ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮದ ಹೊಸ ಬೆಳಕು ‘ಎಲ್ಇಡಿ’

Last Updated 8 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಗೃಹೋಪಯೋಗ ಹಾಗೂ ವಾಣಿಜ್ಯ ಬಳಕೆಯಲ್ಲಿ ಸದ್ಯ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿರುವ ‘ಎಲ್ಇಡಿ ಲೈಟಿಂಗ್’, ಉದ್ಯಮ ಲಕ್ಷಾಂತರ ಜನರಿಗೆ ದುಡಿಯುವ ಅವಕಾಶವನ್ನೂ ಒದಗಿಸುತ್ತಿದೆ ಎಂಬುದು ಗಮನಾರ್ಹ. ಗೃಹಬಳಕೆ, ಬೀದಿ ದೀಪ, ಒಳಾಂಗಣ ಮತ್ತು ಹೊರಾಂಗಣ ದೀಪಗಳ ವ್ಯವಸ್ಥೆ, ಕೈಗಾರಿಕೆ ಮತ್ತು ಮೋಟಾರ್‌ ವಾಹನ ಉದ್ಯಮ ಕ್ಷೇತ್ರಗಳೂ ಸೇರಿದಂತೆ ಹತ್ತಾರು ವಲಯಗಳಲ್ಲಿ ಎಲ್‌ಇಡಿ ಬೆಳಗುತ್ತಿದೆ..

ವಿದ್ಯುತ್ ಕೊರತೆ ಹಾಗೂ ಅದಕ್ಕೆ ಸಂಬಂಧಿಸಿದ ಸವಾಲುಗಳು ಭಾರತಕ್ಕೆ ಹೊಸದೇನೂ ಅಲ್ಲ. ಆದರೆ ಈ ಸಮಸ್ಯೆಗಳನ್ನು ಎದುರಿಸುವ ಮಾರ್ಗಗಳು ಬದಲಾಗುತ್ತಿರುವುದು ಗಮನಾರ್ಹ. ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಕಡಿಮೆ ಮಾಡಬಲ್ಲ ಸಾಧ್ಯತೆಗಳಲ್ಲಿ ಒಂದಾಗಿ ಹೊರಹೊ­ಮ್ಮುತ್ತಿದೆ ‘ಎಲ್ಇಡಿ’ ಉದ್ಯಮ.

ಗೃಹೋಪಯೋಗ ಹಾಗೂ ವಾಣಿಜ್ಯ ಬಳಕೆ ವಿಭಾಗಗಳಲ್ಲಿ ನಿಧಾನವಾಗಿ ಬೇಡಿಕೆ ಹೆಚ್ಚಿಸಿಕೊ­ಳ್ಳುತ್ತಿರುವ ‘ಎಲ್ಇಡಿ ಲೈಟಿಂಗ್’, ಉದ್ಯಮ ಮುಂಬರುವ ದಿನಗಳಲ್ಲಿ ಸಾವಿರಾರು ಜನರಿಗೆ ದುಡಿಯುವ ಅವಕಾಶವನ್ನೂ ಒದಗಿಸಲಿದೆ ಎಂಬುದು ಗಮನಾರ್ಹ.

ಬೆಳಕಿನಿಂದ ಆರಂಭವಾಗುವ ನಮ್ಮ ನಿತ್ಯದ ಜೀವನ ಬೆಳಕಿನ ಕಿರಣಗಳನ್ನು ಮರೆಯಾಗಿಸುವು­ದರೊಟ್ಟಿಗೇ ವಿಶ್ರಾಂತಿಗೆ ಜಾರುತ್ತದೆ. ನಾವು ಈಗಿನ ದಿನಗಳಲ್ಲಿ ಪ್ರತಿ ಹೆಜ್ಜೆ ಮುಂದಿಡುವಲ್ಲೂ ವಿದ್ಯುತ್ ಶಕ್ತಿಯ ನೆರವು ಅತ್ಯಗತ್ಯ ಎನ್ನುವಂತಾಗಿದೆ. ಬೆಳಗು–ರಾತ್ರಿಗಳ ವ್ಯತ್ಯಾಸವೇ ಇಲ್ಲದಂತೆ ವಿದ್ಯುತ್ ನಮ್ಮ ಜೀವನಶೈಲಿಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ.

ಬೆಳಿಗೆ ಹಾಸಿಗೆ ಬಿಟ್ಟೇಳುವಾಗ ಕಣ್ಣು ಬಿಡುತ್ತಿದ್ದಂ­ತೆಯೇ ಮೊಬೈಲ್‌ ನೋಡುತ್ತೇವೆ. ಅಲ್ಲಿಂದ ಆರಂಭವಾಗುವ ವಿದ್ಯುತ್‌ ಶಕ್ತಿಯ ಸಹಚರ್ಯ ದಿನದುದ್ದಕ್ಕೂ ಮುಂದುವರೆಯುತ್ತದೆ. ಗೀಸರ್, ಓವೆನ್, ಫ್ರಿಜ್, ಟಿವಿ, ಫ್ಯಾನ್, ಕೂಲರ್, ಕ್ಯಾಮೆರಾ, ಕಂಪ್ಯೂಟರ್, ಲ್ಯಾಪ್‌ಟಾಪ್... ಹೀಗೆ ಹಲವು ರೂಪಗಳಲ್ಲಿ ನಮ್ಮೊಂದಿಗೇ ಹೆಜ್ಜೆ ಹಾಕುತ್ತದೆ ಈ ಜಗತ್ತು. ಇದೆಲ್ಲದರ ಪರಿಣಾಮ ಒಂದು ದಿನ ಕಳೆಯುವುದರಲ್ಲಿ ನಾವು ನಮಗೇ ಅರಿವಿಲ್ಲದಂತೆ ನೂರಾರು ಯೂನಿಟ್ ವಿದ್ಯುಚ್ಛಕ್ತಿಯನ್ನು ಬಳಸಿಬಿಟ್ಟಿರುತ್ತೇವೆ. ಹೀಗಾಗಿ ನಮ್ಮಲ್ಲಿ ವಿದ್ಯುತ್ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಇದೀಗ ಈ ಸಮಸ್ಯೆಗೆ ಹೊಸ ಪರಿಹಾರ ಮಾರ್ಗವೊಂದು ಕಂಡುಬಂದಿದೆ. ಅದುವೇ ‘ಎಲ್ಇಡಿ’ ಉಪಕರಣಗಳೆಂಬ ಹೊಸ ಸಾಧನಗಳು.

ಸಾಂಪ್ರದಾಯಿಕ ಸಾಮಾನ್ಯ ಲೈಟಿಂಗ್­(ಜಿಎಲ್ಎಸ್) ಲ್ಯಾಂಪ್ ಹಾಗೂ ಅಧಿಕ ತೀವ್ರತೆಯ ಕಾರ್ಯನಿರ್ವಾಹಕ (ಎಚ್ಐಡಿ) ಲ್ಯಾಂಪ್ ಬಳಕೆಗೆ ಅತ್ಯುತ್ತಮ ಪರ್ಯಾಯವಾಗಿ ‘ಎಲ್ಇಡಿ’ ಹೊರ­ಹೊಮ್ಮಿದೆ. ಗೃಹೋಪಯೋಗ, ಬೀದಿದೀಪ,  ಕೈಗಾ­ರಿಕೆ ಮತ್ತು ಮೋಟಾರ್‌ ವಾಹನ ತಯಾರಿಕೆ (ಕಾರು, ದ್ವಿಚಕ್ರ ವಾಹನಗಳಲ್ಲಿ ಎಲ್‌ಇಡಿ ಉಪಕರ­ಣಗಳ ಬಳಕೆ ಹೆಚ್ಚುತ್ತಿದೆ) ಉದ್ಯಮ ಕ್ಷೇತ್ರ ಸೇರಿದಂತೆ ಹತ್ತಾರು ವಲಯಗಳಲ್ಲಿ ದಾಪುಗಾಲು ಹಾಕುತ್ತಿದೆ ಎಲ್ಇಡಿ ಲೈಟಿಂಗ್.

‘ಎಲ್ಇಡಿ’ ಅಂದರೆ, ‘ಲೈಟ್‌ ಎಮಿಟಿಂಗ್‌ ಡಿಯೋಡ್‌’. ಇದು ಅತ್ಯಂತ ಕಡಿಮೆ ವಿದ್ಯುತ್‌ ಬಳಸಿ ಪ್ರಖರ ಬೆಳಕು ಹೊರಸೂಸುವ ಸಾಧನವಾಗಿದೆ. ಇಂದು ನಿತ್ಯದ ಬಳಕೆಗೆ ಲಭ್ಯವಾಗಿರುವ ಬೆಳಕಿನ ಈ ತಂತ್ರಜ್ಞಾನ ಸಂಪೂರ್ಣ ಹೊಸತೇ ಆದ ಪರಿಕಲ್ಪನೆಯೇನೂ ಅಲ್ಲ. ಆದರೆ ಹಿಂದೆಲ್ಲ ಈ ತಂತ್ರಜ್ಞಾನವನ್ನು ಕೇವಲ ವಿದ್ಯುನ್ಮಾನ ಸಾಧನಗಳಿಗೆ ಸೂಚಕ ದೀಪಗಳಾಗಿಯಷ್ಟೇ (indicator lights) ಬಳಸಲಾಗುತ್ತಿತ್ತು. ಕೆಂಪು, ಹಸಿರು ಮತ್ತು ನೀಲಿ ಬಣ್ಣದ ಎಲ್ಇಡಿ ದೀಪಗಳನ್ನು ಸಾಮಾನ್ಯವಾಗಿ ಸಂಚಾರ ದೀಪಗಳು ಮತ್ತು ನಿರ್ಗಮನದ ಚಿಹ್ನೆಗಳನ್ನಾಗಿ ಬಳಸಲಾಗುತ್ತಿದೆ. ಇತ್ತೀಚೆಗೆ ವೈಯಕ್ತಿಕ, ಸರ್ಕಾರಿ ಹಾಗೂ ವಾಣಿಜ್ಯ ವಲಯಗಳಲ್ಲಿ ಬಳಕೆ ಹೆಚ್ಚುತ್ತಾ ಇದೆ.

ವಿಸ್ತರಣೆಗೊಳ್ಳುತ್ತಿರುವ ಜನಸಂಖ್ಯೆ, ಆರ್ಥಿಕ ಬೆಳವಣಿಗೆ, ಹೊಸ ತಂತ್ರಜ್ಞಾನಗಳ ಅಭಿವೃದ್ಧಿ ಮುಂತಾದ ಕಾರಣಗಳಿಂದಾಗಿ ನಮ್ಮ ನಿತ್ಯದ ವಿದ್ಯುಚ್ಚಕ್ತಿಯ ಬಳಕೆ ಅಂಕೆ ಮೀರಿದೆ. ಇದರ ಪರಿಣಾಮ  2040ರ ವೇಳೆಗೆ ವಸತಿ ಮತ್ತು ವಾಣಿಜ್ಯ ವಲಯಗಳ ವಿದ್ಯುಚ್ಚಕ್ತಿಯ ಬೇಡಿಕೆ ಪ್ರಮಾಣ ಶೇ 30ರಷ್ಟು ಹೆಚ್ಚಲಿದೆ. ದೇಶದಲ್ಲಿ ತಯಾರಾಗುವ ಒಟ್ಟು ವಿದ್ಯುಚ್ಚಕ್ತಿಯಲ್ಲಿ ದೊಡ್ಡ ಪಾಲು ಕಾರ್ಖಾನೆಗಳು ಮತ್ತು ಪರಿಕರ ತಯಾರಿಕಾ ಘಟಕಗಳಿಗೆ, ನಗರಗಳಿಗೆ ಮತ್ತು ಅಲ್ಲಿನ ವಾಣಿಜ್ಯ ಕೇಂದ್ರಗಳಿಗೇ ಹೋಗುತ್ತದೆ.  ಮುಂದಿನ ದಿನಗಳಲ್ಲಿ ಎದುರಾಗಲಿರುವ ವಿದ್ಯುತ್ ಕೊರತೆ ಸಮಸ್ಯೆಯನ್ನು ಎದುರಿಸಲು ಚೀನಾ, ಭಾರತ ಸೇರಿದಂತೆ ಕೆಲ ಅಭಿವೃದ್ಧಿಶೀಲ ರಾಷ್ಟ್ರಗಳು ಈಗ ಎಲ್ಇಡಿ ಬೆಳಕಿನತ್ತ ಮುಖ ಮಾಡುತ್ತಿವೆ.

ಭಾರತದಲ್ಲಿನ ಪ್ರತಿ ಮನೆಯಲ್ಲಿಯೂ ಉರಿಯು­ತ್ತಿರುವ  ದೀಪಗಳಲ್ಲಿ ಹೆಚ್ಚಿನವು ಪ್ರಕಾಶಮಾನ ದೀಪಗಳೇ ಆಗಿದ್ದು, ವಾರ್ಷಿಕ ಸುಮಾರು 7 ಕೋಟಿ MWh (megawatt/­hour) ವಿದ್ಯುತ್‌ ಬಳಕೆಯಾಗುತ್ತದೆ. 60 ವಾಟ್ ಬಲ್ಬ್‌ ಒಂದು ಗಂಟೆ ಬೆಳಕು ನೀಡಿದರೆ 60 ವಾಟ್ ವಿದ್ಯುತ್ ಬಳಕೆಯಾಗುತ್ತದೆ. ಆದರೆ ‘ಎಲ್ಇಡಿ’ಯಂತಹ ಇಂಧನ ದಕ್ಷತೆಯ ಉಪಕರಣಗಳನ್ನು ಬಳಸುವ ಮೂಲಕ ವಿದ್ಯುತ್‌ ವಿನಿಯೋಗದಲ್ಲಿ ಶೇ 40ರಷ್ಟು ಉಳಿತಾಯ ಸಾಧಿಸಬಹುದು. ಬೀದಿದೀಪ, ಕೈಗಾರಿ­ಕೆಗಳು ಹಾಗೂ ವಾಣಿಜ್ಯ ವಲಯಗಳಲ್ಲಿಯೂ ಎಲ್ಇಡಿ ಬಳಸಿದರೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯವಾಗುತ್ತದೆ.

ಭವಿಷ್ಯದ ಮುನ್ನೋಟ
2–3 ವರ್ಷಗಳಿಂದೀಚೆಗೆ ಭಾರತದ ಲೈಟಿಂಗ್ ಉದ್ಯಮ ಪ್ರತಿವರ್ಷ ಶೇ 17ರಿಂದ 18ರಷ್ಟು ವೃದ್ಧಿ ಕಾಣುತ್ತಿದೆ. 2013ರ ಆರಂಭದಿಂದ ತುಸು ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಎಲ್ಇಡಿ ಉತ್ಪನ್ನಗಳ ಮಾರುಕಟ್ಟೆ, 2015ರ ನಂತರ ಇನ್ನಷ್ಟು ತ್ವರಿತಗತಿಯಲ್ಲಿ ಪ್ರಗತಿ ಹೊಂದುವ ನಿರೀಕ್ಷೆ ಇದೆ.
ವಹಿವಾಟು ಮತ್ತು ಆದಾಯ ಗಳಿಕೆ ದೃಷ್ಟಿಯಿಂದ ನೋಡುವುದಾದರೆ, ಎಲ್‌ಇಡಿ ಉಪಕರಣಗಳ ಮಾರುಕಟ್ಟೆ 2020ರ ವೇಳೆಗೆ 5500 ಕೋಟಿ ಅಮೆರಿಕನ್‌ ಡಾಲರ್‌ಗಳಷ್ಟು  (₨3.41 ಲಕ್ಷ ಕೋಟಿ) ಪ್ರಮಾಣವನ್ನು ತಲುಪುವ ನಿರೀಕ್ಷೆ ಇದೆ ಎನ್ನುತ್ತವೆ ಇತ್ತೀಚಿನ ಸಮೀಕ್ಷೆಗಳು.

ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಎಲ್ಇಡಿ ಉದ್ಯಮ ವಾರ್ಷಿಕ ಶೇ 40ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ಲೈಟಿಂಗ್ ಉಪಕರಣ ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸುವ ‘ಎನ್.ಟಿ.ಎಲ್ ಲೆಮ್ನಿಸ್’ ಮತ್ತು ಭಾರತದ ‘ವಿದ್ಯುತ್ ದೀಪಗಳ ತಯಾರಕರ ಸಂಘ’ (ELCOMA) ವರದಿ ಮಾಡಿವೆ.
ಅಷ್ಟೇ ಅಲ್ಲ, 2020ರ ವೇಳೆಗೆ ವಿಶ್ವದ ಲೈಟಿಂಗ್ ಉದ್ಯಮದ ಶೇ 70ರಷ್ಟು ಪಾಲನ್ನು ಎಲ್ಇಡಿ ವಿಭಾಗ ತನ್ನದಾಗಿಸಿಕೊಳ್ಳಲಿದೆ ಎಂಬ ಅಂದಾಜಿದೆ.

ಅಂದರೆ ಮುಂದಿನ ಏಳು ವರ್ಷಗಳಲ್ಲಿ ಎಲ್ಇಡಿ ಉದ್ಯಮ ಈಗಿರುವುದಕ್ಕಿಂತಲೂ ಎಂಟು ಪಟ್ಟು ದೊಡ್ಡದಾಗಿ ಬೆಳೆದಿರಲಿದೆ.
ಕೆಲವು ವರ್ಷಗಳಿಂದ ಭಾರತದ ವಿದ್ಯುತ್‌ ದೀಪಗಳ ಮಾರುಕಟ್ಟೆ­ಯಲ್ಲಿ, ಸ್ವಯಂಚಾಲಿತ ವಾಹನ, ಸಂವಹನ, ಸಂಕೇತಗಳು, ವಾಸ್ತುಶಿಲ್ಪ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಎಲ್ಇಡಿ ಉತ್ಪನ್ನಗಳಿಗೆ ಅವಕಾಶಗಳು ಹೆಚ್ಚಿವೆ. ವಸತಿ ಮತ್ತು ವಾಣಿಜ್ಯ ಕಟ್ಟಡಗಳಂತಹ ಸಾಮಾನ್ಯ ಸ್ಥಳಗಳಲ್ಲಿ ಬಳಕೆಯಾಗುವ ವಿದ್ಯುತ್‌ ದೀಪ ಮತ್ತು ಅಲಂಕಾರಿಕ ಬೆಳಕಿನ ಸಾಧನಗಳ ವಿಭಾಗದಲ್ಲಿಯೂ ಎಲ್ಇಡಿ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಬರುತ್ತಿದೆ.

ಯಶಸ್ಸಿನ ಹಿಂದೆ...
ಎಲ್ಇಡಿ ಲೈಟಿಂಗ್ ಉದ್ಯಮದ ಈ ಯಶಸ್ಸಿನ ಹಿಂದೆ ಹಲವು ಕಾರಣಗಳಿ­ರುವುದನ್ನು ಗುರುತಿಸಬಹುದು. ಎಲ್‌ಇಡಿ  ಉಪಕರಣಗಳ ಬೆಲೆಯಲ್ಲಿ ಗಮನಾರ್ಹ ಇಳಿಕೆ(ಶೇ 25ರಷ್ಟು) ಕಂಡುಬಂದಿರುವುದು ಮುಖ್ಯ ಕಾರಣ.

ಎಲ್ಇಡಿ ಚಿಪ್ ಹಾಗೂ ವಿದ್ಯುಚ್ಚಕ್ತಿ ಕ್ಷೇತ್ರದ ತಾಂತ್ರಿಕ ಪ್ರಗತಿ ಮತ್ತಿತರ ಕಾರಣಗಳಿಂದಾಗಿ ಸಾಮಾನ್ಯ ವಿದ್ಯುತ್‌ ದೀಪಗಳು ಮತ್ತು ಬೀದಿದೀಪಗಳಂತಹ ಪರಿಕರಗಳ ಬೆಲೆಯೂ ಇಳಿಮುಖವಾಗಿದೆ. ಆಕರ್ಷಕ ಬಣ್ಣ, ಹೊಸ ವಿನ್ಯಾಸ, ನವೀನ ತಂತ್ರಜ್ಞಾನದಿಂದಲೂ ಎಲ್ಇಡಿ ಉತ್ಪನ್ನಗಳು ಜನರ ಗಮನ ಸೆಳೆಯುತ್ತಿವೆ. ಗ್ರಾಹಕರ ಮೆಚ್ಚುಗೆ, ವಿಶ್ವಾಸಕ್ಕೂ ಪಾತ್ರವಾಗಿರುವ ಈ ದೀಪಗಳು, ಬೇರಾವುದೇ ವಿದ್ಯುತ್‌ ದೀಪಗಳಿಗಿಂತಲೂ ಹೆಚ್ಚು ಜೀವಿತಾವಧಿ ಹೊಂದಿವೆ.

ಈ ಹಿಂದೆ ಬಳಕೆಯಲ್ಲಿದ್ದ ತಂತ್ರಜ್ಞಾನದಡಿಯೇ ತಯಾರಾದ ವಿದ್ಯುತ್‌ ದೀಪಗಳಿಗೆ ಹೋಲಿಸಿದರೆ ಎಲ್ಇಡಿ ದೀಪ ಮತ್ತು ಉಪಕರಣಗಳು ಶೇ 50ರವರೆಗೂ ವಿದ್ಯುತ್‌ ಉಳಿತಾಯ ಮಾಡುತ್ತವೆ. ಇಲ್ಲಿ ಬೆಳಕಿನ ಬಣ್ಣ, ತೀವ್ರತೆ ಮತ್ತು ಬೆಳಕು ಹರಿಯಬೇಕಾದ ದಿಕ್ಕಿನಲ್ಲಿ ನಿಯಂತ್ರಣಕ್ಕೆ ಅವಕಾಶವಿರುವುದನ್ನೂ ಕಾಣಬಹುದು. ಇದು ಬೆಳಕಿನ ವ್ಯವಸ್ಥೆಯಲ್ಲಿ ವೈವಿಧ್ಯ ಮತ್ತು ಭಿನ್ನ ವಿನ್ಯಾಸಗಳನ್ನೂ ಸಾಧ್ಯವಾಗಿಸಬಲ್ಲದಾಗಿದೆ.
ರಸ್ತೆಗಳಲ್ಲಿ ಪಾದಚಾರಿಗಳು ಮತ್ತು ವಾಹನಗಳ ರಾತ್ರಿ ಸಂಚಾರಕ್ಕೆ ಅಗತ್ಯವಾದಷ್ಟು ಪ್ರಖರ ಬೆಳಕನ್ನು ಹೊರಾಂಗಣ ಎಲ್ಇಡಿ ಉಪಕರಣಗಳು ಒದಗಿಸಬಲ್ಲವಾಗಿವೆ.

ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲಕರ­ವಾದ ರೀತಿ  ಅಳವಡಿಸಲು, ಚತುರ ನಿಯಂತ್ರಣ ವ್ಯವಸ್ಥೆ ಇರುವಂತೆ ಎಲ್‌ಇಡಿ ದೀಪಗಳನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೇ, ಕಟ್ಟಡದ ಗಾತ್ರ–ಆಕಾರ ಮತ್ತು ಅಗತ್ಯಗಳಿಗೆ ತಕ್ಕಂತೆ ಕ್ರಿಯಾತ್ಮಕವಾಗಿ ಬೆಳಕಿನ ಮಟ್ಟವನ್ನೂ ಬದಲಿಸಬಹುದಾಗಿದೆ. ಬೆಡ್ ರೂಮ್‌, ಬಾತ್ ರೂಮ್‌, ರೀಡಿಂಗ್ ರೂಮ್‌, ಕಿಚನ್, ಹಾಲ್ ಹೀಗೆ ಮನೆಯ ಕೋಣೆಗಳ ಸ್ವಭಾವಕ್ಕೆ ತಕ್ಕಂತೆ ದೀಪಗಳ ಬಣ್ಣ, ವಿನ್ಯಾಸಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮಾತ್ರವಲ್ಲ, ಉತ್ತಮವಾಗಿ ವಿನ್ಯಾಸಗೊಳಿಸಿದ ಈ ಎಲ್ಇಡಿ ಉತ್ಪನ್ನಗಳು ಸಾಮಾನ್ಯ ದೀಪಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಸ್ಮಾರ್ಟ್ ನಿಯಂತ್ರಣ ವ್ಯವಸ್ಥೆ ಅಳವಡಿಸಿದರಂತೂ ಎಲ್‌ಇಡಿ ಉಪಕರಣಗಳ ಬಾಳಿಕೆ ಅವಧಿ ದೀರ್ಘವಾಗಿರಲಿದೆ.

ಯಶಸ್ಸಿಗೆ ಕಾರಣ
ವಿವಿಧ ರೂಪ, ಆಕಾರ ಹಾಗೂ ಬಣ್ಣಗಳಲ್ಲಿ ಲಭ್ಯವಿರುವ ಎಲ್ಇಡಿ ದೀಪಗಳು ನಿಮ್ಮ ಮನೆಯ ಯಾವುದೇ ಜಾಗವನ್ನು ಅಲಂಕರಿಸಬಹುದು.
ಎಲ್ಇಡಿ ದೀಪಗಳು ಗಾಜು, ಫಿಲ್ಮೆಂಟ್‌, UV ಲೈಟ್‌ ಅಥವಾ ಮರ್ಕ್ಯುರಿ(ಪಾದರಸ) ಹೊಂದಿರುವುದಿಲ್ಲ. ಹಾಗಾಗಿ, ಪ್ರಕಾಶಮಾನ ದೀಪಗಳಿಗಿಂತ ಶೇ 85ರಷ್ಟು ಕಡಿಮೆ ವಿದ್ಯುತ್ ಬಳಸಿಕೊಂಡು ಹೆಚ್ಚಿನ ಬೆಳಕು ನೀಡುತ್ತವೆ.

ಪ್ರಕಾಶಮಾನ ಲ್ಯಾಂಪಿಗೆ(ICLs) ಹೋಲಿಸಿದಾಗ ಎಲ್ಇಡಿ ತಂತ್ರಜ್ಞಾನ ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಎಂದು ಗುರುತಿಸಲಾಗಿದೆ.
ಎಲ್ಇಡಿ ದೀಪ ಬೆಳಕು ನೀಡುವಾಗ ಉಷ್ಣಾಂಶ ಉತ್ಪಾದಿಸಿ­ದರೂ ಅದನ್ನು ವಾತಾವರಣಕ್ಕೆ ಬಿಡುಗಡೆ ಮಾಡುವುದಿಲ್ಲ.

ದೇಶದ ಸದ್ಯದ ಎಲ್ಲ ಬಗೆ ವಿದ್ಯುತ್‌ ದೀಪಗಳ ಮಾರುಕಟ್ಟೆ ಗಾತ್ರ  ₨9600 ಕೋಟಿಗಳಷ್ಟಿದೆ. ಎಲ್ಇಡಿ ಲೈಟಿಂಗ್ ಉದ್ಯಮದ ಪಾಲು ಸುಮಾರು ₨1000 ಕೋಟಿ ಎಂದು ಅಂದಾಜು ಮಾಡಲಾಗಿದೆ. ದೇಶದ ಎಲ್ಇಡಿ ಮಾರುಕಟ್ಟೆ 2014ರ ವೇಳೆಗೆ ಅಂದಾಜು ಶೇ 54ರಷ್ಟು ವೃದ್ಧಿ ಕಾಣುವು ನಿರೀಕ್ಷೆ ಇದೆ.

ಸವಾಲು–ಸಮಸ್ಯೆ
ಇಷ್ಟೆಲ್ಲ ಅನುಕೂಲ ಮತ್ತು ಲಾಭ  ಇರುವ ಎಲ್ಇಡಿ ಉಪಕರಣಗಳು ಈವೇಳೆಗೆ ಮನೆಗಳಲ್ಲಿ, ಬೀದಿದೀಪಗಳಲ್ಲಿ, ವಾಣಿಜ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಬಳಕೆ ಪ್ರಮಾಣ ಶೇ 30ಕ್ಕೂ ಕಡಿಮೆ ಇದೆ. ಇದಕ್ಕೆ ಅದರದೇ ಆದ ಕೆಲವು ಮಿತಿಗಳಿದ್ದು, ಉದ್ಯಮದ ಬೆಳವಣಿಗೆಗೆ ತಡೆಗೋಡೆ­ಯಾಗಿವೆ.
ಎಲ್ಇಡಿ ಉಪಕರ ಣಗಳ ಉತ್ಪಾದನಾ ವೆಚ್ಚ, ಬೇಡಿಕೆ ಹಾಗೂ ಪೂರೈಕೆ ಬಗೆಗಿನ ಕಾಯ್ದೆಗಳ ಬಗ್ಗೆ ಉದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ತಿಳಿವಳಿಕೆ ಇಲ್ಲದಿರುವುದು, ಗುಣಮಟ್ಟದ ಉತ್ಪನ್ನ ತಯಾರಿಕೆಯಲ್ಲಿ ತೊಡಕು ಇರುವುದೂ ಸೇರಿದಂತೆ ಅನೇಕ ಸವಾಲುಗಳು ಈ ಉದ್ಯಮದ ಹಾದಿಗೆ ಅಡ್ಡವಾಗಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರಸ್ತುತ ಮಾರುಕಟ್ಟೆ ಎಲ್ಇಡಿ ಉತ್ಪನ್ನಗಳಿಗೆ ಸಿದ್ಧವಾಗಿದೆಯೇ ಮತ್ತು ಇಂತಹ ಉತ್ಪನ್ನಗಳ ತಾರ್ಕಿಕ ವಿವರಣೆ ಏನು ಎಂಬುದನ್ನೂ ಗಮನಿಸಬೇಕಿದೆ.

ಸರ್ಕಾರದ ಬೆಂಬಲ
ಸರ್ಕಾರದ ಪ್ರೋತ್ಸಾಹದಾಯಕ ನೀತಿಯಿಂದಾಗಿ 2018ರ ವೇಳೆಗೆ ದೇಶದ ಎಲ್ಇಡಿ ಲೈಟಿಂಗ್ ಮಾರುಕಟ್ಟೆ 8 ಪಟ್ಟು ಅಂದರೆ 127.90 ಕೋಟಿ ಅಮೆರಿಕನ್‌ ಡಾಲರ್‌ಗಳಷ್ಟು (₨7930 ಕೋಟಿಗಳಷ್ಟು) ಬೆಳವಣಿಗೆ ಕಾಣಲಿದೆ ಎಂದು ಅಂದಾಜು ಮಾಡಲಾಗಿದೆ.
ವಿದ್ಯುತ್‌ ಉಳಿತಾಯ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಇಡಿ ದೀಪಗಳ ಮಾರುಕಟ್ಟೆ ಬೆಲೆಯನ್ನು ಇನ್ನಷ್ಟು ಇಳಿಸುವ ಪ್ರಯತ್ನ ನಡೆಸಿವೆ. ಕೇಂದ್ರ ಸರ್ಕಾರ, ಎಲ್‌ಇಡಿ ದೀಪಗಳಿಗೆ ಅಗತ್ಯವಾದ ಚಿಪ್ ತಯಾರಿಕೆ ಘಟಕಗಳನ್ನು ದೇಶದಲ್ಲಿಯೇ ಆರಂಭಿಸುವುದಕ್ಕೆ ಪ್ರೋತ್ಸಾಹ ನೀಡಲು ಯೋಜಿಸಿದೆ. ಅಲ್ಲದೇ, ಎಲ್ಇಡಿ ಉತ್ಪನ್ನಗಳಿಗೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಕಡಿಮೆ ಮಾಡುವ ಮೂಲಕವೂ ಎಲ್ಇಡಿ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ನಗರಗಳಲ್ಲಿ ಎಲ್ಇಡಿ ಬೀದಿ ದೀಪ ಅಳವಡಿಕೆಯ ಪ್ರಾಯೋಗಿಕ ಯೋಜನೆಗಳಿಗೆ ಕೇಂದ್ರ ಸರ್ಕಾರ ಧನಸಹಾಯವನ್ನೂ ಮಾಡುತ್ತಿದೆ. ಎಲ್ಇಡಿಗೆ ಅತ್ಯುತ್ತಮ ಮಾರುಕಟ್ಟೆ ಒದಗಿಸಿಕೊಟ್ಟು ವಿದ್ಯುತ್ ತಯಾರಿಕೆ ಉದ್ಯಮವನ್ನು ಬೆಂಬಲಿಸುವುದು ಸರ್ಕಾರದ ಚಿಂತನೆಯಾಗಿದೆ.
ಮುಂದಿನ ಐದು ವರ್ಷಗಳಲ್ಲಿ ರಸ್ತೆ ದೀಪಗಳಲ್ಲಿ ಶೇ 42ರಷ್ಟು ಎಲ್‌ಇಡಿ ದೀಪಗಳೇ ಇರಲಿವೆ. ರೈಲ್ವೆ ಸಹ ತನ್ನ ವಿದ್ಯುತ್‌ ಉಪಕರಣಗಳಲ್ಲಿ ಶೇ 62ರಷ್ಟು ಎಲ್‌ಇಡಿಗೆ ಆದ್ಯತೆ ನೀಡಲಿದೆ. ಕೈಗಾರಿಕೆಗಳಲ್ಲಿಯೂ ಶೇ 48ರಷ್ಟು ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಶೇ 39ರಷ್ಟು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಶೇ 40ರಷ್ಟು ಎಲ್ಇಡಿ ಉತ್ಪನ್ನಗಳಿಗೆ ಬೇಡಿಕೆ ಬರಲಿದೆ ಎಂಬುದು ಉದ್ಯಮದ ನಿರೀಕ್ಷೆಯಾಗಿದೆ.

ಭವಿಷ್ಯ-ಅವಕಾಶ
ಎಲ್ಇಡಿ ಲೈಟಿಂಗ್ ಉದ್ಯಮ ಆಶಾದಾಯಕ ವೃತ್ತಿ ಆಯ್ಕೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆಯೇನೊ ನಿಜ. ಆದರೆ ಇಲ್ಲಿ ಅಗತ್ಯವಿರುವ ಪ್ರತಿಭೆಗಳ ಕೊರತೆ ಇರುವುದೂ ಅಷ್ಟೇ ಸತ್ಯ.

ಎಲ್ಇಡಿ ಲೈಟಿಂಗ್ ಉತ್ಪನ್ನಗಳು ದೇಶದಲ್ಲಿ ಸರ್ವೇಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಬಳಕೆಗೆ ಬರಲು ಇನ್ನೂ ಸ್ವಲ್ಪ ಸಮಯ ಹಿಡಿಯಬಹುದು. ಆದರೆ ಈಗಾಗಲೇ ಹಲವು ಅಂತರರಾಷ್ಟ್ರೀಯ ಕಂಪೆನಿಗಳು ಭಾರತದ ಎಲ್‌ಇಡಿ ಉದ್ಯಮ ಕ್ಷೇತ್ರದತ್ತ ಮುಖ ಮಾಡಿವೆ. ಇದೇ ಕಾರಣವಾಗಿ ವಿಪ್ರೊ ಮತ್ತು ಫಿಲಿಪ್ಸ್ನಂತಹ ಕಂಪೆನಿಗಳೂ ಎಲ್‌ಇಡಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಸಜ್ಜಾಗುತ್ತಿವೆ.

ಹೊಸ ಕಂಪೆನಿಗಳು ಎಲ್‌ಇಡಿ ಲೈಟಿಂಗ್‌ ಉಪಕರಣ ತಯಾರಿಕೆ ಆರಂಭಿಸಿ ದಾಗ ತಂತ್ರಜ್ಞಾನ ಅಭಿವೃದ್ಧಿ ವಿಭಾಗಕ್ಕೇ ಶೇ 30ರಷ್ಟು ಉದ್ಯೋಗಿಗಳ ಅಗತ್ಯ ಬೀಳಲಿದೆ. ಜತೆಗೆ ಉಪಕರಣಗಳ ತಯಾರಿಕೆ ವಿಭಾಗದಲ್ಲೂ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ.

ಎಂಜಿನಿಯರಿಂಗ್ ವಿದ್ಯಾರ್ಥಿಗಳಷ್ಟೇ ಅಲ್ಲ, ಡಿಪ್ಲೊಮಾ ಪೂರೈಸಿದವರೂ ಇಲ್ಲಿ ಹೆಚ್ಚಿನ ಅವಕಾಶ ಪಡೆಯಬಹುದು. ಆದರೆ, ಕ್ರಿಯಾಶೀಲ ಮನಸ್ಸು ಹಾಗೂ ತಂತ್ರಜ್ಞಾನದಲ್ಲಿ ನಾವಿನ್ಯತೆ ತೋರಬಲ್ಲ ಸಾಮರ್ಥ್ಯ ಅಗತ್ಯ.

ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಎಲ್ಇಡಿ ತಂತ್ರಜ್ಞಾನ ಬೋಧನೆಗೆ ಒತ್ತು ನೀಡದೇ ಇರುವುದೇ ಈ ವಲಯ ಇಂದು ಪ್ರತಿಭೆಗಳ ಕೊರತೆ ಎದುರಿಸಲು ಕಾರಣ ಎಂಬ ಅಭಿಪ್ರಾಯವಿದೆ.

ಈ ಕೊರತೆ ನೀಗಿಸಲು ಮತ್ತು ಎಲ್ಇಡಿ ಉದ್ಯಮ ಕ್ಷೇತ್ರಕ್ಕೆ ಸಮರ್ಥ ಮಾನವ ಸಂಪನ್ಮೂಲವನ್ನು ಒದಗಿಸಲು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಎಲ್ಇಡಿ ತಂತ್ರಜ್ಞಾನ ಕುರಿತ ಪ್ರತ್ಯೇಕ ಮತ್ತು ವಿಶೇಷವಾದ ಡಿಪ್ಲೊಮಾ ಕೋರ್ಸ್‌ ಆರಂಭಿಸಲು ಮುಂದಾಗಿವೆ. ಬೋಧನಾ ಶುಲ್ಕ ₨25,000ದಿಂದ ₨40,000ದವರೆಗೂ ಇರಲಿದೆ.

ಕಡಿಮೆ ಬಂಡವಾಳ ಎಲ್‌ಇಡಿ’ ಘಟಕ
ಎಲ್ಇಡಿ ಲೈಟಿಂಗ್ ವೃತ್ತಿಜೀವನ ಎಂದರೆ ಹೆಸರಾಂತ ಕಂಪೆನಿಯಲ್ಲಿ ಎಂಜಿನಿಯರಿಂಗ್ ಅಥವಾ ಇನ್ನಾವುದೇ ವಿಭಾಗದಲ್ಲಿ ಕೆಲಸ ಮಾಡುವುದಷ್ಟೆ ಅಲ್ಲ. ಉದ್ಯಮಿಯಾಗಲು, ಚಿಕ್ಕದಾಗಿ ಕಂಪೆನಿ ಆರಂಭಿಸಲೂ ಈ ವಲಯದಲ್ಲಿ ವಿಪುಲ ಅವಕಾಶಗಳಿವೆ. ‘ಮೈಕ್ರೊ ಎಲ್‌ಇಡಿ ಪ್ರಾಜೆಕ್ಟ್’ ಆರಂಭ ದೊಡ್ಡ ಸವಾಲೇನೂ ಅಲ್ಲ. ಅತ್ಯಂತ ಕಡಿಮೆ ಬಂಡವಾಳ ಹೂಡಿ, ಚಿಕ್ಕ ಜಾಗದಲ್ಲಿ ಎಲ್‌ಇಡಿ ಕಂಪೆನಿ ಸ್ಥಾಪಿಸಬಹುದು. ಸುಮಾರು ₨50,000ದಿಂದ ₨10 ಲಕ್ಷದವರೆಗಿನ  ಬಂಡವಾಳ ಹಾಗೂ ಕೇವಲ 300 ಚದರಡಿ ಜಾಗದಲ್ಲಿ ಎಲ್‌ಇಡಿ ಘಟಕ ಆರಂಭಿಸಬಹುದು.

ಮನೆಯಲ್ಲೇ ತಯಾರಿಕೆ
1ರಿಂದ 5 ವಾಟ್ ಸಾಮರ್ಥ್ಯದ ಎಲ್‌ಇಡಿ ಸೋಲಾರ್ ಲೈಟಿಂಗ್ ಉಪಕರಣಗಳನ್ನು ಮನೆಯಲ್ಲಿಯೂ ತಯಾರಿಸಬಹುದು. 1 ವಾಟ್ ಎಲ್ಇಡಿ ಬಲ್ಬ್, ಬಲ್ಬ್ ಹೋಲ್ಡರ್, ಬ್ಯಾಟರಿ ಇನ್ವರ್ಟರ್, ರಿಚಾರ್ಜಬಲ್ ಬ್ಯಾಟರಿ, ಸೋಲಾರ್ ಪ್ಯಾನಲ್ ಮೊದಲಾದ ಸಾಮಗ್ರಿಗಳನ್ನು ಜೋಡಣೆ ಮಾಡುವ ಮೂಲಕ ಎಲ್‌ಇಡಿ ಲೈಟಿಂಗ್ ಯುನಿಟ್‌ ತಯಾರಿಸಿ ಮಾರಾಟ ಮಾಡಬಹುದು. 1 ವಾಟ್‌ ಸೋಲಾರ್ ಎಲ್‌ಇಡಿ ಲೈಟ್ ಸುಮಾರು ₨7000 ಆಗುತ್ತದೆ. ಇದರ ತಯಾರಿಕೆ ಮಾರಾಟದಲ್ಲಿ ಸಾಕಷ್ಟು ಲಾಭ ಗಳಿಸಬಹುದು.

ವಿದ್ಯುತ್ ಕೊರತೆ ಎದುರಿಸುತ್ತಿರುವ ಗ್ರಾಮೀಣ ಪ್ರದೇಶಗಳು ಈ ಸೋಲಾರ್ ದೀಪಗಳಿಗೆ ಪ್ರಮುಖ ಮಾರುಕಟ್ಟೆಯಾಗಿವೆ. 

ಸುನಿಲ್ ನಲವಡೆ, ನಿಯಂತ್ರಕರು, ಹುಬ್ಬಳ್ಳಿ ಸಿಟಿ ಇ-ಗ್ರೂಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT