ಅವರು ಬರುವುದೇ ಹಾಗೆ ಬಂದಿದ್ದರು. ಎಲ್ಲ ಕೊಳೆಯನ್ನು, ಕಸವನ್ನು ಗುಡಿಸಿ ಹಾಕುವುದಾಗಿ ಹೇಳಿದ್ದರು. ವ್ಯವಸ್ಥೆಯಲ್ಲಿ ಅಷ್ಟು ಕಸ ಗುಡ್ಡೆಯಾಗಿ ಬಿದ್ದಿತ್ತು. ಹಾಗೆ ಅನಾಮತ್ತಾಗಿ ಅದನ್ನು ಗುಡಿಸಿ ಹಾಕುವವರು ಜನರಿಗೂ ಬೇಕಿತ್ತು. ಅವರು ಬರೀ ಎಲ್ಲವನ್ನೂ ಗುಡಿಸಿ ಹಾಕುವುದಾಗಿ ಬಾಯಿ ಮಾತಿನಲ್ಲಿ ಹೇಳಿರಲಿಲ್ಲ. ತಮ್ಮ ಬದ್ಧತೆಯನ್ನು ತೋರಿಸಲು ಪೊರಕೆಯನ್ನೇ ತಮ್ಮ ಪಕ್ಷದ ಚಿಹ್ನೆ ಮಾಡಿಕೊಂಡಿದ್ದರು.

ಜನರು ಅವರನ್ನು ಪೂರಾ ನಂಬಿದರು. ಭರಪೂರ ವಿಜಯವನ್ನೂ ಕೊಟ್ಟರು. ಅಂಥ ವಿಜಯ ಕೊಟ್ಟ ಜನರಿಗೆ ಈಗ ದಿಗ್ಭ್ರಮೆ. ಇವರು ‘ಅವರಿಗಿಂತ’ ಹೇಗೆ ಭಿನ್ನ ಎಂದು ಚಿಂತೆ. ಪಕ್ಷ, ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಇಲ್ಲಿಯೂ ಪಕ್ಷ ವಿರೋಧಿ ಚಟುವಟಿಕೆ, ಪರಸ್ಪರರ ವಿರುದ್ಧ ಆರೋಪ, ಪ್ರತ್ಯಾರೋಪ; ಉಚ್ಚಾಟನೆ. ಅಲ್ಲಿಗೇ ನಿಂತಿತೇ ಎಂದರೆ ಇಲ್ಲ. ನಿತ್ಯವೂ ಒಂದೊಂದು ಹಗರಣ ಹೊರಗೆ ಬರುತ್ತಿವೆ. ಪ್ರಶಾಂತ ಭೂಷಣ್ ಹೇಳಿದ್ದು ನಿಜ: ಎಎಪಿಯು ಚುನಾವಣೆ ಕಣಕ್ಕೆ ಅಭ್ಯರ್ಥಿಗಳನ್ನು ಇಳಿಸುವಾಗ ಇನ್ನಷ್ಟು ‘ಸೋಸ’ಬೇಕಿತ್ತು.

ನಕಲಿ ಅಂಕಪಟ್ಟಿ ಕೊಟ್ಟ ಆರೋಪದ ಮೇಲೆ ಬಂಧಿತರಾಗಿರುವ ದೆಹಲಿಯ ಎಎಪಿ ಸರ್ಕಾರದ ಮಾಜಿ ಕಾನೂನು ಸಚಿವ ಜಿತೇಂದ್ರಸಿಂಗ್ ತೋಮರ್ ಪ್ರಕರಣ ಏನನ್ನು ಹೇಳುತ್ತದೆ? ಮುಖ್ಯಮಂತ್ರಿಯಾದವರು ತಮ್ಮ ಸಂಪುಟ ರಚನೆ ಮಾಡುವಾಗ, ಅವರಿಗೆ ಖಾತೆಗಳನ್ನು ಹಂಚುವಾಗ ಇಷ್ಟು ಅಜಾಗರೂಕರಾಗಿ ಇರಬಾರದು. ಯಾರೋ ಒಬ್ಬಿಬ್ಬರು ಪೊಲೀಸರಿಗೆ ಹೇಳಿದ್ದರೆ ತೋಮರ್ ಅವರ ಇಡೀ ಜನ್ಮ ಜಾಲಾಡಿ ‘ಜಾತಕ’ ತಂದು ಮುಖ್ಯಮಂತ್ರಿಗೆ ಕೊಡುತ್ತಿದ್ದರು.

ಅಷ್ಟೂ ಮಾಡದೇ ತೋಮರ್ಗೆ ಕಾನೂನು ಖಾತೆಯನ್ನೇ ಕೊಟ್ಟ ಕೇಜ್ರಿವಾಲ್ ಈಗ ಕೈ ಕೈ ಹಿಸುಕಿಕೊಳ್ಳುತ್ತಿರಬಹುದು. ಏನು ಪ್ರಯೋಜನ? ಖಾತೆ ಕೊಡುವಾಗ ಅವರು ಎಡವಿದ್ದಿರಬಹುದು. ತೋಮರ್ ಪಡೆದ ಪದವಿ ನಕಲಿ ಎಂಬ ಆರೋಪ ಕಳೆದ ಫೆಬ್ರುವರಿಯಲ್ಲಿಯೇ ಕೇಳಿ ಬಂದಾಗಲಾದರೂ ಅವರು ಎಚ್ಚೆತ್ತುಕೊಳ್ಳಬೇಕಿತ್ತು. ತೋಮರ್ಗೆ ರಾಜೀನಾಮೆ ಕೊಡಲು ಸೂಚಿಸಬೇಕಿತ್ತು.

ಅವರ ವಿರುದ್ಧ ತನಿಖೆಗೆ ಆದೇಶಿಸಬೇಕಿತ್ತು. ಅವರು ತಪ್ಪಿತಸ್ಥರಲ್ಲ ಎಂದು ತಿಳಿದರೆ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಬಹುದಿತ್ತು. ಕೇಜ್ರಿವಾಲ್ ಅವರು ತಮ್ಮ ಸಂಪುಟಕ್ಕೆ ಬೇಕಾದವರನ್ನು ಬೇಕಾದಾಗ ಸೇರಿಸಿಕೊಳ್ಳಬಹುದು, ತೆಗೆಯಬಹುದು. ಅವರೇನು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾಗೆ ಹೈಕಮಾಂಡ್ ಬಾಗಿಲು ತಟ್ಟಬೇಕಿಲ್ಲ!

ಬಂಧಿಸಿ ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುವಂಥ ಅಪರಾಧವನ್ನು ತೋಮರ್ ಮಾಡಿದ್ದರೇ ಇಲ್ಲವೇ ಎಂಬುದು ಬೇರೆ ವಿಚಾರ. ಕಾನೂನು ಎಂಬುದು ಒಂದು ಕತ್ತೆ ಇದ್ದಂತೆ. ಕೆಲವರು ತೋಮರ್ ಅವರನ್ನು ಬಂಧಿಸಲೇಬೇಕಿತ್ತು ಎಂದರೆ ಇನ್ನು ಕೆಲವರು ಅಗತ್ಯ ಇರಲಿಲ್ಲ ಎನ್ನುತ್ತಾರೆ. ಕಾನೂನು ಏಕೆ ಕತ್ತೆ ಎಂದರೆ ತೋಮರ್ ಅವರು ಎದುರಿಸುತ್ತಿರುವಂಥದೇ ಆರೋಪವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವೆಯೂ ಎದುರಿಸುತ್ತಿದ್ದಾರೆ.

ಅವರು ಚುನಾವಣೆ ಆಯೋಗಕ್ಕೆ ತಮ್ಮ ಪದವಿ ಬಗ್ಗೆ ಕೊಟ್ಟಿರುವ ಮಾಹಿತಿ ಅನುಮಾನಾಸ್ಪದವಾಗಿದೆ. ಒಂದು ಸಾರಿ ಬಿ.ಎ ಪಾಸು ಎಂದು ಕೊಟ್ಟಿದ್ದರೆ ಇನ್ನೊಂದು ಸಾರಿ ಬಿ.ಕಾಂ ಪಾಸು ಎಂದು ಅವರು ಕೊಟ್ಟಿದ್ದಾರೆ. ಆದರೆ, ದೆಹಲಿ ಪೊಲೀಸರಿಗೆ ತೋಮರ್ ಅವರನ್ನು ರಾತ್ರಿಯಿಡೀ ಕಾರ್ಯಾಚರಣೆ ಮಾಡಿ ಬಂಧಿಸಲು ಇರುವ ಆತುರ ಸ್ಮೃತಿ ಇರಾನಿ ಅವರ ಪ್ರಕರಣದಲ್ಲಿ ಕಿಂಚಿತ್ತೂ ಇಲ್ಲ. ಇದೆಲ್ಲ ರಾಜಕಾರಣ. ರಾಜಕಾರಣ ಇರುವುದೇ ಹಾಗೆ. ಅದರಲ್ಲಿ ಏನು ಮಾಡಿದರೂ ನಡೆಯುತ್ತದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ‘ಎಎಪಿಯಲ್ಲಿ ಇರುವವರು ನಮ್ಮ ಹಾಗೆಯೇ ಹುಲುಮಾನವರು, ಅವರೂ ತಪ್ಪು ಮಾಡುತ್ತಾರೆ; ನಾವು ಮಾಡುವಂಥದೇ ತಪ್ಪುಗಳನ್ನು ಮಾಡುತ್ತಾರೆ’ ಎಂದು ತೋರಿಸಬೇಕಾಗಿದೆ. ಬಿಜೆಪಿಗೆ ಇರುವಂಥದೇ ಭಾವನೆ ಕಾಂಗ್ರೆಸ್ಸಿಗೂ ಇದೆ. ತೋಮರ್ ಬಂಧನವನ್ನು ಕಾಂಗ್ರೆಸ್ಸು ಸ್ವಾಗತಿಸಿದೆ. ಮೂಲಭೂತವಾಗಿ ಎಎಪಿಯಂಥ ತೃತೀಯ ಶಕ್ತಿಗಳು ಒಂದು ಅಂಶವನ್ನು ಅರ್ಥ ಮಾಡಿಕೊಳ್ಳಬೇಕು : ರಾಷ್ಟ್ರೀಯ ಪಕ್ಷಗಳು ಇಂಥ ಸಣ್ಣ ಪುಟ್ಟ ರಾಜಕೀಯ ಪಕ್ಷಗಳನ್ನು ಸಹಿಸಿಕೊಳ್ಳುವುದಿಲ್ಲ.

ಎಎಪಿಯು ದೆಹಲಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡನ್ನೂ ಅಕ್ಷರಶಃ ನಿರ್ನಾಮ ಮಾಡಿ ಅಧಿಕಾರಕ್ಕೆ ಬಂದಿದೆ. ಆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಆ ಸೋಲಿನ ಮುಖಭಂಗವನ್ನು ಇನ್ನೂ ಅರಗಿಸಿಕೊಳ್ಳಲು ಆಗಿಲ್ಲ. ಅವು ಎರಡೂ ಪರಸ್ಪರ ಎಷ್ಟೇ ವಿರೋಧಿ ಆಗಿರಬಹುದು. ಆದರೆ ಒಳಗೊಳಗೇ ಸರದಿಯಂತೆ ಅಧಿಕಾರಕ್ಕೆ ಬರಬೇಕು ಎಂದೇ ಲೆಕ್ಕ ಹಾಕುತ್ತ ಇರುತ್ತವೆ. ಮೂರನೆಯವರು ಯಾರಾದರೂ ಬಂದರೆ ಅವು ‘ಅಸ್ವಸ್ಥ’ವಾಗುತ್ತವೆ.

ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕದಲ್ಲಿ ಜೆ.ಡಿ (ಎಸ್) ಬಗೆಗಿನ ಅಭಿಪ್ರಾಯವೂ ಇದೇ ಬಗೆಯದು. ರಾಷ್ಟ್ರೀಯ ಪಕ್ಷಗಳು ಹಾಕುವ ನಾನಾ ಬಗೆಯ ಗಾಳಗಳಿಂದಾಗಿಯೇ ಪ್ರಾದೇಶಿಕ ಪಕ್ಷಗಳಲ್ಲಿ ವಿದಳನ ಕ್ರಿಯೆ ಶುರುವಾಗುತ್ತದೆ. ಎಎಪಿಯಲ್ಲಿ ಇನ್ನೂ ಅದು ಆರಂಭವಾಗಿಲ್ಲ ಎಂಬುದು ಒಂದಿಷ್ಟು ನೆಮ್ಮದಿ ತರುವ ಸಂಗತಿ. ಆದರೆ, ಸೀಜರ್ನ ಹೆಂಡತಿ ನಿಷ್ಕಳಂಕಳಾಗಿರಬೇಕು. ಹಾಗೆಂದು ಎಲ್ಲರೂ ಬಯಸುತ್ತಾರೆ.

ಎಎಪಿಯಲ್ಲಿ ಏನೆಲ್ಲ ವಿದ್ಯಮಾನಗಳು ನಡೆದರೂ ಜನರು ಇನ್ನೂ ಭರವಸೆ ಕಳೆದುಕೊಳ್ಳದೇ ಇರುವುದಕ್ಕೆ ದೊಡ್ಡ ಪಕ್ಷಗಳಿಂದ ಅವರಿಗೆ ಆಗಿರುವ ಭ್ರಮನಿರಸನ. ಇಂಥ ಸಂದರ್ಭದಲ್ಲಿ ಎಎಪಿ ಇನ್ನಷ್ಟು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಿತ್ತು. ರಾಜಕೀಯದ ಚದುರಂಗದ ಆಟದಲ್ಲಿ ಎದುರಾಳಿ ತನ್ನ ಕಾಯಿಗಳನ್ನು ಹೇಗೆ ನಡೆಸಬಹುದು ಎಂದು ಕೇಜ್ರಿವಾಲ್ ತಿಳಿದುಕೊಳ್ಳಬೇಕಿತ್ತು. ಅಂದರೆ ತಮ್ಮ ಪಕ್ಷದಲ್ಲಿ, ಸರ್ಕಾರದಲ್ಲಿ ಇರುವ ಹುಳುಕುಗಳು ಏನು ಎಂದು ಅವರಿಗೆ ತಿಳಿದಿರಬೇಕಿತ್ತು.

ಸುಮ್ಮನೆ ಅವರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಜತೆಗೆ ಕಾಲು ಕೆದರಿ ಜಗಳಕ್ಕೆ ನಿಲ್ಲುವ ಬದಲು, ಅಧಿಕಾರಿಗಳ ವರ್ಗಾವರ್ಗಿ ಕುರಿತು ತಲೆ ಕೆಡಿಸಿಕೊಳ್ಳುವ ಬದಲು ಆಡಳಿತದ ಕಡೆಗೆ ಗಮನ ಕೊಡಬೇಕಿತ್ತು. ಇದೆಲ್ಲ ಆಗುವುದು ಸಹಜ. ಏಕೆಂದರೆ ಕೇಂದ್ರದಲ್ಲಿ ಇರುವ ಪಕ್ಷದ ಸರ್ಕಾರ ಯಾವಾಗಲೂ ಅನ್ಯ ಪಕ್ಷದ ರಾಜ್ಯ ಸರ್ಕಾರಗಳ ಜತೆಗೆ ಬಹಳ ಮುದ್ದು ಮಾಡುತ್ತಲೇನೂ ಇರುವುದಿಲ್ಲ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧದ ಬಗೆಗೆ ಕೇಜ್ರಿವಾಲ್ ಅವರೇನೂ ಹೊಸದಾಗಿ ಚರ್ಚೆಯನ್ನು ಹುಟ್ಟು ಹಾಕುತ್ತಿಲ್ಲ.

ಕರ್ನಾಟಕದಲ್ಲಿ 1980ರ ದಶಕದಲ್ಲಿ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು ತಮ್ಮ ಬಜೆಟ್ ಭಾಷಣದಲ್ಲಿಯೇ ‘ಅಷ್ಟೇನು ಸುಖಕರವಲ್ಲದ ಕೇಂದ್ರ ರಾಜ್ಯಗಳ ಸಂಬಂಧ’ದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹಾಗೆಂದು ಸಂಬಂಧಗಳೇನೂ ಸುಧಾರಣೆ ಆಗಲಿಲ್ಲ. ಹದಗೆಡುತ್ತಲೇ ಹೋದುವು. ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು ಹೆಗಡೆಯವರನ್ನು ತಮ್ಮ ಪ್ರತಿಸ್ಪರ್ಧಿ ಎಂದೇ ತಿಳಿದುಬಿಟ್ಟರು.

ಈಗ ಕೇಜ್ರಿವಾಲ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾವ ಪ್ರೀತಿಯೂ ಇರಲು ಸಾಧ್ಯವಿಲ್ಲ. ಹಾಗೆ ನೋಡಿದರೆ ಮೋದಿಯವರು ಒಳಗೊಳಗೆ ಕೇಜ್ರಿವಾಲ್ ವಿರುದ್ಧ ಕತ್ತಿ ಮಸೆಯುತ್ತಲೇ ಇರಬಹುದು. ಏಕೆಂದರೆ ಕೇಜ್ರಿವಾಲ್ ಅವರ ಗೆಲುವು ಬಿಜೆಪಿ ಸೋಲು ಎನ್ನುವುದಕ್ಕಿಂತ ಮೋದಿ ಅವರ ಸೋಲು. ಅದನ್ನು ಅವರು ಹೇಗೆ ಸಹಿಸಲು ಸಾಧ್ಯ? ಇದು, ದೆಹಲಿಯ ಲೆಫ್ಟಿನೆಂಟ್ ಜನರಲ್ ನಜೀಬ್ ಜಂಗ್ ಮತ್ತು ಮುಖ್ಯಮಂತ್ರಿ ಕೇಜ್ರಿವಾಲ್ ನಡುವಿನ ಕದನಕ್ಕೆ ಇರುವ ಆಯಾಮ.

ತೋಮರ್ ಘಟನೆಯಿಂದ ಎಎಪಿ ವರ್ಚಸ್ಸಿಗೆ ಹೇಳಲಾಗದ ಧಕ್ಕೆಯಾಗಿದೆ. ಜನಪ್ರತಿನಿಧಿ ಕಾಯ್ದೆ ಅನುಸಾರ ಹೀಗೆ ನಕಲಿ ದಾಖಲೆ ಕೊಡುವುದು ಕೂಡ ಭ್ರಷ್ಟಾಚಾರವೇ. ಹಾಗಾದರೆ ಕೇಜ್ರಿವಾಲ್ ಪ್ರತಿಪಾದನೆ ಮಾಡಿಕೊಂಡು ಬಂದುದು ಏನು? ಅವರು ಬೇರೆ ಪಕ್ಷಗಳ ಇಂಥದೇ ಪ್ರಕರಣಗಳ ಕಡೆಗೆ ಬೆರಳು ತೋರಿಸುವ ಅಧಿಕಾರವನ್ನೇ ಕಳೆದುಕೊಂಡರು. ಬಿಜೆಪಿಗೆ ಬೇಕಾದುದು ಅದೇ ಆಗಿತ್ತು: ಎಎಪಿಯ ಸ್ವಘೋಷಿತ ಬಿಳಿ ವರ್ಚಸ್ಸಿಗೆ ಮಸಿ ಹಚ್ಚಬೇಕಿತ್ತು. ಹಚ್ಚಿಯಾಯಿತು.

ಕರ್ನಾಟಕದಲ್ಲಿ 1990ರ ದ್ವಿತೀಯಾರ್ಧದಲ್ಲಿ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದರು. ಅವರ ಸಂಪುಟದಲ್ಲಿ ಬಿ.ಸೋಮಶೇಖರ್ ಉನ್ನತ ಶಿಕ್ಷಣ ಸಚಿವರಾಗಿದ್ದರು. ಸೋಮಶೇಖರ್ ವಿರುದ್ಧ ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪ ಬಂತು. ಸೋಮಶೇಖರ್ ನೇರವಾಗಿ ಪಟೇಲರ ಬಳಿ ಹೋದರು. ‘ನನ್ನ ವಿರುದ್ಧ ನಕಲು ಮಾಡಿದ ಆರೋಪ ಬಂದಿದೆ. ನಾನು ಶಿಕ್ಷಣ ಸಚಿವನಾಗಿ ಇರುವುದು ನೈತಿಕವಾಗಿ ಸರಿಯಲ್ಲ. ರಾಜೀನಾಮೆ ಕೊಡುವೆ’ ಎಂದರು. ಪಟೇಲರು, ‘ರಾಜಕೀಯದಲ್ಲಿ ಇಂಥ ಆರೋಪ ಹೊಸದೇನೂ ಅಲ್ಲ.

ರಾಜೀನಾಮೆ ಕೊಡುವುದು ಬೇಡ’ ಎಂದರೂ ಸೋಮಶೇಖರ್ ಹಟ ಬಿಡಲಿಲ್ಲ. ರಾಜೀನಾಮೆ ಕೊಟ್ಟರು. ನಂತರ ನಡೆದ ತನಿಖೆಯಲ್ಲಿ ಅವರು ತಪ್ಪಿತಸ್ಥರಲ್ಲ ಎಂದು ಸಾಬೀತಾಯಿತು. ಸೋಮಶೇಖರ್ ಮತ್ತೆ ಸಂಪುಟ ಸೇರಿದರು. ರಾಜಕಾರಣದಲ್ಲಿ ಉಳಿಯುವುದು ಇಂಥ ನಡೆಗಳು. ಮುಖ್ಯಮಂತ್ರಿ ರಾಜೀನಾಮೆ ಕೇಳುವುದಕ್ಕಿಂತ ಮುಂಚೆಯೇ ತಾನೇ ಮುಂದೆ ಬಂದು ರಾಜೀನಾಮೆ ಕೊಟ್ಟ ಸೋಮಶೇಖರ್ ಹಾಕಿದ ಮಾದರಿಯನ್ನು ತೋಮರ್ ಕೂಡ ಹಾಕಬೇಕಿತ್ತು ಅಥವಾ ಕೇಜ್ರಿವಾಲ್ ಅವರೇ ಅವರ ರಾಜೀನಾಮೆ ಕೇಳಿದ್ದರೆ ಈಗಿನ ಎಲ್ಲ ರಾದ್ಧಾಂತವೇ ನಡೆಯುತ್ತಿರಲಿಲ್ಲ.

ಈಗ ತೋಮರ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದು ತೇಪೆ ಕೆಲಸ ಎಂದು ಮಾತ್ರ ಕಾಣುತ್ತದೆ. ಆ ಪಕ್ಷದ ದುರಂತ ಮುಗಿದಂತೆ ಕಾಣುವುದಿಲ್ಲ. ಹಿಂದಿನ 49 ದಿನಗಳ ಕಾಲದ ಸರ್ಕಾರದ ಕಾನೂನು ಸಚಿವ ಸೋಮನಾಥ ಭಾರ್ತಿ ಹೆಂಡತಿಗೆ ಹೊಡೆದ ಆರೋಪ ಎದುರಿಸುತ್ತಿದ್ದಾರೆ. ಹೆಂಡತಿಗೆ ಹೊಡೆಯುವ ಗಂಡ ಅವನೆಂಥ ಗಂಡ?

ಕೇಜ್ರಿವಾಲ್ ಅವರಿಗೆ ಇಂಥವರನ್ನೆಲ್ಲ ಕಟ್ಟಿಕೊಂಡು ಏಗಲು ಹೆಚ್ಚು ಸಮಯವಿದೆ ಎಂದು ಯಾರೂ ತಿಳಿದುಕೊಂಡಿಲ್ಲ. ಅವರು ತೋಮರ್ ಮತ್ತು ಭಾರ್ತಿಯವರಂಥವರನ್ನು ಆಯ್ದುಕೊಳ್ಳುವುದಕ್ಕಿಂತ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅಂಥವರನ್ನು ಆಯ್ದುಕೊಳ್ಳಬೇಕಿತ್ತು. ಈಗ ಕೇಜ್ರಿವಾಲ್ ಅವರದು ತಲೆಯೇ ಇಲ್ಲದ ಬರೀ ದೇಹ ಇರುವ ಪಕ್ಷದಂತೆ ಆಗಿದೆ. ಅಥವಾ ಆತ್ಮಸಾಕ್ಷಿಯೇ ಇಲ್ಲದ ಪಕ್ಷದಂತೆ ಅಂದರೂ ನಡೆದೀತು.

ಕೇಜ್ರಿವಾಲ್ ಒಂದು ಸಂಗತಿಯನ್ನು ತಿಳಿದುಕೊಳ್ಳಬೇಕು : ಅವರು ದೆಹಲಿಯ ಗದ್ದುಗೆ ಮೇಲೆ ಕುಳಿತುಕೊಂಡಿರಬಹುದು. ಆದರೆ, ದೆಹಲಿ ಗದ್ದುಗೆಗಾಗಿನ ಹೋರಾಟ ಈಗಷ್ಟೇ ಆರಂಭವಾಗಿದೆ. ಕೇಜ್ರಿವಾಲ್ ನೆಮ್ಮದಿಯಿಂದ ಅಧಿಕಾರ ಮಾಡಲು ಕೇಂದ್ರ ಸರ್ಕಾರ ಬಿಡುವುದಿಲ್ಲ. ದಿನಾಲೂ ಏನಾದರೂ ಒಂದು ಕಿರಿಕಿರಿಯನ್ನು ಮಾಡುತ್ತ ಇರುತ್ತದೆ. ಕಿರಿಕಿರಿ ಮಾಡಲು ಅದರ ಕೈಯಲ್ಲಿ ರಾಜಭವನವೇ ಇದೆ.

ರಾಜಭವನದ ಮುಖ್ಯ ಉದ್ದೇಶ ಏನು ಎಂದರೆ ದೈನಂದಿನ ಆಡಳಿತದಲ್ಲಿ ಕೇಜ್ರಿವಾಲ್ ಗಮನ ಕೇಂದ್ರೀಕರಿಸದಂತೆ ನೋಡಿಕೊಳ್ಳುವುದು, ಕೆಲಸಕ್ಕೆ ಬಾರದ ವಿವಾದದಲ್ಲಿ ಅವರು ತೊಡಗುವಂತೆ ಮಾಡುವುದು. ಅದರ ಪರಿಣಾಮ ಏನಾಯಿತು ಎಂದರೆ ಕಳೆದ 12 ದಿನಗಳಿಂದ ದೆಹಲಿಯ ಬೀದಿಗಳು ಗಬ್ಬು ನಾರತೊಡಗಿದುವು. ಪೌರಕಾರ್ಮಿಕರು ಕಳೆದ ನಾಲ್ಕು ತಿಂಗಳ ವೇತನ ಬಾಕಿಗೆ ಆಗ್ರಹಿಸಿ ಮುಷ್ಕರ ಮಾಡಿದರು.

ನ್ಯಾಯವಾಗಿ ಅವರು ದೆಹಲಿಯ ಮೂರು ಮಹಾನಗರ ಪಾಲಿಕೆಗಳ ವ್ಯಾಪ್ತಿಗೆ ಒಳಪಟ್ಟವರು. ಅವರಿಗೆ ವೇತನ ಕೊಡಬೇಕಾದವರು ಕೂಡ ಬಿಜೆಪಿ ಆಡಳಿತ ಇರುವ ಪಾಲಿಕೆಗಳೇ. ಆದರೆ, ಏನಾಯಿತು ಎಂದರೆ ದೆಹಲಿ ಸರ್ಕಾರದ ಮೇಲೆ ದೂರಿನ ಗೂಬೆ ಬಂದು ಕುಳಿತುಕೊಂಡಿತು. ಬೆಂಗಳೂರಿನಲ್ಲಿಯೂ ಹಾಗೆಯೇ ಆಗಿತ್ತು.

ಕಸದ ಬೆಟ್ಟಗಳು ಏರುತ್ತ ಇದ್ದಾಗ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶ ಮಾಡಿದರು. ಕಸ ಸರಾಗವಾಗಿ ಹೋಗುವ ಹಾಗೆ ನೋಡಿಕೊಂಡರು. ಪಾಲಿಕೆಯ ಆಡಳಿತ ಮತ್ತು ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸುವ ಹಾಗೆ ಮಾಡಿದರು. ಪಾಲಿಕೆಯಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲ ಎಂದು ಅವರು ಹೊಣೆ ಹಾರಿಸಿ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಕೇಜ್ರಿವಾಲ್ ಅವರು ಹೊಣೆ ತಮ್ಮದಲ್ಲ ಎನ್ನುವಂತೆ ಸುಮ್ಮನೆ ಕುಳಿತರು.

ಅಂತಿಮವಾಗಿ ದೆಹಲಿ ಹಿಂದೆಂದೂ ಕಂಡು ಕೇಳರಿಯದ ನರಕಯಾತನೆ ಅನುಭವಿಸಿತು. ಜನರಿಗೆ ಭ್ರಮ ನಿರಸನ ಶುರುವಾಗುವುದು ಇಂಥ ಘಟನೆಗಳಿಂದ: ವ್ಯವಸ್ಥೆಯಲ್ಲಿನ ಕೊಳೆ ಗುಡಿಸಿ ಹಾಕುತ್ತೇವೆಂದು ಬಂದವರು ನಮ್ಮ ಮನೆ ಮುಂದೆ ಬಿದ್ದ ಕಸವನ್ನೂ ತೆಗೆಸುತ್ತಿಲ್ಲವಲ್ಲ ಎಂದು ಅವರಿಗೆ ಅನಿಸಿದರೆ ಅದರಲ್ಲಿ ಏನು ತಪ್ಪಿದೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.