ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಮಾತು: ನಿಮಗೆ ಯಾವ ‘ಸ್ಟಾಕ್ ಬ್ರೋಕರ್’ ಸೂಕ್ತ?

Last Updated 31 ಮೇ 2021, 19:10 IST
ಅಕ್ಷರ ಗಾತ್ರ

ಷೇರು ಮಾರುಕಟ್ಟೆ ವ್ಯವಸ್ಥೆಯಲ್ಲಿ ಎರಡು ರೀತಿಯ ದಲ್ಲಾಳಿಗಳಿರುತ್ತಾರೆ (ಬ್ರೋಕರ್ಸ್). ಫುಲ್ ಸರ್ವೀಸ್ ಬ್ರೋಕರ್‌ಗಳು ಮತ್ತು ಡಿಸ್ಕೌಂಟ್ ಬ್ರೋಕರ್‌ಗಳು. ಈ ಎರಡೂ ವ್ಯವಸ್ಥೆಗಳು ಷೇರು ವಹಿವಾಟಿನಲ್ಲಿ ಸಹಕಾರ ನೀಡುತ್ತವೆ. ಆದರೆ ಯಾವುದನ್ನು ನೀವು ಆಯ್ಕೆ ಮಾಡಿಕೊಳ್ಳುವುದು ಸೂಕ್ತ?

ಫುಲ್ ಸರ್ವೀಸ್ ಬ್ರೋಕರ್: ಹೆಸರೇ ಹೇಳುವಂತೆ ಫುಲ್ ಸರ್ವೀಸ್ ಬ್ರೋಕರ್ ಅಂದರೆ, ಷೇರು ಮಾರುಕಟ್ಟೆ ವಹಿವಾಟಿಗೆ ಸಂಬಂಧಿಸಿದಂತೆ ಸಮಗ್ರ ಸೇವೆ ಒದಗಿಸುವ ದಲ್ಲಾಳಿ ಸಂಸ್ಥೆ. ಡಿಮ್ಯಾಟ್, ಟ್ರೇಡಿಂಗ್ ಖಾತೆ ಒದಗಿಸುವ ಜೊತೆಗೆ ಷೇರುಗಳ ಖರೀದಿ ಮತ್ತು ಮಾರಾಟಕ್ಕೆ ಸಲಹೆ ನೀಡಲು ಇಲ್ಲಿ ಪರಿಣತರ ಸಹಕಾರ ಸಿಗುತ್ತದೆ. ಮೊಬೈಲ್ ಕರೆ ಮಾಡಿ, ಯಾವ ಷೇರು ಖರೀದಿಸಬೇಕು, ಯಾವುದನ್ನು ಮಾರಾಟ ಮಾಡಬೇಕು ಎಂದು ನಿರ್ಣಯ ತೆಗೆದುಕೊಳ್ಳಲು ಅವಕಾಶವಿರುತ್ತದೆ.

ಷೇರು ಹೂಡಿಕೆಗೆ ಸಂಬಂಧಿಸಿದಂತೆ ಪ್ರತಿದಿನ ಸಲಹೆ–ಸೂಚನೆಗಳು, ಮ್ಯೂಚುವಲ್ ಫಂಡ್, ಐಪಿಒ ಹೂಡಿಕೆ, ವಿಮೆ, ಸಾಲ ಮತ್ತಿತರ ಸೇವೆಗಳನ್ನು ಫುಲ್ ಸರ್ವೀಸ್ ಬ್ರೋಕರ್‌ಗಳು ಒದಗಿಸುತ್ತಾರೆ. ದೇಶದ ನಾನಾ ಭಾಗಗಳಲ್ಲಿ ಇವರ ಕಚೇರಿಗಳಿರುತ್ತವೆ. ಈ ಸೇವೆಯಲ್ಲಿ ನಿರ್ವಹಣಾ ವೆಚ್ಚ ಹೆಚ್ಚಿರುವ ಕಾರಣ ಹೂಡಿಕೆದಾರರು ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಐಸಿಐಸಿಐ ಡೈರೆಕ್ಟ್, ಕೋಟಕ್ ಸೆಕ್ಯೂರಿಟೀಸ್, ಮೋತಿಲಾಲ್ ಓಸ್ವಾಲ್, ಎಚ್‌ಡಿಎಫ್‌ಸಿ ಸೆಕ್ಯೂರಿಟೀಸ್, ಎಸ್‌ಬಿಐ ಸೆಕ್ಯೂರಿಟೀಸ್... ಇವು ಕೆಲವು ಉದಾಹರಣೆಗಳು.

ಫುಲ್ ಸರ್ವೀಸ್ ಬ್ರೋಕರ್ ಶುಲ್ಕ: ನೋಂದಣಿ ಶುಲ್ಕ ₹ 300ರಿಂದ ₹ 500 ಇರುತ್ತದೆ. ಬ್ರೋಕರೇಜ್ ಶುಲ್ಕ ಸಾಮಾನ್ಯವಾಗಿ ಶೇಕಡ 0.3ರಿಂದ ಶೇ 0.5ರಷ್ಟಿರುತ್ತದೆ. ಉದಾಹರಣೆಗೆ ₹ 5 ಸಾವಿರದ ವಹಿವಾಟು ನಡೆಸುತ್ತಿದ್ದೀರಿ ಅಂದರೆ ಶೇ 0.5ರಷ್ಟು (₹ 25) ಶುಲ್ಕ ಪಾವತಿಸಬೇಕು.

ಡಿಸ್ಕೌಂಟ್ ಬ್ರೋಕರ್ಸ್: ಡಿಸ್ಕೌಂಟ್ ಬ್ರೋಕರ್‌ಗಳು ಸಾಮಾನ್ಯವಾಗಿ ಷೇರು ವಹಿವಾಟು ಶುಲ್ಕ ಕಡಿಮೆ ಪಡೆಯುತ್ತಾರೆ. ಇವರು ಕೂಡ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆ ಒದಗಿಸುತ್ತಾರೆ. ಆದರೆ ಹಲವೆಡೆ ಕಚೇರಿಗಳನ್ನು ಹೊಂದಿರುವುದಿಲ್ಲ. ತಂತ್ರಜ್ಞಾನದ ಸಹಾಯದಿಂದ ಷೇರು ವಹಿವಾಟಿಗೆ ಸರಳವಾದ ವ್ಯವಸ್ಥೆ ಒದಗಿಸಿರುತ್ತಾರೆ. ಸ್ಮಾರ್ಟ್‌ಫೋನ್‌ ಅಥವಾ ಲ್ಯಾಪ್‌ಟಾಪ್ ಬಳಸಿ ಷೇರುಗಳ ಖರೀದಿ, ಮಾರಾಟ ಮಾಡಬಹುದು.

ಮ್ಯೂಚುವಲ್ ಫಂಡ್ ಹೂಡಿಕೆ, ಐಪಿಒ ಹೂಡಿಕೆ, ಷೇರು ವಿಶ್ಲೇಷಣೆ, ಮುಂತಾದ ಕೆಲವು ಸೇವೆಗಳನ್ನು ಇವರೂ ಒದಗಿಸುತ್ತಾರೆ. ಆದರೆ ಪರಿಣತರ ನೇರ ಸಲಹೆ, ಅಧ್ಯಯನ ಮುಂತಾದ ಸೌಲಭ್ಯಗಳು ಇಲ್ಲಿರುವುದಿಲ್ಲ. ಜೆರೋಧಾ, ಅಪ್‌ಸ್ಟಾಕ್, ಫೈವ್‌ ಪೈಸೆ, ಗ್ರೋ, ಪೇಟಿಎಂ ಮನಿ... ಡಿಸ್ಕೌಂಟ್ ಬ್ರೋಕರ್‌ಗಳಿಗೆ ಉದಾಹರಣೆಗಳು.

ಡಿಸ್ಕೌಂಟ್ ಬ್ರೋಕರ್ ಶುಲ್ಕ: ಫುಲ್‌ ಸರ್ವೀಸ್ ಬ್ರೋಕರ್‌ಗಳಿಗಿಂತ ಶೇ 60ರಷ್ಟು ಕಡಿಮೆ ಶುಲ್ಕ ಇಲ್ಲಿರುತ್ತದೆ. ಬಹುತೇಕ ಡಿಸ್ಕೌಂಟ್ ಬ್ರೋಕರ್‌ಗಳು ನೋಂದಣಿಗೆ ₹ 300 ಪಡೆಯುತ್ತವೆ. ನಂತರದಲ್ಲಿ ₹ 5 ಸಾವಿರ ಮೊತ್ತದ ವಹಿವಾಟಿರಲಿ ₹ 5 ಲಕ್ಷದ ವಹಿವಾಟಿರಲಿ ಈ ಬ್ರೋಕರ್‌ಗಳು ಪ್ರತಿ ವಹಿವಾಟಿಗೆ ಸುಮಾರು ₹ 20 ಶುಲ್ಕ ಪಡೆಯುತ್ತವೆ. ಕೆಲವು ಡಿಸ್ಕೌಂಟ್ ಬ್ರೋಕರ್‌ಗಳ ಶುಲ್ಕಗಳಲ್ಲಿ, ರೀತಿ ರಿವಾಜುಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತವೆ. ಇತ್ತೀಚಿನ ದಿನಗಳಲ್ಲಿ ಡಿಸ್ಕೌಂಟ್ ಬ್ರೋಕರ್‌ಗಳು ಹೆಚ್ಚು ಜನಪ್ರಿಯತೆ ಗಳಿಸಿಕೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT