ಶನಿವಾರ, ಮೇ 28, 2022
30 °C

ಆತ್ಮವೇ ಇಲ್ಲದವರ ಛದ್ಮವೇಷಗಳ ವಂಚನೆಯ ಆಟ

ಟಿ.ಕೆ.ತ್ಯಾಗರಾಜ್ Updated:

ಅಕ್ಷರ ಗಾತ್ರ : | |

ಆತ್ಮವೇ ಇಲ್ಲದವರ ಛದ್ಮವೇಷಗಳ ವಂಚನೆಯ ಆಟ

ಸಂಘ ಪರಿವಾರದ ಆಟಗಳಿಂದಾಗಿ ಅನಕ್ಷರಸ್ಥರು ಕೋಮುವಾದವನ್ನೇ ಧರ್ಮ ಎಂದು ನಂಬಿ ಅದರಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳನ್ನು ಇತ್ತೀಚಿನ ವರ್ಷಗಳಲ್ಲಿ ನೋಡುತ್ತಲೇ ಇದ್ದೇವೆ. ನಿಜವಾದ ಧರ್ಮದಿಂದ ದೂರವೇ ಇರುವ ಈ ಮಂದಿ ತೋರಿಕೆಯ ವಿಧಿ ವಿಧಾನಗಳಿಗೆ ನೀಡುವ ಮಹತ್ವ ಧರ್ಮದ ಆಶಯಗಳನ್ನು ಬದುಕಿನಲ್ಲಿ ಆಚರಿಸುವುದರಲ್ಲಿ ಗೋಚರಿಸುತ್ತಲೇ ಇಲ್ಲ. ಹೀಗಾಗಿ ಇಂಥವರಿಗೆ ಮಹಾತ್ಮ ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್ ಮೊದಲಾದವರ ಭಾವಚಿತ್ರಗಳು ಬೇಕೇ ಹೊರತು ಅವರ ಚಿಂತನೆಗಳಲ್ಲ. ನಿಜವಾದ ಧರ್ಮನಿಷ್ಠರು ಮಹಾತ್ಮ ಗಾಂಧಿಯಂಥವರಲ್ಲಿ ಇರುತ್ತಾರೆ, ಬಾಬ್ರಿ ಮಸೀದಿ ಕೆಡವಿದಾಗ ಅದನ್ನು ಪ್ರತಿಭಟಿಸಿ ನಡೆದ ಧರಣಿಯಲ್ಲಿ ಪಾಲ್ಗೊಂಡ ಪು.ತಿ.ನ. ಥರದವರಲ್ಲಿ ಇರುತ್ತಾರೆ. ಧಾರ್ಮಿಕ ವ್ಯಕ್ತಿಗಳು ಮತ್ತು ಕೋಮುವಾದಿಗಳು ಬೇರೆ ಬೇರೆಯೇ ಆಗಿರುತ್ತಾರೆ.

ಈ ಮಾತುಗಳನ್ನು ನಾನು ಹೇಳುವುದಕ್ಕೆ ತಕ್ಷಣದ ಕಾರಣಗಳೂ ಇವೆ. ಅಂಬೇಡ್ಕರ್ ಜಯಂತಿಯ ದಿನ ಅವರ ಭಾವಚಿತ್ರಕ್ಕೆ ಬಿಜೆಪಿ ಮುಖಂಡರು ಚಿತ್ತಶುದ್ಧಿ ಇಲ್ಲದ ಪುಷ್ಪ ನಮನ, ಒಣ ಭಾಷಣಗಳ ಪ್ರವಾಹವನ್ನೇ ಹರಿಸಿದ್ದು, ಮೊನ್ನೆ ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಿಜೆಪಿ ಸಂಗಡಿಗರು ದೇಶದಾದ್ಯಂತ ನಡೆಸಿದ ಉಪವಾಸ ಮುಷ್ಕರ ನೋಡಿ ಇಷ್ಟೆಲ್ಲ ಹೇಳಬೇಕಾಯಿತು. ಅಂಬೇಡ್ಕರ್ ಚಿಂತನೆಗಳಿಗೂ ಸಂಘ ಪರಿವಾರದ ವಿಚಾರಗಳಿಗೂ ಅಜಗಜಾಂತರ ಇರುವಾಗ ಕೈ ಮುಗಿದು ಹೂ ಎಸೆದು ಬುರುಡೆ ಬಿಡುವುದು ಕೇವಲ ಸ್ವಾರ್ಥಕ್ಕಲ್ಲದೇ ಇನ್ನೇನಲ್ಲ. ಹಾಗೇ ಉಪವಾಸ ಸತ್ಯಾಗ್ರಹ.

ಉಪವಾಸ ಎನ್ನುವುದು ಮಹಾತ್ಮ ಗಾಂಧಿ ಅವರ ಪ್ರತಿಭಟನೆಯ ಮಹಾನ್ ಅಸ್ತ್ರ. ಮೊದ ಮೊದಲು ಖಾಸಗಿ ಬದುಕಿನಲ್ಲಿ ಆತ್ಮಸಂಯಮಕ್ಕೆ ಅರ್ಥಾತ್ ಸ್ವಯಂ ನಿಯಂತ್ರಣ ಸಾಧಿಸುವುದಕ್ಕೆ ಅವರು ತಪಸ್ಸಿನಂತೆ ನಡೆಸಿದ ಪ್ರಕ್ರಿಯೆ. ಕೇವಲ ಒಂದೆರಡು ದಿನಗಳಲ್ಲಿ ಉಪವಾಸ ಎನ್ನುವುದನ್ನು ಅವರು ರೂಢಿಸಿಕೊಂಡಿರಲಿಲ್ಲ. ಉಪವಾಸ ಎನ್ನುವುದು ಕೇವಲ ದೇಹವನ್ನಷ್ಟೇ ನಿಯಂತ್ರಣದಲ್ಲಿಡುವ ಕ್ರಿಯೆಯಲ್ಲ, ಅದು ಮಾನಸಿಕ ಉಪವಾಸವನ್ನು ಜತೆಯಲ್ಲೇ ಕೊಂಡೊಯ್ಯದಿದ್ದರೆ ವ್ಯರ್ಥ ಎನ್ನುವುದು ಗಾಂಧಿಯ ನಂಬಿಕೆಯಾಗಿತ್ತು. ಮಾನಸಿಕ ಸಹಭಾಗಿತ್ವ ಇಲ್ಲದ ತೋರಿಕೆಯ ಉಪವಾಸ ಕೇವಲ ಕಪಟತನ ಮತ್ತು ಅನರ್ಥದಲ್ಲಿ ಕೊನೆಗೊಳ್ಳುತ್ತದೆ ಎಂದು ಗಾಂಧಿ ತಮ್ಮ ಆತ್ಮಕತೆಯಲ್ಲಿ ಹೇಳಿದ್ದಾರೆ. ಅವರು ಕೈಗೊಂಡ ಉಪವಾಸಗಳೆಲ್ಲ ಪ್ರಾಯಶ್ಚಿತ್ತ, ದೇಹದಂಡನೆ, ಹಿಂದೂ– ಮುಸ್ಲಿಂ ಏಕತೆ, ಅಸ್ಪೃಶ್ಯತೆ ವಿರೋಧಿ, ಶೋಷಿತ ಕಾರ್ಮಿಕ ಹೋರಾಟಕ್ಕೆ ಬೆಂಬಲ, ಬ್ರಿಟಿಷ್ ಸರ್ಕಾರದ ಹಿಂಸಾಚಾರ ವಿರೋಧಿ ನಿಲುವುಗಳನ್ನು ಹೊಂದಿತ್ತೇ ಹೊರತು ಸ್ವಾರ್ಥದ ಕಳಂಕ ಎಳ್ಳಷ್ಟೂ ಇರಲಿಲ್ಲ.

ಭಾರತದ ಏಕತೆ ಮತ್ತು ಕೋಮು ಸಾಮರಸ್ಯದ ಆಶಯದೊಂದಿಗೆ ಅದೆಷ್ಟೋ ಸಲ ಉಪವಾಸ ಮಾಡಿದ ಮಹಾತ್ಮಾ ಗಾಂಧಿ, ಭಾರತ ಸ್ವಾತಂತ್ರ್ಯ ಪಡೆದ ದಿನವೂ ಆ ಸಂಭ್ರಮದಲ್ಲಿ ಪಾಲ್ಗೊಳ್ಳದೆ ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತ) ಉಪವಾಸ ಮತ್ತು ಪ್ರಾರ್ಥನೆಯಲ್ಲಿ ನಿರತರಾಗಿದ್ದರು. ಆದರೆ ಮೋದಿ ಮತ್ತು ಸಂಗಡಿಗರು ಇತ್ತೀಚೆಗೆ ನಡೆಸಿದ ಉಪವಾಸಕ್ಕೆ ಸಂಸತ್ ಅಧಿವೇಶನದಲ್ಲಿ ಕಲಾಪಕ್ಕೆ ಕಾಂಗ್ರೆಸ್ ಪಕ್ಷ ಅಡ್ಡಿಪಡಿಸುತ್ತಿದೆ ಎನ್ನುವ ಚಿಲ್ಲರೆ ನೆಪ ಇತ್ತು. ಮೋದಿಗೆ ಇದು ಹೊಸತೇನಲ್ಲ. 2002ರ ಗೋಧ್ರಾ ನರಮೇಧವಾದ ಒಂಬತ್ತು ವರ್ಷಗಳ ನಂತರ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಕೂಡಾ ‘ಶಾಂತಿ ಮತ್ತು ಕೋಮು ಸಾಮರಸ್ಯ’ಕ್ಕಾಗಿ ಉಪವಾಸ ಮಾಡಿ ಸುದ್ದಿಯಾಗಿದ್ದರು. ಮಹಾತ್ಮನ ಉಪವಾಸಕ್ಕಿದ್ದ ಶಕ್ತಿ ಮೋದಿಯ ತೋರಿಕೆ ಉಪವಾಸಕ್ಕಿರಲಿಲ್ಲ ಎನ್ನುವುದು ಬೇರೆಯೇ ಮಾತು. ಜಮ್ಮು ಕಾಶ್ಮೀರದಲ್ಲಿ ಎಂಟು ವರ್ಷದ ಮುಸ್ಲಿಂ ಬಾಲಕಿಯನ್ನು ದೇವಾಲಯವೊಂದರಲ್ಲಿ ಕೂಡಿಟ್ಟು ಅತ್ಯಾಚಾರ ಮಾಡಿ ಕೊಂದು ಹಾಕಿದ ಪ್ರಕರಣ, ಉತ್ತರಪ್ರದೇಶದಲ್ಲಿ ತಮ್ಮದೇ ಪಕ್ಷಕ್ಕೆ ಸೇರಿದ ಶಾಸಕನ ವಿರುದ್ಧದ ಅತ್ಯಾಚಾರ ಆರೋಪ, ದೇಶದ ವಿವಿಧೆಡೆಗಳಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ, ದಲಿತರಿಗೆ ಅನ್ಯಾಯ ಎಸಗುವಂಥ ಕಾಯ್ದೆಗಳು ಸುದ್ದಿಯಾದಾಗ, ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನೇ ಬದಲಿಸುವ ಹೇಳಿಕೆ ತಮ್ಮ ಸರ್ಕಾರದ ಸಚಿವರಿಂದಲೇ ಹೊರಟಾಗ ನಡೆಸದ ಉಪವಾಸ ಕೇವಲ ಕಾಂಗ್ರೆಸ್ ವಿರೋಧಕ್ಕಾಗಿ ನಡೆಸಿದ್ದು ನಿಜಕ್ಕೂ ಅವರ ಉದ್ದೇಶದ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತಿದೆ.

ಹಾಗೆ ನೋಡಿದರೆ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಒಂದೇ ನೆಲದಲ್ಲಿ ಜನಿಸಿದವರೆಂಬ ಸಾಮ್ಯತೆ ಬಿಟ್ಟರೆ ಅವರಿಬ್ಬರದು ತದ್ವಿರುದ್ಧ ವ್ಯಕ್ತಿತ್ವ. ಅರೆಬೆತ್ತಲೆ ಫಕೀರನೆಂದು ವಿನ್‌ಸ್ಟನ್ ಚರ್ಚಿಲ್ ಎಂಬ ಮಾಜಿ ಬ್ರಿಟಿಷ್ ಪ್ರಧಾನಿಯಿಂದ ಕರೆಸಿಕೊಂಡಿದ್ದ ಗಾಂಧಿ ಒಂದೆಡೆಯಾದರೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದಾಗ ಮೂರು ಬಾರಿ ದಿರಿಸು ಬದಲಾಯಿಸಿದ್ದಷ್ಟೇ ಅಲ್ಲದೇ ಹತ್ತು ಲಕ್ಷ ರೂಪಾಯಿಯ ಸೂಟು (ಮೋದಿ ವಿವಿಧ ಕಾರ್ಯಕ್ರಮಗಳು ಮತ್ತು ವಿದೇಶ ಪ್ರವಾಸಗಳಲ್ಲಿ ತಮ್ಮ ಉಡುಪಿಗೆ ಕೊಡುವ ಮಹತ್ವ ಎಲ್ಲರೂ ನೋಡಿರುತ್ತೀರಿ) ಧರಿಸಿದ್ದ ಮೋದಿ ಇನ್ನೊಂದೆಡೆ ನಿಲ್ಲುತ್ತಾರೆ. ಗಾಂಧಿ ಸರಳತೆಯ ಸಂಕೇತವಾಗಿದ್ದರೆ, ಮೋದಿ ಆಡಂಬರ ಮತ್ತು ಒಣ ಪ್ರದರ್ಶನದ ಪ್ರತೀಕವಾಗಿದ್ದಾರೆ.

1931ರಲ್ಲಿ ಲಂಡನ್‍ನಲ್ಲಿ ಭಾರತದ ಭವಿಷ್ಯ ಕುರಿತು ನಡೆದ ದುಂಡುಮೇಜಿನ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಮಹಾತ್ಮ ಗಾಂಧಿ, ದೊರೆ ಐದನೇ ಜಾರ್ಜ್ ಆಹ್ವಾನದ ಮೇರೆ ಅರಮನೆಗೆ ಭೇಟಿ ನೀಡಿದ್ದರು. ಇಂಗ್ಲಿಷ್ ಸಂಸ್ಕೃತಿಗೆ ತಕ್ಕಂಥ ಉಡುಪು ಧರಿಸದೆ ಕೇವಲ ಸಾಧಾರಣ ಧೋತಿ ಧರಿಸಿ, ಕಡಿಮೆ ಬೆಲೆಯ ಶಾಲು ಹೊದ್ದಿದ್ದ ಗಾಂಧಿಯ ಕಾಲಲ್ಲಿದ್ದುದೂ ಅತ್ಯಂತ ಸಾಮಾನ್ಯ ಚಪ್ಪಲಿ. ಅರಮನೆಯ ವೈಭೋಗ ಮತ್ತು ಗಾಂಧಿಯ ಉಡುಪು ಒಂದಕ್ಕೊಂದು ಹೊಂದಿಕೊಳ್ಳುತ್ತಿರಲಿಲ್ಲ. ಗಾಂಧಿ ಸರಳತೆಯನ್ನು ಪ್ರತಿನಿಧಿಸುತ್ತಿದ್ದರೆ ಅಲ್ಲಿನ ಅರಮನೆ ಸರ್ವಾಧಿಕಾರ ಮತ್ತು ದಮನದ ಶಕ್ತಿಯ ಪ್ರತೀಕವಾದ ದುರಹಂಕಾರವನ್ನು ಪ್ರತಿನಿಧಿಸುತ್ತಿತ್ತು. ಅಲ್ಲಿ ಗಾಂಧಿಯ ಉಡುಪಿನ ಸರಳತೆ ಮತ್ತು ವಿನಮ್ರತೆ ಕುರಿತು ಪತ್ರಕರ್ತರು ಗೇಲಿ ಮಾಡುತ್ತಾ ಕೇಳಿದ ಪ್ರಶ್ನೆಗೆ ಒಂದಿಷ್ಟೂ ಕೋಪಿಸಿಕೊಳ್ಳದೆ, ‘ನಮ್ಮಿಬ್ಬರಿಗೂ ಆಗುವಷ್ಟು ಉಡುಪನ್ನು ದೊರೆಯೇ ಧರಿಸಿದ್ದಾರಲ್ಲಾ?’ ಎಂದು ಮರು ಪ್ರಶ್ನೆ ಹಾಕಿ ನಕ್ಕಿದ್ದರು. ಯಾವುದೇ ನಾಯಕನ ಶಕ್ತಿ ಅಡಗಿರುವುದು ಆತನ ಉಡುಪಿನಲ್ಲಿ ಅಲ್ಲ. ಅದು ಆತನ ಮಾತು, ಮೌನ, ನಿಲುವು, ಪ್ರಾಮಾಣಿಕತೆ, ಕ್ರಿಯಾಶೀಲತೆ, ದಕ್ಷತೆ ಮತ್ತು ಕೃತ್ರಿಮವಲ್ಲದ ನಡವಳಿಕೆಯಲ್ಲಿ ಅಡಗಿದೆ. ಮಹಾತ್ಮಾ ಗಾಂಧಿ ಅವರ ಸರಳತೆಯಲ್ಲೇ ಅವರ ಗೆಲುವು ಕೂಡಾ ಅಡಗಿದೆ ಎನ್ನುವುದನ್ನು ಮೋದಿಯಂಥವರು ಅರ್ಥ ಮಾಡಿಕೊಳ್ಳಬೇಕು.

ಮಾತಿನಷ್ಟೇ ಮೌನಕ್ಕೂ ಬೆಲೆ ನೀಡುತ್ತಿದ್ದರು ಗಾಂಧಿ. ಒಮ್ಮೆ ಲಾಹೋರ್ ಕೇಂದ್ರ ಕಾರಾಗೃಹದಲ್ಲಿ ಭಾರತೀಯರಿಗೆ ಆಹಾರ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆಮರಣಾಂತ ಉಪವಾಸ ಆರಂಭಿಸಿದ ಯುವ ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ್ ದಾಸ್, 63 ದಿನಗಳ ಉಪವಾಸದ ನಂತರ 1929ರ ಸೆಪ್ಟೆಂಬರ್ 13 ರಂದು ಕೊನೆಯುಸಿರೆಳೆಯುತ್ತಾರೆ. ಈ ಸಂದರ್ಭದಲ್ಲಿ ಗಾಂಧೀಜಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಮೌನವೂ ಜತೆ ಹೋರಾಟಗಾರರಿಗೆ ಅಪರಾಧವಾಗಿ ಕಾಣುತ್ತದೆ. ಈ ಬೆಳವಣಿಗೆಯಿಂದ ಮನನೊಂದ ಗಾಂಧಿ ತಮ್ಮ ಸಂಗಾತಿಗಳಿಗೆ ‘ಮೊದಲನೆಯದಾಗಿ ಈ ಉಪವಾಸ ಮುಷ್ಕರಕ್ಕೆ ನನ್ನ ಸಮ್ಮತಿ ಇರಲಿಲ್ಲ. ಆಮರಣಾಂತ ಉಪವಾಸ ಎನ್ನುವುದು ಎಲ್ಲ ಪ್ರಯತ್ನಗಳ ನಂತರ ಕಟ್ಟಕಡೆಯದಾಗಿ ಬಳಸುವ ಅಸ್ತ್ರವಾಗಬೇಕೇ ಹೊರತು ಸಣ್ಣಪುಟ್ಟ ಸಂಗತಿಗಳಿಗೆಲ್ಲ ಇದನ್ನೇ ಅಸ್ತ್ರವಾಗಿ ಬಳಸುವುದು ಸರಿಯಲ್ಲ.

ಹಾಗೆಂದು ಕೈದಿಗಳಿಗೆ ತಾರತಮ್ಯ ಮಾಡುವುದನ್ನು ನಾನು ಸಮರ್ಥಿಸುವುದಿಲ್ಲ. ಆತ ಯಾವುದೇ ಮಟ್ಟದ ಅಪರಾಧಿಯಾಗಿದ್ದರೂ ಉತ್ತಮ ಆಹಾರ ನೀಡಬೇಕು. ಜತಿನ್ ಹುತಾತ್ಮನಾದ ಸಂದರ್ಭದಲ್ಲಿ ನಾನು ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರೂ ಅದನ್ನು ಅಧಿಕಾರಿಗಳು ಮತ್ತು ಇಂಗ್ಲಿಷ್ ಸರ್ಕಾರ ತಮಗೆ ಬೇಕಾದಂತೆ ವಿರೂಪಗೊಳಿಸಿ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇತ್ತು. ಇದರಿಂದ ಭಾರತದ ಹೋರಾಟಕ್ಕೆ ಯಾವುದೇ ರೀತಿಯಲ್ಲಿ ಅನುಕೂಲವಾಗುವ ಬದಲು ಹಾನಿಯೇ ಆಗುತ್ತಿತ್ತು’ ಎಂದು ಪತ್ರ ಬರೆದಿದ್ದರು. ಮೌನವನ್ನು ವಿವೇಕಯುತವಾಗಿ ಬಳಸಬೇಕು. ಮಾತು ಅಗತ್ಯ ಇದ್ದಾಗ, ಅದು ನಾಯಕನೊಬ್ಬನ ಕರ್ತವ್ಯ ಆಗಬೇಕು. ಸಂಪೂರ್ಣ ಸತ್ಯವನ್ನು ಹೊರ ಹಾಕಬೇಕು ಎಂಬ ಆಗ್ರಹ ಯಾವುದೇ ಸಂದರ್ಭದಲ್ಲಿ ಕೇಳಿ ಬಂದರೆ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಆಗ ವಹಿಸುವ ಮೌನ ಕೂಡಾ ಹೇಡಿತನವಾಗುತ್ತದೆ’ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ.

ಇದು ಗಾಂಧಿಗೆ ಮಾತ್ರ ಸಾಧ್ಯವಿತ್ತು. ‘ನಾವು ಎಡೆಬಿಡದೆ ಮಾತನಾಡುತ್ತಿದ್ದರೆ ನಮ್ಮೊಳಗಿನ ನಿಯತ ಮತ್ತು ಗೂಢವಾದ ದನಿಯೊಂದನ್ನು ಕೇಳುವುದು ಎಂದೆಂದಿಗೂ ಸಾಧ್ಯವಾಗದು’ ಎಂಬ ಸಂತರೊಬ್ಬರ ಮಾತುಗಳು ಗಾಂಧಿಗೆ ಮೌನದ ಮಹದರ್ಥ ಕಲಿಸಿತ್ತು. ಆನಂತರದ ದಿನಗಳಲ್ಲಿ ಮೌನವನ್ನೂ ಜೀವನದ ಒಂದು ಭಾಗವಾಗಿ ಆಚರಿಸುತ್ತಾ ಬಂದ ಗಾಂಧಿಗೆ ಅದು ಆಧ್ಯಾತ್ಮಿಕ ಅನುಸಂಧಾನವಾಗಿತ್ತು.

ದೇಶದ ಜನರನ್ನು ತಮ್ಮ ಮಾತುಗಳಿಂದ ಮಂತ್ರಮುಗ್ಧಗೊಳಿಸುತ್ತಾರೆಂದು ಒಂದು ವರ್ಗದ ರಾಜಕೀಯ ಪಂಡಿತರಿಂದ ಭಾರೀ ಮೆಚ್ಚುಗೆ ಪಡೆದಿರುವ ನರೇಂದ್ರ ಮೋದಿ ಕೂಡಾ ಎಷ್ಟೋ ಸಂದರ್ಭಗಳಲ್ಲಿ ಅಚ್ಚರಿ ಹುಟ್ಟಿಸುವಂತೆ ಮೌನಕ್ಕೆ ಶರಣಾಗುತ್ತಾರೆ. ಅವರು ಜಾತ್ಯತೀತ, ಪ್ರಜಾಸತ್ತಾತ್ಮಕ ದೇಶವೊಂದರ ಮುಖ್ಯಸ್ಥರು ಎಂಬುದನ್ನೇ ಮರೆತಂತೆ ವರ್ತಿಸುತ್ತಾರೆ. ಚರ್ಚ್‍ಗಳ ಮೇಲಿನ ದಾಳಿಯಾಗಲೀ, ಸಂಘ ಪರಿವಾರಕ್ಕೆ ಸೇರಿದವರ ನೈತಿಕ ಪೊಲೀಸ್‌ಗಿರಿಯಾಗಲೀ, ಕೋಮು ಹಿಂಸೆಯಾಗಲೀ, ರೈತರ ಬದುಕನ್ನು ಹಾಳುಗೆಡವಿ ಕೈಗಾರಿಕೋದ್ಯಮಿಗಳಿಗೆ ಹೊಲ–ಗದ್ದೆಗಳಲ್ಲಿ ಕೆಂಪು ಹಾಸಿನ ಸ್ವಾಗತ ನೀಡುವ ಭೂಸ್ವಾಧೀನ ಮಸೂದೆ ವಿರುದ್ಧ ರೈತರ ಪ್ರತಿಭಟನೆಯಾಗಲೀ ಅಲ್ಪಸಂಖ್ಯಾತ ಸಮುದಾಯವನ್ನು ಸದಾ ಅತಂತ್ರ ಸ್ಥಿತಿಯಲ್ಲಿಡಬೇಕೆಂಬ ರೀತಿಯ ತಮ್ಮ ಸಂಗಡಿಗರ ಸಂವಿಧಾನವಿರೋಧಿ ಹೇಳಿಕೆಗಳ ಬಗೆಗಾಗಲೀ ಒಮ್ಮೆಯೂ ಪ್ರತಿಕ್ರಿಯಿಸದ ನರೇಂದ್ರ ಮೋದಿಯ ಮೌನಕ್ಕೆ ಅವಕಾಶವಾದ ಮತ್ತು ಸ್ವಾರ್ಥ ರಾಜಕಾರಣ ಕಾರಣವಾಗಿತ್ತೇ ಹೊರತು ಅದಕ್ಕೆ ಅಧ್ಯಾತ್ಮದ ಸೋಂಕು ಎಳ್ಳಷ್ಟೂ ಇಲ್ಲ. ಗಾಂಧಿಯ ಮೌನಕ್ಕೆ ದಿವ್ಯತೆ ಇತ್ತು. ಮೋದಿಯ ಮೌನ ಅಪಾಯದ ಸೂಚನೆಯಂತೆ ಕಾಣುತ್ತದೆ. ನಾಯಕನಾದವನಿಗೆ ಭಟ್ಟಂಗಿಗಳ ಭಜನೆ ಕೇಳುವ ಕಿವಿಗಳಿಗಿಂತ ಅಸಹಾಯಕರ ಆರ್ತನಾದ ಆಲಿಸುವ ಕಿವಿಗಳಿರಬೇಕು. ಆದರೆ ಮೋದಿ ಅವರು ಪಂಚೇಂದ್ರಿಯಗಳನ್ನು ಕಳೆದುಕೊಂಡ ಕೈಗಾರಿಕೋದ್ಯಮಿಗಳೇ ಸೃಷ್ಟಿಸಿದ ಯಂತ್ರಮಾನವನಂತೆ ಕಾಣುತ್ತಿದ್ದಾರೆ.

ಹಾಗೇ ಭಾರತದ ಭವಿಷ್ಯವು ಗ್ರಾಮಗಳಲ್ಲಿ ಅಡಗಿದೆ ಎಂದು ಗಾಂಧಿ ಹೇಳಿದ್ದರೆ, ಪ್ರಧಾನಿ ಮೋದಿ 100 ಸ್ಮಾರ್ಟ್ ಸಿಟಿಗಳ ನಿರ್ಮಾಣ ಮತ್ತು 500 ನಗರಗಳ ರೂಪಾಂತರ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ನಗರಗಳ ಅಭಿವೃದ್ಧಿ ಕುರಿತ ಅವರ ಮಾತುಗಳು ಕೇಳಲು ಇಂಪಾಗಿವೆ. ನಗರ ಪ್ರದೇಶಗಳ ಚಿತ್ರವನ್ನೇ ಅಭಿವೃದ್ಧಿ ಎಂದು ಭಾವಿಸುವ ಮೋದಿಗೆ ಕೈಗಾರಿಕೋದ್ಯಮಿಗಳ ಬಗ್ಗೆ ಅದೇನೋ ಮಮಕಾರ. ಭಾರತದ ಗ್ರಾಮೀಣ ಪ್ರದೇಶಗಳುದ್ದಕ್ಕೂ ಓಡಾಡಿದ ಗಾಂಧಿಗೆ ಮಣ್ಣಲ್ಲೇ ಮಿಂದೇಳುವ ಮುಗ್ಧ ಜೀವಿಗಳ ಬಗ್ಗೆ ಅಪಾರ ಪ್ರೀತಿ. ಗ್ರಾಮೀಣ ಬದುಕೆಂದರೆ ಸ್ವಾವಲಂಬನೆ, ಸರಳತೆ, ಮುಕ್ತ ಮತ್ತು ವಾಸ್ತವದ ಬದುಕಿನ ಆದರ್ಶಪೂರ್ಣ ಮತ್ತು ವಿವಿಧ ಸಮುದಾಯಗಳ ನಡುವಿನ ಸಾಮರಸ್ಯದ ಅರ್ಥಪೂರ್ಣ ಜಗತ್ತೆನ್ನುವುದು ಗಾಂಧಿಯ ಅಚಲ ನಂಬಿಕೆ. ಗ್ರಾಮಗಳನ್ನೇ ಅಭಿವೃದ್ಧಿಪಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ನಗರಗಳ ಅಭಿವೃದ್ಧಿಯು ಅಸಮಾನತೆಯನ್ನಷ್ಟೇ ಪೋಷಿಸುತ್ತದೆ ಎಂದು ಗಾಂಧಿ ಬಲವಾಗಿ ನಂಬಿದ್ದರು.

ಮಹಾತ್ಮ ಗಾಂಧಿ ತಮ್ಮ ಬದುಕಿನಲ್ಲಿ ವಿದೇಶಗಳಿಗೆ ಹೋದಾಗೆಲ್ಲ ಸ್ವಾತಂತ್ರ್ಯ, ಸ್ವಾಭಿಮಾನ, ಸಮಾನತೆಯ ಆಶಯದ ಬಿತ್ತನೆ ಮಾಡಿ ಆತ್ಮಗೌರವ ಕಾಪಾಡಿಕೊಂಡ ಹೆಮ್ಮೆ ಮತ್ತು ದೂರದೃಷ್ಟಿಯ ಲೆಕ್ಕಾಚಾರದ ಸಮಾಧಾನದಿಂದ ವಾಪಸಾಗುತ್ತಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಅದೆಷ್ಟೋ ದೇಶಗಳಿಗೆ ಭೇಟಿ ನೀಡಿದ ಮೋದಿ ಅಂಥ ಯಾವುದೇ ಸಂದೇಶವನ್ನು ಕೊಡಲಾಗದ ಕೀಳರಿಮೆಯಿಂದ ಸಮೂಹ ಸನ್ನಿಗೆ ಒಳಗಾದಂತೆ ಅರಚುವವರ ಭಾರತೀಯ ಮೂಲದವರ ಗುಂಪೊಂದನ್ನು ಸೃಷ್ಟಿಸಿ ತಾತ್ಕಾಲಿಕ ವ್ಯಾಪಾರದ ಖುಷಿಯಿಂದಷ್ಟೇ ವಾಪಸಾಗುತ್ತಿದ್ದಾರೆ. ಆತ್ಮವೇ ಇಲ್ಲದವರ ಛದ್ಮವೇಷಗಳು ವಂಚನೆಯನ್ನಷ್ಟೇ ಮಾಡಬಲ್ಲದು. ಮಹಾತ್ಮನನ್ನು ಅನುಸರಿಸಬೇಕಾದರೆ ಆತ್ಮಶುದ್ಧಿಯೂ ಇರಬೇಕು ಎನ್ನುವುದಷ್ಟೇ ನನ್ನ ಆಶಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.