ಶುಕ್ರವಾರ, ಸೆಪ್ಟೆಂಬರ್ 20, 2019
21 °C

ಷೇರುಮಾರುಕಟ್ಟೆ ಕುಸಿತ: ಕರಗಿತು ಹೂಡಿಕೆದಾರರ ₹ 2.79 ಲಕ್ಷ ಕೋಟಿ ಸಂಪತ್ತು

Published:
Updated:

ಮುಂಬೈ: ಹಣಕಾಸು ಮತ್ತು ವಾಹನ ವಲಯದ ಷೇರುಗಳಲ್ಲಿ ಕಂಡುಬಂದ ಮಾರಾಟದ ಒತ್ತಡದಿಂದಾಗಿ ಷೇರುಪೇಟೆ ಸೂಚ್ಯಂಕ ಹೆಚ್ಚಿನ ಇಳಿಕೆ ಕಂಡಿದೆ. 

ದಿನದ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 2.79 ಲಕ್ಷ ಕೋಟಿಗಳಷ್ಟು ಕರಗಿದ್ದು, ಷೇರುಪೇಟೆಯ ಮಾರುಕಟ್ಟೆ ಮೌಲ್ಯ ₹ 138.19 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 770 ಅಂಶಗಳಷ್ಟು ಕುಸಿತ ಕಂಡು 37 ಸಾವಿರಕ್ಕಿಂತ ಕೆಳಗಿಳಿಯಿತು.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ ಸಹ 225 ಅಂಶ ಇಳಿಕೆ ಕಂಡು 11 ಸಾವಿರಕ್ಕಿಂತ ಕೆಳಗಿಳಿದಿದೆ.

ಶುಕ್ರವಾರದ ವಹಿವಾಟಿನಲ್ಲಿ ಬಿಎಸ್‌ಇ ಸೂಚ್ಯಂಕ 264 ಅಂಶ ಹೆಚ್ಚಾಗಿ 37,333 ಅಂಶಗಳಲ್ಲಿ ಹಾಗೂ ನಿಫ್ಟಿ 75 ಅಂಶ ಹೆಚ್ಚಾಗಿ 11,023 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿತ್ತು.

ಇಳಿಕೆ: ಇದುವರೆಗಿನ ವಹಿವಾಟಿನಲ್ಲಿ ಟಾಟಾ ಮೋಟರ್ಸ್‌, ಐಸಿಐಸಿಐ ಬ್ಯಾಂಕ್‌, ಒಎನ್‌ಜಿಸಿ, ಎಚ್‌ಡಿಎಫ್‌ಸಿ, ಮಹೀಂದ್ರಾ, ವೇದಾಂತ, ಎನ್‌ಟಿಪಿಸಿ, ಐಟಿಸಿ ಮತ್ತು ಎಸ್‌ಬಿಐ ಷೇರುಗಳು ಶೇ 4ರವರೆಗೂ ಇಳಿಕೆ ಕಂಡಿವೆ.

ಗಳಿಕೆ: ಟೆಕ್‌ ಮಹೀಂದ್ರಾ, ಎಚ್‌ಸಿಎಲ್‌ ಟೆಕ್‌, ಟಿಸಿಎಸ್‌ ಮತ್ತು ಇನ್ಫೊಸಿಸ್‌ ಷೇರುಗಳು ಶೇ 2ರವರೆಗೂ ಗಳಿಕೆ ಕಂಡುಕೊಂಡಿವೆ.

ಮಂದಗತಿಯ ಆರ್ಥಿಕ ಬೆಳವಣಿಗೆ, ಆಗಸ್ಟ್‌ ತಿಂಗಳ ವಾಹನ ಮಾರಾಟದಲ್ಲಿ ಎರಡಂಕಿ ಕುಸಿತ, ತಯಾರಿಕಾ ವಲಯದ ಚಟುವಟಿಕೆ ಆಗಸ್ಟ್‌ನಲ್ಲಿ 15 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿರುವುದು ಹೀಗೆ ಇನ್ನೂ ಹಲವು ಗಂಭೀರ ಸಮಸ್ಯೆಗಳಿಂದಾಗಿ ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟು ನಡೆಯುತ್ತಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

Post Comments (+)