ಭಾನುವಾರ, ಸೆಪ್ಟೆಂಬರ್ 25, 2022
20 °C
ತಿಂಗಳಲ್ಲೇ ಶೇ 21ರಷ್ಟು ಮೌಲ್ಯ ಹೆಚ್ಚಿಸಿಕೊಂಡ ವಿಮಾ ಕಂಪನಿ

PV Web Exclusive: ಎಸ್‌ಬಿಐ ಲೈಫ್‌ನಿಂದ ‘ಸೀಮೋಲ್ಲಂಘನೆ’

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ಭಾರತೀಯ ಷೇರುಪೇಟೆಯಲ್ಲಿ ಹೂಡಿಕೆದಾರರು ಉತ್ಸಾಹ ತೋರುತ್ತಿರುವುದರ ಬೆನ್ನಲ್ಲೇ ‘ಎಸ್‌ಬಿಐ ಲೈಫ್‌ ಇನ್ಶೂರನ್ಸ್‌ ಕಂಪನಿ’ಯ ಷೇರಿನ ಬೆಲೆ ತಿಂಗಳಲ್ಲೇ ಶೇ 21.24ರಷ್ಟು ಹೆಚ್ಚಾಗಿದೆ. ಕಳೆದ ವಾರ ಶೇ 11.11ರಷ್ಟು ಮೌಲ್ಯವನ್ನು ಹೆಚ್ಚಿಕೊಂಡ ಈ ಕಂಪನಿಯು, 52 ವಾರಗಳ ಗರಿಷ್ಠ ಮಟ್ಟವನ್ನು ದಾಟುವ ಮೂಲಕ ‘ಸೀಮೋಲ್ಲಂಘನೆ’ ಮಾಡಿದೆ.

***

ಹೂಡಿಕೆದಾರರು ಖರೀದಿಗೆ ಉತ್ಸಾಹ ತೋರಿದ ಬೆನ್ನಲ್ಲೇ ಭಾರತೀಯ ಷೇರುಪೇಟೆ ಹೂಂಕರಿಸುತ್ತಿದೆ. ಈ ‘ಅಲೆ’ಯ ನೆರವಿನಿಂದ ಕೆಲ ವಿಮಾ ಕಂಪನಿಗಳ ಷೇರು ಈಗಷ್ಟೇ ಚೇತರಿಕೆಯ ಹಾದಿಯನ್ನು ಹಿಡಿಯುತ್ತಿದೆ. ಇದರ ನಡುವೆಯೇ ‘ಎಸ್‌ಬಿಐ ಲೈಫ್‌ ಇನ್ಶೂರನ್ಸ್‌ ಕಂಪನಿ’ಯು ಒಂದು ತಿಂಗಳಲ್ಲೇ ಶೇ 21.24ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಜೊತೆಗೆ ಈ ವಾರ 52 ವಾರಗಳ ಗರಿಷ್ಠ ಮಟ್ಟದ ‘ಸೀಮೋಲ್ಲಂಘನೆ’ ಮಾಡುವ ಮೂಲಕ ಗಮನ ಸೆಳೆದಿದೆ.

ದೇಶದ ಅತಿ ದೊಡ್ಡ ವಿಮಾ ಕಂಪನಿಯಾಗಿರುವ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ ಇಂಡಿಯಾ) ಷೇರುಪೇಟೆಗೆ ಪದಾರ್ಪಣೆ ಮಾಡಿದ ದಿನದಿಂದ ಕುಸಿತದ ಹಾದಿಯನ್ನು ಹಿಡಿದಿದ್ದು, ‘ಸ್ಥಿರತೆ’ ಕಾಯ್ದುಕೊಳ್ಳಲು ಇನ್ನೂ ಹೆಣಗಾಡುತ್ತಿದೆ. ಇದರ ನಡುವೆಯೇ ಪ್ರತಿಸ್ಪರ್ಧಿಯಾಗಿರುವ ಎಸ್‌ಬಿಐ ಲೈಫ್‌ ಇನ್ಶೂರನ್ಸ್‌ ಕಂಪನಿಯು, ‘ಗೂಳಿ ಓಟ’ ಆರಂಭಿಸಿದೆ. ಉಳಿದ ಪ್ರಮುಖ ವಿಮಾ ಕಂಪನಿಗಳಾದ ಐಸಿಐಸಿಐ ಪ್ರುಡೆನ್ಷಿಯಲ್‌ ಲೈಫ್‌ ಇನ್ಶೂರನ್ಸ್‌, ಐಸಿಐಸಿಐ ಲೊಂಬಾರ್ಡ್‌ ಜನರಲ್‌ ಇನ್ಶೂರನ್ಸ್‌, ಎಚ್‌ಡಿಎಫ್‌ಸಿ ಲೈಫ್‌ ಸಹ ಗಳಿಕೆಯ ‘ಹಸಿರ ಹಾದಿ’ಯನ್ನು ಈಗ ಹಿಡಿದಿದೆ.

ಮುಂಬೈ ಷೇರು ವಿನಿಮಯ ಕೇಂದ್ರದ (BSE) ಪ್ರಧಾನ ಸೂಚ್ಯಂಕವಾದ ‘ಎಸ್‌&ಪಿ ಸೆನ್ಸೆಕ್ಸ್‌’ ಒಂದು ವಾರದಲ್ಲಿ ಶೇ 2.67 ಹಾಗೂ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ‘ನಿಫ್ಟಿ–50’ ಸೂಚ್ಯಂಕವು ಶೇ 2.62ರಷ್ಟು ಏರಿಕೆ ಕಂಡಿದೆ. ಒಂದು ತಿಂಗಳಲ್ಲಿ ಸೆನ್ಸೆಕ್ಸ್‌ ಶೇ 8.57 ಹಾಗೂ ನಿಫ್ಟಿ–50 ಸೂಚ್ಯಂಕ ಶೇ 8.60ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.

ಎಸ್‌ಬಿಐ ಲೈಫ್‌ ಮೌಲ್ಯ ವಾರದಲ್ಲೇ ಶೇ 11 ಹೆಚ್ಚಳ: ರಾಷ್ಟ್ರೀಯ ಷೇರುಪೇಟೆಯಲ್ಲಿ ‘ಎಸ್‌ಬಿಐ ಲೈಫ್‌’ ಕಂಪನಿಯು ಒಂದು ವಾರದಲ್ಲಿ ತನ್ನ ಷೇರಿನ ಮೌಲ್ಯವನ್ನು ₹ 129.45 (ಶೇ 11.11) ಹಾಗೂ ಒಂದು ತಿಂಗಳಲ್ಲಿ ₹ 226.75 (ಶೇ 21.24) ವೃದ್ಧಿಸಿಕೊಂಡಿದೆ. ಆದಾಯ ಗಳಿಕೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ವಾರಾಂತ್ಯದ ವಹಿವಾಟಿನ ದಿನವಾದ ಜುಲೈ 29ರಂದು ಈ ಕಂಪನಿಯ ಷೇರು ₹ 102.95 (ಶೇ 8.64)ರಷ್ಟು ಏರಿಕೆ ಕಾಣುವುದರೊಂದಿಗೆ ₹1,294.40ಕ್ಕೆ ವಹಿವಾಟು ಅಂತ್ಯಗೊಳಿಸಿದೆ.

ಎಸ್‌ಬಿಐ ಲೈಫ್‌ ಕಂಪನಿಯ ಷೇರು ಕಳೆದ ಮೂರು ತಿಂಗಳಲ್ಲಿ ಶೇ 17.09, ಆರು ತಿಂಗಳಲ್ಲಿ ಶೇ 7.37 ಹಾಗೂ ಒಂದು ವರ್ಷದಲ್ಲಿ ಶೇ 14.67ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಶೇ 46.91 ಹಾಗೂ ಮೂರು ವರ್ಷಗಳಲ್ಲಿ ಶೇ 62.34ರಷ್ಟು ಬೆಲೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ವಿಮಾ ವಲಯದಲ್ಲಿ ದಾಪುಗಾಲು ಇಡುತ್ತಿದೆ.

ಕಳೆದ ಮಾರ್ಚ್‌ 8ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹ 1003.50) ಕುಸಿದಿದ್ದ ಈ ಕಂಪನಿಯ ಷೇರಿನ ಬೆಲೆಯು ಜುಲೈ 29ರಂದು ₹ 1304.70ಕ್ಕೆ ತಲುಪುವ ಮೂಲಕ ಹೊಸದಾಗಿ 52 ವಾರಗಳ ಗರಿಷ್ಠ ಮಟ್ಟವನ್ನು ನಿರ್ಮಿಸಿತು. ಕಳೆದ ಜನವರಿ 17ರಂದು ನಿರ್ಮಿಸಿದ್ದ 52 ವಾರಗಳ ಗರಿಷ್ಠ ಮಟ್ಟ(₹1293.25)ವನ್ನು ದಾಟುವ ಮೂಲಕ ‘ಸೀಮೋಲ್ಲಂಘನೆ’ ಮಾಡಿ ಹೂಡಿಕೆದಾರರ ಚಿತ್ತವನ್ನು ತನ್ನತ್ತ ಸೆಳೆಯುತ್ತಿದೆ.

ಐಸಿಐಸಿಐ ಪ್ರುಡೆನ್ಷಿಯಲ್‌ ಲೈಫ್‌ ಇನ್ಶೂರನ್ಸ್‌ ಕಂಪನಿಯ ಷೇರಿನ ಬೆಲೆ ವಾರಾಂತ್ಯವಾದ ಜುಲೈ 29ರಂದು ₹ 23.60 (ಶೇ 4.45) ಏರಿಕೆ ಕಾಣುವುದರೊಂದಿಗೆ ₹ 553.60ಕ್ಕೆ ವಹಿವಾಟು ಅಂತ್ಯಗೊಳಿಸಿದೆ. ಈ ಕಂಪನಿಯು ಒಂದು ವಾರದಲ್ಲಿ ಶೇ 4.01, ಒಂದು ತಿಂಗಳಲ್ಲಿ ಶೇ 14.70, ಮೂರು ತಿಂಗಳಲ್ಲಿ ಶೇ 5.30 ಮತ್ತು ಆರು ತಿಂಗಳಲ್ಲಿ ಶೇ 1.51ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಒಂದು ವರ್ಷದಲ್ಲಿ ಶೇ 13ರಷ್ಟು ಕುಸಿತವನ್ನು ಕಂಡಿದೆ. 2021ರ ಸೆಪ್ಟೆಂಬರ್‌ 8ರಂದು 52 ವಾರಗಳ ಗರಿಷ್ಠ ಮಟ್ಟಕ್ಕೆ (₹ 724.30) ಏರಿಕೆಯಾಗಿದ್ದ ಈ ಕಂಪನಿಯ ಷೇರಿನ ಬೆಲೆ ಕಳೆದ ಮಾರ್ಚ್‌ 8ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹ 430) ಕುಸಿದಿತ್ತು.

ಐಸಿಐಸಿಐ ಲೊಂಬಾರ್ಡ್‌ ಜನರಲ್‌ ಇನ್ಶೂರನ್ಸ್‌ ಕಂಪನಿಯು ಒಂದು ವಾರದಲ್ಲಿ ಕೇವಲ ಶೇ 0.4, ಒಂದು ತಿಂಗಳಲ್ಲಿ ಶೇ 9.74 ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಮೂರು ತಿಂಗಳಲ್ಲಿ ಶೇ 4.71, ಆರು ತಿಂಗಳಲ್ಲಿ ಶೇ 11.16 ಹಾಗೂ ಒಂದು ವರ್ಷದಲ್ಲಿ ಶೇ 18.45ರಷ್ಟು ಕುಸಿತವನ್ನು ದಾಖಲಿಸಿದೆ. 2021ರ ಸೆಪ್ಟೆಂಬರ್‌ 22ರಂದು 52 ವಾರಗಳ ಗರಿಷ್ಠ ಮಟ್ಟವನ್ನು (₹ 1,675) ತಲುಪಿದ್ದ ಈ ಕಂಪನಿಯ ಷೇರಿನ ಬೆಲೆಯು ಕಳೆದ ಜೂನ್‌ 13ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹1,071) ಕುಸಿದಿತ್ತು.

ವಿಮಾ ವಲಯದ ಇನ್ನೊಂದು ದೊಡ್ಡ ಕಂಪನಿಯಾದ ಎಚ್‌ಡಿಎಫ್‌ಸಿ ಲೈಫ್‌ನ ಷೇರಿನ ಬೆಲೆಯು ಈ ವಾರಾಂತ್ಯದಲ್ಲಿ ₹ 23.90 (ಶೇ 4.50) ಏರಿಕೆ ಕಾಣುವುದರೊಂದಿಗೆ ₹ 555.50ಕ್ಕೆ ವಹಿವಾಟು ಅಂತ್ಯಗೊಳಿಸಿದೆ. ಒಂದು ವಾರದಲ್ಲಿ ಶೇ 3.83, ಒಂದು ತಿಂಗಳಲ್ಲಿ ಶೇ 2.63ರಷ್ಟು ಮಾತ್ರ ಏರಿಕೆ ಕಂಡಿದೆ. ಮೂರು ತಿಂಗಳಲ್ಲಿ ಶೇ 4.62, ಆರು ತಿಂಗಳಲ್ಲಿ ಶೇ 10.47 ಹಾಗೂ ಒಂದು ವರ್ಷದಲ್ಲಿ ಶೇ 16.17ರಷ್ಟು ಕುಸಿತವನ್ನು ಕಂಡಿದೆ. 2021ರ ಸೆಪ್ಟೆಂಬರ್‌ 2ರಂದು 52 ವಾರಗಳ ಗರಿಷ್ಠ ಮಟ್ಟ (₹ 775.65)ಕ್ಕೆ ಏರಿದ್ದ ಈ ಕಂಪನಿಯ ಷೇರಿನ ಬೆಲೆಯು ಕಳೆದ ಮಾರ್ಚ್‌ 8ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹ 497.05) ಕುಸಿದಿತ್ತು.

ಮುಗ್ಗರಿಸಿದ ಎಲ್‌ಐಸಿ ಇಂಡಿಯಾ: ದೇಶದ ಅತಿ ದೊಡ್ಡ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಎಂಬ ಖ್ಯಾತಿಗೆ ಪಾತ್ರವಾಗಿದ್ದ ಬಹು ನಿರೀಕ್ಷೆ ಹುಟ್ಟುಹಾಕಿದ್ದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ ಇಂಡಿಯಾ) ಕಂಪನಿ ಕಳೆದ ಮೇ 17ರಂದು ಷೇರುಪೇಟೆಗೆ ಪದಾರ್ಪಣೆ ಮಾಡುತ್ತಿದ್ದಂತೆ ಮುಗ್ಗರಿಸಿ ಬಿದ್ದಿದೆ. ಕಂಪನಿಯು ಐಪಿಒನ ಆರಂಭಿಕ ಬೆಲೆಯನ್ನು ₹ 949 ನಿಗದಿಗೊಳಿಸಿತ್ತು. ಆದರೆ, ಮೇ 17ರಂದು ರಾಷ್ಟ್ರೀಯ ಷೇರುಪೇಟೆಗೆ ತೆರೆದುಕೊಂಡಿದ್ದೇ ₹ 872ಕ್ಕೆ. ಅಂದಿನ ವಹಿವಾಟಿನಲ್ಲಿ ₹ 918.95ಕ್ಕೆ ತಲುಪಿದ್ದೇ ಇದುವರೆಗಿನ ಗರಿಷ್ಠ ಮಟ್ಟವಾಗಿದೆ. ಅಂದಿನಿಂದ ಕುಸಿತದ ಹಾದಿಯನ್ನು ಹಿಡಿದಿರುವ ಕಂಪನಿಯ ಷೇರಿನ ಬೆಲೆಯು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಹೂಡಿಕೆದಾರರನ್ನು ಚಿಂತಿಗೀಡು ಮಾಡಿದೆ.

ಎಲ್‌ಐಸಿ ಇಂಡಿಯಾ ಕಂಪನಿಯು ಒಂದು ವಾರದಲ್ಲಿ ಶೇ 1.58 ಹಾಗೂ ಒಂದು ತಿಂಗಳ ಅವಧಿಯಲ್ಲಿ ಶೇ 0.10ರಷ್ಟು ಕುಸಿತವನ್ನು ಕಂಡಿದೆ. ಐಪಿಒ ಬಿಡುಗಡೆ ಮಾಡುವಾಗ ನಿಗದಿಗೊಳಿಸಿದ್ದ ₹ 949 ಬೆಲೆಗೆ ಹೋಲಿಸಿದರೆ ಈ ಕಂಪನಿಯ ಷೇರಿನ ಬೆಲೆಯು ಒಟ್ಟು ₹ 271.20(ಶೇ –28.57)ರಷ್ಟು ಕುಸಿತವನ್ನು ಕಂಡಿದೆ. ಕಳೆದ ಜೂನ್‌ 20ರಂದು ಕನಿಷ್ಠ ಮಟ್ಟಕ್ಕೆ (₹ 650) ಕುಸಿದಿತ್ತು. ಈ ಕಂಪನಿಯ ಷೇರು ₹ 677.80ಕ್ಕೆ ತಲುಪುವುದರೊಂದಿಗೆ ಈ ವಾರದ ವಹಿವಾಟನ್ನು ಅಂತ್ಯಗೊಳಿಸಿದೆ.

ಚೇತರಿಕೆಯ ಹಾದಿ ಹಿಡಿದ ‘ಸ್ಟಾರ್‌ ಹೆಲ್ತ್‌’: 2021ರ ಡಿಸೆಂಬರ್‌ 10ರಂದು ಷೇರುಪೇಟೆಗೆ ಪದಾರ್ಪಣೆ ಮಾಡಿದ ಬಳಿಕ ಕುಸಿತದ ಹಾದಿಯನ್ನೇ ಹಿಡಿದಿದ್ದ ‘ಸ್ಟಾರ್‌ ಹೆಲ್ತ್‌ ಆ್ಯಂಡ್‌ ಅಲೈಡ್‌ ಇನ್ಶೂರನ್ಸ್‌ ಕಂಪನಿ’ಯು ಇದೀಗ ಚೇತರಿಕೆಯ ಹಾದಿಯನ್ನು ಹಿಡಿದಿದೆ. ಈ ಕಂಪನಿಯ ಐಪಿಒ ಬಿಡುಗಡೆ ವೇಳೆ ₹ 10 ಮುಖಬೆಲೆಯ ಒಂದು ಷೇರಿನ ಆರಂಭಿಕ ಬೆಲೆಯನ್ನು ₹ 900 ನಿಗದಿಗೊಳಿಸಲಾಗಿತ್ತು. ಮಾರುಕಟ್ಟೆಗೆ ತೆರೆದುಕೊಂಡ ದಿನದ ವಹಿವಾಟಿನಲ್ಲಿ ₹ 940ಕ್ಕೆ ತಲುಪಿದ್ದೇ ಇದುವರಿಗೆ ಗರಿಷ್ಠ ಮಟ್ಟವಾಗಿದೆ. ಕಳೆದ ಜುಲೈ 1ರಂದು ಇದುವರೆಗಿನ ಕನಿಷ್ಠ ಮಟ್ಟಕ್ಕೆ (₹ 469.05) ಕುಸಿದಿತ್ತು. ಈ ಕಂಪನಿಯ ಷೇರಿನ ಬೆಲೆ ಕಳೆದ ಒಂದು ವಾರದಲ್ಲಿ ಶೇ 9.75 ಹಾಗೂ ಒಂದು ತಿಂಗಳಲ್ಲಿ ಶೇ 50.13ರಷ್ಟು ಏರಿಕೆಯಾಗಿದೆ. ಕಳೆದ ಮೂರು ತಿಂಗಳಲ್ಲಿ ಶೇ 5.04ರಷ್ಟು ಏರಿಕೆಯನ್ನು ಕಂಡಿದ್ದರೆ, ಆರು ತಿಂಗಳಲ್ಲಿ ಶೇ 6.35ರಷ್ಟು ಕುಸಿತವನ್ನು ಕಂಡಿದೆ.

ಲಾಭ ಹೆಚ್ಚಿಸಿಕೊಂಡ ಎಸ್‌ಬಿಐ ಲೈಫ್‌: ಎಸ್‌ಬಿಐ ಲೈಫ್‌ ಇನ್ಶೂರನ್ಸ್‌ ಕಂಪನಿಯ 2022–23ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಫಲಿತಾಂಶವು ಜುಲೈ 28ರಂದು ಪ್ರಕಟಗೊಂಡಿದ್ದು, ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ₹ 11,198 ಕೋಟಿ (ಶೇ –69.97)ಯಷ್ಟು ಆದಾಯ ಕುಸಿದಿದೆ. 2021ರ ಜೂನ್‌ನಲ್ಲಿ 16,004.15 ಕೋಟಿ ಆದಾಯ ಗಳಿಸಿದ್ದ ಕಂಪನಿಯು ಈ ವರ್ಷದ ಜೂನ್‌ ಅಂತ್ಯಕ್ಕೆ ಕೇವಲ ₹ 4,806.15 ಕೋಟಿ ಆದಾಯ ಗಳಿಸಿದೆ. ಹೀಗಿದ್ದರೂ 2021ರ ಜೂನ್‌ನಲ್ಲಿ ₹ 223.16 ಕೋಟಿ ನಿವ್ವಳ ಲಾಭ ಪಡೆದಿದ್ದ ಕಂಪನಿಯು, 2022ರ ಜೂನ್‌ ಅಂತ್ಯಕ್ಕೆ ₹ 262.85 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಂಪನಿಯ ನಿವ್ವಳ ಲಾಭವು ₹ 39.69 ಕೋಟಿ (ಶೇ 17.78) ಹೆಚ್ಚಾಗಿದೆ. ಕಂಪನಿಯ ಲಾಭ ಗಳಿಕೆಯ ಪ್ರಮಾಣ ಹೆಚ್ಚಾಗಿರುವ ಸುದ್ದಿಯ ಪರಿಣಾಮ, ಫಲಿತಾಂಶ ಪ್ರಕಟಗೊಂಡ ಮರುದಿನ ‘ಎಸ್‌ಬಿಐ ಲೈಫ್‌’  ಷೇರಿನ ಬೆಲೆಯು ಶೇ 8.64ರಷ್ಟು ಹೆಚ್ಚಾಗಿರುವುದು ಕಂಪನಿಯು ಹೂಡಿಕೆದಾರರನ್ನು ಸೆಳೆದಿರುವುದಕ್ಕೆ ಸಾಕ್ಷಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು