ಶನಿವಾರ, ಜೂನ್ 19, 2021
21 °C

ಗಾಂಧಿಯನ್ನು ರೂಪಿಸಿದ ಚಂಪಾರಣ್

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |


ನೂರು ವರ್ಷಗಳ ಹಿಂದೆ ಇದೇ ವಾರ ಮೋಹನ್‌ದಾಸ್‌ ಕೆ. ಗಾಂಧಿ ಅವರು ಬಿಹಾರದ ಚಂಪಾರಣ್‌ ಜಿಲ್ಲೆಯಲ್ಲಿದ್ದರು.  ತಮ್ಮ ಇಚ್ಛೆಗೆ ವಿರುದ್ಧವಾಗಿ ಯುರೋಪ್‌ನ ಪ್ಲಾಂಟರ್‌ಗಳ ಒತ್ತಡದಿಂದ ಇಂಡಿಗೊ ಸಸ್ಯ (ನೀಲಿ ಬಣ್ಣ ತಯಾರಿಸುವುದಕ್ಕಾಗಿ ಬೆಳೆಯುವ ಒಂದು ಬಗೆಯ ಸಸ್ಯ) ಬೆಳೆಯಬೇಕಾಗಿ ಬಂದ ಇಲ್ಲಿನ ರೈತರ ಸಮಸ್ಯೆಗಳ ಕುರಿತು ಹಲವು ತಿಂಗಳು ಅಧ್ಯಯನ ನಡೆಸಿದರು. ಇಂಡಿಗೊ ಬೆಳೆಯಲು ಒಪ್ಪದ ರೈತರ ಜಮೀನುಗಳನ್ನು ಅಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

 

ವಸಾಹುತಶಾಹಿ ಸರ್ಕಾರದ ಜತೆಗೆ ತಮ್ಮ ಮಧ್ಯಸ್ಥಿಕೆಯ ಪರಿಣಾಮವಾಗಿ ರೈತ ಸಮುದಾಯಕ್ಕೆ ಗಣನೀಯ ಪ್ರಮಾಣದ ರಿಯಾಯಿತಿಗಳನ್ನು ದೊರಕಿಸಿಕೊಡಲು ಗಾಂಧಿಗೆ ಸಾಧ್ಯವಾಯಿತು. ಬಾಡಿಗೆಯನ್ನು ಭಾರಿ ಪ್ರಮಾಣದಲ್ಲಿ ಇಳಿಸಲಾಯಿತು ಮತ್ತು ಇಂಡಿಗೊ ಬೆಳೆಯುವುದನ್ನು ಕಡ್ಡಾಯಗೊಳಿಸಿದ್ದನ್ನು ಕೈಬಿಟ್ಟು ಸ್ವಯಂ ಪ್ರೇರಣೆಯಿಂದ ಬೆಳೆಯುವ ವ್ಯವಸ್ಥೆ ಅನುಷ್ಠಾನಕ್ಕೆ ಬಂತು. ಇದು ರೈತರಿಗೆ ಸಿಕ್ಕ ಬಹಳ ದೊಡ್ಡ ಗೆಲುವು. ಅಷ್ಟೇ ಅಲ್ಲ, ಗಾಂಧಿಗೆ ಕೂಡ ಇದು ದೊಡ್ಡ ವಿಜಯ. ಯಾಕೆಂದರೆ ದಕ್ಷಿಣ ಆಫ್ರಿಕಾದ ಹೋರಾಟಕ್ಕಿಂತ ಭಿನ್ನವಾಗಿ, ಒಬ್ಬ ನಾಯಕನಾಗಿ ಅವರ ವಿಶ್ವಾಸಾರ್ಹತೆಯನ್ನು ದೇಶವ್ಯಾಪಿ ಇದು ಸ್ಥಾಪಿಸಿತು. 

 

ಚಂಪಾರಣ್‌ನಲ್ಲಿ ಗಾಂಧಿಯ ಹೋರಾಟದ ವಿವರಗಳಿಗೆ ಈ ಅಂಕಣ ಹೋಗುವುದಿಲ್ಲ. ಬದಲಿಗೆ, ಗಾಂಧಿಯ ಇಲ್ಲಿನ ದೀರ್ಘ ವಾಸ್ತವ್ಯದ ಅವಧಿಯ ಆರು ವಿಶಿಷ್ಟ ಅಂಶಗಳನ್ನು ಗುರುತಿಸಿ, ಅವು ಭಾರತದಲ್ಲಿ ಅವರ ಮುಂದಿನ ಕೆಲಸಗಳನ್ನು ಹೇಗೆ ನಿರ್ಧರಿಸಿತು ಎಂಬ ಬಗ್ಗೆ ಬೆಳಕು ಚೆಲ್ಲುವುದು ಈ ಅಂಕಣದ ಉದ್ದೇಶ. ಗಾಂಧಿಗೆ ಇದು ತಮ್ಮ ತಾಯ್ನಾಡಿನಲ್ಲಿ ರೈತರ ಜೀವನದ ಮೊದಲ ನೇರ ಅನುಭವವಾಗಿತ್ತು.ಪೋರಬಂದರ್‌ ಮತ್ತು ರಾಜ್‌ಕೋಟ್‌ ಪಟ್ಟಣಗಳಲ್ಲಿ ಬೆಳೆದವರು ಗಾಂಧಿ. ನಂತರ ಬಾಂಬೆಯಂತಹ ಮಹಾನಗರಗಳಲ್ಲಿ ವಕೀಲಿ ವೃತ್ತಿ ನಡೆಸಿದರು. ಮುಂದಿನ ಎರಡು ದಶಕಗಳನ್ನು ಅವರು ದಕ್ಷಿಣ ಆಫ್ರಿಕಾದಲ್ಲಿ ಕಳೆದರು. 1915ರಲ್ಲಿ ಭಾರತಕ್ಕೆ ಹಿಂದಿರುಗಿದ ನಂತರ ದೇಶದ ವಿವಿಧ ಭಾಗಗಳಿಗೆ ಅವರು ಭೇಟಿ ನೀಡಿದರು. ಆದರೆ ಈ ಸಂಚಾರದಲ್ಲಿ ಅವರು ಸಂವಹನ ನಡೆಸಿದ್ದು ಮುಖ್ಯವಾಗಿ ಪಟ್ಟಣದ ಜನರ ಜತೆ. 

 

ಚಂಪಾರಣ್‌ನ ಎರಡು ಮುಖ್ಯ ಪಟ್ಟಣಗಳಾದ ಮೋತಿಹಾರಿ ಮತ್ತು ಬೆತಿಯಾಗಳಲ್ಲಿ ಪರ್ಯಾಯವಾಗಿ ವಾಸ್ತವ್ಯ ಹೂಡಿದ್ದ ಗಾಂಧಿ ಬೆಳಗ್ಗಿನಿಂದ ಸಂಜೆಯವರೆಗೆ ಹತ್ತಾರು ಜನರನ್ನು ಭೇಟಿಯಾಗುತ್ತಿದ್ದರು. ಕೆಲವು ದಿನಗಳಲ್ಲಿ ಅವರೇ ನೇರವಾಗಿ ಗ್ರಾಮಗಳಿಗೆ ಹೋಗುತ್ತಿದ್ದರು. ಹಲವು ರೈತರನ್ನು ಭೇಟಿಯಾಗುವುದರ ಜತೆಗೆ ಯುರೋಪ್‌ನಿಂದ ಬಂದಿದ್ದ ಪ್ಲಾಂಟರ್‌ಗಳು ಮತ್ತು ಕಾರ್ಖಾನೆ ಮಾಲೀಕರನ್ನೂ ಅವರು ಭೇಟಿಯಾಗುತ್ತಿದ್ದರು.

 

ಹೋದಲ್ಲೆಲ್ಲ ಮಫ್ತಿಯಲ್ಲಿದ್ದ ಪೊಲೀಸರು ಗಾಂಧಿಯನ್ನು ಅನುಸರಿಸುತ್ತಿದ್ದರು ಮತ್ತು ಅವರು ಏನು ಹೇಳುತ್ತಿದ್ದರು ಎಂಬುದನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. 

ತಮ್ಮ ರೂಢಿಯಂತೆ ಗಾಂಧಿ ಬಿಡುವಿಲ್ಲದೆ ಮತ್ತು ದಣಿವರಿಯದೆ ಕೆಲಸ ಮಾಡುತ್ತಿದ್ದರು. ಮೇ ಕೊನೆಯ ಹೊತ್ತಿಗೆ ಅವರು ಚಂಪಾರಣ್‌ಗೆ ಬಂದು ಆರು ವಾರಗಳಾಗಿದ್ದವು. ಆ ಸಂದರ್ಭದಲ್ಲಿ ಬಹುತೇಕ ಏಳು ಸಾವಿರ ಜನರ ಅನುಭವಗಳನ್ನು ಅವರು ನೇರವಾಗಿ ಆಲಿಸಿದ್ದರು. ಇದು ಚಂಪಾರಣ್‌ನ ಜನರ ಬದುಕು ಮತ್ತು ಕಷ್ಟಗಳ ಬಗ್ಗೆ ಗಾಂಧಿಗೆ ಗಾಢವಾದ ಗ್ರಹಿಕೆಯನ್ನು ಕೊಟ್ಟಿತ್ತು. 

 

ಭಾರತದ ಕೃಷಿಕರ ಜೀವನದ ಸರಿಯಾದ ಪರಿಚಯ ಗಾಂಧಿಗೆ ಸಿಕ್ಕಿದ್ದೇ ಚಂಪಾರಣ್‌ನಲ್ಲಿ. ಎರಡನೆಯದಾಗಿ, ಮುಂದಿನ ವರ್ಷಗಳಲ್ಲಿ ತಮಗೆ ನೆರವಾಗಬಹುದಾದ ಸಹೋದ್ಯೋಗಿಗಳ ಜಾಲವನ್ನು ಕಟ್ಟಲು ಗಾಂಧಿ ಆರಂಭಿಸಿದ್ದು ಕೂಡ ಅಲ್ಲಿಯೇ.

 

ಇಲ್ಲಿಗೆ ಬಂದು ವಾರದ ನಂತರ ತಮ್ಮ ಹಳೆಯ ಗೆಳೆಯ ಹೆನ್ರಿ ಪೊಲಾಕ್‌ಗೆ ಗಾಂಧಿ ಹೀಗೆ ಬರೆಯುತ್ತಾರೆ: ‘ದಕ್ಷಿಣ ಆಫ್ರಿಕಾದಲ್ಲಿ ಕಳೆದ ಅತ್ಯುತ್ತಮ ದಿನಗಳನ್ನು ನಾನಿಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ... ಇಲ್ಲಿನ ಜನರು ಎಲ್ಲ ರೀತಿಯ ನೆರವನ್ನೂ ನೀಡುತ್ತಿದ್ದಾರೆ.  

 

ಶೀಘ್ರವೇ ನಾಯ್ಡುಗಳು, ಸೊರಾಬ್ಜಿಗಳು ಮತ್ತು ಇಮಾಮ್‌ಗಳು ನನ್ನೊಂದಿಗೆ ಸೇರಿಕೊಳ್ಳಲಿದ್ದಾರೆ. ಕೆಚೇಲಿಯಾ ಅವರೂ ಶೀಘ್ರವೇ ನನ್ನ ಮುಂದೆ ಪ್ರತ್ಯಕ್ಷವಾಗಲಿದ್ದಾರೆ’ (ಈ ಎಲ್ಲರೂ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯ ಒಡನಾಡಿಗಳಾಗಿದ್ದರು).

 

ಸಿಂಧ್‌ನ ವಿದ್ವಾಂಸ, ಸಣಕಲು ವ್ಯಕ್ತಿ ಜೆ.ಬಿ. ಕೃಪಲಾನಿ ಜತೆಗಿನ ಸ್ನೇಹವನ್ನು ಗಾಂಧಿ ಇಲ್ಲಿಯೇ ಪರಿಷ್ಕರಿಸಿಕೊಂಡರು. ಈ ಇಬ್ಬರೂ 1915ರಲ್ಲಿ ಶಾಂತಿನಿಕೇತನದಲ್ಲಿ ಭೇಟಿಯಾಗಿದ್ದರು. 1917ರಲ್ಲಿ ಸ್ಥಳೀಯ ಸರ್ಕಾರಿ ಕಾಲೇಜೊಂದರಲ್ಲಿ ಕೃಪಲಾನಿ ಇತಿಹಾಸ ಅಧ್ಯಾಪಕರಾಗಿದ್ದರು. 

 

ಚಂಪಾರಣ್‌ನಲ್ಲಿ ಗಾಂಧಿಯ ಜತೆಗೆ ಕೃಪಲಾನಿ ಇದ್ದರು. ಪಟ್ನಾದ ವಕೀಲರ ಒಂದು ಗುಂಪು ಕೂಡ ಇತ್ತು. ಚಂಪಾರಣ್‌ ಬಗ್ಗೆ ದೀರ್ಘ ಕಾಲದಿಂದ ಆಸಕ್ತಿ ಹೊಂದಿದ್ದ ಬ್ರಿಜ್‌ಕಿಶೋರ್‌ ಪ್ರಸಾದ್‌, ಕಲ್ಕತ್ತಾದಲ್ಲಿ ಶಿಕ್ಷಣ ಪಡೆದಿದ್ದ, ವಕೀಲಿಕೆಯಲ್ಲಿ ಭಾರಿ ಪ್ರಸಿದ್ಧಿ ಸಂಪಾದಿಸಿದ್ದ ರಾಜೇಂದ್ರ ಪ್ರಸಾದ್‌ ಕೂಡ ಈ ಗುಂಪಿನಲ್ಲಿದ್ದರು. ಈ ಎಲ್ಲರೂ ನಂತರ ಬಹಳ ವರ್ಷ ಗಾಂಧಿಗೆ ನಿಷ್ಠರಾಗಿಯೇ ಉಳಿದರು. 

 

ಮೂರನೆಯದಾಗಿ, ಚಂಪಾರಣ್‌ನಲ್ಲಿ ಮಾಡಿದ ಕೆಲಸ ಮೊದಲ ಬಾರಿಗೆ ತಮ್ಮ ತವರು ರಾಜ್ಯ ಗುಜರಾತ್‌ನ ಹೊರಗಿನ ಪ್ರದೇಶದಲ್ಲಿ ಗಾಂಧಿಗೆ ವಿಶ್ವಾಸಾರ್ಹತೆ ತಂದುಕೊಟ್ಟಿತು. ಗಾಂಧಿಯ ಜತೆ ಚಂಪಾರಣ್‌ನಲ್ಲಿ ಕೆಲಸ ಮಾಡಿದ್ದ ವಕೀಲರು ಅವರ ಬಗ್ಗೆ ಪೂಜ್ಯ ಭಾವನೆ ಹೊಂದಿದ್ದರು. ಗಾಂಧಿ ಮಾತುಕತೆ ನಡೆಸಿದ ರೈತರ ಭಾವನೆಯೂ ಇದೇ ಆಗಿತ್ತು.

 

‘ಇಲ್ಲಿನ ಕೆಲಸ ದಿನಗಳೆದಂತೆ ನನಗೆ ಹೆಚ್ಚು ಹೆಚ್ಚು ಖುಷಿ ಕೊಡುತ್ತಿದೆ’ ಎಂದು ಡೆನ್ಮಾರ್ಕ್‌ನ ಗೆಳೆಯರೊಬ್ಬರಿಗೆ ಗಾಂಧಿ ಪತ್ರದಲ್ಲಿ ಬರೆದಿದ್ದರು. ‘ನನ್ನ ಸುತ್ತ ಕುಳಿತುಕೊಳ್ಳುವುದೇ ಬಡ ರೈತರಿಗೆ ಸಂತಸದ ವಿಚಾರ. ನಾನು ಮಾಡುತ್ತಿರುವುದು ಸರಿಯಾಗಿದೆ ಎಂಬ ವಿಶ್ವಾಸವೂ ಅವರಲ್ಲಿದೆ. ಈ ಪ್ರೀತಿಗೆ ನಾನು  ಅರ್ಹನೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ’ ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ. 

 

ನಾಲ್ಕನೆಯದಾಗಿ, ಗಾಂಧಿ ಅವರು ಚಂಪಾರಣ್‌ನಲ್ಲಿ ಮಾಡಿದ ಕೆಲಸ ಗುಜರಾತ್‌ನಲ್ಲಿಯೂ ಅವರ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹೆಚ್ಚಿಸಿತು. ‘ಗುಜರಾತ್‌ ಎಂದರೆ ‘ಸಂಪ್ರದಾಯವಾದಿ ಸಿದ್ಧಾಂತದ ತಟಸ್ಥ ಹಿನ್ನೀರು’ ಎಂಬ ಭಾವನೆ ರಾಷ್ಟ್ರೀಯವಾದಿ ವಲಯಗಳಲ್ಲಿ 1917ಕ್ಕೆ ಮೊದಲು ಇತ್ತು’ ಎಂದು ಇತಿಹಾಸಕಾರ ಡೇವಿಡ್‌ ಹಾರ್ಡಿಮನ್‌ ಬರೆದಿದ್ದಾರೆ.

 

ಗುಜರಾತ್‌ ಸಭಾದಲ್ಲಿ ಮಂದಗಾಮಿ ವಕೀಲರು ಮತ್ತು ಯಥಾಸ್ಥಿತಿವಾದಿಗಳದ್ದೇ ಪ್ರಾಬಲ್ಯವಿತ್ತು. ‘ದಾರಿ ತಪ್ಪಿದ ವಿಚಿತ್ರ ಧಾರ್ಮಿಕ ವ್ಯಕ್ತಿ’ ಎಂಬುದು  ಗಾಂಧಿ ಬಗ್ಗೆ ಆಗ ಇದ್ದ ಅಭಿಪ್ರಾಯವಾಗಿತ್ತು. ಗಾಂಧಿ ಚಂಪಾರಣ್‌ ತಲುಪಿದ ಕೂಡಲೇ  ಅಲ್ಲಿಂದ ತಕ್ಷಣವೇ ಹೊರ ಹೋಗಬೇಕು ಎಂದು ವಸಾಹತುಶಾಹಿ ಸರ್ಕಾರ ನೀಡಿದ ಆದೇಶವನ್ನು ಅವರು ತಿರಸ್ಕರಿಸಿದರು.

 

ಇದು ತಿಳಿಯುತ್ತಿದ್ದಂತೆಯೇ ಗಾಂಧಿ ಬಗ್ಗೆ ಅವರೆಲ್ಲರ ಮನೋಭಾವವೂ ಬದಲಾಯಿತು. ಸರ್ಕಾರದ ಆದೇಶವನ್ನು ಗಾಂಧಿ ಪ್ರಶ್ನಿಸಿದ ಸುದ್ದಿ ಅಹಮದಾಬಾದ್ ತಲುಪುತ್ತಲೇ ಗುಜರಾತ್‌ ಸಭಾದ ವಕೀಲರ ವಿಭಾಗ ಮೈಕೊಡವಿ ನಿಂತಿತು. ತನ್ನ ಮುಂದಿನ ಅಧ್ಯಕ್ಷರನ್ನಾಗಿ ಈ ‘ಧೀರ ವ್ಯಕ್ತಿ’ಯನ್ನು ಆಯ್ಕೆ ಮಾಡಲು ನಿರ್ಧರಿಸಿತು. 

 

ಲಂಡನ್‌ನಲ್ಲಿ ಕಲಿತು ಹಿಂದಿರುಗಿದ್ದ ವಕೀಲ ವಲ್ಲಭಭಾಯ್‌ ಪಟೇಲ್‌ ಆಗ ಗುಜರಾತ್‌ ಸಭಾದ ಪ್ರಭಾವಿ ಸದಸ್ಯರಾಗಿದ್ದರು. ಚಂಪಾರಣ್‌ನಲ್ಲಿ ಗಾಂಧಿ, ಸರ್ಕಾರದ ಆದೇಶವನ್ನು ಧಿಕ್ಕರಿಸಿದ ಸುದ್ದಿ ಬಂದಾಗ ಸಭಾದಲ್ಲಿ ಕುಳಿತು ಅವರು ಇಸ್ಪಿಟ್‌ ಆಡುತ್ತಿದ್ದರು. ಶೀಘ್ರವೇ ಅವರು ತಮ್ಮ ಆಕರ್ಷಕ ವಕೀಲಿಕೆ ಕೆಲಸ ಬಿಟ್ಟು ಗಾಂಧಿಯ ಜತೆ ಸೇರಿಕೊಂಡರು.

 

1917ರ ಕೊನೆಯ ಹೊತ್ತಿಗೆ ಇನ್ನಿಬ್ಬರು ವಕೀಲರಾದ ಮಹದೇವ ದೇಸಾಯಿ ಮತ್ತು ನರಹರಿ ಪಾರೀಖ್‌ ಅವರೂ ಗಾಂಧಿಯ ಜತೆ ಸೇರಿದರು. ಪಟೇಲ್‌ ಅವರಂತೆಯೇ ಈ ಇಬ್ಬರು ಕೂಡ ಮಹಾತ್ಮ ಗಾಂಧಿ ಅವರ ರಾಷ್ಟ್ರೀಯ ಮತ್ತು ಸಾಮಾಜಿಕ ಪುನರುಜ್ಜೀವನದ ಕಾರ್ಯಕ್ರಮದ ಅವಿಭಾಜ್ಯ ಅಂಗಗಳಾದರು. 

 

ಐದನೆಯದಾಗಿ, ಚಂಪಾರಣ್‌ನಲ್ಲಿದ್ದ ದಿನಗಳಲ್ಲಿ ಅದೇ ಮೊದಲ ಬಾರಿಗೆ ಬ್ರಿಟಿಷ್‌ ಸರ್ಕಾರದ ಅಧಿಕಾರಶಾಹಿಯ ಜತೆ ಸುಸ್ಥಿರ ರೀತಿಯ ಸಂವಹನ ನಡೆಸುವ ಅವಕಾಶ ಗಾಂಧಿ ಅವರಿಗೆ ಸಿಕ್ಕಿತು.

 

ಹಿಂದೆ ದಕ್ಷಿಣ ಆಫ್ರಿಕಾದಲ್ಲಿಯೂ ಬಿಳಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳ ಜತೆ ಕ್ಲಿಷ್ಟಕರವಾದ ಹಲವು ಮುಖಾಮುಖಿಗಳನ್ನು ನಡೆಸಿದ್ದರು. ಈಗ ಭಾರತದಲ್ಲಿಯೂ ಜಿಲ್ಲಾಧಿಕಾರಿಗಳು, ಆಯುಕ್ತರು ಮತ್ತು ಬಿಹಾರದ ಲೆಫ್ಟಿನೆಂಟ್‌ ಗವರ್ನರ್‌ ಜತೆಗೆ ಅವರು ಮಾತುಕತೆ ನಡೆಸಬೇಕಾಗಿ ಬಂತು. ಇವುಗಳಲ್ಲಿ ಹೆಚ್ಚಿನ ಮುಖಾಮುಖಿ ಹಿತಕರವಾದುದಾಗಿರಲಿಲ್ಲ. 

 

ರೈತರಿಂದ ಪಡೆದುಕೊಂಡಿದ್ದ ಮಾಹಿತಿ ಮತ್ತು ಅನುಭವಗಳನ್ನು ಬಿಹಾರ ಸರ್ಕಾರ ನೇಮಿಸಿದ್ದ ಚಂಪಾರಣ್‌ ಕೃಷಿ ವಿಚಾರಣಾ ಸಮಿತಿಯ ಮುಂದೆ 1917ರ ಜೂನ್‌ ಎರಡನೇ ವಾರದಲ್ಲಿ ಗಾಂಧಿ ಇರಿಸಿದರು. ಈ ಸಮಿತಿಯಲ್ಲಿ ನಾಲ್ವರು ಐಸಿಎಸ್‌ ಅಧಿಕಾರಿಗಳು ಮತ್ತು ಗಾಂಧಿ ಸೇರಿ ಏಳು ಸದಸ್ಯರಿದ್ದರು. ಕೇಂದ್ರ ಪ್ರಾಂತ್ಯದ ಅಧಿಕಾರಿಯೊಬ್ಬರು ಸಮಿತಿಯ ಅಧ್ಯಕ್ಷರಾಗಿದ್ದರು. ಈ ಸಮಿತಿಯ ಸಭೆಗಳು ವಸಾಹತು ಸರ್ಕಾರದ ಬಗ್ಗೆ ಗಾಂಧಿ ಅವರ ಗ್ರಹಿಕೆಯನ್ನು ವಿಸ್ತರಿಸಿದವು. ಯಾಕೆಂದರೆ 1917ಕ್ಕೆ ಹಿಂದೆ ಈ ಬಗ್ಗೆ ಅವರಿಗೆ ಹೆಚ್ಚಿನ ತಿಳಿವಳಿಕೆ ಇರಲಿಲ್ಲ. 

 

ಕೊನೆಯದಾಗಿ, ರೈತರು, ವಕೀಲರು, ವ್ಯಾಪಾರಿಗಳು ಸೇರಿ ಎಲ್ಲ ವರ್ಗಗಳ ಜನರ ಮನಗೆಲ್ಲುವುದು ತಮಗೆ ಸಾಧ್ಯವಾಗಬಹುದು ಎಂಬ ಆತ್ಮವಿಶ್ವಾಸವನ್ನು ಇದು ಗಾಂಧಿಯಲ್ಲಿ ಮೂಡಿಸಿತು. ಚಂಪಾರಣ್‌ಗೆ ಬಂದ ಕೂಡಲೇ ಗಾಂಧಿಯ ಬಗ್ಗೆ ರೈತರ ವಿಶ್ವಾಸ ಹೇಗಿತ್ತು ಎಂಬುದನ್ನು ನಾನು ಈಗಾಗಲೇ ವಿವರಿಸಿದ್ದೇನೆ.

 

ತಿಂಗಳುಗಳ ನಂತರ 1917ರ ಅಕ್ಟೋಬರ್‌ 3ರಂದು ಚಂಪಾರಣ್‌ ಕೃಷಿ ವಿಚಾರಣಾ ಸಮಿತಿ ತನ್ನ ವರದಿ ಸಲ್ಲಿಸಿತು. ಈ ವರದಿಯ ಹೆಚ್ಚಿನ ಅಂಶಗಳು ರೈತರ ಪರವಾಗಿದ್ದವು. ಅಹಮದಾಬಾದ್‌ಗೆ ಹಿಂದಿರುಗುವ ಮೊದಲು ಗಾಂಧಿ ಅವರು ಒಂದು ವಾರ ಮೋತಿಹಾರಿಯಲ್ಲಿ ಮತ್ತು ಎರಡು ದಿನ ಬೆತಿಯಾದಲ್ಲಿ ಕಳೆದರು. ಅವರಿದ್ದ ರೈಲು ಬೆತಿಯಾ ತಲುಪಿದಾಗ ಅವರನ್ನು ಬರಮಾಡಿಕೊಳ್ಳಲು ಅಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರಿದ್ದರು. ಈ ಬಗ್ಗೆ ಪೊಲೀಸ್‌ ಗುಪ್ತಚರ ವಿಭಾಗದ ವರದಿ ಹೀಗಿತ್ತು: 

 

‘ರೈಲು ನಿಲ್ಲುವುದಕ್ಕೆ ಮೊದಲೇ ಜನರು ‘ಗಾಂಧೀಜಿ ಕಿ ಜೈ’, ‘ಗಾಂಧಿ ಮಹಾರಾಜ್‌ ಕಿ ಜೈ’ ಎಂಬ ಘೋಷಣೆಗಳನ್ನು ಕೂಗಿದರು. ಜನರು ಬ್ಯಾಂಡ್‌ ಬಾರಿಸುತ್ತಿದ್ದರು ಮತ್ತು ನಿಲ್ದಾಣದಲ್ಲೆಲ್ಲ ಧ್ವಜಗಳು ಹಾರಾಡುತ್ತಿದ್ದವು. ಹತ್ತಿರದ ಮತ್ತು ದೂರದ ಹಳ್ಳಿಗಳಿಂದ ಬಂದ ಜನರಲ್ಲಿ ಶಾಲಾ ಮಕ್ಕಳು ಮತ್ತು ವಕೀಲರೂ ಸೇರಿದ್ದರು.

 

ಅವರು ಗಾಂಧಿಯ ಮೇಲೆ ಹೂಗಳನ್ನು ಎಸೆದರು ಮತ್ತು ಹಾರ ಹಾಕಿದರು. ಗಾಂಧಿಯವರಿಗಾಗಿ ವೇದಿಕೆಯಲ್ಲಿ ಕೆಂಪು ವಸ್ತ್ರವನ್ನು ಹಾಸಲಾಗಿತ್ತು. ಬೆತಿಯಾದ ಸೂರಜ್‌ಮಲ್‌ ಮಾರ್ವಾಡಿ ಅವರು ತಮ್ಮ ಕುದುರೆ ಬಂಡಿಯನ್ನು ತಂದಿದ್ದರು.  ಬಂಡಿ ಎಳೆಯಲು ಪೂರನ್‌ ಬಾಬು ರಾಜ್‌ ಎಂಬ ಎಂಜಿನಿಯರ್‌ ತಮ್ಮ ಕುದುರೆಯನ್ನು ನೀಡಿದ್ದರು. ಪೂರನ್‌ ಬಾಬು ತಮ್ಮ ಕುದುರೆಯನ್ನು ಯಾಕೆ ಕೊಟ್ಟರು ಮತ್ತು ರೈಲು ನಿಲ್ದಾಣದಲ್ಲಿ ಅಷ್ಟೊಂದು ಗದ್ದಲಕ್ಕೆ ಯಾಕೆ ಅವಕಾಶ ಕೊಡಲಾಯಿತು ಎಂಬುದು ಆಶ್ಚರ್ಯಕರ ವಿಚಾರ’.

 

ಬೆತಿಯಾ ರೈಲು ನಿಲ್ದಾಣದ ಈ ಸ್ವಾಗತ ಸಮಾರಂಭ ತೋರಿಸುವಂತೆ ಗಾಂಧಿ ಅವರು ಭಾರತದಲ್ಲಿ ನಡೆಸಿದ ಮೊದಲ ಹೋರಾಟಕ್ಕೆ ಅದ್ಭುತ ಯಶಸ್ಸು ದೊರೆತಿತ್ತು. ಚಂಪಾರಣ್‌ನ ರೈತರು ಮಾತ್ರವಲ್ಲ, ಮಧ್ಯಮ ವರ್ಗದ ಜನರೂ ಒಂದೇ ರೀತಿಯಲ್ಲಿ ಗಾಂಧಿಗೆ ಆಭಾರಿಯಾಗಿದ್ದರು.  ಗಾಂಧಿಯ ಈ ಹೋರಾಟ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ನಾಲ್ಕು ವರ್ಷಗಳ ಬಳಿಕ ಚಂಪಾರಣ್‌ ಮತ್ತು ಮುಜಫ್ಫರ್‌ಪುರಕ್ಕೆ ಭೇಟಿ ನೀಡಿದ ಅಧಿಕಾರಿಯೊಬ್ಬರು ‘ಗಾಂಧಿಯ ಹೆಸರು ಈಗಲೂ ಇಲ್ಲಿ ಅಷ್ಟೇ ಪ್ರಭಾವಶಾಲಿಯಾಗಿದೆ’ ಎಂದಿದ್ದಾರೆ.

 

ಚಂಪಾರಣ್‌ನ ರೈತರಿಗೆ ಗಾಂಧಿ ಮಾಡಿದ್ದು ಬಹಳ ದೊಡ್ಡ ಉಪಕಾರ. ಆದರೆ, ಗಾಂಧಿ ಅವರಿಂದ ಪಡೆದದ್ದು ಇನ್ನೂ ಹೆಚ್ಚು. ಅವರ ಜತೆ ಕೆಲಸ ಮಾಡುವುದರ ಮೂಲಕವೇ ಭಾರತದ ರೈತರ ಕಷ್ಟಗಳನ್ನು ಗಾಂಧಿ ಅರ್ಥ ಮಾಡಿಕೊಂಡರು; ಗಾಂಧಿ ತಮ್ಮ ಮೊದಲ ನಿಷ್ಠ ಮತ್ತು ವಿಶ್ವಾಸಾರ್ಹ ರಾಜಕೀಯ ಒಡನಾಡಿಗಳನ್ನು ಅಲ್ಲಿಯೇ ಪರಿಚಯ ಮಾಡಿಕೊಂಡರು; ತಮ್ಮದೇ ಜಾತಿ, ಸಮುದಾಯ, ವರ್ಗ ಅಥವಾ ಧರ್ಮಕ್ಕೆ ಸೇರಿಲ್ಲದವರನ್ನೂ ತಾನು ಪ್ರತಿನಿಧಿಸುವುದು ಸಾಧ್ಯ ಎಂಬ  ಆತ್ಮವಿಶ್ವಾಸವನ್ನೂ ಗಾಂಧಿ ಅಲ್ಲಿಯೇ ಪಡೆದುಕೊಂಡರು. 

 

1917ರ ವಸಂತ ಮತ್ತು ಬೇಸಿಗೆಯಲ್ಲಿ ಬಿಹಾರದಲ್ಲಿ ಕಳೆದ ದಿನಗಳು ಮುಂದಿನ ಹೆಚ್ಚು ದೀರ್ಘ ಮತ್ತು ಕಷ್ಟಕರ ಸಂಘರ್ಷಕ್ಕೆ ಗಾಂಧಿಯನ್ನು ಸಿದ್ಧವಾಗಿಸಿದವು. ಚಂಪಾರಣ್‌ ಭಾರತದಲ್ಲಿ ಗಾಂಧಿಯ ಮೊದಲ ರಾಜಕೀಯ ಅನುಭವವಷ್ಟೇ ಅಲ್ಲ, ಅದು ಅವರ ರಾಜಕೀಯ ವೃತ್ತಿ ಜೀವನವನ್ನು ಆ ಮೂಲಕ ಇಡೀ ಸ್ವಾತಂತ್ರ್ಯ ಸಂಗ್ರಾಮವನ್ನು ಕೂಡ ರೂಪಿಸಿತು. ಅಹಿಂಸೆ, ಅಸಹಕಾರ ಚಳವಳಿ, ದಂಡಿ ಯಾತ್ರೆ, ಭಾರತ ಬಿಟ್ಟು ತೊಲಗಿ ಮತ್ತು ಅಂತಿಮವಾಗಿ ವಿದೇಶಿ ಆಡಳಿತದಿಂದ ಭಾರತಕ್ಕೆ ಮುಕ್ತಿಗಳೆಲ್ಲದರ  ನಿರ್ಣಾಯಕ ಮೊದಲ ಹೆಜ್ಜೆ ಚಂಪಾರಣ್ ಆಗಿತ್ತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.