ಗುರುವಾರ , ನವೆಂಬರ್ 14, 2019
18 °C
ಜಾಗತಿಕ ವಿದ್ಯಮಾನಗಳ ಪ್ರಭಾವ; ಸತತ 7ನೇ ವಹಿವಾಟಿನ ದಿನವೂ ಗಳಿಕೆ

ಸೂಚ್ಯಂಕದ ಸಾರ್ವಕಾಲಿಕ ದಾಖಲೆ

Published:
Updated:
Prajavani

ಮುಂಬೈ: ದೇಶದ ಷೇರುಪೇಟೆಗಳು ಸತತ ಏಳನೇ ದಿನವೂ ಸಕಾರಾತ್ಮಕ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿವೆ. ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ತಲುಪಿದೆ.

ತ್ರೈಮಾಸಿಕದಲ್ಲಿ ಕಂಪನಿಗಳ ಹಣಕಾಸು ಸಾಧನೆ ಉತ್ತಮವಾಗಿರುವುದು, ವಿದೇಶಿ ಬಂಡವಾಳ ಒಳಹರಿವು ಹೆಚ್ಚಾಗುತ್ತಿರುವುದು ಹಾಗೂ ಜಾಗತಿಕ ವಿದ್ಯಮಾನಗಳ ಪ್ರಭಾವದಿಂದಾಗಿ ಷೇರುಪೇಟೆಗಳಲ್ಲಿ ಸೋಮವಾರ ಖರೀದಿ ವಹಿವಾಟು ಜೋರಾಗಿತ್ತು.

ಬಿಎಸ್‌ಇ ಸೂಚ್ಯಂಕವು ದಿನದ ವಹಿವಾಟಿನಲ್ಲಿ 137 ಅಂಶ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 40,302 ಅಂಶಗಳಿಗೆ ತಲುಪಿತು. ಮಧ್ಯಂತರ ವಹಿವಾಟಿನಲ್ಲಿ 40,483 ಅಂಶಗಳಿಗೂ ತಲುಪಿತ್ತು. ಈ ಹಿಂದೆ ಜೂನ್‌ 3ರಂದು ತಲುಪಿದ್ದ 40,268 ಅಂಶಗಳ ದಾಖಲೆ ಮಟ್ಟವನ್ನೂ ಮೀರಿತು.

2019ರಲ್ಲಿ ನಾಲ್ಕನೇ ಬಾರಿಗೆ ಷೇರುಪೇಟೆಯು ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 51 ಅಂಶ ಹೆಚ್ಚಾಗಿ 11,941 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಜಾಗತಿಕ ವಾಣಿಜ್ಯ ಸಮರ ತಗ್ಗುವ ನಿರೀಕ್ಷೆಯಿಂದ ಶಾಂಘೈ, ಹಾಂಗ್‌ಕಾಂಗ್‌ ಮತ್ತು ಸೋಲ್‌ ಷೇರುಪೇಟೆಗಳಲ್ಲಿ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿದೆ. ಯುರೋಪ್‌ ಷೇರುಪೇಟೆಗಳಲ್ಲಿಯೂ ಸಕಾರಾತ್ಮಕ ವಹಿವಾಟು ನಡೆದಿದೆ.

ಎಫ್‌ಪಿಐ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಷೇರುಗಳ ಖರೀದಿಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಬಂಡವಾಳ ಮಾರುಕಟ್ಟೆಯಲ್ಲಿ ₹ 16,464 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ.

ಗರಿಷ್ಠ ಗಳಿಕೆ: ಇನ್ಫೊಸಿಸ್‌, ವೇದಾಂತ, ಎಚ್‌ಡಿಎಫ್‌ಸಿ, ಟಾಟಾ ಸ್ಟೀಲ್‌, ಒಎನ್‌ಜಿಸಿ ಮತ್ತು ಐಸಿಐಸಿಐ ಬ್ಯಾಂಕ್‌ ಷೇರುಗಳು ಶೇ 3.05ರವರೆಗೂ ಏರಿಕೆ ಕಂಡಿವೆ.

ನಷ್ಟ: ಮಾರುತಿ, ಹೀರೊ ಮೋ ಟೊಕಾರ್ಪ್‌, ಇಂಡಸ್‌ಇಂಡ್‌ ಬ್ಯಾಂಕ್‌, ಟಾಟಾ ಮೋಟರ್ಸ್‌ ಮತ್ತು ಪವರ್‌ ಗ್ರಿಡ್‌ ಷೇರುಗಳು ಶೇ 2.54ರವರೆಗೂ ಇಳಿಕೆ ಕಂಡಿವೆ.

ರೂಪಾಯಿ 5 ತಿಂಗಳ ಗರಿಷ್ಠ
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 4 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 70.77ರಂತೆ ವಿನಿಮಯಗೊಂಡಿತು.

ವಿದೇಶಿ ಬಂಡವಾಳ ಒಳಹರಿವು ಹೆಚ್ಚಳ ಮತ್ತು ವಾಣಿಜ್ಯ ಸಮರ ತಗ್ಗುವ ವಿಶ್ವಾಸದಿಂದ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಕಚ್ಚಾ ತೈಲ ದರ ಏರಿಕೆ ಮತ್ತು ಪ್ರಮುಖ ಕರೆನ್ಸಿಗಳ ಎದುರು ಡಾಲರ್‌ ಮೌಲ್ಯ ವೃದ್ಧಿಯೂ ರೂಪಾಯಿ ಗಳಿಕೆಗೆ ನೆರವಾಯಿತು ಎಂದು ವರ್ತಕರು ಹೇಳಿದ್ದಾರೆ. ಬ್ರೆಂಟ್‌ ತೈಲ ದರ ಶೇ 0.28ರಷ್ಟು ಹೆಚ್ಚಾಗಿ ಒಂದು ಬ್ಯಾರೆಲ್‌ಗೆ 61.86 ಡಾಲರ್‌ಗಳಿಗೆ ತಲುಪಿದೆ.

ಪ್ರಭಾವ ಬೀರಿದ ಅಂಶಗಳು
*
 ತ್ರೈಮಾಸಿಕ ಫಲಿತಾಂಶ ಸಕಾರಾತ್ಮಕ
* ಅಮೆರಿಕ–ಚೀನಾ ವಾಣಿಜ್ಯ ಬಿಕ್ಕಟ್ಟು ಬಗೆಹರಿಯುವ ವಿಶ್ವಾಸ
* ವಿದೇಶಿ ಬಂಡವಾಳದ ಒಳಹರಿವಿನಲ್ಲಿ ಹೆಚ್ಚಳ
* ಆರ್ಥಿಕತೆಯ ಚೇತರಿಕೆಗೆ ಇನ್ನಷ್ಟು ಸುಧಾರಣಾ ಕ್ರಮಗಳ ನಿರೀಕ್ಷೆ
* ಅಕ್ಟೋಬರ್‌ನಲ್ಲಿ ಪ್ರಯಾಣಿಕ ವಾಹನ ಮಾರಾಟದಲ್ಲಿ ಚೇತರಿಕೆ

ಪ್ರತಿಕ್ರಿಯಿಸಿ (+)