ಷೇರುಪೇಟೆಗೆ ಹೆಚ್ಚಿದ ದೇಶಿ ಹೂಡಿಕೆ

ಬೆಂಗಳೂರು: ದೇಶದ ಷೇರುಪೇಟೆಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಹಿಂದಕ್ಕೆ ಪಡೆಯುವುದನ್ನು ಮುಂದುವರಿಸಿದ್ದಾರೆ. ಇದೇ ವೇಳೆ ದೇಶಿ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಷೇರುಗಳನ್ನು ಖರೀದಿಸುವ ಮೂಲಕ ವಹಿವಾಟು ಹೆಚ್ಚಿನ ಕುಸಿತ ಕಾಣದಂತೆ ತಡೆಯುತ್ತಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಜನವರಿ 2 ರಿಂದ 13ರವರೆಗೆ ನಡೆದಿರುವ ವಹಿವಾಟಿನಲ್ಲಿ ₹17,418 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದೇ ಅವಧಿಯಲ್ಲಿ ದೇಶಿ ಸಾಂಸ್ಥಿಕ ಹೂಡಿಕೆದಾರರು ₹12,700 ಕೋಟಿಗೂ ಅಧಿಕ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಜಾಗತಿಕ ಆರ್ಥಿಕತೆಯು ಮಂದಗತಿಯ ಬೆಳವಣಿಗೆ ಕಾಣುವ ಆತಂಕವು ವಿವಿಧ ಕೇಂದ್ರೀಯ ಬ್ಯಾಂಕ್‌ಗಳಿಂದ ಬಡ್ಡಿದರ ಹೆಚ್ಚಳ ಮಾಡಲು ಕಾರಣವಾಗುತ್ತಿದೆ. ಇದರಿಂದಾಗಿ ಷೇರುಪೇಟೆಗಳಲ್ಲಿ ವಿದೇಶಿ ಹೂಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ವಿದೇಶಿ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಮುಂದಾಗಿರುವುದು ಸಹ ಬಂಡವಾಳ ಹಿಂತೆಗೆತಕ್ಕೆ ಒಂದು ಕಾರಣ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಜನವರಿ ತಿಂಗಳ ಆರಂಭದಿಂದಲೂ ಎಫ್‌ಐಐ ಹೊರಹರಿವು ಮುಂದುವರಿದಿದೆ. ಹೂಡಿಕೆದಾರರು ಭಾರತದಲ್ಲಿ ಷೇರುಗಳನ್ನು ಮಾರಾಟ ಮಾಡುತ್ತಿದ್ದು ಆ ಹಣವನ್ನು ಮಾರುಕಟ್ಟೆ ಮೌಲ್ಯವು ಕಡಿಮೆ ಇರುವ ಚೀನಾ, ಹಾಂಗ್‌ಕಾಂಗ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇನ್ನೂ ಕೆಲವು ದಿನಗಳವರೆಗೆ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಅವರು ಪ್ರಜಾವಾಣಿಗೆ ತಿಳಿಸಿದರು.
ದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ರಿಟೇಲ್ ಹೂಡಿಕೆದಾರರು ಷೇರುಗಳ ಖರೀದಿಗೆ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಅಲ್ಪಾವಧಿಗೆ ಮಾರುಕಟ್ಟೆಯು ದುರ್ಬಲ ಆಗಿರುವಂತೆ ಕಂಡುಬಂದರೂ ಎಫ್‌ಐಐ ಮಾರಾಟದಿಂದ ಹೆಚ್ಚಿನ ಕುಸಿತ ಆಗುವುದನ್ನು ದೇಶಿ ಹೂಡಿಕೆಯು ತಪ್ಪಿಸುತ್ತಿದೆ ಎಂದರು. ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇ 5.72ಕ್ಕೆ ಇಳಿಕೆ ಕಂಡಿದ್ದು, ಕೈಗಾರಿಕಾ ಉತ್ಪಾದನೆಯು ನವೆಂಬರ್‌ನಲ್ಲಿ ಶೇ 7.1ಕ್ಕೆ ಏರಿಕೆ ಆಗಿದೆ. ಈ ಸಕಾರಾತ್ಮಕ ಅಂಶಗಳು ಷೇರುಪೇಟೆಯಲ್ಲಿ ಗೂಳಿ ಓಟಕ್ಕೆ ಉತ್ತೇಜನ ನೀಡುವ ನಿರೀಕ್ಷೆ ಇದೆ ಎಂದು ಹೇಳಿದರು.
ಐ.ಟಿ. ವಲಯದಲ್ಲಿ ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಪ್ರಕಟವಾಗಿದೆ. ಹೀಗಾಗಿ ಹೂಡಿಕೆದಾರರು ಹಣಕಾಸು ವಲಯದ ಕಂಪನಿಗಳ ಆರ್ಥಿಕ ಸಾಧನೆಯ ಬಗ್ಗೆ ಗಮನ ಹರಿಸಲಿದ್ದಾರೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು.
ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆಯ ಬಂಡವಾಳ ಮೌಲ್ಯ ₹1.73 ಲಕ್ಷ ಕೋಟಿ ಇಳಿಕೆ ಕಂಡು, ₹281.26 ಲಕ್ಷ ಕೋಟಿಗೆ ತಲುಪಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.