ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆನ್ಸೆಕ್ಸ್‌, ನಿಫ್ಟಿ ಸಾರ್ವಕಾಲಿಕ ದಾಖಲೆ

Published 7 ಜೂನ್ 2024, 15:51 IST
Last Updated 7 ಜೂನ್ 2024, 15:51 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ 2024–25ನೇ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆಯನ್ನು ಪರಿಷ್ಕರಿಸಿದ್ದರಿಂದ ಷೇರು ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಶೇ 2ರಷ್ಟಕ್ಕೂ ಹೆಚ್ಚು ಏರಿಕೆ ಕಂಡಿವೆ. 

ಸೆನ್ಸೆಕ್ಸ್‌ 1,618 ಅಂಶ ಏರಿಕೆ (ಶೇ 2.16ರಷ್ಟು) ಕಂಡು 76,693 ಅಂಶಕ್ಕೆ ಮುಟ್ಟಿದೆ. ವಹಿವಾಟಿನ ಒಂದು ಸಂದರ್ಭದಲ್ಲಿ 1,720 ಅಂಶ ಏರಿಕೆ ಕಂಡಿತ್ತು.

ನಿಫ್ಟಿ 468 ಅಂಶ ಏರಿಕೆಯಾಗಿ, 23,290 ಅಂಶಗಳಲ್ಲಿ ಸ್ಥಿರಗೊಂಡಿತು. ತನ್ನ ಹಿಂದಿನ ಸಾರ್ವಕಾಲಿಕ ದಾಖಲೆ ಮಟ್ಟಕ್ಕಿಂತ 18.5 ಅಂಶದಷ್ಟು ಏರಿಕೆಯಾಗಿದೆ. ವಹಿವಾಟಿನ ಒಂದು ಸಂದರ್ಭದಲ್ಲಿ 489 ಅಂಶ ಏರಿಕೆ ಕಂಡಿತ್ತು.

ಐ.ಟಿ, ಬ್ಯಾಂಕ್‌, ರಿಯಾಲ್ಟಿ ಹಾಗೂ ಆಟೊ ವಲಯದ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿದೆ.

ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಶೇ 2.18ರಷ್ಟು ಹಾಗೂ ಮಿಡ್‌ ಕ್ಯಾಪ್‌ ಸೂಚ್ಯಂಕ ಶೇ 1.28ರಷ್ಟು ಏರಿಕೆ ಕಂಡಿದೆ. ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯವು ₹421 ಲಕ್ಷ ಕೋಟಿಗೆ ತಲುಪಿದೆ.

‘ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಅಧಿಕಾರ ಹಿಡಿಯಲಿದ್ದು, ಹೂಡಿಕೆದಾರರ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಆರ್‌ಬಿಐ ಕೂಡ ಜಿಡಿ‍ಪಿ ಬೆಳವಣಿಗೆಯನ್ನು ಪರಿಷ್ಕರಿಸಿದೆ. ಹಾಗಾಗಿ, ದೇಶೀಯ ಷೇರುಪೇಟೆಗಳು ಹೊಸ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಸೆನ್ಸೆಕ್ಸ್‌ ಗುಚ್ಛದಲ್ಲಿನ ಎಲ್ಲಾ ಕಂಪನಿಗಳ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. ಮಹೀಂದ್ರ ಆ್ಯಂಡ್ ಮಹೀಂದ್ರ, ವಿಪ್ರೊ, ಟೆಕ್‌ ಮಹೀಂದ್ರ, ಭಾರ್ತಿ ಏರ್‌ಟೆಲ್‌, ಇನ್ಫೊಸಿಸ್‌ ಮತ್ತು ಟಾಟಾ ಸ್ಟೀಲ್‌ ಹೆಚ್ಚಿನ ಲಾಭ ಕಂಡಿವೆ. 

ಸೋಲ್‌, ಶಾಂಘೈ ಮಾರುಕಟ್ಟೆ ಏರಿಕೆ ದಾಖಲಿಸಿದರೆ, ಟೋಕಿಯೊ, ಹಾಂಗ್‌ಕಾಂಗ್‌ ಹಾಗೂ ಯುರೋಪಿಯನ್‌ ಮಾರುಕಟ್ಟೆಗಳು ಕುಸಿತ ಕಂಡಿವೆ.

ಗುರುವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹6,867 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT