ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 16 ಮೇ 2017, 19:30 IST
ಅಕ್ಷರ ಗಾತ್ರ
ಯು.ಪಿ.ಪುರಾಣಿಕ್‌, ಬ್ಯಾಂಕಿಂಗ್‌-ಹಣಕಾಸು ತಜ್ಞ uppuranik@gmail.com
 
ಎಸ್.ಡಿ. ಚಂಗಪ್ಪ,  ಬೆಂಗಳೂರು
* ನಾನು ಎಕ್ಸ್‌ಸರ್ವಿಸ್‌ಮನ್. ತಿಂಗಳ ಪಿಂಚಣಿ ₹ 27,666. ಈ ಹಣ ನನ್ನ ಖಾತೆಗೆ ಜಮಾ ಆಗುತ್ತದೆ. ಆದಾಯ ತೆರಿಗೆ ಹಿಂದೆ ತಿಂಗಳು ತಿಂಗಳು ಹಿಡಿಯುತ್ತಿದ್ದು, ಈಗ ಕೆಲವು ತಿಂಗಳಿಂದ ಹಿಡಿಯುತ್ತಿಲ್ಲ. ನನ್ನ ಉಳಿತಾಯ ಖಾತೆಯಲ್ಲಿ ₹ 5 ಲಕ್ಷ ನಗದು ಇದೆ. ನನಗೆ ತೆರಿಗೆ ಬರುತ್ತದೆಯೇ ಹಾಗೂ ₹ 5 ಲಕ್ಷ ಉಳಿತಾಯ ಖಾತೆಯಲ್ಲಿ ಇರುವುದರಿಂದ ತೊಂದರೆ ಇದೆಯೇ ತಿಳಿಸಿರಿ. ₹  5 ಲಕ್ಷ ಹೇಗೆ ಅವಧಿ ಠೇವಣಿ ಮಾಡಲಿ. ದಯಮಾಡಿ ಮಾರ್ಗದರ್ಶನ ಮಾಡಿರಿ. ನನ್ನ ವಯಸ್ಸು 71.
 
ಉತ್ತರ: ನೀವು ಮಾಜಿ ಸೈನಿಕರಾದರೂ, ನಿಮಗೆ ಬರುವ ಪಿಂಚಣಿ ಹಣ ತೆರಿಗೆ ರಹಿತವಲ್ಲ. ವಾರ್ಷಿಕ ಪಿಂಚಣಿ ಆದಾಯ ಹಾಗೂ ಬ್ಯಾಂಕ್ ಠೇವಣಿ ಬಡ್ಡಿ ಎಲ್ಲಾ ಸೇರಿಸಿ ₹ 3 ಲಕ್ಷ ದಾಟಿದಲ್ಲಿ ಮಾತ್ರ ನೀವು ಹಾಗೆ ದಾಟಿದ ಹಣಕ್ಕೆ ಮಾತ್ರ ತೆರಿಗೆ ಸಲ್ಲಿಸಬೇಕು. ಉಳಿತಾಯ ಖಾತೆಯಲ್ಲಿ ಬರುವ ಬಡ್ಡಿ ಸೆಕ್ಷನ್ 80ಟಿಟಿಎ ಆಧಾರದ ಮೇಲೆ ಗರಿಷ್ಠ ₹ 10,000 ತನಕ ಬಡ್ಡಿಗೆ ವಿನಾಯಿತಿ ಇದೆ. ನೀವು ₹ 5 ಲಕ್ಷ ಉಳಿತಾಯ ಖಾತೆಯಲ್ಲಿ ಇಟ್ಟಿರುವುದಕ್ಕೆ ಏನೂ ತೊಂದರೆ ಇಲ್ಲ.  ಆದರೆ ಇಲ್ಲಿ ಬಹಳ ಕಡಿಮೆ ಬಡ್ಡಿ ಬರುವುದರಿಂದ ನೀವು ಎಫ್.ಡಿ. ಮಾಡುವುದೇ ಲೇಸು. ನಿಮಗೆ ಬಡ್ಡಿಯ ಅವಶ್ಯವಿರದಿರುವಲ್ಲಿ ಒಮ್ಮೆಲೇ ಬಡ್ಡಿ ಬರುವ ಅವಧಿ ಠೇವಣಿ ಮಾಡಿ ಹಣ ವೃದ್ಧಿಸಿಕೊಳ್ಳಿ.
 
ವೀರಣ್ಣ ಜೆ., ಧಾರವಾಡ
* 2018ರ ನಂತರ ಪ್ರತೀ ತಿಂಗಳು ₹ 10,000 ನಾನು ಬಂಗಾರದಲ್ಲಿ ಹಣ ಉಳಿತಾಯ ಮಾಡಬಹುದು. ನನ್ನೊಡನೆ ಎಸ್‌ಬಿಐ ನಲ್ಲಿ ಉಳಿತಾಯ ಖಾತೆ ಇದೆ. ನಾನು ಹೀಗೆ ಬಂಗಾರದಲ್ಲಿ ಹಣ ಹೂಡಲು ಎಲ್ಲಿ ಹಾಗೂ ಹೇಗೆ ಹಣ ಉಳಿಸಲಿ ದಯಮಾಡಿ ತಿಳಿಸಿ.
 
ಉತ್ತರ: ನೀವು ಬಂಗಾರದಲ್ಲಿ ಪ್ರತೀ ತಿಂಗಳು ₹ 10,000 ಹಣ ಹೂಡುವುದಾದಲ್ಲಿ, ನಿಮಗೆ  ಜಿ.ಇ.ಟಿ.ಎಫ್. (Gold Equlity Traded Fund) ತುಂಬಾ ಅನುಕೂಲ. ಈ ಯೋಜನೆ ನಿಮಗೆ ಹೇಳಿ ಮಾಡಿಸಿದಂತಿದೆ. ಇಲ್ಲಿ ಬಂಗಾರದ ರೂಪದಲ್ಲಿ (Physical) ಒಡವೆಗಳನ್ನಾಗಲಿ ನಾಣ್ಯಗಳನ್ನಾಗಲೀ ಹೊಂದುವ ಅವಶ್ಯವಿಲ್ಲ. ಬಂಗಾರದ ಯುನಿಟ್ಟುಗಳು (ಒಂದು ಗ್ರಾಮ್ ಬಂಗಾರ ಒಂದು ಯುನಿಟ್ಟು ಎಂದು ಪರಿಗಣಿಸಲಾಗುವುದು) ಹೂಡಿಕೆದಾರರ ‘ಡಿಮ್ಯಾಟ್’ ಖಾತೆಯಲ್ಲಿ ಜಮಾ ಆಗಿರುತ್ತದೆ. ಇಲ್ಲಿ ದ್ರವ್ಯತೆ (Liquldity) ಇದೆ.

ಯಾವಾಗ ಬೇಕಾದರೂ ಒಂದು ಗ್ರಾಮ್ ಬಂಗಾರ ಮಾರಾಟ ಮಾಡಿ ಕೂಡಾ ನಗದು ಹಣ ಪಡೆಯಬಹುದು. ಹಣದುಬ್ಬರ (Inflation) ಎದುರಿಸಲು ಹಾಗೂ ದೀರ್ಘಾವಧಿ ಹೂಡಿಕೆ ಇವೆರಡರ ತತ್ವ ಇಲ್ಲಿ ಅಡಕವಾಗಿದೆ. ಕಡಿಮೆ ಖರ್ಚು ಹಾಗೂ ತುಂಬಾ ಪಾರದರ್ಶಕವಾದ ಯೋಜನೆ ಇದು. ಇಲ್ಲಿ ತೊಡಗಿಸಿದ ಬಂಗಾರ 99.5% ಸ್ವಚ್ಛ (Pure) ಹಾಗೂ 24 ಕ್ಯಾರಟ್ ಆಗಿರುತ್ತದೆ. ಜೊತೆಗೆ ಸ್ಟ್ಯಾಂಡರ್ಡ್ ಹಾಲ್‌ಮಾರ್ಕಿನಿಂದ ಕೂಡಿರುತ್ತದೆ. ನಿಮ್ಮ ಖಾತೆ ಎಸ್.ಬಿ.ಐ. ನಲ್ಲಿ ಇರುವುದರಿಂದ ಅವರ ಮ್ಯೂಚುವಲ್ ಫಂಡ್‌ನಲ್ಲಿ ಜಿ.ಇ.ಟಿ.ಎಫ್.ನ ಒಂದು ಸಿಪ್(SIP- Systematic Investment Plan) ₹ 10,000ಕ್ಕೆ ಪ್ರಾರಂಭಿಸಿರಿ. ನಿಮ್ಮ ಯೋಜನೆ ತುಂಬಾ ಸಂತಸ ತಂದಿದೆ. ತಕ್ಷಣ ಪ್ರಾರಂಭಿಸಿ.
 
ನವೀನ್ ಎಂ.ಎಸ್., ಬೆಂಗಳೂರು
* ₹ 20 ಲಕ್ಷ, 15 ವರ್ಷಗಳ ಅವಧಿಗೆ ಪಡೆದು 5 ವರ್ಷಗಳಲ್ಲಿಯೇ ಮರು ಪಾವತಿಸುವುದು, ₹ 20 ಲಕ್ಷ 10 ವರ್ಷಗಳ ಅವಧಿಗೆ ಪಡೆದು 
5 ವರ್ಷಗಳಲ್ಲಿಯೇ ಮರು ಪಾವತಿಸುವುದು– ಇವುಗಳಲ್ಲಿ ಯಾವುದು ಲಾಭದಾಯಕ.  ಸಾಲದ ಅವಧಿ ಕಡಿಮೆ ಆದಲ್ಲಿ ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆಯೇ ಹಾಗೂ ಬ್ಯಾಂಕುಗಳು ಬಡ್ಡಿ ಹೇಗೆ ಲೆಕ್ಕ ಹಾಕುತ್ತವೆ ತಿಳಿಸಿ.
 
ಉತ್ತರ: ಯಾವುದೇ ಸಾಲ ಅವಧಿಗೆ ಮುನ್ನ ಮರು ಪಾವತಿಸುವ ಸಾಲಗಾರರ ಅಭಿಪ್ರಾಯ ಅಥವಾ ಇಚ್ಛೆ ಮೆಚ್ಚಲೇಬೇಕಾದ ವಿಚಾರ. ಮನುಷ್ಯ ಸಾಲ ರಹಿತ ಜೀವನ ನಡೆಸಬೇಕು. ಆದರೆ ಗೃಹಸಾಲ ಮತ್ತು ಶಿಕ್ಷಣ ಸಾಲ ಇವೆರಡೂ ಹೊರ ನೋಟಕ್ಕೆ ಸಾಲವಾಗಿ ಕಂಡರೂ, ಇಲ್ಲಿ ಹೂಡಿಕೆಯ ಅಂಶ ಹೆಚ್ಚಿರುತ್ತದೆ. ಗೃಹಸಾಲದ ಕಂತು ಹಾಗೂ ಶಿಕ್ಷಣ ಸಾಲದ ಬಡ್ಡಿ (ಸೆಕ್ಷನ್ 80ಸಿ, 24(ಬಿ), 80ಇ) ಆದಾಯ ತೆರಿಗೆ ವಿನಾಯಿತಿ ಹೊಂದಿರುವುದರಿಂದ ಈ ಎರಡೂ ಸಾಲ, ಹೆಚ್ಚಿನ ತೆರಿಗೆಗೆ ಒಳಗಾಗುವವರು ಅವಧಿಗೆ ಮುನ್ನ ತೀರಿಸುವುದು ಲಾಭದಾಯಕವಲ್ಲ ಹಾಗೂ ಜಾಣತನವೂ ಅಲ್ಲ. ಸಾಲದ ಅವಧಿ ಕಡಿಮೆ ಆಗಲಿ ಹೆಚ್ಚಾಗಲಿ, ಅಸಲಿಗೆ ಬಡ್ಡಿ ತೆರಬೇಕಾದ್ದರಿಂದ ಇಲ್ಲಿ ಲಾಭ ಅಥವಾ ನಷ್ಟ ಎನ್ನುವ ಮಾತು ಬರುವುದಿಲ್ಲ. ಕಡಿಮೆ ಅವಧಿಗೆ ಸಾಲ ಪಡೆದರೆ, ಹೆಚ್ಚಿನ ಇಎಂಐ ಅಂದರೆ ಅಸಲು ಬಡ್ಡಿ ತೆರಬೇಕಾಗುತ್ತದೆ. ಒಟ್ಟಿನಲ್ಲಿ ಹೆಚ್ಚಿನ ಅವಧಿಗೆ ಸಾಲ ಪಡೆದು ಕಡಿಮೆ ಅವಧಿಯಲ್ಲಿ ಸಾಲ ತೀರಿಸಿದರೆ, ಸಾಲಗಾರನಿಗೆ ನಷ್ಟ ಅನುಭವಿಸುವ ಅವಶ್ಯವಿಲ್ಲ.
 
ಚಂದ್ರಶೇಖರಯ್ಯ, ಮೈಸೂರು
* ನಾನು 91 ವರ್ಷದ ಹಿರಿಯ ನಾಗರಿಕ. ಕರ್ಣಾಟಕ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿ, 15ಎಚ್ ನಮೂನೆ ಫಾರಂ ಕೊಟ್ಟಿದ್ದೇನೆ. ತೆರಿಗೆ ಉಳಿಸಲು ₹ 1.50 ಲಕ್ಷ ಠೇವಣಿ ಕೂಡಾ ಮಾಡಿದ್ದೇನೆ. ನನಗೆ ₹ 6.50 ಲಕ್ಷಗಳ ತನಕ ತೆರಿಗೆ ಬರುವುದಿಲ್ಲವಾದರೂ, ಬ್ಯಾಂಕಿನಲ್ಲಿ  ₹ 2,79,280 ಟಿಡಿಎಸ್ ಮಾಡಿರುತ್ತಾರೆ. ಕೇಳಿದರೆ ಸರಿಯಾದ ಉತ್ತರ ಸಿಗುತ್ತಿಲ್ಲ. ಏನು ಮಾಡಬೇಕು ತಿಳಿಸಿ.
 
ಉತ್ತರ:  15 ಎಚ್ ನಮೂನೆ ಫಾರಂ ಸಲ್ಲಿಸಿದರೂ ಕೆಲಸದ ಒತ್ತಡದಿಂದ ಬಂದಿರುವ ಬಡ್ಡಿಯಲ್ಲಿ ಟಿಡಿಎಸ್ ಮಾಡಿದಂತೆ ಕಾಣುತ್ತದೆ. ನೀವು ಆದಾಯ ತೆರಿಗೆಗೆ ಒಳಗಾಗದಿದ್ದರೂ, ರಿಟರ್ನ್ ತುಂಬಿ ಬ್ಯಾಂಕಿನವರು ಮುರಿದ ಹಣ ವಾಪಸು ಪಡೆಯಬಹುದು. ಟಿಡಿಎಸ್ ಮಾಡಿರುವುದಕ್ಕೆ ಫಾರಂ ನಂಬರ್ 16ಎ ಬ್ಯಾಂಕಿನಿಂದ ಪಡೆದು 15–7–2017 ರೊಳಗೆ ಆದಾಯ ತೆರಿಗೆ ಕಚೇರಿಗೆ ರಿಟರ್ನ್ ಸಲ್ಲಿಸಿ. ನಿಮ್ಮ ಹಣ  ಬಡ್ಡಿ ಸಮೇತ ವಾಪಸು ಪಡೆಯಿರಿ. ಇನ್ನು ಮುಂದೆ ಬ್ಯಾಂಕಿನಲ್ಲಿ ಹೀಗಾಗದಂತೆ ಎಚ್ಚರವಹಿಸಲು ಹೇಳಿ.
 
ಶಿವಕುಮಾರ, ಹಾಸನ
*  ಹಾಸನದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದೇನೆ. ನನ್ನ ತಿಂಗಳ ಆದಾಯ ₹ 15,000. ಈ ಆದಾಯದಲ್ಲಿ ಎಸ್.ಬಿ.ಎಚ್.ನಲ್ಲಿ ಪ್ರತೀ ತಿಂಗಳು ₹ 5,000 ಆರ್.ಡಿ. ಕಟ್ಟುತ್ತೇನೆ. 5 ವರ್ಷಗಳ ನಂತರ  ₹ 3.89 ಲಕ್ಷ ಬರುತ್ತದೆ. ಈ ಮೊತ್ತಕ್ಕೆ ತೆರಿಗೆ ಕಟ್ಟ ಬೇಕಾ ಮತ್ತು ತೆರಿಗೆ ವಿನಾಯಿತಿ ಪಡೆಯಲು ಸಲಹೆ ನೀಡಿ. ಬರುವ ₹ 3.89 ಲಕ್ಷದಲ್ಲಿ ₹ 2 ಲಕ್ಷ ದೀರ್ಘಾವಧಿ ಪಿಂಚಣಿ ಯೋಜನೆಯಲ್ಲಿ ತೊಡಗಿಸಲು ಮಾರ್ಗದರ್ಶನ ಮಾಡಿ.
 
ಉತ್ತರ: ಈ ಮೊದಲು ಆರ್.ಡಿ.ಗೆ ಟಿ.ಡಿ.ಎಸ್. (ಬಡ್ಡಿ ಮೂಲದಲ್ಲಿ ಕಡಿತ) ಇರಲಿಲ್ಲ. ಈಗ ಬ್ಯಾಂಕ್‌ನಲ್ಲಿ ಮಾಡುತ್ತಾರೆ. ನೀವು ಪ್ರತಿ ವರ್ಷ 15ಜಿ ನಮೂನೆ ಫಾರಂ ಬ್ಯಾಂಕಿಗೆ ಸಲ್ಲಿಸಿ ಬಡ್ಡಿಯಲ್ಲಿ ತೆರಿಗೆ ಮುರಿಯದಂತೆ ನೋಡಿಕೊಳ್ಳಿ. ಒಟ್ಟಿನಲ್ಲಿ ನಿಮ್ಮ ಇಂದಿನ ಆದಾಯಕ್ಕೆ ತೆರಿಗೆ ಬರುವುದಿಲ್ಲ. ಕೆಲವೊಂದು ವಿಮಾ ಕಂಪೆನಿಗಳು ‘ಪೆನ್ಷನ್ ಪ್ಲ್ಯಾನ್’ ಸಾದರ ಪಡಿಸಿವೆ. ಆದರೆ ಇವುಗಳಲ್ಲಿ ಈಕ್ವಿಟಿ ಹೂಡಿಕೆ ಅಂದರೆ ನೀವು ಕೊಡುವ ಹಣದ ಒಂದು ಭಾಗ ಕಂಪೆನಿ ಷೇರುಗಳಲ್ಲಿ ಇರಿಸುತ್ತಾರೆ. ನಿಮ್ಮ ಪರಿಸರಕ್ಕೆ ಎಸ್.ಬಿ.ಎಚ್. ನಲ್ಲಿಯೇ (ಈ ಬ್ಯಾಂಕು ಎಸ್.ಬಿ.ಐ. ನೊಂದಿಗೆ ವಿಲೀನವಾಗಿದೆ) ಎಷ್ಟಾದರಷ್ಟು ದೀರ್ಘಾವಧಿ ಠೇವಣಿ ಇರಿಸಿ, ಪ್ರತೀ ಮೂರು ತಿಂಗಳಿಗೊಮ್ಮೆ ಪಿಂಚಣಿಯ ರೂಪದಲ್ಲಿ ಬಡ್ಡಿ ಪಡೆಯಿರಿ. ತಿಂಗಳಿಗೊಮ್ಮೆ ಬಡ್ಡಿ ಪಡೆಯುವ ಸೌಲಭ್ಯ ಇರುವುದಾದರೂ, ಸ್ವಲ್ಪ ಕಡಿಮೆ ಬಡ್ಡಿ ಬರುತ್ತದೆ.
 
ಹೆಸರು, ಊರು ಬೇಡ
* ನಾನು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತೇನೆ. ನನ್ನ ಸಂಬಳ ₹ 15,000. ಎಲ್.ಐ.ಸಿ.ಗೆ ಮೂರು ತಿಂಗಳಿಗೊಮ್ಮೆ ₹ 3176 ಕಟ್ಟುತ್ತೇನೆ. ಎಲ್.ಐ.ಸಿ. ಬಾಂಡಿನ ಮೇಲೆ ಸಾಲ ಪಡೆದು ನಿವೇಶನಕೊಳ್ಳಲು ಸಾಧ್ಯವೇ? ಮಗನಿಗೆ 14 ವರ್ಷ. ಅವನ ವಿದ್ಯಾಭ್ಯಾಸದ ಬಗ್ಗೆ ಮಾರ್ಗದರ್ಶನ ಮಾಡಿರಿ. ನಾನು ಗರಿಷ್ಠ ₹ 5000 ತಿಂಗಳಿಗೆ ಉಳಿಸಬಲ್ಲೆ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ.
 
ಉತ್ತರ: ಮನೆಕಟ್ಟಲು ಎಲ್.ಐ.ಸಿ. ಬಾಂಡ್‌ನಲ್ಲಿ, ಅವರ ಸಹ ಸಂಸ್ಥೆಯಾದ ಎಲ್.ಐ.ಸಿ. ಹೌಸಿಂಗ್‌ನಲ್ಲಿ ಸಾಲ ದೊರೆಯುವುದಾದರೂ, ನಿಮ್ಮ ಆದಾಯಕ್ಕೆ ಸಾಲ ಮರು ಪಾವತಿಸುವ ಸಾಮರ್ಥ್ಯವಿಲ್ಲವಾದ್ದರಿಂದ ಸಾಲ ದೊರೆಯ ಲಾರದು. ನೀವು ಉಳಿಸಬಹುದಾದ ₹ 5000, 4 ವರ್ಷಗಳ ಅವಧಿಗೆ ಬ್ಯಾಂಕಿನಲ್ಲಿ ಆರ್.ಡಿ. ಮಾಡಿರಿ. ಇದರಿಂದ ನಿಮ್ಮ ಮಗ 18 ವರ್ಷಕ್ಕೆ ತಲುಪುವಾಗ ಕಟ್ಟಿದ ಹಣ ಹಾಗೂ ಬಡ್ಡಿ ಸೇರಿಸಿ   ₹ 2,80,310 ಪಡೆಯುವಿರಿ. ಈ ಹಣ ಮಗನ ಕಾಲೇಜು ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಇದೇ ವೇಳೆ ನಿಮ್ಮ ಮಗ ವೃತ್ತಿಪರ ಶಿಕ್ಷಣ ಪಡೆಯುವುದಾದರೆ, ಮಾಡೆಲ್ ಎಜ್ಯುಕೇಷನ್ ಸ್ಕೀಮಿನಲ್ಲಿ, ಬ್ಯಾಂಕುಗಳಲ್ಲಿ ಗರಿಷ್ಠ ₹ 10 ಲಕ್ಷ ಬಡ್ಡಿ ಅನುದಾನಿತ ಸಾಲ ದೊರೆಯುತ್ತದೆ. ನಿಮಗೆ ಉತ್ತಮ ಭವಿಷ್ಯ ಹಾರೈಸುತ್ತೇನೆ.
 
ಪಿ. ಸಮೀರ್, ಬೆಂಗಳೂರು
* ನನ್ನ ವಯಸ್ಸು 25. ಕರ್ನಾಟಕ ಸರ್ಕಾರದ ಸಂಸ್ಥೆಯಲ್ಲಿ ಉದ್ಯೋಗಿ. ವಾರ್ಷಿಕ ಸಂಬಳ ₹ 5,29,710 ಕಡಿತ ಎಲ್.ಐ.ಸಿ. 
₹ 2081, ವೃತ್ತಿ ತೆರಿಗೆ ₹ 200, ಜಿ.ಐ.ಎಸ್. 180, ಎನ್.ಡಿ.ಸಿ.ಎಫ್.ಎಸ್. ₹ 4244. ಪ್ರಸ್ತುತ ನಾನು ಯಾವುದೂ ಉಳಿತಾಯ ಮಾಡುತ್ತಿಲ್ಲ. ಆದಾಯ ತೆರಿಗೆ ವಿನಾಯಿತಿಗೆ ಉಳಿತಾಯದ ಮಾರ್ಗ ತಿಳಿಸಿರಿ.
 
ಉತ್ತರ: ನೀವು ಅವಿವಾಹಿತರೆಂದು ತಿಳಿಯುತ್ತೇನೆ. ಇನ್ನು 2–3 ವರ್ಷಗಳಲ್ಲಿ ಮದುವೆಯಾಗಬಹುದು ಎನ್ನುವ ನಿರೀಕ್ಷೆ ಇರಿಸಿ ತಕ್ಷಣ ₹ 15,000 ಆರ್.ಡಿ., 3 ವರ್ಷಗಳ ಅವಧಿಗೆ ಮಾಡಿರಿ. ಹೀಗೆ ಬರುವ ಹಣ ನಿಮ್ಮ ಮದುವೆಗೆ ಉಪಯೋಗವಾಗುತ್ತದೆ. ಪಿ.ಪಿ.ಎಫ್. ಖಾತೆ ತೆರೆದು ವಾರ್ಷಿಕವಾಗಿ ಕನಿಷ್ಠ ₹ 1.25 ಲಕ್ಷ ತುಂಬಿರಿ. ವಿಮೆ ಹಾಗೂ ಐ.ಐ.ಎಫ್. ನಿಂದಾಗಿ ಸೆಕ್ಷನ್ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಇದೇ ವೇಳೆ ವಾರ್ಷಿಕವಾಗಿ ಕನಿಷ್ಠ ₹ 50,000  ಸೆಕ್ಷನ್ 80ಸಿಸಿಡಿ (1ಬಿ) ಆಧಾರದ ಮೇಲೆ, ನ್ಯಾಷನಲ್ ಪೆನ್ಶನ್ ಸ್ಕೀಮಿನಲ್ಲಿ ತೊಡಗಿಸಿ. ಈ ಮೊತ್ತ ಕೂಡಾ, 80ಸಿ ಉಳಿತಾಯ ಹೊರತುಪಡಿಸಿ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ನಿಮ್ಮ ಪತ್ರದಲ್ಲಿ ಬರೆದ ದೂರವಾಣಿ ಸಂಖ್ಯೆ ಓದಲು ಸಾಧ್ಯವಾಗಲಿಲ್ಲ. ನಿಮಗೆ ನೇರ ಫೋನ್‌ನಲ್ಲಿಯೇ ಉತ್ತರ ಕೊಡುವ ಉದ್ದೇಶವಿತ್ತು. ಉಳಿತಾಯ ಜೀವನದ ಪ್ರಾರಂಭದಲ್ಲಿ ಮಾಡುತ್ತಾ ಬಂದಲ್ಲಿ ಜೀವನದ ಸಂಜೆ ಸುಖಮಯವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT