ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮಾರುಕಟ್ಟೆ: ವಿದೇಶಿ ಹೂಡಿಕೆಗೆ ಹಲವು ಅಡ್ಡಿ

Published 14 ಅಕ್ಟೋಬರ್ 2023, 23:50 IST
Last Updated 14 ಅಕ್ಟೋಬರ್ 2023, 23:50 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ರೇಲ್‌–ಹಮಾಸ್ ಸಮರವು ತೀವ್ರಗೊಂಡಲ್ಲಿ ಭಾರತದ ಮಾರುಕಟ್ಟೆಯ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಹಣದುಬ್ಬರ ಏರಿಕೆ ಕಂಡಿರುವುದು, ಡಾಲರ್ ಮೌಲ್ಯ ವೃದ್ಧಿ ... ಹೀಗೆ ಹಲವು ಕಾರಣಗಳಿಂದಾಗಿ ಭಾರತದಲ್ಲಿ ವಿದೇಶಿ ಬಂಡವಾಳ ಒಳಹರಿವಿಗೆ (ಎಫ್‌ಪಿಐ) ಅಡ್ಡಿಯಾಗುತ್ತಿವೆ.

ಜಾಗತಿಕ ಸವಾಲುಗಳ ನಡುವೆಯೂ ಭಾರತದ ಷೇರುಪೇಟೆಗಳು ಚೇತರಿಕೆ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿವೆ. ಹೀಗಿದ್ದರೂ ಇಸ್ರೇಲ್–ಹಮಾಸ್‌ ಸಂಘರ್ಷವು ಇನ್ನಷ್ಟು ತೀವ್ರಗೊಂಡು ಬೇರೆ ಭಾಗಗಳಿಗೂ ವ್ಯಾಪಿಸಿದರೆ ಷೇರುಪೇಟೆಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇಸ್ರೇಲ್‌–ಹಮಾಸ್‌ ಸಂಘರ್ಷ ತೀವ್ರಗೊಂಡರೆ ಜಾಗತಿಕವಾಗಿ ಕಚ್ಚಾ ತೈಲ ದರ ಏರಿಕೆ ಕಾಣಲಿದೆ. ಭಾರತವು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವುದರಿಂದ ಆಮದು ವೆಚ್ಚ ಹೆಚ್ಚಾಗಲಿದೆ. ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಬಂಡವಾಳ ಇನ್ನೂ ಅಧಿಕ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಲು ಮುಂದಾಗಬಹುದು. ಸದ್ಯದ ಮಟ್ಟಿಗೆ ಅನಿಶ್ಚಿತ ವಾತಾವರಣವೇ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, ಅಕ್ಟೋಬರ್ 13ರವರೆಗೆ ನಡೆದಿರುವ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ಒಟ್ಟು ₹9,784 ಕೊಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಭಾರತದ ಐ.ಟಿ. ಕಂಪನಿಗಳು ವರಮಾನ ಮುನ್ನೊಟವನ್ನು ಇಳಿಕೆ ಮಾಡಿರುವುದು ಸಹ ಕಂಪನಿಗಳ ಷೇರು ಮೌಲ್ಯ ಇಳಿಕೆ ಕಾಣುವಂತೆ ಮಾಡುತ್ತಿದೆ.

ಅಮೆರಿಕದ ಹಣದುಬ್ಬರ ಪ್ರಮಾಣವು ಮಾರುಕಟ್ಟೆ ನಿರೀಕ್ಷೆಗಿಂತಲೂ ಹೆಚ್ಚಿಗೆ ಇದೆ. ಹೀಗಾಗಿ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಇನ್ನಷ್ಟು ಏರಿಕೆ ಮಾಡುವ ಸಂಭವ ಇದೆ. ಇನ್ನು, ಡಾಲರ್ ಮೌಲ್ಯ ಏರಿಕೆ ಕಾಣುತ್ತಿರುವುದು ಮತ್ತು ಅಮೆರಿಕದ 10 ವರ್ಷಗಳ ಬಾಂಡ್ ಗಳಿಕೆ ಪ್ರಮಾಣ ಹೆಚ್ಚಾಗುತ್ತಿರುವುದು ಸಹ ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಕಡಿಮೆ ಆಗುವಂತೆ ಮಾಡುತ್ತಿವೆ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

ವಿದೇಶಿ ಸಾಂಸ್ಥಿಕ ಬಂಡವಾಳ (ಎಫ್‌ಐಐ) ಹೊರಹರಿವು (ಕೋಟಿಗಳಲ್ಲಿ)

ಅಕ್ಟೋಬರ್ 9; ₹998 ಮಾರಾಟ

ಅಕ್ಟೋಬರ್ 10; ₹1,005 ಮಾರಾಟ

ಅಕ್ಟೋಬರ್‌ 11; ₹422 ಮಾರಾಟ

ಅಕ್ಟೋಬರ್‌ 12; ₹1,862 ಮಾರಾಟ

ಅಕ್ಟೋಬರ್‌ 13; ₹317 ಖರೀದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT