ಶನಿವಾರ, ಮೇ 8, 2021
17 °C

ಅಮೆರಿಕದ ಅಧ್ಯಕ್ಷ ಸೃಷ್ಟಿಸಿದ ನವ ಅಸ್ಪೃಶ್ಯತೆ

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಅಮೆರಿಕದ ಅಧ್ಯಕ್ಷ ಸೃಷ್ಟಿಸಿದ ನವ ಅಸ್ಪೃಶ್ಯತೆ

ಅಮೆರಿಕದ ಸ್ಕೂಲ್ ಮೇಷ್ಟರೊಬ್ಬರು ಡೊನಾಲ್ಡ್ ಟ್ರಂಪ್ ಅವರನ್ನು ಹಿಟ್ಲರ್‌ಗೆ ಹೋಲಿಸಿದಾಗ ಅಲ್ಲಿನ ಆಡಳಿತ  ಅವರಿಗೆ ನೋಟಿಸ್ ಕೊಟ್ಟಿತು. ಆದರೆ ಟ್ರಂಪ್ ಈಗ ಆ ಮೇಷ್ಟರು ಹೇಳಿದ್ದು ಸರಿ; ನಾನು ನಿಜಕ್ಕೂ ಹಿಟ್ಲರ್ ಮರಿ ಎಂಬುದನ್ನು ಸಾಬೀತು ಮಾಡಿದ್ದಾರೆ.  ನಿನ್ನೆ ಪತ್ರಿಕೆಗಳಲ್ಲಿ ಮಹಿಳೆಯೊಬ್ಬಳು ಹಿಡಿದಿರುವ ಪೋಸ್ಟರೊಂದರ ಚಿತ್ರವನ್ನು ನೀವು ನೋಡಿರಬಹುದು.‘ಅಮೆರಿಕ: ಎ ಲ್ಯಾಂಡ್ ಆಫ್ ಇಮ್ಮಿಗ್ರೆಂಟ್ಸ್’ (ಅಮೆರಿಕ: ವಲಸೆಗಾರರ ದೇಶ) ಎಂದು ಆ ಪೋಸ್ಟರ್ ಹೇಳುತ್ತಿದೆ. ವಲಸೆಗಾರರೇ ಸೃಷ್ಟಿಸಿರುವ ಅಮೆರಿಕದೊಳಕ್ಕೆ ಏಳು ‘ಮುಸ್ಲಿಂ ದೇಶ’ಗಳ ಜನ ಮುಂದಿನ ತೊಂಬತ್ತು ದಿನಗಳ ಕಾಲ ಬರುವಂತಿಲ್ಲ ಎಂದು ಟ್ರಂಪ್ ಫತ್ವಾ ಹೊರಡಿಸಿದ್ದಾರೆ.

ಇದು ‘ಅತ್ಯಂತ ಸಣ್ಣತನದ’, ‘ಅನ್ಅಮೆರಿಕನ್’ ಧೋರಣೆ ಎಂದಿರುವ ಅಮೆರಿಕನ್ ಡೆಮಾಕ್ರಟಿಕ್ ಪಕ್ಷದ ಲೀಡರ್ ಚಕ್ ಶೂಮರ್, ಅಮೆರಿಕದ ಸಂಕೇತವಾದ ‘ಸ್ವಾತಂತ್ರ್ಯದೇವತೆಯ ಕಣ್ಣೀರು ಅವಳ ಕೆನ್ನೆಗಳ ಮೇಲೆ ಹರಿಯುತ್ತಿದೆ’ ಎಂದು ಉತ್ಪ್ರೇಕ್ಷಾಲಂಕಾರದಲ್ಲಿ ಹೇಳಿದರೂ, ಸತ್ಯವನ್ನೇ ಹೇಳುತ್ತಿದ್ದಾರೆ.ಟ್ರಂಪ್ ಸಾರಿರುವ ನವ ಅಸ್ಪೃಶ್ಯತೆಯ ವಿರುದ್ಧ ಜಗತ್ತಿನಾದ್ಯಂಥ ಪ್ರತಿಭಟನೆ ಶುರುವಾಗಿದೆ. ಟ್ರಂಪ್ ಗಂಟೆಗಂಟೆಗೂ ಬದಲಿಸುತ್ತಿರುವ ಮಾತುಗಳನ್ನು, ಟ್ವೀಟ್ ಗಳನ್ನು ನೋಡಿದರೆ ಟ್ರಂಪ್ ತಮ್ಮ ದಿಕ್ಕು ಬದಲಿಸಬೇಕಾದ ಒತ್ತಡ ಸೃಷ್ಟಿಯಾಗುತ್ತಿರುವಂತೆ ಕಾಣತೊಡಗಿದೆ.ಟ್ರಂಪ್ ಆದೇಶದ ಪ್ರಕಾರ ಇರಾಕ್, ಇರಾನ್, ಸಿರಿಯಾ, ಸೊಮಾಲಿಯಾ, ಸುಡಾನ್, ಲಿಬ್ಯಾ, ಯೆಮನ್ ಈ ಏಳು ‘ಮುಸ್ಲಿಂ ರಾಷ್ಟ್ರಗಳ’ ನಾಗರಿಕರು ತೊಂಬತ್ತು ದಿನಗಳ ಕಾಲ ಅಮೆರಿಕವನ್ನು ಪ್ರವೇಶಿಸುವಂತಿಲ್ಲ. ಟ್ರಂಪ್ ಪ್ರಕಾರ, ಅವು ಭಯೋತ್ಪಾದನೆಯನ್ನು ಸೃಷ್ಟಿಸುವ ಜನರುಳ್ಳ ದೇಶಗಳು. ವಿಚಿತ್ರವೆಂದರೆ, ಈ ಪಟ್ಟಿಯಲ್ಲಿರುವ ಕೆಲವು ದೇಶಗಳ ಮೇಲೆ ಸ್ವತಃ ಅಮೆರಿಕವೇ ಹಲಬಗೆಯ ದಾಳಿಗಳನ್ನು ನಡೆಸಿದೆ.

ಒಂದರ ಮೇಲೊಂದು ದೇಶವನ್ನು ಎತ್ತಿಕಟ್ಟಿದೆ. ಭಯೋತ್ಪಾದನೆ ಮಾಡಿದೆ. ಅವುಗಳ ಆಡಳಿತದಲ್ಲಿ, ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದೆ. ಹಿಂದೊಮ್ಮೆ ಈ ಅಂಕಣದಲ್ಲಿ ಚರ್ಚಿಸಿದ ಚಾಮ್‌ಸ್ಕಿಯವರ ‘ಬಿಕಾಸ್ ವಿ ಸೇ ಸೋ’ ಪುಸ್ತಕದ ಮಾಹಿತಿಯೊಂದನ್ನು ಮತ್ತೆ ಉಲ್ಲೇಖಿಸುತ್ತಿದ್ದೇನೆ: ನಾಲ್ಕು ವರ್ಷದ ಕೆಳಗೆ ಭಯೋತ್ಪಾದಕ ಗುಂಪುಗಳಿಂದ ಅಮೆರಿಕದ ಬೋಸ್ಟನ್ ಮೇಲೆ ಎಡೆಬಿಡದೆ ದಾಳಿಯಾಯಿತು.

ಅದಾದ ನಂತರ, ಅದಕ್ಕೆ ಪ್ರತೀಕಾರವೆಂಬಂತೆ ಯೆಮನ್ ದೇಶದ ಹಳ್ಳಿಯೊಂದರ ಮೇಲೆ ಅಮೆರಿಕದಿಂದ ಡ್ರೋನ್ ದಾಳಿ ನಡೆಯಿತು. ‘ಅಲ್ಲಿಯವರೆಗೂ ಜಿಹಾದಿ ಪ್ರಚಾರಕರು ಅಮೆರಿಕದ ವಿರುದ್ಧ ಮಾಡಿದ ಪ್ರಚಾರಗಳಿಗೆ ಕಿವಿಗೊಡದೆ, ಅಮೆರಿಕವನ್ನು ಮೆಚ್ಚುತ್ತಿದ್ದ ನಮ್ಮೂರ ಜನ ಈ ಡ್ರೋನ್ ದಾಳಿಯಿಂದಾಗಿ ಅಮೆರಿಕದ ವಿರೋಧಿಗಳಾದರು’ ಎಂದು ಅಮೆರಿಕದ ಸೆನೆಟ್ ಕಮಿಟಿಯ ಎದುರು ಪತ್ರಕರ್ತ ಅಲ್ ಮುಸ್ಲಿಮಿ ಹೇಳಿದರು. ಯೆಮನ್‌ನ ಹಳ್ಳಿಯಲ್ಲಿ ಅಮೆರಿಕ ನಡೆಸಿದ ಭಯೋತ್ಪಾದನೆಯ ಉದ್ದೇಶ ಇಡೀ ಯೆಮನ್ ದೇಶದ ಜನರಲ್ಲಿ ಭೀಕರ ದಿಗಿಲನ್ನು ಹುಟ್ಟು ಹಾಕುವುದು.ಈ ಹಳೆಯ ತಂತ್ರ ಅಮೆರಿಕದ ಜಾಗತಿಕ ಭಯೋತ್ಪಾದನೆಯ ಒಂದು ಭಾಗವೇ ಆಗಿದೆ. ಇಂಥ ಅಮೆರಿಕ ತಾನೇ ಭಯೋತ್ಪಾದನೆ ಉಂಟು ಮಾಡಿದ ದೇಶಗಳಲ್ಲಿನ ಜನರನ್ನೇ ಈಗ ಭಯೋತ್ಪಾದಕರು ಎಂದು ಅನುಮಾನಿಸಿ, ಅವರನ್ನು ಹೊರಗಿಡುವ ಆದೇಶ ಹೊರಡಿಸಿದೆ.ಅಮೆರಿಕ ಯಾರನ್ನು ‘ಭಯೋತ್ಪಾದಕ’ ಎಂದರೆ, ಅವರನ್ನು ‘ಭಯೋತ್ಪಾದಕರು’ ಎಂದು ಕರೆಯುವ ಮಾಧ್ಯಮಗಳಿಗೆ ಗೊತ್ತಿರಲಿಕ್ಕಿಲ್ಲ- ಆಫ್ರಿಕದ ಧೀರನಾಯಕ ನೆಲ್ಸನ್ ಮಂಡೇಲರನ್ನೇ ಅಮೆರಿಕ 2008ರ ತನಕ ‘ಟೆರರಿಸ್ಟ್’ ಪಟ್ಟಿಯಲ್ಲಿಟ್ಟಿತ್ತು; ಅಷ್ಟೇ ಅಲ್ಲ, ದಕ್ಷಿಣ ಆಫ್ರಿಕಾದ ಬಿಳಿಯರ ಸರ್ಕಾರದ ಪರವಿದ್ದ ರೇಗನ್ ಆಡಳಿತ ಮಂಡೇಲರ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ಸನ್ನು ‘ಅತಿ ತಂಟೆಕೋರ ಭಯೋತ್ಪಾದಕ ತಂಡ’ವೆಂದು ಪರಿಗಣಿಸಿತ್ತು! ಅಂದರೆ, ಇವತ್ತು ಟ್ರಂಪ್ ಹೊರಡಿಸಿರುವ ಆದೇಶದಲ್ಲೂ ತನಗೆ ಬೇಕಾದಂತೆ ಯಾವುದನ್ನಾದರೂ ಭಯೋತ್ಪಾದನೆ ಎಂದು ಹಣೆಪಟ್ಟಿ ಹಚ್ಚುವ ಅಮೆರಿಕದ ಹಳೆಯ ಚಾಳಿಯೇ ಮುಂದುವರಿದಿದೆ.

ಇದು ಅಮೆರಿಕ ಹಲವು ವರ್ಷಗಳಿಂದ ಮಾಡುತ್ತಿರುವ ಭೇದೋಪಾಯ ಹಾಗೂ ಅಂತರರಾಷ್ಟ್ರೀಯ ಅಸ್ಪೃಶ್ಯತೆಯ ಮತ್ತೊಂದು ಘಟ್ಟದಂತಿದ್ದರೂ, ಇದು ಅತ್ಯಂತ ಅಪಾಯಕಾರಿಯಾದ ಧ್ರುವೀಕರಣದ ಘಟ್ಟ. ಒಂದು ದೇಶದ ಮುಖ್ಯಸ್ಥನನ್ನಾಗಿ ಮುತ್ಸದ್ದಿಯನ್ನು ಆರಿಸದೆ, ವ್ಯಾಪಾರಿಯನ್ನು ಆರಿಸಿದರೆ ಎಂಥ ಅಪಾಯವಾಗುತ್ತದೆಂಬುದರ ಮುನ್ಸೂಚನೆ ಈ ಆದೇಶದಲ್ಲಿದೆ.ಈ ಪಟ್ಟಿಯಲ್ಲಿರುವ ದೇಶಗಳ ಜೊತೆಗೆ ಅಮೆರಿಕ ಕಾಲಕಾಲಕ್ಕೆ ನಡೆದುಕೊಂಡಿರುವ ರೀತಿಯನ್ನು ಚಾಮ್‌ಸ್ಕಿ ಸದಾ ಚರ್ಚಿಸುತ್ತಾ ಬಂದಿದ್ದಾರೆ. 1982ರಲ್ಲಿ ಇರಾನಿನ ಮೇಲೆ ಇರಾಕಿನ ಸದ್ದಾಂ ಹುಸೇನ್ ದಾಳಿ ಮಾಡಿದಾಗ ಅಮೆರಿಕ ಸದ್ದಾಂ ಬೆಂಬಲಕ್ಕೆ ನಿಂತಿತು. ಮತ್ತೊಮ್ಮೆ ಇರಾನಿನ ಬಾಲ ಹಿಡಿಯಿತು. ಮತ್ತೊಮ್ಮೆ ಲಿಬ್ಯಾದ ಸಮೃದ್ಧ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟು ಆಫ್ರಿಕಾಮ್ ಅಂದರೆ ‘ಯು.ಎಸ್.ಆಫ್ರಿಕಾಕಮ್ಯಾಂಡ್’ ವಲಯವೊಂದನ್ನು ಸೃಷ್ಟಿ ಮಾಡಿಕೊಳ್ಳಲೆತ್ನಿಸಿತ್ತು.

ಈಗ ಈ ದೇಶಗಳು ಭಯೋತ್ಪಾದಕರನ್ನು ಕಳಿಸುತ್ತವೆ ಎಂದು ಗೊಣಗುತ್ತಿರುವ ಅಮೆರಿಕದ ಇವತ್ತಿನ ಅಧಿಕೃತ ಅಂಕಿ ಅಂಶಗಳು ಬೇರೆಯ ಕತೆಯನ್ನೇ ಹೇಳುತ್ತಿವೆ: 9/11ರ ನಂತರ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವವರಲ್ಲಿ ಬಹುತೇಕರು ಅಮೆರಿಕದ ನಾಗರಿಕರು ಹಾಗೂ ಕಾಯಂ ನಿವಾಸಿಗಳು! ಹಾಗಾದರೆ, ಇದ್ದಕ್ಕಿದ್ದಂತೆ ಈ ಏಳು ದೇಶಗಳು ತಿರಸ್ಕೃತ ಪಟ್ಟಿಗೆ ಸೇರಿದ್ದು ಹೇಗೆ? ಅಮೆರಿಕ ಹಲವು ವರ್ಷಗಳಿಂದ ಆಚರಿಸುತ್ತಿದ್ದ ಅಸ್ಪೃಶ್ಯತೆಯ ಘೋಷಿತ ರೂಪ ಇದು. ಅಮೆರಿಕದಲ್ಲಿ ಒಬಾಮ ಇರಲಿ, ಟ್ರಂಪ್ ಇರಲಿ, ಅಮೆರಿಕವನ್ನು ಆಳುವ ಗುಪ್ತವರ್ಗ ಮಾತ್ರ ಒಂದೇ ಆಗಿರುತ್ತದೆ. ಆದರೂ ಚರಿತ್ರೆಯ ಒಂದು ಘಟ್ಟದಲ್ಲಿ ಅಮೆರಿಕಕ್ಕೆ ಮಾರಾಟವಾಗಿ ಬಂದ ನೊಂದ ಕಪ್ಪುಜನರ ಹಿನ್ನೆಲೆಯುಳ್ಳ ಒಬಾಮ, ಟ್ರಂಪ್ ಮಾಡಿದಂಥ ನಿರ್ಲಜ್ಜ ಘೋಷಣೆಯನ್ನಂತೂ ಮಾಡಿರಲಿಲ್ಲ.

ವ್ಯಾಪಾರಿ ಟ್ರಂಪ್ ಥರದವರಿಗೆ ಆತ್ಮಸಾಕ್ಷಿ, ಆತ್ಮಪರೀಕ್ಷೆಗಳ ಪ್ರಶ್ನೆಯೇ ಇದ್ದಂತಿಲ್ಲ. ಪಶ್ಚಿಮವು ವಸಾಹತೀಕರಣದ ಕಾಲದಲ್ಲಿ ಮಾಡುತ್ತಿದ್ದ ‘ಡಿವೈಡ್ ಅಂಡ್ ರೂಲ್’ ಆಟವನ್ನೂ ಟ್ರಂಪ್ ಆಡಲೆತ್ನಿಸಿದ್ದಾರೆ. ‘ಕೆಲವು ಮುಸ್ಲಿಂ ರಾಷ್ಟ್ರಗಳನ್ನು ಮಾತ್ರ ಈ ಪಟ್ಟಿಯಲ್ಲಿ ಸೇರಿಸಿದ್ದೇನೆ’ ಎಂಬ ಅವರ ಸಮರ್ಥನೆ ಅಮೆರಿಕ ಈವರೆಗೆ ಆಡಿರುವ ಅತ್ಯಂತ ಅಪಾಯಕಾರಿ ಆಟಗಳಲ್ಲಿ ಒಂದು.

ಈ ವಿಭಜನೆ ಮುಸ್ಲಿಂ ರಾಷ್ಟ್ರಗಳ ನಡುವೆಯೇ ವೈಮನಸ್ಯ ಹುಟ್ಟು ಹಾಕಿ ‘ಅಮೆರಿಕದಿಂದ ಪುರಸ್ಕೃತ’ ಹಾಗೂ ‘ಅಮೆರಿಕದಿಂದ ತಿರಸ್ಕೃತ’ ಎಂಬ ಎರಡು ಗುಂಪುಗಳನ್ನು ಮಾಡಬಹುದು ಎಂದು ಟ್ರಂಪ್ ನಿರೀಕ್ಷಿಸುತ್ತಿರಬಹುದು. ಆದರೆ ಅದು ಇಡೀ ಜಗತ್ತಿನ ಮುಸ್ಲಿಮರಲ್ಲಿ ಹುಟ್ಟು ಹಾಕಿರುವ ಕಹಿ ಭಾವನೆ, ಪರಕೀಯತೆ ಹಾಗೂ ಅದರಿಂದ ಆಗಲಿರುವ ಅಪಾಯ ಟ್ರಂಪ್‌ಗೆ ಗೊತ್ತಿರಲಿಕ್ಕಿಲ್ಲ.

ಯಾವುದೇ ನಾಗರಿಕ ವ್ಯಕ್ತಿಯಂತೆ ಒಂದು ನಾಗರಿಕ ದೇಶವೂ ಜನರನ್ನು ಧರ್ಮದ ಆಧಾರದ ಮೇಲೆ ಸಾರಾಸಗಟಾಗಿ ತಿರಸ್ಕರಿಸಲು ಹಿಂಜರಿಯುತ್ತದೆ. ಅಮೆರಿಕದ ಈ ಹೊಸ ಆಟವನ್ನು ಮುಸ್ಲಿಂ ವಿರೋಧಿಗಳಾದ ಇಂಡಿಯಾದ ಮತೀಯವಾದಿಗಳು ಆನಂದಿಸುತ್ತಿರಬಹುದು. ಆದರೆ ಧರ್ಮದ ಆಧಾರದ ಮೇಲೆ ಹುಟ್ಟಿರುವ ಈ ಹೊಸ ವಿಭಜನೆಯ ಪರಿಣಾಮವನ್ನು ಅವರು ಊಹಿಸಿದಂತಿಲ್ಲ. ಒಂದು ದೇಶದಲ್ಲಿ ಇಂಥ ವಿಭಜನೆಯ ಮನಸ್ಥಿತಿ ಸೃಷ್ಟಿಯಾಯಿತೆಂದರೆ ಏನಾಗುತ್ತದೆ ಎಂಬುದಕ್ಕೆ ಸೋಮವಾರ ಅಮೆರಿಕದ ವಿಮಾನ ನಿಲ್ದಾಣದಲ್ಲಿ ಆದ ಇಂಡಿಯಾದ ವ್ಯಾಪಾರಿಯೊಬ್ಬನ ಬಂಧನವೇ ಒಂದು ಉದಾಹರಣೆ.ಟ್ರಂಪ್ ಆಯ್ಕೆಯಾಗುವ ಮೊದಲು ಅವರು ಆಡುತ್ತಿದ್ದ ಮಾತುಗಳನ್ನು ಅಧ್ಯಯನ ಮಾಡಿದ ಜಗತ್ತಿನ ಮನೋವಿಜ್ಞಾನಿಗಳು ಅವರ ಬುದ್ಧಿಸ್ಥಿಮಿತತೆಯನ್ನೇ ಪ್ರಶ್ನಿಸಿದ್ದು ನಿಮಗೆ ನೆನಪಿರಬಹುದು. ಅಮೆರಿಕದ ಬಹುಸಂಖ್ಯಾತ ಮತದಾರರು ವೋಟು ಹಾಕಿದ ರೀತಿಯನ್ನು ಗಮನಿಸಿದರೆ ಅವರು ಕೂಡ ಮನೋವಿಜ್ಞಾನಿಗಳ ಎಚ್ಚರಿಕೆಯನ್ನು ಗಂಭೀರವಾಗಿ ಗಮನಿಸಿದಂತಿದೆ.

ಟ್ರಂಪ್ ಗೆದ್ದದ್ದು ಜನಪ್ರಿಯ ಮತಗಳಿಂದಲ್ಲ; ಬದಲಿಗೆ ಇನ್ನಿತರ ಮತಗಳಿಂದ. ಇವತ್ತು ಅಮೆರಿಕದ ನಾಗರಿಕ ಸಮಾಜ ಟ್ರಂಪ್ ಆದೇಶಕ್ಕೆ ತೋರುತ್ತಿರುವ ವಿರೋಧ ಹೊಸ ಬಗೆಯ ಪ್ರತಿಭಟನೆಯ ಮಾದರಿಯೊಂದನ್ನು ಸೃಷ್ಟಿಸಲಿದೆ. ಅಮೆರಿಕದ ಆಡಳಿತದ ಚುಕ್ಕಾಣಿ ಹಿಡಿದವರ ಆಟಗಳೇನೇ ಇರಲಿ, ಅಲ್ಲಿನ ಕೋರ್ಟುಗಳು ಹಾಗೂ ನಾಗರಿಕ ಹಕ್ಕುಗಳ ಸಂಸ್ಥೆಗಳ ಮಧ್ಯಪ್ರವೇಶ ಅಮೆರಿಕದ ಜನರ ಮುಕ್ತ ಚಿಂತನೆಯ ಇನ್ನೊಂದು ಮುಖವನ್ನು ತೋರಿಸುತ್ತಿದೆ.

ಅಮೆರಿಕದ ಡೆಮಾಕ್ರಟರು ಟ್ರಂಪ್ ಆದೇಶದ ವಿರುದ್ಧ ನಿಲುವಳಿ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಟ್ರಂಪ್ ನಿರ್ಧಾರದ ಸಾಂವಿಧಾನಿಕತೆಯನ್ನು ಕೋರ್ಟಿನಲ್ಲಿ ಪ್ರಶ್ನಿಸಲು ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್‌ನಲ್ಲಿ ಈಗಾಗಲೇ 2.40 ಲಕ್ಷ  ಡಾಲರ್ ಸಂಗ್ರಹವಾಗಿದೆ. ಅಮೆರಿಕ ತನಗೇನು ಬಿಕ್ಕಟ್ಟು ಬಂದರೂ ಅದನ್ನು ಜಾಗತಿಕ ಸಮಸ್ಯೆಯನ್ನಾಗಿಸಲು ಪ್ರಯತ್ನಿಸುತ್ತದೆ.

ತೈಲಕ್ಕಾಗಿ ನಡೆಸುವ ಯುದ್ಧವನ್ನು ಅದು ಜಗತ್ತಿನ ಯುದ್ಧವನ್ನಾಗಿ ಪರಿವರ್ತಿಸುತ್ತದೆ. ಇದು ಜಗತ್ತಿಗೆ ನಿಧಾನವಾಗಿ ಅರಿವಾಗತೊಡಗಿದೆ. ಈಗಂತೂ ಟ್ರಂಪ್ ಮುಂದೆ ಕಾಲಿಟ್ಟ ಕಡೆಯೆಲ್ಲ ವಿಭಜನೆಯ ಬೀಜ ಬಿತ್ತಲ್ಪಡುತ್ತದೆ ಎಂದು ಬ್ರಿಟನ್ನಿನ ನಾಗರಿಕರು ಹೇಳಿಯೇ ಬಿಟ್ಟಿದ್ದಾರೆ.

ಯುರೋಪಿಯನ್ ಯೂನಿಯನ್ನಿನಿಂದ ಹೊರಬರುತ್ತಿರುವ ಯುನೈಟೆಡ್ ಕಿಂಗ್‌ಡಂ ಸರ್ಕಾರ ಅಮೆರಿಕದತ್ತ ವಾಲುತ್ತಿರುವ ಹೊತ್ತಿನಲ್ಲಿ, ಟ್ರಂಪ್ ಯುನೈಟೆಡ್ ಕಿಂಗ್‌ಡಂಗೆ ಭೇಟಿ ಕೊಡುವುದನ್ನು ವಿರೋಧಿಸಿ ಈಗಾಗಲೇ ಹತ್ತು ಲಕ್ಷ ಬ್ರಿಟಿಷ್ ಪ್ರಜೆಗಳು ಸಹಿ ಹಾಕಿದ್ದಾರೆ. ಅಲ್ಲಿ ಸದ್ಯದಲ್ಲೇ ಟ್ರಂಪ್ ಆದೇಶದ ವಿರುದ್ಧ ಅನೇಕ ಪ್ರತಿಭಟನೆಗಳಾಗಲಿವೆ ಎಂಬ ವರದಿಗಳಿವೆ.ಇವೆಲ್ಲ ಟ್ರಂಪ್ ವಿರುದ್ಧ ಎನ್ನುವುದಕ್ಕಿಂತ, ಜಗತ್ತಿನ ಸೂಕ್ಷ್ಮಜನ ಮುಸ್ಲಿಂ ವಿರೋಧದ ಸಂಕುಚಿತ ಮನಸ್ಥಿತಿಯ ವಿರುದ್ಧ ದನಿಯೆತ್ತುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತವೆ. ಈ ನಡುವೆ ಮುಸ್ಲಿಂ ಜಗತ್ತು ತನ್ನ ಅಂತರರಾಷ್ಟ್ರೀಯ ಪರಕೀಯತೆಗೆ ಕಾರಣವಾಗುವ ತನ್ನ ವಲಯದೊಳಗಿರುವ ಜಿಹಾದಿ ಶಕ್ತಿಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಎಚ್ಚರವಾಗಬೇಕಾದ ಅಗತ್ಯವೂ ಇದೆ.

ತಮ್ಮನ್ನು ತಾವು ಭಯೋತ್ಪಾದನೆಯ ಮೂಲಗಳಿಂದ ಕೊಡವಿಕೊಳ್ಳುವ ಮೂಲಕವೂ ಈ ರಾಷ್ಟ್ರಗಳು ನವ ಅಸ್ಪೃಶ್ಯತೆಯ ಸವಾಲನ್ನು ಎದುರಿಸಬೇಕಾಗುತ್ತದೆ. ಜೊತೆಗೆ, ನಾನು ನಿನಗೆ ಬೇಡವೆಂದರೆ ನೀನೂ ನನಗೆ ಬೇಡ ಎಂಬ ಪಟ್ಟನ್ನು ಈ ದೇಶಗಳು ಹಾಗೂ ಅವುಗಳ ಬಗ್ಗೆ ಸಹಾನುಭೂತಿಯಿರುವ ದೇಶಗಳು ಹಿಡಿದರೆ, ಅಮೆರಿಕನ್ ಮಾರುಕಟ್ಟೆಯನ್ನು ತಾವೂ ತಿರಸ್ಕರಿಸಿದರೆ ಟ್ರಂಪ್ ತನ್ನ ದುರಾದೇಶವನ್ನು ಹಿಂಪಡೆಯಲೇಬೇಕಾಗುತ್ತದೆ. ಕೊನೆ ಟಿಪ್ಪಣಿ: ನಿಸಾರ್ ಕಂಡ ಅಮೆರಿಕ ಕವಿ ಕೆ.ಎಸ್. ನಿಸಾರ್ ಅಹಮದ್ 30 ವರ್ಷಗಳ ಕೆಳಗೆ ಬರೆದ ‘ಅಮೇರಿಕ, ಅಮೇರಿಕ’ ಪದ್ಯದ ಮೊದಲ ಪಂಕ್ತಿ:

ಅಮೇರಿಕ, ಅಮೇರಿಕ ನಿನ್ನ ಸಂಸ್ಕೃತಿಯನಾಗಸಕ್ಕೆತ್ತಿದಾಗೆಲ್ಲ ನಿನ್ನವರ ಟೈ ಸೂಟು ಸ್ಕರ್ಟುಗಳನೊಂದೊಂದೆ ಕಳಚಿ, ನೆತ್ತರಿನಿಂದ ಸ್ಪ್ಯಾನಿಷರ ಜರ್ಮನರ ಪೋರ್ಚುಗೀಸಾಂಗ್ಲ ನೀಗ್ರೋಗಳ ಕಡಲ್ಗಳ್ಳ ಹಾದರಗಿತ್ತಿಯರನೆತ್ತೆತ್ತಿ ನಿನ್ನೆದುರು ನೂಕಿ ಪಕಪಕನೆ ನಗಬೇಕೆಂದಾಗ- ಲಿಂಕನ್ ಕೆನಡಿ ಕಿಂಗರ ಚಹರೆಗಳ ಕಂಡುನುಡಿ ಎಡವಿ ಕೈ ಮುಗಿದು ಬೆಪ್ಪಗಾಗುತ್ತೇನೆ.ನಿಸಾರ್ ಪದ್ಯದಲ್ಲಿರುವ ಅಮೆರಿಕದಿಂದ ದಮನಕ್ಕೊಳಗಾದವರ ಪಟ್ಟಿಗೆ ಈಚಿನ ವರ್ಷಗಳಲ್ಲಿ ಮುಸ್ಲಿಮರು ಸೇರ್ಪಡೆಯಾಗಿದ್ದಾರೆ. ವ್ಯಾಪಾರಿ ಟ್ರಂಪ್‌ಗೆ ಲಿಂಕನ್ ಅಥವಾ ಮಾರ್ಟಿನ್ ಲೂಥರ್ ಕಿಂಗ್  ಮಹತ್ವದ ಬಗ್ಗೆ ತಿಳಿದಿರುವ ಸಾಧ್ಯತೆ ಕಡಿಮೆ! ಆದರೆ ಎಲ್ಲ ಕಾಲಕ್ಕೂ ಒಂದಲ್ಲ ಒಂದು ದೇಶ ಅಥವಾ ಜನಾಂಗವನ್ನು ತುಳಿಯುತ್ತಲೋ ದ್ವೇಷಿಸುತ್ತಲೋ ಬಾಳು ನೂಕುತ್ತಿರುವ ದೇಶವನ್ನು ಹಾಡಿಹೊಗಳುತ್ತಿರುವ ಇಂಡಿಯಾದ ಮಧ್ಯಮ ವರ್ಗಕ್ಕೆ ಟ್ರಂಪ್ ತಿಕ್ಕಲು ತಮ್ಮ ವಿರುದ್ಧವೂ ತಿರುಗಬಲ್ಲದು ಎಂಬ ಅರಿವಿದ್ದರೆ ಒಳ್ಳೆಯದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.