ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಮಾರಾಟದ ಒತ್ತಡ: ಮತ್ತೆ 500 ಅಂಶ ಕುಸಿದ ಸೆನ್ಸೆಕ್ಸ್‌

Last Updated 20 ಜುಲೈ 2021, 7:00 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳು ಮಂಗಳವಾರವೂ ಇಳಿಮುಖವಾಗಿದ್ದು, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 500ಕ್ಕೂ ಹೆಚ್ಚು ಅಂಶಗಳು ಕುಸಿದಿದೆ. ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್‌, ಎಚ್‌ಸಿಎಲ್‌ ಟೆಕ್‌ ರೀತಿಯ ಅಧಿಕ ಮಾರುಕಟ್ಟೆ ಮೌಲ್ಯದ ಕಂಪನಿಗಳ ಷೇರುಗಳು ಸಹ ನಷ್ಟಕ್ಕೆ ಒಳಗಾಗಿವೆ.

ವಹಿವಾಟು ಆರಂಭದಲ್ಲಿ ಕೆಲ ಸಮಯ ಷೇರುಪೇಟೆ ಮಾರಾಟ ಒತ್ತಡಕ್ಕೆ ತಡೆಯೊಡ್ಡಿದ್ದ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಕೂಡ ಕುಸಿತ ಕಂಡಿದೆ. ಮಧ್ಯಾಹ್ನ 12:15ಕ್ಕೆ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 164 ಅಂಶ ಕಡಿಮೆಯಾಗಿ 15,588.40 ಅಂಶ ತಲುಪಿದೆ. ಸೆನ್ಸೆಕ್ಸ್‌ 514 ಅಂಶ ಕುಸಿದು 52,039.24 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ.

ಭಾರ್ತಿ ಏರ್‌ಟೆಲ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಐಸಿಐಸಿಐ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಎಸ್‌ಬಿಐ ಸೇರಿದಂತೆ ಬಹುತೇಕ ಬ್ಯಾಂಕಿಂಗ್‌ ಷೇರುಗಳ ಬೆಲೆ ಶೇ 2ರಷ್ಟು ಕಡಿಮೆಯಾಗಿದೆ. ಮತ್ತೊಂದು ಕಡೆ ಏಷಿಯನ್‌ ಪೇಂಟ್ಸ್‌, ಅಲ್ಟ್ರಾಟೆಕ್‌ ಸಿಮೆಂಟ್‌, ಪವರ್‌ಗ್ರಿಡ್‌, ನೆಸ್ಲೆ ಇಂಡಿಯಾ ಷೇರುಗಳು ಗಳಿಕೆ ದಾಖಲಿಸಿವೆ.

ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 586.66 ಅಂಶ ಕುಸಿದರೆ, ನಿಫ್ಟಿ 171 ಅಂಶ ಇಳಿಕೆಯೊಂದಿಗೆ ವಹಿವಾಟು ಮುಕ್ತಾಯವಾಗಿತ್ತು.

ಷೇರುಪೇಟೆಯ ಮಾಹಿತಿ ಪ್ರಕಾರ, ಸೋಮವಾರ ಒಂದೇ ದಿನ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 2,198.71 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

'ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಡೆಲ್ಟಾ ರೂಪಾಂತರ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವುದು, ಹಣದುಬ್ಬರ ಏರಿಕೆಯ ಕಾರಣಗಳಿಂದಾಗಿ ಹೂಡಿಕೆಯ ಗಳಿಕೆ ನಷ್ಟವಾಗುವ ಆತಂಕ ಹೂಡಿಕೆದಾರರಲ್ಲಿ ಕಂಡು ಬಂದಿದೆ. ಖಾತೆಗೆ ಲಾಭ ಜಮಾ ಮಾಡಿಕೊಳ್ಳುವ ನಿಟ್ಟಿನಲ್ಲಿ ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಸೃಷ್ಟಿಯಾಗಿದೆ' ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಹೂಡಿಕೆ ತಜ್ಞ ವಿ.ಕೆ.ವಿಜಯಕುಮಾರ್‌ ವಿಶ್ಲೇಷಿಸಿದ್ದಾರೆ.

ಶಾಂಘೈ, ಹಾಂಕಾಂಗ್‌, ಸೋಲ್‌ ಹಾಗೂ ಟೋಕಿಯಾ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT