ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಮ್ಯಾಟೊ: ಯುವಕರ ಉತ್ಸಾಹ

Last Updated 16 ಜುಲೈ 2021, 19:07 IST
ಅಕ್ಷರ ಗಾತ್ರ

ಬೆಂಗಳೂರು: ರೆಸ್ಟೊರೆಂಟ್‌ ಮತ್ತು ಹೋಟೆಲ್‌ಗಳಿಂದ ತಿಂಡಿ–ತಿನಿಸುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಜೊಮ್ಯಾಟೊ ಕಂಪನಿಯ ಷೇರುಗಳ ಖರೀದಿಗೆ ಬಿಡ್ ಸಲ್ಲಿಸಿದವರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಬಿಡ್ ಸಲ್ಲಿಸಿದವರ ಪೈಕಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಪ್ರಮಾಣ ಶೇಕಡ 27ರಷ್ಟಿದೆ.

ಷೇರು ಬ್ರೋಕರೇಜ್ ಸೇವೆಗಳನ್ನು ಡಿಜಿಟಲ್ ವೇದಿಕೆ ಮೂಲಕ ಒದಗಿಸುವ ಪೇಟಿಎಂ ಮನಿ ಕಂಪನಿಯು ಈ ಮಾಹಿತಿಯನ್ನು ಹಂಚಿಕೊಂಡಿದೆ. ಜೊಮ್ಯಾಟೊ ಕಂಪನಿಯು ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ (ಐಪಿಒ) ಮುಕ್ತವಾಗಿಸಿದ ಮೊದಲ ದಿನ ತನ್ನ ಮೂಲಕ ಸಲ್ಲಿಕೆಯಾದ ಬಿಡ್‌ಗಳ ವಿಶ್ಲೇಷಣೆ ನಡೆಸಿ, ಪೇಟಿಎಂ ಮನಿ ಈ ವಿವರ ನೀಡಿದೆ.

‘ಭಾರತದ ಷೇರು ಮಾರುಕಟ್ಟೆಗಳನ್ನು ಮುನ್ನಡೆಸುವ ಹೂಡಿಕೆದಾರರ ಸಮೂಹದಲ್ಲಿ ಆಗುತ್ತಿರಬಹುದಾದ ಬದಲಾವಣೆಯೊಂದನ್ನು ಜೊಮ್ಯಾಟೊ ಐಪಿಒ ಪ್ರಕ್ರಿಯೆಯು ಬಹಿರಂಗಪಡಿಸಿದೆ’ ಎಂದು ಪೇಟಿಎಂ ಮನಿ ಹೇಳಿದೆ. ಐಪಿಒ ಆರಂಭವಾದ ಮೊದಲ ದಿನ ಬಿಡ್ ಸಲ್ಲಿಸಿದ ಶೇಕಡ 22ರಷ್ಟಕ್ಕೂ ಹೆಚ್ಚಿನವರು ಮೊದಲ ಬಾರಿಗೆ ಹೂಡಿಕೆ ಜಗತ್ತಿಗೆ ಕಾಲಿರಿಸಿದವರು.

ಮೊದಲ ದಿನ ಬಿಡ್‌ ಸಲ್ಲಿಸಿದ ಶೇ 60ರಷ್ಟು ಜನ ಮೂವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಸಾಮಾನ್ಯವಾಗಿ ಐಪಿಒಗಳ ಸಂದರ್ಭದಲ್ಲಿ ಷೇರುಗಳಿಗೆ ಬಿಡ್‌ ಸಲ್ಲಿಸುವವರ ಪೈಕಿ ಶೇ 55ರಷ್ಟು ಜನ ಮಾತ್ರ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುತ್ತಿದ್ದರು. ಮಹಾನಗರಗಳಾದ ಬೆಂಗಳೂರು, ದೆಹಲಿ ಮತ್ತು ಮುಂಬೈ ಮಾತ್ರವೇ ಅಲ್ಲದೆ ಸಣ್ಣ ಪಟ್ಟಣಗಳಾದ ಗುಜರಾತ್‌ನ ಕೊಡೀನಾರ್, ನಾಗಾಲ್ಯಾಂಡ್‌ನ ತುಯೆನ್‌ಸಾಂಗ್‌, ಅಸ್ಸಾಂನ ರಂಗಾಪಾರಾದಿಂದಲೂ ಬಿಡ್‌ ಸಲ್ಲಿಕೆಯಾಗಿವೆ.

ಬಿಡ್‌ ಸಲ್ಲಿಸಿದವರ ಪೈಕಿ ಶೇ 10ರಷ್ಟು ಮಂದಿ ಮಹಿಳೆಯರು. ಪುರುಷರಿಗೆ ಹೋಲಿಸಿದರೆ ಇವರು ಹೂಡಿಕೆ ಮಾಡಲು ಮುಂದಾಗಿರುವ ಮೊತ್ತ ಕೂಡ ಜಾಸ್ತಿ ಇದೆ. ‘ಈ ರೀತಿ ಆಗಿರುವುದಕ್ಕೆ ಕಾರಣ ಜೊಮ್ಯಾಟೊ ಐಪಿಒಗೆ ಸಿಕ್ಕಿದ ಜನಪ್ರಿಯತೆ ಆಗಿರಬಹುದು. ಹಾಗೆಯೇ, ಸಣ್ಣ ಹೂಡಿಕೆದಾರರಲ್ಲಿ ರಿಸ್ಕ್‌ ತೆಗೆದುಕೊಳ್ಳುವ ಮನೋಭಾವ ಹೆಚ್ಚಾಗಿರುವುದು ಕೂಡ ಇದಕ್ಕೆ ಕಾರಣವಾಗಿರಬಹುದು’ ಎಂದು ಪೇಟಿಎಂ ಮನಿ ವಕ್ತಾರರೊಬ್ಬರು ಹೇಳಿದ್ದಾರೆ.

ಬಿಡ್‌ ಅವಧಿ ಮುಕ್ತಾಯ

ನವದೆಹಲಿ: ಜೊಮ್ಯಾಟೊ ಕಂಪನಿಯ ಐಪಿಒಗೆ ಭಾರಿ ಸ್ಪಂದನ ಬಂದಿದ್ದು, 38 ಪಟ್ಟು ಬಿಡ್‌ಗಳು ಸಲ್ಲಿಕೆಯಾಗಿವೆ. ಸಾಂಸ್ಥಿಕ ಹೂಡಿಕೆದಾರರು ಕೂಡ ಷೇರು ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಬಿಡ್‌ ಸಲ್ಲಿಸುವ ಅವಧಿ ಶುಕ್ರವಾರಕ್ಕೆ ಕೊನೆಗೊಂಡಿದೆ.

ಕಂಪನಿಯು ಮಾರಾಟಕ್ಕೆ ಮುಕ್ತವಾಗಿಸಿರುವ ಷೇರುಗಳ ಸಂಖ್ಯೆ 71.92 ಕೋಟಿ. ಇದಕ್ಕೆ ಪ್ರತಿಯಾಗಿ, 2,751.25 ಕೋಟಿ ಷೇರುಗಳಿಗೆ ಬಿಡ್‌ಗಳು ಸಲ್ಲಿಕೆಯಾಗಿವೆ ಎಂದು ಷೇರುಪೇಟೆ ಅಂಕಿ–ಅಂಶಗಳಿಂದ ಗೊತ್ತಾಗಿದೆ. 2020ರ ಮಾರ್ಚ್‌ ನಂತರ ದೇಶದಲ್ಲಿ ನಡೆಯುತ್ತಿರುವ ಅತಿದೊಡ್ಡ ಐಪಿಒ ಇದು.

65 ಲಕ್ಷ ಷೇರುಗಳು ಕಂ‍ಪನಿಯ ನೌಕರರಿಗೆ ಮೀಸಲಾಗಿದ್ದವು. ಈ ಪೈಕಿ ಶೇ 62ರಷ್ಟು ಷೇರುಗಳಿಗೆ ಮಾತ್ರ ಬಿಡ್ ಸಲ್ಲಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT