ಗುರುವಾರ , ಮೇ 28, 2020
27 °C

ಕಾರ್ಬನ್ ಮಸಿಯಲ್ಲೇ ಮಿನುಗುವ ವಜ್ರ

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಕಾರ್ಬನ್ ಮಸಿಯಲ್ಲೇ ಮಿನುಗುವ ವಜ್ರ

ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನ ಮೂರೂ ಮೇಳೈಸಿದ ಒಂದು ಸುಂದರ ಉದಾಹರಣೆ ಇಲ್ಲಿದೆ: ಬೀಜಿಂಗ್‌ನ ಒಂದು ವೈಭವೀ ಹೊಟೆಲ್ಲಿನಲ್ಲಿ ಡೆನ್ಮಾರ್ಕಿನ ಖ್ಯಾತ ಕಲಾವಿದ ಡಾನ್ ರೂಸ್ಗಾರ್ಡ್ ತಂಗಿದ್ದ. ಕಿಟಕಿಗಳ ಹೊರಗೆ ಎಲ್ಲಿ ನೋಡಿದಲ್ಲಿ ದಟ್ಟ ಹೊಗೆ ಮತ್ತು ಮಂಜು (ಹೊಂಜು) ತುಂಬಿತ್ತು. ಹೊಗೆಯನ್ನು ಹೀರಿ ತೆಗೆಯಬಲ್ಲ ಯಂತ್ರವನ್ನು ತನ್ನ ಎಂಜಿನಿಯರಿಂಗ್ ಗೆಳೆಯರ ಮೂಲಕ ರೂಪಿಸಿ ಇವನೇ ಅದಕ್ಕೆ ಒಂದು ಆಕರ್ಷಕ ಗೂಡನ್ನು ರಚಿಸಿದ. ಮೂರಾಳೆತ್ತರದ ಆ ಗೂಡನ್ನು ನಗರದ ಉದ್ಯಾನದಲ್ಲಿಟ್ಟರೆ ಅದೇ ಒಂದು ಕಲಾಕೃತಿ. ಅದಕ್ಕೆ ಸೌರಫಲಕದ ಟೋಪಿ ಇಟ್ಟ. ಮಂದ ಬೆಳಕಿನಲ್ಲೂ ಅದು ವಿದ್ಯುತ್ ಉತ್ಪಾದಿಸುತ್ತಿದ್ದಾಗ, ಗೂಡೊಳಗಿನ ಫ್ಯಾನು ತನ್ನ ಸುತ್ತಲಿನ ಗಾಳಿಯ ಕೊಳಕನ್ನು ಸೋಸಿ ಶುದ್ಧಗಾಳಿಯನ್ನು ಹೊರಕ್ಕೆ ಬಿಡುತ್ತಿತ್ತು. ಗಂಟೆಗೆ 30 ಸಾವಿರ ಘನ ಮೀಟರ್ ಕೊಳೆಗಾಳಿ ಶುದ್ಧವಾಗುತ್ತಿತ್ತು.

ಆಗಾಗ ಅದು ಬಾಹ್ಯಾಕಾಶ ನೌಕೆಯ ಹಾಗೆ ಮೆಲ್ಲಗೆ ರೆಕ್ಕೆಯನ್ನು ಅಗಲಿಸಿದಾಗ ಗೂಡಿನೊಳಗಿನ ಕೊಳೆಯನ್ನು ಹೊರಕ್ಕೆ ತೆಗೆಯಬಹುದಿತ್ತು. ಅದು ಬೀಜಿಂಗಿನ ಜನರ, ಪ್ರಾಣಿಪಕ್ಷಿಗಳ ಶ್ವಾಸಕೋಶದಲ್ಲಿ ಜಮೆ ಆಗಬೇಕಿದ್ದ ಆದರೆ ಈಗ ಕಾಫಿ ಪುಡಿಯಂತೆ ಡಬ್ಬದಲ್ಲಿ ಕೂತ ಕಾರ್ಬನ್ (ಇಂಗಾಲ). ಅಂಥ ಕರೀ ಮಸಿಯನ್ನು ಏನು ಮಾಡುವುದು,

ಡಾನ್ ಮತ್ತೆ ತನ್ನ ಎಂಜಿನಿಯರ್ ಗೆಳೆಯರನ್ನು ಕೇಳಿದ.

ಕಾರ್ಬನ್ ಪುಡಿಗೆ ಭಾರೀ ಶಾಖ ಕೊಟ್ಟು ಅಧಿಕ ಒತ್ತಡದಲ್ಲಿ ದಮನ ಮಾಡಿದರೆ ಅದು ವಜ್ರದ ಹರಳಾಗಿ ಬದಲಾಗುತ್ತದೆ ಎಂದು ಗೊತ್ತಾಗುತ್ತಲೇ ಕಲಾವಿದ ಡಾನ್‌ಗೆ ಮತ್ತೊಂದು ಯೋಜನೆ ವಜ್ರದಂತೆ ಹೊಳೆಯಿತು. ಸಾವಿರ ಘನ ಮೀಟರ್ ಗಾಳಿಯನ್ನು ಸೋಸಿ ಪಡೆದ ಮಸಿಗೆ ಶಾಖ ಕೊಟ್ಟು, ಒತ್ತಡ ಹಾಕಿ ಅತಿಪುಟ್ಟ ಹರಳನ್ನು ತಯಾರಿಸಿ ಅದಕ್ಕೆ ಗಾಜಿನ ಲೇಪ ಕೊಟ್ಟು ಚೆಲುವಿನ ಹರಳುಂಗುರಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟ. ಹಾಗೆ ಬಂದ ಹಣದಿಂದ ಅಂಥ ಇನ್ನಷ್ಟು ಕಾರ್ಬನ್ ಹೀರುಗೂಡುಗಳನ್ನು ಉಚಿತವಾಗಿ ಸ್ಥಾಪಿಸುವುದಾಗಿ ಘೋಷಿಸಿದ. ‘ಒಂದು ಉಂಗುರವನ್ನು ಖರೀದಿಸಿ, ಪ್ರೇಯಸಿಯ ಬೆರಳಿಗೆ ತೂರಿಸಿದರೆ ಅಥವಾ ಧರಿಸಿದರೆ ನಿಮ್ಮ ನಗರದ ಸಾವಿರ ಘನಮೀಟರ್ ಗಾಳಿಯನ್ನು ಶುದ್ಧ ಮಾಡಿದ ಸಾಕ್ಷ್ಯ ನಿಮ್ಮ ಬೆರಳಲ್ಲೇ ಇರುತ್ತದೆ’ ಎಂದ (ಚಿತ್ರ ನೋಡಿ).

ಅಂಥ ಪವಿತ್ರ ಉದ್ದೇಶದಿಂದ ರೂಪುಗೊಂಡ ಉಂಗುರಕ್ಕೆ ಭಾರೀ ಬೇಡಿಕೆ ಬಂತು. ಬೀಜಿಂಗ್, ಟಿಯಾಂಜಿಂಗ್, ತಾಲ್ಯನ್ ನಗರಗಳಲ್ಲಿ ಬಿಕರಿಯಾದ ಉಂಗುರಗಳಿಂದ ಅಲ್ಲೆಲ್ಲ ಚಂದದ ಹೀರುಗೂಡುಗಳು ತಲೆಯೆತ್ತಿ ಉದ್ಯಾನಗಳ, ಆಟದ ಮೈದಾನಗಳ ಶೇ 50-70 ಕೊಳಕು ಗಾಳಿಯನ್ನು ಸೋಸುತ್ತ ಶುದ್ಧಗಾಳಿಯನ್ನು ಸೂಸತೊಡಗಿದವು. ಯುರೋಪಿನ ರಾಟರ್ಡಾಮ್ ನಗರದಲ್ಲೂ ಕೆಲವು ಗೂಡುಗಳು ಸ್ಥಾಪನೆಗೊಂಡವು.

ಬೆಂಗಳೂರಿಗೂ ಅಂಥವು ಬರುತ್ತಿವೆಯೊ ಇಲ್ಲವೊ ಗೊತ್ತಿಲ್ಲ ಆದರೆ ದಿಲ್ಲಿಯಲ್ಲಿ ಕೆಲವು ಗೂಡುಗಳು ತಲೆ ಎತ್ತಲಿವೆ ಎಂದು ಆತನ ಜಾಲತಾಣದಲ್ಲಿ ಹೇಳಲಾಗಿದೆ. Dan Roosegaarde ಹೆಸರನ್ನು ಟಂಕಿಸಿದರೆ ಜಾಲತಾಣದಲ್ಲಿ ಈತನ ಕ್ರೀಯಾಶೀಲತೆಯ ನಾನಾ ರೂಪಗಳನ್ನು ನೋಡಬಹುದು. Ted.com ನಲ್ಲಿ ಆತನ ಉಪನ್ಯಾಸ ಪ್ರದರ್ಶನವೂ ಇದೆ. ಅದರಲ್ಲಿ ಈ ಉಂಗುರವನ್ನು ವಿನಿಮಯ ಮಾಡಿಕೊಳ್ಳುವ ಭಾರತೀಯ ಜೋಡಿಗಳದ್ದೇ ದೃಶ್ಯವಿದೆ. ಕೊಳೆಗಾಳಿಯನ್ನು ಹೀರುತ್ತ ಸಾಗುವ ಸೈಕಲ್ ಇದೆ. ನೃತ್ಯ ಮಾಡುವುದರಿಂದಲೇ ವಿದ್ಯುತ್ ಉತ್ಪಾದಿಸಬಲ್ಲ ಡಾನ್ಸ್ ಕ್ಲಬ್ ಇದೆ. ಆದರೆ ಕ್ಲಬ್ಬಿನಲ್ಲಿ ಅಥವಾ ಬಾರಿನಲ್ಲಿ ಗಣ್ಯರ ಕುಡಿಗಳು ಕುಡಿದು ಕುಣಿದು ಬಡಿದಾಡಕ್ಕೆ ತೊಡಗಿದಾಗ ವಿದ್ಯುತ್ ಉತ್ಪಾದಿಸಬಲ್ಲ ಅಥವಾ ಕರೆಂಟ್ ಹೋಗುವಂತೆ ಮಾಡಬಲ್ಲ ಸಾಧನವನ್ನು ಆತ ಇನ್ನೂ ರೂಪಿಸಿಲ್ಲ. ಹಾಲಂಡಿನ ಜನರಿಗೆ ಅದೆಲ್ಲ ಗೊತ್ತಿಲ್ಲವೇನೊ, ಅದಂತಿರಲಿ.

ವಜ್ರದ ವಿಷಯಕ್ಕೆ ಮತ್ತೆ ಬರೋಣ. ನಮ್ಮ ವಜ್ರದ ವ್ಯಾಪಾರಿ ನೀರವ್ ಮೋದಿ ದೇಶಕ್ಕೆ ನಾಮ ಹಾಕಿ ಸದ್ದಿಲ್ಲದೇ (ನೀರವ್ ಅಂದರೇ ಸದ್ದಿಲ್ಲದ್ದು) ವಿದೇಶಕ್ಕೆ ಸಕುಟುಂಬ ವಲಸೆ ಹೋದ ಘಟನೆ ನಮ್ಮನ್ನು ವಜ್ರದ ವಿಜ್ಞಾನ ಲೋಕಕ್ಕೆ ತಾನಾಗಿ ಕರೆತರುತ್ತದೆ. ನಗರದ ಮಲಿನ ಗಾಳಿಯಲ್ಲಿನ ಕಾರ್ಬನ್ನಿನಿಂದ ಡಾನ್ ತಯಾರಿಸಿದ್ದು ಅಪ್ಪಟ ವಜ್ರದ ಹರಳೇನಲ್ಲ. ಹಾಗೆ ಇಂಗಾಲದಿಂದ ವಜ್ರವನ್ನು ಸೃಷ್ಟಿಸಲು ಭಾರೀ ಕ್ಲಿಷ್ಟ ಯಂತ್ರಾಗಾರ ಬೇಕಾಗುತ್ತದೆ. ಅಷ್ಟು ಸುಲಭದಲ್ಲಿ ವಜ್ರ ತಯಾರಿಸಲು ಸಾಧ್ಯವಿದ್ದಿದ್ದರೆ ನಮ್ಮಬೀದಿಗಳಲ್ಲೂ ವಜ್ರ ತಯಾರಿಸಿ ಬಳ್ಳದಿಂದ ಅಳೆದು ಮಾರುತ್ತಿದ್ದರು ಬಿಡಿ. ಆತ ಸಣ್ಣ ವ್ಯಾಕ್ಯೂಮ್ ಯಂತ್ರದ ಮೂಲಕ ಕಾರ್ಬನ್ ಕಣಗಳನ್ನೆಲ್ಲ ಒತ್ತಿ ಒತ್ತಿ ಬಿಂದುರೂಪಕ್ಕೆ ತಂದು ಗ್ರಾಫೈಟ್ ಚುಕ್ಕೆಯನ್ನಾಗಿ ಮಾಡಿಸಿ ಚಂದದ ಉಂಗುರವನ್ನು ತಯಾರಿಸಿದ್ದಾನೆ ಅಷ್ಟೆ.

ನಿಸರ್ಗದಲ್ಲಿ ಸಹಜ ವಜ್ರ ರೂಪುಗೊಳ್ಳುವುದೆಂದರೆ ಭೂಮಿಯಿಂದ 140 ಕಿಲೊಮೀಟರ್ ಆಳದಲ್ಲಿ ನಿಧಾನ ನಡೆಯುವ ರುದ್ರ ನಾಟಕ. ಅಲ್ಲಿನ ಐದಾರು ಸಾವಿರ ಡಿಗ್ರಿ

ಸೆಲ್ಸಿಯಸ್ ಶಾಖ ಮತ್ತು ಆ ಅನೂಹ್ಯ ಭೂಭಾರದ ಒತ್ತಡದಲ್ಲಿ ಕಾರ್ಬನ್ ಅಣುಗಳು ಒಂದಾಗಿ ಬಂದು ಕೈಕೈ ಹಿಡಿದು ಸಾಲು‘ಗಟ್ಟಿ’ ನಿಲ್ಲಬೇಕು. ಮಧ್ಯೆ ಮಧ್ಯೆ ಆ ಗುಂಪಿಗೆ ಸೇರದ ನೈಟ್ರೊಜನ್ ಅಥವಾ ಬೋರಾನ್ ಅಣುಗಳು ತೂರಿಕೊಂಡು ನಾಟಕಕ್ಕೆ ರಂಗೇರಿಸುತ್ತವೆ. ಅಂದರೆ, ಇಂಥ ಅಪಭ್ರಂಶಗಳೇ ವಜ್ರಕ್ಕೆ ಸುಂದರ ಬಣ್ಣವನ್ನು ಕೊಡುತ್ತವೆ. ಹತ್ತು ಲಕ್ಷ ಕಾರ್ಬನ್ ಅಣುಗಳ ಮಧ್ಯೆ ಒಂದೇ ಒಂದು ನೈಟ್ರೊಜನ್ ಅಣು ನುಗ್ಗಿದರೂ ಇಡೀ ವಜ್ರವೇ ಹಳದಿ; ಒಂದೇ ಒಂದು ಬೋರಾನ್ ಅಣು ನುಗ್ಗಿದರೆ ಇಡೀ ವಜ್ರವೇ ನೀಲಿ. ಬರೀ ಕಾರ್ಬನ್ ಅಣುಗಳಲ್ಲೇ ಅಲ್ಲೊಂದು ಇಲ್ಲೊಂದು ಅಣು ಸಾಲುತಪ್ಪಿ ಅಡ್ಡಾದಿಡ್ಡಿ ನಿಂತಿದ್ದರೆ ಆಗಲೂ ವಜ್ರಕ್ಕೆ ಸಂಜೆಗೆಂಪಿನ ಬಣ್ಣ ಬಂದುಬಿಡುತ್ತದೆ. ಅಷ್ಟಾಗಿ ಆ ವಜ್ರ ಹರಳುಗಟ್ಟಿ ಬೆಳೆಯಲು ನೂರಿನ್ನೂರು ಕೋಟಿ ವರ್ಷಗಳೇ ಬೇಕು. ಈ ಅವಧಿಯಲ್ಲಿ ಶಾಖ ಅಥವಾ ಒತ್ತಡ ತಗ್ಗಿದರೆ ಹರಳು ನುಚ್ಚು ನೂರಾಗುತ್ತದೆ. ಎಲ್ಲವೂ ಸರಿ ಇದ್ದರೆ ಕೊಹಿನೂರಾಗುತ್ತದೆ. ನಂತರ ಅದು ಲಾವಾ ರಸಪಾಕದೊಂದಿಗೆ ಗೋಡಂಬಿಯಂತೆ ಮೇಲಕ್ಕೆ ನುಗ್ಗಿ ಬಂದು ಗಟ್ಟಿ ಶಿಲೆಯಲ್ಲಿ ಹೂತು ಕೂತಿರುತ್ತದೆ. ಗಾಳಿಮಳೆಗೆ ಸಿಕ್ಕು ಬಂಡೆಗಳು ಪುಡಿಯಾದಾಗ ಮರಳು ಮಣ್ಣಿನಲ್ಲಿ ಮಿನುಗುವ ಹರಳು ಸಿಗಬಹುದು. ಇಲ್ಲಾಂದರೆ ವಜ್ರಖಚಿತ ಬಂಡೆಗಳನ್ನೇ ಗಣಿಗಾರಿಕೆ ಮಾಡಿ ಹುಷಾರಾಗಿ ಕಲ್ಲುಗಳನ್ನು ಪುಡಿ ಮಾಡಿ ಹೆಕ್ಕಬೇಕು.

ಆಭರಣಗಳಲ್ಲಿ ಬಳಕೆಯಾಗುವ ವಜ್ರದಲ್ಲಿ ಒಂದೇ ಒಂದು ಸದ್ಗುಣವೂ ಇಲ್ಲ. ಬದಲಿಗೆ ಮನುಷ್ಯನ ಎಲ್ಲ ಸದ್ಗುಣಗಳನ್ನೂ ಮರೆಮಾಚಿ ಪ್ರತಿಷ್ಠೆ, ಅಸೂಯೆ, ದ್ವೇಷ, ಪೈಪೋಟಿ, ಲೋಭ, ಮದ, ಮೋಸ, ಕಳ್ಳತನ, ಅನ್ಯಾಯ, ದಬ್ಬಾಳಿಕೆ, ದುರಾಸೆ, ಹಟ, ಕ್ರೌರ್ಯ ಹೀಗೆ ಪಟ್ಟಿ ಮಾಡಬಹುದಾದ ಎಲ್ಲ ಅವಗುಣಗಳೂ ವಜ್ರದೊಂದಿಗೆ ಲೇಪಿತವಾಗುತ್ತದೆ. ಮನುಷ್ಯನ ಮನಸ್ಸನ್ನೇ ‘ವಜ್ರಾದಪಿ ಕಠೋರಾನಿ’ ಮಾಡಿಬಿಡುತ್ತದೆ ಅದು. ಕಾರ್ಬನ್ ಮೂಲವಸ್ತುವಿಗೂ ವಜ್ರದ ಈ ದುರ್ಗುಣ ಗೊತ್ತಿರುವಂತೆ ಕಾಣುತ್ತದೆ. ಎಷ್ಟೇ ಬಲವಂತ ಮಾಡಿದರೂ ಅದು ಗ್ರಾಫೈಟ್ ಆಗಿಯೇ ಉಳಿಯಲು ಬಯಸುತ್ತದೆ ವಿನಾ ವಜ್ರವಾಗಲು ಜಪ್ಪಯ್ಯ ಅಂದರೂ ಒಪ್ಪುವುದಿಲ್ಲ. ಪರಿಸ್ಥಿತಿಯ ಒತ್ತಡಕ್ಕೆ ಅತಿಯಾಗಿ ಸಿಲುಕಿ ಕೊನೆಗೂ ಅನಿವಾರ್ಯವಾಗಿ ವಜ್ರವಾದರೆ ಯಾರಿಗೂ ಸಿಗದಂತೆ ನೆಲದಾಳದಲ್ಲಿ ಅವಿತಿರುವುದೇ ಅದಕ್ಕೆ ಇಷ್ಟವೇನೊ. ಗ್ರಾಫೈಟ್ ಆದರೆ ಪೆನ್ಸಿಲಿನೊಳಕ್ಕೆ ತೂರಿಕೊಂಡು ಮಕ್ಕಳ ಕೈಯಲ್ಲಿ ಆಡುತ್ತಿರಬಹುದು. ಅಥವಾ ಬಾಹ್ಯಾಕಾಶ ಯಾತ್ರಿಗಳ ಕಿಸೆಯಲ್ಲಿ ಬೆಚ್ಚಗೆ ಕೂರಬಹುದು. ಶೂನ್ಯ ಗುರುತ್ವದಲ್ಲಿ ಶಾಯಿಯ ಅಥವಾ ರೀಫಿಲ್ ಪೆನ್ನು ಕೆಲಸ ಮಾಡುವುದಿಲ್ಲ; ಪೆನ್ಸಿಲ್ಲೇ ಬೇಕು.

ವಜ್ರದಲ್ಲಿರುವಷ್ಟೇ ದುರ್ಗುಣಗಳು ಚಿನ್ನದಲ್ಲೂ ಇವೆ. ಆದರೆ ಜಗತ್ತಿನ ಅತ್ಯುತ್ತಮ, ಸರ್ವಶ್ರೇಷ್ಠ ಎನಿಸುವ ಎಲ್ಲಕ್ಕೂ ನಾವು ‘ಸುವರ್ಣ’, ‘ವಜ್ರ’ ಎಂಬ ಉಪಾಧಿಗಳನ್ನು ಕೊಡುತ್ತೇವೆ. ಮನುಷ್ಯರ 60ನೇ ವರ್ಷಾಚರಣೆಗೆ ಅಥವಾ ಸಂಘ ಸಂಸ್ಥೆಗಳ 75ನೇ ವರ್ಷಾಚರಣೆಗೆ ವಜ್ರ ಮಹೋತ್ಸವ (ಡೈಮಂಡ್ ಜುಬಿಲಿ) ಎಂದು ಕರೆದು ಸಂಭ್ರಮಿಸುತ್ತೇವೆ. ಪವಿತ್ರ ಪ್ರತಿಮೆಗಳ ತಲೆಗೆ ವಜ್ರದ ಕಿರೀಟ ಕೂರಿಸುತ್ತೇವೆ.

ಆ ವ್ಯಂಗ್ಯವಿಕಾರಗಳೆಲ್ಲ ವಜ್ರದ ಆಭರಣಗಳ ಮಟ್ಟಿಗೆ ಸೀಮಿತವಷ್ಟೇ ವಿನಾ ವಿಜ್ಞಾನ ತಂತ್ರಜ್ಞಾನ ರಂಗಕ್ಕೆ ಬಂದಾಗ ಮಾತ್ರ ವಜ್ರಕ್ಕೆ ಏನೆಲ್ಲ ಸದ್ಗುಣಗಳು ಬಂದುಬಿಡುತ್ತವೆ. ಗಟ್ಟಿ ಬಂಡೆಗಳಿಗೆ ರಂಧ್ರ ಕೊರೆಯಲು ಈ ವಜ್ರಾಯುಧವೇ ಬೇಕು. ಅದಕ್ಕೆ ತದ್ವಿರುದ್ಧವಾಗಿ ನಮ್ಮ ಕಣ್ಣುಗುಡ್ಡೆಯ ಅತ್ಯಂತ ಕೋಮಲ ಭಾಗಕ್ಕೆ ಗೀರು ಹೊಡೆಯಲು ನೇತ್ರತಜ್ಞರು ವಜ್ರದ ಚೂರಿಯನ್ನೇ ಬಳಸುತ್ತಾರೆ. ಅನೇಕ ಲಕ್ಷ ರೂಪಾಯಿ ಬೆಲೆ ಬಾಳುವ ಆ ಚೂರಿಯ ಅತಿ ಸಪೂರಿನ ಮಹಾಹರಿತದ ಅಲಗನ್ನು ಬರಿಗಣ್ಣಿನಿಂದ ನೋಡಲೂ ಸಾಧ್ಯವಿಲ್ಲ ಬಿಡಿ (ಕಣ್ಣಿನ ಆಪರೇಶನ್ ಆದ ನಂತರ ನೋಡಬಹುದೊ ಡಾಕ್ಟರನ್ನು ಕೇಳಿ ನೋಡಿ). ಎರಡು ಪುಟ್ಟ ವಜ್ರದ ಹರಳುಗಳನ್ನು ಕುಟಾಣಿಯಂತೆ ಬಳಸಿ, ವಿಜ್ಞಾನಿಗಳು ಅಲೌಕಿಕ ದ್ರವ್ಯಗಳನ್ನು ಸೃಷ್ಟಿ ಮಾಡುತ್ತಾರೆ. ಅಂಥ ಕುಟಾಣಿಯಲ್ಲಿ ಬರ್ಫದ ಒಂದು ಕಣವನ್ನಿಟ್ಟು 60 ಲಕ್ಷ ಪಟ್ಟು ಒತ್ತಡ ಹಾಕಿದರೆ ಅದು ಲೋಹವಾಗುತ್ತದೆ. ಭೂಗರ್ಭದ ತೀರ ಆಳದಲ್ಲಿ ಅಥವಾ ಬಾಹ್ಯಾಕಾಶದ ಅಗಮ್ಯ ತಾಣಗಳಲ್ಲಿ ಕಾಣಬಹುದಾದ ವೈಚಿತ್ರ್ಯಗಳನ್ನು ಅರ್ಥೈಸಲು ವಜ್ರಗಳೇ ನೆರವಿಗೆ ಬರುತ್ತಿವೆ.

ಕೃತಕ ವಜ್ರಗಳ ಸೃಷ್ಟಿಗೆಂದೇ ಈಸಿಕ್ಸ್ ಹೆಸರಿನ ಸಂಸ್ಥೆಯೊಂದನ್ನು ಜಗತ್ತಿನ ಅತಿ ದೊಡ್ಡ ಡೈಮಂಡ್ ಕಂಪನಿ ಡಬೀರ್ಸ್ ನಡೆಸುತ್ತಿದೆ. ಈಸಿಕ್ಸ್ ಅಂದರೆ ಆವರ್ತನ ಕೋಷ್ಟಕದಲ್ಲಿ ಆರನೇ ಸ್ಥಾನದಲ್ಲಿರುವ ಮೂಲವಸ್ತು- ಕಾರ್ಬನ್. ಆರು ರಾಷ್ಟ್ರಗಳಲ್ಲಿ ವಜ್ರಗಳನ್ನು ಸೃಷ್ಟಿ ಮಾಡುತ್ತಿರುವ ಈ ಸಂಸ್ಥೆಯಲ್ಲಿ ಬಹುದೊಡ್ಡ ಸಂಖ್ಯೆಯ ವಿಜ್ಞಾನಿಗಳು ದುಡಿಯುತ್ತಿದ್ದಾರೆ ಮಾತ್ರವಲ್ಲ, ಅನೇಕ ವಿಶ್ವಮಾನ್ಯ ವೈಜ್ಞಾನಿಕ ಸಂಸ್ಥೆಗಳಿಗೆ ಹಾಗೂ ವಿಶ್ವವಿದ್ಯಾಲಯಗಳಿಗೆ ಬೇಕಿರುವ ವಿಶಿಷ್ಟ ದ್ರವ್ಯಗಳನ್ನು ಇದು ಸೃಷ್ಟಿಸಿ ಕೊಡುತ್ತಿದೆ. ಉಕ್ಕನ್ನು ಕರಗಿಸಲು ಬೇಕಾದ ಉಷ್ಣತೆಗಿಂತ ಮೂರುವರೆ ಪಟ್ಟು ಹೆಚ್ಚು ಶಾಖ ಸೂಸುವ ಕುಲುಮೆಯಲ್ಲಿ ಇಲ್ಲಿನ ತಂತ್ರಜ್ಞರು ವಜ್ರದ ಕಣವೊಂದನ್ನು ನಿಲ್ಲಿಸುತ್ತಾರೆ. ಅದರ ಸುತ್ತ ಮೀಥೇನ್ (ಚರಂಡಿಯ ಅನಿಲವನ್ನು) ಹಾಯಿಸುತ್ತಾರೆ. ಅದರಲ್ಲಿನ ಎಲ್ಲ ಕಾರ್ಬನ್ ಮತ್ತು ನೈಟ್ರೊಜನ್ ಪರಮಾಣುಗಳೂ ಆ ಸೆಕೆಯಲ್ಲಿ ಕಳಚಿಕೊಂಡು ಪಕ್ಷಿಗಳ ಹಾಗೆ ತೇಲಾಡುತ್ತವೆ. ಕೆಲವು ಕಾರ್ಬನ್ ಅಣುಗಳು ವಜ್ರದ ಬಿಂದುವಿನ ಮೇಲೆ ಕೂರುತ್ತವೆ. ಕೂತು ಅವೂ ವಜ್ರವೇ ಆಗುತ್ತವೆ. ಒಂದೆರಡು ನೈಟ್ರೊಜನ್ ಅಣು ಕೂತರಂತೂ ಇನ್ನೂ ಚಂದ.

ಈಸಿಕ್ಸ್ ಸಂಸ್ಥೆಗೆಂದು ಕೆಲಸ ಮಾಡುವ ಪ್ರಿಸ್ಮ್ ಜೆಮ್ ಎಂಬ ಕಂಪನಿಯ ಮುಖ್ಯ ತಂತ್ರಜ್ಞನ ಹೆಸರು ಆಶಿತ್ ಗಾಂಧಿ. ಇತ್ತ ಇನ್ನೊಬ್ಬ ಗುಜರಾತಿಯ (ನೀರವ್) ವಜ್ರದ ಹಗರಣ ಬಯಲಾಗುವ ತುಸು ಮುಂಚೆ ಆಶಿತ್ ಗಾಂಧಿ ಅಲ್ಲಿ ವಿಜ್ಞಾನಿಗಳಿಗೆಂದೇ ವಿಶೇಷ ವಜ್ರವನ್ನು ತಯಾರಿಸುತ್ತಿದ್ದರು. ಅದರಲ್ಲಿ ಸಾಲುಗಟ್ಟಿ ನಿಂತ ಕಾರ್ಬನ್ ಪರಮಾಣು ಅಷ್ಟೇ ಅಲ್ಲ ‘ಇಂತಿಷ್ಟೇ ಇಲೆಕ್ಟ್ರಾನ್ ಇರಬೇಕೆಂದು ಆರ್ಡರ್ ಕೊಟ್ಟರೂ ಮಾಡಿಕೊಡುತ್ತೇವೆ’ ಎಂದು ಕಳೆದ ವಾರ ವಾಯರ್ಡ್ ವರದಿಗಾರರಿಗೆ ನೀಡಿದ ಸಂದರ್ಶನದಲ್ಲಿ ಗಾಂಧಿ ಹೇಳುತ್ತಿದ್ದರು. ಕ್ವಾಂಟಮ್ ಕಂಪ್ಯೂಟರನ್ನು ಸೃಷ್ಟಿಸಲು ಜಗತ್ತಿನ ಎಲ್ಲ ಬಲಾಢ್ಯ ಕಂಪನಿಗಳೂ ಮಿಲಿಟರಿ ಶಕ್ತಿಗಳೂ ತೀವ್ರ ಪೈಪೋಟಿ ನಡೆಸುತ್ತಿರುವಾಗ ತಿದ್ದಿತೀಡಿದ ವಜ್ರಕ್ಕೆ ಇನ್ನಿಲ್ಲದ ಮಹತ್ವ ಬರುತ್ತಿದೆ.

ಮಾಹಿತಿ ತಂತ್ರಜ್ಞಾನಕ್ಕೆ ಮತ್ತೊಂದು ಕ್ರಾಂತಿಕಾರಿ ತಿರುವನ್ನು ಕೊಡಲೆಂದು ವಜ್ರದ ಪರಮಾಣು ಜಾಲಂಧ್ರದಲ್ಲಿ ವಿಜ್ಞಾನಿಗಳು ಕೈಯಾಡಿಸುತ್ತಿದ್ದಾರೆ. ಇತ್ತ ವಜ್ರಾಭರಣಗಳ ಮೋಹಜಾಲದಲ್ಲಿ ಮನುಷ್ಯ ಮಾತ್ರದವರನ್ನು ಸಿಲುಕಿಸಿ ಕೇಡಿಗಳು ಸ್ವಂತದ ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.