ಬುಧವಾರ, ಏಪ್ರಿಲ್ 8, 2020
19 °C

ಆಂತರಿಕ ಭದ್ರತೆ: ವೈರಿ ಹೇಳಿದ ಬುದ್ಧಿಮಾತು

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಆಂತರಿಕ ಭದ್ರತೆ: ವೈರಿ ಹೇಳಿದ ಬುದ್ಧಿಮಾತು

ಕಳೆದ ಮೂರು ವಾರಗಳಲ್ಲಿ ನಾವು ಇದುವರೆಗೆ ಕೇಳಿರದ ಹೊಸ ಬಾಹ್ಯ ಬೆದರಿಕೆ ಮತ್ತು ಅದನ್ನು ಎದುರಿಸುವ ಕಾರ್ಯತಂತ್ರ ಕುರಿತ ಬೆಳವಣಿಗೆಗಳನ್ನು ಪ್ರಮುಖವಾಗಿ ಗಮನಿಸುತ್ತಿದ್ದೇವೆ, ಸಿಕ್ಕಿಂ ಗಡಿ ಭಾಗದಲ್ಲಿನ ದೋಕಲಾ  ಪ್ರದೇಶದ ಮೇಲಿನ ಭಾರತ ಮತ್ತು ಚೀನಾದ ನಿಯಂತ್ರಣ ಕುರಿತ ವಿವಾದವು ನಿಧಾನವಾಗಿ ದೊಡ್ಡ ಸಂಘರ್ಷದ ಸ್ವರೂಪ ಪಡೆದುಕೊಳ್ಳುತ್ತಿದೆ.

ಚೀನಾದ ದಿನಪತ್ರಿಕೆ ‘ಗ್ಲೋಬಲ್‌ ಟೈಮ್ಸ್‌’ನ ಶುಕ್ರವಾರದ ಸಂಪಾದಕೀಯವು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರನ್ನು ಸುಳ್ಳುಗಾರ್ತಿ ಎಂದು ಬಣ್ಣಿಸಿದೆ. ಜತೆಗೆ, ಗಡಿಯ ಹಲವಾರು ಮುಂಚೂಣಿ ಭಾಗದಲ್ಲಿ ಯುದ್ಧ ನಡೆಯುವ ಬೆದರಿಕೆಯನ್ನೂ ಒಡ್ಡಿದೆ. ಭಾರತವು ಗಡಿಯಲ್ಲಿ ಏನೆಲ್ಲಾ ಯುದ್ಧ ಸನ್ನದ್ಧತೆ ಮಾಡಿಕೊಂಡಿದ್ದರೂ, ಅಂತಿಮವಾಗಿ ಸೋಲು ಕಾಣಲಿದೆ. ಚೀನಾವು ಪ್ರತಿ ವರ್ಷ ಭಾರತಕ್ಕಿಂತ ನಾಲ್ಕುಪಟ್ಟುಗಳಷ್ಟು ಹೆಚ್ಚು ರಕ್ಷಣಾ ವೆಚ್ಚ ಮಾಡುತ್ತಿದೆ ಎಂದೂ ಪತ್ರಿಕೆ ಹೇಳಿಕೊಂಡಿದೆ.

ಇಂತಹ ಸಭ್ಯವಲ್ಲದ ಭಾಷೆ ಬಳಸಿ  ಒಡ್ಡುವ  ಬೆದರಿಕೆಗಳಿಂದ ಭಾರತದಲ್ಲಿ ಯಾರೊಬ್ಬರೂ ಭಯಭೀತರಾಗಿಲ್ಲ. ಸಂಪಾದಕೀಯ ಓದಿದ ನಾನಂತೂ ನಕ್ಕು ಬಿಟ್ಟೆ. ನಮ್ಮ ಟೆಲಿವಿಷನ್‌ ಚಾನೆಲ್‌ಗಳ ಯುದ್ಧಾಸಕ್ತ ಕಾರ್ಯಕ್ರಮ ನಿರೂಪಕರು ಮತ್ತು ಕೋಪೋದ್ರಿಕ್ತ ನಿವೃತ್ತ ಸೈನಿಕರು  ವ್ಯಕ್ತಪಡಿಸುವ ಆಕ್ರೋಶದಂತೆ ಈ ಪತ್ರಿಕೆಯ ವಿಶ್ಲೇಷಣೆಯೂ ನನಗೆ ತಮಾಷೆಯಾಗಿ ಕಾಣುತ್ತದೆ. ಚೀನಾದ ಮಾಧ್ಯಮಗಳಂತೆ ನಮ್ಮ ಮಾಧ್ಯಮಗಳೂ ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಭಾಸವಾಗುತ್ತದೆ.

ಆದರೆ, ನಾನು  ಹಾಗೆ ಬರೆಯಲಾರೆ. ವಾಸ್ತವ ಸಂಗತಿಯೇ ನಾನು ಇಂತಹ ನಿಲುವಿಗೆ ಬರಲು ಮುಖ್ಯ ಕಾರಣವಾಗಿದೆ.  ನಮ್ಮ ಯುದ್ಧಾಸಕ್ತ ಮಾಧ್ಯಮಗಳೆಲ್ಲ  ಖಾಸಗಿಯವರ ಒಡೆತನದಲ್ಲಿ ಇವೆ. ಅವು ವ್ಯವಸ್ಥೆಯಿಂದಲೇ ಸುಳಿವು ಪಡೆದು, ರಾಜಕೀಯ ಪ್ರೇರಿತವಾದ ಆಂತರಿಕ ಮತ್ತು ಬಾಹ್ಯ ವೈರಿಗಳ ವಿರುದ್ಧ ನಕಲಿ ಸಮರ ನಡೆಸಲು ತಮ್ಮಷ್ಟಕ್ಕೆ ತಾವೇ ಮುಂದಾಗುತ್ತಿವೆ.

ಇಂತಹ ಗೌಜು ಗದ್ದಲದ ರಾಷ್ಟ್ರೀಯತೆಯು ಅವುಗಳ ರೇಟಿಂಗ್‌ ಹೆಚ್ಚಿಸಲಿದೆ. ಜತೆಗೆ ಸರ್ಕಾರವೂ ತಮ್ಮ ಪರವಾಗಿ ಇದೆ ಎನ್ನುವ ಭಾವನೆ ಬಿಂಬಿಸುತ್ತವೆ. ಆದರೆ,  ನೀತಿ ನಿರ್ಧಾರದ ವಿಷಯಕ್ಕೆ ಬಂದರೆ ಸರ್ಕಾರಕ್ಕೆ ಅದರದ್ದೇ ಆದ ಬೇರೆಯೇ ಆದ ಆಯ್ಕೆಗಳು ಇರುತ್ತವೆ. ಇನ್ನೊಂದೆಡೆ ಚೀನಾದ ಮಾಧ್ಯಮಗಳು ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣದಲ್ಲಿ ಇವೆ.

ಚೀನಾ ಸರ್ಕಾರವುಇಂತಹ ಮಾಧ್ಯಮಗಳ ಮೂಲಕವೇ ಮಾತನಾಡುತ್ತದೆ. ಕಮ್ಯುನಿಸ್ಟ್‌ ಕ್ರಾಂತಿ ನಡೆದ ಕಾಲಘಟ್ಟದಿಂದಲೂಅಲ್ಲಿನ ಸರ್ಕಾರ ಈ ಪ್ರವೃತ್ತಿ ಮುಂದುವರಿಸಿಕೊಂಡು ಬಂದಿದೆ. ಹೀಗಾಗಿ ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗುವುದರ ಮೇಲೆ ನಾವು ನಿಗಾ ಇರಿಸಬೇಕಾಗುತ್ತದೆ. ಅಲ್ಲಿ ಪ್ರಕಟವಾಗುವ ಪ್ರತಿಯೊಂದು ಶಬ್ದ ಸರ್ಕಾರದ ಅಭಿಪ್ರಾಯವನ್ನು ಧ್ವನಿಸುತ್ತದೆ.

‘ಗ್ಲೋಬಲ್ ಟೈಮ್ಸ್‌’ನಲ್ಲಿನ ಸಂಪಾದಕೀಯವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಹಲವಾರು ಸಂಗತಿಗಳು ಸ್ಪಷ್ಟಗೊಳ್ಳುತ್ತವೆ. ದೋಕಲಾ ವಿವಾದ ನೆಪವಷ್ಟೇ. ಚೀನಾದ ಹರಾಕಿರಿ ಹಿಂದೆ ಬೇರೆಯೇ ಆದ  ಚಿಂತನೆ ಇರುವುದು ಸ್ಪಷ್ಟಗೊಳ್ಳುತ್ತದೆ. ಭಾರತವು ಏಷ್ಯಾದ ಬಲಿಷ್ಠ ದೇಶ   ಎಂದು ಹೇಳಿಕೊಳ್ಳುತ್ತಿರುವುದು ಚೀನಾಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಭಾರತದ ಇಂತಹ ನಿಲುವು ಅದಕ್ಕೆ ಇರುಸುಮುರುಸು ಉಂಟು ಮಾಡುತ್ತಿದೆ. ಚೀನಾದ ‘ಒಂದು ವಲಯ, ಒಂದು ರಸ್ತೆ (ಬಿಆರ್‌ಐ) ಯೋಜನೆಯನ್ನು ಬಹಿರಂಗವಾಗಿ ವಿರೋಧಿಸಿದ ವಿಶ್ವದ ಏಕೈಕ ದೇಶ ಭಾರತವಾಗಿರುವುದು ಅದಕ್ಕೆ  ತೀವ್ರ ಮುಖಭಂಗ ಉಂಟು ಮಾಡಿದೆ.

ಭಾರತ – ಜಪಾನ್‌ ಮತ್ತು ಅಮೆರಿಕ ಮಧ್ಯೆ ಬಾಂಧವ್ಯ ಬಲಗೊಳ್ಳುತ್ತಿರುವುದೂ ಚೀನಾಕ್ಕೆ ಕಿರಿಕಿರಿ ಉಂಟು ಮಾಡುವ ವಿದ್ಯಮಾನವಾಗಿದೆ. ಯುದ್ಧ ನಡೆದರೆ ಅಮೆರಿಕ ಮತ್ತು ಜಪಾನ್‌ ತನ್ನ ನೆರವಿಗೆ ಬರಲಿವೆ ಎಂದು ಭಾರತ ಭಾವಿಸಿರುವುದು ಬರೀ ಭ್ರಾಂತಿಯಾಗಿದೆ ಎನ್ನುವುದು  ಚೀನಾದ ಮಾಧ್ಯಮಗಳ ವಿಶ್ಲೇಷಣೆಯಾಗಿದೆ. ಚೀನಾದ ವಿರುದ್ಧ ಸಮಬಲದ ಹೋರಾಟ ನಡೆಸುವ ಸೇನಾ ಸಾಮರ್ಥ್ಯ ಭಾರತಕ್ಕೆ ಇಲ್ಲವೇ ಇಲ್ಲ ಎಂದೂ ಪತ್ರಿಕೆ ಅಭಿಪ್ರಾಯಪಟ್ಟಿದೆ.

ಚೀನಾದ ಸರ್ಕಾರಿ ಮಾಧ್ಯಮಗಳು ನೀಡಿದ ಈ ರಾಜತಾಂತ್ರಿಕ ಸ್ವರೂಪದ ಸಂದೇಶದಲ್ಲಿ ಶಬ್ದಗಳನ್ನು ತುಂಬ ಜಾಣತನದಿಂದ ಪೋಣಿಸಲಾಗಿದೆ. ಅದರಲ್ಲಿಯೂ ಭಾರತದಲ್ಲಿನ ಆಂತರಿಕ ಸಂಘರ್ಷದ ಬಗ್ಗೆಯೂ ಉಲ್ಲೇಖಿಸಿರುವುದು ಇದಕ್ಕೊಂದು ನಿದರ್ಶನವಾಗಿದೆ. ಭಾರತದ ಬಗೆಗಿನ ತನ್ನ ಅಸಮಾಧಾನ ವ್ಯಕ್ತಪಡಿಸುವುದರ ಜತೆಗೆ, ಭಾರತ ತನ್ನ ಆಂತರಿಕ ತುಮುಲದ ಬಗ್ಗೆಯೂ ಎಚ್ಚರದಿಂದ ಇರಬೇಕು ಎಂದು ಬುದ್ಧಿವಾದವನ್ನೂ ಹೇಳಿದೆ.

ಇದನ್ನೆಲ್ಲ ನೋಡಿದರೆ,  ವಾಸ್ತವ ಗಡಿ ನಿಯಂತ್ರಣ ರೇಖೆಗುಂಟ (ಎಲ್‌ಒಸಿ) ಸಂಘರ್ಷ ಮುಂದುವರೆಸಲು ಮತ್ತು ಕಾಶ್ಮೀರದಲ್ಲಿನ ಹಿಂಸಾಕೃತ್ಯ ಹೆಚ್ಚಿಸಲು ಪಾಕಿಸ್ತಾನಕ್ಕೆ ಕುಮ್ಮಕ್ಕು ನೀಡುವ ಉದ್ದೇಶವೂ  ಚೀನಾಕ್ಕೆ ಇದೆಯೇ ಎನ್ನುವ ಅನುಮಾನ ಮೂಡುತ್ತದೆ. ಇಂತಹ ಕೆಲ ಹೊಸ ಬೆಳವಣಿಗೆಗಳು ಈಗಾಗಲೇ ಆರಂಭಗೊಂಡಿರುವುದೂ ಭಾರತದ ಅನುಭವಕ್ಕೆ ಬರುತ್ತಿದೆ.

ಭಾರತದ ಗಡಿಯಲ್ಲಿ ಅದರಲ್ಲೂ ವಿಶೇಷವಾಗಿ ನೇಪಾಳಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಹೊಸದಾಗಿ ತಳಮಳ ಸೃಷ್ಟಿಸುವ ಇರಾದೆಯೂ ಚೀನಾಕ್ಕೆ ಇದೆಯೇ ಎನ್ನುವ ಅನುಮಾನ ಮೂಡಿಸುತ್ತದೆ.

ಮಾವೊವಾದಿಗಳ ಪ್ರಭಾವ ಇರುವ ರಾಜ್ಯಗಳು, ಈಶಾನ್ಯ ಭಾರತ ಅದರಲ್ಲೂ ವಿಶೇಷವಾಗಿ ನಾಗಾಲ್ಯಾಂಡ್‌, ಅರುಣಾಚಲ  ಮತ್ತು ಆಸ್ಸಾಂನಲ್ಲಿ ಬಂಡುಕೋರರ ಚಟುವಟಿಕೆಗಳನ್ನು ಹೆಚ್ಚಿಸುವುದು ಚೀನಾದ ಉದ್ದೇಶವಾಗಿರುವಂತಿದೆ.

ಅದು ನಿಜವೇ ಆಗಿದ್ದರೆ, ಭಾರತ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು, ತನ್ನಿಂದಾಗುತ್ತಿರುವ ಲೋಪಗಳನ್ನು ಸರಿಪಡಿಸಿಕೊಳ್ಳಲು ತಕ್ಷಣಕ್ಕೆ ಮುಂದಾಬೇಕಾಗಿದೆ. ಸಿಕ್ಕಿಂ  ಬಳಿಯ ಚೀನಾ ಗಡಿಯಲ್ಲಿ ಸದ್ಯಕ್ಕೆ ಉದ್ಭವಿಸಿರುವ ಉದ್ವಿಗ್ನ ಪ್ರದೇಶದಿಂದ ಹೆಲಿಕಾಪ್ಟರ್‌ನಲ್ಲಿ ಕೆಲವೇ ನಿಮಿಷಗಳ ದೂರದಲ್ಲಿ ಇರುವ ದಾರ್ಜಿಲಿಂಗ್‌ನಲ್ಲಿ  ಜನಾಂಗೀಯ ಮತ್ತು ಭಾಷಾ ದುರಭಿಮಾನದ ಹಿಂಸಾಚಾರವು ಕೆಲ ವಾರಗಳಿಂದ ನಡೆಯುತ್ತಿರುವುದು ಹೊಸ ಬೆಳವಣಿಗೆಯಾಗಿದೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವ ದಾರ್ಜಿಲಿಂಗ್‌ನಲ್ಲಿ ಕೋಮು ದಳ್ಳುರಿ ಕಂಡು ಬಂದಿದೆ. ಅಲ್ಲಿನ ಪರಿಸ್ಥಿತಿಯನ್ನು ವಾಸ್ತವತೆಗಿಂತ ಹೆಚ್ಚು ಉತ್ಪ್ರೇಕ್ಷೆಗೊಳಿಸಲಾಗಿದೆ. ಆದರೆ, ಇಂತಹ ಪರಿಸ್ಥಿತಿಯು ಸುಲಭವಾಗಿಯೇ ನಿಯಂತ್ರಣ ಮೀರಿ ಹೋಗಿ ಬಿಡುತ್ತದೆ. ದಾರ್ಜಿಲಿಂಗ್ ಸೇರಿದಂತೆ ರಾಜ್ಯದ ಇತರ ಸೂಕ್ಷ್ಮ ಜಿಲ್ಲೆಗಳಲ್ಲಿ ಇತ್ತೀಚಿಗೆ ಹಿಂಸೆ ತಹಬಂದಿಗೆ ತರಲು  ಸೇನೆ ಕರೆಸಲಾಗಿತ್ತು. ಇದು  ಕಾನೂನು ಸುವ್ಯವಸ್ಥೆ ನಿಯಂತ್ರಣದ ಗಂಭೀರತೆಗೆ ನಿದರ್ಶನವಾಗಿದೆ.

ಇಂತಹ ಅಹಿತಕರ ಘಟನೆಗಳ ಮಧ್ಯೆಯೇ, ನಾಗಾಲ್ಯಾಂಡ್‌ನಲ್ಲಿ ಸರ್ಕಾರ ಪತನಗೊಂಡಿದೆ. ಬಿಜೆಪಿ ಸ್ನೇಹಿಯಾದ ಹೊಸ ಸರ್ಕಾರವನ್ನು ಗವರ್ನರ್‌ ನೆರವಿನಿಂದ  ಅಸ್ತಿತ್ವಕ್ಕೆ ತರಲಾಗಿದೆ.  ಇದು ಆದಿವಾಸಿ ಬಣಗಳ ನಡುವಣ ಅಧಿಕಾರದ ಸಮತೋಲನವನ್ನು ಏರುಪೇರು ಮಾಡಿದೆ. ಈ ವಿದ್ಯಮಾನವು, ಸದ್ಯಕ್ಕೆ ನಡೆಯುತ್ತಿರುವ ಸಂಧಾನ ಮಾತುಕತೆಗಳನ್ನು ಇನ್ನಷ್ಟು ಅಸ್ಥಿರಗೊಳಿಸಲಿದೆ. ಜತೆಗೆ, ಕದನ ವಿರಾಮ ವಿರೋಧಿ ಬಣಗಳ ಕೈಮೇಲಾಗಲಿದೆ.

ಈ ಪ್ರದೇಶದಲ್ಲಿ ಇದೇ ವಾರದಲ್ಲಿ ಇನ್ನೊಂದು ಹೊಸ ಬಣವೂ ಅಸ್ತಿತ್ವಕ್ಕೆ ಬಂದಿರುವುದು ಕಳವಳಕಾರಿ ಸಂಗತಿಯಾಗಿದೆ. ತ್ರಿಪುರಾದ ಆದಿವಾಸಿಗಳ ಬಣವೊಂದು ಪ್ರತ್ಯೇಕ ರಾಜ್ಯ ಹಕ್ಕೊತ್ತಾಯದ ಬೇಡಿಕೆಮುಂದಿಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಿತ್ತು. ದೋಕಲಾದಲ್ಲಿ ಚೀನಾ ಸೇನಾ ಪಡೆಯ ಉಪಸ್ಥಿತಿಯು ಎರಡೂ ದೇಶಗಳ ನಡುವಣ ಬಾಂಧವ್ಯದಲ್ಲಿ ವಿವಾದದ ಕೇಂದ್ರಬಿಂದುವಾಗಿರುವುದರ ಜತೆಗೆ ಅದರಿಂದ  ಸಿಲಿಗುರಿ ಕಾರಿಡಾರ್‌ಗೆ ಬೆದರಿಕೆಯೂ ಹೆಚ್ಚಿದೆ.  ಇದರಿಂದ, ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಈ ಮಹತ್ವದ ಹೆದ್ದಾರಿಯ ರಾಷ್ಟ್ರೀಯ ಉದ್ದೇಶ ಸಾಧನೆಗೆ ಧಕ್ಕೆ ಒದಗಲಿದೆ.

ಮಾವೊವಾದಿಗಳ ಮೇಲೆ ಚೀನಾ ಪ್ರಭಾವ ಬೀರಬಹುದಾಗಿದ್ದರೂ, ಅವರೀಗ ಸಾಕಷ್ಟು ದುರ್ಬಲರಾಗಿದ್ದಾರೆ. ಪಾಕಿಸ್ತಾನ ಪರ ಪ್ರತ್ಯೇಕತಾವಾದಿಗಳು ಕಾಶ್ಮೀರದಲ್ಲಿ ಹಿಂಸಾಚಾರಗಳನ್ನು ಮುಂದು ವರೆಸಬಹುದು. ಆದರೆ, ಚೀನಾದ ದೃಷ್ಟಿಕೋನದಲ್ಲಿ ಇವು ಭಾರತ ಎದುರಿಸುತ್ತಿರುವ ಪ್ರಮುಖ ಆಂತರಿಕ ಸಮಸ್ಯೆಗಳಾಗಿಲ್ಲ. ದೋಕಲಾಗೆ ಹತ್ತಿರದಲ್ಲಿಯೇ  ಇರುವ   ಪಶ್ಚಿಮ ಬಂಗಾಳದ ಜಿಲ್ಲೆಗಳು, ಸಿಲಿಗುರಿ ಕಾರಿಡಾರ್‌ ಮತ್ತು ಈಶಾನ್ಯ ಭಾರತದ ಗಡಿ ರಾಜ್ಯಗಳು  ಭಾರತದ ತಲೆನೋವು ಹೆಚ್ಚಿಸುವ ಹೊಸ ಆಂತರಿಕ ವಿದ್ಯಮಾನಗಳಾಗಿವೆ.

ಭಾರತವು ತನ್ನ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಒಡ್ಡಿರುವ ಆಂತರಿಕ ವಿದ್ಯಮಾನಗಳನ್ನು ಹತ್ತಿಕ್ಕಲು ಆದ್ಯತೆ ನೀಡುವುದೇ ಅಥವಾ ಗಡಿಯಲ್ಲಿ ವೈರಿ ಪಡೆ ಸೋಲಿಸಲು ತನ್ನೆಲ್ಲ ಬಲ ಬಳಸಲಿದೆಯೇ ಎನ್ನುವುದನ್ನು ಚೀನಾ ನಮಗೆ ನೆನಪಿಸಿಕೊಟ್ಟಿದೆ.

ಕಾಶ್ಮೀರ ಮತ್ತು ಎಲ್‌ಒಸಿಯಲ್ಲಿ  ಶಾಂತಿ ನೆಲೆಸುವಂತೆ ಮಾಡಲು ಭಾರತಕ್ಕೆ ಸೀಮಿತ ಅವಕಾಶಗಳು ಇವೆ. ಪಾಕಿಸ್ತಾನದ ಮುಂಚೂಣಿ ಪಡೆಗಳನ್ನು ಭಾರತದ ಸೇನಾಪಡೆಗಳು ನಿಯಂತ್ರಿಸಬಹುದು. ಕಿರುಕುಳ ನೀಡುತ್ತಿರುವ ಆದಿವಾಸಿ ಮಾವೊವಾದಿಗಳನ್ನು ತಕ್ಷಣಕ್ಕೆ ನಿವಾರಿಸಲು ಸಾಧ್ಯವಾಗಲಿಕ್ಕಿಲ್ಲ. ಆದರೆ, ಸದ್ಯಕ್ಕೆ ಕಂಡುಬಂದಿರುವ ಬಹು ಸ್ವರೂಪದ ಬಿಕ್ಕಟ್ಟಿನಿಂದಾಗಿ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿನ ಹೊಸ ವಿದ್ಯಮಾನಗಳು ಎಲ್ಲರ ಗಮನವನ್ನಂತೂ ಸೆಳೆಯುತ್ತಿವೆ.

ಈಶಾನ್ಯ ಭಾರತದಲ್ಲಿ ಪರಂಪರಾಗತವಾಗಿ ಅಸ್ತಿತ್ವವನ್ನೇ ಕಾಣದ ಬಿಜೆಪಿಯು ರಾಜಕೀಯವಾಗಿ ಇಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳಲು ನಿರಂತರವಾಗಿ ನಡೆಸುತ್ತಿರುವ  ಪ್ರಯತ್ನಗಳಿಂದಲೇ ಈ ಪ್ರದೇಶದಲ್ಲಿನ ಅರಾಜಕತೆ ಇನ್ನಷ್ಟು ಹೆಚ್ಚುತ್ತಿದೆ.

ಬಿಜೆಪಿಯು ಈ ಪ್ರದೇಶದಲ್ಲಿ ತನ್ನ ರಾಜಕೀಯ ಪ್ರಭಾವ ಹೆಚ್ಚಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇಂತಹ ಪ್ರಯತ್ನಗಳಿಗೆ ಅದು ಕಡಿವಾಣ ಹಾಕಬೇಕಾದ ಅಗತ್ಯ ಸದ್ಯಕ್ಕೆ ಉದ್ಭವಿಸಿದೆ. ಪ್ರತಿಯೊಬ್ಬರ ಬದುಕಿನಲ್ಲಿ ರಾಜಕಾರಣದ ಪ್ರಭಾವ ಇದ್ದೇ ಇರುತ್ತದೆ. ಅಧಿಕಾರ ಮತ್ತು ಸಾಮರ್ಥ್ಯ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಶಾಂತಿಗೆ ಕಾರಣವಾಗಿರುವ ಇಂತಹ ಆಂತರಿಕ ವಿದ್ಯಮಾನಗಳಿಗೆ ಕಡಿವಾಣ ಹಾಕಲು ಮನಸ್ಸು ಮಾಡಬೇಕಾಗಿದೆ.

ನಾಗಾಲ್ಯಾಂಡ್‌ನಲ್ಲಿನ ರಾಜಕೀಯ ಅಸ್ಥಿರತೆ, ದಾರ್ಜಿಲಿಂಗ್‌ನಲ್ಲಿನ ಹಿಂಸಾತ್ಮಕ ಚಳವಳಿ ಮತ್ತು ಈಶಾನ್ಯ ರಾಜ್ಯಗಳ ಪೈಕಿ ಇದುವರೆಗೆ ಶಾಂತಿಯ ನೆಲೆವೀಡಾಗಿದ್ದ ತ್ರಿಪುರಾದಲ್ಲಿ ಕಂಡು ಬಂದಿರುವ ಬಂಡಾಯದಂತಹ ಆಘಾತಕಾರಿ ವಿದ್ಯಮಾನದಲ್ಲಿ  ಬಿಜೆಪಿಯ ರಾಜಕೀಯ ಕೈವಾಡ ಇದೆ.

ನರೇಂದ್ರ ಮೋದಿ ಅವರು ಸದ್ಯದ ಮಟ್ಟಿಗಾದರೂ, ಈಶಾನ್ಯ ರಾಜ್ಯಗಳ ರಾಜಕೀಯದಲ್ಲಿ ಮಧ್ಯಪ್ರವೇಶಿಸುವ  ಗವರ್ನರ್‌ಗಳನ್ನು ವಾಪಸ್‌ ಕರೆಯಿಸಿಕೊಳ್ಳಬೇಕು. ವಿಶೇಷ ಕಾರ್ಯಪಡೆಗಳಂತೆ ಕಾರ್ಯನಿರ್ವಹಿಸುವ ಆರೆಸ್ಸೆಸ್‌  ಸೇನಾನಿಗಳ ಉತ್ಸಾಹಕ್ಕೆ ಕಡಿವಾಣ ಹಾಕಬೇಕು.

ಗಡಿಯ ಬಾಗಿಲಲ್ಲಿ ಬಲಾಢ್ಯ ವೈರಿ ಬಂದು ನಿಂತುಕದ ತಟ್ಟುತ್ತಿದ್ದಾನೆ. ಭಾರತೀಯರು ತಾವೇ ಸೃಷ್ಟಿಸಿಕೊಂಡಿರುವ ಹೊಸ ಆಂತರಿಕ ಬಿಕ್ಕಟ್ಟುಗಳ ದುಷ್ಪರಿಣಾಮಗಳ ಬಗ್ಗೆ ವೈರಿಯು ಎಚ್ಚರಿಕೆಯ ಮಾತನ್ನೂ ಆಡುತ್ತಿದ್ದಾನೆ. ಶತ್ರುವಿನ ಜಂಬದ ಇಂತಹ ಹೇಳಿಕೆಯ ಪ್ರಯೋಜನ ಪಡೆದುಕೊಂಡು ಕೇಂದ್ರ ಸರ್ಕಾರವು ಮೊದಲು ಆಂತರಿಕ ಬಿಕ್ಕಟ್ಟುಗಳನ್ನು ಆದ್ಯತೆ ಮೇರೆಗೆ ಬಗೆಹರಿಸಿ ಕೊಳ್ಳಬೇಕಾಗಿದೆ. ಆನಂತರವಷ್ಟೇ ಈಶಾನ್ಯ ಭಾರತದಲ್ಲಿ ಪಕ್ಷದ ಪ್ರಾಬಲ್ಯ ಸ್ಥಾಪಿಸಲು ಬಿಜೆಪಿಯು ತನ್ನ ರಾಜಕೀಯ ಕಾರ್ಯತಂತ್ರವನ್ನು ಆರಂಭಿಸಲು ಯಾರ ಅಭ್ಯಂತರವೂ ಇರುವುದಿಲ್ಲ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)