ಶನಿವಾರ, ಮೇ 21, 2022
28 °C

ಸೆನ್ಸೆಕ್ಸ್: ಮೂರು ದಿನಗಳ ಗಳಿಕೆಯ ಓಟಕ್ಕೆ ವಿರಾಮ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮೂರು ದಿನಗಳ ಗಳಿಕೆಯ ಓಟಕ್ಕೆ ವಿರಾಮ ನೀಡಿದ ಸೆನ್ಸೆಕ್ಸ್, ಶುಕ್ರವಾರದ ವಹಿವಾಟಿನಲ್ಲಿ 190 ಅಂಶಗಳ ಇಳಿಕೆ ದಾಖಲಿಸಿತು. ಬ್ಯಾಂಕಿಂಗ್, ಹಣಕಾಸು ಮತ್ತು ಇಂಧನ ವಲಯದ ಷೇರುಗಳ ಮಾರಾಟ ಹಾಗೂ ಐ.ಟಿ. ವಲಯದ ಷೇರುಗಳ ಖರೀದಿ ಜೋರಾಗಿತ್ತು.

ವಿದೇಶಿ ಹೂಡಿಕೆದಾರರು ಬಂಡವಾಳ ಹಿಂತೆಗೆದುಕೊಳ್ಳುತ್ತಿರುವುದು ಮುಂದುವರಿದಿದೆ ಎಂದು ವರ್ತಕರು ತಿಳಿಸಿದ್ದಾರೆ. ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 57,124 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 68 ಅಂಶ ಇಳಿಕೆ ಕಂಡು, 17,003ರಲ್ಲಿ ವಹಿವಾಟು ಕೊನೆಗೊಳಿಸಿತು.

‘ಓಮೈಕ್ರಾನ್‌ ಪ್ರಕರಣಗಳ ಹೆಚ್ಚಳ ಹಾಗೂ ಹಣದುಬ್ಬರ ಹೆಚ್ಚಳದ ಕಾರಣ ಷೇರು ಮಾರುಕಟ್ಟೆಗಳಲ್ಲಿ ಅಸ್ಥಿರತೆ ಜಾಸ್ತಿ ಇದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.

ವಾರದ ವಹಿವಾಟಿನ ಅವಧಿಯಲ್ಲಿ ಸೆನ್ಸೆಕ್ಸ್ 112 ಅಂಶ ಏರಿಕೆ ಕಂಡಿದೆ. ನಿಫ್ಟಿ 18 ಅಂಶ ಏರಿಕೆಯಾಗಿದೆ. ‘ಬಂಡವಾಳ ಮಾರುಕಟ್ಟೆಗಳು ಕೋವಿಡ್‌ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿವೆ. ಒಳ್ಳೆಯ ಸುದ್ದಿ ಬಂದರೆ ಸೂಚ್ಯಂಕಗಳ ಏರುಮುಖ ಚಲನೆ ಶುರುವಾಗುತ್ತದೆ. ಅಂತಹ ಸುದ್ದಿ ಬಾರದೆ ಇದ್ದರೆ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿಯಲಿದೆ’ ಎಂದು ರೆಲಿಗೇರ್ ಬ್ರೋಕಿಂಗ್‌ನ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.

‘ವರ್ತಕರು ಐ.ಟಿ., ಆಯ್ದ ಎಫ್‌ಎಂಸಿಜಿ ಕಂಪನಿಗಳು, ಫಾರ್ಮಾ ಕಂಪನಿಗಳ ಮೇಲೆ ಗಮನ ಇರಿಸಬೇಕು. ಬ್ಯಾಂಕಿಂಗ್ ವಲಯದ ಷೇರುಗಳ ಮಂದಗತಿಯ ವಹಿವಾಟು ಮುಂದುವರಿಯಬಹುದು’ ಎಂದು ಅವರು ಹೇಳಿದ್ದಾರೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂ‍ಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು 23 ಪೈಸೆ ಹೆಚ್ಚಳವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು