ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಾಟದ ಒತ್ತಡದಲ್ಲಿ ಇನ್ಫೊಸಿಸ್‌ ಷೇರು: ಶೇ 5ರಷ್ಟು ಕುಸಿತ

Last Updated 15 ಏಪ್ರಿಲ್ 2021, 8:04 IST
ಅಕ್ಷರ ಗಾತ್ರ

ನವದೆಹಲಿ: ಇನ್ಫೊಸಿಸ್‌ ಷೇರು ಗುರುವಾರ ಮಾರಾಟ ಒತ್ತಡಕ್ಕೆ ಸಿಲುಕಿದ್ದು, ವಹಿವಾಟು ಆರಂಭದಲ್ಲಿಯೇ ಷೇರು ಬೆಲೆ ಶೇ 5ರಷ್ಟು ಕುಸಿದಿದೆ. ನಿನ್ನೆಯಷ್ಟೇ ಕಂಪನಿಯು ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದ ಲಾಭಾಂಶವನ್ನು ಪ್ರಕಟಿಸಿತ್ತು.

ಹೂಡಿಕೆದಾರರ ನಿರೀಕ್ಷೆಗೆ ತಕ್ಕಂತೆ ಲಾಭಾಂಶ ಗಳಿಕೆ ದಾಖಲಾಗದಿರುವುದು ಷೇರು ಮಾರಾಟಕ್ಕೆ ಕಾರಣ ಎನ್ನಲಾಗಿದೆ. ಮುಂಬೈ ಷೇರುಪೇಟೆಯಲ್ಲಿ ಪ್ರತಿ ಷೇರು ಶೇ 5.59ರಷ್ಟು ಕಡಿಮೆಯಾಗಿ ₹1,320.35ರಲ್ಲಿ ವಹಿವಾಟು ನಡೆಸಿದೆ. ರಾಷ್ಟ್ರೀಯ ಷೇರುಪೇಟೆಯಲ್ಲಿ ಶೇ 5.52ರಷ್ಟು ಕಡಿಮೆಯಾಗಿ ಷೇರು ಬೆಲೆ ₹1,320 ತಲುಪಿದೆ.

ಮಧ್ಯಾಹ್ನ 1ರ ವರೆಗೂ ಸೆನ್ಸೆಕ್ಸ್‌ 299.30 ಅಂಶ ಕಡಿಮೆಯಾಗಿ 48,244.76 ಅಂಶಗಳಲ್ಲಿ ವಹಿವಾಟು ನಡೆಸಿದೆ, ನಿಫ್ಟಿ 77.85 ಅಂಶ ಇಳಿಕೆಯಾಗಿ 14,426.95 ಅಂಶಗಳಲ್ಲಿ ವಹಿವಾಟು ಮುಂದುವರಿಸಿದೆ.

ಬೆಂಗಳೂರು ಮೂಲದ ಐಟಿ ಕಂಪನಿ ಇನ್ಫೊಸಿಸ್, ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡ 17.5ರಷ್ಟು ನಿವ್ವಳ ಲಾಭಾಂಶ ಹೆಚ್ಚಳ ದಾಖಲಿಸಿದೆ. ಒಟ್ಟು ₹ 5,076 ಕೋಟಿ ಲಾಭ ಗಳಿಸಿರುವ ಕಂಪನಿಯು ಪ್ರತಿ ಷೇರಿಗೆ ₹ 1,750ರಂತೆ ಗರಿಷ್ಠ ₹ 9,200 ಕೋಟಿ ಮೌಲ್ಯದ ಷೇರುಗಳನ್ನು ಮರು ಖರೀದಿ ಮಾಡುವುದಾಗಿ ಘೋಷಿಸಿದೆ.

2020–21 ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ ₹ 15ರಂತೆ, ₹ 6,400 ಕೋಟಿಯನ್ನು ಅಂತಿಮ ಡಿವಿಡೆಂಡ್ ರೂಪದಲ್ಲಿ ಷೇರುದಾರರಿಗೆ ಮರಳಿಸುವ ಶಿಫಾರಸನ್ನು ಕಂಪನಿಯ ಆಡಳಿತ ಮಂಡಳಿಯು ಮಾಡಿದೆ.

2020ರ ಮಾರ್ಚ್‌ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು ₹ 4,321 ಕೋಟಿ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT