ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ರಾಜನಂತೆ ಮೆರೆದ ‘ಬರ್ಗರ್‌ ಕಿಂಗ್‌’

ನಾಲ್ಕೇ ದಿನಗಳಲ್ಲಿ ಶೇ 265 ಗಳಿಕೆ ಕಂಡಿದ್ದ ‘ಬರ್ಗರ್‌ ಕಿಂಗ್‌ ಇಂಡಿಯಾ’ ಐಪಿಒ
Last Updated 20 ಡಿಸೆಂಬರ್ 2020, 10:36 IST
ಅಕ್ಷರ ಗಾತ್ರ
ADVERTISEMENT
""

‘ಬರ್ಗರ್‌ ಕಿಂಗ್‌ ಇಂಡಿಯಾ’ ಕಂಪನಿಯು ಷೇರುಪೇಟೆಗೆ ಪದಾರ್ಪಣೆ ಮಾಡಿದ ನಾಲ್ಕು ದಿನಗಳಲ್ಲೇ ಶೇ ಐಪಿಒ ಬೆಲೆ ಹೋಲಿಸಿದರೆ ಶೇ 265ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಅಲ್ಪಾವಧಿಯಲ್ಲಿ ಹೂಡಿಕೆದಾರರಿಗೆ ಭಾರಿ ಲಾಭವನ್ನು ತಂದುಕೊಟ್ಟ ಬರ್ಗರ್‌ ಕಿಂಗ್‌ ಇಂಡಿಯಾ ಕಂಪನಿಯ ಇಣುಕು ನೋಟ ಇಲ್ಲಿದೆ...

***

ಕಳೆದ ವಾರವಷ್ಟೇ ಪದಾರ್ಪಣೆ ಮಾಡಿರುವ ‘ಬರ್ಗರ್‌ ಕಿಂಗ್‌ ಇಂಡಿಯಾ’ ಕಂಪನಿಯು ಷೇರುಪೇಟೆಯಲ್ಲಿ ಮೊದಲ ಮೂರು ದಿನಗಳ ಕಾಲ ರಾಜನಂತೆ ಮೆರೆಯಿತು. ಪ್ರತಿ ದಿನ ಶೇ 20ರಷ್ಟು ಗಳಿಕೆ ಕಾಣುತ್ತಿದ್ದ ‘ಬರ್ಗರ್‌ ಕಿಂಗ್‌’ ಕೇವಲ ನಾಲ್ಕು ದಿನಗಳಲ್ಲಿ ತನ್ನ ಮೌಲ್ಯವನ್ನು ಶೇ 265ರಷ್ಟು ಹೆಚ್ಚಿಸಿಕೊಂಡು ಹೂಡಿಕೆದಾರರ ಸಂಪತ್ತನ್ನು ದ್ವಿಗುಣಗೊಳಿಸಿತ್ತು. ಆದರೆ, ಇದೀಗ ಎರಡು ದಿನಗಳಿಂದ ಷೇರಿನ ಮೌಲ್ಯವು ತಲಾ ಶೇ 10ರಷ್ಟು ಕುಸಿಯತೊಡಗಿದ್ದು, ಹೂಡಿಕೆದಾರರಿಗೆ ‘ಹಾವು–ಏಣಿ’ ಆಟವಾಡಿದ ಅನುಭವ ನೀಡುತ್ತಿದೆ.

‘ಬರ್ಗರ್‌ ಕಿಂಗ್‌ ಇಂಡಿಯಾ’ ಕಂಪನಿಯು ತನ್ನ ವ್ಯಾಪಾರ ವಿಸ್ತರಣೆಗೆ ಅಗತ್ಯ ಬಂಡವಾಳ ಸಂಗ್ರಹಿಸಲು ‘ಆರಂಭಿಕ ಸಾರ್ವಜನಿಕ ಹೂಡಿಕೆ’ಗೆ (ಐಪಿಒ) ಅವಕಾಶ ಕಲ್ಪಿಸಿತ್ತು. ₹ 10 ಮುಖಬೆಲೆಯ ಷೇರಿನ ಐಪಿಒನ ಆರಂಭಿಕ ಬೆಲೆಯನ್ನು ₹ 59ರಿಂದ ₹ 60ರ ನಡುವೆ ನಿಗದಿಗೊಳಿಸಿತ್ತು. 450 ಕೋಟಿ ಹೊಸ ಷೇರುಗಳನ್ನು ಬಿಡುಗಡೆ ಮಾಡಿತ್ತು. ಜೊತೆಗೆ 6 ಕೋಟಿ ಷೇರು ಮಾರಾಟ ಮಾಡಲು ಮುಂದಾಗಿತ್ತು. ಡಿಸೆಂಬರ್‌ 2ರಿಂದ 4ರವರೆಗೆ ಐಪಿಒಗೆ ಬಿಡ್‌ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ದೀರ್ಘಾವಧಿಯಲ್ಲಿ ಈ ಕಂಪನಿಯು ಲಾಭ ಗಳಿಸಬಹುದು ಎಂಬ ಲೆಕ್ಕಾಚಾರದಿಂದ ಐಪಿಒ ಖರೀದಿಗೆ ಭಾರಿ ಪ್ರಮಾಣದಲ್ಲಿ ಹೂಡಿಕೆದಾರರು ಮುಗಿಬಿದ್ದಿದ್ದರು. ಐಪಿಒನ ನಿಗದಿತ ಸದಸ್ಯತ್ವಕ್ಕಿಂತ 157 ಪಟ್ಟು ಹೆಚ್ಚು ಜನರಿಂದ ಬೇಡಿಕೆ ಬಂದಿತ್ತು. ಹೀಗಾಗಿ ಷೇರುಪೇಟೆಗೆ ಬರುವ ಮೊದಲೇ ಈ ಕಂಪನಿಯ ಷೇರು ಸದ್ದು ಮಾಡುತ್ತಿತ್ತು.

ಮೊದಲ ದಿನವೇ ಶೇ 131 ಗಳಿಕೆ: ಬರ್ಗರ್‌ ಕಿಂಗ್‌ ಇಂಡಿಯಾ ಕಂಪನಿಯ ಐಪಿಒ ಷೇರು ಮಾರುಕಟ್ಟೆಗೆ ಸೇರ್ಪಡೆಯಾಗುವ ದಿನ (ಲಿಸ್ಟಿಂಗ್‌ ಡೇ) ಡಿಸೆಂಬರ್‌ 14ಕ್ಕೆ ನಿಗದಿಯಾಗಿತ್ತು. ಈ ಕಂಪನಿಯ ಷೇರು ಮುಂಬೈ ಷೇರುಪೇಟೆ (ಬಿಎಸ್‌ಇ)ಯಲ್ಲಿ ₹ 115.35 ಹಾಗೂ ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ)ಯಲ್ಲಿ ₹ 112.50 ಬೆಲೆಯಲ್ಲಿ ಮೊದಲ ದಿನದ ವಹಿವಾಟು ಆರಂಭಿಸಿತ್ತು. ₹ 60 ಬೆಲೆಯಲ್ಲಿ ಹಂಚಿಕೆಯಾಗಿದ್ದ ಕಂಪನಿಯ ಐಪಿಒ ಷೇರು, ಬಿಎಸ್‌ಇಯಲ್ಲಿ ₹55.35 (ಶೇ 92.25) ಹಾಗೂ ಎನ್‌ಎಸ್‌ಇಯಲ್ಲಿ ₹ 52.50 (ಶೇ 87.50) ಬೆಲೆ ಏರಿಕೆಯೊಂದಿಗೆ ಮೊದಲ ದಿನದ ವಹಿವಾಟು ಆರಂಭಿಸಿತ್ತು.

ಐಪಿಒದಲ್ಲಿ ಷೇರು ಸಿಗದ ಹಲವು ಬಿಡಿ ಹೂಡಿಕೆದಾರರು ಅಂದು ಬೆಳಿಗ್ಗೆ ಷೇರು ಖರೀದಿಗೆ ಮುಗಿ ಬಿದ್ದಿದ್ದರು. ಹೀಗಾಗಿ ಕೆಲ ಹೊತ್ತಿನಲ್ಲೇ ಆರಂಭಿಕ ಬೆಲೆಯಿಂದ ಶೇ 20ರಷ್ಟು ಏರಿಕೆ ಕಂಡ ಷೇರು, ಬಿಎಸ್‌ಇಯಲ್ಲಿ ₹ 138.40 ಹಾಗೂ ಎನ್‌ಎಸ್‌ಇಯಲ್ಲಿ ₹ 135ಕ್ಕೆ ತಲುಪುವ ಮೂಲಕ ಷೇರು ಖರೀದಿಯ ನಿರ್ಬಂಧ ಸ್ಥಿತಿಗೆ (ಸೀಲಿಂಗ್‌) ತಲುಪಿತ್ತು. ಐಪಿಒ ಬೆಲೆಗೆ ಹೋಲಿಸಿದರೆ ಮೊದಲ ದಿನವೂ ಬಿಎಸ್‌ಇಯಲ್ಲಿ ₹ 78.70 (ಶೇ 130.68) ಹಾಗೂ ಎನ್‌ಎಸ್‌ಇಯಲ್ಲಿ ₹ 75 (ಶೇ 125) ಬೆಲೆ ಹೆಚ್ಚಾಗುವ ಮೂಲಕ ಹೂಡಿಕೆದಾರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ಬೇಡಿಕೆ ಹೆಚ್ಚಿದ ಪರಿಣಾಮ ಡಿಸೆಂಬರ್‌ 15 ಹಾಗೂ 16ರಂದು ಬೆಳಿಗ್ಗೆಯ ಅವಧಿಯಲ್ಲೇ ಆರಂಭಿಕ ಬೆಲೆಯಿಂದ ಶೇ 20ರಷ್ಟು ಏರಿಕೆ ಕಂಡು ಷೇರು ಖರೀದಿಯ ನಿರ್ಬಂಧ ಸ್ಥಿತಿಗೆ ತಲುಪಿತ್ತು. ಹೀಗಾಗಿ ಹೂಡಿಕೆದಾರರ ಹಿತ ಕಾಪಾಡುವ ಸಲುವಾಗಿ ಷೇರು ವಿನಿಮಯ ಕೇಂದ್ರವು ಈ ಕಂಪನಿಯ ಷೇರಿನ ವಹಿವಾಟಿನ ಮೇಲಿನ ‘ಸೀಲಿಂಗ್‌’ ಪ್ರಮಾಣವನ್ನು ಶೇ 20ರಿಂದ ಶೇ 10ಕ್ಕೆ ಕಡಿತಗೊಳಿಸಿತು.

ಡಿಸೆಂಬರ್‌ 17ರಂದು ಬೆಳಿಗ್ಗೆ ಕೂಡ ಶೇ 10ರಷ್ಟು ಬೆಲೆ ಏರಿಕೆ ಕಂಡಿದ್ದರಿಂದ ಖರೀದಿಯ ನಿರ್ಬಂಧ ಸ್ಥಿತಿಗೆ ಬಂದು ತಲುಪಿತ್ತು. ಷೇರಿನ ಬೆಲೆಯು ಬಿಎಸ್‌ಇಯಲ್ಲಿ ₹ 219.15 ಹಾಗೂ ಎನ್‌ಎಸ್‌ಇಯಲ್ಲಿ ₹ 213.80ಕ್ಕೆ ತಲುಪಿತ್ತು. ಐಪಿಒ ಬೆಲೆಗೆ ಹೋಲಿಸಿದರೆ ಷೇರಿನ ಮೌಲ್ಯವು ಬಿಎಸ್‌ಇಯಲ್ಲಿ ₹ 159.15 (ಶೇ 265.25) ಹಾಗೂ ಎನ್‌ಎಸ್‌ಇಯಲ್ಲಿ ₹ 153.80 (ಶೇ 256.33)ರಷ್ಟು ವೃದ್ಧಿಯಾಗಿತ್ತು.

ಕಂಪನಿಯ ಷೇರಿನ ಮೌಲ್ಯವು ಕೇವಲ ನಾಲ್ಕು ದಿನಗಳಲ್ಲಿ ಮೂರು ಪಟ್ಟು ಹೆಚ್ಚಾಗಿದ್ದರಿಂದ ಹೂಡಿಕೆದಾರರು ಲಾಭ ಗಳಿಕೆಗೆ ಮುಂದಾದರು. ‘ಖರೀದಿ ಟ್ರೆಂಡ್‌’ ಇದ್ದುದು ಕೆಲವೇ ಹೊತ್ತಿನಲ್ಲಿ ‘ಮಾರಾಟ ಟ್ರೆಂಡ್‌’ ಆಗಿ ಪರಿವರ್ತನೆಗೊಂಡಿತು. ನೋಡ ನೋಡುತ್ತಲೇ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಷೇರು ಮಾರಾಟ ಮಾಡಲು ಮುಂದಾಗಿದ್ದರಿಂದ ಶೇ 10ರಷ್ಟು ಬೆಲೆ ಕುಸಿತ ಕಂಡಿತು. ವಾರಾಂತ್ಯವಾದ ಡಿಸೆಂಬರ್‌ 18ರಂದು ಸಹ ಮಾರಾಟ ಒತ್ತಡದಿಂದಾಗಿ ಕಂಪನಿಯ ಷೇರಿನ ಬೆಲೆ ಬೆಳಿಗ್ಗೆಯೇ ಶೇ 10ರಷ್ಟು ಕುಸಿತ ಕಂಡು ಮಾರಾಟ ನಿರ್ಬಂಧ ಸ್ಥಿತಿಗೆ ತಲುಪಿತು.

ಐಪಿಒ ಷೇರುಪೇಟೆಗೆ ಬಂದ ಐದು ದಿನಗಳ ವಹಿವಾಟು ಗಮನಿಸಿದಾಗ ಮೊದಲ ಮೂರು ದಿನಗಳ ಕಾಲ ಪ್ರತಿ ದಿನವೂ ಶೇ 20ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದ ‘ಬರ್ಗರ್‌ ಕಿಂಗ್‌ ಇಂಡಿಯಾ’ ಕಂಪನಿಯ ಷೇರು, ಮುಂದಿನ ಎರಡು ದಿನಗಳ ಕಾಲ ಪ್ರತಿ ದಿನ ಶೇ 10ರಷ್ಟು ಕುಸಿತ ಕಂಡಿದೆ. ಐದು ದಿನಗಳ ವಹಿವಾಟಿನಲ್ಲಿ ಒಟ್ಟು ಶೇ 40ರಷ್ಟು ಬೆಲೆ ಹೆಚ್ಚಾಗಿದೆ. ಹೂಡಿಕೆದಾರರು ಲಾಭ ಗಳಿಕೆಗೆ ಮುಂದಾದರೆ ಮಾರಾಟ ಒತ್ತಡ ಇನ್ನಷ್ಟು ದಿನ ಮುಂದುವರಿಯಲಿದ್ದು, ಷೇರಿನ ಮೌಲ್ಯ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ.

ವ್ಯಾಪಾರ ವಿಸ್ತರಣೆ: ಕ್ವಿಕ್‌ ಸರ್ವಿಸ್‌ ರೆಸ್ಟೋರಂಟ್‌ (ಕ್ಯೂಎಸ್‌ಆರ್‌) ಚೈನ್‌ ವಲಯದಲ್ಲಿ ‘ಬರ್ಗರ್‌ ಕಿಂಗ್‌ ಇಂಡಿಯಾ’ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕಂಪನಿಗಳಲ್ಲಿ ಒಂದಾಗಿದೆ. 2014ರಲ್ಲಿ ದೇಶದಲ್ಲಿ ಮೊದಲ ರೆಸ್ಟೋರಂಟ್‌ ತೆರೆದಿದ್ದ ಈ ಕಂಪನಿಯು, ಈಗ 51 ನಗರಗಳಲ್ಲಿ ಒಟ್ಟು 268 ರೆಸ್ಟೋರಂಟ್‌ಗಳನ್ನು ನಡೆಸುತ್ತಿದೆ. 2039ರ ಡಿಸೆಂಬರ್‌ 31ರವರೆಗೂ ಭಾರತದಲ್ಲಿ ಫ್ರಾಂಚೈಸಿ ಪಡೆದಿರುವ ಬರ್ಗರ್‌ ಕಿಂಗ್‌ ಇಂಡಿಯಾ ಕಂಪನಿಯು, 2026ರ ಡಿಸೆಂಬರ್‌ 31ರೊಳಗೆ 700 ರೆಸ್ಟೋರಂಟ್‌ಗಳನ್ನು ತೆರೆಯುವ ಗುರಿ ಹೊಂದಿದೆ.

2020ರ ಮಾರ್ಚ್‌ಗೆ ಅಂತ್ಯಗೊಂಡಂತೆ ಬರ್ಗರ್‌ ಕಿಂಗ್‌ ಕಂಪನಿಗೆ ₹ 841.2 ಕೋಟಿ ಆದಾಯ ಬಂದಿದ್ದು, ವಾರ್ಷಿಕ ₹ 76.60 ಕೋಟಿ ನಷ್ಟ ಅನುಭವಿಸಿದೆ. ‘ಬರ್ಗರ್‌ ಕಿಂಗ್‌’ನ ಪ್ರತಿಸ್ಪರ್ಧಿ ಕಂಪನಿಯಾದ ‘ವೆಸ್ಟ್‌ಲೈಫ್‌ ಡೆವಲಪ್‌ಮೆಂಟ್‌’ ಇದೇ ಅವಧಿಯಲ್ಲಿ ₹ 1547.8 ಕೋಟಿ ಆದಾಯದೊಂದಿಗೆ ₹ 33.60 ಕೋಟಿ ಲಾಭ ಗಳಿಸಿದೆ.

ಭಾರತದಲ್ಲಿರುವ 15 ವರ್ಷದಿಂದ 35 ವರ್ಷದೊಳಗಿನ ಯುವ ಜನತೆಯನ್ನು ಗುರಿಯಾಗಿಸಿಕೊಂಡು ತನ್ನ ವ್ಯಾಪಾರವನ್ನು ವಿಸ್ತರಿಸಲು ಬರ್ಗರ್‌ ಕಿಂಗ್‌ ಕಂಪನಿಯು ಉದ್ದೇಶಿಸಿದೆ. ಕೋವಿಡ್‌ ಕಾರಣಕ್ಕೆ ಹೊರಗಿನ ಆಹಾರ ಸೇವನೆ ಪ್ರಮಾಣ ತಗ್ಗಿರುವುದು ಹಾಗೂ ಬದಲಾದ ಆಹಾರ ಪದ್ಧತಿಯ ಕಾರಣಕ್ಕೆ ಕ್ವಿಕ್ ಸರ್ವಿಸ್‌ ರೆಸ್ಟೋರಂಟ್‌ಗಳ ವಹಿವಾಟು ತೀವ್ರವಾಗಿ ಕುಸಿದಿತ್ತು. ದೇಶದಲ್ಲಿ ಕೋವಿಡ್‌ ಪ್ರಮಾಣ ಇಳಿಮುಖ ಕಾಣುತ್ತಿದೆ. ಆರ್ಥಿಕತೆ ಚೇತರಿಸಿಕೊಂಡು ಐಟಿ ಸೇರಿ ಹಲವು ಕಂಪನಿಗಳು ಸಹಜ ಸ್ಥಿತಿಯತ್ತ ಮರಳಿದರೆ ಮತ್ತೆ ಕ್ಯೂಎಸ್‌ಆರ್‌ಗಳ ವಹಿವಾಟು ಮತ್ತೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ.

ಬರ್ಗರ್‌ ಕಿಂಗ್‌ ಇಂಡಿಯಾ ಷೇರಿನ ಬೆಲೆ ಇನ್ನಷ್ಟು ಇಳಿಕೆಯಾಗುವವರೆಗೂ ಕಾಯ್ದು, ಹಂತ–ಹಂತವಾಗಿ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಈ ಕಂಪನಿಯ ಷೇರು ಹೂಡಿಕೆದಾರರಿಗೆ ಉತ್ತಮ ಲಾಭ ತಂದುಕೊಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT