ಬುಧವಾರ, ಮೇ 19, 2021
22 °C

ಕೋಮು ಸಂಘರ್ಷ: ಗಾಂಧಿವಾದಿ ದೃಷ್ಟಿಕೋನ

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ಕೋಮು ಸಂಘರ್ಷ: ಗಾಂಧಿವಾದಿ ದೃಷ್ಟಿಕೋನ

1941ರ ಏಪ್ರಿಲ್‌ನಲ್ಲಿ ಅಹಮದಾಬಾದ್‌ನಲ್ಲಿ ಕೋಮುಗಲಭೆ ಸ್ಫೋಟಗೊಂಡಿತು. ಮೂರು ದಿನ ನಿರಂತರ ನಡೆದ ಘರ್ಷಣೆಯಲ್ಲಿ ಹಲವರು ಬಲಿಯಾದರು, ಬಹಳಷ್ಟು ಜನ ಗಾಯಗೊಂಡರು ಮತ್ತು ನೂರಾರು ಮನೆಗಳು ನೆಲಸಮಗೊಂಡವು. ಮಸೀದಿಗಳು ಮತ್ತು ಮಂದಿರಗಳನ್ನು ಅಪವಿತ್ರಗೊಳಿಸಲಾಯಿತು.

ಧರ್ಮದ ನೆಲೆಯಲ್ಲಿ ರಾಷ್ಟ್ರವ್ಯಾಪಿಯಾಗಿ ನಡೆದ ಧ್ರುವೀಕರಣ ಅಹಮದಾಬಾದ್‌ನಲ್ಲಿ 1941ರಲ್ಲಿ ನಡೆದ ಕೋಮು ಗಲಭೆಗೆ ಕಾರಣ.

 

ಮುಸ್ಲಿಂ ಲೀಗ್ ಬೆಳೆಯುತ್ತಿತ್ತು ಮತ್ತು ಎಲ್ಲ ಭಾರತೀಯರನ್ನು ಪ್ರತಿನಿಧಿಸುತ್ತಿದೆ ಎಂಬ ಕಾಂಗ್ರೆಸ್‌ನ ನಿಲುವಿಗೆ ಸವಾಲೆಸೆಯಲು ಆರಂಭಿಸಿತ್ತು. 1937ರಿಂದ 1939ರ ವರೆಗೆ ಪ್ರಾಂತೀಯ ಸರ್ಕಾರಗಳ ಅಧಿಕಾರ ನಡೆಸಿದ ಕಾಂಗ್ರೆಸ್, ಮುಸ್ಲಿಂ ವಿರೋಧಿ ನೀತಿ ಅನುಸರಿಸಿದೆ ಎಂದು ಮುಸ್ಲಿಂ ಲೀಗ್ ಹಾಗೂ ಅದರ ಮುಖಂಡ ಮಹಮ್ಮದ್ ಅಲಿ ಜಿನ್ನಾ ಆರೋಪಿಸಿದ್ದರು. ಎರಡನೇ ಜಾಗತಿಕ ಮಹಾಯುದ್ಧ ಆರಂಭಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಸರ್ಕಾರಗಳು ರಾಜೀನಾಮೆ ನೀಡಿದರೂ ಕೋಮು ಧ್ರುವೀಕರಣ ಹಾಗೆಯೇ ಉಳಿಯಿತು.

 

1940ರ ಮಾರ್ಚ್‌ನಲ್ಲಿ ಮುಸ್ಲಿಂ ಲೀಗ್ ತನ್ನ ‘ಪಾಕಿಸ್ತಾನ ನಿರ್ಣಯ’ವನ್ನು ಅಂಗೀಕರಿಸಿ, ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಬೇಕು ಎಂಬ ಬೇಡಿಕೆ ಮುಂದಿಟ್ಟಿತು. ಇನ್ನೊಂದೆಡೆ ಹಿಂದೂ ಮಹಾಸಭಾ ಮತ್ತು ಆರ್‍ಎಸ್‍ಎಸ್‌ನಂತಹ ಹಿಂದೂ  ತೀವ್ರವಾದಿ ಗುಂಪುಗಳು ಸಂಘರ್ಷಕ್ಕೆ ಸನ್ನದ್ಧವಾಗುತ್ತಿದ್ದವು.

ಒಂದು ಕಾಲದಲ್ಲಿ ತಮ್ಮ ಮನೆಯಾಗಿದ್ದ ಪಟ್ಟಣದಲ್ಲಿ ಕೋಮು ಗಲಭೆ ನಡೆದದ್ದು ಮಹಾತ್ಮ ಗಾಂಧಿ ಅವರ ತೀವ್ರ ವೇದನೆಗೆ ಕಾರಣವಾಗಿತ್ತು.

 

1915ರಿಂದ 1930ರ ವರೆಗೆ ಗಾಂಧಿ ಅಹಮದಾಬಾದ್‌ನಲ್ಲಿ ನೆಲೆಸಿದ್ದರು. ಆದರೆ 1941ರಲ್ಲಿ ಗಾಂಧಿ ಅವರು ಮಧ್ಯ ಭಾರತದ ಪಟ್ಟಣ ವಾರ್ಧಾ ಸಮೀಪದ ಸೇವಾಗ್ರಾಮ ಎಂಬ ಹೊಸ ಆಶ್ರಮದಲ್ಲಿ ನೆಲೆಯಾಗಿದ್ದರು. ಕೋಮುಗಲಭೆ ಸ್ಫೋಟಗೊಂಡ ತಕ್ಷಣ ಗಾಂಧಿ ತಮ್ಮ ಕಾರ್ಯದರ್ಶಿ ಮತ್ತು ಆಪ್ತರಾಗಿದ್ದ ಮಹಾದೇವ ದೇಸಾಯಿ ಅವರನ್ನು ಅಹಮದಾಬಾದ್‌ಗೆ ಕಳುಹಿಸಿದರು. ಮಹಾದೇವ ದೇಸಾಯಿ ಗುಜರಾತಿ. ಹಲವು ವಾರಗಳನ್ನು ಅಹಮದಾಬಾದ್‌ನಲ್ಲಿ ಕಳೆದ ದೇಸಾಯಿ ಎಲ್ಲ ವರ್ಗಗಳ ಜನರ ಜತೆ ಮಾತನಾಡಿದರು. ಕೋಮುಗಲಭೆಯ ಬಗ್ಗೆ ಅವರು ಸುದೀರ್ಘವಾದ ವರದಿಯನ್ನು ಸಿದ್ಧಪಡಿಸಿದರೂ ಅದು ಆಗ ಪ್ರಕಟವಾಗಲಿಲ್ಲ. 

 

ಇತ್ತೀಚೆಗೆ ಈ ವರದಿಯನ್ನು ನಾನು ಪತ್ರಾಗಾರದಲ್ಲಿ ಕಂಡೆ. ಅತ್ಯಂತ ಹೃದಯಸ್ಪರ್ಶಿ ಮತ್ತು ಇಂದಿನ ಭಾರತದ ಕೋಮು ಪರಿಸ್ಥಿತಿಯ ಬಗ್ಗೆ ನೇರವಾಗಿ ಮಾತನಾಡುವಂತಿರುವ ವರದಿಯನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ. ದೀರ್ಘ ಕಾಲ ಗಾಂಧಿಯ ಅನುಯಾಯಿಯಾಗಿದ್ದ ದೇಸಾಯಿ ಅವರನ್ನು ಗೋರಿಗಳು, ಮಂದಿರಗಳು ಮತ್ತು ಮಸೀದಿಗಳ ನಾಶ ಆಳವಾಗಿ ಗಾಸಿಗೊಳಿಸಿತ್ತು. ಈ ಘಟನೆಗಳನ್ನು ಅವರು ‘ಹೇಡಿತನದ, ಕ್ರೂರ ಅಪವಿತ್ರೀಕರಣ’ ಎಂದು ಕರೆದರು. 

 

ದೇಸಾಯಿ ಹೀಗೆ ಬರೆಯುತ್ತಾರೆ: ‘ಮುಸ್ಲಿಮರು ಏನಾದರೂ ಮಾಡಿರಲಿ- ಅವರು ಮಾಡಿದ್ದಾರೆ ಕೂಡ; ಸಂಚುಕೋರರ ಕೈಯಲ್ಲಿರುವ ಆಯುಧಗಳು ಧಾರ್ಮಿಕ ದ್ವೇಷ ಮತ್ತು ವಿನಾಶದ ಕೃತ್ಯಗಳು ನಡೆಯುವಂತೆ ನೋಡಿಕೊಂಡಿವೆ. ನನ್ನಲ್ಲಿ ಅಧಿಕಾರವಿದ್ದಿದ್ದರೆ ಮಸೀದಿಗಳು ಮತ್ತು ಗೋರಿಗಳ ಮರುನಿರ್ಮಾಣ ಮಾಡಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದೆ... ಸಾಮರಸ್ಯ ಮತ್ತು ಪರಸ್ಪರ ಅರ್ಥ ಮಾಡಿಕೊಳ್ಳುವ ಸನ್ನಿವೇಶಕ್ಕೆ ಇದು ಖಂಡಿತವಾಗಿಯೂ ದಾರಿ ಮಾಡಿಕೊಡುತ್ತದೆ’.

 

‘ಪರಸ್ಪರ ಪಶ್ಚಾತ್ತಾಪದ ಅಭಿವ್ಯಕ್ತಿ ಮತ್ತು ಅದು ಸ್ಪಷ್ಟವಾಗಿ ಕಾಣಿಸಿಕೊಳ್ಳದೆ ಇದ್ದರೆ ನಿಜವಾದ ಕೋಮು ಸಾಮರಸ್ಯ ಸಾಧ್ಯವಿಲ್ಲ’ ಎಂದು ಮಹಾದೇವ ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ನಾಗರಿಕ ಸಮಾಜವೇ ಮುಂದಡಿ ಇಡಬೇಕು ಎಂದು ಅವರು ಭಾವಿಸಿದ್ದರು. ಗೊತ್ತುಗುರಿ ಇಲ್ಲದೆ ನಡೆದ ವಿನಾಶ ಮತ್ತು ಕ್ರೌರ್ಯವನ್ನು ತಡೆಯುವಲ್ಲಿ ಸರ್ಕಾರ ಅಸಮರ್ಥವಾಗಿದೆ ಎಂಬುದು ಸಾಬೀತಾಗಿದೆ. ಹಾಗಾಗಿ ಜನರ ನಡುವೆ ಒಗ್ಗಟ್ಟು ತರುವುದಕ್ಕೂ ಸರ್ಕಾರಕ್ಕೆ ಸಾಧ್ಯವಿಲ್ಲ. ತಾವು ಹೊಂದಿರುವ ಅಭಯದಿಂದಾಗಿ ಮುಸ್ಲಿಮರು ಏನನ್ನಾದರೂ ಮಾಡಿದರೆ ಸರ್ಕಾರ ಅದನ್ನು ಸುಮ್ಮನೆ ನೋಡಿ ನಿಲ್ಲಬಹುದು. ನಾಳೆ ಹಿಂದೂಗಳು ಅದನ್ನೇ ಮಾಡಿದರೆ ಸರ್ಕಾರ ಅದನ್ನು ನೋಡಿ ನಿಲ್ಲುವ ಸಾಧ್ಯತೆಯೇ ಹೆಚ್ಚು ಎಂದು ದೇಸಾಯಿ ಹೇಳಿದ್ದಾರೆ.

 

ಹಿಂಸೆಯನ್ನು ತಡೆಯುವ ಬದಲಿಗೆ ಹಿಂಸಾಕೃತ್ಯದಲ್ಲಿ ನಿರತರಾದವರನ್ನು ಓಲೈಸಲು ಸರ್ಕಾರ ಏನನ್ನಾದರೂ ಮಾಡಲು ಸಿದ್ಧವಿದೆ ಎಂದು ದೇಸಾಯಿ ತಮ್ಮ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. 1941ರಲ್ಲಿ ಆಡಳಿತ ನಡೆಸುತ್ತಿದ್ದ ಸರ್ಕಾರದ ಉದ್ದೇಶ ಸಾಮಾಜಿಕ ಸಾಮರಸ್ಯವನ್ನು ಪೋಷಿಸುವುದು ಆಗಿರಲಿಲ್ಲ; ಬದಲಿಗೆ ಬ್ರಿಟಿಷ್ ಆಡಳಿತ ನೆಲೆ ನಿಲ್ಲುವಂತೆ ಮಾಡುವುದಾಗಿತ್ತು. ಹಿಂದೂಗಳು ಮತ್ತು ಮುಸ್ಲಿಮರ ನಡುವೆ ‘ಪರಸ್ಪರ ಅರ್ಥ ಮಾಡಿಕೊಳ್ಳುವಿಕೆಯಿಂದ ಮಾತ್ರ ಶಾಂತಿ ನೆಲೆ ನಿಲ್ಲುವುದು ಸಾಧ್ಯ’ ಎಂದು ದೇಸಾಯಿ ನಂಬಿದ್ದರು.

 

ಮಹಾದೇವ ದೇಸಾಯಿ ಅವರು ನಂತರ ‘ಪೌರತ್ವ ಎಂಬ ಭಾವನೆಯ ಮರುಸ್ಥಾಪನೆ’ಯತ್ತ ಗಮನ ಹರಿಸುತ್ತಾರೆ.  ಸಮಾಜದಲ್ಲಿ ಯಾವಾಗಲೂ ಕೆಟ್ಟವರಿರುತ್ತಾರೆ; ಹಾಗಾಗಿ ‘ಗೂಂಡಾಗಳನ್ನು ನಿರ್ಮೂಲನ ಮಾಡುವುದು ಕಷ್ಟ’. ಆದರೆ ಇಂತಹ ಗೂಂಡಾಗಳು ಯಾವತ್ತೂ ‘ತಮ್ಮ ಇಷ್ಟ ಪ್ರಕಾರ ವರ್ತಿಸುವುದಿಲ್ಲ. ಅವರಿಗೆ ಸಮಾಜದಲ್ಲಿರುವ ಹೇಡಿಗಳು ಮತ್ತು ಶೋಷಣೆಯನ್ನು ಕೆಲಸವಾಗಿಸಿಕೊಂಡವರು ಬೆಂಬಲ ನೀಡುತ್ತಾರೆ’.

 

ಅಂಥವರೇ ಗೂಂಡಾಗಳನ್ನು ನೇಮಿಸಿಕೊಂಡಿರುತ್ತಾರೆ. ಅಂಥವರೇ ‘ಬೆಂಕಿ ಹಚ್ಚುವುದು ಮತ್ತು ಹತ್ಯೆಯಂಥ ಹೀನ ಕೃತ್ಯಗಳಿಗೆ ಯುವಕರನ್ನು ಬಳಸಿಕೊಳ್ಳುತ್ತಾರೆ’ ಎಂದು ದೇಸಾಯಿ ವಿವರಿಸಿದ್ದಾರೆ. ದಾರಿ ತಪ್ಪಿದ ಮತ್ತು ಆವೇಶಭರಿತ ಯುವಕರನ್ನು ಬಳಸಿಕೊಂಡು ಎರಡೂ ಕಡೆಯ ಜನಾಂಗೀಯವಾದಿಗಳು ಹಿಂಸೆ ಎಸಗುತ್ತಾರೆ ಎಂದು ದೇಸಾಯಿ ಹೇಳುತ್ತಾರೆ. ಈ ಮೂಲಕ ‘ಈ ಯುವಕರಿಗೆ ಸರಿಪಡಿಸಲಾಗದಷ್ಟು ಹಾನಿ  ಉಂಟು ಮಾಡಿ ವಿಷಪೂರಿತ ಪೌರರನ್ನು  ಸೃಷ್ಟಿಸಲಾಗುತ್ತದೆ’ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. 

 

‘ಮುಸ್ಲಿಮರು ತಮ್ಮ ಶತ್ರುಗಳು ಎಂದು ಹಿಂದೂಗಳು ಮತ್ತು ಅದೇ ರೀತಿ ಹಿಂದೂಗಳು ಶತ್ರುಗಳು ಎಂದು ಮುಸ್ಲಿಮರು ಯಾಕೆ ಭಾವಿಸುತ್ತಾರೆ? ಯುರೋಪ್‌ನಲ್ಲಿ ಆಂತರಿಕ ಯುದ್ಧ ನಡೆಯುತ್ತಿದ್ದರೂ ದೇಶಗಳು ಮತ್ತು ಜನಾಂಗಗಳ ನಡುವಣ ಗೋಡೆಗಳು ಮುರಿದು ಬೀಳುತ್ತಿರುವಾಗ ಈ ಎರಡು ಸಮುದಾಯಗಳ ನಡುವೆ ಕೆಡವಲಾಗದ ಗೋಡೆ ಕಟ್ಟಬೇಕೇ’ ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸುತ್ತಾರೆ.  ಎರಡೂ ಗುಂಪುಗಳ ವಾದವನ್ನು ನಿಷ್ಪಕ್ಷಪಾತವಾಗಿ ಆಲಿಸುವುದಕ್ಕೆ ಸಾಧ್ಯ ಇಲ್ಲವೇ ಎಂದೂ ಅವರು ಕೇಳುತ್ತಾರೆ. 

 

ಹಿಂದೂ ಮತ್ತು ಮುಸ್ಲಿಮರ ನಡುವೆ ಸಾಮರಸ್ಯ ಇಲ್ಲದ ರಾಜಕೀಯ ಸ್ವಾತಂತ್ರ್ಯಕ್ಕೆ ಯಾವುದೇ ಅರ್ಥ ಇಲ್ಲ ಎಂದು ಗಾಂಧಿಯ ಹಾಗೆಯೇ ದೇಸಾಯಿ ಕೂಡ ನಂಬಿದ್ದರು. ಗಾಂಧಿ ಮತ್ತು ದೇಸಾಯಿ ಅವರಿಬ್ಬರೂ ಅತ್ಯಂತ ಆಕರ್ಷಕವಾಗಿದ್ದ ವಕೀಲ ವೃತ್ತಿಯನ್ನು ಬಿಟ್ಟು ದೀರ್ಘ ಕಾಲ ಜೈಲಿನಲ್ಲಿ ಕಳೆದರು. ಕೊನೆಗೆ, ಸೈದ್ಧಾಂತಿಕವಾಗಿ ಸ್ವತಂತ್ರವಾದ ಆದರೆ ಭಿನ್ನಾಭಿಪ್ರಾಯಗಳ ಒಡಕಿನಿಂದ ಕೂಡಿದ ದೇಶವನ್ನು ಪಡೆಯುವುದು ಇದರ ಉದ್ದೇಶ ಆಗಿರಲಿಲ್ಲ. 

 

ಕಾಲು ಶತಮಾನ ಗಾಂಧಿ ಜತೆ ಕಳೆದಿದ್ದ ದೇಸಾಯಿ ಎಂದೂ ಈ ಮಟ್ಟದಲ್ಲಿ ಎದೆಗುಂದಿರಲಿಲ್ಲ. ‘ಸ್ವರಾಜ್ಯಕ್ಕಾಗಿ ನಡೆಯುವ ಹೋರಾಟ ಸುದೀರ್ಘ ಮತ್ತು ಪ್ರಯಾಸಕರವಾದುದು. ಆದರೆ ಅದು ಇಷ್ಟೊಂದು ದೀರ್ಘ ಮತ್ತು ಪ್ರಯಾಸಕರ ಎಂದು ಈಗಿನಂತೆ ಹಿಂದೆ ಎಂದೂ ಅನಿಸಿರಲಿಲ್ಲ’ ಎಂದು ಅಹಮದಾಬಾದ್‌ ಗಲಭೆಯ ನಂತರ ದೇಸಾಯಿ ಬರೆದಿದ್ದಾರೆ. 

 

ಕೈಚೆಲ್ಲುವುದು ದೇಸಾಯಿ ಅವರ ಜಾಯಮಾನವೇ ಅಲ್ಲ. ‘ಸ್ವರಾಜ್ಯದ ಪರ ಹೋರಾಟಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ತಮ್ಮ ಕೆಲಸದಲ್ಲಿ ಮತ್ತು ನಂಬಿದ ತತ್ವದಲ್ಲಿ ಅದೇ ಅಚಲ ನಂಬಿಕೆ ಇರಿಸಿಕೊಂಡು ತಮ್ಮ ಕೆಲಸ ಮುಂದುವರಿಸಲೇಬೇಕು. ನಮ್ಮ ಸಿದ್ಧಾಂತ ಅಥವಾ ತತ್ವದಲ್ಲಿ ಕೊರತೆ ಇಲ್ಲ. ಕೊರತೆ ಇರುವುದು ನಮ್ಮಲ್ಲಿ. ನಮ್ಮನ್ನು ನಾವು ಪುನಶ್ಚೇತನಗೊಳಿಸಿಕೊಂಡು ಹೊಸದಾಗಿ ರೂಪುಗೊಳ್ಳಲು ಆರಂಭಿಸಿದರೆ ಈಗ ನಾವು ಎದುರಿಸುತ್ತಿರುವ ಕೋಮು ಹಿಂಸೆಯಲ್ಲಿ ಕಳೆದುಹೋಗದಂತೆ ನೋಡಿಕೊಳ್ಳಬಹುದು’ ಎಂದು ದೇಸಾಯಿ ಬರೆದಿದ್ದಾರೆ. 

 

ಈ ವರದಿ ಸಿದ್ಧಪಡಿಸಿ ಸುಮಾರು ಒಂದು ವರ್ಷದ ನಂತರ ದೇಸಾಯಿ ಸಾಯುತ್ತಾರೆ. 1946 ಮತ್ತು 1947ರಲ್ಲಿ ಅವರು ಜೀವಿಸಿರುತ್ತಿದ್ದರೆ ಬಂಗಾಳ, ಬಿಹಾರ ಮತ್ತು ದೆಹಲಿಯಲ್ಲಿನ  ಕೋಮು ಬೆಂಕಿಯನ್ನು ಆರಿಸುವ ಕೆಲಸದಲ್ಲಿ ಗಾಂಧಿಯ ಜತೆಗಿರುತ್ತಿದ್ದರು. ಇತರ ಭಾರತೀಯರು ತಮ್ಮದೇ ಲೋಕದಲ್ಲಿದ್ದರೆ ಈ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ವಿಶ್ವಾಸ ಮರುಸ್ಥಾಪನೆಯ ಕೆಲಸದಲ್ಲಿ ಗಾಂಧಿ ಮಗ್ನರಾಗಿದ್ದರು.

 

ಶಾಂತಿಗಾಗಿ ಗಾಂಧಿ ನಡೆಸಿದ ಪ್ರಯತ್ನ ಹಾಗೂ ಪಾಕಿಸ್ತಾನದಲ್ಲಿ ಹಿಂದೂ ಮತ್ತು ಸಿಖ್ಖರಿಗೆ ನೀಡಿದ ಕಿರುಕುಳಕ್ಕೆ ಪ್ರತಿಯಾಗಿ ಭಾರತದಲ್ಲಿ ಮುಸ್ಲಿಮರ ಮೇಲೆ ಸೇಡು ತೀರಿಸಿಕೊಳ್ಳದಿರುವ ನೆಹರೂ ಅವರ ಕಟ್ಟುನಿಟ್ಟಿನ ಬದ್ಧತೆ ಭಾರತದ ಪ್ರಜಾಪ್ರಭುತ್ವ ಮತ್ತು ಬಹುತ್ವದ ರಾಜಕೀಯ ವ್ಯವಸ್ಥೆಯನ್ನು ರೂಪಿಸಿತು. ದೇಶ ವಿಭಜನೆ ತುಂಬಿದ್ದ ವಿಷವನ್ನು  ಹೊರಗೆ ತಳ್ಳಲು ಸಾಧ್ಯವಾಯಿತು. 

 

ಸ್ವಾತಂತ್ರ್ಯ ಪಡೆದ ಮೊದಲ ಒಂದೂವರೆ ದಶಕ ಕೋಮು ಸಂಘರ್ಷದಿಂದ ಭಾರತ ಮುಕ್ತವಾಗಿತ್ತು. ಆದರೆ 1960ರ ದಶಕದ ಆರಂಭದಲ್ಲಿಯೇ ದೇಶ ಕೋಮು ಹಿಂಸೆ ಕಂಡಿತು. ಆಗಾಗ ಭಾರಿ ಪ್ರಮಾಣದ ಕೋಮು ಗಲಭೆಗಳು ನಡೆದವು. ಈಗ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾಗಿದ್ದರೂ ಶಾಶ್ವತ ಕೋಮು ಸಾಮರಸ್ಯ ಇನ್ನೂ ಕೈಗೆ ನಿಲುಕಿಲ್ಲ. 

 

ಮಹಾದೇವ ದೇಸಾಯಿ ಅವರು 1941ರಲ್ಲಿ ಎತ್ತಿದ ಅಂಶಗಳಲ್ಲಿ ಎರಡು ಇಂದಿಗೂ ಪ್ರಸ್ತುತ ಎನಿಸುತ್ತಿವೆ. ಸಾಮಾಜಿಕ ಶಾಂತಿ ಸ್ಥಾಪನೆಗೆ ಸರ್ಕಾರಗಳನ್ನು ಮಾತ್ರ ಅವಲಂಬಿಸುವುದು ಸಾಧ್ಯವಿಲ್ಲ ಎಂಬುದು ಅದರಲ್ಲಿ ಮೊದಲನೆಯದು. ಕೆಲವು ರಾಜಕಾರಣಿಗಳು ಮತ್ತು ಸಚಿವರು ಕೋಮು ಸಾಮರಸ್ಯ ಬಯಸುತ್ತಾರೆ. ಆದರೆ ಹೆಚ್ಚಿನ ರಾಜಕಾರಣಿಗಳು ಮತ್ತು ಸಚಿವರು ಕೋಮು ಸಂಘರ್ಷ ಸೃಷ್ಟಿಸುತ್ತಾರೆ ಮತ್ತು ಅದರಿಂದ ಲಾಭ ಪಡೆದುಕೊಳ್ಳುತ್ತಾರೆ.

 

ಅಲ್ಪಸಂಖ್ಯಾತರಿಗೆ ಕಿರುಕುಳ ಉಂಟಾಗುವುದನ್ನು ತಡೆಯಲು ನೆಹರೂ ನೇತೃತ್ವದ  ಸರ್ಕಾರ ಸಾಕಷ್ಟು ಪ್ರಯತ್ನ ಮಾಡಿತು; ಆದರೆ ಅವರ ಮೊಮ್ಮಗ ರಾಜೀವ್ ಗಾಂಧಿ  ನೇತೃತ್ವದ ಸರ್ಕಾರ 1984ರಲ್ಲಿ ಸಿಖ್ಖರ ನರಮೇಧಕ್ಕೆ ಪ್ರೋತ್ಸಾಹ ನೀಡಿತು. ಅದೇ ರೀತಿ 1992-93ರಲ್ಲಿ ಮಹಾರಾಷ್ಟ್ರ, 2002ರಲ್ಲಿ ಗುಜರಾತ್, 2012ರಲ್ಲಿ ಉತ್ತರ ಪ್ರದೇಶ ರಾಜ್ಯ ಸರ್ಕಾರಗಳು ಮುಸ್ಲಿಮರ ವಿರುದ್ಧದ ಹಿಂಸೆಯನ್ನು ಸುಮ್ಮನೆ ನೋಡಿ ನಿಂತದ್ದು ಮಾತ್ರವಲ್ಲದೆ ಅದಕ್ಕೆ ಕುಮ್ಮಕ್ಕನ್ನೂ ನೀಡಿದವು. ಇದು ದೇಶದಲ್ಲಿ ನಡೆದ ಹಲವು ಕೋಮು ಗಲಭೆಗಳಲ್ಲಿ ಮೂರು ಮಾತ್ರ. 1989-90ರಲ್ಲಿ ಕಾಶ್ಮೀರದ ‘ಸ್ವಾತಂತ್ರ್ಯ ಹೋರಾಟಗಾರರು’ ಎಂದು ಹೇಳಿಕೊಳ್ಳುತ್ತಿರುವವರು ಅಲ್ಲಿದ್ದ ಪಂಡಿತ ಸಮುದಾಯದ ಜನರನ್ನು ಕಣಿವೆಯಿಂದ ಹೊಡೆದೋಡಿಸಿದರು.

 

ಸುಲಭವಾಗಿ ಪ್ರಭಾವಕ್ಕೆ ಒಳಗಾಗಬಹುದಾದ, ಅಸಂತೃಪ್ತ ಯುವಕರನ್ನು ಸಂಕುಚಿತ ಮತ್ತು ದ್ವೇಷಪೂರಿತ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ದೇಸಾಯಿ ಅವರು 1941ರಲ್ಲಿ ಎತ್ತಿದ ಇನ್ನೂ ಹೆಚ್ಚು ವಿಷಾದನೀಯವಾದ ಎರಡನೇ ಅಂಶ. ‘ಬೆಂಕಿ ಹಚ್ಚುವ ಮತ್ತು ಕೊಲೆ ಮಾಡುವ ಹೀನ ಕೃತ್ಯಗಳಿಗೆ ಯುವಕರನ್ನು ಬಳಸಿಕೊಳ್ಳುವ’ ಹಲವು ರಾಜಕೀಯ ಸಂಘಟನೆಗಳು ಭಾರತದಲ್ಲಿ ಇಂದು ಇವೆ.

 

ಬಜರಂಗದಳ, ವಿಶ್ವ ಹಿಂದೂ ಪರಿಷತ್‌ನಂತಹ ಹಿಂದೂ ಮೂಲಭೂತವಾದಿ ಸಂಘಟನೆಗಳು ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ಹೆಚ್ಚು ಪ್ರಭಾವಿಯಾಗಿವೆ; ಲಷ್ಕರ್ ಮತ್ತು ಹಿಜ್ಬುಲ್‌ನಂತಹ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಕಾಶ್ಮೀರದಲ್ಲಿ ಸಕ್ರಿಯವಾಗಿವೆ; ಶಿವಸೇನಾ ಮತ್ತು ಎಂಎನ್‍ಎಸ್‌ನಂತಹ ಸಮರಾಸಕ್ತಿಯ ಸಂಘಟನೆಗಳಿವೆ; ದೇಶದ ಕೇಂದ್ರ ಮತ್ತು ಪೂರ್ವ ಭಾಗಗಳಲ್ಲಿ ಮಾವೊವಾದಿ ಕ್ರಾಂತಿಕಾರಿಗಳು ಇದ್ದಾರೆ. ‘ಸಮಾಜದಲ್ಲಿರುವ ಹೇಡಿ ಮತ್ತು ಶೋಷಣೆ ನಡೆಸುವ’ ಗುಂಪುಗಳು ಎಂದು ದೇಸಾಯಿ ಅವರು ಕರೆದಿರುವ ಗುಂಪುಗಳಲ್ಲಿ ಈ ಎಲ್ಲವೂ ಸೇರುತ್ತವೆ; ಕೇಡಿನಿಂದ ಕೂಡಿದ ಉದ್ದೇಶಗಳಿಗಾಗಿ ಯುವಕರನ್ನು ಸಂಘಟಿಸುವ ಈ ಗುಂಪುಗಳು ಭಾರತದ ಯುವಜನರಿಗೆ ‘ಅಗಾಧವಾದ ಮತ್ತು ಸರಿಪಡಿಸಲಾರದ ಹಾನಿ’ಯನ್ನು ಉಂಟು ಮಾಡಿ, ‘ಪೌರತ್ವದ ಮೂಲದಲ್ಲಿಯೇ’ ಅದನ್ನು ವಿಷಯುಕ್ತಗೊಳಿಸುತ್ತಿವೆ.

 

ಮಹಾದೇವ ದೇಸಾಯಿ ಸಿದ್ಧಪಡಿಸಿದ ವರದಿ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆಯ ಗಂಟೆಯಾಗಿತ್ತು. ಆ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪಮಟ್ಟಿನ ವಿಶ್ವಾಸಾರ್ಹತೆ ಇರಬಹುದು; ಎಪ್ಪತ್ತೈದು ವರ್ಷಗಳ ನಂತರ ಈಗ ಅದು ಭ್ರಷ್ಟವಾಗಿದೆ ಮತ್ತು ಪುನಶ್ಚೇತನ ಸಾಧ್ಯವಿಲ್ಲದಷ್ಟು ಕುಸಿದು ಹೋಗಿದೆ.

ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರು ನಡೆಸುವ ಕೇಂದ್ರ ಸರ್ಕಾರ ಇಬ್ಬರು ಶ್ರೇಷ್ಠ ಗುಜರಾತಿಗಳಾದ ಗಾಂಧಿ ಮತ್ತು ದೇಸಾಯಿ ಅವರ ರೀತಿಯಲ್ಲಿ ಯೋಚಿಸಬಹುದು ಎಂದು ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲ.

 

ಹಾಗಾಗಿ ಈ ಇಬ್ಬರು ಶ್ರೇಷ್ಠ ವ್ಯಕ್ತಿಗಳ ಸಹಿಷ್ಣುತೆ, ಬಹುತ್ವ, ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಗೌರವ ನೀಡಿಕೆಯಂತಹ ಚಿಂತನೆಗಳನ್ನು ಈಗಲೂ ಆಲಿಸಲು ಮತ್ತು ಕಲಿಯಲು ಸಿದ್ಧವಿರುವ ಭಾರತದ ಜನರತ್ತ ಒಯ್ಯುವ ಕೆಲಸವನ್ನು ಜನಾಂಗೀಯ ಪೂರ್ವಗ್ರಹದಿಂದ ಕಳಂಕಿತಗೊಂಡಿಲ್ಲದ ನಾಗರಿಕ ಸಮಾಜ ಸಂಘಟನೆಗಳು ಮಾಡಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.