ಗುರುವಾರ , ಏಪ್ರಿಲ್ 9, 2020
19 °C

ಝೀ ಸಿನಿಮಾ ಪ್ರಶಸ್ತಿಅತ್ಯುತ್ತಮನಿರ್ದೇಶಕ ಬನ್ಸಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಂದು ಕಾಲದ ಸಾಮಾಜಿಕ ಸಂಪ್ರದಾಯದ ಸತಿ ಪದ್ಧತಿ ಮತ್ತು ರಾಜಕೀಯ ಸಂದರ್ಭವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ರೂಪಿಸಿದ ‘ಪದ್ಮಾವತ್‌’ ಸಿನಿಮಾ ಈ ಸಲದ ’ಝೀ ಸಿನಿಮಾ ಪ್ರಶಸ್ತಿ’ಗಳನ್ನು ಬಾಚಿಕೊಂಡಿದೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸಂಜಯ್‌ಲೀಲಾ ಬನ್ಸಾಲಿ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ದೀಪಿಕಾ ಪಡುಕೋಣೆ ಮತ್ತು ಪ್ರೇಕ್ಷಕರ ಆಯ್ಕೆಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಣವೀರ್‌ ಸಿಂಗ್‌ ತಮ್ಮದಾಗಿಸಿಕೊಂಡರು. 

ನಾನಾ ಪಾಟೇಕರ್‌, ಅನೀಲ್‌ ಕಪೂರ್‌, ಜಾಕಿಶ್ರಾಫ್‌, ಮಾಧುರಿ ಅಭಿನಯದ ‘ಪರಿಂದಾ‘ ಚಿತ್ರ ನೆನಪಿರಬಹುದು. ಮುಂಬೈ ಕ್ರೈಂ ಜಗತ್ತು, ಕೌಟುಂಬಿಕ ಸಂಬಂಧಗಳಲ್ಲಿನ ಮೌಲ್ಯ, ನಿರುದ್ಯೋಗ ಮತ್ತು ಹಿಂಸೆಯನ್ನು ಕಟ್ಟಿಕೊಟ್ಟ ತುಂಬ ಸೂಕ್ಷ್ಮ ಸಿನಿಮಾ ಆಗಿ ಅದು ಹೆಸರಾಗಿತ್ತು. ಆ ಚಿತ್ರದ ಸಹಾಯಕ ನಿರ್ದೇಶಕನಾಗಿ ಬಾಲಿವುಡ್‌ ಪ್ರವೇಶ ಮಾಡಿದ ಸಂಜಯ್‌ಲೀಲಾ ಬನ್ಸಾಲಿ ಈಗ ಬಹುದೊಡ್ಡ ನಿರ್ದೇಶಕ. ಒಳ್ಳೆಯ ಕತೆಗಾರ. ’1942– ಎ ಲವ್‌ ಸ್ಟೋರಿ‘ ಚಿತ್ರದ ಕತೆ ಬನ್ಸಾಲಿಯದು ಎನ್ನುವುದು ಬಹುತೇಕರಿಗೆ ಮರೆತೇ ಹೋಗಿರಬಹುದು. ಆನಂತರದಲ್ಲಿ ನಾನಾ ಪಾಟೇಕರ್‌, ಸಲ್ಮಾನ್‌ಖಾನ್‌ ಮತ್ತು ಮನಿಶಾ ಕೊಯಿರಾಲ ಹಾಕಿಕೊಂಡು ಮಾಡಿದ ಸಂಗೀತಮಯ ಚಿತ್ರ ‘ಖಾಮೋಶಿ’ ಅವರ ಮೊದಲ ನಿರ್ದೇಶನದ ಚಿತ್ರ. ಜತಿನ್‌–ಲಲಿತ್‌ ಸಂಗೀತ ನೀಡಿದ ‘ಬಾಹೋಂಕೆ ದರ್ಮಿಯ್ಞಾ, ದೋ ಪ್ಯಾರ್‌ ಮಿಲ್‌ ರಹೇ ಹೈ, ಜಾನೇ ಕ್ಯಾ ಬೋಲೆ ಮನ್‌, ಡೊಲೆ ಸುನ್‌ಕೇ ಬದನ್‌ ಧಡಕನ್‌ ಬನೀ ಜುಬ್ಞಾ...‘ ಮತ್ತು ‘ಆಜ್‌ ಮೈ ಊಪರ್‌, ಆಸ್ಮಾ ನೀಛೆ, ಆಜ್‌ ಮೈ ಆಗೆ ಜಮಾನಾ ಹೈ ಪೀಛೆ, ಟೆಲ್‌ ಮೀ ಓ ಖುದಾ ಅಬ್‌ ಮೈ ಕ್ಯಾ ಕರೂ ಚಲೂ ಸೀಧೀ ಕೀ ಉಲ್‌ಟೀ ಚಲೂ..’ ಎನ್ನುವ ಎರಡು ಸುಮಧುರ ಹಾಡುಗಳನ್ನು ಮರೆಯಲು ಸಾಧ್ಯವೇ?

ಆ ನಂತರದಲ್ಲಿ ಮತ್ತೆ ಸಲ್ಮಾನ್‌ ಖಾನ್‌, ಐಶ್ವರ್ಯ ರೈ ಹಾಕಿಕೊಂಡು ಬನ್ಸಾಲಿ ನೀಡಿದ ‘ಹಮ್‌ ದಿಲ್‌ ದೇ ಚುಕೇ ಸನಂ‘ ಒಂದು ಅದ್ಭುತ ರೋಮ್ಯಾಂಟಿಕ್‌ ಸಿನಿಮಾ. ಸಲ್ಮಾನ್‌ ಖಾನ್‌ ಪಾತ್ರ ದುರಂತದಲ್ಲಿ ಕೊನೆಗೊಂಡರೂ ಪ್ರೇಮದ ಅಪ್ಪಟ ತ್ಯಾಗವನ್ನು ಧ್ವನಿಸಿದ್ದು ಪ್ರೇಮಿಗಳ ಎದೆ ಹಿಂಡುವಂಥದು. ‘ತೂನೆ ಪ್ಯಾರ್‌ ಕರನಾ ಸಿಖಾಯಾ, ಉಸ್‌ನೇ ನಿಭಾನಾ ಸಿಖಾಯಾ‘ ಎನ್ನುವ ನಂದಿನಿ (ಐಶ್ವರ್ಯ ರೈ) ಪಾತ್ರದ ಮಾತಿಗೆ ತನ್ನ ಪ್ರೇಮಧ್ಯಾನವನ್ನೆಲ್ಲ ಅವಳ ಬೊಗಸೆಗೆ ಸುರುವಿ ತ್ಯಾಗ ಆಯ್ದುಕೊಳ್ಳುವ ಸಮೀರ್‌ (ಸಲ್ಮಾನ್‌ ಖಾನ್‌) ಪಾತ್ರ ಪ್ರೇಮಕ್ಕೊಂದು ಹೊಸ ಬಾಷ್ಯ ಬರೆಯುತ್ತದೆ. ಇಸ್ಮಾಯಿಲ್‌ ದರ್ಬಾರಿ ಸಂಗೀತ ನಿರ್ದೇಶನದ ‘ಹಮ್‌ ದಿಲ್‌ ದೇ ಚುಕೇ ಸನಂ...’ ಟೈಟಲ್‌ ಸಾಂಗ್‌ ಮತ್ತು ‘ತಡಪ್‌ ತಡಪ್‌ ಕೆ ಇಸ್‌ ದಿಲ್‌ ಸೇ ಆಹ್‌ ನಿಕಲ್‌ತೀ ರಹೀ..‘ ಹಾಡಿನ ಆ ಮೊದಲ ಸಾಲುಗಳು ‘ಬೇಜಾನ್‌ ದಿಲ್‌ ಕೊ ತೇರೆ ಇಷ್ಕ್‌ ನೇ ಜಿಂದಾ ಕಿಯಾ, ಫಿರ್‌ ತೇರೆ ಇಷ್ಕ್‌ನೇ ಹೀ ಇಸ್‌ ದಿಲ್‌ ಕೊ ತಬಾಹ್‌ ಕಿಯಾ...‘  ಭಗ್ನ ಹೃದಯವನ್ನು ಮೀರಿ ದಾರ್ಶನಿಕ ಭಾವಕ್ಕೆ ಎಳೆದೊಯ್ಯುವಂಥವು. ಆ ನಂತರದಲ್ಲಿ ಬನ್ಸಾಲಿ ನೀಡಿದ ಇಂಥ ನವಿರು ಸ್ಪರ್ಶದ ಚಿತ್ರಗಳು ಒಂದೇ ಎರಡೇ.

ಶರಶ್ಚಂದ್ರ ಚಟ್ಟೋಪಾಧ್ಯಾಯ ಅವರ ಕಾದಂಬರಿ ಆಧಾರಿತ ‘ದೇವದಾಸ್‌’ (ಶಾರೂಕ್‌ ಮತ್ತು ಐಶ್ವರ್ಯ ರೈ), ಬ್ಲ್ಯಾಕ್‌ (ಅಮಿತಾಬ್‌, ರಾಣಿ ಮುಖರ್ಜಿ), ಸಾವರಿಯಾ (ರಣಬೀರ್‌ ಕಪೂರ್‌), ಗುಜಾರಿಶ್‌, ಗೋಲಿಯೋಂಕಿ ರಾಸ್‌ಲೀಲಾ–ರಾಮ್‌ ಲೀಲಾ (ಶೇಕ್‌ಸ್ಪಿಯರ್‌ನ ರೋಮಿಯೊ ಜ್ಯೂಲಿಯಟ್‌ ಅಡಾಪ್ಟೇಶನ್‌), ಬಾಜಿರಾವ್‌ ಮಸ್ತಾನಿ ಮತ್ತಿತರ ಅದ್ಭುತ ಚಿತ್ರಗಳನ್ನು ನೀಡಿದ ಸಂಜಯ್‌ಲೀಲಾ ಬನ್ಸಾಲಿ ಬಾಲಿವುಡ್‌ನಲ್ಲಿ ನವಿರು ಸ್ಪರ್ಶದ ಮತ್ತು ಅಷ್ಟೇ ವೈಭವದ ಸಿನಿಮಾ ನಿರ್ದೇಶಕ. ಗ್ರ್ಯಾಂಡ್‌ ಆಗಿ ಕಟ್ಟಿಕೊಳ್ಳುವ ಅವರ ಸಿನಿಮಾಗಳು ಅದ್ದೂರಿ ನಿರ್ಮಾಣದ ಚಿತ್ರಗಳೆಂದೇ ಹೆಸರಾಗಿವೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾದ ಬನ್ಸಾಲಿಗೆ ಅಭಿನಂದನೆಗಳು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)