ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿಳಿತದ ಪೇಟೆಯಲ್ಲಿ ದೀರ್ಘಾವಧಿ ಹೂಡಿಕೆ

Last Updated 31 ಮಾರ್ಚ್ 2020, 20:00 IST
ಅಕ್ಷರ ಗಾತ್ರ
ADVERTISEMENT
""

ವಿಶ್ವದಾದ್ಯಂತ ಷೇರು ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ವಹಿವಾಟು ಕುಸಿಯುತ್ತಿದೆ. ಏಷ್ಯಾ, ಯುರೋಪ್‌ ಮತ್ತು ಅಮೆರಿಕದ ಷೇರುಪೇಟೆಗಳಲ್ಲಿಯೂ ಮಾರಾಟದ ಭರಾಟೆ ಜೋರಾಗಿ ಕಾಣಿಸುತ್ತಿದೆ. ಈ ಪರಿಯ ಅನಿರೀಕ್ಷಿತ ಬೆಳವಣಿಗೆಯು ದೇಶಿ ಷೇರುಪೇಟೆಗಳಲ್ಲಿಯೂ ಪ್ರತಿಫಲನಗೊಳ್ಳುತ್ತಿದೆ. ಷೇರು ಸೂಚ್ಯಂಕಗಳ ಈ ಪರಿಯ ಕುಸಿತದ ಜತೆಗೆ ಮುನ್ನೆಲೆಗೆ ಬಂದಿರುವ ಅನೇಕ ಸಂಗತಿಗಳು ಷೇರುಪೇಟೆಯ ಹೂಡಿಕೆದಾರರಲ್ಲಿ ಆತಂಕ ಮೂಡಿಸಿವೆ.

*ಕೊರೊನಾ ವೈರಸ್‌ ಹರಡುತ್ರಿರುವ ಭೀತಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಕಂಡು ಬಂದಿರುವ ಮಾರಾಟ ಒತ್ತಡ

*ಒಪೆಕ್‌ – ರಷ್ಯಾ ನಡುವಿನ ವ್ಯಾಪಾರ ಸಮರದಿಂದಾಗಿ ಕಚ್ಚಾ ತೈಲಬೆಲೆ ಕುಸಿತ

*ಯೆಸ್‌ ಬ್ಯಾಂಕ್‌ನ ರಕ್ಷಣೆ ಹಾಗೂ ಆರ್ಥಿಕತೆಯ ಮೇಲೆ ಅದು ಉಂಟುಮಾಡಿದ ಪರಿಣಾಮ

ಕೊರೊನಾ ವೈರಸ್‌ನ ಕರಿ ಛಾಯೆಯು ಜಗತ್ತಿನಾದ್ಯಂತ ತೀವ್ರ ಬಗೆಯ ಆತಂಕ, ಗೊಂದಲಗಳನ್ನು ಸೃಷ್ಟಿಸಿದೆ. ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿರುವುದು ಹಾಗೂ ಲಾಕ್‌ಡೌನ್‌ಗೆ ಒಳಗಾಗುತ್ತಿರುವ ದೇಶಗಳ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಈ ಸೋಂಕಿನಿಂದಾಗಿ ವಿಶ್ವದಾದ್ಯಂತ ಉಂಟಾಗಲಿರುವ ಆರ್ಥಿಕ ಹಾನಿಯು ವಹಿವಾಟುದಾರರ ನಿರೀಕ್ಷೆಗಿಂತ ತೀವ್ರವಾಗುವಂತೆ ಕಾಣಿಸುತ್ತಿದೆ.

ಸದ್ಯದ ಬೆಳವಣಿಗೆಗಳಿಂದ ದೇಶಿ ಷೇರುಪೇಟೆಗಳಲ್ಲಿಯೂ ಅಲ್ಪಾವಧಿಯಲ್ಲಿ ಆಗುವ ಹಾನಿಯು ತೀವ್ರ ಸ್ವರೂಪದ್ದಾಗಿರುತ್ತದೆ. ಆದರೆ, ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಯಾವ ಬಗೆಯ ಪರಿಣಾಮ ಉಂಟಾಗಲಿದೆ ಎಂಬುದರ ಮೇಲೆ ಷೇರುಪೇಟೆಯ ಭವಿಷ್ಯ ಅವಲಂಬಿಸಿದೆ. ದೇಶಿ ಆರ್ಥಿಕತೆಯು ಈಗಾಗಲೇ ಕುಂಠಿತ ರೀತಿಯಲ್ಲಿ ಪ್ರಗತಿ ಕಾಣುತ್ತಿತ್ತು. ಆ ಮಂದಗತಿಯ ಪ್ರಗತಿಯನ್ನು ‘ಕೊರೊನಾ–2‘ ವೈರಸ್‌ ಹಾವಳಿ ಇನ್ನಷ್ಟು ದೀರ್ಘಗೊಳಿಸಿದೆ ಎಂಬುದು ಮಾರುಕಟ್ಟೆಯ ಚಿಂತೆಗೆ ಕಾರಣವಾಗಿದೆ.

ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಗಮನಾರ್ಹವಾಗಿ ಇಳಿಸುವ ಮೂಲಕ ಈ ಆತಂಕ ನಿವಾರಿಸಲು ಆಕ್ರಮಣಕಾರಿ ಧೋರಣೆಯ ಕ್ರಮಗಳನ್ನು ಕೈಗೊಂಡಿವೆ. ಆದರೆ, ಉತ್ಪನ್ನಗಳ ಬೇಡಿಕೆಯು ಕನಿಷ್ಠ ಮಟ್ಟದಲ್ಲಿ ಇರುವುದರಿಂದ ಇಂಥ ಕ್ರಮಗಳು ನಿರೀಕ್ಷಿತ ಪರಿಣಾಮ ಉಂಟು ಮಾಡಲಾರವು. ವೈರಸ್‌ ಸಾಂಕ್ರಾಮಿಕವಾಗಿ ಹಬ್ಬುವ ಭೀತಿ ನಿವಾರಣೆಯಾಗುವವರೆಗೂ ಯಾವುದೇ ಉತ್ಪನ್ನದ ಬೇಡಿಕೆ ಹೆಚ್ಚುವ ಸಾಧ್ಯತೆ ಇರುವುದಿಲ್ಲ.

ಭಾರತದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದ್ದರೂ, ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿ ಮಾಡಿರುವುದರಿಂದ ವಿಮಾನಯಾನ, ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ಬೇಡಿಕೆ ತೀವ್ರವಾಗಿ ಕುಸಿಯಲಿದೆ. ಮುಂದಿನ ವಾರಗಳಲ್ಲಿ ವೈರಸ್‌ ಹರಡುವಿಕೆ ಹೇಗಿರುತ್ತದೆ ಎಂಬುದರ ಮೇಲೆ ಈ ಉದ್ದಿಮೆಗಳ ಭವಿಷ್ಯ ಅವಲಂಬಿಸಿದೆ.

ಪಾಲು ಬಂಡವಾಳಕ್ಕಿಂತ ಸಾಲದ ಪ್ರಮಾಣ ಹೆಚ್ಚಿರುವ ಕಂಪನಿಗಳು ಮತ್ತು ಸಾಲ ನೀಡುವ ಸಂಸ್ಥೆಗಳ ಹಣಕಾಸು ಪರಿಸ್ಥಿತಿ ದುರ್ಬಲವಾಗಿರುವುದು ಸಹ ಮಾರುಕಟ್ಟೆಯ ಪಾಲಿಗೆ ಚಿಂತೆಯ ವಿಷಯಗಳಾಗಿವೆ. ಯೆಸ್‌ ಬ್ಯಾಂಕ್‌ ಬೆಂಬಲಕ್ಕೆ ನಿಂತ ಸರ್ಕಾರದ ಧೋರಣೆಯಿಂದಾಗಿ ಬ್ಯಾಂಕ್‌ಗಳ ಪುನಶ್ಚೇತನದ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸಾಲ ಮಾರುಕಟ್ಟೆಯಲ್ಲಿ ಜನರ ವಿಶ್ವಾಸವನ್ನು ಮರುಸ್ಥಾಪಿಸುವಲ್ಲಿ ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ಕ್ರಮಗಳು ದೂರಗಾಮಿ ಪರಿಣಾಮ ಬೀರಲಿವೆ.

ಕಳೆದ ಕೆಲವು ತಿಂಗಳುಗಳ ಆರ್ಥಿಕ ಚಟುವಟಿಕೆಗಳ ಪರಾಮರ್ಶೆ ನಡೆಸಿದಾಗ, ಸದ್ಯದ ತೀವ್ರ ಏರಿಳಿತದಿಂದ ಕೂಡಿರುವ ಮಾರುಕಟ್ಟೆಯಲ್ಲಿ ಹಣಕಾಸು ಪರಿಸ್ಥಿತಿ ಉತ್ತಮವಾಗಿರುವ ಕಂಪನಿಗಳಲ್ಲಿನ ಹೂಡಿಕೆ ಮಾತ್ರ ಲಾಭದಾಯವಾಗಿರಲಿದೆ ಎಂಬ ಸಂಗತಿ ಸ್ಪಷ್ಟವಾಗುತ್ತದೆ. ಅಲ್ಪಾವಧಿ ಮತ್ತು ಮಧ್ಯಮಾವಧಿಯಲ್ಲಿ ಷೇರುಪೇಟೆಗಳು ತೀವ್ರ ಏರುಪೇರು ದಾಖಲಿಸುವ ಸಾಧ್ಯತೆ ಇದೆ. ಈಗಿನ ಬೆಳವಣಿಗೆಗಳ ಕಾರಣದಿಂದ ಮುಂದಿನ ಒಂದೆರಡು ತ್ರೈಮಾಸಿಕಗಳಲ್ಲಿ ಅಲ್ಪಾವಧಿಯಲ್ಲಿ ಸಣ್ಣ ಹಿನ್ನಡೆಗಳಾದರೂ ದೀರ್ಘಾವಧಿಯಲ್ಲಿ ಷೇರು ವಹಿವಾಟು ಅಷ್ಟೊಂದು ಏರುಪೇರು ಕಾಣಲಾರದು.

ಈಗಿನ ಏರುಪೇರು ತಿಳಿಯಾಗುತ್ತಿದ್ದಂತೆಯೇ, ಗಟ್ಟಿ ಬ್ಯಾಲನ್ಸ್‌ಶೀಟ್‌ ಹಾಗೂ ಸಮರ್ಥ ನಾಯಕರನ್ನು ಹೊಂದಿರುವ ಕಂಪನಿಗಳು ಪರಿಣಾಮಕಾರಿಯಾದ ಕಾರ್ಯತಂತ್ರ ಅಳವಡಿಸಿಕೊಂಡು ಮತ್ತೆ ಪ್ರಗತಿಯ ಪಥಕ್ಕೆ ಮರಳಲಿವೆ. ಕಷ್ಟದ ಸನ್ನಿವೇಶಗಳೇ ಎಲ್ಲಾ ವ್ಯಾಪಾರಗಳ ನಿಜವಾದ ಪರೀಕ್ಷೆಗಳಾಗಿರುತ್ತವೆ ಎಂಬುದು ನಮ್ಮ ನಂಬಿಕೆಯಾಗಿದೆ. ಇಂತಹ ಸವಾಲಿನ ಸಂದರ್ಭವನ್ನು ಕಂಪನಿಗಳು ಹೇಗೆ ಸಮರ್ಥವಾಗಿ ನಿಭಾಯಿಸುತ್ತವೆ ಎಂಬುದು ಅವುಗಳ ಹಣಕಾಸು ಪರಿಸ್ಥಿತಿ ಸುಸ್ಥಿರವಾಗಿರುವುದನ್ನು ಸೂಚಿಸುತ್ತದೆ. ಹೂಡಿಕೆದಾರರು ಕಂಪನಿಗಳಿಂದ ಇಂತಹದನ್ನೇ ಹೆಚ್ಚಾಗಿ ನಿರೀಕ್ಷಿಸುತ್ತಾರೆ.

ಗುಣಮಟ್ಟ ಮತ್ತು ಸುಸ್ಥಿರವಲ್ಲದ ಕಂಪನಿಗಳ ವಹಿವಾಟಿನ ಮಧ್ಯೆ ಮಾರುಕಟ್ಟೆ ವಹಿವಾಟು ಡೋಲಾಯಮಾನವಾಗಿರುತ್ತದೆ. ಹೂಡಿಕೆಯು ದೀರ್ಘಾವಧಿಯಲ್ಲಿ ಸುಸ್ಥಿರವಾಗಿ ಉಳಿದು ಉತ್ತಮ ಗಳಿಕೆ ಮಾಡಿಕೊಡಬೇಕಾದರೆ ಹೂಡಿಕೆದಾರರು ಯಾವುದೇ ಪ್ರಲೋಭನೆಯ ಬಲೆಗೆ ಬೀಳದಂತೆ ಎಚ್ಚರವಹಿಸಬೇಕು. ಈಗಿನ ಮಾರಾಟದ ಒತ್ತಡಕ್ಕೆ ಒಳಗಾಗಿ ತಕ್ಷಣದ ಪ್ರತಿಕ್ರಿಯೆ ನೀಡುವುದರಿಂದಲೂ ಹೂಡಿಕೆದಾರರು ದೂರ ಉಳಿಯಬೇಕು.

ಷೇರುಪೇಟೆಯಲ್ಲಿನ ಸದ್ಯದ ಕುಸಿತವು ಷೇರುಗಳ ಖರೀದಿಗೆ ಉತ್ತಮ ಅವಕಾಶ ಒದಗಿಸಿದೆ. 3 ರಿಂದ 5 ವರ್ಷಗಳ ಅವಧಿಗಾದರೂ ಈಗಿನ ಕುಸಿತವು ಷೇರು ಖರೀದಿಸಲು ಒಳ್ಳೆಯ ಸಮಯವಾಗಿದೆ. ನಷ್ಟಕ್ಕೆ ಗುರಿಯಾಗದಂತೆ ಹೂಡಿಕೆ ಮಾಡಬೇಕೆಂದಿದ್ದರೆ ಒಮ್ಮೆಲೇ ಹೂಡಿಕೆ ಮಾಡುವ ಬದಲು, ಮುಂದಿನ 3ರಿಂದ 6 ತಿಂಗಳಲ್ಲಿ ನಿಧಾನವಾಗಿ ಹೂಡಿಕೆ ಮಾಡುವುದು ಉತ್ತಮ.

ಅರ್ಥವ್ಯವಸ್ಥೆಯು ಈಗಿನ ಆಘಾತಗಳಿಂದ ಮಧ್ಯಮಾವಧಿಯಲ್ಲಿ ಚೇತರಿಕೆ ಕಾಣುತ್ತಿದ್ದಂತೆ ಹಣಕಾಸು ಪರಿಸ್ಥಿತಿಯು ಉತ್ತಮವಾಗಿರುವ ಕಂಪನಿಗಳು ಒದಗಿಬಂದಿರುವ ಅವಕಾಶಗಳ ಸಂಪೂರ್ಣ ಲಾಭವನ್ನು ಪಡೆಯಲಿವೆ ಎನ್ನುವುದನ್ನು ಹೂಡಿಕೆದಾರರು ಗಮನದಲ್ಲಿ ಇಟ್ಟುಕೊಳ್ಳಬೇಕು.

(ಲೇಖಕ: ಆ್ಯಕ್ಸಿಸ್‌ ಮ್ಯೂಚುವಲ್‌ ಫಂಡ್‌ನಷೇರು ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT