ಭಾನುವಾರ, ಏಪ್ರಿಲ್ 18, 2021
23 °C

ಗಂಟು ಗಂಟು ಮರ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ತಾವೋ ಚಿಂತನೆಯ ಹರಿಕಾರ ಲಾವೋತ್ಸು ಸದಾ ಸಂಚಾರಿ. ತನ್ನ ಶಿಷ್ಯರನ್ನು ಕರೆದುಕೊಂಡು ಸ್ಥಳದಿಂದ ಸ್ಥಳಕ್ಕೆ ನಡೆದು ಹೋಗುತ್ತಿದ್ದ. ಈ ಪ್ರವಾಸ ಕೂಡ ಅವನ ಶಿಕ್ಷಣದ ಪ್ರಮುಖ ಅಂಗವೇ ಆಗಿತ್ತು. ಒಂದು ಬಾರಿ ಹೀಗೆ ಕಾಡಿನಲ್ಲಿ  ಸಾಗುತ್ತಿರುವಾಗ ಅಲ್ಲಿ  ಅನೇಕ ಜನ ಮರಗಳನ್ನು ಕತ್ತರಿಸುತ್ತಿದ್ದುದು ಕಣ್ಣಿಗೆ ಬಿತ್ತು. ಆಗೆಲ್ಲ ಉರುವಲಿಗೆ ಮರವೇ ಗತಿ ಅಲ್ಲವೇ. ನೂರಾರು ಜನ ಸೇರಿ ಈ ಕೆಲಸ ಮಾಡುತ್ತಿದ್ದರು.ಲಾವೋತ್ಸುವನ್ನು ನೋಡಿ ಗುರುತಿಸಿ ಅವರೆಲ್ಲ ಗೌರವ ತೋರಿಸಿದರು. ಗುರು-ಶಿಷ್ಯರನ್ನು ತಮ್ಮಂದಿಗೇ ಊಟ ಮಾಡಲು ಆಹ್ವಾನಿಸಿದರು. ಲಾವೋತ್ಸು ಮರ ಕಡಿಯುವವರ ಯೋಗಕ್ಷೇಮ ವಿಚಾರಿಸಿದ.`ದಿನಕ್ಕೆ ಎಷ್ಟು ಮರ ಕಡಿಯುತ್ತೀರಿ, ಯಾವ ತರಹದ ಮರ ನಿಮಗೆ ಬೇಕು, ಕತ್ತರಿಸಿದ ಮರಗಳನ್ನು ಏನು ಮಾಡುತ್ತೀರಿ~ ಎಂಬುದಾಗಿ ಕೇಳಿದ. ಆಗ ಆ ಕೂಲಿಕಾರರ ಯಜಮಾನ ಹೇಳಿದ, `ಸ್ವಾಮಿ, ನಮ್ಮ ಜೀವನ ನಡೆಯುವುದೇ ಇದರ ಮೇಲೆ. ಮರಗಳನ್ನು ನಾವು ನೋಡಿ ಆಯ್ಕೆ ಮಾಡುತ್ತೇವೆ. ಕೆಲವೊಂದು ಮರಗಳು ನೇರವಾಗಿ, ದಪ್ಪವಾಗಿ ಬೆಳೆದಿರುತ್ತವೆ.ಅವುಗಳನ್ನು ಮನೆಯಲ್ಲಿ  ಪೀಠೋಪಕರಣಗಳನ್ನು ಮಾಡಲು ಬಳಸುತ್ತಾರೆ. ಅವುಗಳಿಂದ ನಮಗೆ ಹೆಚ್ಚು ಹಣ ಬರುತ್ತದೆ. ಇನ್ನು ಕೆಲವು ಮರಗಳು ಸ್ವಲ್ಪ ನೇರವಾಗಿ ಬೆಳೆದು ನಂತರ ಟಿಸಿಲು-ಟಿಸಿಲಾಗಿ ಹರಡಿರುತ್ತವೆ. ಅವುಗಳನ್ನು ಕತ್ತರಿಸಿ ಹಲಗೆಗಳನ್ನಾಗಿ ಮಾಡಿ ಮನೆಯ ಮಾಳಿಗೆಗಳಿಗೆ ಬಳಸಬಹುದು.ಅವುಗಳಿಂದ ಅಷ್ಟು ಬೆಲೆ ಹೆಚ್ಚಿಲ್ಲ. ಮತ್ತೆ ಕೆಲವು ಹೇಗೆ ಹೇಗೋ ಬೆಳೆದುಕೊಂಡು ನಿಂತಿರುತ್ತವೆ. ಅವುಗಳನ್ನು ಕತ್ತರಿಸಿ, ತುಂಡು ತುಂಡು ಮಾಡಿ ಉರುವಲಿಗೆ ಮಾರುತ್ತೇವೆ. ಅವುಗಳ ಬೆಲೆ ತೀರ ಕಡಿಮೆ~ -ಹೀಗೆ ಯಜಮಾನ ಹೇಳುತ್ತಿರುವಾಗ ಲಾವೋತ್ಸು ಒಂದು ವಿಷಯ ಗಮನಿಸಿದ. ಇವರೆಲ್ಲ ನೂರಾರು ಮರಗಳನ್ನು ಕತ್ತರಿಸಿದ್ದರೂ ಮಧ್ಯದಲ್ಲೊಂದು ದೊಡ್ಡ ಮರ ಹಾಗೆಯೇ ಇದೆ.

 

ದೊಡ್ಡದಾಗಿ ಹರಡಿಕೊಂಡಿದೆ, ಅದರಲ್ಲಿ  ಸಾವಿರಾರು ಪಕ್ಷಿಗಳು ಗೂಡು ಮಾಡಿಕೊಂಡಿವೆ. ಅದರ ನೆರಳು ದಟ್ಟವಾಗಿ ತಂಪಾಗಿವೆ. ಲಾವೋತ್ಸು ಕೇಳಿದ,  `ಈ ಮರವನ್ನು ಮಾತ್ರ ಯಾಕೆ ಕತ್ತರಿಸದೇ ಬಿಟ್ಟಿದ್ದೀರಿ~.  ಮರ ಕಡಿಯುವವ,   `ಸ್ವಾಮಿ, ಇದು ಯಾವುದಕ್ಕೂ ಪ್ರಯೋಜನವಿಲ್ಲ. ನೋಡುವುದಕ್ಕೆ ದೊಡ್ಡದಾಗಿದ್ದರೂ ಇದರ ಕಾಂಡ ಬರೀ ಗಂಟು ಗಂಟು.ಇದರಿಂದ ಪೀಠೋಪಕರಣಗಳನ್ನು ಮಾಡಲಾಗುವುದಿಲ್ಲ, ಮನೆಯ ಮಾಳಿಗೆಗೂ ಪ್ರಯೋಜನವಿಲ್ಲ. ಈ ಮರವನ್ನು ಉರುವಲಾಗಿ ಬಳಸಿದರೆ ಬೆಂಕಿಯೇ ಬರುವುದಿಲ್ಲ. ಬರೀ ಕೆಟ್ಟ ಹೊಗೆ ಬಂದು ಕಣ್ಣನ್ನೆಲ್ಲ ಹಾಳು ಮಾಡುತ್ತದೆ. ಅದಕ್ಕೇ ಈ ನಿಷ್ಟ್ರಯೋಜಕ ಮರವನ್ನು ಕತ್ತರಿಸಿಲ್ಲ~ ಎಂದು ಉತ್ತರಿಸಿದ.ಲಾವೋತ್ಸು ತನ್ನ ಶಿಷ್ಯರ ಕಡೆಗೆ ತಿರುಗಿ,  `ಮನುಷ್ಯರಲ್ಲೂ ಹೀಗೆಯೇ ಅಲ್ಲವೇ. ಕೆಲವರು ಚೆನ್ನಾಗಿ, ಬೆಳೆದು, ನೇರವಾಗಿ ಬದುಕಿ ಪ್ರಪಂಚಕ್ಕೆ ಪ್ರಯೋಜನರಾಗುತ್ತಾರೆ. ಕೆಲವರು ಸ್ವಲ್ಪ ಕಾಲ ಚೆನ್ನಾಗಿ ಬದುಕಿ ನಂತರ ದಾರಿ ತಪ್ಪಿದರೂ ಜಗತ್ತಿಗೆ ಸ್ವಲ್ಪವಾದರೂ ಕೊಡುಗೆ ನೀಡುತ್ತಾರೆ. ಕೆಲ ಜನ ಬದುಕನ್ನೇ ಗಂಟುಗಂಟು ಮಾಡಿಕೊಂಡು ಹಾಳುಮಾಡಿಕೊಳ್ಳುತ್ತಾರೆ. ಕೆಲವೇ ಕೆಲವರು ಈ ದೊಡ್ಡ ಮರದ ಹಾಗೆ ಯಾವುದಕ್ಕೂ ಪ್ರಯೋಜನ ಇಲ್ಲವೆನ್ನಿಸಿಕೊಳ್ಳುತ್ತಾರೆ. ನೀವು ಹೇಗೆ ಆಗಬೇಕೆನ್ನುತ್ತೀರಿ~  ಎಂದು ಕೇಳಿದ. ಎಲ್ಲರೂ ಮೊದಲನೆಯ ಮರದಂತೆ ನೇರವಾಗಿ ಬದುಕುತ್ತೇವೆ ಎಂದರು.ಆಗ ಲಾವೋತ್ಸು,  `ಅದು ಸರಿ, ಆದರೆ, ನೀವು ನಿಜವಾದ ಸಂತರಾಗಬೇಕೆಂದಿದ್ದರೆ ಕೊನೆಯ ಮರದ ಹಾಗೆ ಆಗಬೇಕು. ಹೊರಗಿನ ಪ್ರಪಂಚಕ್ಕೆ ಪ್ರಯೋಜನವಿಲ್ಲದ ಹಾಗೆ ಕಾಣಬೇಕು. ಅಂದಾಗ ಮಾತ್ರ ಪೀಠೋಪಕರಣ, ಮನೆಯ ಮಾಳಿಗೆ, ಉರುವಲಾಗಿ ನಿರ್ಜೀವವಾಗದೇ ಜೀವಂತವಾಗಿ ಉಳಿದು ಜನರಿಗೆ ನೆರಳು ನೀಡಿ, ಪಕ್ಷಿಗಳಿಗೆ ಆಶ್ರಯಧಾಮವಾಗುತ್ತೀರಿ. ಅದಲ್ಲದೇ ನೀವೂ ಸದಾಕಾಲ ಬೆಳೆಯುತ್ತೀರಿ, ಮತ್ತಷ್ಟು ಜನರನ್ನು ಬೆಳೆಸುತ್ತೀರಿ, ಆಂತರ್ಯದಲ್ಲಿ  ವೃದ್ಧಿಸುತ್ತೀರಿ~ ಎಂದ.ಈ ಮಾತು ನಮಗೂ ಅನ್ವಯಿಸುತ್ತದೆ. ನಮ್ಮ ನಮ್ಮ ಶಕ್ತಿಯಂತೆ ಜಗತ್ತಿಗೆ ಪ್ರಯೋಜನಕಾರಿಯಾಗಿ ಬದುಕುವುದೇ ನಮ್ಮ ಜೀವನದ ಸಾರ್ಥಕತೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.