ಮಂಗಳವಾರ, ಮೇ 26, 2020
27 °C

ಕೇಶವ್ ಸಿಂಗ್ ಪ್ರಕರಣವೆಂಬ ದಾರಿದೀಪ!

ಎ.ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

ಕೇಶವ್ ಸಿಂಗ್ ಪ್ರಕರಣವೆಂಬ ದಾರಿದೀಪ!

ಕೆಲವು ಶಾಸಕರ ವಿರುದ್ಧ ಮಾನಹಾನಿಕರ ವರದಿ ಪ್ರಕಟಿಸಿದ್ದಕ್ಕೆ ಇಬ್ಬರು ಪತ್ರಕರ್ತರಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡವನ್ನು ಕರ್ನಾಟಕ ವಿಧಾನಸಭೆ ವಿಧಿಸಿದ ನಂತರ ಮಾಧ್ಯಮ ಹಾಗೂ ಕರ್ನಾಟಕ ವಿಧಾನಸಭೆ ನಡುವೆ ಉಂಟಾಗಿರುವ ಸಂಘರ್ಷಕ್ಕೆ ಅಂತ್ಯಹಾಡಲು ಸಾಧ್ಯವಿದೆ. ತನಗೆ (ವಿಧಾನಸಭೆಗೆ) ನೀಡಿರುವ ಸಂಪೂರ್ಣ ಅಧಿಕಾರವನ್ನು ಚಲಾಯಿಸುವುದು ಹೇಗೆಂಬ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಗಳ ಬಗ್ಗೆ ವಿಧಾನಸಭೆಗೆ ಅರಿವಿದ್ದರೆ, ಈಗಿನ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿರುವ ಸಲಹೆ ಹಾಗೂ ನಿರ್ದೇಶನಗಳನ್ನು ವಿಧಾನಸಭೆ ಪಾಲಿಸಿದರೆ ಈ ಸಂಘರ್ಷ ಕೊನೆಗೊಳ್ಳಲಿದೆ.

ಕನ್ನಡದ ಎರಡು ಪತ್ರಿಕೆಗಳ ಸಂಪಾದಕರಾದ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಅವರಿಗೆ ಜೈಲು ಶಿಕ್ಷೆ ವಿಧಿಸುವ ವಿಧಾನಸಭೆಯ ತೀರ್ಮಾನವು ಇಡೀ ದೇಶದ ಮಾಧ್ಯಮಗಳ ಪಾಲಿಗೆ ಭಾರಿ ಆಘಾತದಂತೆ ಬಂದೆರಗಿದೆ. ಶಾಸನಸಭೆಯು ಹಿಂದೆಂದೂ ಇಂತಹ ತೀರ್ಮಾನ ಕೈಗೊಂಡಿರಲಿಲ್ಲ. ಈಗ ಕೈಗೊಂಡಿರುವ ತೀರ್ಮಾನವು ತೀರಾ ಕಠಿಣ ಎಂದೂ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯಂತೆಯೂ ಕಾಣಲಾಗುತ್ತಿದೆ.

ವಿಧಾನಸಭೆಯು ಇಂಥದ್ದೊಂದು ತೀರ್ಮಾನ ಕೈಗೊಂಡ ನಂತರ ಈ ಇಬ್ಬರು ಸಂಪಾದಕರು ಕರ್ನಾಟಕ ಹೈಕೋರ್ಟ್‌ ಮೊರೆ ಹೋದರು. ಸ್ಪೀಕರ್ ಎದುರು ಹಾಜರಾಗಿ, ಸದನದ ತೀರ್ಮಾನವನ್ನು ಪುನರ್ ಪರಿಶೀಲನೆಗೆ ಒಳಪಡಿಸುವಂತೆ ಮನವಿ ಮಾಡಿ ಎಂಬ ಸೂಚನೆಯನ್ನು ಕೋರ್ಟ್‌ ಈ ಇಬ್ಬರಿಗೆ ನೀಡಿತು. ಇದರ ಅನ್ವಯ, ತನ್ನ ತೀರ್ಮಾನವನ್ನು ಪುನರ್ ಪರಿಶೀಲಿಸುವಂತೆ ಮುಂದಿನ ಅಧಿವೇಶನದ ವೇಳೆ ಸ್ಪೀಕರ್ ರಾಜ್ಯ ವಿಧಾನಸಭೆಯನ್ನು ಕೋರಬಹುದು. ಯಾವುದೇ ದೃಷ್ಟಿಯಿಂದ ನೋಡಿದರೂ, ಇದು ಮಾನನಷ್ಟ ಮೊಕದ್ದಮೆ ದಾಖಲಿಸಬಹುದಾದ ಪ್ರಕರಣ. ಶಾಸಕರಿಗೆ ನೋವಾಗಿದ್ದರಿಗೆ ಅವರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಬಹುದು. ಕೋರ್ಟ್‌ ಸೂಚನೆಯನ್ನು ಪಾಲಿಸಿರುವ ಇಬ್ಬರೂ ಪತ್ರಕರ್ತರು, ಈಗ ಕೈಗೊಂಡಿರುವ ನಿರ್ಣಯವನ್ನು ಮರುಪರಿಶೀಲಿಸುವಂತೆ ಸ್ಪೀಕರ್ ಅವರಲ್ಲಿ ಮನವಿ ಮಾಡಿದ್ದಾರೆ.

ಶಾಸನಸಭೆಯು ಹೈಕೋರ್ಟ್‌ನ ಸಲಹೆಯನ್ನು ಪಾಲಿಸುವುದು ಉತ್ತಮ. ಶಾಸಕಾಂಗಕ್ಕೆ ತನ್ನ ಪರಮಾಧಿಕಾರವನ್ನು ಅತ್ಯಂತ ಕಠಿಣವಾಗಿ ಹಾಗೂ ತರ್ಕಬದ್ಧವಲ್ಲದ ರೀತಿಯಲ್ಲಿ ಬಳಸಲು ದೇಶದ ನ್ಯಾಯಾಂಗ ವ್ಯವಸ್ಥೆಯು ಎಂದಿಗೂ ಅವಕಾಶ ಮಾಡಿಕೊಟ್ಟಿಲ್ಲ ಎಂಬುದನ್ನೂ ಅರ್ಥ ಮಾಡಿಕೊಳ್ಳಬೇಕು. ಅತಿಯಾದ ಸ್ಪಂದನೆ ನೀಡುವ ಶಾಸನಸಭೆಗಳು ಹಾಗೂ ಮಾಧ್ಯಮಗಳಿಗೆ ಸಂಬಂಧಿಸಿದ ಪ್ರಕರಣಗಳ ನಿದರ್ಶನ ಹಲವಾರಿವೆ. ಎಲ್ಲ ಪ್ರಮುಖ ಪ್ರಕರಣಗಳಲ್ಲೂ ಶಾಸನಸಭೆಗಳು ನ್ಯಾಯಾಂಗದ ಅಭಿಪ್ರಾಯಕ್ಕೆ ಮಣಿಯಬೇಕಾಯಿತು, ಪತ್ರಕರ್ತರಿಗೆ ‘ಶಿಕ್ಷೆ ವಿಧಿಸುವ’ ಅಭಿಲಾಷೆಯ ತೀವ್ರತೆಯನ್ನು ತಗ್ಗಿಸಿಕೊಳ್ಳಬೇಕಾಯಿತು.

ಸ್ಪೀಕರ್ ಅವರ ನಿಷ್ಪಕ್ಷಪಾತ ಧೋರಣೆಯನ್ನು ಪ್ರಶ್ನಿಸಿದ ಲೇಖನ ಪ್ರಕಟಿಸಿದ್ದಕ್ಕಾಗಿ, ‘ಬ್ಲಿಟ್ಜ್’ ಪತ್ರಿಕೆಯ ಸಂಪಾದಕನ ಜವಾಬ್ದಾರಿ ಹೊತ್ತಿದ್ದ ದಿನ್ಶಾ ಹೋಮಿ ಮಿಸ್ತ್ರಿ ಅವರನ್ನು ಉತ್ತರ ಪ್ರದೇಶ ವಿಧಾನಸಭೆಯ ಸ್ಪೀಕರ್ ಆದೇಶದ ಅನುಸಾರ 1952ರಲ್ಲಿ ಒಂದು ವಾರ ಬಂಧನದಲ್ಲಿ ಇಡಲಾಯಿತು. ಮಿಸ್ತ್ರಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿತು. ಕೇಶವ್ ಸಿಂಗ್ ಅವರು ಪ್ರಕಟಿಸಿದ ಕರಪತ್ರವೊಂದು ಸದನದ ಸದಸ್ಯರೊಬ್ಬರನ್ನು ಅವಹೇಳನ ಮಾಡುವಂತಿದೆ ಎಂದು ಭಾವಿಸಿದ ಇದೇ ವಿಧಾನಸಭೆ 1964ರಲ್ಲಿ ಅವರನ್ನು (ಕೇಶವ್ ಸಿಂಗ್) ಬಂಧಿಸಬೇಕು ಎಂಬ ನಿರ್ಣಯ ಕೈಗೊಂಡಿತು. ಕೇಶವ್ ಸಿಂಗ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಅಲಹಾಬಾದ್ ಹೈಕೋರ್ಟ್‌ ಆದೇಶಿಸಿತು. ಆದರೆ ನ್ಯಾಯಾಂಗವನ್ನು ಎದುರು ಹಾಕಿಕೊಳ್ಳುವ ತೀರ್ಮಾನ ಕೈಗೊಂಡಿತು ಶಾಸಕಾಂಗ. ಕೇಶವ್ ಸಿಂಗ್, ಅವರ ಪರ ವಕೀಲರು ಹಾಗೂ ಸಿಂಗ್ ಬಿಡುಗಡೆಗೆ ಆದೇಶಿಸಿದ ಅಲಹಾಬಾದ್ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ಸದನವನ್ನು ನಿಂದಿಸಿದ್ದಾರೆ, ಹಾಗಾಗಿ ಅವರೆಲ್ಲರನ್ನೂ ಬಂಧಿಸಿ ಸದನದ ಮುಂದೆ ಹಾಜರುಪಡಿಸಬೇಕು ಎಂದು ಹೇಳಿತು ವಿಧಾನಸಭೆ. ಇದನ್ನು ಪ್ರಶ್ನಿಸಿ ಇಬ್ಬರೂ ನ್ಯಾಯಮೂರ್ತಿಗಳು ಹೈಕೋರ್ಟ್‌ ಮೊರೆ ಹೋದರು. ಇವರ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಿದ ಹೈಕೋರ್ಟ್‌ನ ಪೂರ್ಣ ಪೀಠ, ಸದನದ ನಿರ್ಣಯವನ್ನು ಅನುಷ್ಠಾನಕ್ಕೆ ತರುವುದಕ್ಕೆ ತಡೆಯಾಜ್ಞೆ ನೀಡಿತು. ನ್ಯಾಯಾಂಗ ಹಾಗೂ ಶಾಸಕಾಂಗದ ನಡುವಣ ಸಂಘರ್ಷವನ್ನು ಕೊನೆಗೊಳಿಸುವ ಕಳಕಳಿಯಿಂದ ರಾಷ್ಟ್ರಪತಿಯವರು ಸಂವಿಧಾನದ 143(1) ವಿಧಿ ನೀಡಿರುವ ಅಧಿಕಾರ ಬಳಸಿ ಈ ವಿಚಾರವನ್ನು ಸುಪ್ರೀಂ ಕೋರ್ಟ್‌ ಅವಗಾಹನೆಗೆ ತಂದರು. ಇದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಬಿ. ಗಜೇಂದ್ರಗಡ್ಕರ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಪೀಠ ನಡೆಸಿತು. ತಮ್ಮ ಹಾಗೂ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳ ಪರವಾಗಿ ಬಹುಮತದ ತೀರ್ಪನ್ನು ನ್ಯಾಯಮೂರ್ತಿ ಗಜೇಂದ್ರಗಡ್ಕರ್ ಅವರು ಬರೆದರು. ಈ ತೀರ್ಪಿನಲ್ಲಿ ಹೇಳಿರುವ ಮೂಲಭೂತ ಅಂಶಗಳು, ಶಾಸಕಾಂಗದ ಕೋಪಕ್ಕೆ ಗುರಿಯಾದ ಪತ್ರಕರ್ತರ ಹಾಗೂ ಇತರರ ರಕ್ಷಣೆಗೆ ಮತ್ತೆ ಮತ್ತೆ ಬಂದಿವೆ.

ಈ ಪ್ರಕರಣದಲ್ಲಿ ಕೋರ್ಟ್‌ ಹೇಳಿದ ಮುಖ್ಯ ಅಂಶಗಳು ಇವು: ಭಾರತದಲ್ಲಿ ಸಂವಿಧಾನವೇ ಪರಮೋಚ್ಚ, ಇಂಗ್ಲೆಂಡಿನ ಸಂಸತ್ತಿಗೆ ಇರುವಂತಹ ಸಾರ್ವಭೌಮತ್ವ ತಮಗೂ ಇದೆ ಎಂದು ಭಾರತದ ಶಾಸನಸಭೆಗಳು ಹೇಳುವಂತಿಲ್ಲ. ಶಾಸನಸಭೆಗಳಿಗೆ ಅಧಿಕಾರ ಹಾಗೂ ಹಕ್ಕುಬಾಧ್ಯತೆಗಳನ್ನು ಕಲ್ಪಿಸಿರುವ ಸಂವಿಧಾನದ 194(3)ನೇ ವಿಧಿಯನ್ನು ಅರ್ಥೈಸುವ ಅಧಿಕಾರ ಇರುವುದು ನ್ಯಾಯಾಂಗಕ್ಕೆ ಮಾತ್ರ. ಶಾಸನಸಭೆಗಳು ತಮಗಿರುವ ಪರಮಾಧಿಕಾರವನ್ನು ವಿವೇಕಯುತವಾಗಿ ಬಳಕೆ ಮಾಡಬೇಕು. ಶಾಸನಸಭೆಗಳು ತಮಗೆ ವಹಿಸಿದ ಶಾಸನ ರಚನಾ ಕ್ಷೇತ್ರ ದಾಟಿದರೆ, ನಾಗರಿಕರ ಮೂಲಭೂತ ಹಕ್ಕುಗಳ ವ್ಯಾಪ್ತಿ ಪ್ರವೇಶಿಸಿದರೆ, ಅಂತಹ ಕ್ರಮಗಳನ್ನು ನ್ಯಾಯಾಲಯ ರದ್ದುಪಡಿಸಬಹುದು.

ಆಂಧ್ರಪ್ರದೇಶದ ವಿಧಾನ ಪರಿಷತ್ತಿನಲ್ಲಿ ಉಂಟಾದ ಗದ್ದಲದ ಬಗ್ಗೆ 1983ರ ಮಾರ್ಚ್‌ 10ರಂದು ‘ಈನಾಡು’ ಪತ್ರಿಕೆ ಒಂದು ವರದಿ ಪ್ರಕಟಿಸಿತು. ವರದಿಯ ಶೀರ್ಷಿಕೆ ‘ಪೆದ್ದಲ ಗಲಭ’ (ಹಿರಿಯರ ಗಲಾಟೆ) ಎಂದಿತ್ತು. ಇದು ಇನ್ನೊಬ್ಬರಿಗೆ ತೊಂದರೆ ಮಾಡುವಂತಹ ಶೀರ್ಷಿಕೆಯೇನೂ ಅಲ್ಲ ಎಂದು ನೀವು ಹೇಳಬಹುದು. ಆದರೆ ವಿಧಾನ ಪರಿಷತ್ತು ಹಾಗೆ ಭಾವಿಸಲಿಲ್ಲ. ಆ ಶೀರ್ಷಿಕೆಯು ಸದನಕ್ಕೆ ಅಗೌರವ ತರುವಂತಿದೆ ಎಂದು ಸದಸ್ಯರು ಭಾವಿಸಿದರು. ಹೈದರಾಬಾದ್ ಪೊಲೀಸ್ ಆಯುಕ್ತರಿಗೆ ವಾರಂಟ್ ಜಾರಿಗೊಳಿಸಿದ ಸದನ, ಪತ್ರಿಕೆಯ ಸಂಪಾದಕ ರಾಮೋಜಿ ರಾವ್ ಅವರನ್ನು ಸದನದಲ್ಲಿ ಹಾಜರುಪಡಿಸುವಂತೆ ತಾಕೀತು ಮಾಡಿತು. ರಾವ್ ಅವರು ತಕ್ಷಣ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ರಾವ್ ಅವರನ್ನು ಬಂಧಿಸಬಾರದು ಎಂದು ಸೂಚಿಸಿತು. ಸುಪ್ರೀಂ ಕೋರ್ಟ್‌ ಆದೇಶ ತಿಳಿದ ಪೊಲೀಸ್ ಆಯುಕ್ತರು, ಹೊಸ ನಿರ್ದೇಶನ ನೀಡುವಂತೆ ಸದನವನ್ನು ಕೋರಿದರು. ಸದನವು ತಾನು ಹಿಂದೆ ಹೇಳಿದ್ದನ್ನೇ ಪುನರುಚ್ಚರಿಸಿತು. ವಿರೋಧಾಭಾಸದ ನಿರ್ದೇಶನಗಳ ನಡುವೆ ಸಿಲುಕಿದ ಪೊಲೀಸ್ ಆಯುಕ್ತರು, ರಾಮೋಜಿ ರಾವ್ ಅವರ ಕಚೇರಿಗೆ ತೆರಳಿ ತಮ್ಮ ‘ಜೊತೆ’ ಪರಿಷತ್ತಿಗೆ ‘ಬರುವಂತೆ’ ಕೇಳಿಕೊಂಡರು. ಈ ಕೋರಿಕೆಯನ್ನು ಒಪ್ಪದ ರಾವ್, ಸುಪ್ರೀಂ ಕೋರ್ಟ್‌ ಆದೇಶವನ್ನು ಬದಲಾಯಿಸದ ಹೊರತು ಅಥವಾ ಆ ಆದೇಶವನ್ನು ತೆರವು ಮಾಡದ ಹೊರತು ತಮ್ಮನ್ನು ಬಂಧಿಸಲಾಗದು ಎಂಬ ಪತ್ರವನ್ನು ಪೊಲೀಸ್ ಆಯುಕ್ತರಿಗೆ ನೀಡಿದರು. ರಾಜ್ಯಪಾಲರು ಎರಡು ದಿನಗಳ ನಂತರ ವಿಧಾನ ಪರಿಷತ್ತಿನ ಕಲಾಪವನ್ನು ಮುಂದೂಡಿದರು. ಆಗ ಆ ವಿಚಾರ ಅಲ್ಲಿಗೇ ಮುಕ್ತಾಯವಾಯಿತು.

ಇಂಥ ವಿಚಾರಗಳಲ್ಲಿ ಶಾಸನಸಭೆಗಳು ಯಾವ ಹಂತದವರೆಗೆ ಕ್ರಮ ಕೈಗೊಳ್ಳಬಹುದು? ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಗಜೇಂದ್ರಗಡ್ಕರ್ ಅವರು ಕೇಶವ್ ಸಿಂಗ್ ಪ್ರಕರಣದಲ್ಲಿ ಹೇಳಿದ ಮಾತನ್ನು ಇಲ್ಲಿ ಉಲ್ಲೇಖಿಸುವುದು ಉತ್ತಮ: ‘ನಿಂದಿಸಿದ್ದಕ್ಕೆ ಶಿಕ್ಷಿಸುವ ಅಧಿಕಾರವನ್ನು ಎಲ್ಲ ಸಂದರ್ಭಗಳಲ್ಲೂ ವಿವೇಕಯುತವಾಗಿ, ಎಚ್ಚರಿಕೆಯಿಂದ ಬಳಸಬೇಕು. ಈ ಅಧಿಕಾರವನ್ನು ಕೋಪದಲ್ಲಿ, ಕಿರಿಕಿರಿಗೊಂಡು ಮತ್ತೆ ಮತ್ತೆ ಅಥವಾ ಮನಸೋಇಚ್ಛೆ ಬಳಕೆ ಮಾಡುವುದರಿಂದ ನ್ಯಾಯಾಲಯದ ಘನತೆಯನ್ನು ಕಾಯಲು ಸಾಧ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ ಹೀಗೆ ಅಧಿಕಾರ ಬಳಕೆ ಮಾಡುವುದರಿಂದ ನಕಾರಾತ್ಮಕ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ತಾವು ನೀಡುವ ಆದೇಶಗಳ ಗುಣಮಟ್ಟದಿಂದ, ನಿರ್ಭೀತಿಯ ವರ್ತನೆಯಿಂದ, ನಿಷ್ಪಕ್ಷಪಾತ ಧೋರಣೆಯ ಮೂಲಕ ಸಾರ್ವಜನಿಕರಿಂದ ಗೌರವ ಸಂಪಾದಿಸಬಹುದು ಎಂಬುದನ್ನು ವಿವೇಕ ಹೊಂದಿರುವ ನ್ಯಾಯಮೂರ್ತಿಗಳು ಎಂದಿಗೂ ಮರೆಯುವುದಿಲ್ಲ. ನ್ಯಾಯಾಂಗವನ್ನು ಉದ್ದೇಶಿಸಿ ಆಡಿರುವ ಈ ಮಾತುಗಳು ಶಾಸನಸಭೆಗಳಿಗೂ ಅನ್ವಯವಾಗುತ್ತವೆ ಎನ್ನಲು ನಮಗೆ ಹಿಂಜರಿಕೆ ಇಲ್ಲ’. ಈ ಮಾತಿನ ಬಗ್ಗೆ ಗೌರವಾನ್ವಿತ ಸ್ಪೀಕರ್ ಆಲೋಚಿಸಬೇಕು!

editpagefeedback@prajavani.co.in

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.