ ಕಿರುತಂತ್ರಾಂಶ ‘ಎಂಫೈನ್‌’ (mfine) ಮೂಲಕ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ, ಸಲಹೆ ಪಡೆದು ಮಗುವಿಗೆ ಚಿಕಿತ್ಸೆ ನೀಡಿ ನಿರಾಳರಾಗುತ್ತಾರೆ.

ನಿದರ್ಶನ 2: ಆ ಹಿರಿಯ ಜೀವಕ್ಕೆ 70 ವರ್ಷ. ತೀವ್ರ ಸ್ವರೂಪದಲ್ಲದ ಡೆಂಗಿಯಿಂದ ಅವರು ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸುವ ತುರ್ತು ಉದ್ಭವಿಸಿರಲಿಲ್ಲ. ಕುಟುಂಬದ ಸದಸ್ಯರು ಈ ಆ್ಯಪ್‌ ನೆರವಿನಿಂದ ವೈದ್ಯರನ್ನು ಸಂಪರ್ಕಿಸಿದರು. ಆಸ್ಪತ್ರೆಯವರು ಮನೆಗೆ ಬಂದು ರಕ್ತದ ಮಾದರಿ (ಲ್ಯಾಬ್‌ ಟೆಸ್ಟ್‌) ತೆಗೆದುಕೊಂಡು ಹೋದರು. ರಕ್ತದ ಪರೀಕ್ಷೆ ಆಧರಿಸಿ, ರೋಗಿಯ ವಯಸ್ಸು ಮತ್ತಿತರ ಮಾಹಿತಿ ಪಡೆದು ವೈದ್ಯರು ಕುಟುಂಬದ ಸದಸ್ಯರ ಜತೆ ಚರ್ಚಿಸಿ ಔಷಧಿ, ಮಾತ್ರೆಗಳನ್ನು ಮನೆಗೆ ಕಳಿಸಿಕೊಟ್ಟರು. ವೃದ್ಧೆ ಮೂರ್ನಾಲ್ಕು ದಿನಗಳಲ್ಲಿ ಚೇತರಿಸಿಕೊಂಡರು.

ನಿದರ್ಶನ 3: ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಗೆ ತೆರಳಿದವರು ಗುಣಮುಖರಾಗುತ್ತಿರುವುದನ್ನು ವೈದ್ಯರು ವಿಡಿಯೊ ಕರೆ ಮೂಲಕವೇ ವೀಕ್ಷಿಸಿ ಅಗತ್ಯ ಸಲಹೆ ಸೂಚನೆ ನೀಡಿದ್ದರು. ಇದರಿಂದಾಗಿ ರೋಗಿಯು ಆಸ್ಪತ್ರೆಗೆ ತೆರಳಿ ವೈದ್ಯರನ್ನು ಕಾಣುವ ತಲೆನೋವು ದೂರಾಗಿತ್ತು. ಇಲ್ಲಿಯೂ ಈ ಮೊಬೈಲ್‌ ಆ್ಯಪ್‌ ನೆರವಿಗೆ ಬಂದಿತ್ತು.

ನಗರವಾಸಿಗಳಿಗೆ ಆರೋಗ್ಯ ಸೇವೆಯು ಸುಲಭವಾಗಿ ಕೈಗೆಟುಕುವಂತೆ ಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ‘ಎಂಫೈನ್‌’ ಹೆಸರಿನ ಸ್ಟಾರ್ಟ್‌ಅಪ್‌ ಸ್ಥಾಪಿಸಲಾಗಿದೆ. ವೈದ್ಯರನ್ನು ಮುಖತಃ ಭೇಟಿ ಮಾಡದೇ ಮನೆಯಲ್ಲಿ ಕುಳಿತುಕೊಂಡೇ ಸಲಹೆ ಪಡೆಯುವ ಮೊಬೈಲ್‌ ಆ್ಯಪ್‌ ಸೌಲಭ್ಯವನ್ನು ಈ ನವೋದ್ಯಮ ಅಭಿವೃದ್ಧಿಪಡಿಸಿದೆ.

2017ರ ಡಿಸೆಂಬರ್‌ನಲ್ಲಿ ಈ ನವೋದ್ಯಮವು ಕಾರ್ಯಾರಂಭ ಮಾಡಿದೆ. ಪ್ರಮುಖ ಮತ್ತು ವಿಶ್ವಾಸಾರ್ಹ ಆಸ್ಪತ್ರೆಗಳ ಜತೆ ಸಂಸ್ಥೆ ಪಾಲುದಾರಿಕೆ ಹೊಂದಿದೆ. ಡಿಜಿಟಲ್‌ ಚಾನೆಲ್‌ನಲ್ಲಿ ವೈದ್ಯರು ಸಲಹೆಗೆ ಲಭ್ಯ ಇರುವ ವಿಶಿಷ್ಟ ಸೌಲಭ್ಯ ಇದಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ಸೇವೆ ಆರಂಭಿಸಲಾಗಿದೆ.

ಮಿಂತ್ರಾದಲ್ಲಿ ಉದ್ಯೋಗಿಗಳಾಗಿದ್ದ ಪ್ರಸಾದ್‌ ಕೋಂಪಲ್ಲಿ ಮತ್ತು ಅಶುತೋಷ್‌ ಲಾವಣಿಯಾ ಅವರು ಈ ವಿಶಿಷ್ಟ ಮೊಬೈಲ್‌ ಕಿರುತಂತ್ರಾಂಶ ‘ಎಂಫೈನ್‌’ (mfine) ನವೋದ್ಯಮದ ಸಹ ಸ್ಥಾಪಕರಾಗಿದ್ದಾರೆ.

ಆ್ಯಪ್‌ ಮೂಲಕವೇ ವೈದ್ಯರನ್ನು ಸಂರ್ಪಕಿಸಿ ಅಗತ್ಯ ಸಲಹೆ ಪಡೆಯಬಹುದು. ಇಂತಿಂತಹ ಔಷಧಿ ಕೊಡಿ. ಈ ಹೊತ್ತಿಗೆ ಬಂದು ಭೇಟಿಯಾಗಿ ಎಂದು ಆಸ್ಪತ್ರೆಯವರು ಅಥವಾ ವೈದ್ಯರು ಮಾಹಿತಿ ನೀಡುತ್ತಾರೆ. ವೈದ್ಯರ ಸಲಹೆಗೆ ಆಸ್ಪತ್ರೆಗಳು ನಿಗದಿ ಮಾಡಿದ ಸೇವಾ ಶುಲ್ಕ ಪಾವತಿಸಿದ ನಂತರ ಏಳು ದಿನಗಳವರೆಗೆ ಉಚಿತವಾಗಿ ಸಲಹೆ ಪಡೆಯಬಹುದು.

‘ಸಣ್ಣ ಪುಟ್ಟ ಕಾಯಿಲೆಗಳಿಗೆಮನೆಯಲ್ಲಿ ಕುಳಿತುಕೊಂಡೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಗೆ ಸಲಹೆ ಪಡೆಯಲು ಈ ಮೊಬೈಲ್‌ ಆ್ಯಪ್‌ ನೆರವಾಗುತ್ತಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ವೈದ್ಯರನ್ನು ಕಂಡು ಸಲಹೆ ಪಡೆಯಲು ಆಸ್ಪತ್ರೆಗೆ ತೆರಳುವ ತೊಂದರೆಯನ್ನು ಈ ಆ್ಯಪ್‌ ದೂರ ಮಾಡುತ್ತಿದೆ’ ಎಂದು ಸ್ಟಾರ್ಟ್‌ಅಪ್‌ನ ಮುಖ್ಯ ವೈದ್ಯಕೀಯ ನಿರ್ದೇಶಕರಾಗಿರುವ ಡಾ. ಜಗದೀಶ್‌ ಪ್ರಸಾದ್‌ ಅವರು ಹೇಳುತ್ತಾರೆ.

ಎಂಫೈನ್‌ ಆ್ಯಪ್‌ನ ಸಹ ಸ್ಥಾಪಕರಾದ ಪ್ರಸಾದ್‌ ಕೊಂಪಲ್ಲಿ ಮತ್ತು ಅಶುತೋಷ್‌ ಲವಾನಿಯಾ
ಎಂಫೈನ್‌ ಆ್ಯಪ್‌ನ ಸಹ ಸ್ಥಾಪಕರಾದ ಪ್ರಸಾದ್‌ ಕೊಂಪಲ್ಲಿ ಮತ್ತು ಅಶುತೋಷ್‌ ಲವಾನಿಯಾ

‘ಈ ಆ್ಯಪ್‌ ಅನ್ನು ಗೂಗಲ್‌ ಪ್ಲೇನಿಂದ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಹೆಸರು, ವಯಸ್ಸು, ಎತ್ತರ, ತೂಕದ ವಿವರ ದಾಖಲಿಸಿ ನೋಂದಣಿ ಮಾಡಿಕೊಳ್ಳಬಹುದು. ಇದೇ ಬಗೆಯಲ್ಲಿ ಕುಟುಂಬದ ಇತರ ಸದಸ್ಯರ ವಿವರಗಳನ್ನೂ ದಾಖಲಿಸಬಹುದು. ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ಪಡೆಯಲು, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರ ಸಲಹೆ ಪಡೆಯಲೂ ಈ ಆ್ಯಪ್‌ ಅನ್ನು ಬಳಸಬಹುದು. ಪ್ರಾಥಮಿಕ ಆರೋಗ್ಯ ಸಮಸ್ಯೆಗಳಿಗೆ ಇದು ತುಂಬ ಉಪಯುಕ್ತವಾಗಿದೆ. ಗಂಭೀರ ಸ್ವರೂಪದ ಕಾಯಿಲೆಗಳ ಬಗ್ಗೆಯೂ ವೈದ್ಯರನ್ನು ಸಂಪರ್ಕಿಸುವ ಸುಲಭ ಮಾಧ್ಯಮ ಇದಾಗಿದೆ.

‘ವೈದ್ಯರ ಜತೆ ಚಾಟಿಂಗ್‌, ಕರೆ ಮತ್ತು ವಿಡಿಯೊ ಕರೆಗಳ ಮೂಲಕ ಕನ್ನಡದಲ್ಲಿಯೂ ಸಂವಾದ ನಡೆಸಬಹುದು. ಹೃದ್ಯೋಗ ಮತ್ತು ಬಂಜೆತನ ಸಮಸ್ಯೆಗಳಿಗೂ ಪರಿಣತರಿಂದ (ಸೂಪರ್‌ ಸ್ಪೆಷಾಲಿಟಿ) ಸಲಹೆ ಪಡೆಯುವ ಸೌಲಭ್ಯವೂ ಇಲ್ಲಿದೆ. ಆ್ಯಪ್‌ ಬಳಕೆದಾರರು ತಮ್ಮ ಮನೆ ಹತ್ತಿರದ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡು ಈ ಸೇವೆ ಪಡೆಯಬಹುದು. ಆಸ್ಪತ್ರೆ ನಿಗದಿ ಮಾಡಿದ ವೈದ್ಯರು ನಿರ್ದಿಷ್ಟ ಸಮಯದಲ್ಲಿ ರೋಗಿಗಳಿಗೆ ಸಲಹೆ ನೀಡಲು ಮೊಬೈಲ್‌ನಲ್ಲಿ ಲಭ್ಯವಾಗಲಿದ್ದಾರೆ.

‘ಸದ್ಯಕ್ಕೆ ಬೆಳಿಗ್ಗೆ 7 ರಿಂದ ರಾತ್ರಿ 12 ಗಂಟೆಯವರೆಗೆ ಈ ಸೇವೆ ಲಭ್ಯ ಇರುತ್ತದೆ. ಆನಂತರ 24 ಗಂಟೆಯವರೆಗೂ ವಿಸ್ತರಿಸಲು ಉದ್ದೇಶಿಸಲಾಗಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮನೆಗೆ ವೈದ್ಯರು ಭೇಟಿ ಕೊಡುವ ಸೌಲಭ್ಯ ಇರುವುದಿಲ್ಲ. ಅಂತಹ ವೇಳೆಯಲ್ಲಿ ಕಾಯಿಲೆಪೀಡಿತರು ಕಡ್ಡಾಯವಾಗಿ ಆಸ್ಪತ್ರೆಗಳಿಗೆ ತೆರಳಬೇಕು. ಆ್ಯಪ್‌ನ ಸೇವೆ ನೆಚ್ಚಿಕೊಂಡು ಕುಳಿತುಕೊಳ್ಳಬಾರದು’ ಎಂದು ಡಾ. ಜಗದೀಶ್‌ ಹೇಳುತ್ತಾರೆ.

ವೈದ್ಯರ ಸಲಹೆ ಪಡೆಯಲು ಇಷ್ಟ ಪಟ್ಟ ನಂತರ ಆಸ್ಪತ್ರೆ ನಿಗದಿಪಡಿಸಿದ ಸೇವಾ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಬೇಕು. ಈ ಸೇವೆಗಾಗಿ ಹೆಚ್ಚುವರಿ ಶುಲ್ಕವನ್ನೇನೂ ವಸೂಲು ಮಾಡುವುದಿಲ್ಲ. ಆ್ಯಪ್‌ ಮೂಲಕ ಆಸ್ಪತ್ರೆಗಳನ್ನು ಸಂಪರ್ಕಿಸಿದ ನಂತರ ಕೆಲವೇ ಕ್ಷಣಗಳಲ್ಲಿ ವೈದ್ಯರು ಇಲ್ಲವೇ ಅವರ ಸಹಾಯಕರು ಸಂಪರ್ಕಕ್ಕೆ ಬಂದು ಕಾಯಿಲೆಯ ವಿವರ ಪಡೆದುಕೊಂಡು ದಾಖಲಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿಯೇ ವೈದ್ಯರ ಭೇಟಿ ಸಮಯ ನಿಗದಿಯಾಗುತ್ತದೆ. ಕಿರಿಯ ವೈದ್ಯರು ಕಾಯಿಲೆಯ ಗುಣಲಕ್ಷಣಗಳನ್ನು ಹಿರಿಯ ವೈದ್ಯರ ಗಮನಕ್ಕೆ ತರುತ್ತಾರೆ. ಆಸ್ಪತ್ರೆಯಲ್ಲಿ ಆಗುವಂತೆಯೇ ಇಲ್ಲಿಯೂ ನಿಗದಿತ ಸಮಯದಲ್ಲಿ ಸಂಪರ್ಕಕ್ಕೆ ಸಿಗುವ ಹಿರಿಯ ವೈದ್ಯರು ರೋಗಿಗೆ ಅಗತ್ಯ ಸಲಹೆ ನೀಡುತ್ತಾರೆ.

‘ರೋಗಿ ಮತ್ತು ವೈದ್ಯರ ನಡುವಣ ಸಂವಹನ ಸಂದರ್ಭದಲ್ಲಿ ಪರಸ್ಪರರ ಮೊಬೈಲ್‌ ಸಂಖ್ಯೆ ಇಬ್ಬರಿಗೂ ಗೊತ್ತಾಗುವುದಿಲ್ಲ. ಪ್ರತಿಯೊಂದು ವಿವರಗಳ ಸಂಪೂರ್ಣ ಗೋಪ್ಯತೆ ಕಾಯ್ದುಕೊಳ್ಳಲಾಗುವುದು. ಹೀಗಾಗಿ ಮೊಬೈಲ್‌ ಸಂಖ್ಯೆ ಮತ್ತು ರೋಗಿಯ ವೈಯಕ್ತಿಕ ವಿವರ ಮತ್ತು ಕಾಯಿಲೆ ಮಾಹಿತಿಯ ದುರ್ಬಳಕೆ ಆಗುವುದಿಲ್ಲ.

‘ಪ್ರಯೋಗಾಲಯದ ಪರೀಕ್ಷೆಗೆ ಮನೆಯಿಂದಲೇ ರಕ್ತ ಮತ್ತಿತರ ಮಾದರಿ ಸಂಗ್ರಹಿಸಲು ರೋಗಿಗಳು ಅವಕಾಶ ಮಾಡಿಕೊಟ್ಟರೆ ಆಸ್ಪತ್ರೆ ಸಿಬ್ಬಂದಿ ಮನೆಗೆ ಬರುತ್ತಾರೆ. ರೋಗಿಯ ಬೇಡಿಕೆಯಂತೆ ಔಷಧಿ , ಮಾತ್ರೆಗಳನ್ನು ಮನೆಗೆ ತಲುಪಿಸಲಾಗುವುದು. ಸಮವಸ್ತ್ರ ಧರಿಸಿದ ಆಸ್ಪತ್ರೆಯ ಸಿಬ್ಬಂದಿಯೇ ಮನೆಗೆ ಬರುತ್ತಾರೆ. ವಾಹನದ ಮೇಲೆ ಆಸ್ಪತ್ರೆಯ ಸ್ಟಿಕ್ಕರ್‌ ಇರುತ್ತದೆ. ಹೀಗಾಗಿ ಸುರಕ್ಷತೆ ಬಗ್ಗೆ ಬಳಕೆದಾರರು ಆತಂಕ ಪಡಬೇಕಾಗಿಲ್ಲ. ಈ ಸೇವೆಯು ಆಸ್ಪತ್ರೆಗಳ ಮೂಲಕವೇ ದೊರೆಯಲಿದೆ. ಆಸ್ಪತ್ರೆಗಳು ಪ್ರತಿಯೊಬ್ಬ ವೈದ್ಯರ ಅರ್ಹತೆ ಪರಿಗಣಿಸಿಯೇ ತಮ್ಮಲ್ಲಿ ನೇಮಕ ಮಾಡಿಕೊಂಡಿರುತ್ತಾರೆ. ಹೀಗಾಗಿ ವೈದ್ಯರ ಸೇವಾ ಗುಣಮಟ್ಟದ ಬಗ್ಗೆ ಯಾರೊಬ್ಬರೂ ಆತಂಕಪಡಬೇಕಾಗಿಲ್ಲ’ ಎಂದು ಡಾ. ಜಗದೀಶ್ ಅವರು ಭರವಸೆ ನೀಡುತ್ತಾರೆ.

ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಗೆ ಮರಳಿದವರು ಗುಣಮುಖರಾಗುತ್ತಿರುವ ಬಗ್ಗೆ ಮಾಹಿತಿ ಪಡೆಯಲೂ ಇದು ನೆರವಿಗೆ ಬರಲಿದೆ. ಈ ಸೌಲಭ್ಯದ ಕಾರಣಕ್ಕೆ ವೈದ್ಯರ ಭೇಟಿಗೆ ಆಸ್ಪತ್ರೆಗೆ ಎಡತಾಕುವುದು ತಪ್ಪಲಿದೆ.

ಈ ಆ್ಯಪ್‌ನ ಬಳಕೆ ಹೆಚ್ಚುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳ ಬಳಕೆ ಮೇಲಿನ ಒತ್ತಡ ಕಡಿಮೆಯಾಗಲಿದೆ. ತುಂಬ ಅಗತ್ಯ ಇದ್ದವರು ಮಾತ್ರ ಆಸ್ಪತ್ರೆಗೆ ಬರುವುದರಿಂದ ಅಲ್ಲಿ ಲಭ್ಯ ಇರುವ ಸೌಕರ್ಯಗಳ ಗರಿಷ್ಠ ಬಳಕೆ ಪಡೆದುಕೊಳ್ಳಲು, ಅಗತ್ಯ ಇದ್ದವರಿಗೆ ತ್ವರಿತವಾಗಿ ಸೇವೆ ಒದಗಿಸಲೂ ಇದರಿಂದ ಸಾಧ್ಯವಾಗಲಿದೆ.

ಸದ್ಯಕ್ಕೆ ನಗರದ 20ಕ್ಕಿಂತ ಹೆಚ್ಚು ಆಸ್ಪತ್ರೆಗಳು ಈ ಆ್ಯಪ್‌ ಸೇವೆಯ ವ್ಯಾಪ್ತಿಗೆ ಒಳಪಟ್ಟಿವೆ. ದಿನಕ್ಕೆ 100 ರಿಂದ 120 ಜನರು ಸಲಹೆ ಪಡೆಯುತ್ತಿದ್ದಾರೆ. ದಿನೇ ದಿನೇ ಈ ಸಂಖ್ಯೆ ಏರುತ್ತಲೇ ಇದೆ. ಮಕ್ಕಳ ಮತ್ತು ಸ್ತ್ರೀರೋಗ ತಜ್ಞರ ಸಲಹೆಗೆ ಸಂಬಂಧಿಸಿದಂತೆ ನಿರ್ದಿಷ್ಟ ವೈದ್ಯರನ್ನೇ ನಿರಂತರವಾಗಿ ಸಂಪರ್ಕಿಸಬಹುದು. ಬಳಕೆದಾರರ ಮೇಲೆ ಯಾವುದೇ ಪ್ರಭಾವ ಬೀರುವ ವ್ಯವಸ್ಥೆ ಇಲ್ಲಿ ಇಲ್ಲ. ಜನರು ತಮಗೆ ಇಷ್ಟದ ಆಸ್ಪತ್ರೆ, ವೈದ್ಯರನ್ನು ಆಯ್ಕೆ ಮಾಡಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಇದೆ. ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬರುವ ದೂರದ ಊರಿನವರೂ ಮನೆಗೆ ಮರಳಿದ ನಂತರ ಇದರ ನೆರವಿನಿಂದ ವೈದ್ಯರ ಜತೆ ಸಂಪರ್ಕದಲ್ಲಿ ಇದ್ದುಕೊಂಡು ಸಲಹೆ ಪಡೆಯಬಹುದಾಗಿದೆ.

ಕಾಯಿಲೆಪೀಡಿತರು ಮತ್ತು ವೈದ್ಯರ ಮಧ್ಯೆ ತಕ್ಷಣಕ್ಕೆ ಸಂಪರ್ಕ ಕೊಂಡಿ ಕಲ್ಪಿಸುವ, ಆಸ್ಪತ್ರೆಗಳಲ್ಲಿನ ವೈದ್ಯರ ಮೂಲಕ ಆರೋಗ್ಯ ಸೇವೆ ಪಡೆದುಕೊಳ್ಳುವ ವಿಶಿಷ್ಟ ಆ್ಯಪ್‌ ಇದಾಗಿದೆ. ರೋಗಿ ಮತ್ತು ವೈದ್ಯನ ನಡುವಣ ಸಂಬಂಧ ಸುಧಾರಿಸಲು ಇದು ನೆರವಾಗಲಿದೆ. ಮೊಬೈಲ್‌ನಲ್ಲಿ ಈ ಆ್ಯಪ್‌ ಇದ್ದರೆ ಕಿಸೆಯಲ್ಲಿ ವೈದ್ಯರು ಇದ್ದಂತೆ. ಕಾಯಿಲೆಯ ಚಿಕಿತ್ಸೆ ಮತ್ತು ಗುಣಪಡಿಸುವಲ್ಲಿ ಔಷಧಿ ಮತ್ತು ವೈದ್ಯರ ಭರವಸೆಯ ಮಾತುಗಳೇ ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎನ್ನುವ ತತ್ವದಲ್ಲಿ ನಂಬಿಕೆ ಇರಿಸಿ ಈ ನವೋದ್ಯಮ ಸ್ಥಾಪಿಸಲಾಗಿದೆ. ಇಲ್ಲಿ ವೈದ್ಯರ ಸಲಹೆಗಳು ಸಂಘಟಿತ ಸ್ವರೂಪದಲ್ಲಿ ಲಭ್ಯ ಆಗಲಿವೆ.

ಸ್ಟಾರ್ಟ್‌ಅಪ್‌ ಸಹ ಸ್ಥಾಪಕರು ಈ ನವೋದ್ಯಮಕ್ಕಾಗಿ ₹ 40 ಕೋಟಿ ಬಂಡವಾಳ ಸಂಗ್ರಹಿಸಿದೆ. 50 ಮಂದಿ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಮೈಸೂರು ಮತ್ತು ಮಂಗಳೂರು ನಗರಗಳಲ್ಲಿ ಶೀಘ್ರದಲ್ಲಿಯೇ ಈ ಸೇವೆ ಲಭ್ಯವಾಗಲಿದೆ. ಕ್ರಮೇಣ ದೇಶದಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ. ಮಾಹಿತಿಗೆ http://bit.ly/mfine-care

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT