ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಪಿಐ: ಮುಂದುವರಿದ ಹೊರಹರಿವು

ಆರ್ಥಿಕ ಹಿಂಜರಿತದ ಭೀತಿ: ಬಡ್ಡಿದರ ಹೆಚ್ಚಳದ ಪರಿಣಾಮ
Last Updated 17 ಡಿಸೆಂಬರ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಷೇರುಪೇಟೆಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಹಿಂತೆಗೆತಕ್ಕೆ ಗಮನ ಹರಿಸಿದ್ದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಷೇರುಗಳನ್ನು ಖರೀದಿಸುತ್ತಿದ್ದಾರೆ.

ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಡಿಸೆಂಬರ್‌ ತಿಂಗಳಿನಲ್ಲಿ ಈವರೆಗೆ ದೇಶದ ಷೇರುಪೇಟೆಗಳಿಂದ ₹7,490 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ಇದೇ ವೇಳೆ ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 10,551 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಹಣದುಬ್ಬರದ ಏರಿಕೆ ಹಾಗೂ ವಿವಿಧ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರ ಹೆಚ್ಚಳ ಮಾಡುತ್ತಿರುವ ಕಾರಣಗಳಿಂದಾಗಿ ವಿದೇಶಿ ಹೂಡಿಕೆದಾರರು ಬಂಡವಾಳ ಹಿಂತೆಗೆತಕ್ಕೆ ಮುಂದಾಗಿದ್ದಾರೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಅಮೆರಿಕದಲ್ಲಿ ನವೆಂಬರ್‌ ತಿಂಗಳ ಚಿಲ್ಲರೆ ಹಣದುಬ್ಬರವು ಶೇ 7.1ಕ್ಕೆ ಇಳಿಕೆ ಕಂಡಿದೆ. ಹೀಗಾಗಿ ಫೆಡರಲ್‌ ರಿಸರ್ವ್‌ ಕಡಿಮೆ ಪ್ರಮಾಣದಲ್ಲಿ ಬಡ್ಡಿದರ ಹೆಚ್ಚಿಸಲಿದೆ ಎನ್ನುವ ನಿರೀಕ್ಷೆಯನ್ನು ಹೂಡಿಕೆದಾರರು ಹೊಂದಿದ್ದರು. ಆದರೆ, ಫೆಡರಲ್ ರಿಸರ್ವ್‌ ಶೇ 0.50ರಷ್ಟು ಬಡ್ಡಿದರ ಹೆಚ್ಚಳ ಮಾಡುವುದರ ಜೊತೆಗೆ ತನ್ನ ಬಿಗಿಯಾದ ಹಣಕಾಸು ನೀತಿಯನ್ನು ಮುಂದುವರಿಸುವುದಾಗಿಯೂ ಹೇಳಿದೆ. ಇದು ಹೂಡಿಕೆ ಚಟುವಟಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಿತು ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಪ್ರಜಾವಾಣಿಗೆ ತಿಳಿಸಿದರು.

ಜಾಗತಿಕ ಆರ್ಥಿಕತೆಯು ಹಿಂಜರಿತದ ಭೀತಿಯಲ್ಲಿ ಇರುವುದರಿಂದ ದೇಶದಲ್ಲಿ ಐ.ಟಿ. ಷೇರುಗಳು ಹೆಚ್ಚಿನ ನಷ್ಟ ಕಂಡಿವೆ. ಮುಂದಿನ ವಾರ ದೇಶದಲ್ಲಿ ಪ್ರಮುಖವಾದ ಯಾವುದೇ ವಿದ್ಯಮಾನಗಳು ಇಲ್ಲದೇ ಇರುವುದರಿಂದ ಜಾಗತಿಕ ವಿದ್ಯಮಾನಗಳು ಷೇರುಪೇಟೆಗಳ ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ ಎಂದು ಅವರು ಹೇಳಿದರು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಮೌಲ್ಯವು ಇದೇ ರೀತಿಯಲ್ಲಿ ಹೆಚ್ಚಾಗುತ್ತಾ ಹೋದರೆ ಆಗ ಭಾರತದ ಕರೆನ್ಸಿಯು ಇನ್ನಷ್ಟು ಕುಸಿತ ಕಾಣುವ ಸಾಧ್ಯತೆ ಇದೆ. ಅಮೆರಿಕದ ಒಂದು ಡಾಲರ್‌ಗೆ ರೂಪಾಯಿಯು ₹ 84ರ ಮಟ್ಟವನ್ನೂ ತಲುಪಬಹುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT