ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಎಚ್ಚರಿಕೆ ಗಂಟೆ

Last Updated 30 ಜುಲೈ 2013, 19:59 IST
ಅಕ್ಷರ ಗಾತ್ರ

ವಿಶ್ವದ `ಆಟೊ ರಾಜಧಾನಿ' ಎಂದು ಖ್ಯಾತಿ ಗಳಿಸಿದ್ದ ಅಮೆರಿಕದ ಮಿಷಿಗನ್ ರಾಜ್ಯದ ರಾಜಧಾನಿ ಡೆಟ್ರಾಯಿಟ್ ನಗರ ದಿವಾಳಿಯಾಗಿದೆ. ಒಂದು ಕಾಲದಲ್ಲಿ 20 ಲಕ್ಷದಷ್ಟಿದ್ದ ಜನಸಂಖ್ಯೆ ಈಗ 70 ಸಾವಿರಕ್ಕಿಳಿದಿದೆ ಎಂಬ ಸುದ್ದಿ ಓದಿದಾಕ್ಷಣ ಬೆಂಗಳೂರು ನೆನಪಾಯಿತು. ಡೆಟ್ರಾಯಿಟ್ ನಗರಾಡಳಿತ ಅಭಿವೃದ್ಧಿ ನೆಪದಲ್ಲಿ ಅಗಾಧ ಪ್ರಮಾಣದ ಸಾಲ ಮಾಡಿ, ಸಾಲವನ್ನು ತೀರಿಸುವುದಿರಲಿ, ಬಡ್ಡಿಯನ್ನು ಕೊಡಲಾಗದೆ, ಜನತೆಗೆ ಮೂಲಸೌಕರ್ಯವನ್ನು ಒದಗಿಸಲಾಗದೆ ಅಲ್ಲಿನ ಜನ ನಗರ ಬಿಡುವುದು ಅನಿವಾರ್ಯವಾಯಿತು.

ಒಮ್ಮೆ ಗಮನಿಸಿ. ಬೆಂಗಳೂರು ಮಹಾನಗರ ಪಾಲಿಕೆಯೂ ಸಾಲ ಎತ್ತುತ್ತಿದೆ. ಕಸದ ಸಮಸ್ಯೆ ಪೆಡಂಭೂತದಂತೆ ಕಾಡುತ್ತಿದೆ. ಮಳೆ ಬಂತೆಂದರೆ ಬೆಂಗಳೂರು ಸ್ತಬ್ಧವಾಗಿ ಬಿಡುತ್ತದೆ. `ಗಾರ್ಡನ್ ಸಿಟಿ, ಗಾರ್ಬೇಜ್ ಸಿಟಿ' ಆಗಿದೆ. ಅಡ್ಡಾದಿಡ್ಡಿ ಬೆಳೆಯುತ್ತಿರುವ ಬೆಂಗಳೂರಿಗೆ ಇಡೀ ಕಾವೇರಿ ನೀರು ಹರಿಸಿದರೂ ಸಾಲದು ಅನ್ನುವ ಕಾಲ ದೂರವಿಲ್ಲ. ಇದಕ್ಕೆಲ್ಲ ಕಡಿವಾಣ ಹಾಕದಿದ್ದರೆ, ಭವಿಷ್ಯ ದುಃಸ್ವಪ್ನವಾಗುತ್ತದೆ.

ಇನ್ನು ಬೆಂಗಳೂರು ಬೆಳೆಯಲು ಬಿಡಬಾರದು. ಹೊಸ ಸಮುಚ್ಚಯ ಕಟ್ಟಡಗಳಿಗೆ ಪರವಾನಗಿ ನೀಡಬಾರದು. ಒಂದು ದಿನಾಂಕ ನಿಗದಿಪಡಿಸಿ ಆ ನಂತರ ನಿರ್ಮಾಣವಾಗುವ ಬಡಾವಣೆಗಳಿಗೆ ನಾಗರಿಕ ಸೌಲಭ್ಯ ಒದಗಿಸಬಾರದು. ಅನಧಿಕೃತ ಕಟ್ಟಡಗಳನ್ನು ಅಧಿಕೃತಗೊಳಿಸಿ (ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಮುಂದೆ ಆಸ್ಪದವಿರಬಾರದು), ಬರುವ ಶುಲ್ಕದಿಂದ ಮೂಲ ಸೌಕರ್ಯ ಒದಗಿಸಬೇಕು. ಬೃಹತ್ ಪಾಲಿಕೆಯನ್ನು ನಾಲ್ಕು ಆಡಳಿತ ವಿಭಾಗವಾಗಿ ವಿಂಗಡಿಸಿ ಎಲ್ಲವನ್ನೂ ವಿಕೇಂದ್ರೀಕರಣಗೊಳಿಸಬೇಕು.

ಪ್ರತಿ ವಿಭಾಗದಲ್ಲೂ ಆಧುನಿಕ ತಂತ್ರಜ್ಞಾನ ಬಳಸಿ ಕಸದಿಂದ ವಿದ್ಯುತ್, ಗೊಬ್ಬರ ತಯಾರಿಸಬೇಕು. ನೀರನ್ನು ಪುನರ್ಬಳಕೆ ಮಾಡುವ ವ್ಯವಸ್ಥೆ, ಮಳೆ ನೀರು ಸಂಗ್ರಹ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ತೆರಿಗೆ ಸಂಗ್ರಹ, ವಿತರಣೆ ಸಮರ್ಪಕವಾಗಿ ಆಗಬೇಕು. ಪ್ರತಿ ಬಡಾವಣೆಯಲ್ಲೂ ನಾಗರಿಕ ಸಮಿತಿ ರಚನೆ ಆಗಬೇಕು. ಬೆಂಗಳೂರನ್ನು ಸಹ್ಯವಾಗಿಡುವ, ನಿಯಂತ್ರಿಸುವ ಕೆಲಸ ಆಗದಿದ್ದರೆ, ಬೆಂಗಳೂರಿನ ಜನ ಬೇರೆಡೆಗೆ ಗುಳೇ ಹೋಗುವ ಕಾಲ ಬಂದೇ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT