ಶುಕ್ರವಾರ, ಮಾರ್ಚ್ 5, 2021
21 °C

ಕುರಿಗಳು ಸಾರ್‌, ಕುರಿಗಳು

ಐ.ಎಂ.ವಿಠಲಮೂರ್ತಿ Updated:

ಅಕ್ಷರ ಗಾತ್ರ : | |

ಕುರಿಗಳು ಸಾರ್‌, ಕುರಿಗಳು

ಬೇಲೂರಿನಲ್ಲಿ ನಾನು ಹೈಸ್ಕೂಲಿನಲ್ಲಿ­ದ್ದಾಗ ಒಂದು ಮಧ್ಯಾಹ್ನ ಊಟದ ಬಿಡು­ವಿನ ಸಮಯ. ಬಹಳ ಜನರ ಗುಂಪೊಂದು ಯಾರದೋ ಭಾಷಣ ಕೇಳುತ್ತಿತ್ತು. ಕುತೂಹಲ­ದಿಂದ ನಾನೂ ಆ ಗುಂಪಿನಲ್ಲಿ ಒಬ್ಬನಾಗಿ ನಿಂತೆ. ಅದು ದೇಶ ಕಂಡ ಅದ್ಭುತ ನಾಯಕ ಕೆ. ಕಾಮ­ರಾಜ್ ನಾಡರ್ ಅವರ ಭಾಷಣ. ನೋಡಿದ ತಕ್ಷಣ ಆಕರ್ಷಿಸುವ ವ್ಯಕ್ತಿತ್ವ. ಕಾಲರ್ ಇಲ್ಲದ ಅರ್ಧ­ತೋಳಿನ ಬಿಳಿಬಣ್ಣದ ದೊಗಳೆ ಶರ್ಟ್. ಅದೇ ಬಣ್ಣದ ಒಂದು ಗಿಡ್ಡ ಪಂಚೆ. ಅತಿಕಪ್ಪು ಬಣ್ಣದ ಆಜಾನುಬಾಹು ವ್ಯಕ್ತಿ. ಆದರೆ, ಬಾಹು­ಬಲಿ­ಯಷ್ಟು ಶಾಂತಚಿತ್ತದ ಮುಖಭಾವ. ತಮಿಳಿ­ನಲ್ಲಿ ನಿರರ್ಗಳವಾಗಿ  ದೇಶದ ಜನರ ಬಡತನದ ಬಗ್ಗೆ, ಯುವಕರು ದೇಶ ಕಟ್ಟುವ ಕೆಲಸದಲ್ಲಿ ಭಾಗಿಯಾಗುವ ಬಗ್ಗೆ ಅವರು ಮಾತನಾಡುತ್ತಿ­ದ್ದರು. ತಮಿಳಿನ ಒಂದಕ್ಷರದ ಜ್ಞಾನವಿಲ್ಲದಿದ್ದರೂ ನನಗೆ ಅವರ ಭಾಷಣದ ಪೂರ್ಣಪಾಠ ಅರ್ಥವಾಗಿತ್ತು. ಅದರಿಂದ ತುಂಬ ಪ್ರೇರಿತನಾಗಿ ಭಾಷಣ ಕೇಳುತ್ತಾ ನಿಂತು ಮಧ್ಯಾಹ್ನದ ಶಾಲೆಗೆ ಚಕ್ಕರ್ ಹೊಡೆದೆ. ಅವರ ಭಾಷಣದಲ್ಲಿ ಆಡಂಬ­ರ­­ವಿರಲಿಲ್ಲ. ಡಂಬಾಚಾರವಿರಲಿಲ್ಲ. ಒಬ್ಬ ತಂದೆ ಮಕ್ಕ­ಳಿಗೆ ಮುಂದೇನು ಮಾಡಬೇಕೆಂದು ತಿಳಿಸುವ ಆದರ್ಶಗಳ ಸಂದೇಶವಿತ್ತು.ಅಂದು ವೇದಿಕೆಯಲ್ಲಿದ್ದು ಸ್ವಾಗತಿಸಿದವರು ಸ್ವಾತಂತ್ರ್ಯ ಹೋರಾಟಗಾರರೂ ಸಜ್ಜನ ನಾಯ­ಕರೂ ಆಗಿದ್ದ ಬಿ.ಎನ್. ಬೋರಣ್ಣಗೌಡರು. ಎಸ್. ನಿಜಲಿಂಗಪ್ಪ, ನಾಗಪ್ಪ ಆಳ್ವ (ಜೀವರಾಜ್ ಆಳ್ವ ಅವರ ತಂದೆ) ಮುಂತಾದವರು ಕನ್ನಡದಲ್ಲಿ ಮಾತನಾಡಿದರೂ ಕಾಮರಾಜರ ನನಗೆ ಗೊತ್ತಿ­ಲ್ಲದ ತಮಿಳಿನ ಭಾಷಣ ಮನ ಮುಟ್ಟಿದಂತೆ, ಹೃದಯಕ್ಕೆ ತಟ್ಟಿದಂತೆ ಉಳಿದವರ ಮಾತುಗಳು ಪರಿಣಾಮ ಬೀರಲಿಲ್ಲ. ನಾನು ಸೇವೆಗೆ ಸೇರಿದ ನಂತರ ನಿಜಲಿಂಗಪ್ಪನವರಿಗೆ ಬೇಲೂರಿನ ಸಭೆ­ಯನ್ನು ನೆನಪಿಸಿದಾಗ ಅವರು ಸ್ವಲ್ಪ ಸಮಯ ಭಾವುಕರಾಗಿ ಆ ದಿನಗಳ ನೆನಪುಗಳಿಗೆ ಜಾರಿ ಅವರ ಕಣ್ಣಂಚಿನಲ್ಲಿ ನೀರಿನ ಹನಿ ತುಂಬಿದ್ದನ್ನು ಕಂಡು ಕಸಿವಿಸಿಗೊಂಡಿದ್ದೆ.‘ಆ ದಿನದ ದೇಶದ ರಾಜ­ಕೀಯ ನಾಯಕರೆಲ್ಲಿ, ಇಂದಿನವರೆಲ್ಲಿ’ ಎಂದು ನಿಟ್ಟುಸಿರುಬಿಟ್ಟಿದ್ದರು. ಒಮ್ಮೆ ಅವರು ಕುಮಾರ­ಕೃಪ ಅತಿಥಿ ಗೃಹದಲ್ಲಿ ಉಳಿದಿದ್ದಾಗ ನಾನೂ ಅಲ್ಲೇ ಉಳಿದಿದ್ದೆ. ಬೆಳಿಗ್ಗೆ ಕೊಠಡಿ­ಯಿಂದ ಹೊರಬಂದಾಗ ನನ್ನ ಮಗಳನ್ನು ಕರೆದು ಮಾತನಾಡಿಸುತ್ತಿದ್ದರು. ಅವಳು ಆಗ ಮಾತಿನ­ಮಲ್ಲಿ. ‘ನಿಮಗೆ ಗಾಂಧಿತಾತ ಗೊತ್ತಾ’ ಎಂದು ಕೇಳಿದಳು. ಆ ಮಾತಿನಿಂದ ಪುಳಕಿತಗೊಂಡು ಅವಳನ್ನು ಕೈಹಿಡಿದು ಕೂರಿಸಿ ಹರಟೆ ಹೊಡೆದಿ­ದ್ದರು. ‘ಅಪ್ಪ ಇವರೂ ಗಾಂಧಿತಾತನ ತರಹವೇ ಅಲ್ವಾ’ ಎಂದಳು. ಅಂದಿನ ರಾಜಕೀಯ ನಾಯಕ­ರನ್ನು ನೋಡಿದರೆ ಎಳೆಯ ಮನಸ್ಸುಗಳ ಮೇಲೆ ಏನು ಅಭಿಪ್ರಾಯ ಮೂಡುತ್ತಿತ್ತು ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ.ಒಮ್ಮೆ ಮೈಸೂರಿನಿಂದ ಬೆಂಗಳೂರಿಗೆ ಬರು­ವಾಗ ಮಂಡ್ಯದಲ್ಲಿ ರಾಜ್ಯದ ಮತ್ತೊಬ್ಬ ಶ್ರೇಷ್ಠ ರಾಜಕಾರಣಿ ಕೆ.ವಿ. ಶಂಕರೇಗೌಡರನ್ನು ನೋಡಲು ಹೋಗಿದ್ದೆವು. ಅವರನ್ನು ನೋಡಿದ ಮಕ್ಕಳು, ಅವರ ಮಾತು ಕೇಳಿ ತುಂಬಾ ಪ್ರಭಾವಿ­ತ­ರಾದರು. ಅವರಿಗೆ ಆಕರ್ಷಿತರಾದರು. ಹೀಗೆ ದೇಶದ, ರಾಜ್ಯದ ರಾಜಕೀಯ ಧುರೀಣರಷ್ಟೇ ಅಲ್ಲದೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಹ ಹಳ್ಳಿಯಿಂದ ಬರುತ್ತಿದ್ದ ಮಕ್ಕಳಿಗೆ ಊಟ–ವಸತಿ ವ್ಯವಸ್ಥೆ ಒದಗಿಸಿ ಸಹಕರಿಸುತ್ತಿದ್ದ ಹಲ­ವಾರು ವ್ಯಕ್ತಿಗಳನ್ನು ನಾನು ನೋಡುತ್ತಾ ಬೆಳೆದಿ­ದ್ದೇನೆ. ಬೇಲೂರಿನ ಕೆ.ಎಸ್‌. ವೀರಭದ್ರೇ­ಗೌಡರು, ಕೆ.ಸಿ. ಪುಟ್ಟೇಗೌಡರು, ಎಚ್.ವಿ. ನಂಜುಂಡಯ್ಯನವರು ಹೀಗೆ ಅನೇಕರು ನಡೆದು ಹೋಗುತ್ತಿದ್ದರೆ ಅವರನ್ನು ಕಿಂದರಜೋಗಿ ಗುಂಪಿ­ನಂತೆ ಹತ್ತಾರು ಜನ ಹಿರಿ-ಕಿರಿಯರು ಹಿಂಬಾಲಿ­ಸು­ತ್ತಿದ್ದರು. ಶಾಲಾ ಪ್ರವೇಶದಿಂದ ಹಿಡಿದು ಪೊಲೀಸ್ ಠಾಣೆಗಳಲ್ಲಿ ಜಾಮೀನು ಕೊಡಿಸು­ವುದು, ಊರೂರುಗಳ ನಡುವೆ, ಅಣ್ಣ-ತಮ್ಮಂ­ದಿರ ನಡುವೆ, ಗಂಡ-ಹೆಂಡಿರ ನಡುವೆ, ಆಸ್ತಿಗಾಗಿ ವ್ಯಕ್ತಿ­ಗಳ ನಡುವೆ ಉದ್ಭವವಾಗುತ್ತಿದ್ದ ವ್ಯಾಜ್ಯಗ­ಳನ್ನು ಪರಿಹರಿಸುವುದು... ಈ ನಾಯಕರಿಗೆ ಬಿಡುವಿಲ್ಲದಷ್ಟು ಕೆಲಸ.ಮೊದಮೊದಲು ಮಹಾ ಚುನಾವಣೆ ನಡೆ­ಯು­ತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಒಂದೇ ದೇಶ­ಭಕ್ತಿ ಪಕ್ಷವೆಂದು ಬಿಂಬಿತಗೊಂಡಿತ್ತು. ಚುನಾ­ವಣೆ­ಗಳಲ್ಲಿ ಮತಗಟ್ಟೆ ಅಧಿಕಾರಿಗಳಿಂದ  ಜನಸಾಮಾನ್ಯರಿಗೂ ಕಾಂಗ್ರೆಸ್ ಗೆಲ್ಲಿಸುವು­ದೊಂದೇ ಧ್ಯೇಯವಾಗಿತ್ತೇನೋ ಎಂದೆನಿಸು­ತ್ತಿತ್ತು. ಮತದಾನ ಮುಗಿದ ನಂತರ ಮತಗಟ್ಟೆ ಸಿಬ್ಬಂದಿ ಮತ ಚಲಾಯಿಸಲು ಬರದವರ ಹೆಸರಿ­ನೆ­ದುರಿಗೆ ಹೆಬ್ಬಟ್ಟಿನ ಗುರುತು ಒತ್ತಿ ನೂರಾರು ನಕಲಿ ಮತ ಚಲಾಯಿಸಿದ್ದನ್ನು ನಾನೇ ಸ್ವತಃ ನೋಡಿ­ದ್ದೇನೆ. ಆಗ ನನಗೆ ಅದೇನೆಂದು ಸ್ಪಷ್ಟ­ವಾಗಿ ತಿಳಿಯದಿದ್ದರೂ ಅಂದೇನು ನಡೆದಿರಬಹು­ದೆಂದು ಈಗ ಖಚಿತವಾಗಿ ಊಹಿಸಿ ಹೇಳಬಲ್ಲೆ.ಹಾಸನ ಲೋಕಸಭಾ ಕ್ಷೇತ್ರಕ್ಕೆ ಸ್ವತಂತ್ರ ಪಕ್ಷದ ಅಭ್ಯರ್ಥಿಯಾಗಿ ನುಗ್ಗೇಹಳ್ಳಿ ಶಿವಪ್ಪ ಬೇಲೂರಿ­ನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದರು. ಶಾಲೆಗೆ ಚಕ್ಕರ್ ಹೊಡೆದು ಹೆಗಲಿಗೆ ಬ್ಯಾಗ್ ನೇತು ಹಾಕಿಕೊಂಡು ಭಾಷಣ ಕೇಳುತ್ತಿದ್ದೆ. ಅಸ್ಖಲಿತ ಕನ್ನಡದಲ್ಲಿ ಬಹಳ ಸೊಗ­ಸಾಗಿ ಮಾತನಾಡುತ್ತಿದ್ದರು. ಸೂಟುಧಾರಿ­ಯಾ­ಗಿ­ದ್ದರು. ಕಾಂಗ್ರೆಸ್ ಪಕ್ಷದ ಕುರಿತು, ಅದರ ನಾಯ­ಕರ ದುರಾಡಳಿತ ಬಗ್ಗೆ ಬಹು ವಿವರವಾಗಿ ನನ್ನಂ­ತಹ ಶಾಲಾ ಬಾಲಕನಿಗೂ ಮನ ಮುಟ್ಟು­ವಂತೆ ಎಳೆ, ಎಳೆಯಾಗಿ ಬಿಡಿಸಿ ಹೇಳಿದ್ದರು. ನಾನೂ ಈ ರೀತಿ ಮಾತನಾಡಿ ದೇಶದಲ್ಲಿ ಆಗುತ್ತಿ­ರುವ ಅನಾಹುತಗಳ ಬಗ್ಗೆ ಜನಜಾಗೃತಿ ಮಾಡ­ಬೇಕು ಎಂದುಕೊಂಡೆ ಅಷ್ಟೇ. ಅವರು ಚುನಾ­ವಣೆ­ಯಲ್ಲಿ ಗೆದ್ದು ಲೋಕಸಭೆ ಪ್ರವೇಶಿಸಿದರು. ನಾನು ಹೈಸ್ಕೂಲ್ ಮುಗಿಸಿ ಬೆಂಗಳೂರಿನ ಕಾಲೇಜಿಗೆ ಬಂದೆ.ಸೆಂಟ್ರಲ್ ಕಾಲೇಜು ಸೇರಿದ ಮೇಲೆ ಹಲ­ವಾರು ರಾಜಕೀಯ ಪಕ್ಷಗಳ ಯುವ ಸಂಘಟನೆ­ಗಳ–ಸಂಘಟಕರ ಪರಿಚಯವಾಯ್ತು. ಅದರಲ್ಲಿ ಜಗದೀಶ ಶೆಟ್ಟಿಗಾರ್ ಎಂಬ ನನ್ನ ಸಹಪಾಠಿ ಎ.ಬಿ.ವಿ.ಪಿ.ಯಲ್ಲಿ ಸಕ್ರಿಯವಾಗಿದ್ದರು. ಪಿ.ಜಿ.­ಆರ್. ಸಿಂಧ್ಯ, ಬಿ.ಎಲ್. ಶಂಕರ್ ಸಹ ಈ ಸಂಘಟನೆ­ಯಲ್ಲಿ  ಕ್ರಿಯಾಶೀಲವಾಗಿದ್ದರು. ಶೆಟ್ಟಿ­ಗಾರ್ ಒಂದು ದಿನ ಅಟಲ್ ಬಿಹಾರಿ ವಾಜ­ಪೇಯಿ ಅವರ ಬೈಠಕ್ ಇದೆಯೆಂದು ನನ್ನನ್ನು ಜೊತೆಗೆ ಕರೆದೊಯ್ದರು. ಶೇಷಾದ್ರಿಪುರದ ಒಂದು ಸಭಾಂಗಣದಲ್ಲಿ ನಾನೂ, ಅವರೂ ಮೊದಲ ಸಾಲಿನಲ್ಲೇ ಕುಳಿತೆವು. ಅಷ್ಟು ಹತ್ತಿರ­ದಿಂದ ವಾಜಪೇಯಿ ಅವರನ್ನು ಮೊದಲ ಬಾರಿಗೆ ನೋಡಿದೆ. ಆಕರ್ಷಕ ವ್ಯಕ್ತಿತ್ವ. ಯಾವುದೋ ಅಗೋ­­ಚರವಾದ ಗುಪ್ತಸಭೆಯಲ್ಲಿ ಕುಳಿತಂತೆ ಭಾಸ­­ವಾಗುತ್ತಿತ್ತು.  ಶೆಟ್ಟಿಗಾರ್ ಅವರನ್ನು ಮಾತಿ­­ಗೆಳೆ­ಯಲು ಪ್ರಯತ್ನಿಸಿದೆ. ಪಕ್ಕದಲ್ಲಿದ್ದ­ವರು ಸುಮ್ಮನಿರಲು ಕೈಸನ್ನೆಯಿಂದ ಸೂಚಿಸಿದರು.ವಾಜಪೇಯಿ ಶುದ್ಧ ಹಿಂದಿಯಲ್ಲಿ ಮಾತನಾ­ಡಲು ಆರಂಭಿಸಿದರು. ಕಾವ್ಯಮಯವಾದ ವಿಶೇಷ ಲಹರಿಯಲ್ಲಿದ್ದ ಅವರ ಪ್ರವಚನದಿಂದ ಮಂತ್ರ­ಮುಗ್ಧನಾದೆ. ಅವರ ವಿಚಾರಲಹರಿ, ದೇಶ­ಪ್ರೇಮ, ನಾಡಿನ ಪರಂಪರೆ ಬಗೆಗಿನ ಅಭಿಪ್ರಾಯ... ಎಲ್ಲ ಕೇಳಿದ ಮೇಲೆ ನನ್ನ ಜೀವ­ಮಾನ­ವಿಡೀ ವಾಜಪೇಯಿ ಸಿದ್ಧಾಂತಗಳನ್ನು ಅಪ್ಪಿಕೊಳ್ಳಬೇಕು ಎಂಬುವಷ್ಟು ಪ್ರಭಾವಿತನಾಗಿ­ಬಿಟ್ಟಿದ್ದೆ. ಗೆಳೆಯ ಶೆಟ್ಟಿಗಾರ್ ನನ್ನೊಡನೆ ಎಂ.ಎ (ಅರ್ಥಶಾಸ್ತ್ರ) ಮುಗಿಸಿದ ಬಳಿಕ ದೆಹಲಿಗೆ ಸ್ಥಳಾಂತರಗೊಂಡು ವಾಜಪೇಯಿ, ಅಡ್ವಾಣಿ­ಯವರಿಗೆ ಬೇಕಾದವರಾಗಿದ್ದರು. ವಾಜಪೇಯಿ ಪ್ರಧಾನಿಯಾಗಿದ್ದಾಗ ಅವರಿಗೆ ಆರ್ಥಿಕ ಸಲಹೆಗಾರರಾಗಿ–ವಕ್ತಾರರಾಗಿ ಕಾರ್ಯ­ನಿರ್ವಹಿಸಿದ್ದರು.ವಿಶ್ವವಿದ್ಯಾಲಯ ಹಾಸ್ಟೆಲ್‌ನಲ್ಲಿದ್ದಾಗ ನನ್ನ ಹಿರಿಯ ಸಹಪಾಠಿ ಕೆ.ಆರ್. ರಮೇಶ್‌ ಮತ್ತು ನಾನು ಒಂದೇ ರೂಮ್‌ನಲ್ಲಿದ್ದೆವು. ಕಾಂಗ್ರೆಸ್ ಇಬ್ಭಾಗವಾದ ಕಾಲವದು. ದೇವರಾಜ ಅರಸು ಕಾಂಗ್ರೆಸ್(ಐ) ಸಂಚಾಲಕರು. ಬೆಂಗಳೂರು ವಿಶ್ವ­ವಿದ್ಯಾಲ­ಯದ ವಿದ್ಯಾರ್ಥಿ ರಾಜಕಾರಣಿಗಳೆಲ್ಲ ಸಂಜೆ­ಯಾದರೆ  ಅರಸು ಅವರ ಮನೆಯಲ್ಲಿ ಸೇರು­ತ್ತಿ­ದ್ದರು. ರಮೇಶ್ ಜೊತೆಯಲ್ಲಿ ನಾನೂ ಹೋಗು­ತ್ತಿದ್ದೆ. ಆರ್. ಗುಂಡೂರಾವ್, ಎಫ್.ಎಂ. ಖಾನ್ ಅವರಂತಹ ಯುವ ಕಾಂಗ್ರೆಸ್ ನಾಯಕರು ಬರುತ್ತಿದ್ದರು. ಎಲ್ಲರೂ ಸದಾ ಯಾರೊಡನೆಯಾದರೂ ಕಾಲು ಕೆದರಿ ಜಗ­ಳಕ್ಕೆ ಹೊರಡುವವರ ರೀತಿ ಕಾಣಿಸುತ್ತಿದ್ದರು. ಅರಸು ಅವರು ಇವರನ್ನೆಲ್ಲ ಒಡ್ಡೋಲಗದಲ್ಲಿ ಕೂರಿಸಿ­ಕೊಂಡು ತಮ್ಮ ರಾಜಕೀಯ ವಿಚಾರ­ಗಳನ್ನು ಮತ್ತು ಪಕ್ಷ ಸಂಘಟಿಸುವ ವಿವರಗಳನ್ನು ತಿಳಿಸು­ತ್ತಿ­ದ್ದರು. ರಮೇಶ್‌ಗೆ ನನ್ನನ್ನು ರಾಜಕೀ­ಯಕ್ಕೆ ತರಬೇಕು (ತಳ್ಳಬೇಕು) ಎಂದು ಬಹಳ ಆಸೆ ಇತ್ತು. ಬೆಂಗಳೂರು ವಿ.ವಿ ಅರ್ಥಶಾಸ್ತ್ರ ಸೊಸೈಟಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಂತೆ, ಗೆದ್ದೆ ಅಷ್ಟೇ. ಯುವ ಕಾಂಗ್ರೆಸ್‌ನ ಹೊಡೆದಾಟ, ಬಡಿ­ದಾಟ ನನಗೆ ಹೊಂದಲಿಲ್ಲ. ರಾಜಕೀಯ­ವನ್ನು ದೂರ ನಿಂತು ನೋಡುವುದರಲ್ಲಿ ಇರುವಷ್ಟು ಖುಷಿ–ಮಜಾ ಅದರೊಳಗಿರು­ವುದಿಲ್ಲ ಎಂಬುದನ್ನು ಅಂದೇ ನಾನು ಮನಗಂಡೆ.ಕಮ್ಯುನಿಸ್ಟ್ ಪಕ್ಷದ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐದಲ್ಲೂ ನನಗೆ ಹಲವಾರು ಮಿತ್ರರಿ­ದ್ದರು. ಅವರೆಲ್ಲ ೧೫೦–-೨೦೦ ವರ್ಷಗಳ ಕಾಲ ಬದುಕುವವರಂತೆ ತಮ್ಮ ಸಿದ್ಧಾಂತಗಳ ಬಗ್ಗೆ ಮಾತ­ನಾಡುತ್ತಿದ್ದರು. ಒಂದೆರಡು ಸಭೆಗಳಲ್ಲಿ ಭಾಗವ­ಹಿಸಿದ ನನಗೆ ಏನೇನೂ ಉತ್ಸಾಹ ಉಳಿ­ಯ­ಲಿಲ್ಲ. ಅರವತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಅಣ್ಣಾದೊರೈ ಅವರ ಭಾಷಣ ಕೇಳಿದೆ. ಬಡವರ, ಶೋಷಿತರ, ನೋವು ಸಂಕಷ್ಟಗಳಿಗೆ ಧ್ವನಿಯಾಗಿದ್ದ ಅವರ ಭಾಷಣ ನನ್ನ ಮನ ಕಲಕಿತ್ತು.ಹಿಂದಿನ ರಾಜಕೀಯ ನಾಯಕರಲ್ಲಿ ಒಂದು ಆದರ್ಶವಿರುತ್ತಿತ್ತು. ಸಿದ್ಧಾಂತವಿರುತ್ತಿತ್ತು. ಸದ್ಗು­ಣವಿ­ರುತ್ತಿತ್ತು. ದೇಶಭಕ್ತಿಯಿರುತ್ತಿತ್ತು. ಎದುರಾಳಿ­ಗಳ ಬಗ್ಗೆ ಸಹನೆ ಇರುತ್ತಿತ್ತು. ಸೌಹಾರ್ದವಿರು­ತ್ತಿತ್ತು. ಬಳಸುವ ಭಾಷೆ ನಾಗರಿಕವಾಗಿರುತ್ತಿತ್ತು. ಇಂದು ಅತಿರೇಕದ ಸಿದ್ಧಾಂತವನ್ನು ಪ್ರತಿನಿಧಿಸುವ, ದಿನಬೆಳಿಗ್ಗೆ ಬೆಂಕಿಯುಗುಳುವ ಒಬ್ಬ ನಾಯಕನಾದರೆ, ನಿಜನೆಲದ, ಜನರ ಬದುಕಿನ ಬಗ್ಗೆ ತಿಳಿವಳಿಕೆಯಿಲ್ಲದ ಮತ್ತೊಬ್ಬ ನಾಯಕ. ಒಳ್ಳೊಳ್ಳೆಯ ನಾಯಕರಿಗೆ ಅವರು ಪ್ರತಿನಿಧಿಸಲು ಪಕ್ಷಗಳೇ ಇಲ್ಲದ ಸ್ಥಿತಿ. ಒಟ್ಟಿನಲ್ಲಿ ಜನರಿಗೆ ಬೆಂಬಲಿಸಲು ಆಯ್ಕೆಗಳೇ ಇಲ್ಲದ ವಾತಾವರಣ. ಎಲ್ಲರಲ್ಲೂ ಒಂದು ತರಹದ ಸಿನಿಕತೆ ಮೂಡುವ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ತಮ್ಮ ಕ್ಷೇತ್ರವನ್ನು ಸಮರ್ಥವಾಗಿ ಪ್ರತಿನಿಧಿಸುವ ಅಭ್ಯರ್ಥಿಯನ್ನು ಜನ ಆಯ್ಕೆ ಮಾಡಿದರೆ ಅವರೆಲ್ಲ ಸೇರಿ ಅತ್ಯುತ್ತಮ ನಾಯಕನನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡುತ್ತಾರೆ.ಎರಡು ಪ್ರಮುಖ ಪಕ್ಷಗಳು ನಾಡಿನ ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ತಿಲಾಂಜಲಿ ನೀಡಿ ಇಬ್ಬರನ್ನು ಬಿಟ್ಟು ಬೇರೆ ನಾಯಕರೇ ಈ ದೇಶದಲ್ಲಿ ಇಲ್ಲವೇನೋ ಎಂಬ ವಾತಾವರಣ ಸೃಷ್ಟಿಸಿವೆ. ಅಬ್ಬರದ ಪ್ರಚಾರದ ಮೂಲಕ ಕೃತಕ ಅಲೆ ಸೃಷ್ಟಿಸಿ ಯಾವುದೋ ಅಲೆ ಇದೆಯೆಂದು ಭಾಷಣ ಬಿಗಿಯುತ್ತಾರೆ. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ‘ಭಾರತ ಪ್ರಕಾಶಿಸುತ್ತಿದೆ’ ಎಂಬ ಕೃತಕ ಅಲೆಯೊಂದನ್ನು ಸೃಷ್ಟಿಸಲಾಗಿತ್ತು. ಇದರಿಂದ ತಲೆ ಕೆಡಿಸಿಕೊಂಡ ರಾಜ್ಯದ ಅಂದಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಇನ್ನೂ ಆರು ತಿಂಗಳ ಅವಧಿಯಿದ್ದರೂ ವಿಧಾನಸಭೆ ವಿಸರ್ಜಿಸಿ ಅವಧಿಪೂರ್ವ ಚುನಾವಣೆಗೆ ಹೋದರು. ಇಂತಹ ಕೃತಕ ಅಲೆಗಳು ಗೆಲುವಿನ ದಡ ತಲುಪಿಸುವುದಕ್ಕಿಂತ ಸೋಲಿನ ಸುಳಿಯಲ್ಲಿ ಸಿಲುಕಿಸುವುದೇ ಹೆಚ್ಚು.ನಾನು ಹಲವು ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳೊಡನೆ ಕೆಲಸ ಮಾಡಿದ್ದೇನೆ. ಚುನಾವಣೆ ಬಂತೆಂದರೆ ವಿದ್ಯಾರ್ಥಿಗಳು ಪಬ್ಲಿಕ್‌ ಪರೀಕ್ಷೆ ಬರೆಯುವಾಗ ಅನುಭವಿಸುವ ಭೀತಿಯನ್ನೂ, ನಿದ್ರಾಹೀನ ರಾತ್ರಿಗಳನ್ನೂ ಅವರೂ ಅನುಭವಿಸಿದ್ದಾರೆ. ತಮ್ಮ ಪಕ್ಷಕ್ಕೆ ಎಷ್ಟು ಸೀಟುಗಳು ಸಿಗಬಹುದೆಂಬ ಮಾಹಿತಿಯನ್ನು ಗುಪ್ತಚರ ವಿಭಾಗದಿಂದ ಕಲೆಹಾಕುವುದು, ಉದ್ಯಮಿಗಳಿಂದ ‘ನೆರವು’ ಪಡೆಯಲು ಗುಪ್ತಸಭೆ ನಡೆಸುವುದು, ಎದುರಾಳಿಗಳನ್ನು ಹಾಗೂ ತಮ್ಮ ಪಕ್ಷದವರನ್ನೇ ಮಣಿಸಲು ಚದುರಂಗದಾಟ ಆಡುವುದು... ಎಲ್ಲವನ್ನೂ ಸನಿಹದಿಂದ ಗಮನಿಸಿದ್ದೇನೆ. ಒಬ್ಬ ಮುಖ್ಯಮಂತ್ರಿ ತಮ್ಮ ಪಕ್ಷಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಸೀಟು ಸಿಗಬಹುದೆಂದು ನನ್ನನ್ನು ಕೇಳಿದಾಗ, 60–65 ಸೀಟು ಸಿಗುವ ಸಾಧ್ಯತೆ ಇದೆ ಎಂಬ ಮಾಧ್ಯಮದವರ ಅಭಿಪ್ರಾಯ ತಿಳಿಸಿದ್ದೆ. ಈ ಅಹಿತವಾದ ಅಭಿಪ್ರಾಯದಿಂದ ಅವರು ನನ್ನ ಮೇಲೆ ಮುನಿಸಿಕೊಂಡಿದ್ದರು.ತಮ್ಮ ಅರ್ಹತೆ, ಯೋಗ್ಯತೆ ಮತ್ತು ಸಾಮರ್ಥ್ಯದ ಮೇಲೆ ಮತ ಯಾಚಿಸಬೇಕಾದ ಅಭ್ಯರ್ಥಿಗಳು ಅವರ ಅಪ್ರಬುದ್ಧ ನಾಯಕರ ಹೆಸರಿನಲ್ಲೇ ಮತ ಕೇಳುವ ಸ್ಥಿತಿ ತಲುಪಿದ್ದಾರೆ. ಇದೊಂದು ಪ್ರಜಾಪ್ರಭುತ್ವದ ಅಣಕ, ಮತದಾರರಿಗೆ ಬಗೆಯುವ ಅಪಚಾರವಲ್ಲದೇ ಬೇರೇನೂ ಅಲ್ಲ. ತತ್ವ–ಸಿದ್ಧಾಂತ ಮತ್ತು ಕಾರ್ಯಕ್ರಮಗಳ ಆಧಾರದ ಮೇಲೆ ಮತ ಕೇಳುವುದು ಸರಿಯಾದ ಕ್ರಮ. ಆದರೆ, ವ್ಯಕ್ತಿಗಳ ಹೆಸರಿನಲ್ಲಿ ಮತ ಕೇಳುವುದು ವಿಪರ್ಯಾಸ. ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರು ಜನರನ್ನು ‘ಕುರಿಗಳು ಸಾರ್‌ ಕುರಿಗಳು’ ಎಂದು ಕರೆದಿದ್ದರು. ಆದರೆ, ಈಗ ಎಲ್ಲ ಉಲ್ಟಾ ಆಗಿದೆ. ರಾಜಕೀಯ ನಾಯಕರೇ ಕುರಿಗಳಾಗಿ ಅವರವರ ಪಕ್ಷದ ಮುಖಂಡರನ್ನು ಕುರಿಗಳಂತೆ ಹಿಂಬಾಲಿಸುತ್ತಿದ್ದಾರೆ. 2014ರ ಚುನಾವಣೆ ಇಂತಹ ಮೂರ್ಖರನ್ನು ಸೋಲಿಸಿ, ಪ್ರಜಾ­ಪ್ರಭುತ್ವ­ವನ್ನು ಗೆಲ್ಲಿಸಬೇಕು. ಇದೇ ದೇಶದ ಜನರ ನಿರೀಕ್ಷೆ ಮತ್ತು ಆಶಯ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.