ಭಾನುವಾರ, ಮೇ 16, 2021
22 °C

ಅಭಿಮನ್ಯು ಜಿಗಿತ, ಹನುಮಂತನ ನೆಗೆತ

ಬನ್ನಂಜೆ ಸಂಜೀವ ಸುವರ್ಣ Updated:

ಅಕ್ಷರ ಗಾತ್ರ : | |

ಅಭಿಮನ್ಯು ಜಿಗಿತ, ಹನುಮಂತನ ನೆಗೆತ

`ಹೋ... ಬನ್ನಿ ಸಂಜೀವಣ್ಣ' ಎಂದರು ಹಾರಾಡಿ ನಾರಾಯಣ ಗಾಣಿಗರು. ಬ್ರಹ್ಮಾವರದಿಂದ ಕೊಂಚ ಒಳಗೆ ಹಳ್ಳಿಯೊಂದರ ಪುಟ್ಟಮನೆಯ ಚಾವಡಿಯಲ್ಲಿ ನಿಂತುಕೊಂಡು ಆ ಹಿರಿಯ ಜೀವ ನನ್ನನ್ನು ಕರೆದಾಗ ನಾನು ಮುಜುಗರ ಪಟ್ಟುಕೊಂಡೆ. ಮೊದಲ ಬಾರಿಗೆ ಹಿರಿಯರೊಬ್ಬರು, `ಅಣ್ಣ' ಎಂಬ ವಿಶೇಷಣದೊಂದಿಗೆ ಸಂಬೋಧಿಸಿದ ಹಾಗೆ ಅನ್ನಿಸಿ, ಸಾಮಾಜಿಕ ಆವರಣದಲ್ಲಿ ಅದನ್ನು ನಾನು ಅಪರೂಪಕ್ಕೆ ಕೇಳುತ್ತಿದ್ದೇನೊ ಎಂಬಂತೆ ಭಾಸವಾಗಿ ನಿಂತಲ್ಲಿಯೇ ಕುಗ್ಗಿಹೋದೆ. ಹೊಸ್ತಿಲು ದಾಟಿ ಒಳಗೆ ಅಡಿಯಿಟ್ಟು ಅವರ ಕಾಲಿಗೆ ನಮಸ್ಕರಿಸಿದೆ. ಮಂದರ್ತಿ, ಮಾರಣಕಟ್ಟೆ, ಪೆರ್ಡೂರು ಮುಂತಾದ ಮೇಳಗಳಲ್ಲಿ ಸ್ತ್ರೀವೇಷಧಾರಿಯಾಗಿ ಮೆರೆದ ಹಿರಿಯರು ಅವರು.`ಏನು ಬಂದಿರಿ... ಏನು ವಿಶೇಷ' ಎಂದವರು ವಾತ್ಸಲ್ಯದಿಂದ ಕೇಳುತ್ತಿದ್ದಂತೆ, ಬಾಲ್ಯದ ದಿನಗಳಲ್ಲಿ ಮಾರಣಕಟ್ಟೆ ಮೇಳದ ಬಯಲಾಟದಲ್ಲೋ ಪೆರ್ಡೂರು ಮೇಳದ ಬಯಲಾಟದಲ್ಲೋ ಅವರ ವೇಷ ನೋಡಿದ್ದು ನೆನಪಾಗಿ, ಅದರಲ್ಲಿ ಸೈಂಧವವಧೆಯ ಸುಭದ್ರೆಯಾಗಿ ಅಭಿಮನ್ಯು ಸತ್ತಾಗ ಸಭೆಯ ಅಂತರಾಳ ಕಲಕುವಂತೆ ಅಭಿನಯಿಸಿದ್ದು ಮನಸ್ಸಿಗೆ ಬಂದು, ಅಂದಿಗೂ ಇಂದಿಗೂ ಅವರ ಮುಖವನ್ನು ತೂಗಿ ನೋಡಿದೆ. ಅದೇ ಲಾಲಿತ್ಯ ಈಗಲೂ ಇರುವಂತೆ ತೋರಿತು.ನಾನು ಹೇಳಿದೆ, `ನೀವು ಗಜಾನನನಿಗೆ ಕೋರೆತಾಳದ ಹೆಜ್ಜೆ ಕಲಿಸಿದ್ದೀರಂತೆ... ಅದು ನನಗೆ ಹೊಸತು. ಕಲಿಯೋಣ ಅಂತ ಬಂದೆ'.

`ಹುಡುಗ ಹೇಳಿದ... ಆದರೆ, ಏನು ಕಲಿಸುವುದು ನಿಮಗೆ, ಯಕ್ಷಗಾನ ಕೇಂದ್ರದ ಗುರುವಲ್ಲವೆ, ನೀವು...' ಅವರ ಮಾತಿನಲ್ಲಿ ಯಾವುದೇ ವ್ಯಂಗ್ಯವಿರಲಿಲ್ಲ.`ಹಾಗೆ ಹೇಳಬೇಡಿ... ಗುರು ಅಲ್ಲಿ ಮಾತ್ರ. ಇಲ್ಲಿ ನಿಮ್ಮ ಶಿಷ್ಯ...'

`ಬಹುಶಃ ಇದು ನನ್ನ ಮೊದಲ ಅನುಭವ. ಕಲಿಯುವ ಆಸಕ್ತಿಯಿಂದ ಯಾರೂ ಕೇಳಿಕೊಂಡು ಬಂದದ್ದಿಲ್ಲ ನೋಡು... ನನಗೆ ತಾಳ ಗೀಳ ಎಲ್ಲ ಏನೂ ಬರುವುದಿಲ್ಲ. ನೀನು ಪದ್ಯ ಹೇಳಿದರೆ ನಾನು ಆ ಲಯದಲ್ಲಿ ಕುಣಿದು ತೋರಿಸಬಲ್ಲೆ ಅಷ್ಟೆ'.ಅವರು ಆತ್ಮೀಯ ಧ್ವನಿಯಲ್ಲಿ ಮಾತನಾಡಿದ್ದು ಕೇಳಿ ನನಗೆ ಸಮಾಧಾನವೆನಿಸಿತ್ತು. ಆಮೇಲೆ, ವಾರಕ್ಕೆ ಒಂದೆರಡು ಬಾರಿ, ಕೆಲವೊಮ್ಮೆ ಪ್ರತಿದಿನವೆನ್ನುವಂತೆ ಸಂಜೆ ಗಜಾನನನ ಜೊತೆಗೆ ಹೋಗತೊಡಗಿದೆ. ರಾತ್ರಿ ಅವನ ಮನೆಯಲ್ಲಿ ಮಲಗಿ ಬೇಗ ಎದ್ದು ಹಾರಾಡಿ ನಾರಾಯಣ ಗಾಣಿಗರಿಂದ ಪಾಠ ಹೇಳಿಸಿಕೊಂಡು ಬಸ್ಸು ಹಿಡಿದು ಬಿಸಿಲು ಬೀಳುತ್ತಿರುವಂತೆಯೇ ಯಕ್ಷಗಾನ ಕೇಂದ್ರ ತಲುಪುತ್ತಿದ್ದೆ.ಎಲ್ಲವನ್ನೂ ತಿಳಿಯಬೇಕು ಎಂಬ ತೀವ್ರ ತುಡಿತವಿದ್ದ ದಿನಗಳವು. ಅವಿರತವಾದ ಅಧ್ಯಯನದಿಂದ ಮಾತ್ರ ಈ ಕ್ಷೇತ್ರದಲ್ಲಿ ನನ್ನನ್ನು ನಾನು ಸ್ಥಾಪಿಸಿಕೊಳ್ಳಬಹುದು ಎಂಬ ಎಚ್ಚರವೇ ನನ್ನನ್ನು ಹಾರಾಡಿ ನಾರಾಯಣ ಗಾಣಿಗರ ಮನೆಯವರೆಗೆ ಸೆಳೆದೊಯ್ದಿತ್ತು. ಆವರೆಗೆ ನನ್ನಲ್ಲಿದ್ದ ಸ್ತ್ರೀವೇಷದ ಹೆಜ್ಜೆಗಾರಿಕೆಯನ್ನು ಬೆರಗುಪಡುವಂತೆ ಮರುರೂಪಿಸಿದರು ಅವರು. ಮುಖ್ಯ ಸ್ತ್ರೀವೇಷಗಳು ತೆರೆ ಎತ್ತಿ, ತಲೆ ಬಾಗಿಸಿ ರಂಗಪ್ರವೇಶ ಮಾಡುವಾಗ ಧಿತ್ತಾ ಧೇಂ ಧಿತ್ತಾ ಧೇಂ ಸರಳಶೈಲಿಯಲ್ಲಿ ಕುಣಿಯುವುದನ್ನು ನಾನು ಕಂಡಿದ್ದೆ, ಅದನ್ನೇ ಕಲಿತಿದ್ದೆ, ಅದನ್ನೇ ಕಲಿಸುತ್ತಲೂ ಇದ್ದೆ.ಆದರೆ, ಹಾರಾಡಿ ನಾರಾಯಣ ಗಾಣಿಗರು ತಾ ಧೀಂ ತರಿಕಿಟತಕ ಧೀಂ... ಎನ್ನುವ ಸಂಕೀರ್ಣ ನಡೆಯನ್ನು ಕಲಿಸಿದರು. ಅವರು ಇದನ್ನು ವಿಷಮ ಗತಿಯಲ್ಲಿ ಅಂದಗೆಡದಂತೆ ಸೇರಿಸಲು ಹೇಳಿಕೊಡುತ್ತಿದ್ದ ರೀತಿಯನ್ನು ನಾನು ಪದಗತ ಮಾಡಿಕೊಳ್ಳಬೇಕಾದರೆ ಒಂದು ವಾರವೇ ಹಿಡಿಯಿತು. ಸ್ತ್ರೀವೇಷಕ್ಕೊಪ್ಪುವ ವೈಯಾರದ ಹೆಜ್ಜೆಗಳನ್ನು ಖಜಾನೆಯಲ್ಲಡಗಿದ ನಿಧಿಗಳಂತೆ ನನ್ನ ಮುಂದೆ ಹೊಳೆಯಿಸಿದರು.ಅವು ಅಪ್ಪಟ ಯಕ್ಷಗಾನದ ಸ್ತ್ರೀವೇಷದ ಹೆಜ್ಜೆಗಳು. ಅವರು ಹೇಳಿದಂತೆಯೇ ಹೆಜ್ಜೆಯಿಡಲು ಕಲಿಯಬೇಕಾದರೆ ಒಂದೊಂದು ಹೆಜ್ಜೆಗೂ ಮೂರು ತಿಂಗಳು ಬೇಕಾದೀತು. ಎಲ್ಲ ವೈವಿಧ್ಯಗಳಲ್ಲಿ ಪುರುಷ ವೇಷಕ್ಕೆ ಸಮಾನಾಂತರವಾಗಿ ಸ್ತ್ರೀವೇಷದ ಹೆಜ್ಜೆಗಳಿವೆ! ಈಗ ನಾನು ಕುಣಿದು ತೋರಿಸಿದರೂ ನನ್ನ ಮುಂದೆ ಹತ್ತಾರು ವರ್ಷಗಳ ಹಿಂದಿನ ದೇವದಾಸಿಯರ ಹೆಜ್ಜೆಗಳೇ ಕಾಣಿಸತೊಡಗುತ್ತವೆ. ಅವರಲ್ಲಿ ಕಲಿತ ಎರಡು ವಿಷಯಗಳು: ಒಂದು, ಸಲಾಂ ಹೆಜ್ಜೆಯ ಅನನ್ಯತೆ. ಇನ್ನೊಂದು, ಸುತ್ತುಬಲಿಯ ಹೆಜ್ಜೆಗಳ ವಿಶಿಷ್ಟತೆ.ಸಲಾಂ ಹೆಜ್ಜೆಯನ್ನು ಹಾಕುತ್ತಿದ್ದಂತೆ ಅದು ಯಕ್ಷಗಾನ ಮತ್ತು ದೇವದಾಸಿ ಪರಂಪರೆಯ ಪ್ರಭಾವದ ಬಗೆಗಿನ ಸಾಧ್ಯತೆಯೊಂದನ್ನು ಕಾಣಿಸಿತಲ್ಲದೆ, ನವಾಬರ ಪರಂಪರೆ ಪ್ರಭಾವವೂ ಇರುವ ಅನುಮಾನವನ್ನು  ಹುಟ್ಟಿಸಿತು. ಬಬ್ರುವಾಹನ ಕಾಳಗದಲ್ಲಿ ಸಲಾಂ, ಗುಲಾಮ ಮುಂತಾದ ಪದಪ್ರಯೋಗಗಳಿವೆ. ನಮ್ಮಲ್ಲಿ ಹಿಂದುಸ್ತಾನಿ ಸಂಗೀತ, ಕಥಕ್ ನೃತ್ಯಪ್ರಕಾರದ ಬೆಳವಣಿಗೆಯು ಉರ್ದು ಸಂಸ್ಕೃತಿ, ಸೂಫಿ ಪಂಥದ ಪ್ರಭಾವಕ್ಕೊಳಗಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.ಸುತ್ತುಬಲಿ ಎಂಬುದು ದೇವಸ್ಥಾನದಲ್ಲಿ ದೇವರ ಉತ್ಸವ ಮೂರ್ತಿ ಸಾಗುವಾಗ ದೇವದಾಸಿಯರು ಕುಣಿಯುತ್ತಿದ್ದ ನಾಟ್ಯ ಶೈಲಿ. ಯಕ್ಷಗಾನದಲ್ಲಿ ರಾಣಿಯರು ಜಲಕೇಳಿಗೆ ಹೊರಡುವ ಸಂದರ್ಭದಲ್ಲಿ ಅದನ್ನು ಹೇಗೆ ಬಳಸಬಹುದು ಮತ್ತು ಅದು ಮಾಮೂಲಿ ಪ್ರಯಾಣ ಕುಣಿತಕ್ಕಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ಅಷ್ಟೂ ಸೊಗಸಾಗಿ ಹೇಳಿಕೊಟ್ಟರು ನಾರಾಯಣ ಗಾಣಿಗರು!ಆ ಕುಣಿತದಲ್ಲಿದ್ದ -ಹಿಂಬಾಗು-ಮುಂಬಾಗು- ಬಳಕುಗಳಲ್ಲಿ ಮರೆಯಲ್ಲಿರುವ ವಕ್ಷಸ್ಥಳ, ಜಘನಪ್ರದೇಶಗಳ ಸೊಬಗನ್ನು ನೃತ್ಯಸಂಜ್ಞೆಗಳಲ್ಲಿ ಬಿಂಬಿಸುವ, ಕಾಣಿಸುವ ರೀತಿಯನ್ನು ಬಣ್ಣಿಸಲಾರಂಭಿಸಿದರೆ ಅದು ಸೌಂದರ್ಯ ಲಹರಿಯೇ ಆದೀತು. ಇವತ್ತಿಗೂ ನಾನು ಅದನ್ನು ಕುಣಿಯಬಲ್ಲೆ, ಅಂಥ ಸಂದರ್ಭದಲ್ಲೆಲ್ಲ ಹಾರಾಡಿ ನಾರಾಯಣ ಗಾಣಿಗರಿಂದ ಇದನ್ನು ಕಲಿತೆ ಎಂದು ಹೇಳಲು ಮರೆಯುವುದಿಲ್ಲ.ಹೇಳಿಕೇಳಿ ಸಾಂಪ್ರದಾಯಿಕ ಶೈಲಿಯ ಕೊಂಕಣಿಕಚ್ಚೆ ಹಾಕಿ ರಂಗದಲ್ಲಿ ಮೆರೆದ ಕೊಕ್ಕರ್ಣೆ ನರಸಿಂಹರವರ ಶಿಷ್ಯರಲ್ಲವೆ ಅವರು! ಹೆಜ್ಜೆಗಳಷ್ಟೇ ಅಲ್ಲ, ಮೇಳದಲ್ಲಿ ಸ್ತ್ರೀವೇಷಧಾರಿಗಳು ಹೇಗೆ ಸಭ್ಯತೆಯ ಮೇಲ್ವಸ್ತ್ರದೊಳಗೆ ವ್ಯವಹರಿಸುತ್ತಿದ್ದರು ಎಂಬ ಅನುಭವಚಿತ್ರಗಳನ್ನು ಕೂಡ ನನ್ನ ಮುಂದೆ ತೆರೆದಿಟ್ಟರು. ಬಣ್ಣದಲ್ಲದ್ದಿದ ಬೆರಳನ್ನು ಮುಖಕ್ಕಿಟ್ಟ ಕೂಡಲೇ ಅಂದಿನ ಸ್ತ್ರೀವೇಷಧಾರಿಗಳಲ್ಲಿ ಸ್ತ್ರೀಭಾವ ಆವಿರ್ಭಾವವಾಗುತ್ತಿತ್ತು. ಆಮೇಲೆ ಸಂಕೋಚದ ಕವಚದೊಳಗೇ ಇದ್ದು ಬಿಡುತ್ತಿದ್ದರು.ಲಂಗ, ರವಕೆ, ಎದೆಕಟ್ಟು ತೊಡುವುದೆಲ್ಲ ಗಣಪತಿ ಪೆಟ್ಟಿಗೆಯ ಮರೆಯಲ್ಲಿಯೇ. ಎದೆಕಟ್ಟು ಕಟ್ಟಿ, ರವಕೆ ತೊಟ್ಟ ಮೇಲೆ ಸೆರಗು ಹೊದೆಯದೆ ಹೊರಗೆ ಕಾಣಿಸಿಕೊಳ್ಳುವುದೇ ಇಲ್ಲ. ಆಮೇಲೆ ಪುರುಷ ಸಹಜರಾಗುವುದು ಬಣ್ಣ ತೆಗೆದ ಮೇಲೆಯೇ. ಪುರುಷವೇಷಧಾರಿಗಳು ಗೆಜ್ಜೆಕಟ್ಟಿದ ಮೇಲೆ ದೇಹಬಾಧೆ ತೀರಿಸಲು ಹೋಗುವ ಹಾಗಿಲ್ಲ. ಹೋಗುವುದಿದ್ದರೂ ಗೆಜ್ಜೆಯನ್ನು ಬಿಚ್ಚಿಟ್ಟು ಹೋಗಬೇಕು.ಅಂಥಾದ್ದರಲ್ಲಿ ಸ್ತ್ರೀವೇಷದವರು ಚೌಕಿಯಿಂದ ಹೊರಗೆ ಹೋಗುವುದೇ ಇಲ್ಲವಾಗಿದ್ದ ಕಾಲವದು. `ಯಾಕೆ ಅಷ್ಟು ಸಂಕೋಚ?' ಎಂದೊಮ್ಮೆ ಕೇಳಿದೆ. ಹಾರಾಡಿ ನಾರಾಯಣ ಗಾಣಿಗರು ಮಾರ್ಮಿಕವಾಗಿ ಹೇಳಿದರು, `ನಮ್ಮ ಗುರುಗಳು ಕೂಡ ಹಾಗೆಯೇ ಇರುತ್ತಿದ್ದರು. ಎದೆಕಟ್ಟು ಕಟ್ಟಿ ಮೇಲ್ವಸ್ತ್ರವಿಲ್ಲದೆ ಕಾಣಿಸಿದರೆ ಅದು ಸ್ತ್ರೀಸಮುದಾಯವನ್ನು ಅವಮಾನಿಸಿದಂತೆ ಎಂದು ಗುರುಗಳು ಹೇಳುತ್ತಿದ್ದರು'.ಇಂದು ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ ಸಾಕಷ್ಟು ಪರಿವರ್ತನೆಗೊಂಡಿದೆ. ಸ್ತ್ರೀವೇಷಧಾರಿಗಳೂ ಬದಲಾಗಿದ್ದಾರೆ. ಕಾಲ ಬದಲಾಗಿದೆ. ಕಲೆಯೂ ಬದಲಾಗಲೇಬೇಕಲ್ಲವೆ?

......ಕಾಲವನ್ನೂ ಕಲೆಯನ್ನೂ ಜೊತೆಗಿಟ್ಟು ನೋಡಿದವರು ಅವರು ಮಾತ್ರ!

ಅವರು ಎಂದರೆ, ಶಿವರಾಮ ಕಾರಂತರು!ಎಂಥ ಅಭಿನಯವನ್ನು ಅವರು ರಂಗದ ಮೇಲೆ ತರಲು ಪ್ರಯತ್ನಿಸಿದರೆಂದರೆ ಅದನ್ನು ಕಲಾವಿದರಿಗೆ ಅನುಸರಿಸಲು ಕಷ್ಟವಾಗುತ್ತಿತ್ತು. ಕಾರಣ ಕೇಳಿದರೆ ಕಲಾವಿದರಲ್ಲಿ ಸಿದ್ಧ ಉತ್ತರವಿತ್ತು, `ಯಕ್ಷಗಾನದ ವೇಷಭೂಷಣ ತುಂಬ ಭಾರ. ಹತ್ತಾರು ಗಂಟುಗಳು ಬೇರೆ. ಬಾಗುಬಳಕನ್ನು ಕಾಣಿಸುವುದು ಅಸಾಧ್ಯ'.ಕಾರಂತರಲ್ಲಿ ಅದಕ್ಕೆ ಉತ್ತರವಿಲ್ಲದಿರುತ್ತದೆಯೆ? ಅವರದು ತತ್‌ಕ್ಷಣದ ನಿರ್ಧಾರ. `ಸರಿ, ವೇಷಭೂಷಣವನ್ನು ಪರಿಷ್ಕರಿಸಿಬಿಡೋಣ' ಎಂದು ಬಿಟ್ಟರು. ಅವರು ಹೇಳಿದರೆ ಮುಗಿಯಿತು, ಮಾತು ಕಾರ್ಯರೂಪಕ್ಕೆ ಇಳಿದಂತೆಯೇ. ಕಿರೀಟಗಳ ತಯಾರಿಕೆಗೆ ಮರದ ಬದಲು ಅಲ್ಯುಮಿನಿಯಂನ್ನು, ಕಾಗದದ ರಟ್ಟನ್ನು ಬಳಸಲಾಯಿತು. ಮಣಿಸಾಮಾನು, ಬಟ್ಟೆಗೊಂಡೆಗಳ ಭಾರವಿಲ್ಲದ ಸರಳ ಭೂಷಣಗಳು.ಗೆಜ್ಜೆಯ ಇನಿದನಿಯೂ ಹಿಮ್ಮೇಳದ ಶ್ರುತಿಯೊಂದಿಗೆ ಕೂಡಿಬರಬೇಕೆಂದು ನಿರ್ಧರಿಸಿ ಗೆಜ್ಜೆಗಳನ್ನು ಕೂಡ ಲೋಹದ ಕುಶಲಕರ್ಮಿಗಳಲ್ಲಿ ತಯಾರಿಸಲಾಯಿತು. ಇವೆಲ್ಲ ಒಮ್ಮೆಲೇ ಆದದ್ದು ಎಂದರ್ಥವಲ್ಲ... ಹಂತ ಹಂತದಲ್ಲಾದ ಬದಲಾವಣೆಗಳು. ಸ್ಪಷ್ಟವಾಗಿ ಹೇಳಬೇಕೆಂದರೆ, ನಾನು ಕಾರಂತರ ಗುರುತ್ವದ ಆವರಣದೊಳಕ್ಕೆ ಬರುವುದಕ್ಕಿಂತ ಮೊದಲೇ ಎಷ್ಟೋ ಪ್ರಾಯೋಗಿಕ ಸಂಗತಿಗಳನ್ನು ಅಳವಡಿಸಿಯಾಗಿತ್ತು. ಕೂಡಿಯಾಟ್ಟಂನ್ನು ಸಮಕಾಲೀನವಾಗಿ ಮರುರೂಪಿಸಿದ ವಳ್ಳತ್ತೋಳ್ ನಾರಾಯಣನ್ ಅವರನ್ನು ಇಲ್ಲಿ ನೆನಪಿಸಿಕೊಳ್ಳಬಹುದು.ನನ್ನನ್ನು ಎತ್ತಿ ಪೊರೆದ ಶಿವರಾಮ ಕಾರಂತರ ಬಗ್ಗೆ ಅವಿಚ್ಛಿನ್ನವಾದ ಗೌರವ; ಆಗಲೂ ಈಗಲೂ. ಆದರೂ ಅವರು ಒಳ್ಳೆಯ ಲಹರಿಯಲ್ಲಿದ್ದಾರೆಂದು ತಿಳಿದಾಗಲೆಲ್ಲ ಆತ್ಮೀಯವಾಗಿ ಚರ್ಚೆ ಮಾಡುತ್ತ್ದ್ದಿದೆ. ಸಾಂಪ್ರದಾಯಿಕ ಸೊಗಸಿನ ಬಗ್ಗೆ ಪ್ರತಿಪಾದನೆ ಮಾಡುತ್ತಿದ್ದೆ. ಒಮ್ಮೆ ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿಯೂ ಬಾಗುಬಳುಕಿನ ಅಭಿನಯಸೂಕ್ಷ್ಮಗಳನ್ನು ಹೇಗೆ ಕಾಣಿಸಬಹುದೆಂದು ಕುಣಿದು ತೋರಿಸಿದೆ.ಅವರಿಗದು ಇಷ್ಟವಾಗಿರಬೇಕು. ಶಿವರಾಮ ಕಾರಂತರ ಕಾರ್ಯಕ್ಷೇತ್ರದ ವ್ಯಾಪ್ತಿ, ಚಿಂತನೆಯ ಆಳ ನನ್ನಂಥವನಿಗೆ ನಿಲುಕುವಂಥಾದ್ದಲ್ಲ. ಮನೆಯ ಅಜ್ಜನೊಂದಿಗೆ ಮಾತನಾಡುವಂತೆ ನಾನು ಕೆಲವು ವಿಚಾರಗಳನ್ನು ಅವರೊಂದಿಗೆ ಹೇಳುತ್ತಿದ್ದದ್ದು ಬಿಟ್ಟರೆ, ನನ್ನ ಅರಿವಿನ ಮಿತಿಯಲ್ಲಿ ಕಂಡ ಅವರ ಯಕ್ಷಗಾನ ಪ್ರಯೋಗಗಳನ್ನು ಗ್ರಹಿಸುವುದಕ್ಕೆ ನನ್ನ ಅರಿವು ಸಾಲದಾಗಿತ್ತು. ಅವರಿಗೆ ಹತ್ತಿರವಾಗುವುದಕ್ಕೆ ಕಾರಣವಾದದ್ದು `ಅಭಿಮನ್ಯು ಕಾಳಗ'ದ ರಿಹರ್ಸಲ್‌ನ ಸಂದರ್ಭ. ಕಾರಂತರು ನಿರಂತರವಾಗಿ ಎರಡು-ಮೂರು ಗಂಟೆ ಕಾಲ ಎಲ್ಲ ಪಾತ್ರಗಳ ಅಭಿನಯಗಳನ್ನು ಮಾಡಿ ತೋರಿಸುತ್ತಿದ್ದರು. ಎಲ್ಲ ಕಲಾವಿದರು ಅದನ್ನು ಕುಳಿತು ನೋಡುತ್ತಿದ್ದರು; ತಮ್ಮ ಪಾತ್ರ ಬಂದಾಗ ಸಿದ್ಧರಾಗುತ್ತಿದ್ದರು. ನಾನು ಮಾತ್ರ ಒಂದು ಮೂಲೆಯಲ್ಲಿ ನಿಂತುಕೊಂಡು ಕಾರಂತರು ಕಾಣಿಸುತ್ತಿದ್ದ ಪಾತ್ರಗಳ ಅಭಿನಯವನ್ನು ನನ್ನಷ್ಟಕ್ಕೆ ಅಭ್ಯಾಸ ಮಾಡುತ್ತಿದ್ದೆ. ಇದಕ್ಕೆ ಕಾರಣ ಗುರು ನೀಲಾವರ ರಾಮಕೃಷ್ಣಯ್ಯನವರ ಕಿವಿಮಾತು. `ನೋಡು ಸಂಜೀವ, ಕಾರಂತರ ಎಲ್ಲ ಪಾತ್ರಗಳ ಅಭಿನಯಗಳನ್ನು ಗಮನಿಸು, ಅಭ್ಯಾಸ ಮಾಡು. ಮುಂದೆ ಹೇಗೆ ಅದು ಪ್ರಯೋಜನಕ್ಕೆ ಬೀಳುತ್ತದೆ ಎಂಬುದನ್ನು ನೀನೇ ನೋಡುವಿಯಂತೆ'.

ನೀಲಾವರರಂದದ್ದು ನಿಜವೇ ಆಯಿತು.ನಾನು ಅಷ್ಟರಲ್ಲಿಯೇ ಮಾಯಾ ರಾವ್, ಬಿ.ವಿ. ಕಾರಂತರ ಜೊತೆಗೆ ನಿಕಟವಾಗಿ ಇದ್ದು ಬಂದುದರಿಂದ ಅಭಿನಯವನ್ನು ಗಂಭೀರವಾಗಿ ಸ್ವೀಕರಿಸಲು ಸಾಧ್ಯವಾಗಿತ್ತು. ಕಾರಂತರು ಹೇಳುವುದನ್ನು ಮಾತ್ರವಲ್ಲ, ಅವರ ಮನಸ್ಸಿನಲ್ಲಿ ಏನಿದೆ ಎಂದು ಊಹಿಸಿ ಅಭಿನಯಿಸುತ್ತಿದ್ದೆ. ಅದು, ಅತಿಯೆನಿಸಿದರೆ ಗದರುತ್ತಿದ್ದರು. ಮಿತಿಯೆನಿಸಿದರೆ ತಿದ್ದುತ್ತಿದ್ದರು. ಕಥಕ್ ನೃತ್ಯಾಭ್ಯಾಸ ಮಾಡಿ ಬಂದಿದ್ದ ಎಳ್ಳಂಪಳ್ಳಿ ವಿಠಲಾಚಾರ್ ಅವರು ಕೂಡ ಅಭಿನಯದ ಸಾಧ್ಯತೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದರು.ಅದೊಂದು ದಿನ ಉಡುಪಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ `ಅಭಿಮನ್ಯು ಕಾಳಗ' ಪ್ರಾಯೋಗಿಕ ಪ್ರದರ್ಶನ. ಸಾಕಷ್ಟು ಮೊದಲೇ ಆಗಮಿಸಿದ ಕಾರಂತರು ನೇರವಾಗಿ ಚೌಕಿಗೆ ಬಂದರು. ಅವರು ನಿರ್ದೇಶಿಸಿದ ಯಾವುದೇ ಪ್ರದರ್ಶನದಲ್ಲಿ ಅವರು ನೇರವಾಗಿ ಬರುತ್ತಿದ್ದದ್ದು ಚೌಕಿಗೆ. ಎಲ್ಲ ಕಲಾವಿದರ ಮುಖವರ್ಣಿಕೆಯನ್ನು ಗಮನಿಸಿ ಬದಲಾವಣೆ ಬೇಕಿದ್ದರೆ ಸೂಚಿಸುತ್ತಿದ್ದರು. ವೇಷಭೂಷಣವೂ ಒಪ್ಪಿಗೆಯಾಗದಿದ್ದರೆ ಕೂಡಲೇ ತೆಗೆಸುತ್ತಿದ್ದರು. ಹಾಗಾಗಿ, ಅವರು ಬಂದರೆಂದರೆ ಕಲಾವಿದರೆಲ್ಲ ಅಳುಕುತ್ತಿದ್ದರು.

ಹಾಗೆ, ನನ್ನ ಬಳಿ ಬಂದರು. ನಾನು ಕೇದಿಗೆಮುಂದಲೆ ಕಟ್ಟಿ ಸಿದ್ಧನಾಗುತ್ತಿದ್ದೆ. `ಇದೇನು ಹಗ್ಗ' ಎಂದು ಕೇಳಿದರು. ಬಿಳಿಯ ಬಣ್ಣದ ಹಗ್ಗದಿಂದ ಮುಂದಲೆಯನ್ನು ಕಟ್ಟಿಕೊಳ್ಳುವುದನ್ನು ನಿಲ್ಲಿಸಿದೆ. ಆಹಾರ್ಯದ ಮೇಲ್ವಿಚಾರಣೆ ನೋಡುತ್ತಿದ್ದ ಹಿರಿಯ ಕಲಾವಿದರೋರ್ವರನ್ನು ಕರೆದು, `ಈ ಹಗ್ಗ ಬೇಡ, ತೆಗೆದು ಬಿಡಿ' ಎಂದರು. ಅವರು, `ಆಯ್ತು ಗುರುಗಳೆ' ಎಂದರು.ನಾನು ಮಾತ್ರ, `ಅದಿಲ್ಲದೆ ಮುಂದಲೆ ಕಟ್ಟುವುದು ಹೇಗೆ?' ಎಂದು ಕೇಳಿಬಿಟ್ಟೆ. ಆ ಹಿರಿಯ ಕಲಾವಿದರು ನನ್ನಲ್ಲಿ ಮಾತನಾಡದಿರುವಂತೆ ಸನ್ನೆ ಮಾಡಿದರು. ಕಾರಂತರೊಮ್ಮೆ ನನ್ನನ್ನೊಮ್ಮೆ ನೋಡಿದರು. ನಾನು ಧೈರ್ಯವಹಿಸಿ, `ಆ ಹಗ್ಗ ಕಾಣಿಸದ ಹಾಗೆ ಜರಿ ಇಳಿಸಿದರೆ ಆಗದೆ?' ಎಂದು ಕೇಳಿದೆ. `ಏನು ಮಾಡಬೇಕಾದರೂ ಮಾಡು, ಆ ಹಗ್ಗ ಮಾತ್ರ ಕಾಣಿಸಬಾರದು... ನೋಡೋಣ ಮಾಡಿ ತೋರಿಸು' ಎಂದರು. ನಾನು ಬಾಗಿ ಮುಂದಲೆ ಕಟ್ಟುತ್ತಿರುವಂತೆಯೇ ಮುಂದೆ ನಡೆದಾಗ ಅರ್ಜುನ ಪಾತ್ರಧಾರಿ ಕಾಣಿಸಿದ. ಅವನ ನಾಮ ನೋಡಿ ಶಿವರಾಮ ಕಾರಂತರು ಕೆರಳಿಬಿಟ್ಟರು.`ಇದು ಸರಿಯಾಗಲಿಲ್ಲ' ಎಂದವರೇ ಆ ವೇಷಧಾರಿಯ ಹಣೆಯ ಮೇಲಿನ ನಾಮವನ್ನು ಒರೆಸಿಬಿಟ್ಟರು! ಯಕ್ಷಗಾನ ಶುರುವಾಗಲು ಇನ್ನೇನು ಕೆಲವೇ ಕ್ಷಣಗಳಿವೆ; ಅರ್ಜುನ ಪಾತ್ರಧಾರಿಯ ನಾಮ ಅರೆ ಅಳಿಸಿಹೋಗಿದೆ! ಹೇಗೋ ಆ ಪಾತ್ರಧಾರಿ ಕಾರಂತರು ಹೇಳಿದಂತೆ ನಾಮವನ್ನು ಬರೆದು ಸಿದ್ಧಗೊಂಡನೆನ್ನಿ. ರಂಗದ ಮೇಲೆ ನನ್ನ ಕೇದಿಗೆ ಮುಂದಲೆಯ ನಡುವೆ ಇಳಿಸಿದ ಜರಿಯನ್ನು ಸರಿಯಾಗಿ ಗಮನಿಸಿ, ಪ್ರದರ್ಶನ ಮುಗಿದ ಮೇಲೆ, `ಅಡ್ಡಿಯಿಲ್ಲ, ಅದಿರಲಿ' ಎಂದಾಗ ನನಗೆ ನಿರಾಳವಾಯಿತು.ಪ್ರಾಯೋಗಿಕ ಪ್ರದರ್ಶನ ಮುಗಿಯಿತು. ನಿಜ ಪ್ರದರ್ಶನವೆಲ್ಲಿ? ಎಲ್ಲಿ; ದೆಹಲಿಯ ಪ್ರಗತಿ ಮೈದಾನದಲ್ಲಿ; ಪ್ರಧಾನಿ ಇಂದಿರಾಗಾಂಧಿಯವರ ಸಮಕ್ಷಮದಲ್ಲಿ! ನಾನು ಅಭಿಮನ್ಯುವಿನ ಲಹರಿಯಲ್ಲಿಯೇ ಹೊರಟುನಿಂತೆ. ದೇಶಕಾಲವನ್ನು ಮೀರಿ ನೆಗೆಯಲೆತ್ನಿಸುವ ಮನಸ್ಸು ಕಾರಂತರೆಂಬ ದೈತ್ಯ ಪ್ರತಿಭೆಯದ್ದು. ನನ್ನ ಸಾಮರ್ಥ್ಯದ ಮಿತಿಯಲ್ಲಿ ಅದನ್ನು ಅನುಸರಿಸಲು ಪ್ರಯತ್ನಿಸಿದ್ದೆ.

......ನಾನು ಚಂಗನೆ ನೆಗೆದೆ. ನನ್ನದು ನೆಗೆಯುವ ಪಾತ್ರವೇ. ಹನುಮಂತ! ಅದು `ಸೀತಾ' ಎಂಬ ಶೀರ್ಷಿಕೆಯ ವಿಶಿಷ್ಟವಾದ ರಂಗಪ್ರಯೋಗ. ಸೀತೆ ಭರತನಾಟ್ಯ ಕಲಾವಿದೆ. ಅವಳ ಜೊತೆಗಿನ ಅನುಕೂಲ ನಾರಿಯರು ಕೂಚಿಪುಡಿ ಕಲಾವಿದೆಯರು. ಅಷ್ಟೇ ಅಲ್ಲ, ಕರ್ನಾಟಕದ ಬೇರೆ ಬೇರೆ ಕಲಾಪ್ರಕಾರಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗಿತ್ತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಬಳಿಯ ತೆರೆದ ಸಭಾಂಗಣದಲ್ಲಿ ಈ ಪ್ರದರ್ಶನ.ಇದರ ನಿರ್ದೇಶನ ಮಾಡಿದವರು ಅಮೆರಿಕದ ಖ್ಯಾತ ರಂಗತಜ್ಞೆ, ನ್ಯೂಯಾರ್ಕ್‌ನ ಜಗತ್ಪ್ರಸಿದ್ಧ ಲಾ ಮಮಾ ಥಿಯೇಟರ್‌ನ ಸ್ಥಾಪಕಿ ಇಲೆನ್ ಸ್ಟಿವರ್ಟ್.ಇಲೆನ್ ಸ್ಟಿವರ್ಟ್ ಮತ್ತು ಗೊಂಬೆಯಾಟಗಳ ಬಗ್ಗೆ ವಿಶೇಷ ಅಧ್ಯಯನ ಮಾಡುತ್ತಿದ್ದ ಥಿಯೋಡಾರ ಸ್ಕಿಪಿಟಾರಿಸ್ ಕರ್ನಾಟಕದ ವಿವಿಧ ರಂಗಕಲೆಗಳ ಅವಲೋಕನಕ್ಕೆಂದು ಬಂದವರು ಉಡುಪಿಯ ಯಕ್ಷಗಾನ ಕೇಂದ್ರಕ್ಕೂ ಬಂದಿದ್ದರು. ನಮ್ಮ ಪ್ರದರ್ಶನ ನೋಡಿದವರಿಗೆ ಯಕ್ಷಗಾನ ಇಷ್ಟವಾಯಿತು. ನನ್ನನ್ನೂ ಮೆಚ್ಚಿಕೊಂಡರು. ಬೆಂಗಳೂರಿನಲ್ಲಿ ಆಧುನಿಕ ಪರಿಕಲ್ಪನೆಯೊಂದಿಗೆ `ಸೀತಾ' ರಂಗಪ್ರಯೋಗವನ್ನು ಸಂಯೋಜಿಸಲಿರುವ ಬಗ್ಗೆ ಹೇಳಿ, ನ್ಯಾಷನಲ್ ಕಾಲೇಜಿನಲ್ಲಿ ಜರಗುವ ಇಪ್ಪತ್ತು ದಿವಸಗಳ ರಿಹರ್ಸಲ್‌ಗೆ ಬರುವಂತೆ ನನ್ನನ್ನೂ ನಮ್ಮ ತಂಡದ ಮೂವರು ಕಲಾವಿದರನ್ನೂ ಆಹ್ವಾನಿಸಿದರು.ಅದೊಂದು ಅದ್ಭುತ ಅನುಭವ. ರಿಹರ್ಸಲ್ ಅವಧಿಯಲ್ಲಿ ಅದರ ಒಟ್ಟೂ ಪರಿಕಲ್ಪನೆ ಹೇಗಿದೆಯೆಂದು ನಮಗೂ ಗೊತ್ತಾಗುತ್ತಿರಲಿಲ್ಲ. ಆದರೆ, ಅಂತಿಮ ಪ್ರದರ್ಶನದ ದಿನ ಬೆಳಕು, ಪೂರಕ ಪರಿಕರಗಳ ಹಿತಮಿತ ಸಂಯೋಜನೆಯಲ್ಲಿ ಬೆರಗಿನ ಲೋಕವೊಂದು ಸೃಷ್ಟಿಯಾಯಿತು. ನಾನು ಹನುಮಂತನ ಸಾಂಪ್ರದಾಯಿಕ ಯಕ್ಷಗಾನದ ವೇಷದಲ್ಲಿ ಕತ್ತಲಲ್ಲಿ ದೊಂದಿ ಹಿಡಿದುಕೊಂಡು ಬರುವ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಹನುಮಂತ ಸಮುದ್ರೋಲ್ಲಂಘನ ಮಾಡುವ ದೃಶ್ಯದ ಹಿನ್ನೆಲೆಯಲ್ಲಿ ಚಲಿಸುವ ಗೊಂಬೆಗಳನ್ನು ಪರಿಣಾಮಕಾರಿಯಾಗಿ ಬಳಸಲಾಗಿತ್ತು. ಒಮ್ಮೆ ಯಕ್ಷಗಾನದ ರಾವಣ ಮತ್ತು ಅನ್ಯ ಕಲಾಪ್ರಕಾರವೊಂದರ ಜಟಾಯು ಪಾತ್ರಗಳು ಹೇಗೆ ಯುದ್ಧ ಮಾಡಬಹುದೆಂದು ನಿರ್ದೇಶಕರು ಯೋಚಿಸುತ್ತಿದ್ದಾಗ ನಾನು `ಕಿಡ್ತಕ ತದ್ದಿನತೈತ ತಾಧೇಂ...' ಎಂದು ಬಾಯಿತಾಳ ಹೇಳಿ ಹೊಸ ಸಾಧ್ಯತೆಯನ್ನು ಹೇಳಿದ್ದು, ಇಲೆನ್ ಸ್ಟಿವರ್ಟ್‌ರಿಗೆ ಅದು ಇಷ್ಟವಾಗಿ ಅದನ್ನು ಬಳಸಲು ಹೇಳಿದ್ದು ಇನ್ನೂ ನೆನಪಿದೆ.ಅದಾಗಿ, ಆರು ತಿಂಗಳು ಕಳೆದಿರಬಹುದು. ನ್ಯೂಯಾರ್ಕ್‌ನ ಲಾ ಮಮ ಥಿಯೇಟರ್‌ನಲ್ಲಿ ಗೀತೋಪದೇಶದ ವಸ್ತುವನ್ನಿಟ್ಟುಕೊಂಡು ಯಕ್ಷಗಾನ ಮತ್ತು ಗೊಂಬೆಯಾಟಗಳನ್ನು ಬಳಸಿ ಹೊಸತೊಂದು ಪ್ರಯೋಗ ನಡೆಸುವ ಬಗ್ಗೆ ನನಗೆ ಆಹ್ವಾನ ಬಂತು. ಹನುಮಂತನ ಉತ್ಸಾಹದಲ್ಲಿ ಸಾಗರೋಲ್ಲಂಘನಕ್ಕೆ ಗೆಜ್ಜೆ ಕಟ್ಟಲಾರಂಭಿಸಿದೆ.

.....ಗೆಜ್ಜೆ ಕಟ್ಟಲಾರಂಭಿಸಿದ್ದಷ್ಟೆ. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಯಾವುದೋ ಒಂದು ಕಾರ್ಯಕ್ರಮ. ಎಲ್ಲರೂ ತಮ್ಮ ಮುಖಕ್ಕೆ ಬಣ್ಣ ಹಚ್ಚುವುದರಲ್ಲಿ, ಕಿರೀಟ ಕಟ್ಟುವುದರಲ್ಲಿ ತೊಡಗಿದ್ದರು. ನನ್ನ ಕಿವಿಯಲ್ಲಿ ಯಾರೋ ಬಂದು ಪಿಸುಗುಟ್ಟಿದರು. ಇದ್ದಕ್ಕಿದ್ದಂತೆ ಕಣ್ಣುಕತ್ತಲು ಆವರಿಸಿದಂತಾಯಿತು. ಕಟ್ಟುತ್ತಿದ್ದ ಗೆಜ್ಜೆಯನ್ನು ಅಲ್ಲಿಯೇ ಕೆಳಗಿರಿಸಿ ಗಣಪತಿ ದೇವರಲ್ಲಿ ಕ್ಷಮೆ ಕೇಳುವುದನ್ನೂ ಮರೆತು ಹೊರಟು ಬಂದೆ.

ನನ್ನ ಆರಂಭದ ಹಂತದ ಬದುಕಿನ ಸಂಕಟಗಳನ್ನು ಹಗುರಗೊಳಿಸಿದ ಆಧಾರವೊಂದು ಮರದ ಕೊಂಬೆಯಲ್ಲಿ ತೂಗುತ್ತಿತ್ತು. ಅಲ್ಲಿಂದ ಪೊಲೀಸ್‌ಸ್ಟೇಷನ್‌ಗೆ, ಆಸ್ಪತ್ರೆಗೆ ಓಟ, ಓಡಾಟ...

ಇರಲಿ, ಅವನ್ನೆಲ್ಲ ಹೇಳಿದರೇನು, ಹೇಳದಿದ್ದರೇನು...(ಸಶೇಷ)

ನಿರೂಪಣೆ : ಹರಿಣಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.