ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿಹಬ್ಬ ಆಚರಿಸಿಕೊಂಡ ಧಾರವಾಡದ ಜಾಗತಿಕ ಕಂಪನಿ

ಎಂಜಿನಿಯರಿಂಗ್‌ ವ್ಯಾಸಂಗ ಮಾಡಿದವರಿಬ್ಬರು ಸೇರಿ ಕಟ್ಟಿದ ಸ್ಕೈಟೆಕ್ ಎಂಜಿನಿಯರಿಂಗ್‌
Last Updated 26 ಅಕ್ಟೋಬರ್ 2018, 19:47 IST
ಅಕ್ಷರ ಗಾತ್ರ

ಎಂಜಿನಿಯರಿಂಗ್ ಮುಗಿಸಿ ಪ್ರತಿಷ್ಠಿತ ಕಂಪನಿಯಲ್ಲಿ ನೌಕರಿ ಸಿಕ್ಕ ಮೇಲೂ, ಸ್ವಂತ ಸಂಸ್ಥೆ ಸ್ಥಾಪಿಸುವ ಹಂಬಲದಿಂದ ಧಾರವಾಡದಲ್ಲಿ ಸ್ಥಾಪನೆಗೊಂಡ ಸ್ಕೈಟೆಕ್ ಎಂಜಿನಿಯರಿಂಗ್‌ ಕಂಪನಿ ಈಗ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ. ಇದನ್ನು ಸ್ಥಾಪಿಸಿದ ಪ್ರಿಯದರ್ಶಿನಿ ಕಣವಿ ಹಾಗೂ ನಾಗರಾಜ ಎಲಿಗಾರ ಅವರು ತಮ್ಮ ಸಂಸ್ಥೆಯನ್ನು ಜಾಗತಿಕಮಟ್ಟದಲ್ಲಿ ಛಾಪು ಮೂಡಿಸುವಂತೆ ಬೆಳೆಸಿ ನಿಲ್ಲಿಸಿದ್ದಾರೆ.

1982ರಲ್ಲಿ ಹುಬ್ಬಳ್ಳಿಯ ಬಿವಿಬಿಯಲ್ಲಿ ಎಂಜಿನಿಯರಿಂಗ್ ಮುಗಿಸಿದ ಪ್ರಿಯದರ್ಶಿನಿ ಅವರು ತುಮಕೂರಿನಲ್ಲಿದ್ದ ಎಚ್‌ಎಂಟಿ ಕಂಪನಿಗೆ ಸೇರಿದರು. ಸುಮಾರು ಇದೇ ಸಮಯದಲ್ಲಿ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಮುಗಿಸಿದ ನಾಗರಾಜ ಎಲಿಗಾರ ಅವರೂ ಮುಂಬೈನಲ್ಲಿ ಕಂಪನಿಯೊಂದರಲ್ಲಿ ನೌಕರಿಗೆ ಸೇರಿದ್ದರು. ಬರೋಬ್ಬರಿ ಹತ್ತು ವರ್ಷಗಳ ನಂತರ ಧಾರವಾಡದಲ್ಲಿ ತಮ್ಮದೇ ಆದ ಕಂಪನಿ ಸ್ಥಾಪಿಸುವ ಉದ್ದೇಶ ಹೊಂದಿದ್ದ ಈ ಇಬ್ಬರು 1992ರಲ್ಲಿ ಸ್ಕೈಟೆಕ್‌ ಎಂಜಿನಿಯರಿಂಗ್ ಸ್ಥಾಪಿಸಿದರು.

‘ಆರಂಭದಲ್ಲಿ ಇಬ್ಬರೂ ದುಡಿದು ಕೂಡಿಟ್ಟಿದ್ದ ತಲಾ ₹1ಲಕ್ಷವನ್ನು ಕಂಪನಿಗೆ ಹೂಡಿದೆವು. ಕೆಎಸ್‌ಎಫ್‌ಸಿ ಮೂಲಕ ಶೇ 19.5ರಂತೆ ₹17ಲಕ್ಷ ಸಾಲ ಪಡೆದು ಲಕಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಂಸ್ಥೆಯನ್ನು ಸ್ಥಾಪಿಸಿದೆವು. ಆ ಸಂದರ್ಭದಲ್ಲಿ ಇಷ್ಟು ದೊಡ್ಡ ಮೊತ್ತ ಹೂಡಿಕೆ ಮಾಡಿದ್ದರ ಕುರಿತು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಧಾರವಾಡದಲ್ಲಿ ಇಷ್ಟೊಂದು ಹಣ ಹೂಡಿದ್ದೀರಲ್ಲಾ ವಹಿವಾಟು ನಡೆಯುತ್ತದೆಯೇ? ಎಂದು ಆತಂಕದಿಂದ ಕೇಳಿದವರೂ ಉಂಟು’ ಎಂದು ಕಣವಿ ಅವರು 25 ವರ್ಷದ ಹಿಂದಿನ ಚಿತ್ರಣವನ್ನು ತೆರೆದಿಟ್ಟರು.

‘ಆರಂಭದಲ್ಲಿ 5 ಜನರನ್ನು ಕಂಪನಿಗೆ ನೇಮಿಸಿಕೊಳ್ಳಲಾಯಿತು. ನಾನು ಮತ್ತು ನಾಗರಾಜ ಇಬ್ಬರೂ ಸೇರಿ ಒಟ್ಟು ಏಳು ಜನ ಕೆಲಸ ಮಾಡುತ್ತಿದ್ದೆವು. ಮಕ್ಕಳ ಆಟಿಕೆ ಸಿದ್ಧಪಡಿಸುವ ಗೋವಾದ ಫನ್‌ಸ್ಕೂಲ್‌ ಎಂಬ ಉತ್ಪನ್ನಕ್ಕೆ ಟೂಲ್‌ ಮತ್ತು ಡೈ ಸಿದ್ಧಪಡಿಸುವ ಮೊದಲ ಗುತ್ತಿಗೆಯನ್ನು ನಿಗದಿತ ಸಮಯದಲ್ಲಿ ಅತ್ಯುತ್ತಮ ಗುಣಮಟ್ಟದಲ್ಲಿ ಪೂರೈಕೆ ಮಾಡಲಾಯಿತು. 1993ರಲ್ಲಿ ನಮ್ಮ ಮೊದಲ ಇನ್‌ವಾಯ್ಸ್‌ ಸಿದ್ಧವಾಯಿತು. ಆ ಮೂಲಕ ವಾರ್ಷಿಕ ₹ 2 ಲಕ್ಷ ವಹಿವಾಟು ದಾಖಲಿಸಿದೆವು’ ಎಂದು ವಿವರಿಸಿದರು.

ಆಟೊಮೊಬೈಲ್‌ನಿಂದ ಟೆಲಿಕಾಂ ವರೆಗೂ...

‘ಹೀಗೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕಂಪೆನಿಯನ್ನು ವಿಸ್ತರಿಸುತ್ತಾ ಬೆಳವಣಿಗೆಯ ಹಾದಿಯನ್ನು ಸ್ಕೈಟೆಕ್ ಹಿಡಿಯಿತು. ಸೇವೆ ಮತ್ತು ಗುಣಮಟ್ಟ ನಮ್ಮ ಉದ್ಯಮದ ಮೂಲ ಮಂತ್ರ. ಅದನ್ನು ಕಾಪಾಡುತ್ತಿರುವುದರಿಂದಲೇ ಟಾಟಾ ಮೋಟಾರ್ಸ್, ಮಾರ್ಕೊಪೊಲೊ, ಶಿಂಡ್ಲೆರ್‌, ಎಬಿಬಿ, ಐಎಫ್‌ಬಿ, ಲೆಗ್ರಾಂಡ್‌ ಮುಂತಾದ ಕಂಪೆನಿಗಳು ಸ್ಕೈಟೆಕ್‌ನ ಹೆಮ್ಮೆಯ ಗ್ರಾಹಕರಾಗಿದ್ದಾರೆ. ಈ ಕಂಪೆನಿಗಳಿಗೆ ಬೇಕಾದ ಟೂಲ್‌ ಮತ್ತು ಡೈಗಳನ್ನು ನಮ್ಮ ಸಂಸ್ಥೆ ಸಿದ್ಧಪಡಿಸಿ ನೀಡುತ್ತಿದೆ’ ಎಂದರು.

‘ಆರಂಭದಲ್ಲಿ ಆಟೊಮೊಬೈಲ್‌ ಕ್ಷೇತ್ರಕ್ಕೆ ಮಾತ್ರ ಕೆಲಸ ಮಾಡುತ್ತಿದ್ದೆವು. ಇದನ್ನು ಹಂತ ಹಂತವಾಗಿ ವಿಸ್ತರಿಸಿ ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌, ಟೆಲಿಕಾಂ ಕ್ಷೇತ್ರಕ್ಕೂ ಕಂಪನಿಯನ್ನು ವಿಸ್ತರಿಸಲಾಯಿತು. ನಮ್ಮ ಸೇವೆಯನ್ನು ಪರಿಗಣಿಸಿದ ಬಹಳಷ್ಟು ಕಂಪೆನಿಗಳು ಇಂದಿಗೂ ಸಂಸ್ಥೆಗೆ ಕೆಲಸ ನೀಡುತ್ತಿದ್ದಾರೆ. ಉತ್ತಮ ಸೇವೆಯಿಂದಾಗಿ ಉತ್ತರ ಭಾರತದ ಹಲವು ಕಂಪೆನಿಗಳು ಹಾಗೂ ಅಮೆರಿಕದ ಬಹಳಷ್ಟು ಕಂಪನಿಗಳು ಸ್ಕೈಟೆಕ್‌ನಲ್ಲಿ ಟೂಲ್ ಮತ್ತು ಡೈ ಸಿದ್ಧಪಡಿಸಿಕೊಂಡು ಹೋಗುತ್ತಿದ್ದಾರೆ’ ಎಂದರು ಕಣವಿ.

‘2000ನೇ ಇಸವಿಯಲ್ಲಿ ಪ್ಲಾಸ್ಟಿಕ್‌ ಕಾಂಪೊನೆಂಟ್‌ಗಳನ್ನು ಸಿದ್ಧಪಡಿಸಲು ಆರಂಭಿಸಿದೆವು. ಅದಕ್ಕಾಗಿ ಬೇರೆಯವರು ಬಳಸಿದ್ದ ಇಂಜೆಕ್ಷನ್‌ ಮೌಲ್ಡಿಂಗ್‌ ಯಂತ್ರವನ್ನು ತಂದು ಪ್ರಯೋಗ ಆರಂಭಿಸಿದೆವು. ಅದರಲ್ಲೂ ಯಶಸ್ಸು ಕಂಡಿದ್ದರಿಂದಾಗಿ 35 ಹೊಸ ಮೌಲ್ಡಿಂಗ್ ಯಂತ್ರಗಳನ್ನು ತಂದು ಸ್ಥಾಪಿಸಲಾಗಿದೆ’ ಎಂದರು.

ತಯಾರಿಕೆಯಿಂದ ಕಲಿಕೆಯವರೆಗೆ

ಒಂದೆಡೆ ಬಗೆಬಗೆಯ ಟೂಲ್ ಮತ್ತು ಡೈಗಳನ್ನು ಸಿದ್ಧಪಡಿಸುವುದಾದರೆ, ಮತ್ತೊಂದೆಡೆ ಉತ್ತರ ಕರ್ನಾಟಕದ ಯುವ ಸಮುದಾಯಕ್ಕೆ ಇದೇ ಕ್ಷೇತ್ರದಲ್ಲಿ ಕಲಿಕೆ ಮತ್ತು ತರಬೇತಿ ನೀಡುವ ಉದ್ದೇಶದಿಂದ ಸ್ಕೈಟೆಕ್ ತಾಂತ್ರಿಕ ತರಬೇತಿ ಪ್ರತಿಷ್ಠಾನದ ಸಿ.ಬಿ.ಯೆಲಿಗಾರ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಲಾಯಿತು. ಅತ್ತಿಕೊಳ್ಳದಲ್ಲಿ ಆರಂಭವಾದ ಈ ಕಾಲೇಜು ಪಾಲಿಟೆಕ್ನಿಕ್ ಮಾನ್ಯತೆ ಪಡೆದು, ಕರ್ನಾಟಕ ಸರ್ಕಾರದ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಮಾನ್ಯತೆ ಪಡೆದ ಏಕೈಕ ಟೂಲ್ ಮತ್ತು ಡೈ ಶಿಕ್ಷಣ ಸಂಸ್ಥೆಯಾಗಿದೆ. ಇಲ್ಲಿ ಕಲಿತವರಿಗೆ ನೌಕರಿಯೂ ಸಿಗುತ್ತಿದೆ’ ಎಂದು ತಮ್ಮ ಮತ್ತೊಂದು ಕ್ಷೇತ್ರವನ್ನೂ ಕಣವಿ ವಿವರಿಸಿದರು.

‘1993ರಲ್ಲಿ ಕಂಪನಿಯ ಮೊದಲ ಉತ್ಪನ್ನ ಹೊರಬಂದ ಸುಮಧುರ ಕ್ಷಣ. ಆಗ ಕಂಪನಿ ವಹಿವಾಟು ₹2ಲಕ್ಷ. ಈಗ ಕಂಪನಿಗೆ 25 ವರ್ಷ ತುಂಬಿದೆ. ವಹಿವಾಟು ₹22ಕೋಟಿಗೆ ವೃದ್ಧಿಸಿದೆ. ಹಾಗೆಯೇ ಕಂಪನಿ ಉದ್ಯೋಗಿಗಳ ಸಂಖ್ಯೆ 180ಕ್ಕೆ ಏರಿದೆ. ಕಂಪನಿ ಬೆಳೆಯುತ್ತಿದೆ, ಹಾಗೆಯೇ ನಿರ್ದೇಶಕರಾದ ನಾಗರಾಜ ಮತ್ತು ನನಗೆ ಓಡಾಟವೂ ಹೆಚ್ಚಾಗಿದೆ. ಈ ನಡುವೆಯೂ ನಾವು ಕೆಲಸದ ಸ್ಥಳದಲ್ಲಿ ನಿಂತು ನಮ್ಮ ಅನುಭವಗಳನ್ನು ನಮ್ಮ ಸಿಬ್ಬಂದಿ ಜತೆ ಹಂಚಿಕೊಳ್ಳುತ್ತೇವೆ. ಜತೆಗೆ ನಾವೂ ಕೆಲವೊಮ್ಮೆ ಕೆಲಸದಲ್ಲಿ ಭಾಗಿಯಾಗುತ್ತೇವೆ. ಇದರಿಂದ ನಮ್ಮ ಹಾಗೂ ಕಂಪನಿ ನೌಕರರ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ’ ಎಂದು ಮಾನವ ಸಂಪನ್ಮೂಲ ಸದ್ಬಳಕೆ ಕುರಿತು ಮಾತನಾಡಿದರು.

‘ನೌಕರರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನೌಕರರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಕೆಲವು ನೌಕರರು ತಮ್ಮ ಮಕ್ಕಳನ್ನು ನಮ್ಮ ಶಿಕ್ಷಣ ಸಂಸ್ಥೆಗೆ ಸೇರಿಸಿದ್ದಾರೆ. ನಂತರ ಅವರೂ ನಮ್ಮ ಸಂಸ್ಥೆಯ ಭಾಗವಾಗಿದ್ದಾರೆ. ಹೀಗೆ ಸ್ಕೈಟೆಕ್ ಎಂಜಿನಿಯರಿಂಗ್ ಎನ್ನುವುದು ಒಂದು ಕೂಡು ಕುಟುಂಬದಂತೆ ಕಾರ್ಯನಿರ್ವಹಿಸುತ್ತಿರುವುದು ನಮಗಂತೂ ಸಂತಸದ ಕ್ಷಣ’ ಎಂದು ಪ್ರಿಯದರ್ಶಿನಿ ಕಣವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT