ಶನಿವಾರ, ನವೆಂಬರ್ 26, 2022
24 °C
ಆರ್ಥಿಕ ಹಿಂಜರಿತದ ಬೀತಿ, ಬಡ್ಡಿದರ ಹೆಚ್ಚಳ ಪರಿಣಾಮ

4ನೇ ದಿನವೂ ಕುಸಿದ ಸೆನ್ಸೆಕ್ಸ್, ನಿಫ್ಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಮತ್ತು ಅಮೆರಿಕದಲ್ಲಿ ಬಡ್ಡಿ ದರ ಏರಿಕೆಯ ಕಾರಣಗಳಿಂದಾಗಿ ಜಾಗತಿಕ ಮಾರುಕಟ್ಟೆಗಳ ವಹಿವಾಟು ಇಳಿಕೆ ಕಂಡಿತು. ಇದರಿಂದಾಗಿ ಭಾರತದ ಷೇರುಪೇಟೆಗಳಲ್ಲಿಯೂ ಸೋಮವಾರ ನಕಾರಾತ್ಮಕ ವಹಿವಾಟು ನಡೆಯಿತು.

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಹಾಗೂ ವಿದೇಶಿ ಬಂಡವಾಳ ಹೊರಹರಿವು ಕೂಡ ಹೂಡಿಕೆ ಮೇಲೆ ಪರಿಣಾಮ ಬೀರಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 954 ಅಂಶ ಇಳಿಕೆ ಕಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 311 ಅಂಶ ಇಳಿಕೆ ಕಂಡಿತು.

‘ಜಾಗತಿಕ ಮಟ್ಟದಲ್ಲಿ ನಡೆದ ಇಳಿಮುಖ ವಹಿವಾಟು ಮತ್ತು ರೂಪಾಯಿ ಕುಸಿತದಿಂದಾಗಿ ಸತತ ನಾಲ್ಕನೇ ದಿನವೂ ನಿಫ್ಟಿ ಇಳಿಕೆ ಕಂಡಿತು’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ರಿಟೇಲ್‌ ವಿಭಾಗದ ಮುಖ್ಯಸ್ತ ದೀಪಕ್‌ ಜಸನಿ ಹೇಳಿದ್ದಾರೆ.

ಅಮೆರಿಕದ ಫೆಡರಲ್‌ ರಿಸರ್ವ್‌ ಹಣಕಾಸು ನೀತಿಯನ್ನು ಇನ್ನಷ್ಟು ಬಿಗಿಗೊಳಿಸುತ್ತಿದೆ. ಇದರಿಂದಾಗಿ ಡಾಲರ್‌ ಮೌಲ್ಯ ಏರಿಕೆ ಕಾಣುತ್ತಿದೆ. ಇದರ ಜೊತೆಗೆ ಮಂದಗತಿಯ ಆರ್ಥಿಕ ಬೆಳವಣಿಗೆಯು ಹೂಡಿಕೆದಾರರನ್ನು ಎಚ್ಚರಿಕೆಯಿಂದ ವಹಿವಾಟು ನಡೆಸುವಂತೆ ಮಾಡಿದೆ. ಇದು, ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಳಿತಕ್ಕೆ ಕಾರಣವಾಗಿದೆ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

ಏಷ್ಯಾದಲ್ಲಿ, ಸೋಲ್‌, ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್‌ ಷೇರುಪೇಟೆಗಳು ಹೆಚ್ಚಿನ ಇಳಿಕೆ ಕಂಡವು. ಯುರೋಪ್‌ ಮಾರುಕಟ್ಟೆಗಳಲ್ಲಿ ಸಹ ವಹಿವಾಟು ಇಳಿಮುಖವಾಗಿತ್ತು. ಬ್ರೆಂಟ್‌ ಕಚ್ಚಾ ತೈಲ ದರ ಶೇ 0.75ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 85.50 ಡಾಲರ್‌ನಂತೆ ಮಾರಾಟವಾಯಿತು.

₹ 13.30 ಲಕ್ಷ ಕೋಟಿ ನಷ್ಟ: ನಾಲ್ಕು ದಿನಗಳಲ್ಲಿ ಹೂಡಿಕೆದಾರರ ಸಂಪತ್ತು ₹ 13.30 ಲಕ್ಷ ಕೋಟಿಯಷ್ಟು ಕರಗಿದೆ. ಇದರಿಂದಾಗಿ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯವು ಸೋಮವಾರದ ವಹಿವಾಟಿನ ಅಂತ್ಯಕ್ಕೆ ₹ 270.11 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.

ರೂಪಾಯಿ ಕುಸಿತ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಸೋಮವಾರ 58 ಪೈಸೆ ಇಳಿಕೆ ಕಂಡು ಒಂದು ಡಾಲರ್‌ಗೆ ₹81.67 ಡಾಲರ್‌ಗೆ ತಲುಪಿತು.

ಡಾಲರ್ ಮೌಲ್ಯ ವೃದ್ಧಿ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಒತ್ತಡದಿಂದ ರೂಪಾಯಿ ಮೌಲ್ಯ ಇಳಿಕೆ ಕಂಡಿತು. ನಾಲ್ಕು ದಿನಗಳ ವಹಿವಾಟು ಅವಧಿಯಲ್ಲಿ ಡಾಲರ್ ಎದುರು ರೂಪಾಯಿ 193 ಪೈಸೆಯಷ್ಟು ಇಳಿಕೆ ಕಂಡಿದೆ.

=

ವಲಯವಾರು ಇಳಿಕೆ (%)

ರಿಯಾಲ್ಟಿ;4.29

ಆಟೊ;3.86

ಯುಟಿಲಿಟಿ:3.72

ವಿದ್ಯುತ್;3.71

ಸರಕುಗಳು;3.17

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು