ಮಿಸಿಸಿಪ್ಪಿ ನದಿ ದಂಡೆಯಲ್ಲಿರುವ ಲೂಸಿಯಾನ ರಾಜ್ಯದ ನ್ಯೂ ಅರ್ಲಿಯನ್ಸ್ ಬಾರ್ ಒಂದರಲ್ಲಿ ನಶೆಯಲ್ಲಿದ್ದ ವ್ಯಕ್ತಿಯೊಬ್ಬ ‘ಇನ್ನು ಮೂರು ವಾರಗಳಲ್ಲಿ ಅಧ್ಯಕ್ಷ ಕೆನಡಿ ಹತ್ಯೆಯಾಗುತ್ತದೆ, I bet hundred dollars’ ಎಂದಿದ್ದ. ಆ ಮಾಹಿತಿ ಕೆನಡಿ ಹತ್ಯೆಯಾದ ಎರಡು ದಿನಗಳ ಬಳಿಕ, ಹತ್ಯೆಯ ತನಿಖೆ ನಡೆಸುತ್ತಿದ್ದ ಎಫ್ಬಿಐ ಅಧಿಕಾರಿಗಳಿಗೆ ದೊರೆತಿತ್ತು. ಹೀಗೆ ಮಾಹಿತಿ ನೀಡಿದ ವ್ಯಕ್ತಿ ‘ಅಂದು ನಾನೂ ಉನ್ಮಾದದಲ್ಲಿದ್ದೆ. ಮಾತೇನೋ ಕೇಳಿಸಿತು, ಆದರೆ ಪುನಃ ಆ ವ್ಯಕ್ತಿಯನ್ನು ಗುರುತಿಸುವುದು ಕಷ್ಟ’ ಎಂದಿದ್ದ. ಹಾಗೆ ಬಾಜಿ ಕಟ್ಟಿದ ವ್ಯಕ್ತಿ, ಕೆನಡಿ ಹತ್ಯೆ ಆರೋಪ ಹೊತ್ತ ಆಸ್ವಲ್ಡ್ ನನ್ನು ಕೊಂದ ಜಾನ್ ರೂಬಿ ಇರಬಹುದೇ ಎಂಬ ಅನುಮಾನ ತನಿಖಾಧಿಕಾರಿಗಳಿಗೆ ಬಂದಿತ್ತು.

ಅಷ್ಟೇ. ಅಲ್ಲಿಗೇ ಅದರ ಸ್ವಾರಸ್ಯ ಕೊನೆಗೊಳ್ಳುತ್ತದೆ. ಕೆನಡಿ ಹತ್ಯೆ ಕುರಿತ ಯಾವ ದಾಖಲೆಯೂ ಪೂರ್ಣ ಕಥನವನ್ನು ಹೇಳುವುದಿಲ್ಲ. ಕಳೆದ ಗುರುವಾರ ಬಿಡುಗಡೆಯಾದ 2,800 ಕಡತಗಳಲ್ಲಿ ಸದ್ಯದ ಮಟ್ಟಿಗೆ ನಾಲ್ಕಾರು ಸಂಗತಿಗಳನ್ನು ಮಹತ್ವದ ಮಾಹಿತಿ ಎಂದು ಗುರುತಿಸಲಾಗಿದೆ. ಅದರಲ್ಲೊಂದು ಈ ಬಾರ್ ಬಾಜಿ ಪ್ರಕರಣ. ಆದರೆ ನಂತರ ಅಧಿಕಾರಿಗಳು ಈ ಮಾಹಿತಿ ಹಿಡಿದು ಕೈಗೊಂಡ ಕ್ರಮ ಏನು ಎನ್ನುವುದು ದಾಖಲಾಗಿಲ್ಲ. ಹಾಗಾಗಿ ಯಥಾಪ್ರಕಾರ ಪ್ರಶ್ನೆಯ ಬೆನ್ನಿಗೆ ಪ್ರಶ್ನೆ ಸಾಲು ಹಚ್ಚಿ ನಿಂತಿದೆ.

ಈ ಹಿಂದೆ ‘ಕೊಲ್ಲುವವರಿದ್ದರು ಖರೆ, ಕಾಯುವವರಿದ್ದರೇ?’ ಲೇಖನದಲ್ಲಿ ಗಾಂಧಿ ಹತ್ಯೆಯ ಬಗ್ಗೆ ಉಳಿದು ಹೋಗಿರುವ ಪ್ರಶ್ನೆಗಳನ್ನು ಪ್ರಸ್ತಾಪಿಸುತ್ತಾ ಅಮೆರಿಕದ ಮಟ್ಟಿಗೆ ಜಾನ್ ಎಫ್ ಕೆನಡಿ ಹತ್ಯೆ ಕುರಿತು ಅಮೆರಿಕದ ಜನರಲ್ಲಿರುವ ಗುಮಾನಿಯ ಬಗ್ಗೆ ಸೂಚ್ಯವಾಗಿ ಪ್ರಸ್ತಾಪಿಸಿದ್ದೆ.

ಈ ವಾರ, ಆ ಗುಮಾನಿ, ಅನುಮಾನಗಳು ಗರಿಗೆದರಿ ನಿಂತಿವೆ. ಕೆನಡಿ ಹತ್ಯೆ ಕುರಿತ ದಾಖಲೆಗಳ ಕೊನೆಯ ಕಂತಿನ ಬಹುತೇಕ ಪತ್ರ, ಚಿತ್ರ, ಟಿಪ್ಪಣಿಗಳನ್ನು ಅಮೆರಿಕದ ರಾಷ್ಟ್ರೀಯ ಪತ್ರಾಗಾರ ಇಲಾಖೆ ಸಾರ್ವಜನಿಕರಿಗೆ ಮುಕ್ತವಾಗಿ ತೆಗೆದಿರಿಸಿದೆ. ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ಸುಮಾರು 300 ದಾಖಲೆಗಳನ್ನು ಮಾತ್ರ ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಕೆನಡಿ ಹತ್ಯೆ ವಿಷಯದಲ್ಲಿ ಹಿರಿದಾದ ಎರಡು ಪ್ರಶ್ನೆಗಳಿವೆ. ಅಸಲಿಗೆ ಹತ್ಯೆಗೆ ಸಂಚು ರೂಪಿಸಿದ್ದು ಯಾರು? ತನಿಖೆಯ ದಾರಿ ತಪ್ಪಿಸಿ ಸತ್ಯ ಹೊರಬಾರದಂತೆ ನೋಡಿಕೊಳ್ಳಲಾಯಿತೆ? ಈ ಎರಡು ಮುಖ್ಯ ಪ್ರಶ್ನೆಗಳಿಗೆ ಹಲವು ಉಪಪ್ರಶ್ನೆಗಳು ಜೋತುಬಿದ್ದಿವೆ. ಸುಮಾರು 54 ವರ್ಷಗಳ ಹಿಂದೆ, ಅಂದರೆ 1963ರ ನವೆಂಬರ್ 22 ರಂದು ಕೆನಡಿ ಹತ್ಯೆಯಾದ ಬಳಿಕ ಅಧಿಕಾರಕ್ಕೇರಿದ ಲಿಂಡನ್ ಜಾನ್ಸನ್, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದ ಅರ್ಲ್ ವಾರೆನ್ ಅಧ್ಯಕ್ಷತೆಯಲ್ಲಿ ತನಿಖಾ ಆಯೋಗ ರಚಿಸಿದ್ದರು.

1964ರಲ್ಲಿ ತನ್ನ ವರದಿ ಸಲ್ಲಿಸಿದ ವಾರೆನ್ ಆಯೋಗ, ಆಸ್ವಲ್ಡ್ ಏಕಾಂಗಿಯಾಗಿ ಈ ಕೃತ್ಯ ಎಸಗಿದ್ದಾನೆ. ಆತ ಟೆಕ್ಸಾಸ್ ಶಾಲಾ ಕಟ್ಟಡದ ಪುಸ್ತಕ ಭಂಡಾರದಿಂದ ಹೊಡೆದ ಗುಂಡಿನಿಂದ ಕೆನಡಿ ಸಾವನ್ನಪ್ಪಿದರು ಎಂದು ಹೇಳಿತು. ಮೊದಲಿಗೆ ಮೂರು ಗುಂಡುಗಳು ಹತ್ಯೆಗೆ ಬಳಕೆಯಾಗಿದ್ದವು ಎನ್ನಲಾಯಿತು. ಕೇವಲ ಏಳು ಸೆಕೆಂಡ್ ಸಮಯದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿರುವ ವ್ಯಕ್ತಿಯತ್ತ ಮೂರು ಗುಂಡು ಹೊಡೆಯುವುದು ಸಾಧ್ಯವೇ ಎಂಬ ಪ್ರಶ್ನೆ ಬಂದಾಗ, ಇಲ್ಲ ಆಸ್ವಲ್ಡ್ ಬಂದೂಕಿನಿಂದ ಚಿಮ್ಮಿದ ಮೂರು ಸೆಂಟಿಮೀಟರ್ ಗಾತ್ರದ ಒಂದೇ ಗುಂಡು ಕೆನಡಿಯ ಕುತ್ತಿಗೆಯಿಂದ ತೂರಿ ಗಂಟಲನ್ನು ಸೀಳಿ, ಅದೇ ಕಾರಿನ ಮುಂದಿನ ಸೀಟಿನಲ್ಲಿ ಕೂತಿದ್ದ ಟೆಕ್ಸಾಸ್ ರಾಜ್ಯಪಾಲ ಜೇಮ್ಸ್ ಕನೋಲಿ ಎದೆಯ ಭಾಗ ಸವರಿಕೊಂಡು, ಮೊಣಕೈಗೆ ತಾಗಿ, ತೊಡೆಯ ಭಾಗದಲ್ಲಿ ಗಾಯ ಮಾಡಿತು ಎಂಬ ವಿವರ ನೀಡಲಾಯಿತು.

ವಾರೆನ್ ಆಯೋಗ ಮಂಡಿಸಿದ ಈ ವರದಿ ಜನರ ಸಂದೇಹ ನಿವಾರಿಸುವ ಬದಲು ಮತ್ತಷ್ಟು ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿತು. ರಸ್ತೆಯ ಬಲಭಾಗದಲ್ಲಿದ್ದ ಕಟ್ಟಡದ ಆರನೇ ಮಹಡಿಯಿಂದ, ಚಲಿಸುತ್ತಿದ್ದ ವಾಹನದಲ್ಲಿದ್ದ ವ್ಯಕ್ತಿಗೆ ಗುರಿಯಿಟ್ಟು ಹೊಡೆದ ಗುಂಡು, ಹೀಗೆ ವ್ಯಕ್ತಿಯ ಕುತ್ತಿಗೆ, ಗಂಟಲಿನಲ್ಲಿ ಚಲಿಸಿ, ಮುಂದಿದ್ದ ವ್ಯಕ್ತಿಯ ಎದೆ, ಮೊಣಕೈ ಸವರಿಕೊಂಡು, ತೊಡೆಯ ಭಾಗಕ್ಕೆ ಗಾಯ ಉಂಟು ಮಾಡಲು ಸಾಧ್ಯವೆ? ಹಾಗಾದರೆ ಇದು ಸಾಮಾನ್ಯ ಬುಲೆಟ್ ಅಲ್ಲವೇ ಅಲ್ಲ ಎಂದು ಜನ ವ್ಯಂಗ್ಯವಾಡಿದರು. ವಾರೆನ್ ಆಯೋಗದ ವರದಿಯನ್ನು ‘ಮ್ಯಾಜಿಕ್ ಬುಲೆಟ್ ಥಿಯರಿ’ ಎಂದು ಕರೆಯಲಾಯಿತು.

ಅದಾಗ ವಿಯೆಟ್ನಾಂ ಯುದ್ಧದಿಂದ ಅಮೆರಿಕ ಕೈ ಸುಟ್ಟುಕೊಂಡಿತ್ತು, ಕ್ಯೂಬಾದ ಫಿಡೆಲ್ ಕ್ಯಾಸ್ಟ್ರೋ ಜೊತೆ ಸೆಣಸಿ ಮೀಸೆ ಮಣ್ಣು ಮಾಡಿಕೊಂಡಿತ್ತು. ರಷ್ಯಾದೊಂದಿಗಿನ ಹಗೆತನವಂತೂ ಇದ್ದೇ ಇತ್ತು. ಮುಂದಿನ ಅಧ್ಯಕ್ಷೀಯ ಚುನಾವಣೆಗೆ ನಿಧಿ ಸಂಗ್ರಹ ಆರಂಭವಾಗಿತ್ತು ಮತ್ತು ಕೆನಡಿ ಅಭ್ಯರ್ಥಿಯಾಗುವುದು ಖಾತ್ರಿಯಿತ್ತು. ಹಾಗಾದರೆ ಕೆನಡಿ ಸಾವು ಬೇಕಿದ್ದದ್ದು ಯಾರಿಗೆ? ಸರ್ಕಾರ ಸತ್ಯವನ್ನು ಮುಚ್ಚಿಹಾಕುವ ಕೆಲಸಕ್ಕೆ ಮೊದಲಾಗಿದೆ ಎಂಬ ಭಾವ ಜನರಲ್ಲಿ ಮೂಡಿತು. ‘ತನಿಖೆಯ ವಿವರಗಳನ್ನು ಬಹಿರಂಗ ಪಡಿಸಿ’ ಎಂಬ ಜನಾಗ್ರಹ ಆರಂಭವಾಯಿತು.

1991ರಲ್ಲಿ ಅಲಿವರ್ ಸ್ಟೋನ್ ‘JFK’ ಎಂಬ ಚಲನಚಿತ್ರದ ಮೂಲಕ ಕೆನಡಿ ಹತ್ಯೆ ಹಿಂದಿನ ಷಡ್ಯಂತ್ರಗಳನ್ನು ಹಿರಿತೆರೆಗೆ ತಂದಾಗ, ಪ್ರತಿಭಟನೆಗೆ ಪುಷ್ಟಿ ಬಂತು. ಅಮೆರಿಕ ಕಾಂಗ್ರೆಸ್ ಒಮ್ಮತದಿಂದ ‘ಕೆನಡಿ ಹತ್ಯೆ ಕುರಿತ ದಾಖಲೆಗಳೆಲ್ಲವನ್ನೂ 25 ವರ್ಷಗಳ ಒಳಗೆ ಬಹಿರಂಗಗೊಳಿಸಬೇಕು’ ಎಂಬ ಜೆಕೆಎಫ್ ರೆಕಾರ್ಡ್ಸ್ ಆ್ಯಕ್ಟ್ ಅನುಮೋದಿಸಿತು.

ಅಂದಿನ ಸೀನಿಯರ್ ಬುಷ್ ಸರ್ಕಾರ ಆ ಕಾಯಿದೆಗೆ ಅಂಕಿತ ಹಾಕಿತು. ಅದರ ಫಲವಾಗಿಯೇ ಈ ಅಕ್ಟೋಬರ್ 26ರಂದು 2,800 ಕಡತಗಳು ಬಿಡುಗಡೆಗೊಂಡಿವೆ. ಅಷ್ಟೂ ಪತ್ರಗಳಲ್ಲಿ ಮಹತ್ವದ್ದೇನಾದರೂ ಇದೆಯೇ ಅರಿಯಲು ಕೊಂಚ ಸಮಯ ಬೇಕು. ಆದರೆ ಪುಟ ಸರಿಸಿ ಹೇಳುತ್ತಿರುವ ವಿಷಯತಜ್ಞರ ಪ್ರಕಾರ ಇಡಿಯಾಗಿ ಯಾವ ಮಾಹಿತಿಯೂ ಇದ್ದಂತಿಲ್ಲ.

ಬಿಡಿ, 20ನೇ ಶತಮಾನದ ನಿಗೂಢ ಹತ್ಯೆಗಳಲ್ಲಿ ಪ್ರಮುಖವಾದ ಜಾನ್ ಎಫ್ ಕೆನಡಿ ಹತ್ಯೆಯ ಹಿನ್ನೆಲೆಯನ್ನು ಗ್ರಹಿಸುವುದು ಕಠಿಣವೇ. ವಿವಿಧ ಆಯಾಮಗಳಲ್ಲಿ ಅಂದಿನ ಸಂದರ್ಭವನ್ನು ನೋಡಬೇಕಾಗುತ್ತದೆ. ಹಾಗೆ ನೋಡುವಾಗ ಕ್ಯೂಬಾ, ಮೆಕ್ಸಿಕೊ, ವಿಯೆಟ್ನಾಂ, ರಷ್ಯಾಗಳ ಹೆಸರುಗಳು ಪ್ರಸ್ತಾಪವಾಗುತ್ತವೆ. ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ಮತ್ತು ಭದ್ರತಾ ಇಲಾಖೆ ಎಫ್ಬಿಐ ಹೆಸರು ಬರುತ್ತದೆ. ಕೆನಡಿ ವೈಯಕ್ತಿಕ ಬದುಕಿನ ಖಯಾಲಿಗಳು ಬಂದು ಹೋಗುತ್ತವೆ.

ಕೆನಡಿ ಅಧ್ಯಕ್ಷರಾದ ಸಂದರ್ಭವನ್ನೇ ನೋಡುವುದಾದರೆ, ಶ್ವೇತ ಭವನಕ್ಕೆ ಕೆನಡಿ ಹಾದಿ ಅಷ್ಟೇನೂ ಸುಲಭವಾಗಿರಲಿಲ್ಲ. ಸೆನೆಟರ್ ಆಗಿದ್ದ ಕೆನಡಿಗೆ ಅಧ್ಯಕ್ಷರಾಗಬೇಕು ಎಂಬ ಕನಸಿತ್ತು. ಆದಷ್ಟು ಬೇಗ ಎಂಬ ಆತುರವೂ ಇತ್ತು. 1960ರ ಚುನಾವಣೆಯಲ್ಲಿ ಉಮೇದುವಾರಿಕೆಯನ್ನು ಕೆನಡಿ ಘೋಷಿಸಿದರು. ಆಗ ಕೆನಡಿಗಿಂತ ಹೆಚ್ಚು ವರ್ಚಸ್ಸಿದ್ದ, ಅನುಭವವಿದ್ದ ಹಲವು ಉಮೇದುವಾರರು ಕಣದಲ್ಲಿದ್ದರು. ಮೇಲಾಗಿ ಕೆನಡಿ ಕ್ಯಾಥೊಲಿಕ್. ಹಾಗಾಗಿ ಪ್ರಾಟೆಸ್ಟೆಂಟ್ ದೇಶದ ಅಧ್ಯಕ್ಷ ಪದವಿಗೆ ಕೆನಡಿ ಸಮರ್ಥ ಅಭ್ಯರ್ಥಿಯಾಗಲಾರರು ಎಂದೇ ಅಭಿಪ್ರಾಯವಿತ್ತು. ಪಕ್ಷದ ವರಿಷ್ಠ ಹ್ಯಾರಿ ಟ್ರೂಮನ್ ‘ಜಾಗತಿಕವಾಗಿ ಇದು ವಿಷಮ ಸಂದರ್ಭ. ಕಠಿಣ ನಿರ್ಧಾರಗಳನ್ನು ತಳೆಯಬೇಕಾಗುತ್ತದೆ. ಹೆಚ್ಚಿನ ಪ್ರಬುದ್ಧತೆ ಇರುವವರು ಅಧ್ಯಕ್ಷರಾದರೆ ಒಳ್ಳೆಯದು. ಕೊಂಚ ಸಂಯಮ ಇಟ್ಟುಕೋ’ ಎಂದು ಬುದ್ಧಿ ಹೇಳಿದ್ದರು.

ಕ್ಯಾಥೊಲಿಕ್ ಅಭ್ಯರ್ಥಿ ಎಂಬ ಹಣೆಪಟ್ಟಿ ಕೆನಡಿಗೆ ಮಾರಕವಾಗಬಹುದು, ಜೊತೆಗೆ ನಿಕ್ಸನ್ ವಿರುದ್ಧ ಕೆನಡಿ ಗೆಲುವು ಸುಲಭವಲ್ಲ ಎಂಬ ಗುಸುಗುಸು ಡೆಮಾಕ್ರಟಿಕ್ ಪಕ್ಷದ ಒಳಗೇ ಆರಂಭವಾಗಿತ್ತು. ಅಮೆರಿಕದ ಬರಹಗಾರ, ರಾಜಕೀಯ ವಿಶ್ಲೇಷಕ ವಾಲ್ಟರ್ ಲಿಪ್ಮನ್ ಮಾತೊಂದಿದೆ ‘The religious issue is an ugly and dangerous one, but as with a nettle, the best thing to do is grasp it firmly’. ಕೆನಡಿ ಮಾಡಿದ್ದೂ ಅದನ್ನೇ. ‘ನಾನು ಸಂಪ್ರದಾಯಸ್ಥ ಕ್ಯಾಥೊಲಿಕ್’ ಎಂದು ತಮ್ಮ ಭಾಷಣಗಳಲ್ಲಿ ಸೇರಿಸಿದರು. ಜೊತೆಗೆ ತಮ್ಮನ್ನು ನಿಕ್ಸನ್ ಗಿಂತ ಆಕರ್ಷಕವಾಗಿ ಬಿಂಬಿಸಿಕೊಂಡರು. ಎಲ್ಲರ ಅಂದಾಜನ್ನೂ ಸುಳ್ಳುಮಾಡಿ ಕೆನಡಿ ಚುನಾವಣೆಯಲ್ಲಿ ಗೆದ್ದು 43ನೆಯ ವಯಸ್ಸಿಗೆ ಅಮೆರಿಕದ ಅಧ್ಯಕ್ಷರಾದರು. ಆದರೆ ಈ ಕ್ಯಾಥೊಲಿಕ್ ಅಧ್ಯಕ್ಷನನ್ನು ಕಟ್ಟಾ ಪ್ರಾಟೆಸ್ಟೆಂಟರು ಎಷ್ಟು ದಿನ ಸಹಿಸಿಕೊಳ್ಳಬಹುದು ಎಂಬ ಪ್ರಶ್ನೆ ಇತ್ತು.

ಚುನಾವಣೆಯಂತೆಯೇ ಕೆನಡಿ ಮುಂದಿನ ಹಾದಿ ಕಠಿಣವಿತ್ತು. ಒಂದು ಕಾಲದಲ್ಲಿ ಅಮೆರಿಕದ ಕೈಗೊಂಬೆಯಾಗಿದ್ದ ಕ್ಯೂಬಾ ಮಗ್ಗುಲ ಮುಳ್ಳಾಗಿ ಪರಿಣಮಿಸಿತ್ತು. ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಫಿಡೆಲ್ ಕ್ಯಾಸ್ಟ್ರೋ ಕ್ಯೂಬಾದ ಆರ್ಥಿಕತೆಯ ಮೇಲಿದ್ದ ಅಮೆರಿಕದ ಹಿಡಿತ ಸಡಿಲಾಗುವಂತೆ ಕ್ರಮ ಕೈಗೊಂಡಿದ್ದರು. ಅಮೆರಿಕನ್ನರ ಒಡೆತನದಲ್ಲಿದ್ದ ಎಲ್ಲ ಉದ್ದಿಮೆಗಳನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ಅಮೆರಿಕದ ಭೂಮಾಲೀಕರನ್ನು ಕ್ಯೂಬಾದಿಂದ ಹೊರದಬ್ಬಲಾಯಿತು. ತನ್ನ ಬಗಲಲ್ಲಿ ಕಮ್ಯುನಿಸ್ಟ್ ರಾಷ್ಟ್ರವೊಂದು ಉದಯವಾಗುವುದು ಅಮೆರಿಕಕ್ಕೆ ಬೇಕಿರಲಿಲ್ಲ.

ರಷ್ಯಾದೊಂದಿಗಿನ ಕ್ಯೂಬಾ ಸ್ನೇಹ ಅಮೆರಿಕಕ್ಕೆ ಸಹ್ಯವಾಗಲಿಲ್ಲ. ಕ್ಯಾಸ್ಟ್ರೋ ಅವರನ್ನು ಪದಚ್ಯುತಿಗೊಳಿಸಲು, ಕೊಲ್ಲಲು ಅಮೆರಿಕ ಪ್ರಯತ್ನಿಸಿತು. ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ, ಕ್ಯಾಸ್ಟ್ರೋ ಆಡಳಿತವನ್ನು ವಿರೋಧಿಸುತ್ತಿದ್ದ ಕ್ರಾಂತಿಕಾರಿ ಪಡೆಗಳನ್ನು ಒಟ್ಟುಮಾಡಿ ಅವರಿಗೆ ಹಣ, ಶಸ್ತ್ರ ಪೂರೈಸಿತು. ಈ ಗುಂಪುಗಳನ್ನು ಹುರಿದುಂಬಿಸಿ ‘ಬೇ ಆಫ್ ಪಿಗ್ಸ್ ದಾಳಿ’ಗೆ ಪ್ರಚೋದಿಸಿತು. ಆದರೆ ಅದು ಯಶ ಕಾಣಲಿಲ್ಲ.

ಇದರಿಂದಾಗಿ ಕ್ಯೂಬಾ ಮತ್ತು ರಷ್ಯಾ ನಡುವಿನ ಸ್ನೇಹ ತಂತುಗಳು ಇನ್ನಷ್ಟು ಗಟ್ಟಿಯಾದವು. 1962ರ ಅಕ್ಟೋಬರ್ 14ರಿಂದ ಹತ್ತು ದಿನಗಳ ಕಾಲ ಇಡೀ ಜಗತ್ತು ಗಾಬರಿಯಿಂದ ಕ್ಯೂಬಾದತ್ತ ನೋಡುತ್ತಿತ್ತು. ಸೋವಿಯತ್ ರಷ್ಯಾ, ಅಮೆರಿಕದ ದೊಡ್ಡ ನಗರಗಳ ಮೇಲೆ ದಾಳಿ ಮಾಡಲು ಅಣ್ವಸ್ತ್ರ ಕ್ಷಿಪಣಿಗಳನ್ನು ಕ್ಯೂಬಾದಲ್ಲಿ ನೆಟ್ಟಿತ್ತು. ಚೆಗೆವಾರ ನೇತೃತ್ವದಲ್ಲಿ ಕ್ಯೂಬಾ ಸೇನೆ ಯುದ್ಧಕ್ಕೆ ಅಣಿಯಾಗಿತ್ತು. ತಡಮಾಡದೇ ಕೆನಡಿ, ಸೋವಿಯತ್ ನಾಯಕ ಕ್ರುಶ್ಚೇವ್ ಜೊತೆಗೆ ಮಾತುಕತೆಗೆ ಕುಳಿತರು.

ಟರ್ಕಿಯಲ್ಲಿ ಅಣಿಗೊಳಿಸಿದ್ದ ಅಣ್ವಸ್ತ್ರ ಕ್ಷಿಪಣಿಗಳನ್ನು ಅಮೆರಿಕ ತೆಗೆಯಿತು. ಕ್ಯೂಬಾದಿಂದ ಸೋವಿಯತ್ ಹೊರ ನಡೆಯಿತು. ಆದರೆ ಸಿಐಎ ಮತ್ತು ಕ್ಯಾಸ್ಟ್ರೋ ನಡುವಿನ ಹಾವು ಮುಂಗುಸಿ ಕದನ ಮಾತ್ರ ನಡೆದೇ ಇತ್ತು. ಇದಕ್ಕೆ ಪ್ರತಿಯಾಗಿ ಕೆನಡಿ ಹತ್ಯೆಗೆ ಕ್ಯಾಸ್ಟ್ರೋ ಪಡೆ ತಂತ್ರ ರೂಪಿಸಿತ್ತೇ? ಇದನ್ನೇ ತಿರುಗುಮುರುಗು ಮಾಡಿದರೆ ಮತ್ತೊಂದು ಪ್ರಶ್ನೆ ಕಾಣುತ್ತದೆ. ಕ್ಯೂಬಾದೊಂದಿಗೆ ರಣಕಹಳೆ ಮೊಳಗಿಸುವ ಸಲುವಾಗಿ ಸಿಐಎ ತನ್ನ ಅಧ್ಯಕ್ಷರ ಹತ್ಯೆಯಾಗುವುದನ್ನು ಅಪೇಕ್ಷಿಸಿತ್ತೇ?

ಇನ್ನು, ಹತ್ಯೆಯ ಮರುದಿನ ಕಳುಹಿಸಲಾದ ತಂತಿಯ ಪ್ರಕಾರ, ಹತ್ಯೆಗೆ ಎರಡು ತಿಂಗಳ ಮುಂಚಿನಿಂದಲೇ ಸಿಐಎ ಲೀ ಆಸ್ವಲ್ಡ್ ಮೇಲೆ ಬೇಹುಗಾರಿಕೆ ನಡೆಸುತ್ತಿತ್ತು. ಹಾಗಿದ್ದೂ ಆತನೇ ಅಮೆರಿಕ ಅಧ್ಯಕ್ಷರನ್ನು ಕೊಂದ! ಕೆನಡಿ ಹತ್ಯೆ ನಂತರ ಆರೋಪಿ ಆಸ್ವಲ್ಡ್ ನನ್ನು ಮುಗಿಸಲು ಭೂಗತಲೋಕ ಒಂದು ತಂಡವನ್ನು ರಚಿಸಿದೆ ಎಂಬ ಬಗ್ಗೆ ಡಾಲಸ್ ಪೊಲೀಸರಿಗೆ ಎಫ್ಬಿಐ ನಿರ್ದೇಶಕರಾಗಿದ್ದ ಜೆ.ಇ. ಹೂವರ್ ಎರಡು ಬಾರಿ ಎಚ್ಚರಿಕೆ ನೀಡಿದ್ದರು, ಅದರ ನಡುವೆಯೇ ಜಾನ್ ರೂಬಿ ಎಂಬ ಜೂಜು ಅಡ್ಡೆಯ ಮಾಲೀಕ, ಕೆನಡಿ ಹತ್ಯೆ ನಡೆದ ಎರಡು ದಿನಕ್ಕೆ, ಆಸ್ವಲ್ಡ್ ಏನನ್ನೂ ಬಾಯಿ ಬಿಡುವ ಮೊದಲು ಪೊಲೀಸರೆದುರೇ ಆತನನ್ನು ಹತ್ಯೆ ಮಾಡಿದ!

ಬಲಾಢ್ಯ ಅಮೆರಿಕದಂತಹ ಅಮೆರಿಕದಲ್ಲಿ ನಡೆದ ಇಂತಹ ಗೋಜಲು ಘಟನೆಗಳು, ಆ ದೇಶದ ಗೂಢಚಾರ ಮತ್ತು ಭದ್ರತಾ ಸಂಸ್ಥೆಗಳ ಬಲಹೀನತೆಯನ್ನು,ವೈರಿಗಳನ್ನು ಮಟ್ಟಹಾಕಲು ಅದು ಆಯ್ದುಕೊಂಡ ಧೂರ್ತ ಮಾರ್ಗವನ್ನು ಹೇಳುತ್ತಿತ್ತೇ? ಜಾಗತಿಕ ರಾಜಕೀಯದ ಸಂಕೀರ್ಣ ಕಾಲಘಟ್ಟದಲ್ಲಿ ಈ ಬಲಹೀನತೆಯನ್ನು ತೋರ್ಗೊಡದಿರಲು ಲಿಂಡನ್ ಜಾನ್ಸನ್ ಆಡಳಿತ ಸತ್ಯವನ್ನು ಅಡಗಿಸಿ, ಷಡ್ಯಂತ್ರದ ಕತೆಗಳಿಗೆ ಜಾಗ ಒದಗಿಸಿತೇ? ಪ್ರಶ್ನೆಗಳ ಪಂಕ್ತಿ ದೊಡ್ಡದಿದೆ. ಈ ಎಲ್ಲಾ ಪ್ರಶ್ನೆಗಳ ಹೊರತಾಗಿಯೂ, ಆಡಳಿತಾತ್ಮಕವಾಗಿ ತಮ್ಮ ಕಠಿಣ ನಿಲುವು ಹಾಗೂ ದೂರದೃಷ್ಟಿಯಿಂದ ಅಮೆರಿಕದ ಮಟ್ಟಿಗೆ ಹೊಸ ಭರವಸೆ ಮೂಡಿಸಿದ್ದ ಕೆನಡಿ ಹತ್ಯೆ ಬಗ್ಗೆ ಹೇಳುವುದು ಬಹಳ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.