ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ವಿಮೆ: ಈ ವಿಚಾರ ನೆನಪಿರಲಿ

Last Updated 3 ಅಕ್ಟೋಬರ್ 2021, 16:56 IST
ಅಕ್ಷರ ಗಾತ್ರ

ಜೀವ ವಿಮೆ ಎನ್ನುವುದು ಕುಟುಂಬಕ್ಕೆ ಆರ್ಥಿಕ ಭದ್ರತೆ ಕೊಡುವ ಸಾಧನ. ಆದರೆ ಜೀವ ವಿಮೆ ಖರೀದಿಸುವಾಗ ಅನೇಕರು ಸರಿಯಾದ ಮಾಹಿತಿ ಸಿಗದೆ ಸೂಕ್ತವಲ್ಲದ ವಿಮೆ ಖರೀದಿಸುತ್ತಾರೆ. ಬನ್ನಿ, ಜೀವ ವಿಮೆ ಕೊಳ್ಳುವಾಗ ಪ್ರಮುಖವಾಗಿ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಮೂರು ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ.

ಯಾವ ಜೀವ ವಿಮೆಯಿಂದ ಅನುಕೂಲ?: ಸಾಂಪ್ರದಾಯಿಕ ವಿಮಾ ಪಾಲಿಸಿಗಳಲ್ಲಿ ಅಂದರೆ ಎಂಡೋಮೆಂಟ್, ಮನಿಬ್ಯಾಕ್ ಪಾಲಿಸಿಗಳಲ್ಲಿ ಹೆಚ್ಚಿಗೆ ವಿಮಾ ಕವರೇಜ್ ಇರುವುದಿಲ್ಲ, ನೀವು ಕಟ್ಟುವ ಪ್ರೀಮಿಯಂ ಮೇಲೆ ಹೆಚ್ಚಿಗೆ ಲಾಭವೂ ಬರುವುದಿಲ್ಲ. ಉದಾಹರಣೆಗೆ, ನೀವು ₹ 10 ಲಕ್ಷ ವಿಮಾ ಕವರೇಜ್ ನೀಡುವ ಪಾಲಿಸಿಯನ್ನು ಪಡೆಯಬೇಕಾದರೆ 15 ವರ್ಷಗಳ ಅವಧಿಗೆ ವಾರ್ಷಿಕ ಸುಮಾರು ₹ 50 ಸಾವಿರ ಪಾವತಿಸಬೇಕು. ಇವತ್ತಿನ ಖರ್ಚು ಮತ್ತು ಭವಿಷ್ಯದ ಹಣದುಬ್ಬರ ಲೆಕ್ಕ ಹಾಕಿದಾಗ ₹ 10 ಲಕ್ಷ ಕವರೇಜ್ ಯಾವುದಕ್ಕೂ ಸಾಲುವುದಿಲ್ಲ. ಅಷ್ಟೇ ಅಲ್ಲ ನೀವು ವಿಮೆಯಲ್ಲಿ 10 ವರ್ಷ ಅಥವಾ 15 ವರ್ಷ ಕಟ್ಟುವ ಪ್ರೀಮಿಯಂಗೆ ಶೇಕಡ 3ರಿಂದ ಶೇ 4ರಷ್ಟು ಬಡ್ಡಿ ಲಾಭ ಮಾತ್ರ ಸಿಗುತ್ತದೆ.

ಇತ್ತ ಕವರೇಜ್ ಕೂಡ ಹೆಚ್ಚಿಗೆ ಇಲ್ಲ, ಅತ್ತ ಬಡ್ಡಿ ಲಾಭವೂ ಇಲ್ಲ ಎನ್ನುವ ವಿಮೆಯಿಂದ ಪ್ರಯೋಜನವಾದರೂ ಏನು? ಜೀವ ವಿಮೆಯ ವಿಚಾರ ಬಂದಾಗ ಅವಧಿ ವಿಮೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ವ್ಯಕ್ತಿಯ ವಾರ್ಷಿಕ ಆದಾಯದ 10 ಪಟ್ಟು ಹೆಚ್ಚು ಅವಧಿ ವಿಮೆ ಕವರೇಜ್ ಇರಬೇಕು. ಅಂದರೆ, ಉದಾಹರಣೆಗೆ ನಿಮ್ಮ ವಾರ್ಷಿಕ ಆದಾಯ ₹ 10 ಲಕ್ಷ ಇದ್ದರೆ ನೀವು ಕನಿಷ್ಠ ₹ 1 ಕೋಟಿ ಕವರೇಜ್ ಇರುವ ಅವಧಿ ವಿಮೆ ಖರೀದಿಸುವುದು ಒಳಿತು.

₹ 1 ಕೋಟಿ ಮೊತ್ತದ ಕವರೇಜ್ ಇರುವ ಅವಧಿ ವಿಮೆ ಪಡೆಯಲು 30 ವರ್ಷ ವಯಸ್ಸಿನ ವ್ಯಕ್ತಿಗೆ ಸುಮಾರು ₹ 10 ಸಾವಿರದಿಂದ ₹ 12 ಸಾವಿರ ವಾರ್ಷಿಕ ಪ್ರೀಮಿಯಂ ಇರುತ್ತದೆ. ಅವಧಿ ವಿಮೆ ಪಡೆದಿರುವ ವ್ಯಕ್ತಿ ಅಕಾಲಿಕ ಮರಣಕ್ಕೆ ತುತ್ತಾದರೆ ಆತನ ಕುಟುಂಬಕ್ಕೆ ₹ 1 ಕೋಟಿ ವಿಮೆ ಮೊತ್ತ ಸಿಗುತ್ತದೆ. ಇದು ಅತ್ಯಂತ ಅಗ್ಗ ಮತ್ತು ಸುರಕ್ಷಿತ ಜೀವ ವಿಮೆ. ಆನ್‌ಲೈನ್ ಮೂಲಕ ಖರೀದಿಸಿದರೆ ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಒಳ್ಳೆಯ ವಿಮಾ ಪಾಲಿಗೆ ನಿಮಗೆ ಸಿಗುತ್ತದೆ.

ವಿಮಾದಾರರ ಪಾಲಿನ ರಕ್ಷಕ ಸೆಕ್ಷನ್ 45: ಜೀವ ವಿಮೆ ಪಾಲಿಸಿ ಖರೀದಿಸುವಾಗ, ವಿಮಾ ಕಂಪನಿಗಳು ಸಂಕಷ್ಟ ಕಾಲದಲ್ಲಿ ಕ್ಲೇಮ್ ನಿಜಕ್ಕೂ ನೀಡುತ್ತವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಜೀವ ವಿಮೆ, ಅದರಲ್ಲೂ ಅವಧಿ ವಿಮೆ ಇದ್ದಲ್ಲಿ, ಕ್ಲೇಮ್ ಮೊತ್ತ ದೊಡ್ಡ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಸಹಜವಾಗಿಯೇ ವಿಮಾ ಕಂಪನಿಗಳು ಕ್ಲೇಮ್ ನೀಡುತ್ತವೆಯೇ ಎಂಬ ಅನುಮಾನ ಜನರಲ್ಲಿ ಮೂಡುತ್ತದೆ. ಇದಕ್ಕೆ ಉತ್ತರ ವಿಮಾ ಕಾಯ್ದೆಯ ಸೆಕ್ಷನ್ 45.

ನಿಮ್ಮ ವಿಮೆ ಬಾಂಡ್‌ನ ಕೊನೆಯಲ್ಲಿ 1938ರ ವಿಮಾ ಕಾಯ್ದೆಯ ಬಗ್ಗೆ ಉಲ್ಲೇಖವಿರುತ್ತದೆ. ವಿಮೆ ಪಡೆದಿರುವ ಮತ್ತು ಪಡೆಯುವ ಪ್ರತಿ ವ್ಯಕ್ತಿಗೂ ಈ ಬಗ್ಗೆ ತಿಳಿದಿರಲೇಬೇಕು. ವಿಮಾ ಕಾಯ್ದೆಯ ಸೆಕ್ಷನ್ 45ರ ಪ್ರಕಾರ, ಪಾಲಿಸಿ ನೀಡಿದ ದಿನದಿಂದ ಮೂರು ವರ್ಷಗಳ ಬಳಿಕ ವಿಮಾ ಕಂಪನಿ ಯಾವುದೇ ಕಾರಣ ನೀಡಿ ಕ್ಲೇಮ್ ನಿರಾಕರಿಸುವಂತಿಲ್ಲ.

ಎಂಡಬ್ಲ್ಯೂಪಿ ಕಾಯ್ದೆ ಅಡಿಯಲ್ಲಿ ಅವಧಿ ವಿಮೆ: ಒಂದು ಅವಧಿ ವಿಮೆ ತೆಗೆದುಕೊಂಡರೆ ಸಾಕು, ಜೀವಕ್ಕೆ ಏನಾದರೂ ತೊಂದರೆ ಆದರೂ ಮಡದಿ, ಮಕ್ಕಳ ಭವಿಷ್ಯ ಸುಭದ್ರವಾಗಿರುತ್ತದೆ ಎಂದು ನಾವೆಲ್ಲರೂ ಭಾವಿಸುತ್ತೇವೆ. ಆದರೆ ವಾಸ್ತವದಲ್ಲಿ ವಿಮೆ ಖರೀದಿಸಿದ ಮಾತ್ರಕ್ಕೆ ನಿಮ್ಮ ಅನುಪಸ್ಥಿತಿಯಲ್ಲಿ ಕುಟುಂಬಕ್ಕೆ ವಿಮೆ ಹಣ ಸಿಕ್ಕಿಬಿಡುವುದಿಲ್ಲ. ಎಷ್ಟೋ ಸಂದರ್ಭಗಳಲ್ಲಿ ನಾಮಿನಿ ಹೆಸರಿಸಿದ್ದರೂ ವಿಮೆ ಹಣವು ಸಾಲ ಕೊಟ್ಟಿರುವವರು ಅಥವಾ ಸಂಬಂಧಿಕರ ಪಾಲಾಗುವ ಸಾಧ್ಯತೆ ಇರುತ್ತದೆ.

ಇಂತಹ ಪರಿಸ್ಥಿತಿಯನ್ನು ತಡೆಯುವ ಮತ್ತು ವಿವಾಹಿತ ಮಹಿಳೆಗೆ ವಿಮೆಯ ಪೂರ್ಣ ಹಣ ಸಿಗುವಂತೆ ಮಾಡುವ ಕಾಯ್ದೆ ವಿವಾಹಿತ ಮಹಿಳೆ ಆಸ್ತಿ (ಎಂಡಬ್ಲ್ಯೂಪಿ ಆ್ಯಕ್ಟ್) ಕಾಯ್ದೆ. ಅವಧಿ ವಿಮೆಯನ್ನು ಎಂಡಬ್ಲ್ಯೂಪಿ ಅಡಿಯಲ್ಲಿ ಪಡೆದುಕೊಂಡರೆ ಮಡದಿ, ಮಕ್ಕಳು ಅಥವಾ ಸೂಚಿತ ಅವಲಂಬಿತರಿಗೆ ಮಾತ್ರ ಕ್ಲೇಮ್ ಹಣ ಸಿಗುತ್ತದೆ. ಯಾವುದೇ ಸಾಲಗಾರರು, ಸಂಬಂಧಿಕರು ಈ ಇನ್ಶೂರೆನ್ಸ್ ಹಣದ ಮೇಲೆ ಹಕ್ಕು ಸಾಧಿಸುವಂತಿಲ್ಲ. ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ವಿಮೆಯಿಂದ ಬಂದಿರುವ ಹಣದಲ್ಲಿ ಸಾಲ ಪಾವತಿ ಮಾಡುವಂತೆ ಬ್ಯಾಂಕ್‌ಗಳೂ ಕೇಳುವಂತಿಲ್ಲ.

ಸತತ 5 ವಾರಗಳ ಗಳಿಕೆ ಬಳಿಕ ಈಗ ಇಳಿಕೆ!

ಸತತ ಐದು ವಾರಗಳ ಗಳಿಕೆಯ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಅಕ್ಟೋಬರ್ 1ಕ್ಕೆ ಕೊನೆಗೊಂಡ ವಾರದಲ್ಲಿ ಕುಸಿತ ಕಂಡಿವೆ. 58,765 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಮತ್ತು 17,532 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ವಾರದ ಅವಧಿಯಲ್ಲಿ ತಲಾ ಶೇ 2ರಷ್ಟು ಕುಸಿತ ಕಂಡಿವೆ. ಕಳೆದ ಐದು ತಿಂಗಳಲ್ಲಿ ವಾರದ ಅವಧಿಯಲ್ಲಾಗಿರುವ ಗರಿಷ್ಠ ಕುಸಿತ ಇದು.

ವಲಯವಾರು ಗಮನಿಸಿದಾಗ, ಮಿಡ್ ಕ್ಯಾಪ್ ಸೂಚ್ಯಂಕ ಶೇ 1ರಷ್ಟು ಗಳಿಕೆ ಕಂಡಿದ್ದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 6ರಷ್ಟು ಗಳಿಸಿಕೊಂಡಿದೆ. ಮತ್ತೊಂದೆಡೆ ಕಳೆದ ಎಂಟು ತಿಂಗಳಿಂದ ಏರುಗತಿಯಲ್ಲಿದ್ದ ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 6ರಷ್ಟು ತಗ್ಗಿದೆ.

ಗಳಿಕೆ–ಇಳಿಕೆ: ನಿಫ್ಟಿಯಲ್ಲಿ ಕೋಲ್ ಇಂಡಿಯಾ ಶೇ 14ರಷ್ಟು, ಎನ್‌ಟಿಪಿಸಿ ಶೇ 13ರಷ್ಟು, ಪವರ್ ಗ್ರಿಡ್ ಶೇ 9ರಷ್ಟು, ಐಒಸಿ ಶೇ 9ರಷ್ಟು ಮತ್ತು ಒಎನ್‌ಜಿಸಿ ಶೇ 7ರಷ್ಟು ಗಳಿಸಿವೆ. ಟೆಕ್ ಮಹೀಂದ್ರ ಶೇ 9ರಷ್ಟು, ಏರ್‌ಟೆಲ್ ಶೇ 9ರಷ್ಟು, ಏಷ‌್ಯನ್ ಪೇಂಟ್ಸ್ ಶೇ 8ರಷ್ಟು, ಬಜಾಜ್ ಫಿನ್‌ಸರ್ವ್ ಶೇ 7ರಷ್ಟು ಮತ್ತು ಎಚ್‌ಸಿಎಲ್ ಟೆಕ್ ಶೇ 6ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಜಾಗತಿಕವಾಗಿ ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ಬಡ್ಡಿ ದರವನ್ನು ತಗ್ಗಿಸಿದ ಪರಿಣಾಮವಾಗಿ ಅರ್ಥ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಾಗಿ ಷೇರುಪೇಟೆಯಲ್ಲಿ ಗೂಳಿ ಓಟ ಜೋರಾಗಿತ್ತು. ಇದೀಗ ಅಮೆರಿಕದ ಫೆಡರಲ್ ಬ್ಯಾಂಕ್ ಸೇರಿ ವಿವಿಧ ದೇಶಗಳ ಬ್ಯಾಂಕ್‌ಗಳು ನಿಧಾನವಾಗಿ ಬಡ್ಡಿ ದರ ಹೆಚ್ಚಿಸಲು ಮುಂದಾಗಿರುವ ಸೂಚನೆ ನೀಡಿರುವುದು ಮಾರುಕಟ್ಟೆಯಲ್ಲಿ ಒಂದಿಷ್ಟು ಹಿಂಜರಿಕೆ ಕಂಡುಬರಲು ಕಾರಣವಾಗಿದೆ. ಈ ನಡುವೆ ಎರಡನೆಯ ತ್ರೈಮಾಸಿಕ ಅವಧಿಯ ಫಲಿತಾಂಶಗಳ ಮೇಲೆ ಸಹ ಹೂಡಿಕೆದಾರರು ದೃಷ್ಟಿ ಹರಿಸಿದ್ದು ಕಂಪನಿಗಳ ಫಲಿತಾಂಶ ಸಕಾರಾತ್ಮಕವಾಗಿದೆಯೋ ನಕಾರಾತ್ಮಕವಾಗಿದೆಯೋ ಎನ್ನುವ ವಿಚಾರ ಸಹ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿದೆ. ಸದ್ಯದ ಮಟ್ಟಿಗೆ ಹೇಳುವುದಾದರೆ ಮಾರುಕಟ್ಟೆಯಲ್ಲಿ ಸ್ಥಿರತೆ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ., ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT