ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಿ ಕುಣಿತ: ಷೇರುಪೇಟೆ ತತ್ತರ

ಹೂಡಿಕೆದಾರರ ನಿರೀಕ್ಷೆ ಹುಸಿಯಾಗಿಸಿದ ಬಜೆಟ್‌
Last Updated 1 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಮುಂಬೈ: ಆರ್ಥಿಕ ಚೇತರಿಕೆಗೆ ಪೂರಕವಾದ ನಿರ್ಧಾರಗಳು ಬಜೆಟ್‌ನಲ್ಲಿ ಘೋಷಣೆಯಾಗದೇ ಇರುವುದು ಹೂಡಿಕೆದಾರರಲ್ಲಿ ನಿರಾಸೆ ಮೂಡಿಸಿದೆ. ಇದರಿಂದಾಗಿ ಶನಿವಾರದ ವಹಿವಾಟಿನಲ್ಲಿ ಷೇರುಪೇಟೆ ತತ್ತರಿಸಿತು.

ಅತಿ ಹೆಚ್ಚಿನ ಮಾರಾಟದ ಒತ್ತಡ ಕಂಡುಬಂದಿದ್ದರಿಂದ ಷೇರುಪೇಟೆಗಳಲ್ಲಿ ಕರಡಿ ಕುಣಿತ ಜೋರಾಗಿತ್ತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ವಹಿವಾಟಿನ ಒಂದು ಹಂತದಲ್ಲಿ 1,275 ಅಂಶಗಳವರೆಗೂ ಕುಸಿತ ಕಂಡಿತ್ತು. ವಹಿವಾಟಿನ ಅಂತ್ಯದ ವೇಳೆಗೆ 988 ಅಂಶಗಳ ಕುಸಿತದೊಂದಿಗೆ 39,631 ಅಂಶಗಳಿಗೆ ತಲುಪಿತು.2008ರ ಅಕ್ಟೋಬರ್‌ ಬಳಿಕ ಗರಿಷ್ಠ ಕುಸಿತ ಇದಾಗಿದೆ. ಒಟ್ಟಾರೆಯಾಗಿ ನಾಲ್ಕನೇ ಗರಿಷ್ಠ ಕುಸಿತವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 300 ಅಂಶಗಳ ಇಳಿಕೆ ಕಂಡು 11,662 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. 2019ರ ಬಜೆಟ್ ಮಂಡನೆಯ ದಿನ 11,811 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು.

ಗರಿಷ್ಠ ನಷ್ಟ: ದಿನದ ವಹಿವಾಟಿನಲ್ಲಿ ಐಟಿಸಿ ಷೇರು ಶೇ 6.97ರಷ್ಟು ಗರಿಷ್ಠ ನಷ್ಟ ಕಂಡಿತು. ಎಲ್‌ಆ್ಯಂಡ್‌ಟಿ, ಎಚ್‌ಡಿಎಫ್‌ಸಿ, ಎಸ್‌ಬಿಐ, ಒಎನ್‌ಜಿಸಿ, ಐಸಿಐಸಿಐ ಬ್ಯಾಂಕ್‌ ಮತ್ತು ಇಂಡಸ್‌ಇಂಡ್‌ ಬ್ಯಾಂಕ್‌ ಷೇರುಗಳು ಸಹ ನಷ್ಟ ಕಂಡಿವೆ.

ವಿಮಾ ಕಂಪನಿಗಳ ಷೇರುಗಳು ಶೇ 13ರವರೆಗೂ ಇಳಿಕೆ ಕಂಡಿವೆ.

ಗಳಿಕೆ: ಟಿಸಿಎಸ್‌ ಷೇರು ಶೇ 4.13ರಷ್ಟು ಹೆಚ್ಚಾಗಿದೆ. ಎಚ್‌ಯುಎಲ್‌, ನೆಸ್ಲೆ ಇಂಡಿಯಾ, ಟೆಕ್‌ ಮಹೀಂದ್ರಾ ಮತ್ತು ಇನ್ಫೊಸಿಸ್‌ ಷೇರುಗಳು ಗಳಿಕೆ ಕಂಡುಕೊಂಡಿವೆ.

ಆದಾಯ ತೆರಿಗೆ ಹಂತದಲ್ಲಿನ ಬದಲಾವಣೆಯಿಂದಾಗಿ ತೆರಿಗೆ ಉಳಿಸುವ ಹೂಡಿಕೆ ಕಡಿಮೆಯಾಗುವ ಆತಂಕ ಎದುರಾಗಿದೆ. ಇದರ ಜತೆಗೆ ಲಾಭಾಂಶ ವಿತರಣೆ ತೆರಿಗೆಯನ್ನು ಹೂಡಿಕೆದಾರರಿಗೆ ವರ್ಗಾಯಿಸುವ ಪ್ರಸ್ತಾವವೂ ನಕಾರಾತ್ಮಕ ಭಾವನೆ ಮೂಡಿಸಿದೆ ಎಂದು ಪರಿಣತರು ವಿಶ್ಲೇಷಣೆ ಮಾಡಿದ್ದಾರೆ.

ಉದ್ಯಮ ಅಥವಾ ಗ್ರಾಹಕರ ಪರವಾದ ಯಾವುದೇ ನಿರ್ಧಾರಗಳು ಹೊರಬಿದ್ದಿಲ್ಲ. ಆದಾಯ ತೆರಿಗೆಯಲ್ಲಿನ ಬದಲಾವಣೆಯು ರಾಜಕೀಯ ಲಾಭವನ್ನು ಸೃಷ್ಟಿಸಲಿದೆಯೇ ಹೊರತು ಸದ್ಯ ಮಟ್ಟಿಗಂತೂ ಆರ್ಥಿಕ ಬೆಳವಣಿಗೆಗೆ ಪೂರಕವಾಗಿಲ್ಲ’ ಎಂದು ಷೇರ್‌ ಇಂಡಿಯಾ ಸೆಕ್ಯುರಿಟೀಸ್‌ನ ಅಧ್ಯಕ್ಷ ಅಭಿನವ್‌ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಕರಗಿತು ₹ 3.46 ಲಕ್ಷ ಕೋಟಿ
ಷೇರುಪೇಟೆಯಲ್ಲಿನ ನಕಾರಾತ್ಮಕ ವಹಿವಾಟು ಹೂಡಿಕೆದಾರರ ಸಂಪತ್ತು ಕರಗುವಂತೆ ಮಾಡಿತು.

ದಿನದ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದ ಲೆಕ್ಕಚಾರದಲ್ಲಿ ಹೂಡಿಕೆದಾರರ ಸಂಪತ್ತು ₹ 3.46 ಲಕ್ಷ ಕೋಟಿಗಳಷ್ಟು ಕರಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 156.50 ಲಕ್ಷ ಕೋಟಿಗಳಿಂದ ₹ 153.04 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ವಹಿವಾಟಿನ ವಿವರ

222 ಅಂಶ:2019ರ ಜುಲೈ 5–2020ರ ಫೆಬ್ರುವರಿ 1ರ ಅವಧಿಯಲ್ಲಿ ಸೂಚ್ಯಂಕದ ಒಟ್ಟಾರೆ ಗಳಿಕೆ

149 ಅಂಶ:2019ರ ಜುಲೈ 5–2020ರ ಫೆಬ್ರುವರಿ 1ರ ಅವಧಿಯಲ್ಲಿ ನಿಫ್ಟಿಯಲ್ಲಿ ಆಗಿರುವ ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT