ಶನಿವಾರ, ಜುಲೈ 24, 2021
22 °C

ಅಂಕಣ–ಬಂಡವಾಳ ಮಾರುಕಟ್ಟೆ| ಹೂಡಿಕೆ ಯಶಸ್ಸಿಗೆ ‘ಪಂಚ’ ತಂತ್ರಗಳು

ಅವಿನಾಶ್ ಕೆ.ಟಿ. Updated:

ಅಕ್ಷರ ಗಾತ್ರ : | |

ಪಂಚತಂತ್ರದ ಕಥೆಗಳ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಆದರೆ ಹೂಡಿಕೆಯಲ್ಲಿ ಯಶಸ್ಸು ಕಾಣಲು ಸಹಾಯ ಮಾಡುವ ಪಂಚ ತಂತ್ರಗಳ ಬಗ್ಗೆ ನಿಮಗೆ ಗೊತ್ತೇ? ಬನ್ನಿ, ಜಾಗೃತ ಹೂಡಿಕೆದಾರರಾಗಲು ನೆರವಾಗುವ ಆ ಪಂಚ ತಂತ್ರಗಳನ್ನು ಇವತ್ತು ಕಲಿಯೋಣ.

ವ್ಯಾಲ್ಯೂ ಇನ್ವೆಸ್ಟಿಂಗ್ (ಆಂತರಿಕ ಮೌಲ್ಯ ಅಂದಾಜು ಮಾಡಿ ಹೂಡಿಕೆ): ಷೇರುಪೇಟೆಯಲ್ಲಿ ಕೆಲವು ಉತ್ತಮ ಕಂಪನಿಗಳು ಎಲೆಮರೆಯ ಕಾಯಿಗಳಂತೆ ಇರುತ್ತವೆ. ಅವುಗಳ ಆಂತರಿಕ ಮೌಲ್ಯ ಹೆಚ್ಚಿಗೆ ಇದ್ದರೂ ಷೇರು ಮಾರುಕಟ್ಟೆಯಲ್ಲಿ ಅವುಗಳಿಗೆ ಸಿಗಬೇಕಾದ ಮೌಲ್ಯ ಸಿಕ್ಕಿರುವುದಿಲ್ಲ. ವಾಸ್ತವದಲ್ಲಿ ಇರಬೇಕಾದ ಮೌಲ್ಯಕ್ಕಿಂತ ಕಡಿಮೆ ಮೌಲ್ಯವನ್ನು ಆ ಷೇರುಗಳು ಹೊಂದಿರುತ್ತವೆ. ಅಂತಹ ಷೇರುಗಳನ್ನು ಆಯ್ದು ಹೂಡಿಕೆ ಮಾಡುವುದು ವ್ಯಾಲ್ಯೂ ಇನ್ವೆಸ್ಟಿಂಗ್.


ಅವಿನಾಶ್ ಕೆ.ಟಿ.

ವ್ಯಾಲ್ಯೂ ಇನ್ವೆಸ್ಟಿಂಗ್‌ಗಾಗಿ ಉತ್ತಮ ಷೇರುಗಳನ್ನು ಹುಡುಕುವುದು ಸುಲಭದ ಮಾತಲ್ಲ. ಕಂಪನಿಯೊಂದರ ಆರ್ಥಿಕ ಸ್ಥಿತಿಗತಿ ಮತ್ತು ಭವಿಷ್ಯದಲ್ಲಿ ಆ ಕಂಪನಿಯ ಸ್ಥಿತಿ ಏನಾಗಬಹುದು ಎಂಬುದನ್ನು ಲೆಕ್ಕಹಾಕಿ (Fundamental Analysis), ಅದನ್ನು ಆಧರಿಸಿ ಹೂಡಿಕೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಲೆಕ್ಕಾಚಾರದಲ್ಲಿ ಹೂಡಿಕೆ ಮಾಡುವವರು ‘ವ್ಯಾಲ್ಯೂ ಆಧಾರಿತ’ ಷೇರುಗಳಲ್ಲಿ ಮುಕ್ಕಾಲು ಪಾಲು ಹೂಡಿಕೆ ಮಾಡಬೇಕು. ಎಫ್.ಡಿ., ಬಾಂಡ್, ಡಿಬೆಂಚರ್‌ಗಳಲ್ಲಿ ಶೇ 20ರಷ್ಟು ಹೂಡಿಕೆ ಪರಿಗಣಿಸಬಹುದು.

ಗ್ರೋತ್ ಇನ್ವೆಸ್ಟಿಂಗ್ (ಬೆಳವಣಿಗೆ ಕೇಂದ್ರಿತವಾಗಿ ಹೂಡಿಕೆ): ಆದಾಯ ಮತ್ತು ಲಾಭಾಂಶ ಗಣನೀಯ
ವಾಗಿ ಹೆಚ್ಚಳವಾಗುತ್ತಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಗ್ರೋತ್ ಇನ್ವೆಸ್ಟಿಂಗ್. ಸರಳವಾಗಿ ಇದನ್ನು ‘ಬೆಳವಣಿಗೆ ಕೇಂದ್ರಿತವಾಗಿ ಹೂಡಿಕೆ’ ಎನ್ನಬಹುದು. ಗ್ರೋತ್ ಇನ್ವೆಸ್ಟಿಂಗ್‌ಗಾಗಿ ನೀವು ಷೇರುಗಳನ್ನು ಆಯ್ಕೆ ಮಾಡುವಾಗ ಒಂದೇ ವಲಯದ ಹಲವು ಕಂಪನಿಗಳ ಜತೆ ಹೋಲಿಕೆ ಮಾಡಿ ನೋಡಬಹುದು ಅಥವಾ ನಿರ್ದಿಷ್ಟ ವಲಯದ ಬೆಳವಣಿಗೆಯ ಸರಾಸರಿ ಜತೆ ಅಂದಾಜು ಹೋಲಿಕೆ ಮಾಡಿ ಹೂಡಿಕೆ ತೀರ್ಮಾನ ಕೈಗೊಳ್ಳಬಹುದು. ವಾಸ್ತವದಲ್ಲಿ ಮಾರುಕಟ್ಟೆ ಮೌಲ್ಯಕ್ಕಿಂತ ನಿರ್ದಿಷ್ಟ
ಕಂಪನಿಯೊಂದರ ಷೇರಿನ ಬೆಲೆ ಜಾಸ್ತಿ ಇದ್ದು ಅದು ಉತ್ತಮ ಪ್ರಗತಿ ಸಾಧಿಸುತ್ತಿದ್ದರೆ ಆ ನಿರ್ದಿಷ್ಟ ಷೇರಿನಲ್ಲಿ ಹೂಡಿಕೆ ಮಾಡುವುದನ್ನು ನೀವು ಪರಿಗಣಿಸಬಹುದು. ಇದೇ ಗ್ರೋತ್ ಇನ್ವೆಸ್ಟಿಂಗ್ ಲೆಕ್ಕಾಚಾರ.

ಈ ಲೆಕ್ಕಾಚಾರದಲ್ಲಿ ಹೂಡಿಕೆ ಮಾಡುವವರು ಮುಕ್ಕಾಲು ಪಾಲು ಗ್ರೋತ್ ಆಧಾರಿತ ಷೇರುಗಳಲ್ಲಿ ಹೂಡಿ ಉಳಿದ ಶೇ 25ರಷ್ಟನ್ನು ಎಫ್.ಡಿ., ಬಾಂಡ್, ಡಿಬೆಂಚರ್‌ಗಳಲ್ಲಿ ತೊಡಗಿಸುವುದನ್ನು ಪರಿಗಣಿಸಬಹುದು.

ಆದಾಯಕ್ಕಾಗಿ ಹೂಡಿಕೆ: ಕೆಲವರು ನಿರ್ದಿಷ್ಟ ಮೊತ್ತವನ್ನು ಆದಾಯದ ರೂಪದಲ್ಲಿ ಪಡೆಯಲು ಹೂಡಿಕೆ ಮಾಡುತ್ತಾರೆ. ಅಂತಹವರು ಉತ್ತಮ ಲಾಭಾಂಶ ಕೊಡುವ ಷೇರುಗಳು, ಬಾಂಡ್‌ಗಳು, ಡಿಬೆಂಚರ್‌ಗಳು, ಎಫ್.ಡಿ.ಗಳು ಮತ್ತು ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳಲ್ಲಿ ಹೂಡಿಕೆ ಮಾಡಬಹುದು. ನಿವೃತ್ತ ಜೀವನ ನಡೆಸುತ್ತಿರುವವರು ಸಾಮಾನ್ಯವಾಗಿ ಈ ರೀತಿಯ ಹೂಡಿಕೆಗಳನ್ನು ಪರಿಗಣಿಸುತ್ತಾರೆ.

ಸಾಂಪ್ರದಾಯಿಕ ಹೂಡಿಕೆ: ‘ನಾನು ಮಾಡಿರುವ ₹ 1,000 ಹೂಡಿಕೆ ₹ 2000 ಆಗದಿದ್ದರೂ ಚಿಂತೆಯಿಲ್ಲ; ಅದು ₹ 999 ಆಗ
ಬಾರದು’ ಎನ್ನುವವರು ಸಾಂಪ್ರದಾಯಿಕ ಹೂಡಿಕೆಗಳನ್ನು ಪರಿಗಣಿಸುತ್ತಾರೆ. ಕಡಿಮೆ ಮತ್ತು ಮಧ್ಯಮ ಪ್ರಮಾಣದ ಹೂಡಿಕೆ ರಿಸ್ಕ್ ತೆಗೆದುಕೊಳ್ಳಲು ಬಯಸುವವರು ಈ ಹೂಡಿಕೆಗಳಲ್ಲಿ ತೊಡಗಿಸುತ್ತಾರೆ. ಇಂತಹವರು ಸ್ಮಾಲ್ ಮತ್ತು ಮಿಡ್ ಕ್ಯಾಪ್ ಷೇರುಗಳನ್ನು ಪರಿಗಣಿಸಬಾರದು. ಒಂದಿಷ್ಟು ಹೂಡಿಕೆಯನ್ನು ಲಾರ್ಜ್ ಕ್ಯಾಪ್ ಕಂಪನಿಗಳಲ್ಲಿ ಮಾಡಬಹುದು. ಬಹುಪಾಲು ಹಣವನ್ನು ಬಾಂಡ್, ಡಿಬೆಂಚರ್ ಮತ್ತು ಇತರ ನಿರ್ದಿಷ್ಟ ಆದಾಯ ತಂದುಕೊಡುವ ಹೂಡಿಕೆಗಳಲ್ಲಿ ತೊಡಗಿಸುವುದು ಸೂಕ್ತ.

ಅಗ್ರೆಸಿವ್ ಇನ್ವೆಸ್ಟಿಂಗ್ (ಹೆಚ್ಚು ರಿಸ್ಕ್ ತೆಗೆದುಕೊಂಡು ಹೂಡಿಕೆ): ಸಾಂಪ್ರದಾಯಿಕ ಹೂಡಿಕೆಗೆ ತದ್ವಿರುದ್ಧ ಹೂಡಿಕೆ ಇದು. ಇಂತಹ ಹೂಡಿಕೆಗಳಲ್ಲಿ ರಿಸ್ಕ್ ಹೆಚ್ಚಿಗೆ ಇರುತ್ತದೆ. ಈ ಬಗೆಯಲ್ಲಿ ಹೂಡಿಕೆ ಮಾಡುವವರು ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಕಮಾಡಿಟಿಗಳಲ್ಲಿ ಹೆಚ್ಚು ತೊಡಗಿಸುತ್ತಾರೆ. ಅಗ್ರೆಸಿವ್ ಇನ್ವೆಸ್ಟಿಂಗ್ ಮಾಡುವವರು ಶೇ 70ರಷ್ಟರಿಂದ ಶೇ 80ರಷ್ಟು ಹಣವನ್ನು ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಉಳಿದ ಹಣವನ್ನು ಎಫ್.ಡಿ., ಬಾಂಡ್, ಡಿಬೆಂಚರ್‌ಗಳಲ್ಲಿ ತೊಡಗಿಸಬಹುದು.

ಗೂಳಿ ಹಿಡಿತದಲ್ಲಿ ಷೇರುಪೇಟೆ

ಸತತ ಎರಡು ವಾರಗಳ ಕುಸಿತ ಕಂಡಿದ್ದ ಸೂಚ್ಯಂಕಗಳು ಜುಲೈ 16ಕ್ಕೆ ಕೊನೆಗೊಂಡ ವಾರದಲ್ಲಿ ಪುಟಿದೆದ್ದಿವೆ. ಷೇರುಪೇಟೆಯಲ್ಲಿ ಗೂಳಿ ಓಟ ಚುರುಕಾಗಿದೆ. 53,140 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಮತ್ತು 15,923 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ವಾರದ ಅವಧಿಯಲ್ಲಿ ಶೇ 1.5ರಷ್ಟು ಗಳಿಕೆ ಕಂಡಿವೆ.

ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಶೇ 1.7ರಷ್ಟು ಹೆಚ್ಚಳ ಕಂಡಿದ್ದರೆ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 4.2ರಷ್ಟು ಜಿಗಿದಿದೆ. ಮಾಹಿತಿ ತಂತ್ರಜ್ಞಾನ ಕಂಪನಿಗಳ ತ್ರೈಮಾಸಿಕ ಫಲಿತಾಂಶದಲ್ಲಿ ಉತ್ತಮ ಸಾಧನೆ, ಕೋವಿಡ್ ಪ್ರಕರಣಗಳು ಹೆಚ್ಚಾದರೂ
ಜಾಗತಿಕವಾಗಿ ಗಂಭೀರ ಸಮಸ್ಯೆಗಳು ಕಂಡುಬರದಿರುವುದು, ಸರಣಿ ಐಪಿಒಗಳು (ಆರಂಭಿಕ ಸಾರ್ವಜನಿಕ ಹೂಡಿಕೆ) ನಡೆಯುತ್ತಿರುವುದು ಸೇರಿ ಹಲವು ಬೆಳವಣಿಗೆಗಳು ಸೂಚ್ಯಂಕಗಳ ಜಿಗಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ವಲಯ ಶೇ 8ರಷ್ಟು, ಮಾಹಿತಿ ತಂತ್ರಜ್ಞಾನ ಮತ್ತು ಮೂಲ ಸೌಕರ್ಯ
ತಲಾ ಶೇ 2ರಷ್ಟು, ನಿಫ್ಟಿ ಬ್ಯಾಂಕ್ ವಲಯ ಶೇ 2ರಷ್ಟು, ಫಾರ್ಮಾ ವಲಯ ಶೇ 2ರಷ್ಟು ಏರಿಕೆ ಕಂಡಿವೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ವಿಪ್ರೊ ಶೇ 9.9ರಷ್ಟು, ಎಲ್ಆ್ಯಂಡ್‌ಟಿ ಶೇ 7.9ರಷ್ಟು, ಅಲ್ಟ್ರಾಟೆಕ್ ಸಿಮೆಂಟ್ ಶೇ 6.1ರಷ್ಟು, ಟೆಕ್ ಮಹೀಂದ್ರ ಶೇ 4.9ರಷ್ಟು, ಗ್ರಾಸಿಮ್ ಶೇ 4.6ರಷ್ಟು, ಹಿಂಡಾಲ್ಕೋ ಶೇ 3.9ರಷ್ಟು, ಡಿವೀಸ್ ಲ್ಯಾಬ್ಸ್ ಶೇ 3.4ರಷ್ಟು, ಐಸಿಐಸಿಐ ಬ್ಯಾಂಕ್ ಶೇ 3.4ರಷ್ಟು ಗಳಿಕೆ ಕಂಡಿವೆ. ಅದಾನಿ ಪೋರ್ಟ್ಸ್ ಶೇ 5.6ರಷ್ಟು, ಐಷರ್ ಮೋಟರ್ಸ್ ಶೇ 3.5ರಷ್ಟು, ಬಿಪಿಸಿಎಲ್ ಶೇ 1.9ರಷ್ಟು, ಮಾರುತಿ ಸುಜುಕಿ ಶೇ 1.6ರಷ್ಟು, ಬಜಾಜ್ ಆಟೊ ಶೇ 1.6ರಷ್ಟು, ಟೈಟನ್ ಶೇ 1.5ರಷ್ಟು, ಹಿಂದೂಸ್ಥಾನ್ ಯುನಿಲಿವರ್ ಶೇ 1.4ರಷ್ಟು ಮತ್ತು ಇಂಡಿಯನ್ ಆಯಿಲ್ ಶೇ 1.1ರಷ್ಟು ಕುಸಿದಿವೆ.

ತ್ರೈಮಾಸಿಕ ಫಲಿತಾಂಶಗಳು: ಈ ವಾರ ಎಚ್‌ಸಿಎಲ್ ಟೆಕ್, ಬಜಾಜ್ ಫಿನ್‌ಸರ್ವ್, ಐಸಿಐಸಿಐ ಬ್ಯಾಂಕ್, ಸಿಯೇಟ್ ಲಿ., ಹ್ಯಾವೆಲ್ಸ್, ಹ್ಯಾತ್ ವೇ, ಬಯೋಕಾನ್, ಫೆಡರಲ್ ಬ್ಯಾಂಕ್, ಪವರ್ ಇಂಡಿಯಾ, ಯೆಸ್ ಬ್ಯಾಂಕ್, ರಿಲಯನ್ಸ್, ಐಟಿಸಿ, ಎಸಿಸಿ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಮುನ್ನೋಟ: ಸತತ ನಾಲ್ಕೈದು ವಾರಗಳ ಕಾಲ ಹೆಚ್ಚು ಚಲನೆ ತೋರದೆ ಇದ್ದ ಸೂಚ್ಯಂಕಗಳು ಈಗ ಪೇಟೆಯಲ್ಲಿ ಮತ್ತೊಂದು ಹಂತದ ಓಟ ಮುಂದುವರಿಯಲಿದೆ ಎನ್ನುವ ಸೂಚನೆ ನೀಡುತ್ತಿವೆ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳ ಷೇರುಗಳು ಹೆಚ್ಚು ಲಾಭ ನೀಡುತ್ತಿದ್ದರೂ ಹೂಡಿಕೆಯಲ್ಲಿ ಎಚ್ಚರಿಕೆಯ ತೀರ್ಮಾನ ಅಗತ್ಯ. ಮತ್ತೊಂದು ವಿಚಾರವೆಂದರೆ, ಷೇರು ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಣ್ಣ ಹೂಡಿಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಸರಣಿ ಐಪಿಒಗಳು ನಡೆಯುತ್ತಿರುವುದರಿಂದ ಹೊಸದಾಗಿ ಡಿ-ಮ್ಯಾಟ್ ಖಾತೆ ತೆರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಬ್ರೋಕರೇಜ್ (ದಲ್ಲಾಳಿ) ಸಂಸ್ಥೆಗಳ ಷೇರುಗಳ ಬೆಲೆಯಲ್ಲಿ ಕಳೆದ ವಾರ ಕಂಡುಬಂದಿರುವ ಗಣನೀಯ ಏರಿಕೆ ಷೇರು ಮಾರುಕಟ್ಟೆಯಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಹೆಚ್ಚಲಿದೆ ಎನ್ನುವ ಮುನ್ಸೂಚನೆ ನೀಡುತ್ತಿದೆ.

 

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು