ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಖರ್ಚಿನ ‘ಇಟಿಎಫ್‌’

Last Updated 15 ಮಾರ್ಚ್ 2021, 19:30 IST
ಅಕ್ಷರ ಗಾತ್ರ

‘ಈಕ್ವಿಟಿ ಮ್ಯೂಚುವಲ್ ಫಂಡ್ಸ್ ಹೂಡಿಕೆದಾರರ ಎರಡು ದೊಡ್ಡ ಶತ್ರುಗಳೆಂದರೆ ಹೂಡಿಕೆಗೆ ಮಾಡಬೇಕಿರುವ ವೆಚ್ಚಗಳು ಹಾಗೂ ನಡವಳಿಕೆ’ ಎಂದು ಹೇಳಿದ್ದಾನೆಮೊದಲ ಇಂಡೆಕ್ಸ್ ಮ್ಯೂಚುವಲ್ ಫಂಡ್ ಜನಕ ಜಾನ್ ಸಿ. ಬೋಗಲೆ.

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಬಹಳಷ್ಟು ಜನ ಆ ಫಂಡ್‌ ಎಷ್ಟು ಆದಾಯ ತಂದುಕೊಟ್ಟಿದೆ ಎಂಬುದರ ಬಗ್ಗೆ ಮಾತ್ರ ಗಮನ ಕೊಡುತ್ತಾರೆ. ಆದರೆ, ಮ್ಯೂಚುವಲ್ ಫಂಡ್ ಕಂಪನಿಗಳು ತಮ್ಮ ಮೇಲೆ ಹೇರುವ ವೆಚ್ಚಗಳ ಬಗ್ಗೆ ಗಮನ ಕೊಡುವುದೇ ಇಲ್ಲ.

ಒಂದು ಅಂದಾಜಿನ ಪ್ರಕಾರ ವರುಷಕ್ಕೆ ಶೇಕಡ 1ರಷ್ಟು ವೆಚ್ಚ ಉಳಿತಾಯ ಮಾಡಿದರೆ, 30 ವರುಷಗಳಲ್ಲಿ ಹೂಡಿಕೆಯ ಮೇಲೆ ಶೇ 26ರಷ್ಟು ಉಳಿಸಬಹುದು. ಇಂತಹ ಸಣ್ಣ ಸಣ್ಣ ಸಂಗತಿಗಳು ಹೂಡಿಕೆ ಮಾಡುವಾಗ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶಗಳಾಗುತ್ತವೆ.

ಇಟಿಎಫ್ ಎಂದರೇನು?

ನಮ್ಮಲ್ಲಿ ಹಲವರಿಗೆ ಮ್ಯೂಚುವಲ್ ಫಂಡ್ಸ್ ಬಗ್ಗೆ ಗೊತ್ತಿದೆ. ಇಟಿಎಫ್ (ಎಕ್ಸ್‌ಚೇಂಜ್‌ ಟ್ರೇಡೆಡ್ ಫಂಡ್‌) ಕೂಡ ಒಂದು ಬಗೆಯ ಮ್ಯೂಚುವಲ್ ಫಂಡ್‌. ಇಟಿಎಫ್ ಮೂಲಕ ನಮಗೆ ಷೇರು ಮಾರುಕಟ್ಟೆಯ ನಿರ್ದಿಷ್ಟ ಸೂಚ್ಯಂಕದಲ್ಲಿನ, ಎಲ್ಲ ಕಂಪನಿಗಳ ಷೇರುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ, ನಿಫ್ಟಿ ಅಥವಾ ಸೆನ್ಸೆಕ್ಸ್ ತರಹದ ಸೂಚ್ಯಂಕಗಳಲ್ಲಿ ಇರುವ ಕಂಪನಿಗಳ ಷೇರುಗಳನ್ನು, ಆಯಾ ಕಂಪನಿಗಳ ಷೇರು ಮೌಲ್ಯದ ಅನುಪಾತಕ್ಕೆ ತಕ್ಕಂತೆ ಇಟಿಎಫ್‌ ಮೂಲಕ ಖರೀದಿಸಬಹುದು.

ಇಲ್ಲಿ ಫಂಡ್ ಮ್ಯಾನೇಜರ್‌ಗೆ ಯಾವುದೇ ಪಾತ್ರ ಇರುವುದಿಲ್ಲ. ಉದಾಹರಣೆಗೆ, ನೀವು ನಿಫ್ಟಿ ಇಟಿಎಫ್‌ನಲ್ಲಿ ಹೂಡಿಕೆ ಮಾಡಿದರೆ ಮ್ಯೂಚುವಲ್ ಫಂಡ್ ಕಂಪನಿಗಳು ನಿಮ್ಮ ಹೂಡಿಕೆಯನ್ನು ನಿಫ್ಟಿ 50 ಷೇರುಗಳಲ್ಲಿ, ಸೂಚ್ಯಂಕದಲ್ಲಿ ಆಯಾ ಷೇರುಗಳ ಪ್ರಮಾಣಕ್ಕೆ ತಕ್ಕಂತೆ ತೊಡಗಿಸುತ್ತವೆ. ಫಂಡ್‌ ಮ್ಯಾನೇಜರ್‌ಗಳ ಪಾತ್ರ ಇಲ್ಲಿ ತೀರಾ ನಗಣ್ಯವಾಗಿರುವ ಕಾರಣ, ಹೂಡಿಕೆಗಳ ಮೇಲಿನ ವೆಚ್ಚ ಕೂಡ ಇಲ್ಲಿ ಬಹಳ ಕಡಿಮೆ. ಹಾಗಾಗಿ, ಇಟಿಎಫ್‌ಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುವ ಹೂಡಿಕೆ ಉತ್ಪನ್ನಗಳು ಎಂಬ ಹೆಗ್ಗಳಿಕೆಯೂ ಇದೆ.

ಆ್ಯಕ್ಟಿವ್ ಮ್ಯೂಚುವಲ್ ಫಂಡ್‌ಗಳಲ್ಲಿನ ನಮ್ಮ ಹೂಡಿಕೆಯ ಹಣವನ್ನು ಫಂಡ್‌ ಮ್ಯಾನೇಜರ್‌ಗಳು ತಮ್ಮ ಅನುಭವದ ಆಧಾರದ ಮೇಲೆ ಹಾಗೂ ಮಾರುಕಟ್ಟೆ ಯಾವ ರೀತಿ ಮುಂದೆ ಸಾಗಬಹುದು ಎಂಬುದನ್ನು ಆಧರಿಸಿ ಎಲ್ಲಿ ತೊಡಗಿಸಬೇಕು ಎಂಬುದನ್ನು ತೀರ್ಮಾನಿಸುತ್ತಾರೆ. ಆದರೆ ಇಟಿಎಫ್‌ಗಳಲ್ಲಿ ಅಂತಹ ಸ್ವಾತಂತ್ರ್ಯವು ಫಂಡ್ ಕಂಪನಿಗಳಿಗೆ ಇರುವುದಿಲ್ಲ.

ಮ್ಯೂಚುವಲ್‌ ಫಂಡ್‌ಗಳನ್ನು ನಿರ್ವಹಿಸುವ ಮ್ಯಾನೇಜರ್‌ಗಳು ಎಷ್ಟು ದಿನಗಳವರೆಗೆ ಹೂಡಿಕೆದಾರರಿಗೆ, ನಿರ್ದಿಷ್ಟ ಸೂಚ್ಯಂಕ ತಂದುಕೊಡುವ ಲಾಭಕ್ಕಿಂತ ಹೆಚ್ಚಿನ ಲಾಭವನ್ನು ತಂದುಕೊಡುತ್ತಾರೆ ಎಂದು ಹೇಳಲು ಆಗದು. ಮ್ಯೂಚುವಲ್‌ ಫಂಡ್‌ಗಳಲ್ಲಿ ಹೆಚ್ಚು ವೆಚ್ಚವೂ ಇರುತ್ತದೆ. ಜೊತೆಗೆ ಒಂದಿಷ್ಟು ಅನಿಶ್ಚಿತತೆ ಕೂಡ ಇರುತ್ತದೆ. ಹಾಗಾಗಿ, ಈಚಿನ ದಿನಗಳಲ್ಲಿ ಭಾರತದಲ್ಲಿ ಪ್ಯಾಸಿವ್‌ ಫಂಡ್‌ಗಳು – ಅಥವಾ ಇಟಿಎಫ್ – ಮತ್ತು ಇಂಡೆಕ್ಸ್ ಫಂಡ್‌ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ.

ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ನೀವು ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿರಬೇಕು. ಹಾಗೆಯೇ, ಇಟಿಎಫ್‌ ಹೂಡಿಕೆಗೆ ಡಿಮ್ಯಾಟ್ ಖಾತೆ ಅವಶ್ಯಕ.

ಅನುಕೂಲಗಳು

*ಸರಳ: ಇಟಿಎಫ್‌ಗಳು ಒಂದು ಸೂಚ್ಯಂಕವನ್ನು ತಮ್ಮ ಮಾನದಂಡವಾಗಿ ಇಟ್ಟುಕೊಂಡು, ಆ ಸೂಚ್ಯಂಕದಲ್ಲಿನ ಷೇರುಗಳಲ್ಲಿ ಅವುಗಳ ಅನುಪಾತಕ್ಕೆ ಅನುಗುಣವಾಗಿ ಹೂಡಿಕೆ ಮಾಡುವದರಿಂದ, ನಿಮಗೆ ಫಂಡ್ ಬಗ್ಗೆ ಯಾವುದೇ ಅನುಭವ ಇಲ್ಲದಿದ್ದರೂ ಸರಳವಾಗಿ ಹೂಡಿಕೆ ಮಾಡಬಹುದು.

*ವೆಚ್ಚ ಕಡಿಮೆ: ಮೊದಲೇ ಹೇಳಿದಂತೆ, ಇಟಿಎಫ್ ಫಂಡ್‌ಗಳ ಮೂಲಕ ಮಾಡುವ ಹೂಡಿಕೆಗಳಿಗೆ ಪಾವತಿ ಮಾಡಬೇಕಿರುವ ವೆಚ್ಚ ತುಂಬಾ ಕಡಿಮೆ. ಉದಾಹರಣೆಗೆ, ಎಚ್‌ಡಿಎಫ್‌ಸಿ ಸೆನ್ಸೆಕ್ಸ್ ಇಟಿಎಫ್ ವೆಚ್ಚ ಶೇ 0.05. ಆದರೆ, ಬ್ಲ್ಯೂಚಿಪ್ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ಒಂದು ಜನಪ್ರಿಯ ಮ್ಯೂಚುವಲ್‌ ಫಂಡ್‌ನ ವೆಚ್ಚ ಶೇ 0.5ರಷ್ಟು. ಎಚ್‌ಡಿಎಫ್‌ಸಿ ಇಟಿಎಫ್‌ನಲ್ಲಿ ಹೂಡಿಕೆ ಮಾಡುವ ಮೂಲಕ ವಾರ್ಷಿಕ ಶೇ 0.45ರಷ್ಟು ಹಣ ಉಳಿಸಬಹುದು.

*ಫಂಡ್ ಮ್ಯಾನೇಜರ್‌ ಮೇಲಿನ ಅವಲಂಬನೆ ಇಲ್ಲ: ಇಟಿಎಫ್ ಮ್ಯೂಚುವಲ್ ಫಂಡ್‌ಗಳಲ್ಲಿ ಫಂಡ್ ಮ್ಯಾನೇಜರ್‌ಗೆ ಹೆಚ್ಚಿನ ಪಾತ್ರ ಇರುವುದಿಲ್ಲ. ಆದ್ದರಿಂದ ಫಂಡ್ ಮ್ಯಾನೇಜರ್ ಬದಲಾವಣೆ ಆದರೂ ಹೂಡಿಕೆಗೆ ಯಾವುದೇ ತೊಂದರೆ ಇಲ್ಲ.

*ಸರಳವಾಗಿ ಖರೀದಿ, ಮಾರಾಟ: ಡಿಮ್ಯಾಟ್ ಖಾತೆ ಮುಖಾಂತರ ಇಟಿಎಫ್‌ ಖರೀದಿಯನ್ನು ನೀವು ಷೇರು ಖರೀದಿ ಮಾಡಿದಷ್ಟೇ ಸುಲಭವಾಗಿ ಮಾಡಬಹುದು. ಮಾರುವುದು ಕೂಡ ಷೇರು ಮಾರಿದಷ್ಟೇ ಸುಲಭ.

ಅನಾನುಕೂಲಗಳೂ ಇವೆ

*ಡಿಮ್ಯಾಟ್ ಖಾತೆ ಅಗತ್ಯ: ಇಟಿಎಫ್‌ ಹೂಡಿಕೆಗೆ ಡಿಮ್ಯಾಟ್ ಖಾತೆ ಹೊಂದುವುದು ಕಡ್ಡಾಯ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್‌ ಖಾತೆಯ ಅವಶ್ಯಕತೆ ಇಲ್ಲ. ಆದ್ದರಿಂದ, ಇಟಿಎಫ್‌ನಲ್ಲಿ ಹೂಡಿಕೆ ಮಾಡುವವರು ಡಿಮ್ಯಾಟ್ ಖಾತೆ ನಿರ್ವಹಣೆಯ ಖರ್ಚನ್ನೂ ನಿಭಾಯಿಸಬೇಕು.

*ಖರೀದಿ ಮತ್ತು ಮಾರಾಟ: ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಮಾರಾಟ ಮಾಡಬೇಕಾದರೆ, ಆ ಮಾರಾಟವು ಮ್ಯೂಚುವಲ್ ಫಂಡ್ ಕಂಪನಿಗಳ ಜೊತೆ ನಡೆಯುತ್ತದೆ. ಆದರೆ, ಇಟಿಎಫ್ ಖರೀದಿ ಹಾಗೂ ಮಾರಾಟ ಆ ರೀತಿಯದ್ದಲ್ಲ. ಷೇರನ್ನು ಖರೀದಿ ಹಾಗೂ ಮಾರಾಟ ಮಾಡುವ ಹಾಗೆ ಷೇರು ವಿನಿಮಯ ಕೇಂದ್ರದ ಮೂಲಕ ಮಾಡಬೇಕಾಗುತ್ತದೆ. ಇಲ್ಲಿ ಖರೀದಿ ಹಾಗೂ ಮಾರಾಟ ದರ ನಿರ್ಧಾರ ಆಗುವುದು ಬೇಡಿಕೆ ಮತ್ತು ಪೂರೈಕೆ ಆಧಾರದ ಮೇಲೆ. ಹಾಗಾಗಿ, ಕೆಲವು ಸಂದರ್ಭಗಳಲ್ಲಿ ಹೂಡಿಕೆದಾರರಿಗೆ ನಿರೀಕ್ಷಿತ ಲಾಭ ಸಿಗದಿರಬಹುದು.

*ವ್ಯಾಪಾರದ ಪ್ರಮಾಣ: ಭಾರತದಲ್ಲಿ ಇಟಿಎಫ್‌ಗಳು ಇನ್ನೂ ಪೂರ್ತಿ ಪ್ರಮಾಣದಲ್ಲಿ ಜನಪ್ರಿಯತೆ ಪಡೆದಿಲ್ಲ. ಹಾಗಾಗಿ, ಇಟಿಎಫ್‌ಗಳಲ್ಲಿ ವಹಿವಾಟು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲ. ಹೀಗಾಗಿ ಇಟಿಎಫ್‌ನಲ್ಲಿ ಹೂಡಿಕೆ ಹಿಂತೆಗೆಯುವವರಿಗೆ, ಫಂಡ್‌ ಖರೀದಿ ಮಾಡುವವರು ಸರಿಯಾದ ಸಮಯಕ್ಕೆ ಸಿಗದಿರುವ ಸಾಧ್ಯತೆಯೂ ಇದೆ.

*ಮಾರುಕಟ್ಟೆ ಕುಸಿದಾಗ: ಮ್ಯೂಚುವಲ್ ಫಂಡ್‌ ಮ್ಯಾನೇಜರ್‌ಗಳು ಮಾರುಕಟ್ಟೆ ಕುಸಿತದ ಲಕ್ಷಣ ಕಂಡುಬಂದರೆ ಅಥವಾ ಯಾವುದೇ ಕಂಪನಿಯ ಷೇರು ಮೌಲ್ಯ ಬಹಳ ಕುಸಿಯಲಾರಂಭಿಸಿದರೆ, ಆದರದಿಂದ ಬೇಗನೆ ಹೊರಗೆ ಬಂದು, ಹೂಡಿಕೆ ಹಣವನ್ನು ನಗದು ರೂಪದಲ್ಲಿಯೇ ಇರಿಸಿಕೊಳ್ಳುತ್ತಾರೆ. ಹೂಡಿಕೆದಾರರಿಗೆ ಹೆಚ್ಚು ನಷ್ಟವಾಗದಂತೆ ನೋಡಿಕೊಳ್ಳುವ ಕೆಲಸವನ್ನು ಮ್ಯಾನೇಜರ್‌ಗಳು ಮಾಡುತ್ತಾರೆ. ಆದರೆ, ಇಟಿಎಫ್‌ನಲ್ಲಿ ಫಂಡ್ ಮ್ಯಾನೇಜರ್‌ಗಳಿಗೆ ಈ ಬಗೆಯ ಸ್ವಾತಂತ್ರ್ಯ ಇಲ್ಲದಿರುವ ಕಾರಣ, ಮಾರುಕಟ್ಟೆ ಕುಸಿಯಲಾರಂಭಿಸಿದರೆ, ಇಟಿಎಫ್‌ ಬೆಲೆ ಕೂಡ ಅದೇ ವೇಗದಲ್ಲಿ ಕುಸಿಯುತ್ತದೆ.

(ಲೇಖಕ: ಹಣಕಾಸು ಸಲಹೆಗಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT