ಬುಧವಾರ, ಏಪ್ರಿಲ್ 1, 2020
19 °C

ಷೇರುಪೇಟೆಯಲ್ಲಿ ಗೂಳಿ ಗುಟುರು: ಜಿಗಿದ ಸೆನ್ಸೆಕ್ಸ್‌, ಮರಳಿದ ಹೂಡಿಕೆ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷೇರುಪೇಟೆಯಲ್ಲಿ ಚೇತರಿಕೆ

ಬೆಂಗಳೂರು: ದಶಕದಲ್ಲೇ ಅತಿ ದೊಡ್ಡ ಕುಸಿತ ಕಂಡಿದ್ದ ದೇಶದ ಷೇರುಪೇಟೆ ಸೋಮವಾರ ಜಿಗಿದಿದೆ. ಕೊರೊನಾ ವೈರಸ್ ಭೀತಿಯಿಂದ ಹೂಡಿಕೆದಾರರು ಹೊರಬಂದಂತೆ ಕಂಡು ಬಂದಿದೆ. ಮಾರಾಟ ಒತ್ತಡದಿಂದ ಇಳಿಕೆಯಾಗಿದ್ದ ಸೆನ್ಸೆಕ್ಸ್‌ ಖರೀದಿ ಭರಾಟೆಯಿಂದ ಏರಿಕೆಯಾಗಿದೆ. 

750 ಅಂಶಗಳ ಚೇತರಿಕೆಯೊಂದಿಗೆ ಸೆನ್ಸೆಕ್ಸ್‌ ವಹಿವಾಟು ಆರಂಭಿಸುವ ಮೂಲಕ ಹೂಡಿಕೆದಾರರ ಸಕಾರಾತ್ಮಕ ಧೋರಣೆ ವ್ಯಕ್ತವಾಯಿತು. ಕುಸಿತ ಕಂಡಿದ್ದ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಐಟಿಸಿ, ಟಿಸಿಎಸ್‌ ಹಾಗೂ ಇನ್ಫೊಸಿಸ್‌ ಷೇರುಗಳು ಗಳಿಕೆ ದಾಖಲಿಸಿವೆ.

ಬೆಳಿಗ್ಗೆ 11:55ಕ್ಕೆ ಸೆನ್ಸೆಕ್ಸ್‌ 626.71 ಜಿಗಿತದೊಂದಿಗೆ38,924.00 ಅಂಶ ಮುಟ್ಟಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 181.55 ಅಂಶ ಹೆಚ್ಚಳದೊಂದಿಗೆ 11,383.30 ಅಂಶ ತಲುಪಿದೆ. ಹೂಡಿಕೆದಾರರ ಸಂಪತ್ತು ಸುಮಾರು ₹2 ಲಕ್ಷ ಕೋಟಿ ಏರಿಕೆಯಾಗಿದೆ. 

ಕೊಟ್ಯಾಕ್‌ ಬ್ಯಾಂಕ್‌, ಬಜಾಜ್‌ ಆಟೊ ಸೇರಿದಂತೆ ಕೆಲವು ಕಂಪನಿಗಳ ಷೇರುಗಳು ನಕಾರಾತ್ಮಕ ವಹಿವಾಟು ಕಂಡಿದೆ.

ಷೇರುಪೇಟೆ ಇತಿಹಾಸದಲ್ಲಿಯೇ ಎರಡನೇ ಅತಿ ದೊಡ್ಡ ಕುಸಿತ ಶುಕ್ರವಾರ ದಾಖಲಾಯಿತು. ಸೆನ್ಸೆಕ್ಸ್‌ ಒಂದೇ ದಿನ 1,448.37 ಅಂಶ (ಶೇ 3.64) ಇಳಿಕೆಯಾಗಿ 38,297.29 ತಲುಪಿತ್ತು. ನಿಫ್ಟಿ ಸಹ 431.55 ಅಂಶ (ಶೇ 3.71) ಇಳಿಕೆಯಾಗಿ 11,207.75 ಅಂಶಗಳಿಗೆ ಕುಸಿದಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ ₹1,428.74 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. 

ಸೋಮವಾರ ಷೇರುಪೇಟೆ ಚೇತರಿಕೆ ಕಾಣುತ್ತಿದ್ದಂತೆ ಡಾಲರ್‌ ಎದುರು ರೂಪಾಯಿ ಮೌಲ್ಯದಲ್ಲಿ 20 ಪೈಸೆ ಹೆಚ್ಚಳವಾಗಿದ್ದು, ಪ್ರತಿ ಡಾಲರ್‌ಗೆ ₹72.04ರಲ್ಲಿ ವಹಿವಾಟು ನಡೆದಿದೆ. ರಿಟೇಲ್‌ ಹೂಡಿಕೆದಾರರಿಗೆ ಇಂದಿನಿಂದ ಎಸ್‌ಬಿಐ ಕಾರ್ಡ್ಸ್‌ ಐಪಿಒ ಪಡೆಯುವ ಅವಕಾಶವಿದೆ. ಷೇರುಪೇಟೆ ಸಕಾರಾತ್ಮಕ ವಹಿವಾಟು ಐಪಿಒ ಮೂಲಕ ಹೂಡಿಕೆಗೂ ಉತ್ತೇಜಿಸಬಹುದಾಗಿದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು