ಬುಧವಾರ, ಅಕ್ಟೋಬರ್ 5, 2022
26 °C

ಅಮೆರಿಕದಲ್ಲಿ ಬಡ್ಡಿ ಏರಿಕೆ: ಕುಸಿದ ಸೆನ್ಸೆಕ್ಸ್, ನಿಫ್ಟಿ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು ಶೇಕಡ 0.75ರಷ್ಟು ಹೆಚ್ಚಿಸಿದ ನಂತರದಲ್ಲಿ ಜಾಗತಿಕ ಷೇರುಪೇಟೆಗಳಲ್ಲಿ ಕುಸಿತ ಕಂಡುಬಂತು. ಇದರ ಪರಿಣಾಮ ಭಾರತದ ಷೇರುಪೇಟೆಗಳ ಮೇಲೆಯೂ ಆಗಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಇಳಿಕೆ ದಾಖಲಿಸಿದವು.

ಹಣದುಬ್ಬರ ಪ್ರಮಾಣವನ್ನು ನಿಯಂತ್ರಿಸಲು ಬಡ್ಡಿ ದರವನ್ನು ಇನ್ನಷ್ಟು ಹೆಚ್ಚಿಸುವ ಸೂಚನೆಯನ್ನು ಫೆಡರಲ್ ರಿಸರ್ವ್ ನೀಡಿದೆ. ಸೆನ್ಸೆಕ್ಸ್ 337 ಅಂಶ, ನಿಫ್ಟಿ 88 ಅಂಶ ಕುಸಿದಿವೆ.

‘ಫೆಡರಲ್‌ ರಿಸರ್ವ್‌ ನಿರೀಕ್ಷೆಗಿಂತಲೂ ಹೆಚ್ಚಿನ ಬಿಗಿ ಹಣಕಾಸಿನ ನಿಲುವು ತಾಳಿದೆ. ಈ ವರ್ಷದಲ್ಲಿ ಇನ್ನು ಎರಡು ಹಂತಗಳಲ್ಲಿ ಬಡ್ಡಿ ದರವನ್ನು ಒಟ್ಟು ಶೇ 1.25ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ದೇಶದ ಷೇರುಪೇಟೆಗಳು ದೊಡ್ಡ ಮಟ್ಟದ ಕುಸಿತವನ್ನು ಕಾಣಲಿಲ್ಲ. ಆದರೆ, ರೂಪಾಯಿ ಇನ್ನಷ್ಟು ದುರ್ಬಲವಾಗುತ್ತಿದ್ದರೆ ಭಾರತದ ಷೇರುಪೇಟೆಗಳು ವಿದೇಶಿ ಹೂಡಿಕೆದಾರರ ಪಾಲಿಗೆ ಅಲ್ಪಾವಧಿಗೆ ಆಕರ್ಷಣೆ ಕಳೆದುಕೊಳ್ಳುತ್ತವೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಜಾಗತಿಕ ಮಾರುಕಟ್ಟೆಯ ಜೊತೆ ನಂಟು ಹೊಂದಿರುವ ಐ.ಟಿ., ಲೋಹ ಮತ್ತು ಔಷಧ ವಲಯಗಳ ಷೇರುಗಳು ಆರ್ಥಿಕ ಹಿಂಜರಿತದ ಭೀತಿಯ ಕಾರಣದಿಂದಾಗಿ ಕೆಲವು ಕಾಲದವರೆಗೆ ಒತ್ತಡ ಅನುಭವಿಸಲಿವೆ ಎಂದು ಮೋತಿಲಾಲ್ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಣ್ಣ ಹೂಡಿಕೆಗಳ ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕ ಹೇಳಿದ್ದಾರೆ. ಎಫ್‌ಎಂಸಿಜಿ, ಪೇಂಟ್ಸ್‌, ಟೈರ್‌ ಮತ್ತು ಆಟೊ ವಲಯಗಳು ಪ್ರಯೋಜನ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಅಂದಾಜಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 90.32 ಡಾಲರ್‌ಗೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರ ಒಟ್ಟು ₹ 2,509 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು