ಭಾನುವಾರ, ಜೂನ್ 20, 2021
28 °C
ಕೋವಿಡ್‌ ಪರಿಣಾಮ

ಜುಲೈನಲ್ಲಿ ಚಿನ್ನದ ಇಟಿಎಫ್‌ ಹೂಡಿಕೆ ಶೇ 86ರಷ್ಟು ಹೆಚ್ಚಳ; ₹921 ಕೋಟಿ ಒಳಹರಿವು

ಪಿಟಿಐ Updated:

ಅಕ್ಷರ ಗಾತ್ರ : | |

ಚಿನ್ನದ ಸಂಗ್ರಹ–ಸಾಂದರ್ಭಿಕ ಚಿತ್ರ

ನವದೆಹಲಿ: ಎಕ್ಸ್‌ಚೇಂಜ್‌ ಟ್ರೇಡೆಡ್ ಫಂಡ್‌ (ಇಟಿಎಫ್‌) ರೂಪದಲ್ಲಿ ಚಿನ್ನದ ಮೇಲಿನ ಹೂಡಿಕೆ ಜುಲೈನಲ್ಲಿ ₹921 ಕೋಟಿ ಒಳಹರಿವು ಕಂಡಿದೆ.

ಬಂಗಾರದ ಬೆಲೆ ಏರಿಕೆ ಹಾದಿಯಲ್ಲಿರುವುದರಿಂದ ಹೊಸ ಹೂಡಿಕೆದಾರರು ಚಿನ್ನದ ಇಟಿಎಫ್‌ನಲ್ಲಿ ಅಧಿಕ ಹೂಡಿಕೆ ಮಾಡುತ್ತಿದ್ದು, ಜೂನ್‌ಗೆ ಹೋಲಿಸಿದರೆ ಜುಲೈನಲ್ಲಿ ಹೂಡಿಕೆ ಶೇ 86ರಷ್ಟು ಹೆಚ್ಚಳವಾಗಿದೆ. ಜಾಗತಿಕವಾಗಿ ಕೋವಿಡ್‌ ವ್ಯಾಪಕವಾಗುತ್ತಿದ್ದಂತೆ ಹೂಡಿಕೆಯ ಸ್ವರೂಪದಲ್ಲಿಯೂ ಬದಲಾವಣೆಯಾಗಿದೆ. ಉತ್ತರ ಅಮೆರಿಕದ ರಾಷ್ಟ್ರಗಳು ಮತ್ತು ಐರೋಪ್ಯ ರಾಷ್ಟ್ರಗಳು ಸಹ ಇಟಿಎಫ್‌ ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿವೆ.

ಜುಲೈನಲ್ಲಿ ಚಿನ್ನದ ಇಟಿಎಫ್‌ನಲ್ಲಿ ₹ 921 ಕೋಟಿ ಹೂಡಿಕೆಯಾಗಿದೆ. ಜೂನ್‌ನಲ್ಲಿ ₹ 494 ಕೋಟಿ ಹೂಡಿಕೆ ಆಗಿತ್ತು. ಇದಕ್ಕೆ ಹೋಲಿಸಿದರೆ ಜುಲೈನಲ್ಲಿ ಆಗಿರುವ ಹೂಡಿಕೆಯಲ್ಲಿ ಶೇಕಡ 86ರಷ್ಟು ಹೆಚ್ಚಳ ಕಂಡುಬಂದಿದೆ.

2020ರ ಜನವರಿ–ಜುಲೈ ಅವಧಿಯಲ್ಲಿ ಒಟ್ಟಾರೆ ಹೂಡಿಕೆ ₹ 4,452 ಕೋಟಿಗಳಷ್ಟಾಗಿದೆ ಎಂದು ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ. ಮಾರ್ಚ್‌ನಲ್ಲಿ ಲಾಭ ಗಳಿಕೆಯ ವಹಿವಾಟು ನಡೆದಿದ್ದರಿಂದ ಹೂಡಿಕೆದಾರರು ₹ 195 ಕೋಟಿ ಹಿಂದಕ್ಕೆ ಪಡೆದಿದ್ದರು.

‘ಡಾಲರ್‌ ಮೌಲ್ಯವು ಇಳಿಮುಖ ಆಗಿರುವುದರಿಂದ ಚಿನ್ನದ ದರ ಗರಿಷ್ಠ ಮಟ್ಟದಲ್ಲಿಯೇ ಇರಲಿದೆ. ಇದರ ಜತೆಗೆ ಅಮೆರಿಕ–ಚೀನಾ ಬಿಕ್ಕಟ್ಟು ಹಾಗೂ ಕೋವಿಡ್‌–19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಚಿನ್ನದಲ್ಲಿ ಹೂಡಿಕೆ ಹೆಚ್ಚಾಗುವಂತೆ ಮಾಡುತ್ತಿವೆ’ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ವ್ಯವಸ್ಥಾಪಕ ಸಂಶೋಧಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

‘ಕೋವಿಡ್‌–19 ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಆರ್ಥಿಕ ಬೆಳವಣಿಯು ಮಂದಗತಿಯಲ್ಲಿದ್ದು, ಮಾರುಕಟ್ಟೆಯ ಮೇಲೆ ಪರಿಣಾಮ ಉಂಟುಮಾಡುತ್ತಿದೆ. ಹೀಗಾಗಿ ಬಹಳಷ್ಟು ಹೂಡಿಕೆದಾರರು ತಮ್ಮ ಹಣವನ್ನು ಚಿನ್ನದಲ್ಲಿ ತೊಡಗಿಸುತ್ತಿದ್ದಾರೆ. ಚಿನ್ನದ ದರವು ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಹೊಸ ಹೂಡಿಕೆದಾರರು ಇದರತ್ತ ಆಕರ್ಷಿತರಾಗುತ್ತಿದ್ದಾರೆ’ ಎಂದು ಗ್ರೋವ್‌ ಕಂಪನಿಯ ಸಹ ಸ್ಥಾಪಕ ಹರ್ಷ್‌ ಜೈನ್‌ ತಿಳಿಸಿದ್ದಾರೆ.

ನಿರ್ವಹಣಾ ಸಂಪತ್ತು

₹ 12,941 ಕೋಟಿ - ಜುಲೈ ಅಂತ್ಯಕ್ಕೆ

₹ 10,857 ಕೋಟಿ- ಜೂನ್‌ ಅಂತ್ಯಕ್ಕೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು