ಸೋಮವಾರ, ಮೇ 23, 2022
20 °C

ಅಧಿಕಾರದಲ್ಲಿ ಇದ್ದವರು ಮರೆತರೆ ಕಾರ್ಯಕರ್ತ ಮತ್ತೇನು ಮಾಡಬೇಕು?

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಇಂಥ ಘಟನೆ ವಿಧಾನಸೌಧದಲ್ಲಿ ಹಿಂದೆ ಎಂದೂ ನಡೆದಿರಲಿಲ್ಲ. ಆಡಳಿತ ಪಕ್ಷದ ಒಬ್ಬ ಕಾರ್ಯಕರ್ತ ಎದುರಿಗೆ ಬಂದ ಒಬ್ಬ ಸಚಿವರಿಗೆ ಚಪ್ಪಲಿಯಿಂದ ಕಪಾಳಮೋಕ್ಷ ಮಾಡಿದ ಘಟನೆಯದು. ವಿಧಾನಸೌಧ, ಸರ್ಕಾರದ ಆಡಳಿತ ಕೇಂದ್ರ.ಅಲ್ಲಿಯೇ ಇಂಥ ಘಟನೆ ನಡೆದಿದೆ. ಇದು ಭದ್ರತೆಯ ಲೋಪ ಅಲ್ಲ. ಚಪ್ಪಲಿ ಹಾಕಿಕೊಳ್ಳದೆ ವಿಧಾನಸೌಧ ಪ್ರವೇಶಿಸಲು ಅದು ದೇವಾಲಯವೇನೂ ಅಲ್ಲ. ಆ ಕಾರ್ಯಕರ್ತ ತಾನು ಏಕೆ ಚಪ್ಪಲಿಯಿಂದ ಸಚಿವರಿಗೆ ಹೊಡೆದೆ ಎಂಬುದಕ್ಕೆ ಕಾರಣ ಕೊಟ್ಟಿದ್ದಾನೆ.ಈ ಸರ್ಕಾರ ಅಧಿಕಾರಕ್ಕೆ ಬಂದು ನಲವತ್ತು ತಿಂಗಳು ಘಟಿಸಿದರೂ ತನಗೆ ಯಾವ ಅಧಿಕಾರವೂ ಸಿಗಲಿಲ್ಲ. ಯಾವುದಾದರೂ ಒಂದು ನಿಗಮ ಅಥವಾ ಮಂಡಳಿಗೆ ತನ್ನನ್ನು ನೇಮಿಸಬೇಕಿತ್ತು ಎಂಬುದು ಆತನ ಅಪೇಕ್ಷೆ.ಇಂಥ ಒಂದು ಬಯಕೆ ಅಪರಾಧವೇನೂ ಅಲ್ಲ. ಆ ಕಾರ್ಯಕರ್ತ ನಿರ್ದಿಷ್ಟವಾಗಿ ಸೋಮಣ್ಣ ಅವರಿಗೇ ಹೊಡೆಯಬೇಕು ಎಂದು ಬಂದವನಲ್ಲ. ತನ್ನ ಎದುರು ಯಾರು ಸಿಕ್ಕಿದ್ದರೂ ಆತ ಹಾಗೆಯೇ ಬಾರಿಸುತ್ತಿದ್ದನೋ ಏನೋ? ಪೊಲೀಸರಿಗೆ ಆತ ಕೊಟ್ಟ ಹೇಳಿಕೆ ನೋಡಿದರೆ ಆತ ಇನ್ನೂ ಪ್ರಮುಖ ನಾಯಕರನ್ನೇ(!) ತನ್ನ ಗುರಿಯಾಗಿ ಇಟ್ಟುಕೊಂಡಿದ್ದ.

ಅವರು ಸಿಗಲಿಲ್ಲ. ಸೋಮಣ್ಣ ಸಿಕ್ಕರು. ಅವರ ದುರದೃಷ್ಟ. ಸೋಮಣ್ಣ ಅವರಿಗೆ ಹೊಡೆದ ಕಾರ್ಯಕರ್ತ ಮಾನಸಿಕ ಅಸ್ವಸ್ಥನೇನೂ ಅಲ್ಲ. ಆತ ತನ್ನ ಹೊಟ್ಟೆಯಲ್ಲಿ ಕುದಿಯುತ್ತಿದ್ದ ಸಿಟ್ಟಿಗೆ ಅಭಿವ್ಯಕ್ತಿ ಕೊಟ್ಟ ಅಷ್ಟೇ. ಆದರೆ, ಇನ್ನೂ ಎಷ್ಟೋ ಕಾರ್ಯಕರ್ತರು ಹೊಟ್ಟೆಯಲ್ಲಿನ ಸಿಟ್ಟನ್ನು ರಟ್ಟೆಗೆ ತಾರದೇ ಮೌನ ವಹಿಸಿದ್ದಾರೆ ಅಷ್ಟೇ.ಸಕ್ರಿಯ ಕಾರ್ಯಕರ್ತರು ಇಲ್ಲದೆ ಒಬ್ಬ ವ್ಯಕ್ತಿ ಅಧಿಕಾರಕ್ಕೆ ಬರುವುದು ಕಷ್ಟ. ಹಾಗೆ ಕಾರ್ಯಕರ್ತರ ಶ್ರಮದಿಂದ ಒಂದು ಪಕ್ಷದ ಬಹುಸಂಖ್ಯೆಯ ಶಾಸಕರು ಆಯ್ಕೆಯಾದಾಗ ಮಾತ್ರ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ.

 

ಒಬ್ಬ ನಾಯಕನನ್ನು ಅಧಿಕಾರದ ಕುರ್ಚಿಯಲ್ಲಿ ಕೂರಿಸಲು ಕಾರ್ಯಕರ್ತರು ಪಡುವ ಕಷ್ಟ ಕಡಿಮೆಯದೇನೂ ಅಲ್ಲ. ಇದು ಕೆಲವು ಸಾರಿ ಆಯಾ ಪಕ್ಷದ ಬಗೆಗಿನ ಬದ್ಧತೆ ಮಾತ್ರ ಆಗಿದ್ದರೆ ಇನ್ನು ಕೆಲವು ಸಾರಿ ನಾಯಕನಾದವನಿಗೆ ಏನಾದರೂ ಅಧಿಕಾರ ಸಿಕ್ಕರೆ ತಾನೂ ಸಣ್ಣ ಪುಟ್ಟ ಅಧಿಕಾರ ಅನುಭವಿಸಬಹುದು ಎಂಬ ಆಸೆಯೂ ಆಗಿರುತ್ತದೆ.ಈಗ ನಾಯಕರೆಲ್ಲ ಶಾಸಕರಾಗುವುದು ಸಚಿವರಾಗುವುದಕ್ಕಾಗಿ. ಸಚಿವರಾಗಲು ಅವರು ಏಕೆ ಬಯಸುತ್ತಾರೆ ಎಂಬುದು ಅಂಥ ಗುಟ್ಟಿನ ಸಂಗತಿಯೇನೂ ಅಲ್ಲ. ಶಾಸಕರಾದವರು, ಸಚಿವರಾದವರು ಊರಿನಲ್ಲಿ ಹೇಗೆ ಮೆರೆಯುತ್ತಾರೆ ಎಂದು ಗೊತ್ತಿರುವ ಕಾರ್ಯಕರ್ತರು ಆ ಗತ್ತಿನ ಒಂದಿಷ್ಟು ಪಾಲು ತಮಗೂ ಇರಲಿ ಎಂದು ಬಯಸುತ್ತಾರೆ. ಅದರಲ್ಲಿ ಬರೀ ಅಧಿಕಾರದ ಆಸೆ ಮಾತ್ರವಲ್ಲದೇ ದುಡ್ಡು ಕಾಸು ಮಾಡಬೇಕು ಎಂಬ ಆಸೆಯೂ ಇರಬಹುದು.ಆದರೆ, ಒಂದು ಸಾರಿ ಅಧಿಕಾರದ ಏಣಿ ಏರಿದವರು ತಕ್ಷಣ ಅದನ್ನು ಒದ್ದು ಬಿಡುತ್ತಾರೆ. ಹಾಸಿ ಉಂಡ ಬಾಳೆ ಎಲೆಯನ್ನು ಬಿಸಾಕುವ ಹಾಗೆ. ಅಥವಾ ಬಳಸಿ ಬಿಸಾಕುವ ಇನ್ನಾವುದೇ ವಸ್ತುವಿನ ಹಾಗೆ (ಶ್ಲೇಷೆ ಇದ್ದರೆ ಅದಕ್ಕೆ ಕ್ಷಮೆ ಇರಲಿ). ಮತ್ತೆ ಚುನಾವಣೆ ಬಂದಾಗ ಕಾರ್ಯಕರ್ತರನ್ನೆಲ್ಲ ಕರೆಸುತ್ತಾರೆ. ಅವರ ಮುಂದೆ ಏನೋ ಒಂದು ಸಬೂಬು ಹೇಳುತ್ತಾರೆ. ಒಂದಿಷ್ಟು ದುಡ್ಡು ಕೊಡುತ್ತಾರೆ. ಮತ್ತೆ ಕಾರ್ಯಕರ್ತರು ಗಾಣದ ಎತ್ತಿನ ಹಾಗೆ ದುಡಿಯುತ್ತಾರೆ.

 

ಇದು ಬರೀ ಬಿಜೆಪಿಯಲ್ಲಿ ಮಾತ್ರವಲ್ಲ ಎಲ್ಲ ಪಕ್ಷಗಳಲ್ಲೂ ಹೀಗೆಯೇ ನಡೆದುಕೊಂಡು ಬಂದಿದೆ. ಈಚಿನ ದಶಕಗಳಲ್ಲಿ ಎಸ್.ಎಂ.ಕೃಷ್ಣ ಸರ್ಕಾರ ಮಾತ್ರ  ಕಾರ್ಯಕರ್ತರನ್ನು ಚೆನ್ನಾಗಿ ನೋಡಿಕೊಂಡಿತ್ತು. ಖಾಲಿ ಬಿದ್ದಿದ್ದ ನಿಗಮ, ಮಂಡಳಿಗಳಿಗೆಲ್ಲ ಅವರು ನೇಮಕ ಮಾಡಿದ್ದರು.ಆನಂತರ ಬಂದ ಧರ್ಮಸಿಂಗ್ ಸರ್ಕಾರದಲ್ಲಿಯಾಗಲೀ, 20-20 ತಿಂಗಳ ಎಚ್.ಡಿ.ಕುಮಾರಸ್ವಾಮಿ ಸರ್ಕಾರದಲ್ಲಿಯಾಗಲೀ ಕಾರ್ಯಕರ್ತರನ್ನು ಯಾರೂ ಮಾತನಾಡಿಸಲೇ ಇಲ್ಲ.ವಿಚಿತ್ರ ಎಂದರೆ ಚುನಾವಣೆ ಬಂದಾಗಲೆಲ್ಲ ಜೆ.ಡಿ (ಎಸ್)ನ ಉನ್ನತ ನಾಯಕರು ತಮ್ಮ ಕಾರ್ಯಕರ್ತರ ಮೇಲೆ `ಕಾಂಗ್ರೆಸ್‌ನವರ ದೌರ್ಜನ್ಯವನ್ನು ಇನ್ನು ಸಹಿಸಲು ಸಾಧ್ಯವಿಲ್ಲ~ ಎಂದು ಗುಡುಗುತ್ತಾರೆ. ಕಾರ್ಯಕರ್ತರು ಅಷ್ಟಕ್ಕೇ ತೃಪ್ತರಾಗಿ ಮತ್ತೆ ಜೆ.ಡಿ (ಎಸ್) ನಾಯಕರ ಬೆನ್ನು ಹತ್ತಿ ದುಡಿಯುತ್ತಾರೆ!ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯಾದರೂ ತನ್ನ ಕಾರ್ಯಕರ್ತರ ಪಡೆಯನ್ನು ಸರಿಯಾಗಿ ನೋಡಿಕೊಳ್ಳುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ.

ಪಕ್ಷದ ಮೂಲ  ನಿವಾಸಿಗಳಿಗಿಂತ ವಲಸೆ ಬಂದವರಿಗೇ ಈ ಸರ್ಕಾರದಲ್ಲಿ ಹೆಚ್ಚಿನ ಮಾನ್ಯತೆ ಸಿಕ್ಕಿದೆ. 50 ಮಂದಿ ಕುಳಿತುಕೊಳ್ಳುವ ಬಸ್ಸಿನಲ್ಲಿ 100 ಮಂದಿ ನುಗ್ಗಿದಂತೆ ಆಗಿದೆ.ಮೊದಲು ಬಂದು ಸೀಟು ಹಿಡಿದವರು ನಂತರ ಬಂದವರಿಗೆ ಸೀಟು ಕೊಟ್ಟು ಎದ್ದು ನಿಂತಿದ್ದಾರೆ. ರಾಜ್ಯದಲ್ಲಿ ಸುಮಾರು 100 ನಿಗಮ ಮಂಡಳಿಗಳು ಇವೆ. ಅವುಗಳ ಅಧ್ಯಕ್ಷ ಹುದ್ದೆಗಳು ವಲಸೆ ಬಂದ ಬಹುತೇಕ ನಾಯಕರ ಪಾಲಾಗಿವೆ. ಇನ್ನು ಉಳಿದವು ಸದಾ ಅತೃಪ್ತರಾದ ಶಾಸಕರ ಮಡಿಲಿಗೆ ಬಿದ್ದಿವೆ.ಪಕ್ಷದ ಮೂಲ ಕಾರ್ಯಕರ್ತರಿಗೆ ಒಂದೋ ಎರಡೋ ನಿಗಮ-ಮಂಡಳಿಗಳು ಸಿಕ್ಕಿವೆ. ಪಕ್ಷದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಪ್ರತಿಸಾರಿ ಸಂಪುಟ ವಿಸ್ತರಣೆ ಆದಾಗಲೆಲ್ಲ ನಿಗಮ ಮಂಡಳಿಗಳಿಗೆ ಒಂದು ವಾರದಲ್ಲಿ ನೇಮಕ ಮಾಡಲಾಗುವುದು ಎಂದು ಹೇಳಿದ್ದಾರೆ. ಆದರೆ, ಅದನ್ನು ಜಾರಿ ಮಾಡಲು ಅವರಿಗೆ ಆಗಿಲ್ಲ.ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತಮಗೆ ಯಾರಿಗೆ ಬೇಕೋ ಅವರನ್ನು ನೇಮಕ ಮಾಡಿದರು. ಉಳಿದವುಗಳನ್ನು ಖಾಲಿ ಬಿಟ್ಟರು. ಖಾಲಿ ಜಾಗಗಳನ್ನು ತುಂಬಬೇಕು ಎಂದು ಪಕ್ಷದ ವೇದಿಕೆಯಲ್ಲಿ ಚರ್ಚೆಯಾದುದು ಯಾರಿಗೂ ನೆನಪು ಇಲ್ಲ.`ನಮಗೆ ಅಧಿಕಾರ ಸಿಕ್ಕಿದೆ. ಕಾರ್ಯಕರ್ತರಿಗೂ ಒಂದಿಷ್ಟು ಅಧಿಕಾರ ಕೊಡೋಣ~ ಎಂಬ ಔದಾರ್ಯವನ್ನು ಶಾಸಕರಾಗಲಿ, ಸಚಿವರಾಗಲೀ ತೋರಿಸಿಲ್ಲ. ಕಾರ್ಯಕರ್ತರು ತಮಗೇ ಎದುರಾಳಿಯಾದಾರೂ ಎಂಬ ಭಯವೇ ಅವರಲ್ಲಿ ಇದ್ದಂತೆ ಇದೆ.ಈ ಸರ್ಕಾರಕ್ಕೆ ಹೇಗೂ ಮೂರು ವರ್ಷ ತುಂಬಿದೆ. ಇದುವರೆಗೆ ಅಧಿಕಾರ ನಡೆಸಿದ ಎಲ್ಲ ನಿಗಮ ಮಂಡಳಿಗಳನ್ನು ಪುನರ್ ರಚಿಸಲು ಸರ್ಕಾರಕ್ಕೆ ಅವಕಾಶವಿತ್ತು. ಇನ್ನು ಎರಡು ವರ್ಷಗಳ ಕಾಲ ನೂರಾರು ಕಾರ್ಯಕರ್ತರು ಅಲ್ಲಿ ಕೆಲಸ ಮಾಡಬಹುದಿತ್ತು. ಅವರಿಗೂ ಒಂದು ಅವಕಾಶ ಸಿಕ್ಕಂತೆ ಆಗುತ್ತಿತ್ತು.ಈಗ ಪರಿಸ್ಥಿತಿ  ಹೇಗಿದೆ ಎಂದರೆ `ನೀವು ದುಡೀತಾ  ಇರಿ;  ನಾವು ಅಧಿಕಾರದಲ್ಲಿ ಮೇರೀತಾ ಇರುತ್ತೇವೆ~ ಎನ್ನುವಂತೆ ಇದೆ. ಸಂಘದ ನಾಯಕರ ಬಳಿ ಹೋದರೆ ಅವರು ಕೂಡ `ಕರ್ಮಣ್ಯೇವಾಧಿಕಾರಸ್ತೇ...~ ಎಂದು ಗೀತೆಯ ಪ್ರವಚನವನ್ನೇ ಮಾಡುತ್ತಾರೆ. ಅವರಿಗೂ ಕಾರ್ಯಕರ್ತರ ಬಗ್ಗೆ ಅಂಥ ಪ್ರೀತಿಯೇನೂ ಇಲ್ಲ.ಕರ್ನಾಟಕದಲ್ಲಿ ಎಂಟು ಮಹಾನಗರಪಾಲಿಕೆಗಳು ಇವೆ. ಅವುಗಳ ಸದಸ್ಯಬಲದ ಆಧಾರದ ಮೇಲೆ ನಿರ್ದಿಷ್ಟ ಸಂಖ್ಯೆಯ ಸದಸ್ಯರನ್ನು ಆಯಾ ಪಾಲಿಕೆಗೆ ನಾಮಕರಣ ಮಾಡಲು ಅವಕಾಶವಿದೆ. ಬಹುತೇಕ ಪಾಲಿಕೆಗಳಿಗೆ ಕಾರ್ಯಕರ್ತರನ್ನು ನಾಮಕರಣ ಮಾಡುವ ಕೆಲಸ ಆಗಿಲ್ಲ.ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವೇ ಆಗುತ್ತ ಬಂತು. ಇಲ್ಲಿ 20 ಜನ ಸದಸ್ಯರನ್ನು ನಾಮಕರಣ ಮಾಡಬಹುದಾಗಿದೆ.

ಒಬ್ಬರ ನಾಮಕರಣವೂ ಆಗಿಲ್ಲ. ನಾಮಕರಣ ಸದಸ್ಯರಿಗೆ ಮತದಾನದ ಹಕ್ಕೇನೂ ಇಲ್ಲ.

ಆದರೆ, ತಮ್ಮ ತಮ್ಮ ವಾರ್ಡುಗಳಲ್ಲಿ ಬೆಳೆಯಲು ಅವರಿಗೆ ಒಂದಿಷ್ಟು ಅವಕಾಶ ಸಿಗುತ್ತದೆ. ಆದರೆ, ಬೆಂಗಳೂರು ನಗರ ಪ್ರತಿನಿಧಿಸುವ 17 ಜನ ಬಿಜೆಪಿ ಶಾಸಕರೆಲ್ಲ ಒಟ್ಟಾಗಿ ಯಾರನ್ನೂ ನಾಮಕರಣ ಮಾಡಬಾರದು ಎಂದು ತೀರ್ಮಾನ ಮಾಡಿದಂತೆ ಕಾಣುತ್ತದೆ!ತಮ್ಮ ತಮ್ಮ ಬೆಂಬಲಿಗರು ಬಂದು ಕೇಳಿದರೆ ಅಶೋಕ ಅವರು ಸೋಮಣ್ಣ ಹೆಸರು ಹೇಳುತ್ತಾರೆ. ಸೋಮಣ್ಣ ಅನಂತಕುಮಾರ್ ಕಡೆಗೆ ಕೈ ತೋರಿಸುತ್ತಾರೆ. ಒಟ್ಟಿನಲ್ಲಿ ಕಾರ್ಯಕರ್ತರು ಇಂದು ನಾಮಕರಣ ಆದೀತು, ನಾಳೆ ಆದೀತು ಎಂದು ದಿನ ಎಣಿಸುತ್ತ ಕಾಲ ಕಳೆಯುತ್ತಿದ್ದಾರೆ.ಅಧಿಕಾರದಲ್ಲಿ ಇದ್ದವರು ಹೀಗೆ ಕಾರ್ಯಕರ್ತರನ್ನು ಅಲಕ್ಷಿಸಿದ ಪರಿಣಾಮ ಏನಾಗಿದೆ ಎಂದರೆ ಕೆಲವು ದಿನಗಳ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಿದ ಸಂದರ್ಭದಲ್ಲಿ ಒಬ್ಬನೇ ಒಬ್ಬ ಕಾರ್ಯಕರ್ತ ಅವರ ಪರವಾಗಿ ದನಿ ಎತ್ತಲಿಲ್ಲ, ಪ್ರತಿಭಟಿಸಲಿಲ್ಲ; ಕಣ್ಣೀರು ಹಾಕಲಿಲ್ಲ.ಸರ್ಕಾರ ತಮ್ಮನ್ನು ಒಳಗೊಂಡಿಲ್ಲ ಎಂದು ಕಾರ್ಯಕರ್ತರು ಹೀಗಲ್ಲದೆ ಹೇಗೆ  ಹೇಳಲು ಸಾಧ್ಯ? ಕಾರ್ಯಕರ್ತರ ಜತೆಗೆ ಬಿಜೆಪಿಗೆ ಮಾತ್ರ ನೇರ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಿತ್ತು. ಏಕೆಂದರೆ ಅದು ಕೇಡರ್ ಪಕ್ಷ. ಹೀಗೆಯೇ ಕೇಡರ್ ಬುನಾದಿ ಹೊಂದಿರುವ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಪಶ್ಚಿಮ ಬಂಗಾಳದಲ್ಲಿ ಇದನ್ನು ಮಾಡಿ ತೋರಿಸಿತ್ತು. ಆ ಕಾರಣವಾಗಿಯೇ 35 ವರ್ಷಗಳ ಕಾಲ ನಿರಂತರವಾಗಿ ಅಧಿಕಾರದಲ್ಲಿ ಇರಲು ಅದಕ್ಕೆ ಸಾಧ್ಯವಾಯಿತು.

 

ಬಿಜೆಪಿಗೆ ಇದು ಕಷ್ಟವೇನೂ ಇರಲಿಲ್ಲ. ಆದರೆ, ಈಗ ಆಡಳಿತದಲ್ಲಿ ಇರುವ ಬಹುತೇಕ ಬಿಜೆಪಿ ಸಚಿವರಿಗೂ ಕಾಂಗ್ರೆಸ್ ಅಥವಾ ಜೆ.ಡಿ (ಎಸ್) ಸಚಿವರಿಗೂ ಅಂಥ ವ್ಯತ್ಯಾಸವೇನೂ ಇಲ್ಲ.ಒಂದು  ಪಕ್ಷವನ್ನು ಅಧಿಕಾರದ ಗದ್ದುಗೆಗೆ ತೆಗೆದುಕೊಂಡು ಹೋಗುವ ಕಾರ್ಯಕರ್ತರು ಒಂದು ಸರ್ಕಾರವನ್ನು ಜನರ ಬಳಿಗೂ ತೆಗೆದುಕೊಂಡು ಹೋಗುತ್ತಾರೆ. ಇದು ಸಾಧ್ಯವಾಗದೇ ಇದ್ದಾಗ ಅಧಿಕಾರದಲ್ಲಿ ಇದ್ದವರು ತಮ್ಮ ಸರ್ಕಾರ `ಅದ್ಭುತ ಪ್ರಗತಿ~ ಸಾಧಿಸಿದಾಗಲೂ ಅದು ಜನರಿಗೆ ತಲುಪಲಿಲ್ಲ ಎಂದು ದೂರುತ್ತಾರೆ. ಅದಕ್ಕೆ ಕಾರಣವನ್ನು ತಿಳಿದೋ ತಿಳಿಯದೆಯೋ ಮರೆ ಮಾಚುತ್ತಾರೆ.ರಾಜ್ಯದ ಆಡಳಿತ ಸೌಧದಲ್ಲಿಯೇ ತಮಗೆ ಚಪ್ಪಲಿಯಿಂದ ಹೊಡೆದ ಬಿಜೆಪಿ ಕಾರ್ಯಕರ್ತನನ್ನು ತಾವು ಕ್ಷಮಿಸುವುದಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ. ತಮಗೆ ಆತ ಏಕೆ ಹೊಡೆದ ಎಂಬುದು ಗೊತ್ತಾಗಬೇಕು ಎಂದೂ ಅವರು ತಿಳಿಯಬಯಸಿದ್ದಾರೆ.ಯಾರಿಗೇ ಆಗಲಿ ಚಪ್ಪಲಿಯಿಂದ ಹೊಡೆದರೆ  ಅವಮಾನವಾಗುತ್ತದೆ. ಸೋಮಣ್ಣ ಅವರಿಗೂ ಹಾಗೆ ಆಗಿದ್ದರೆ ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ. ಹೀಗಾಗಿ ಆ ಕಾರ್ಯಕರ್ತನನ್ನು ಕ್ಷಮಿಸುವುದು ಬಿಡುವುದು ಅವರಿಗೆ ಬಿಟ್ಟುದು.

 

ತಮ್ಮ ಮೇಲೆ ಷೂ ಎಸೆದ ಪತ್ರಕರ್ತನೊಬ್ಬನನ್ನು ಗೃಹ ಸಚಿವ ಪಿ.ಚಿದಂಬರಂ ಕ್ಷಮಿಸಿದ್ದರು. ಎಲ್ಲರೂ ಅದೇ ಮಾದರಿ ಅನುಸರಿಸಬೇಕು ಎಂದು ಅಪೇಕ್ಷಿಸುವುದೂ ಸರಿಯಲ್ಲ.

 

ಆದರೆ, ಬಿಜೆಪಿ ಮುಖಂಡರಿಗೆ ಕನಿಷ್ಠ ಸೌಜನ್ಯವಿದ್ದರೆ ಅವರು ಇದುವರೆಗೆ ತಾವು ಕಡೆಗಣಿಸುತ್ತ ಬಂದಿರುವ ಎಲ್ಲ ಕಾರ್ಯಕರ್ತರ ಕ್ಷಮೆ ಕೇಳಬೇಕು. ಆದರೆ, ಅವರಲ್ಲಿ ಆ ಸೌಜನ್ಯ ಮತ್ತು ವಿನಯ ಇದ್ದಂತೆ ಕಾಣುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.