ಸೋಮವಾರ, ಮೇ 17, 2021
23 °C

ಪ್ರಸಾದ ಪುರಾಣಂ

ಡಾ. ಬಿ.ಎಲ್. ವೇಣು Updated:

ಅಕ್ಷರ ಗಾತ್ರ : | |

Prajavani

ಸುಳ್ವಾಡಿ ಮಾರಮ್ಮನ ಪ್ರಸಾದ ತಿಂದು 17 ಜನ ಪ್ರಾಣ ಕಳ್ಕೊಂಡವ್ರೆ. ನಮ್ಮ ದೇಶದ ಸ್ವಾಮ್ಗುಳು ಕಾವಿ ಮರೇಲಿ ಎಂಥ ಅನಾಹುತ ಮಾಡ್ಲಿಕ್ಕೂ ಹೇಸದಂಗಾಗಿ ಬಿಟ್ಟವರೆ ಕಣ್ರಿ. ಎಂತೆಂಥ ಸ್ವಾಮ್ಗುಳಪ್ಪಾ ನಮ್ಮ ದೇಶದಾಗೆ!? ಗೋಸಾಮಿ, ಭೂಸಾಮಿ, ರೇಪ್ ಸಾಮಿ, ಡೇಟಿಂಗ್ ಸಾಮಿ, ಡಾನ್ಸಿಂಗ್ ಸಾಮಿ, ಸಿಂಗಿಂಗ್ ಸಾಮಿ, ನಾಟ್ಕದ ಸಾಮಿ, ಡ್ರಮ್ ಸಾಮಿ, ರೆಬೆಲ್ ಸಾಮಿ, ಬೆಲ್ ಸಾಮಿ, ಇದೀಗ... ಪಾಯಿಸನ್ ಸಾಮಿ!

ಪ್ರಸಾದ ತಿಂದು ಸಾವಿಗೀಡಾದವ್ರಿಗೆ ಸರ್ಕಾರ ಏನೋ ಪರಿಹಾರ ಕೊಡ್ತಾ ಐತೆ. ಆದರೆ, ಪೂಜಾರಿ ನೇವೇದ್ಯಕ್ಕಿಟ್ಟ ಪ್ರಸಾದ ತಿಂದ ಮಾರಮ್ಮನ ಗತಿ ಏನಾತಂತ ಒಬ್ಬ ಭಕ್ತನಾರ ತಲೆಕೆಡಿಸಿಕ್ಯಂಡಿದ್ದುಂಟಾ? ಸರ್ಕಾರವಂತೂ ಇನ್ನು ಮ್ಯಾಗೆ ಎಲ್ಲಾ ಗುಡಿಗುಂಡಾರ್‍ದಾಗೂ ಪ್ರಸಾದಾನ ಟೆಸ್ಟ್ ಅಂಡ್ ಟೇಸ್ಟ್ ಮಾಡಿಯೇ ಹಂಚತಕ್ಕದ್ದೆಂದು ಕಾನೂನು ತರ್ಲಿಕ್ಕೆ ಹೊಂಟದೆ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳ್ದಂಗೆ ಅಂತ ಕೆಲವು ಚಾನೆಲ್‍ನೋರು ಬೊಂಬ್ಡಿ ಹೊಡಿಲಿಕತ್ತವ್ರೆ. ಈಗಾಗ್ಲೆ ದಕ್ಷಿಣ ಕನ್ನಡದ ಒಂದು ಮಠದೋರು ಕಿಚನ್ ರೂಮ್ನಾಗೆ ಸಿಸಿ ಟೀವಿ ಕ್ಯಾಮೆರಾ ಇಕ್ಕಿ, ಪ್ರಸಾದನ ಬಾಣಸಿಗ, ಪೂಜಾರಿ, ಹೆಲ್ತ್ ಅಧಿಕಾರಿಗಳಿಗೆ, ಧರ್ಮದರ್ಶಿಗಳಿಗೆ ತಿನ್ನಿಸಿ ಹಂಚಿದ್ದರಿಂದಾಗಿ ಭಕ್ತರಿಗೇ ಶಾರ್ಟೇಜ್ ಬಂತು ಅಂತ ದೂರು ಬ್ಯಾರೆ ಬಂದೇತಿ.

ಇನ್ನು ಮಠಗಳಲ್ಲೂ ದಾಸೋಹ ಡೈಲಿ ಇದ್ದೇ ಇರ್ತೈತಿ. ಹಿರಿಸಾಮಿ ಕಂಡ್ರೆ ಕಿರಿಯನಿಗಾಗಲ್ಲ. ಕಿರಿಸಾಮಿ ಕಂಡ್ರೆ ಮರಿಸಾಮಿಗಾಗಲ್ಲ. ಹಿರಿಸಾಮಿ ಪೀಠದ ಮೇಲೆ ಕಣ್ಣಿಟ್ಟಿರೋ ಹರೇದ ಸಾಮಿ ರೇಗಿ ಯಾವತ್ತು ಪ್ರಸಾದದಾಗೆ ಪಾಷಾಣ ಇಕ್ತಾನೋ ಯಾವಂಬಲ್ಲ. ಹಿಂಗಾಗಿ ದಾಸೋಹಕ್ಕೆ ಹೋಗೋ ಶರಣಗಣಂಗಳು ಹುಷಾರ್ನಾಗಿದ್ದರೆ ಚೊಲೋ. ಲಾಸ್ಟ್ ಮಂಥ್ ಮಠ ಒಂದರ ನಾಟ್ಕ ನೋಡೋಕೆ ಹೋದ ಡಿಸಿಎಂ ಸಾಹೇಬ ಉಂಬೋ ಪ್ರಸಾದಾನ ಸೆಕ್ಯುರಿಟಿನೋರು ಟೆಸ್ಟ್ ಮಾಡಿದರು ಅಂತ ಆ ಮಠದ ಸಾಮಿ ಅಂಗಾರಾಗಿತ್ತು. ಆದ್ರೀಗ ಅದೇನು ಮಾಪರಾಧವಲ್ಲ ಅನ್ನಿಸ್ಲಿಕತ್ತದೆ, ಅಲ್ಲವರಾ...?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.