ಗುರುವಾರ , ಆಗಸ್ಟ್ 5, 2021
28 °C

ಅಜ್ಞಾನಿ ನಾಯಕರು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಒಂದೂರಿನಲ್ಲಿ ಒಬ್ಬ ರಾಜ. ಅವನು ಕೆಟ್ಟವನೇನಲ್ಲ.  ಆದರೆ ಅಂಥ ಸಮರ್ಥನೂ ಅಲ್ಲ.  ಅವನಿಗೆ ಸ್ವತಃ ಜ್ಞಾನ ಕಡಿಮೆ.  ಯಾರು ಏನು ಹೇಳಿದರೂ ನಂಬಿ ಬಿಡುವಂಥವನು.  ಅವನ ದರ್ಬಾರಿನಲ್ಲಿ ಅನೇಕ ಜನ ಜ್ಞಾನಿಗಳಿದ್ದರು.  ಅದರಲ್ಲಿ ಒಂದಷ್ಟು ಜನ ಜ್ಞಾನದ ಮುಖವಾಡ ಹಾಕಿಕೊಂಡವರೂ ಇದ್ದರು.  ಯಾವುದೋ ಒಂದು ವಿಷಯದಲ್ಲಿ ಒಬ್ಬರ ಮೇಲೆ ನಂಬಿಕೆ ಬಂತೋ ಅವರನ್ನು ದರ್ಬಾರಿನಲ್ಲಿ ಸೇರಿಸಿಕೊಂಡು ಬಿಡುತ್ತಿದ್ದ ರಾಜ.  ಮತ್ತೆ ಯಾವುದೋ ಸಂದರ್ಭದಲ್ಲಿ ಮತ್ತೊಬ್ಬರ ಮೇಲೆ ಬೇಜಾರು ಬಂತೆಂದರೆ ಅವರನ್ನು ಕ್ಷಣಾರ್ಧದಲ್ಲಿ ದರ್ಬಾರಿನಿಂದ ಹೊರಗೆ ಹಾಕಿಸಿಬಿಡುತ್ತಿದ್ದ.ದರ್ಬಾರಿನಲ್ಲಿ ಯಾವುದಾದರೂ ಚರ್ಚೆ ನಡೆಯುತ್ತಿದ್ದರೆ ರಾಜನಿಗೆ ಅರ್ಥವಾಗುವುದು ತುಂಬ ಕಡಿಮೆ.  ಒಂದು ಚೂರು ಏನಾದರೂ ತಿಳಿದಂತೆ ಎನ್ನಿಸಿದರೆ ಅದೇ ಸತ್ಯ ಎಂದು ನಂಬಿ ಬಿಡುವನು.  ಇವನನ್ನು ಮೋಸ ಮಾಡಬೇಕೆಂದು ಒಬ್ಬ ಚಾಲಾಕಿ ವ್ಯಕ್ತಿ ಸಮಯ ನೋಡಿ ದರ್ಬಾರಿಗೆ ಬಂದ.  ಅವನು ಧರಿಸಿದ ವೇಷ ಭೂಷಣ, ಅವನ ಆಡಂಬರ, ಕೊರಳಲ್ಲಿ ಹಾಕಿಕೊಂಡ ಬಂಗಾರದ ಸರಗಳು, ಹಣೆಯ ಮೇಲೆ ಮಿಂಚುತ್ತಿದ್ದ ವಿಭೂತಿ,  ಗಂಧದ ಬೊಟ್ಟು, ಕುಂಕುಮಗಳು ಅವನು ಬಹಳ ಸಾಧನೆ ಮಾಡಿದವನೆಂಬಂತೆ ಬಿಂಬಿಸುತ್ತಿದ್ದವು.  ಅವನು ದರ್ಬಾರಿನಲ್ಲಿ ಬಂದು ತನ್ನ ಹೆಗ್ಗಳಿಕೆಗಳ ಪಟ್ಟಿಯನ್ನೇ ಹೇಳಿಕೊಂಡನು.  ನಂತರ ಒಂದು ಪ್ರಸಿದ್ಧವಾದ ಶ್ಲೋಕವನ್ನು ಹೇಳಿ,  ಇದು ಯಾರನ್ನು ಉದ್ದೇಶಿಸಿದ್ದು? ಎಂದು ಸಭಿಕರನ್ನು ಕೇಳಿದ. ಅದು ವಿಷ್ಣುವಿನ ಸ್ತೋತ್ರ.  ಅದನ್ನು ಆಗಲೇ ಹಿರಿಯ ಮಂತ್ರಿಗಳು ಒಂದೆರಡು ಬಾರಿ ಹೇಳಿ ವಿವರಿಸಿದ್ದುಂಟು.  ತಕ್ಷಣ ರಾಜ,  ಇದು ಮಹಾವಿಷ್ಣುವಿನ ಸ್ತೋತ್ರ  ಎಂದ.  ಆಗ ಆ ವ್ಯಕ್ತಿ ಗಹಗಹಿಸಿ ನಕ್ಕು,  ‘ನನಗೆ ಗೊತ್ತಿತ್ತು, ನಿಮ್ಮ ಹಿರಿಯ ಮಂತ್ರಿಗಳು ಹೀಗೆಯೇ ತಪ್ಪು ವಿಷಯ ತಿಳಿಸಿರುತ್ತಾರೆಂದು.  ಇದು ವಿಷ್ಣುವಿನ ಸ್ತೋತ್ರವಲ್ಲ.  ಹಣದ ಸ್ತೋತ್ರ.  ಬೆಳ್ಳಿಯ ರೂಪಾಯಿಯ ಸ್ತೋತ್ರ. ರೂಪಾಯಿಗೆ ಬೆಳ್ಳಿಯ ಹೊಳಪಿದೆ. ಅದು ದುಂಡಗೆ ಚಂದ್ರಾಕಾರವಾಗಿದೆ. ಮತ್ತು ನಮಗೆ ಸಂತೋಷ, ಸಂಭ್ರಮಗಳನ್ನು ಉಂಟುಮಾಡುತ್ತದೆ’ ಎಂದ.ಈ ಮೋಸಗಾರನ ಮಾತುಗಳನ್ನು ಕೇಳಿ ರಾಜನಿಗೆ ತುಂಬ ಸಂತೋಷವಾಯಿತು.  ತಕ್ಷಣವೇ ತನ್ನ ಹಳೆಯ ಮಂತಿಯನ್ನು ಕೆಲಸದಿಂದ ತೆಗೆದುಹಾಕಿ ಆ ಸ್ಥಳಕ್ಕೆ ಈ ಮೋಸಗಾರನನ್ನು ದೊಡ್ಡ ಸಂಬಳ ನೀಡಿ ನಿಯಮಿಸಿಕೊಂಡ.  ಈ ವಿಷಯ ಬಹಳಷ್ಟು ಜನರಿಗೆ ಅಸಮಾಧಾನ ಉಂಟುಮಾಡಿತು.  ಹಿರಿಯ ಮಂತ್ರಿಗಳನ್ನು ಹೀಗೆ  ತೆಗೆದುಹಾಕಿ ಈ ಬೂಟಾಟಿಕೆಯವನನ್ನು ಏರಿಸಿ ಕೂಡ್ರಿಸಿದ್ದು ಸರಿಯಲ್ಲ ಎನ್ನಿಸಿತು.  ಆದರೆ ರಾಜನಿಗೆ ಯಾರು ಬುದ್ಧಿ ಹೇಳುವವರು?ಮುಂದೆ ನಾಲ್ಕಾರು ದಿನಗಳು ಕಳೆದ ಮೇಲೆ ದರ್ಬಾರಿಗೆ ಮತ್ತೊಬ್ಬ ಮಹಾ ಮೇಧಾವಿಯಂತೆ  ತೋರುತ್ತಿದ್ದ ವ್ಯಕ್ತಿ ಬಂದ.  ಅವನ ಅಬ್ಬರ, ಹಾರಾಟ ಈ ಹೊಸ ಮಂತ್ರಿಗಿಂತ ಎರಡು ತೂಕ ಹೆಚ್ಚೇ ಆಗಿತ್ತು.  ಆತನೂ ಬಂದು ಅದೇ ಶ್ಲೋಕವನ್ನು ಹೇಳಿ ಅದರ ಅರ್ಥ ಯಾರಿಗಾದರೂ ತಿಳಿದಿದೆಯೇ ಎಂದು ಪ್ರಶ್ನೆ ಮಾಡಿದ.  ಅದಕ್ಕೆ ರಾಜ ಉತ್ತರಿಸಿದ,  ‘ನನ್ನ ಮೊದಲನೆಯ ಮಂತ್ರಿ ಅದನ್ನು ವಿಷ್ಣುಸ್ತೋತ್ರ ಎಂದಿದ್ದರು.  ಆದರೆ ನಮ್ಮ  ಹೊಸ ಮಂತ್ರಿಗಳು ಅದನ್ನು ರೂಪಾಯಿಯ ಸ್ತೋತ್ರ ಎಂದು ಹೇಳುತ್ತಾರೆ.’ ಈ ಹೊಸ ಪಂಡಿತ ಜೋರಾಗಿ ನಕ್ಕು,  ‘ಅಯ್ಯೋ ನಿಮ್ಮ ಅಜ್ಞಾನವೇ? ಎರಡೂ ಉತ್ತರಗಳು ತಪ್ಪು.  ಸರಿಯಾದ ಉತ್ತರವೆಂದರೆ ಮೊಸರು ವಡೆ.  ಇದು ಮೊಸರುವಡೆಯನ್ನು ವರ್ಣಿಸುವ ಸ್ತೋತ್ರ.  ಅದು ಬಿಳಿಯಾದ ಮೊಸರಿನಲ್ಲಿದೆ.  ಅದು ದುಂಡಗಾಗಿಯೂ ಇದೆ.  ಅದನ್ನು ನೆನೆಸಿಕೊಂಡರೆ ಸಾಕು ಮನಸ್ಸಿಗೆ ಸಂತೋಷ ದೊರೆತು, ಬಾಯಿಯಲ್ಲಿ ನೀರು ಬರುತ್ತದೆ.  ಅದನ್ನು ನಿತ್ಯ ಸೇವಿಸಿದವನಿಗೆ ಯಾವ ಕಷ್ಟವೂ ಇಲ್ಲ’ ಎಂದ.‘ಅದ್ಭುತ, ಇಂಥ ಸುಂದರವಾದ ವಿವರಣೆಯನ್ನು ನಾನು ಕೇಳಿಯೇ ಇರಲಿಲ್ಲ’  ಎಂದು ಹೊಗಳಿದ ರಾಜ.   ‘ಇಂದಿನಿಂದ ನಿಮ್ಮನ್ನು ನಮ್ಮ ಪ್ರಧಾನ ಮಂತ್ರಿಯಾಗಿ ನಿಯಮಿಸಿದ್ದೇನೆ’  ಎಂದು ಘೋಷಿಸಿದ.  ಆಗ ಆ ವ್ಯಕ್ತಿ ಕೈ ಮುಗಿದು,  ‘ಮಹಾರಾಜಾ, ನಾನು ಪಂಡಿತನೂ ಅಲ್ಲ,  ಮಂತ್ರಿ ಸ್ಥಾನವನ್ನು ಅಪೇಕ್ಷಿಸಿದವನೂ ಅಲ್ಲ.  ತಮಗೆ ತಮ್ಮ ತಪ್ಪನ್ನು ತೋರಿಸಲು ಬಂದಿದ್ದೇನೆ.  ನಿಮ್ಮ ಮೊದಲ ಮಂತ್ರಿ ನಿಜವಾಗಿಯೂ ಬುದ್ಧಿವಂತ, ಪ್ರಾಮಾಣಿಕ.  ಎರಡನೆಯವನು ಬರೀ ಬೂಟಾಟಿಕೆ ಮಾಡಿ ತಮ್ಮಿಂದ ಹಣ ಕೀಳಲು ಬಂದಿದ್ದಾನೆ.  ಈಗಾಗಲೇ ಸಾಕಷ್ಟು ಹಣ ಲೂಟಿ ಮಾಡಿದ್ದಾನೆ.  ಬೇಕಿದ್ದರೆ ಅವನ ಮನೆ ಪರೀಕ್ಷೆ ಮಾಡಿ ನೋಡಿ’  ಎಂದ.  ಹಾಗೆಯೇ ರಾಜ ಮಾಡಿದಾಗ ಮೋಸದ ವ್ಯಕ್ತಿಯ ಬಣ್ಣ ಬದಲಾಯಿತು.  ಮತ್ತೆ ಮೊದಲಿನ ಮಂತ್ರಿಯನ್ನು ಕರೆತಂದು ನಿಯಮಿಸಿಕೊಂಡ.  ಅಂದಿನಿಂದ ನಿರ್ಣಯ ತೆಗೆದುಕೊಳ್ಳುವಾಗ ರಾಜ ಹೆಚ್ಚು ಜಾಗರೂಕನಾಗಿದ್ದನಂತೆ ಮತ್ತು ಜ್ಞಾನಿಗಳ ಅಭಿಪ್ರಾಯ ತಿಳಿದು ಕೆಲಸಮಾಡುತ್ತಿದ್ದನಂತೆ.ನಾಯಕರಿಗೆ ಸ್ವಂತ ಜ್ಞಾನವಿಲ್ಲದೇ ಹೋದಾಗ ಆಗುವುದೇ ಹೀಗೆ. ಸ್ವಂತ ಜ್ಞಾನವಿಲ್ಲದಿದ್ದರೂ ತಿಳಿದವರನ್ನು ಕೇಳುವ, ಕೇಳಿ ಅದನ್ನು ಚಿಂತಿಸಿ ಪಾಲಿಸುವ ವಿನಯವಾದರೂ ಇರಬೇಕು.  ಇವೆರಡೂ ಇಲ್ಲದೇ ಹೋದಾಗ ನಾಯಕರ ಮೂರ್ಖತನಕ್ಕೆ ರಾಜ್ಯ ಭಾರೀ ಬೆಲೆ ತೆರಬೇಕಾಗುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.